Monday, August 11, 2014

ಕೃಷಿ ಪ್ರವಾಸ ತಿರುಗಾಟವಲ್ಲ, ಮಾಹಿತಿಗಳ ಬೇಟೆ

                 "ಕೇರಳದ ಪೊಳ್ಳಾಚಿ, ಕಾಞಿರಪಳ್ಳಿಯ ರಬ್ಬರ್ ಕೃಷಿಯ ವೀಕ್ಷಣೆ-ಅಧ್ಯಯನಕ್ಕಾಗಿ ಪ್ರವಾಸ ಹೋಗಿದ್ದೆವು. ವಿವಿಧ ನರ್ಸರಿಗಳನ್ನು ಭೇಟಿಯಾದೆವು. ರಬ್ಬರ್ ಕೃಷಿಯ 'ಮಾಡಿ-ಬೇಡಿ'ಗಳ ಮಾಹಿತಿ ಪಡೆದೆವು. ಕೃಷಿಕರನ್ನು ಮಾತನಾಡಿಸಿದೆವು. ಕಷ್ಟ-ಸುಖ ಹಂಚಿಕೊಂಡೆವು. ಅಲ್ಲಿನ ಕೃಷಿಕರು ನೀಡಿದ 'ಆನೆಕೊಂಬನ್' ಬೆಂಡೆ ಬೀಜ ನಮ್ಮೂರಿಗೆ ಬಂತು. ಅವರ  ಅಪೇಕ್ಷೆಯಂತೆ ಹಲಸಿನ ಗಿಡಗಳನ್ನು ಒದಗಿಸಿದೆವು. ಅಲ್ಲಿನ ಕೃಷಿಕರೊಂದಿಗೆ ಸಂಬಂಧ ಈಗ ಗಟ್ಟಿಯಾಗಿದೆ", ಕಾಸರಗೋಡು ಜಿಲ್ಲೆಯ ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟರು ಕೃಷಿ ಪ್ರವಾಸದ ಪರಿಣಾಮಗಳನ್ನು ವಿವರಿಸುತ್ತಾರೆ.
                 ಆನೆಯ ಸೊಂಡಿಲಿನಂತೆ ಭಾಸವಾಗುವುದರಿಂದಲೋ ಏನೋ 'ಆನೆಕೊಂಬನ್ ಬೆಂಡೆ' ಪ್ರಬೇಧ ಮೀಯಪದವಿಗೆ ಬಂತು. ಚೌಟರು ಆಸಕ್ತರಿಗೆ ಬೀಜ ಹಂಚಿದರು. ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಕೃಷಿಕರಲ್ಲಿ ಅಭಿವೃದ್ಧಿಯಾಗಿದೆ. ಬೆಂಡೆಕಾಯಿ ಒಂದೂವರೆ ಅಡಿಯಷ್ಟು ಉದ್ದ. ಸ್ಥಳೀಯ ಬೆಂಡೆಯದ್ದೇ ವರ್ಣ. ಇದು ಕಿಲೋಗೆ 20-23 ಬೆಂಡೆ ತೂಗಿದರೆ ಆನೆಕೊಂಬನ್ ತಳಿಯದ್ದರಲ್ಲಿ ಹತ್ತರಿಂದ ಹನ್ನೆರಡು ಕಾಯಿ. ಸಾಮಾನ್ಯ ರುಚಿ. ಬೀಜ ಪ್ರದಾನಿಸಿ ನಲವತ್ತೈದು ದಿನದಲ್ಲಿ ಇಳುವರಿ ಶುರು.
