Monday, September 15, 2014

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಆಸ್ಟ್ರೇಲಿಯ ಅತಿಥಿ




             ಆಸ್ಟ್ರೇಲಿಯಾದ ಜೂಲಿಯನ್ ಫಾಂಗ್ ಚೀನೀ ಮೂಲದವರು. ಹಲಸಿನ ರುಚಿಯ ಬೆನ್ನೇರಿ ಕರಾವಳಿಗಿಳಿದರು. ಇಲ್ಲಿನ ಕೃಷಿಕರನ್ನು ಭೇಟಿ ಮಾಡಿದರು. ಹಲಸಿನ ಉತ್ಪನ್ನಗಳನ್ನು ಸವಿದರು. ಮೂರು ದಿವಸದ ಸುತ್ತಾಟದ ಬಳಿಕ ಇಂದು ಪೂರ್ವಾಹ್ನ (15-9-2014) ಪುತ್ತೂರು (ದ.ಕ.) ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಜೂಲಿಯನ್ ಫ್ಯಾಂಗ್ ಅವರೊಂದಿಗೆ ವಿದ್ಯಾರ್ಥಿಗಳು ಮಾತುಕತೆ ನಡೆಸಿದರು.
           ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕಮ್ಮಜೆ  ಉಪಸ್ಥಿತರಿದ್ದರು. ಇಪ್ಪತ್ತೊಂದರ ಹರೆಯದ ಜೂಲಿಯನ್ ಮಕ್ಕಳೊಂದಿಗೆ ಮಕ್ಕಳಾದರು. ತನ್ನೂರಿನ ಕೃಷಿ, ಬದುಕನ್ನು ನೆನಪಿಸಿಕೊಂಡರು. ಹಲಸಿನ ಸಾಧ್ಯತೆಗಳನ್ನು ವಿನಿಮಯ ಮಾಡಿಕೊಂಡರು. ಭಾಷಾ ತೊಡಕಿದ್ದರೂ ವಿದ್ಯಾರ್ಥಿಗಳು ಉತ್ಸಾಹದಿಂದ ಪ್ರಶ್ನೋತ್ತರದಲ್ಲಿ ಭಾಗವಹಿಸಿದ್ದರು.
            ಕಾಲೇಜಿಗೆ ಆಗಮಿಸಿದ ಆಸ್ಟ್ರೇಲಿಯ ಅತಿಥಿಯನ್ನು ಪ್ರಾಂಶುಪಾಲ ಡಾ.ಮಾಧವ ಭಟ್ ಸ್ವಾಗತಿಸಿದರು. ಕಾಲೇಜಿನ್ ಕ್ಯಾಂಟಿನಿನಲ್ಲಿ ಉಪಾಹಾರ ಸ್ವೀಕರಿಸಿದ ಜೂಲಿಯನ್ ಇಲ್ಲಿನ ’ಬನ್ಸ್’ ತಿಂಡಿಯನ್ನು ಮೆಚ್ಚಿಕೊಂಡರು!


ಉಸಿರು ನಿಲ್ಲಿಸಿದ ಕೊಳವೆ ಬಾವಿಗಳಿಗೆ ಮೋಕ್ಷ!




                 ಕೊಳವೆ ಬಾವಿಯ ಮಾತೆತ್ತಿದರೆ ಅಕ್ಷತಾ, ತಿಮ್ಮಣ್ಣ ಮರೆಯಲಾಗದಷ್ಟು ಕಾಡುತ್ತಾರೆ. ಮನುಷ್ಯತ್ವವನ್ನು ಕೆದಕಿದ ಎರಡು ಘಟನೆಗಳು ಜನರನ್ನು ಅಲರ್ಟ್  ಮಾಡಿದೆ, ಸರಕಾರವನ್ನು ಚುಚ್ಚಿದೆ. ಪರಿಣಾಮ, ವಿಫಲ ಕೊಳವೆ ಬಾವಿಗಳನ್ನು ಕ್ಷಿಪ್ರವಾಗಿ ಮುಚ್ಚಲು ಆದೇಶ. ಇಲಾಖೆಯ ಪಟ್ಟಿಗೆ ಹೊಸ ಹೊಣೆ ಹೊಸೆಯಿತು. ಬಾವಿಗಳನ್ನು ಮುಚ್ಚುವ ಸಂಭ್ರಮ. ಕೆಲವೆಡೆ ಸರಕಾರದೊಂದಿಗೆ ಸ್ಥಳೀಯ ಸಂಸ್ಥೆಗಳೂ ಸೇರಿಕೊಂಡಿವೆ.  ಕೊಳವೆಬಾವಿಗಳನ್ನು ಮುಚ್ಚಿದ ಅಂಕಿಅಂಶಗಳು ಸರಕಾರಕ್ಕೆ ತಲುಪಿದೆ.
