Saturday, August 10, 2013

ನಿಮಿಷಕ್ಕೆ ನಲವತ್ತೊಂಭತ್ತು ಹಹ ಸೊಳೆ ಗುಳುಂ!



             ಕೇರಳದಿಂದ ಆರಂಭವಾದ ಹಲಸು ಮೇಳವು ಕನ್ನಾಡನ್ನು ಪ್ರವೇಶಿಸಿ, ಈಗ ಉತ್ತರ ಭಾರತದ ಮೇಘಾಲಯಕ್ಕೆ ಹೆಜ್ಜೆಯೂರಿದೆ! ಜುಲೈ ಎರಡನೇ ವಾರ ವಿಲಿಯಂ ನಗರದ ಪೊಲಿಸ್ ತರಬೇತಿ ಮೈದಾನದಲ್ಲಿ ಜರುಗಿದ ಹಬ್ಬಕ್ಕೆ ಆಗಮಿಸಿದ ಹಲಸು ಪ್ರಿಯರು ನೂರಲ್ಲ, ಸಾವಿರಕ್ಕೂ ಮಿಕ್ಕಿ.

             ಹಲಸಿನ ಉತ್ಪನ್ನಗಳನ್ನು ಬಳಸುವ ಮತ್ತು ಉತ್ಪನ್ನಗಳನ್ನು ಉತ್ಪಾದಿಸುವ ಉದ್ಯಮಗಳನ್ನು ಪ್ರೋತ್ಸಾಹಿಸುವುದು ಮೇಳದ ಉದ್ದೇಶ. ಇಪ್ಪತ್ತು ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿದ್ದುವು. ಗೃಹವಿಜ್ಞಾನ ಕಾಲೇಜು, ಸಹಕಾರಿ ಸಂಘಗಳು, ಬೇಕರಿ, ಫುಡ್ ಪ್ಯಾರಡೈಸ್, ಸ್ವಸಹಾಯ ಸಂಘಗಳ ಮಳಿಗೆಗಳವು ಹಲವು ವಿಧದ ತಿಂಡಿಗಳು. ಹಲಸಿನ ಹಣ್ಣಿನ ಕೇಕ್, ಮಫಿನ್ಸ್, ಚಿಪ್ಸ್, ಬಿಸ್ಕತ್ತು, ಬ್ರೆಡ್, ಚಾಕೊಲೇಟ್, ಉಪ್ಪಿನಕಾಯಿ, ವೈನ್, ಜ್ಯೂಸ್, ಜಾಮ್..ಹೀಗೆ ಹಲವು ಖಾದ್ಯಗಳು.

             'ಅತಿ ದೊಡ್ಡ' ಹಲಸಿನ ಸ್ಪರ್ಧೆಯಲ್ಲಿ ಭಾಗವಹಿಸಲು ಪೈಪೋಟಿ. ಸ್ಪರ್ಧಾಳುಗಳ ಆಗಮಿಸುವಾಗ ಅವರ ಹೆಗಲಲ್ಲಿ, ಕೈಯಲ್ಲಿ ಹಲಸಿನ ಹಣ್ಣುಗಳು. ಎಲ್ಲರೂ ಕಾಣುವಂತೆ ತಮ್ಮಲ್ಲಿರುವ ದೊಡ್ಡ ಹಲಸನ್ನೇ ತರಲು ಒಲವು. ಇಪ್ಪತ್ತೊಂಭತ್ತು ಕಿಲೋ ತೂಗಿದ ಹಲಸಿಗೆ ಮೊದಲ ಬಹುಮಾನ. 26.7 ಕಿಲೋದ್ದಕ್ಕೆ ಎರಡನೇ ಸ್ಥಾನ. ಅತಿ ದೊಡ್ಡದು. ಹವಾಯಿಯ ಹಣ್ಣು ಕೃಷಿಕ ಕೆನ್ಲವ್ ಪ್ರಯತ್ನದಿಂದ 34.4 ಕಿಲೋ ತೂಕದ ಹಲಸು ಗಿನ್ನಿಸ್ ದಾಖಲಾಗಿದೆ. ಮುಂದಿನ ವರುಷ ಮೇಘಾಲಯ ಈ ದಾಖಲೆಯನ್ನು ಮುರಿಯಬೇಕೆಂದಿದೆ! ಇದಕ್ಕಿಂತ ಅಧಿಕ ಭಾರದ ಹಲಸು ನಮ್ಮಲ್ಲೂ ಇದೆ. ದಾಖಲೆ ಪ್ರಕ್ರಿಯೆಗೆ ಯತ್ನಿಸಬೇಕಷ್ಟೇ. ದಾಖಲೆ ಆಗಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವತಯಾರಿಯೂ ಇದೆ; ಒಂದಷ್ಟೂ ಖರ್ಚೂ ಇದೆ.

               ಹಲಸಿನ ಹಣ್ಣಿನ (ಹಹ) ಸೊಳೆಯನ್ನು ತಿನ್ನುವ ಸ್ಪರ್ಧೆ ಮೇಳದ ಹೈಲೈಟ್. ಅರುವತ್ತೊಂದು ಪುರುಷರು ಮತ್ತು ನೂರ ಅರುವತ್ತ ನಾಲ್ಕು ಮಹಿಳೆಯರು ಭಾಗಿ. ಎರಡು ನಿಮಿಷದಲ್ಲಿ ಐವತ್ತನಾಲ್ಕು ಸೊಳೆಯನ್ನು ತಿಂದ ಮಾರ್ಟಿನಾ ಮಾರಕ್ ಇವರಿಗೆ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ. ಪುರುಷರ ವಿಭಾಗದಲ್ಲಿ ಒಂದು ನಿಮಿಷಕ್ಕೆ ನಲವತ್ತೊಂಭತ್ತು ಸೊಳೆಗಳನ್ನು ಹೊಟ್ಟೆಗಿಳಿಸಿದ ಗ್ಯಾಮಸೆಂಗ್ ಮಾರಕ್ ಸ್ಪರ್ಧೆಯ ಕೇಂದ್ರಬಿಂದು. ಹಬ್ಬದಲ್ಲಿ ಅಡುಗೆ ಸ್ಪರ್ಧೆಯ ಆಕರ್ಷಣೆ ಪ್ರತ್ಯೇಕ.

              ಎರಡೂ ದಿವಸದ ಹಬ್ಬವು ಹಲಸನ್ನು ಆಹಾರವಾಗಿ ಬಳಸುವತ್ತ ಬೆಳಕು ಚೆಲ್ಲಿತ್ತು. ಅಗತ್ಯವೂ ಕೂಡಾ. ಯಾಕೆಂದರೆ ಇದು ನಿರ್ವಿಷ.

0 comments:

Post a Comment