                 ಚೌಟರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸನಿಹದ ರಂಬುಟಾನ್ ತೋಟಕ್ಕೆ ಭೇಟಿ ನೀಡಿದ್ದರು. ದೊಡ್ಡ ಪ್ರಮಾಣದ ಕೃಷಿ ನೋಡಿ ಉತ್ಸುಕರಾದರು. ಕೃಷಿ ಕ್ರಮಗಳನ್ನು ತಿಳಿದುಕೊಂಡರು. ಇತರ ತೋಟಗಳಿಗೂ ಭೇಟಿ ನೀಡಿದರು. ಕೇರಳದ ತೋಟಕ್ಕೂ ಲಗ್ಗೆಯಿಟ್ಟರು. ಹೀಗೆ ಅವಿರತ ಪ್ರವಾಸ ಮಾಡಿದ್ದರಿಂದಾಗಿ ಚೌಟರ ತೋಟದಲ್ಲಿ ಈಗ ಸುಮಾರು ಐನೂರರ ಹತ್ತಿರ ರಂಬುಟಾನ್ ಗಿಡಗಳು ಬೆಳೆಯುತ್ತಿವೆ. ಹಳೆಯ ಗಿಡಗಳು ಇಳುವರಿ ನೀಡುತ್ತಿವೆ.
                 ಚೌಟರಲ್ಲಿಗೆ ಭೇಟಿಯಿತ್ತ ಬೆಂಗಳೂರು ವಿಶ್ವವಿದ್ಯಾನಿಲಯದ ಕೃಷಿ ಮೂಲದ ವರಿಷ್ಠರೊಬ್ಬರನ್ನು ರಂಬುಟಾನ್ ಹಣ್ಣು ಸೆಳೆಯಿತು. ರುಚಿ ನೋಡಿದ ಅವರು ಸ್ಥಳದಲ್ಲೇ ಐವತ್ತು ಗಿಡಗಳಿಗೆ ಬೇಡಿಕೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಹಣ್ಣು ಹೂ ಬಿಡುವ, ಬೆಳವಣಿಗೆಯ ಕ್ರಮ ಗೊತ್ತಿಲ್ಲ. ನಾಲ್ಕೈದು ಗಿಡ ನೆಟ್ಟು, ಹೂ-ಕಾಯಿ ಬಿಡುತ್ತದೆ ಎಂದು ಖಾತ್ರಿಯಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಬಹುದು, ಎಂದು ಸಲಹೆ ನೀಡಿದರು. ಚೌಟರ ಸಲಹೆ ಆಪ್ತವಾಗಿ ಸ್ವೀಕರಿಸಿದರು.
                 ಕೃಷಿ ಪ್ರವಾಸವು ಉಂಟುಮಾಡುವ ಕೃಷಿಕ-ಕೃಷಿಕರೊಳಗಿನ ಬಾಂಧವ್ಯದ ಬಂಧ ಗಟ್ಟಿಯಾದುದು. ವೈವಿಧ್ಯ ಬೆಳೆಯನ್ನು ನೋಡಿ, ಸುಖ-ಕಷ್ಟಗಳನ್ನು ಪರಸ್ಪರ ಹಂಚಿಕೊಂಡಾಗ ತನ್ನ ತೋಟದಲ್ಲಿ ಯಾವುದು ಬೆಳೆಯಬಹುದು, ಯಾವುದು ಬೇಡ ಎನ್ನುವ ನಿರ್ಧಾಾರಕ್ಕೆ ಬರಲು ಸಹಾಯಕ. ಗಿಡ ಗೆಳೆತನವನ್ನು ಬೆಸೆಯಲು ಅನುಕೂಲ. ಒಂದೂರಿನ ಕೃಷಿ ಪದ್ಧತಿಯು ಮತ್ತೊಂದು ಊರಿನ ಕೃಷಿ ಸಮಸ್ಯೆಗೆ ಉತ್ತರವಾಗಬಹುದು. ತಪ್ಪುಗಳನ್ನು ತಿದ್ದಿಕೊಳ್ಳಲು ಪೂರಕ. ಕೃಷಿಯಲ್ಲಿ ಪುಸ್ತಕದ ಜ್ಙಾನಕ್ಕಿಂತ ಪ್ರವಾಸ ಜ್ಞಾನ ಹೆಚ್ಚು ಬೌದ್ಧಿಕತೆಯನ್ನು ತಂದುಕೊಡುತ್ತದೆ.