                ಜನರ ಸಹಭಾಗಿತ್ವದಲ್ಲಿ ವಿಫಲ ಕೊಳವೆಬಾವಿಗಳನ್ನು ಮುಚ್ಚಿದರೆ ಜನರಿಗೆ ತಮ್ಮ ಹೊಣೆ, ಕರ್ತವ್ಯಗಳು ಮನದಟ್ಟಾಗುತ್ತದೆ ಎನ್ನುವ ದೂರದೃಷ್ಟಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅಖಾಡಕ್ಕಿಳಿಯಿತು. ಬೆಳಗಾವಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಿನದಂದು 918 ಕೊಳವೆ ಬಾವಿಗಳಿಗೆ ಮೋಕ್ಷ ನೀಡಿದೆ.
ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿ ಜೀವ ರಕ್ಷಣೆ ಮಾಡುವುದು - ಯೋಜನೆಯ ಅಧ್ಯಕ್ಷ  ಡಾ.ವೀರೇಂದ್ರ ಹೆಗ್ಗಡೆಯವರ ಆಶಯ. ಸ್ವ-ಸಹಾಯ ಸಂಘ, ಪ್ರಗತಿ ಬಂಧು ತಂಡಗಳ ಸದಸ್ಯರಿಗೆ ವಿಷಯದ ಗಾಢತೆಯನ್ನು ಮನದಟ್ಟು ಮಾಡಿ ಈ ಕಾರ್ಯಕ್ಕೆ ಬಳಕೆ.  ಹಳ್ಳಿಹಳ್ಳಿಗಳಲ್ಲಿ ಅಭಿಯಾನ.
                  ಬಯಲುಸೀಮೆಗೆ ಮಳೆ ಅಪರೂಪ. ಅಂತರ್ಜಲದ ಮಾತಂತೂ ದೂರ. ನೀರಿಲ್ಲದೆ ಕೃಷಿ ಮಾಡುವಂತಿಲ್ಲ. ಕೊಳವೆ ಬಾವಿ ಕೊರೆಯುವುದೇ ಅಂತಿಮ ಆಯ್ಕೆ. ಬಹುತೇಕ ಸಂದರ್ಭಗಳಲ್ಲಿ ನೀರು ಸಿಗದೆ ನಿರುಪಯುಕ್ತವಾದಾಗ ಕೊರೆತ ನಿಲ್ಲಿಸಿ ಮರೆತುಬಿಡುವುದೇ ಹೆಚ್ಚು. ಕೇಸಿಂಗ್ ಪೈಪ್ಯನ್ನು ಮಣ್ಣಲ್ಲಿ ಉಳಿಸದೆ ತೆಗೆದುಬಿಡುತ್ತಾರೆ.  ಕಪ್ಪು ಮತ್ತು ಮರಳು ಮಿಶ್ರಿತ ಮಣ್ಣಾದುದರಿಂದ ಮೇಲ್ಪದರ ಕರಗಿ ಆಳಕ್ಕೆ ಇಳಿಯುತ್ತಿದ್ದಂತೆ ಬಾವಿಯ ವ್ಯಾಸ ಹಿರಿದಾಗುತ್ತದೆ. ಇವೆಲ್ಲ ಹೆಚ್ಚು ಜನಸಂಚಾರವಿರುವಲ್ಲಿ ಇರುವಂಥವುಗಳು. ಅಪಾಯದ ಸಾಧ್ಯತೆಯಿದ್ದರೂ ನೋಡಿಯೂ ನೋಡದಂತಿರುವುದು ಜಾಯಮಾನ.
                 ಕೇಸಿಂಗ್ ಪೈಪ್ ಇಲ್ಲದ ಬಾವಿಯ ಸುತ್ತ ಎರಡಡಿ ಮಣ್ಣನ್ನು ಅಗೆದು ದೊಡ್ಡ ಚಪ್ಪಡಿಕಲ್ಲನ್ನು ಹಾಸಿ ಮುಚ್ಚುವುದು ಒಂದು ವಿಧಾನ. ಕೇಸಿಂಗ್ ಪೈಪ್ ಇದ್ದ ಬಾವಿಗಾದರೆ ಅದಕ್ಕೆ ಸರಿಹೊಂದುವ ಇಟ್ಟಿಗೆ, ಸಿಮೆಂಟ್ ಬಳಸಿ ಮುಚ್ಚುವಿಕೆ. ಯೋಜನೆಗೆ ಪಂಚಾಯತ್ಗಳು ಸಾಥ್ ನೀಡಿದೆ. ಈ ಕೆಲಸಗಳಿಗೆ ತನುಶ್ರಮವೇ ಬಂಡವಾಳ. ಕೆಲವೆಡೆ ಚಿಕ್ಕಪುಟ್ಟ ವೆಚ್ಚವೂ ಬಂದಿದೆ.  
