Wednesday, August 20, 2014

ಮಣ್ಣಿನ ಮಕ್ಕಳ ಮನಸಿನ ಮಾತು


              ವಿದ್ಯಾರ್ಥಿಗಳಿಗೆ ಕೃಷಿ ಪಾಠ!
             ವೇದಿಕೆಯ 'ಭೀಷಣ' ಭಾಷಣದಲ್ಲಿ, ಬರೆಹಗಳಲ್ಲಿ, ಕೃಷಿ ಸಂಬಂಧಿ ಮಾತುಕತೆಗಳಲ್ಲಿ ನುಸುಳುವ ಪದಪುಂಜ. ಅಲ್ಲೋ ಇಲ್ಲೋ ಕೆಲವೆಡೆ ಹಸುರಿನ ಸ್ಪರ್ಶವಾದುದು ಬಿಟ್ಟರೆ ಕೃಷಿಯ ಪಾಠವೆನ್ನುವುದು ದೂರದ ಮಾತು.
              ಪುತ್ತೂರಿನ (ದ.ಕ.) ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ತನ್ನ ವಿದ್ಯಾರ್ಥಿಗಳಿಗೆ 'ಕೃಷಿ ಖುಷಿ' ಎನ್ನುವ ಪಾಕ್ಷಿಕ ಕೃಷಿ ಪಾಠ ಸರಣಿಯನ್ನು ರೂಪಿಸಿದೆ. ತನ್ನ ಪಠ್ಯದ ಕಾರ್ಯಸೂಚಿಗೆ  ಕೃಷಿಯ ಪಾಠ ಅಂಟಿಸಿದೆ. ಈಗಾಗಲೇ ಎರಡು ಉಪನ್ಯಾಸಗಳು ಜರುಗಿದೆ. ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮ, ಸೇಡಿಯಾಪು ಜನಾರ್ದನ ಭಟ್ಟರ ಕೃಷಿ ಜೀವನದ ಅನುಭವಕ್ಕೆ ವಿದ್ಯಾಥರ್ಿಗಳು ಕಿವಿಯಾಗಿದ್ದಾರೆ. ವಿದ್ಯಾರ್ಥಿಗಳ ಮನಸ್ಸು ಅರಳಿದೆ.  
               'ಕೃಷಿ-ಖುಷಿ' ಸರಣಿಯ ಒಂದು ಅವಧಿಗೆ ಒಂದು ಗಂಟೆ ಸಮಯ. ಕೃಷಿ ಅನುಭವಿಗಳಿಂದ ಅನುಭವ ಗಾಥಾ. ಇವರ ಮಾತನ್ನು ಆಧರಿಸಿ ಪ್ರಶ್ನೋತ್ತರ. ನಂತರ ಆಯ್ದ ವಿದ್ಯಾರ್ಥಿಗಳ ತಂಡ ನಿಗದಿತ ದಿವಸದಂದು ಇವರ ತೋಟಕ್ಕೆ ಭೇಟಿ ನೀಡುತ್ತದೆ. ತೋಟ ಸುತ್ತುತ್ತದೆ. ಕುಟುಂಬದೊಂದಿಗೆ ಮಾತನಾಡುತ್ತದೆ. ವಿಚಾರಗಳನ್ನು ದಾಖಲಿಸುತ್ತದೆ.
                ಈ ವಿಚಾರಗಳನ್ನು ಪೋಣಿಸಿ ವಿದ್ಯಾರ್ಥಿಗಳು ಲೇಖನ ಸಿದ್ದಪಡಿಸಬೇಕು. ವಿಭಾಗದ ಮುಖ್ಯಸ್ಥರಿಂದ ಕಾಯಕಲ್ಪಗೊಂಡ ಬರೆಹಗಳನ್ನು ಪತ್ರಿಕೆಗಳಿಗೆ ಕಳುಹಿಸಬಹುದು. ಸಂದರ್ಶನ, ವಿಷಯದ ಆಯ್ಕೆ, ಲೇಖನ ಬರೆಯುವುದು, ಎಡಿಟ್ ಮಾಡುವುದು.. ಜತೆಜತೆಗೆ ಇವಕ್ಕೆ ಪೂರಕವಾದ ಮಾನಸಿಕ ತಯಾರಿಗಳು ಗಟ್ಟಿಯಾಗುತ್ತಾ ಹೋಗಬೇಕೆನ್ನುವುದು ಆಶಯ.