                ಪ್ರವಾಸ ಹೋದಾಗ ಕೆಲವು ಕೃಷಿಕರು ಮಾಹಿತಿ ಬಿಟ್ಟುಕೊಡುವುದಿಲ್ಲ ಎನ್ನುವ ಅಪವಾದವೂ ಇದೆ. ಇಲ್ಲದಿಲ್ಲ, ಆದರೆ ಬಹಳ ಕಡಿಮೆ. ಬಹುತೇಕರಿಗೆ ತನ್ನ ಕೃಷಿಯ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಉತ್ಸಾಹವಿರುತ್ತದೆ. ನನಗೆ ರೈತರು ಮಾಹಿತಿ ನೀಡದೆ ಎಂದೂ ವಂಚಿಸಿಲ್ಲ. ಚಿಕ್ಕಪುಟ್ಟ ಗುಟ್ಟುಗಳಿರಬಹುದು ಬಿಡಿ. ನಾವು ಎಲ್ಲಿಗೆ, ಯಾಕಾಗಿ ಹೋಗುತ್ತೇವೆ ಎನ್ನುವ ರೂಪುರೇಷೆ ಹಾಕಿಕೊಳ್ಳಬೇಕು. ಕೇರಳ, ಗೋವಾ, ಮಹಾರಾಷ್ಟ್ರಗಳ ಹಲವಾರು ಕೃಷಿಕರಿಂದ ಒಳ್ಳೊಳ್ಳೆಯ ಕೃಷಿ ಮಾಹಿತಿ ತಿಳಿದುಕೊಂಡಿದ್ದೆ. ಈ ರೀತಿಯ ಪ್ರವಾಸಗಳ ಅನುಭವವನ್ನು ನನ್ನ ತೋಟವೇ ಹೇಳುತ್ತದೆ, ಡಾ.ಚೌಟರು ಖುಷಿ ಹಂಚಿಕೊಂಡರು.  
                  ಪುತ್ತೂರು ಬೆಟ್ಟಂಪಾಡಿಯ ಕೃಷಿಕ ಅರುಣ್ ಕುಮಾರ್ ರೈ ಆನಾಜೆ ದುಬೈ, ಥೈಲ್ಯಾಂಡ್ ದೇಶಗಳಿಗೆ ಪ್ರವಾಸ ಹೋಗಿದ್ದರು. ಕೃಷಿ ಉತ್ಪನ್ನಗಳ ಮಾಲ್ಗಳಿಗೆ ಹೋಗಿ ಮೌಲ್ಯವರ್ಧಿತ ಉತ್ಪನ್ನಗಳ ಹುಡುಕಾಟ ಮಾಡುವುದು ಅವರ ಆಸಕ್ತಿಯ ಭಾಗ. ಹಲಸಿನ, ತೆಂಗಿನ ಉತ್ಪನ್ನಗಳ ಪ್ಯಾಕೆಟನ್ನು ಆಯಾಯಾ ಹಣ್ಣಿನ ಆಕಾರದಲ್ಲಿ ಸಿದ್ಧಪಡಿಸಿದ್ದರು. ಊರಿಗೆ ಮರಳುವಾಗ ತೋರಿಸಲೆಂದು ಅಂತಹ ಪ್ಯಾಕೆಟುಗಳನ್ನು ತಂದಿದ್ದರು. ಆಸಕ್ತರಿಗೆ ತೋರಿಸಿದರು. ರೈಯವರು ತಾರದೇ ಇರುತ್ತಿದ್ದರೆ ಇಂತಹ ಯತ್ನಗಳು ಆಗಿರುವುದು ಗೊತ್ತಾಗುವ ಸಾಧ್ಯತೆ ಕಡಿಮೆ. ಕೃಷಿ ಪ್ರವಾಸಗಳು ನಮ್ಮನ್ನು ಅಪ್ಡೇಟ್ ಮಾಡಿಸುತ್ತವೆ. ಹೊಸ ಸಂಗತಿಗಳನ್ನು ಹತ್ತಿರದಿಂದ ನೋಡಿದಾಗ ಸತ್ಯದರ್ಶನವಾಗುತ್ತದೆ. ಇಲ್ಲದಿದ್ದರೆ ಸಂಶಯದೊಳಗೆ ಸುತ್ತುತ್ತಾ ಇರಬೇಕಷ್ಟೇ, ಎನ್ನುತ್ತಾರೆ ಅರಣ್.