                 ಮೂರು ಜಿಲ್ಲೆಗಳಲ್ಲಿ ಇನ್ನೂರರಿಂದ ಐನೂರು ಅಡಿ ತನಕ ಕೊರೆಯಂತ್ರದ ಕೊಚ್ಚುಹಲ್ಲು ಇಳಿದಿದೆ. ಒಂದೊಂದು ತಾಲೂಕಿನಲ್ಲಿ ಏನಿಲ್ಲವೆಂದರೂ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಕೊಳವೆ ಬಾವಿಗಳಿವೆ. ಅವುಗಳಲ್ಲಿ ಮೂರನೇ ಒಂದು ವಿಫಲ. ಬಾಗೀರಥಿಗಾಗಿ ಇಪ್ಪತ್ತಕ್ಕೂ ಮಿಕ್ಕಿ ಬಾವಿಗಳನ್ನು ಕೊರೆದ ನಿದರ್ಶನಗಳಿವೆ. ಒಂದೊಂದು ಬಾವಿಗೆ ಲಕ್ಷದ ತನಕ ವೆಚ್ಚವಾದರೂ ಕೊರೆಯುವಲ್ಲಿ ಪೈಪೋಟಿ. ಸಣ್ಣ ರೈತರು ಕೈಸಾಲ ಯಾ ಬ್ಯಾಂಕ್ ಸಾಲ ಮಾಡಿ ಕೃಷಿ ಉಳಿಸಲು ಕೊಳವೆ ಬಾವಿ ಕೊರೆಸಲು ಮನ ಮಾಡುತ್ತಾರೆ, ಎನ್ನುತ್ತಾರೆ, ಯೋಜನೆಯ ಧಾರವಾಡ ವಲಯ ನಿರ್ದೇಶಕ ಜಯಶಂಕರ ಶರ್ಮ.
                   ಯೋಜನೆಯು ನಿರುಪಯುಕ್ತ ಕೊಳವೆಬಾವಿಗಳನ್ನು ಗೊತ್ತು ಮಾಡಲು ಹಳ್ಳಿಗಳಿಗೆ ಹೋದಾಗ ಜನರ ಸ್ಪಂದನ ಉತ್ತಮ. ಹೆಚ್ಚಿನೆಡೆ ತಂಡಕ್ಕೆ ಶ್ರಮಕೊಡದೆ ತಾವೇ ಗೊತ್ತು ಮಾಡುತ್ತಿದ್ದರು. ಮುಚ್ಚುವ ಕೆಲಸಕ್ಕೆ ತಾವೇ ಮುಂದಾಗುತ್ತಿದ್ದರು. ಈಚೆಗೆ ತಿಮ್ಮಣ್ಣ, ಅಕ್ಷತಾ ಸಾವಿನ ಪ್ರಕರಣ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಹಳ್ಳಿಗಳಲ್ಲಿ ನಿಜಕ್ಕೂ ದಿಗಿಲಿನ ಸಂಚಲನವಾಗಿತ್ತು. 'ಇದೊಂದು ಪುಣ್ಯದ ಕೆಲಸ' ಎಂದು ಕೈಜೋಡಿಸಿದವರೇ ಅಧಿಕ. ಒಂದು ಕೊಳವೆ ಬಾವಿಯನ್ನು ಮುಚ್ಚುವುದೆಂದರೆ ಒಬ್ಬ ಜೀವ ಉಳಿಸಿದಂತೆ, ಚನ್ನಗಿರಿ ತಾಲೂಕಿನ ನಲ್ಲೂರು ಶಶಿಕಲಾ ಭಾವುಕರಾಗುತ್ತಾರೆ.
              ’"ಕೊಳವೆ ಬಾವಿ ಕೊರೆಸುವುದು ದೊಡ್ಡ ಕೆಲಸವಲ್ಲ. ನಿರುಪಯುಕ್ತವಾದಾಗ ತಕ್ಷಣ ಮುಚ್ಚಿ ಬಿಡುವ ಕೆಲಸವೂ ನಡೆಯಬೇಕು. ಕೊರೆಯುವ ಮೊದಲೇ ಒಪ್ಪಂದ ಮಾಡಿಕೊಳ್ಳುವುದು ಸೂಕ್ತ” ಎನ್ನುವ ಅಭಿಪ್ರಾಯ ಸೆಂತೆಬೆನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಿತ್ರಮ್ಮ ಅವರದು.
               ಯೋಜನೆಯ ಅಭಿಯಾನಕ್ಕೆ ಒಂದು ವಾರದ ಸಿದ್ಧತೆ. ವ್ಯವಹಾರ ಜಾಲ ಗಟ್ಟಿಯಿದ್ದುದರಿಂದ ಜನರನ್ನು ಒಗ್ಗೂಡಿಸಲು ಯೋಜನೆಗೆ ಸುಲಭವಾಯಿತು. ಹಿಂದಿನ ವರುಷದ ಸ್ವಾತಂತ್ರ್ಯ ದಿನಾಚರಣೆಯಂದು ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡಿತ್ತು. ಈ ಬಾರಿಯೂ 'ಕನರ್ಾಟಕ ರಾಜ್ಯಾದ್ಯಂತ ನೈರ್ಮಲ್ಯ ಅಭಿಯಾನ' ಆಂದೋಳನದ ಜತೆಗೆ ಕೊಳವೆ ಬಾವಿ ಮುಚ್ಚುವಿಕೆ ಸೇರ್ಪಡೆ.