                 ಯುವಜನತೆಗೆ ಕೃಷಿ ಕ್ಷೇತ್ರವನ್ನು ಪರಿಚಯಿಸುವುದು, ಸಸ್ಯಪ್ರೇಮವನ್ನು ಮೂಡಿಸುವುದು. ತಮಗೆ ಲಭ್ಯವಿರುವ ಜಾಗದಲ್ಲಿ ಆರ್ಥಿಕ ದೃಷ್ಟಿಯಿಂದ ಅಲ್ಲದಿದ್ದರೂ, ಬದುಕಿಗೆ ಖುಷಿ ನೀಡುವ ಸಣ್ಣಪುಟ್ಟ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ದೂರದೃಷ್ಟಿ ಸರಣಿಯಲ್ಲಿದೆ,' ಎನ್ನುತ್ತಾರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ. ಸರಣಿಯ ಉದ್ಘಾಟನೆಯಂದು ಮುಳಿಯ ಶರ್ಮರ ಉಪನ್ಯಾಸ. ಸುಮಾರು ಮೂವತ್ತಕ್ಕೂ ಮಿಕ್ಕಿದ ಸಸ್ಯ, ಹಣ್ಣುಗಳನ್ನು ಪ್ರದರ್ಶನಕ್ಕಾಗಿ ತಂದಿದ್ದರು. ವಿದ್ಯಾರ್ಥಿಗಳಿಗೆ ಅರಿವಾಗದವುಗಳನ್ನು ಶರ್ಮರೇ ಸ್ವತಃ ವಿವರಿಸಿದ್ದರು.
                 ಕಾಲೇಜೊಂದರಲ್ಲಿ ಹೆಜ್ಜೆಯೂರಿದ ಕೃಷಿ ಪಾಠದ ಪ್ರಕ್ರಿಯೆ ಶ್ಲಾಘ್ಯ. ಬಹುತೇಕರು ಕೃಷಿ ಹಿನ್ನೆಲೆಯವರು. ಕಲಿಕೆಯ ಧಾವಂತದಲ್ಲಿ ಕೃಷಿ ಕಲಿಕೆಗೆ ಮನೆಗಳಲ್ಲಿ ಪೂರಕ ವಾತಾವರಣವಿಲ್ಲ. ಹಿರಿಯರಿಂದ ಹೆಚ್ಚು ಅಂಕ ತೆಗೆಯುವ ಒತ್ತಡಕ್ಕೆ ಅನಿವಾರ್ಯವಾಗಿ ವಿದ್ಯಾರ್ಥಿ ತನ್ನನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕೃಷಿ-ಖುಷಿ ಸರಣಿಯಲ್ಲಿ ಪ್ರಸ್ತುತವಾಗುವ ಪ್ರಶ್ನೋತ್ತರಗಳು ಹೆಚ್ಚು ಮೌಲಿಕವಾಗುತ್ತದೆ. 