                   ಶಿರಸಿಯ ಕೃಷಿಕ ಬಾಲಚಂದ್ರ ಹೆಗಡೆ ಸಾಯಿಮನೆ ಇಪ್ಪತ್ತಾರು ದೇಶಗಳನ್ನು ಸುತ್ತಿದ ಸಾಹಸಿ. ಶ್ರೀಲಂಕಾ ದೇಶದಲ್ಲಿ ಪಾಮ್ನಾಮ್, ಫಿಲಿಪೈನ್ಸ್ನಲ್ಲಿ ಕೈಮಿತೋ ಹಣ್ಣು.. ಹೀಗೆ ಆಯಾಯ ದೇಶದ ಹಣ್ಣಿನ ಗಿಡಗಳನ್ನು ಪಡೆಯುವಲ್ಲಿ ಹರಸಾಹಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅಡಿಕೆಯ ವಿವಿಧ ಉಪಯೋಗ, ಔಷಧವಾಗಿ ಬಳಕೆ ಮಾಡುವ ಕುತೂಹಲಕರ ಮಾಹಿತಿ ಹೊತ್ತು ತಂದಿದ್ದರು. ವಿದೇಶಿ ಹೊಲಗಳಲ್ಲಿ ಕೃಷಿಕರ ಬದಲು ಯಂತ್ರವೇ ಕಾಣಿಸುತ್ತದಂತೆ! ಸಣ್ಣ ರೈತರು ಕುಟುಂಬಾಧಾರಿತವಾಗಿ ಕೃಷಿ ಮಾಡುವುದನ್ನು ಹತ್ತಿರದಿಂದ ನೋಡಿದ್ದಾರೆ. ಎಲ್ಲಾ ದೇಶವನ್ನು ಸುತ್ತಾಡಿದ ಸಾಯಿಮನೆಯವರು  ಹೇಳಿದ್ದೇನು ಗೊತ್ತೇ -  'ನಮ್ಮ ದೇಶದಲ್ಲಿರುವಷ್ಟು ವೈವಿಧ್ಯತೆ ಬೇರೆಲ್ಲೂ ಇಲ್ಲ'.
                 ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಹವಾಯ್ ಮತ್ತು ಶ್ರೀಲಂಕಾ ದೇಶಕ್ಕೆ ಪ್ರವಾಸ ಮಾಡಿದ್ದರು. ಶ್ರೀಲಂಕಾದಲ್ಲಿ ಹಲಸನ್ನು 'ಅನ್ನದ ಮರ' ಎಂದು ಕರೆಯುತ್ತಾರೆ. ಇದರ ಮೌಲ್ಯವರ್ಧಿತ ಉತ್ಪನ್ನಗಳ ಉದ್ದಿಮೆಗಳ ಸಂದರ್ಶನ. ಹಲಸಿನ ತೋಟಗಳ ವೀಕ್ಷಣೆ. ಬದುಕಿನಲ್ಲಿ ಹಲಸನ್ನು ಆಹಾರವಾಗಿ ಸ್ವೀಕರಿಸಿದ ಶ್ರೀಲಂಕನ್ನರು ಅನ್ನಕ್ಕೆ ಬರ ಬಂದರೂ ವಿಚಲಿತರಾಗರು! ಹಣ್ಣುಗಳ ದೇಶ ಹವಾಯಿ ಸುತ್ತಿದ ಶ್ರೀಪಡ್ರೆಯವರು ಹೊಸ ಹೊಸ ಹಣ್ಣುಗಳ ಪರಿಚಯ ಮಾಡಿಕೊಂಡರು. ಬೆಳೆ ವೈವಿಧ್ಯತೆ, ಆಹಾರ, ರುಚಿ ವೈವಿಧ್ಯತೆಯನ್ನು ನೋಡಲು, ಅನುಭವಿಸಲು ಪ್ರವಾಸ ಬೇಕು, ಎನ್ನುತ್ತಾರೆ.