               ನಿರುಪಯುಕ್ತ ಬಾವಿಗಳನ್ನು ಮುಚ್ಚದೆ ಹಾಗೆ ಬಿಟ್ಟರೆ ಮಳೆ ಬಂದಾಗ ನೀರು ತುಂಬಿ ಅಂತರ್ಜಲ ಹೆಚ್ಚಾಗಬಹುದು ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಇದು ಎಷ್ಟು ವಾಸ್ತವ ಎನ್ನುವ ಅಧ್ಯಯನ ಬೇಕಾಗಬಹುದು. ಅಪಾಯ ಎದುರಾದಾಗ ಹೊಣೆ ಯಾರ ಹೆಗಲಿಗೆ? ನೀರಿಂಗಿಸುವ ವೈಜ್ಞಾನಿಕ ವಿಧಾನವನ್ನು ತಿಳಿಸಿದರೆ ಪ್ರಯೋಜನವಾಗಬಹುದು, ಎನ್ನುತ್ತಾರೆ ಯೋಜನೆಯ ಚಿತ್ರದುರ್ಗ ಜಿಲ್ಲಾ ನಿದರ್ೆಶಕ ಸುಬ್ರಹ್ಮಣ್ಯ ಪ್ರಸಾದ್.
               ಸಂಘಸಂಸ್ಥೆಗಳು ಮನಸ್ಸು ಮಾಡಿದರೆ ಸಮಾಜಮುಖಿಯಾಗಿ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ಯೋಜನೆ ಮಾಡಿ ತೋರಿಸಿದೆ. ಎಲ್ಲವನ್ನೂ ಸರಕಾರವೇ ಮಾಡಲಿ ಧೋರಣೆಗಿಂತ ಸ್ವತಃ ನಾವೇ ಕಾರ್ಯಕ್ಷೇತ್ರಕ್ಕಿಳಿದರೆ ಸಮಸ್ಯೆ ಹತ್ತಿಯಷ್ಟು ಹಗುರವಾಗುತ್ತದೆ. ರಾಜಕೀಯ, ಮತೀಯ, ಜಾತೀಯ ಭಾವಗಳನ್ನು ಮನಸ್ಸಿನಿಂದ ಕಿತ್ತುಹಾಕಿದರೆ ಕೆಲಸ ಹಗುರವಾಗುತ್ತದೆ. 

ಬಾಳೆ ಎಲೆಯನ್ನು ಮುಕ್ಕುವ ಮಹಾಮಾರಿ!




             ಮಡಿಕೇರಿ ಗಾಳಿಬೀಡಿನ ಕೃಷಿಕ ರಾಯ್ ಮಲೆಯಾಳ ಪತ್ರಿಕೆಯನ್ನು ಓದುತ್ತಿದ್ದರು. ಕೇರಳದಲ್ಲಿ ಬಾಳೆ ಎಲೆಗಳನ್ನು ಮುಕ್ಕಿ ಸೊಕ್ಕಿದ ಪತಂಗಗಳ ಗಾಥೆ ಪ್ರಕಟವಾಗಿತ್ತು. ವರದಿ ಓದಿ ಮುಗಿದಿತ್ತೋ ಇಲ್ವೋ ರಾಯ್ ತನ್ನ ಬಾಳೆ ತೋಟಕ್ಕೆ ಧಾವಿಸಿದರು. ವರದಿಯೊಂದಿಗೆ ಪ್ರಕಟವಾದ ಪತಂಗದ ಲಾರ್ವವನ್ನು (ಪತಂಗ ಯಾ ಚಿಟ್ಟೆಯಾಗುವ ಮೊದಲ ಹಂತ) ತನ್ನ ತೋಟದ ಹುಳುಗಳೊಂದಿಗೆ ಹೋಲಿಸಿದರು. ಬಾಳೆಎಲೆಗಳನ್ನು ಸ್ವಾಹಾ ಮಾಡಿದ ದೃಶ್ಯ ನೋಡಿ ಬೆರಗಾದರು. ಆಗಲೇ ಲಾರ್ವಗಳು ತೋಟ ವ್ಯಾಪಿಸಿದ್ದುವು. ಎಲೆಗಳನ್ನು ತಿಂದಿದ್ದುವು.