              ಸರಣಿಯಲ್ಲಿ ಕೃಷಿಕರ ಅನುಭವಗಳನ್ನು ಕೇಳಿ, ಬಳಿಕ ಅವರ ತೋಟಕ್ಕೆ ಹೋದಾಗ ಪ್ರಾಕ್ಟಿಕಲ್ ವಿಚಾರಗಳು ಮನದಟ್ಟಾಗುತ್ತದೆ. ನೆಲದ ಭಾಷೆ ಅರಿಯಲು ಸಹಾಯಕ. ಅಡಿಕೆ ತೋಟದಲ್ಲಿ ಅಡ್ಡಾಡುವಾಗ ಅಡಿಕೆ ಮರವು ಕೇವಲ ಅಡಿಕೆಯನ್ನು ಕೊಡುವ ಮರವಾಗಿರದೆ, ಅದು ಬದುಕನ್ನು ಕಟ್ಟಿಕೊಡುವ ಮರವೆಂಬ ಅರಿವು ಮೂಡುತ್ತದೆ, ಮೂಡಬೇಕು. ಹಸುರಿನೊಳಗೆ ಬದುಕನ್ನು ರೂಪಿಸಿಕೊಂಡ  ಕೃಷಿಕನ ನೋವು-ನಲಿವುಗಳಿಗೆ ಅಲ್ಲಿನ ಪರಿಸರ ಉತ್ತರ ಕೊಡುತ್ತದೆ. ಅದನ್ನು ನೋಡುವ, ಕೇಳುವ ಮನಸ್ಥಿತಿ ರೂಪುಗೊಳ್ಳುತ್ತದೆ. ಕೃಷಿಕರ ಹಲವಾರು ಸಮಸ್ಯೆಗಳು ಮೌನದ ಕೂಪದೊಳಗೆ ಮೌನವಾಗಿರುತ್ತದೆ. ಅದನ್ನು ಮಾತನಾಡಿಸುವ, ಅದಕ್ಕೆ ಮಾತನ್ನು ಕೊಡುವ ಕಷ್ಟದ ಕೆಲಸಕ್ಕೆ ನಿಧಾನವಾಗಿ ಸಜ್ಜಾಗಲು ಇಂತಹ ಕ್ಷೇತ್ರ ಭೇಟಿ ಸಹಾಯಕ.
                ವಾಹಿನಿಯೊಂದರ ರಸಪ್ರಶ್ನೆಯಲ್ಲಿ ತುಳಸಿ ಗಿಡವನ್ನು ಗುರುತುಹಿಡಿಯಲಾಗದ ವಿದ್ಯಾರ್ಥಿಗಳ ಒದ್ದಾಟ ನೋಡಿದ್ದೆ. ಮೂಡುಬಿದಿರೆಯಲ್ಲಿ ಜರುಗಿದ ಕೃಷಿ ಮೇಳದಲ್ಲಿ ಕಾಫಿ ಬೀಜವನ್ನು ಸಾಸಿವೆಕಾಳು ಎಂದು ಗುರುತು ಹಿಡಿವ ವಿದ್ಯಾರ್ಥಿ ಮನಸ್ಸುಗಳನ್ನು ನೋಡಿದ್ದೆ. ಅರಸಿನ, ಶುಂಠಿಯು ಯಾವ ಸಸ್ಯದಲ್ಲಿ ಬೆಳೆಯುತ್ತದೆ ಎನ್ನುವ ಪ್ರಶ್ನೆಯನ್ನು ಎದುರಿಸಿದ್ದೆ. ಇದನ್ನೆಲ್ಲಾ ನೋಡುವಾಗ ವಿದ್ಯಾರ್ಥಿಗಳು ರೂಪುಗೊಳ್ಳುವ ಪರಿ, ಮನೆಯ ವಾತಾವರಣ, ಹೆತ್ತರವ ನಿಲುವು ದಿಗಿಲು ಹುಟ್ಟಿಸುತ್ತದೆ.
                 ಕೃಷಿಕನ ಮಗನೋ, ಮಗಳೋ ಅಂಗಳ ದಾಟಿ ತೋಟದೊಳಗೆ ಹೆಜ್ಜೆಯೂರುವುದು ಕಡಿಮೆ.  ಅಡಿಕೆಯನ್ನು ಹೆಕ್ಕಿರುವುದಿಲ್ಲ. ಒಂದು ಖಂಡಿಗೆ ಎಷ್ಟು ಕಿಲೋ ಅಡಿಕೆ ಎಂಬ ಲೆಕ್ಕಾಚಾರ ಗೊತ್ತಿಲ್ಲ. ಅಡಿಕೆಯ ಕೊಯಿಲು ಯಾವಾಗ ಆಗುತ್ತದೆ ಎನ್ನುವ ಅರಿವಿನಿಂದ ದೂರ. ಗದ್ದೆಯಲ್ಲಿ ತೆನೆಕಟ್ಟಿದ ಭತ್ತದ ತಳಿ ಯಾವುದೆಂದು ಗೊತ್ತಿಲ್ಲ. ಹಟ್ಟಿಯಲ್ಲಿ ಪಶು ಸಂಸಾರ ಎಷ್ಟಿದೆ ಎನ್ನುವ ಲೆಕ್ಕ ಇನ್ನಷ್ಟೇ ಮಾಡಬೇಕಾಗಿದೆ!