                 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವ-ಸಹಾಯ ಸಂಘಗಳ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ನಿರ್ವಹಣೆ ಮಾಡುವ ಅಧ್ಯಯನಕ್ಕಾಗಿ ಬಾಂಗ್ಲಾ ದೇಶವನ್ನು ಆಯ್ಕೆ ಮಾಡಿತ್ತು. ಅಲ್ಲಿ ಮಹಿಳೆಯರಿಗೆ ಆರ್ಥಿಕ ಸೌಲಭ್ಯ ನೀಡಿ ಅವರನ್ನು ಹೇಗೆ ಸ್ವಾವಲಂಬಿಯಾಗಿ ಮಾಡಬಹುದು ಎನ್ನುವುದು ಆಧ್ಯಯನದಿಂದ ಅರಿವಿಗೆ ಬಂತು ಎನ್ನುವ ಯೋಜನೆಯ ನಿರ್ದೇಶಕರಲ್ಲೊಬ್ಬರಾದ ಜಯಶಂಕರ ಶರ್ಮ ಹೇಳುತ್ತಾರೆ, ಯೋಜನೆಯು ಹಮ್ಮಿಕೊಳ್ಳುವ ಪ್ರವಾಸದಿಂದಾಗಿ ಕಟಪಾಡಿ ಮಲ್ಲಿಗೆಯ ಕೃಷಿಯನ್ನು ಮಾಡಲು ಧ್ಯೆರ್ಯ ಬಂತು. ಕೃಷಿ ಕ್ರಮಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಯೋಜನೆಯ ಬಹುತೇಕ ಮಹಿಳೆಯರಿಂದು ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ..
               ಕೃಷಿ ಪ್ರವಾಸಗಳು ಕೃಷಿ ಕ್ಷೇತ್ರದ ಹೊಸ ಹೊಳವುಗಳನ್ನು ತಿಳಿಸುವ ಉಪಾಧಿ. ಕೃಷಿಕರಿಂದಲೇ ರೂಪುಗೊಂಡ ತಂಡಗಳು ಯಶಸ್ವಿಯಾಗಿ ಪ್ರವಾಸಗಳನ್ನು ಮಾಡುತ್ತಿವೆ. ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ'ಯ ತಂಡ ಎರಡು ದಶಕಕ್ಕೂ ಮಿಕ್ಕಿ ಕನ್ನಾಡಿನ ವಿವಿಧ ಕೃಷಿ ಕ್ಷೇತ್ರಗಳನ್ನು ಸಂದರ್ಶಿಸಿದೆ. ಇಂದು ಕರಾವಳಿಗೆ ಬನಾರಸ್ ನೆಲ್ಲಿ, ಬೀಜರಹಿತ ನೇರಳೆ, ಗಾಸರ್ೀನಿಯಾ ಕೋವಾ.. ಮೊದಲಾದ ಹಣ್ಣುಗಳು ಪ್ರವೇಶಿಸಿರುವುದು ಸಮೃದ್ಧಿಯಿಂದ. ಇದರ ಸದಸ್ಯರ ತೋಟಕ್ಕೆ ಹೋದಾಗ ಒಂದೊಂದು ಗಿಡದ ಹಿಂದೆ ರೋಚಕ ಕಥನಗಳನ್ನು ಹೇಳುವುದು ಕೃಷಿಕರಿಗೆ ರೋಚಕ ಅನುಭವ.