                ರಾಯ್ ಮತ್ತು ಕೃಷಿಕ, ಇಂಜಿನಿಯರ್ ಶಿವಕುಮಾರ್ ನೆರೆಕರೆ ತೋಟವನ್ನು ಹೊಂದಿದವರು. ಬಾಳೆಯ ಸಂಕಷ್ಟವನ್ನು ಅವರೊಂದಿಗೆ ಹಂಚಿಕೊಂಡರು. ಶಿವಕುಮಾರ್ ತನ್ನ ತೋಟಕ್ಕೆ ಹೋಗಿ ನೋಡುತ್ತಾರೆ, ಲಾರ್ವಗಳ ಸಮ್ಮೇಳನ ಶುರುವಾಗಿತ್ತು! ಆಗಷ್ಟೇ ಅಲ್ಲಿಂದಿಲ್ಲಿಂದ ವರದಿಗಳು ಕಿವಿಗೆ ರಾಚುತ್ತಿದ್ದುವು. ಹತ್ತಿರದ ಚೆಂಬು ಗ್ರಾಮದಲ್ಲಿ ಬಾಳೆ ಗಿಡಗಳನ್ನು ಕಡಿದ ಸುದ್ದಿ ಕೇಳಿ ಶಿವಕುಮಾರ್ ಅಧೀರರಾದರು.
                  "ಬಾಳೆ ಉಪಕೃಷಿಯಲ್ವಾ. ಎಲ್ಲರಿಗೂ ಅಸಡ್ಡೆ. ನನಗೂ ಹಾಗಾಯಿತು. ಲಾರ್ವ ಅಟಾಕ್ ಮಾಡಿದರೂ ಗಮನಕ್ಕೆ ಬಂದಿಲ್ಲ. ತೀವ್ರತೆ ಮನದಟ್ಟಾದಾಗ ಕಾಲಮಿಂಚಿತ್ತು. ಅಸಡ್ಡೆ ಮಾಡುವಂತಿಲ್ಲ. ಆಗಲೇ ಲಾರ್ವಗಳು ಎಲೆಯನ್ನೆಲ್ಲಾ ತಿಂದುಬಿಟ್ಟಿದ್ದವು. ಗಿಡದಲ್ಲಿ ಎಲೆಗಳೇ ಇಲ್ಲ ಎಂದಾದರೆ ಕಾಯಿ ಸಹಜವಾಗಿ ಸೊರಗುತ್ತದೆ. ಒಂದು ಸೀಸನ್ನಿನ ಬಾಳೆಕಾಯಿ ಕಳೆದುಕೊಳ್ಳುವ ಆತಂಕವಿದೆ," ಎನ್ನುತ್ತಾರೆ.
               ಚಿಟ್ಟೆಯು ಬಾಳೆ ಎಲೆಯ ತಳಭಾಗದಲ್ಲಿ ಮೊಟ್ಟೆಗಳನ್ನಿಡುತ್ತದೆ. ಐದಾರು ದಿವಸದಲ್ಲಿ ಮೊಟ್ಟೆಯೊಡೆದು ಚಿಕ್ಕ ಹುಳಗಳು ಹೊರಬರುತ್ತವೆ. ಸುಮಾರು 20-25 ದಿವಸಗಳ ತನಕ ಎಲೆಯನ್ನು ನಿಧಾನವಾಗಿ ತಿನ್ನುತ್ತಾ ಮೈತುಂಬಿಕೊಳ್ಳುತ್ತವೆ. ಬಳಿಕ ಕೋಶಾವಸ್ಥೆಗೆ ಹೋಗಿ ಹತ್ತೇ ದಿವಸದಲ್ಲಿ ಕಂದು ಬಣ್ಣದ ಚಿಟ್ಟೆಯಾಗಿ ಹಾರುತ್ತವೆ. ನಂತರ ಪುನಃ ಮೊಟ್ಟೆಯಿಡುವ ಪ್ರಕ್ರಿಯೆಯ ಪುನರಾವರ್ತನೆ.
               ಎಲೆಯನ್ನು ತಿನ್ನುತ್ತಾ ಸುರಳಿಯಾಕಾರ ಮಾಡಿಟ್ಟುಕೊಳ್ಳುತ್ತದೆ. ಬಾಯಿಂದ ಜಿನುಗುವ ಅಂಟು ದ್ರವವನ್ನು ಸುರುಳಿಯ ಅಂಚಿಗೆ ಸವರುತ್ತಾ ಬಂದು ಸುರುಳಿ ಗಟ್ಟಿಯಾದಲ್ಲಿಗೆ ಹುಳುಗಳ ತೊಟ್ಟಿಲು ಸಿದ್ಧ.  ಬಾಳೆ ಎಲೆಯನ್ನು ಗಮನಿಸಿದರೆ ಅಲ್ಲಲ್ಲಿ ಸುರುಳಿಯಾಕಾರದ ತೊಟ್ಟಿಲುಗಳು ತೂಗಾಡುತ್ತಿರುತ್ತವೆ. ಬ್ಲೇಡಿನಲ್ಲಿ ಎಲೆಯನ್ನು ಕೊಯ್ದಂತೆ ಲಾರ್ವಗಳು ತನ್ನ ಮೂತಿಯಲ್ಲಿ ಎಲೆಯನ್ನು ಕೊರೆಯುತ್ತಾ ಹೊಟ್ಟೆಗಳಿಸುವ ಚಿತ್ತಾರ ನಿಜಕ್ಕೂ ಬೆರಗು, ಆಶ್ಚರ್ಯ! ಕೊಡಗಿನಲ್ಲಿ ಪ್ರಸಿದ್ಧವಾದ ಮರಬಾಳೆ(ಗಾಳಿ) ಲಾರ್ವಗಳಿಗೆ ಹೆಚ್ಚು ಬಲಿಯಾದ ತಳಿ. ನೇಂದ್ರ, ಕದಳಿಯನ್ನೂ ಬಿಟ್ಟಿಲ್ಲ.