                 'ಇದೆಲ್ಲಾ ಗೊತ್ತಾಗಿ ಆಗಬೇಕಾದ್ದೇನು,' ಎಂದು ಉಡಾಫೆ ಉತ್ತರ ನೀಡಿದ ಮುಖಗಳ ಹತ್ತಿರದ ಪರಿಚಯ ನನಗಿದೆ. ಹೆತ್ತವರಿಗೆ ಕೃಷಿಯ ವಿಚಾರ ಹೇಳಲು ಪುರುಸೊತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠದ ಹೊರೆ. ಅಂಕಗಳನ್ನು ಅಟ್ಟಿಸುವ ಹಾವೇಣಿಯಾಟಕ್ಕೆ ಸಜ್ಜಾಗುವ ಪರಿ. ಒಂದು ಕಾಲಘಟ್ಟದಲ್ಲಿ ಕಾಡುಹಣ್ಣುಗಳನ್ನು ತಿಂದು, ಅವುಗಳೊಂದಿಗೆ ಬದುಕನ್ನು ರೂಪಿಸಿದ ಅದೆಷ್ಟೋ ಹಿರಿಯರ ಖುಷಿಯ ಬಾಲ್ಯಗಳು ಈಗಿಲ್ಲ ಎಂದು ಧೈರ್ಯವಾಗಿ ಹೇಳಬಹುದು.
                 ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ 'ಕೃಷಿ-ಖುಷಿ' ಸರಣಿಯು ವಿದ್ಯಾರ್ಥಿಗಳಿಗೆ ಹಸುರಿನ ಭಾಷೆ ಕಲಿಸಲು ಮುಂದಾಗಿದೆ. ಪತ್ರಕರ್ತರಾಗಿ ರೂಪುಗೊಳ್ಳುವ ಮನಸ್ಸುಗಳಿಗೆ ಹಸುರಿನ ಸ್ಪರ್ಶ ನೀಡುವ ಕೆಲಸಕ್ಕೆ ಸಜ್ಜಾಗಿದೆ. ಇಂತಹ ಸಣ್ಣ ಯತ್ನಗಳು ದೊಡ್ಡ ಪರಿಣಾಮಗಳನ್ನು ಖಂಡಿತಾ ಬೀರುತ್ತವೆ. ಪದವಿ ಕಲಿಕೆಯ ಬಳಿಕ ಹೊರ ಬರುವ ವಿದ್ಯಾರ್ಥಿಯ ಫೈಲೊಳಗೆ ಪ್ರಕಟಿತ ಹತ್ತಾರು ಕೃಷಿ ಲೇಖನಗಳು ತುಂಬಿದಾಗ ಉಂಟಾಗುವ ಖುಷಿ ಇದೆಯಲ್ಲಾ, ಅದನ್ನು ವರ್ಣಿಸಲು ಶಬ್ದಗಳಿಲ್ಲ.
                   ಮಾಧ್ಯಮ ಲೋಕದ ನಾಲ್ಕು ಗೋಡೆಗಳ ಒಳಗೆ ವಿಶ್ವವನ್ನು ನೋಡಿ ಅಕ್ಷರಕ್ಕಿಳಿಸುವ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯ ನೇರ ದರ್ಶನವನ್ನು ಮಾಡಿಸುವ ವಿವೇಕಾನಂದ ಕಾಲೇಜಿನ ಯೋಜನೆ, ಯೋಜನೆಯಲ್ಲಿ ಕನ್ನಾಡಿಗೆ ಸಂದೇಶವಿದೆ. ಮಣ್ಣಿನ ಮಕ್ಕಳ ಮನಸ್ಸಿನ ಮಾತು ಕನಸಾಗದೆ ನನಸಿನತ್ತ ಒಯ್ಯಲಿ ಎನ್ನುವುದು ಶುಭ ಹಾರೈಕೆ.

0 comments:

Post a Comment