               ಕನ್ನಾಡಿನಲ್ಲಿ ಕೃಷಿ ಪ್ರವಾಸಗಳನ್ನು ಕೈಗೊಳ್ಳುವ ತಂಡಗಳಿವೆ. ಕೃಷಿ ಪ್ರವಾಸದ ಹೆಸರಿನಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ, ಕಾಟಾಚಾರಕ್ಕೆ ಒಂದೆರಡು ತೋಟಗಳನ್ನು ವೀಕ್ಷಿಸುವ ಪರಿಪಾಠದ ತಂಡಗಳೂ ಇವೆ. ಇಂತಹುದರಲ್ಲಿ  ಕೃಷಿಯ ಹೊರತು ಮಿಕ್ಕೆಲ್ಲಾ ಆಸಕ್ತಿಯ ಮಂದಿ ಇರುತ್ತಾರೆ. ಇವರಿಗೆ ಕೃಷಿ ಇಷ್ಟವಾಗುವುದಿಲ್ಲ. ಪ್ರವಾಸದ ಶೀರ್ಶಿಕೆಗೆ ಮಾತ್ರ ಕೃಷಿ ಹೊಸೆದಿರುತ್ತದಷ್ಟೇ. ಕೃಷಿ ಪ್ರವಾಸವು ಅಧ್ಯಯನ ಪ್ರವಾಸವಾಗಬೇಕು.
                  ಸರಕಾರಿ ಪ್ರಾಯೋಜಿತ ಕೃಷಿ ಪ್ರವಾಸಗಳು ಯಶವಾಗುವುದು ಕಡಿಮೆ. ಇಲ್ಲವೆಂದಲ್ಲ. ಅಲ್ಲಿರುವ ಅಧಿಕಾರಿಯ ಆಸಕ್ತಿ, ಕೃಷಿಕರ ಮೇಲಿನ ಆಭಿಮಾನವನ್ನು ಹೊಂದಿಕೊಂಡು ಕಾರ್ಯಹೂರಣ ಸಿದ್ಧವಾಗುತ್ತದೆ. ಅಂತಹ ಪ್ರವಾಸದಿಂದ ಕೃಷಿಕರಿಗೆ ಲಾಭ. ಆದರೆ ಫಂಡ್ ಮುಗಿಸುವ ಪ್ರವಾಸಗಳ ಫೈಲುಗಳು ಇಲಾಖೆಗಳಲ್ಲಿ ನೂರಾರಿವೆ. ಇಂತಹ ಸಂದರ್ಭಗಳನ್ನು ಸದುಪಯೋಗಪಡಿಸಿಕೊಳ್ಳುವ 'ವೃತ್ತಿಪರ ಫಲಾನುಭವಿ'ಗಳು ತುದಿಗಾಲಲ್ಲಿರುತ್ತಾರೆ! ಇವರಿಗೆ ಚೀನಾ, ಇಸ್ರೆಲ್ನಂತಹ ವಿದೇಶಿ ಪ್ರವಾಸಗಳು ರಜಾಕಾಲದ ಟೂರ್! ಕೃಷಿ ಅಧ್ಯಯನದ ಹೆಸರಿನಲ್ಲಿ ಜನನಾಯಕರ ಪ್ರವಾಸ ಕಥನ ಹೇಳಿದರೆ ಬೇತಾಳನ ಕಥೆಯಂತೆ ನಮ್ಮ ತಲೆ ನೂರಲ್ಲ, ಸಾವಿರ ಹೋಳಾಗುವ ಭೀತಿಯಿದೆ!
                 ಕೃಷಿ ಪ್ರವಾಸವು ತಿರುಗಾಟವಾಗಬಾರದು. ಅದು ಮಾಹಿತಿಗಳ ಆಪೋಶನವಾಗಬೇಕು. ಕಾಲಕಾಲದ ಜ್ಞಾನಗಳು ಅಪ್ಡೇಟ್ ಆಗಲು ಸುಲಭ ದಾರಿ. ಪ್ರವಾಸದ ಅನುಭವಗಳು ಬದುಕಿನಲ್ಲಿ, ಕೃಷಿಯಲ್ಲಿ ಪ್ರತಿಫಲನವಾದಾಗ ಪ್ರವಾಸದಿಂದ ಸಾರ್ಥಕ. ಇಲ್ಲದಿದ್ದರೆ ಬರಿಗುಲ್ಲು, ನಿದ್ದೆಗೇಡು!

(ಉದಯವಾಣಿಯ ನೆಲದ ನಾಡಿ ಅಂಕಣದಲ್ಲಿ ಪ್ರಕಟಿತ - 7-8-2014)


0 comments:

Post a Comment