                ಬಾಳೆಎಲೆಯನ್ನು ಕಡಿದರೆ ಬಾಳೆಗೊನೆಯಲ್ಲಿ ಒಂದು ಕಿಲೋ ಕಡಿಮೆ ಎಂದು ಹಿರಿಯರು ಹೇಳುತ್ತಿರುವುದು ನೆನಪಾಗುತ್ತದೆ, ಎಂದು ಜ್ಞಾಪಿಸಿಕೊಂಡರು ಶಿವಕುಮಾರ್. ಲಾರ್ವಗಳು ಎಲೆಗಳನ್ನು ಪೂರ್ತಿ ತಿಂದುಬಿಟ್ಟರೆ ಗೊನೆಯ ಗತಿ! ಅಧೋಗತಿ! ಕೃಷಿ ಬದುಕಿನ ಒಂದಂಗವನ್ನು ಆಧರಿಸುವ ಬಾಳೆಯ ಅವನತಿ ದೊಡ್ಡ ಹೊಡೆತ.
                ಈಗಾಗಲೇ ಅಡಿಕೆ ಕೃಷಿಗೆ ಬೇರುಹುಳ, ಕೊಳೆರೋಗ, ಹಳದಿರೋಗ.. ಗಳಿಂದ ಹೈರಾಣಾದ ಹೊತ್ತಲ್ಲೇ ಬಾಳೆಗೂ ಮಹಾಮಾರಿ! ಕೃಷಿ ಬದುಕಿನಲ್ಲಿ ಬಾಳೆಯ ಅಲಭ್ಯತೆಯನ್ನು ಒಂದು ಕ್ಷಣ ಜ್ಞಾಪಿಸಿಕೊಳ್ಳಿ. ಬಾಳೆ ಎಲೆ, ಬಾಳೆ ಕಾಯಿ, ಬಾಳೆ ಹಣ್ಣು, ಬಾಳೆ ದಿಂಡು, ಕುಂಡಿಗೆ.. ಹೀಗೆ ಎಲ್ಲಾ ಭಾಗಗಳು ಒಂದಲ್ಲ ಒಂದು ಹಂತದಲ್ಲಿ ಬಳಕೆಯಾಗುತ್ತಲೇ ಇವೆ. ಬಾಳೆಯ ಒಂದು ಋತುವಿನಲ್ಲಿ ಇವು ಸಿಗಲಾರವು ಎನ್ನುವುದು ನಂಬಲು ಕಷ್ಟವಾಗುತ್ತದೆ.
                 ಶಿವಕುಮಾರ್ ಬಾಳೆಯ ಕೊಡಗಿನ ಸ್ಥಿತಿಯನ್ನು ವಿವರಿಸುತ್ತಾರೆ : ಬಾಳೆಹಣ್ಣಿಗೆ ಈಗಾಗಲೇ ಕಿಲೋವೊಂದಕ್ಕೆ ಅರುವತ್ತು ರೂಪಾಯಿಗೂ ಮಿಕ್ಕಿ ದರವಿದೆ. ಕೊಡಗಿನಿಂದ ಪಳನಿಗೆ ಲೋಡುಗಟ್ಟಲೆ ಮರಬಾಳೆ ಕಾಯಿಯು ಮಾರಾಟವಾಗುತ್ತದೆ. ಮೂರ್ನಾಾಲ್ಕು ಮಂದಿ ದೊಡ್ಡ ಮಟ್ಟದಲ್ಲಿ ಈ ವ್ಯವಹಾರ ಮಾಡುವವರಿದ್ದಾರೆ. ಬಹುಶಃ ಧಾರ್ಮಿಕ ಕಾರ್ಯಗಳಿಗೆ ಇವು ಬಳಕೆಯಾಗುತ್ತಿರಬಹುದು. ಮರಬಾಳೆಯ ಹಣ್ಣಿಗೆ ಧಾರ್ಮಿಕ ನಂಟಿದೆ. ಕೆಲವು ಪೂಜೆಗಳಿಗೆ ಇದರ ಹಣ್ಣೇ ಆಗಬೇಕೆಂಬ ನಂಬುಗೆಯಿದೆ. ಬಾಳೆಗಂಟಿದ ಮಹಾಮಾರಿಯಿಂದಾಗಿ ನಂಬುಗೆಯ ಕೊಂಡಿ ಸಡಿಲವಾಗುತ್ತಿದೆ.
                                                                ವಿಜ್ಞಾನಿಗಳಿಗೆ ಮನದಟ್ಟು
                 ಲಾರ್ವ ತಂದಿತ್ತ ಬಾಳೆಯ ಸಂಕಷ್ಟವನ್ನು ಸಂಶೋಧನಾ ಕೇಂದ್ರಗಳಿಗೆ ಚಿತ್ರ ಸಹಿತ ಶಿವಕುಮಾರ್ ಕಳುಹಿಸಿದರು. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ವಿಜ್ಞಾನಿಗಳಿಗೆ ಮನದಟ್ಟು ಮಾಡಿದರು. ತೋಟಗಾರಿಕಾ ಇಲಾಖೆಯ ವರಿಷ್ಠರು ಸಾಥ್ ನೀಡಿದರು. ಆಗಸ್ಟ್ ಮಧ್ಯ ಭಾಗದಲ್ಲಿ ಗಾಳಿಬೀಡಿನ ಲಾರ್ವ ಪೀಡಿತ ಬಾಳೆ ತೋಟಕ್ಕೆ ಭೇಟಿ. ಸಮಸ್ಯೆಯ ಗಾಢತೆಯ ವೀಕ್ಷಣೆ. ಸಂಶೋಧನೆಗಾಗಿ ಹುಳಗಳನ್ನು ಪ್ಯಾಕ್ ಮಾಡಿ ಒಯ್ದರು.
                  ಸಂಶೋಧನೆಯ ವರದಿ ಬಂದಿದೆ, ಮಾಧ್ಯಮಗಳಲ್ಲಿ ಬಿತ್ತರವಾಗಿದೆ : ಬಾಳೆ ಎಲೆಯನ್ನು ತಿನ್ನುವ ಹುಳುವಿನ ಹೆಸರು  'ಎರಿಯೋನೇಟ ತ್ರ್ಯಾಕ್ಸ್'. 1973ರಲ್ಲಿ ಮೊದಲ ಬಾರಿಗೆ ಹವಾಯಿಯಲ್ಲಿ  ಕಂಡು ಬಂತಂತೆ. ಬಾಳೆ, ತೆಂಗು, ಬಿದಿರಿಗೆ ಬಾಧಿಸುವ ಕೀಟವಿದು. ರಾತ್ರಿ ಹೊತ್ತು ಹುಳುಗಳು ಸಕ್ರಿಯ. ಹಗಲಲ್ಲಿ ಬಹುತೇಕ ಸುರುಳಿಯೊಳಗೆ ಧ್ಯಾನ. ಮರಿ ಹುಳು ತಿಳಿ ಹಸಿರು ಬಣ್ಣ. ಬೆಳೆಯುತ್ತಾ ಹೋದಂತೆ ಕಡು ಹಸಿರಿಗೆ ಬದಲಾಗುತ್ತದೆ. ಹುಳುವಿನ ಮೇಲೆ ಬಿಳಿಯ ಪೌಡರ್ ಲೇಪನಗೊಂಡಂತಿರುವ ರೇಷ್ಮೆ ಎಳೆಯನ್ನು ಹೋಲುವ ಕೂದಲುಗಳು.. ವರದಿಯಲ್ಲಿ ಹಲವು ರಾಸಾಯನಿಕ ಸಿಂಪಡಣೆಗಳನ್ನು ಶಿಫಾರಸು ಮಾಡಿದ್ದಾರೆ. ಆದರೆ ಲಾರ್ವ ಅವಿತಿದ್ದ ಸುರುಳಿಯನ್ನು ತೆಗೆದು ನಾಶ ಮಾಡುವತ್ತ ಒಲವು ಹೆಚ್ಚಿದ್ದಂತೆ ಭಾಸವಾಯಿತು. ಇದೆಷ್ಟು ಪ್ರಾಕ್ಟಿಕಲ್ ಅನ್ನುವುದೇ ಪ್ರಶ್ನೆ. 'ಹಿಂದಿನ ವರುಷ ಮತ್ತು ಮೂರ್ನಾಲ್ಕು ತಿಂಗಳ ಹಿಂದೆ ಕೆವಿಕೆಗೆ ಕೃಷಿಕರು ಲಾರ್ವ ಹುಳುಗಳನ್ನು ತಂದಿದ್ದರು' ಎಂದು ಗಾಳಿಬೀಡಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ವಿಜ್ಞಾನಿಗಳು ನೆನಪಿಸಿಕೊಂಡರು.
               ಚಿಟ್ಟೆಗಳು ಎಲೆಯ ಕೆಳಗೆ ಸೂಕ್ಷ್ಮಾತಿಸೂಕ್ಷ್ಮವಾಗಿ ಮೊಟ್ಟೆಗಳನ್ನಿಡುತ್ತವೆ. ಆ ಹೊತ್ತಲ್ಲಿ ವಿಜ್ಞಾನಿಗಳು ಹೇಳಿದ ರಾಸಾಯನಿಕಗಳನ್ನು ಸಿಂಪಡಣೆ ಮಾಡಿದರೆ ಪ್ರಯೋಜನವಾಗಬಹುದೋ ಏನೋ? ಆದರವು ಯಾವ ಎಲೆಯ ಕೆಳಗೆ ಮೊಟ್ಟೆ ಇಟ್ಟಿವೆ ಎಂದು ತಿಳಿಯುವುದಾದರೂ ಹೇಗೆ? ಹಾಗಾಗಿ ಸಿಂಪಡಣೆಯನ್ನು ವ್ಯಾಪಕವಾಗಿ ಮಾಡುವುದು ಅನಿವಾರ್ಯವಾದೀತು. ಇವು ಎಷ್ಟರ ಮಟ್ಟಿಗೆ ಫಲಿತಾಂಶ ನೀಡಬಹುದು ಎನ್ನುವುದನ್ನು ಕಾದು ನೋಡಬೇಕಷ್ಟೇ.
                                                                ಕೇರಳದಿಂದ ಕನ್ನಾಡಿಗೆ
                   'ಕೇರಳದಲ್ಲಿ ಈಗಾಗಲೇ ನಾಶ ಮಾಡಿದ ಲಾರ್ವಗಳು ಈಕಡೆ ಬಂದಿರಬೇಕು,' ಎನ್ನುವ ಸಂಶಯ ರಾಯ್ ಅವರದು. ದಕ್ಷಿಣ ಕನ್ನಡ, ಕಾಸರಗೋಡು, ದಾವಣಗೆರೆ ಮೊದಲಾದೆಡೆ ಲಾರ್ವಗಳ ಅಟ್ಟಹಾಸ ಆರಂಭವಾಗಿದೆ. ಮಳೆ ವಿಪರೀತವಾಗುತ್ತಿದ್ದು ಅಡಿಕೆಗೆ ಕೊಳೆರೋಗ ಅಂಟಿದ ಹೊತ್ತಲ್ಲೇ ಬಾಳೆಗೂ ಮಾರಿ ಅಂಟಿರುವುದು ಆತಂಕ ಮೂಡಿಸಿದೆ.
                   "ಕೊಡಗಿನಲ್ಲಿ ಬಾಳೆಯ ಒಂದು ಬೆಳೆ ಬಹುತೇಕ ನಾಶವಾಗಿದೆ. ಈ ಬಾರಿ ಬಾಳೆಹಣ್ಣಿಗೆ ಕಿಲೋಗೆ ನೂರು ರೂಪಾಯಿ ದಾಟಿದರೂ ಆಶ್ಚರ್ಯವಿಲ್ಲ. ಅಷ್ಟು ಹಣ ಕೊಟ್ಟರೂ ಹಣ್ಣು ಸಿಗುವುದು ಸಂಶಯ," ಎಂದು ಶಿವಕುಮಾರ್ ಗುಮಾನಿ ವ್ಯಕ್ತಪಡಿಸುತ್ತಾ ಹೇಳುತ್ತಾರೆ, ’ಸಾವಿರದೈನೂರು ಅನಾನಸು ಬೆಳೆಸಿದ್ದೆ. ಅವು ಕಾಡು ಹಂದಿಯ ಪಾಲಾಯಿತು. ಬಾಳೆ ಆದರೂ ಉಳಿಯುತ್ತದಲ್ಲಾ ಎನ್ನುವ ಸಮಾಧಾನವಿತ್ತು. ಈಗ ಬಾಳೆಯೂ ಕೈಕೊಟ್ಟಿತು. ಹೀಗಿರುತ್ತಾ ಎಕ್ರೆಗಟ್ಟಲೆ ಬಾಳೆ ಬೆಳೆದವರ ಪಾಡೇನು?”
                 ಸ್ವಲ್ಪ ಸಮಯ ಇರಬಹುದು. ನಂತರ ಹಾರಿ ಹೋಗಬಹುದು - ಎಂಬ ಸಲಹೆ ನೀಡಿದವರೂ ಇದ್ದಾರೆ ಎನ್ನುತ್ತಾರೆ. ಅವು ಹಾರಿ ಹೋಗುವಾಗ ಬಾಳೆ ನಾಶವಾಗಿರುತ್ತದೆ! ಕನ್ನಾಡಿಗೆ ಈ ರೀತಿಯ ಬಾಳೆ ರೋಗ ಹೊಸತು. ಅಲ್ಲಿಲ್ಲಿ ಕಂಡುಬಂದಿದ್ದರೂ ವ್ಯಾಪಕವಾಗಿ ಇದೇ ಮೊದಲ ಬಾರಿಗೆ ಹರಡಿದೆ. ಇಲಾಖೆ, ವಿಜ್ಞಾನಿಗಳು ತಕ್ಷಣ ಸ್ಪಂದಿಸಿರುವುದು ಶ್ಲಾಘ್ಯ. ಹೊಸತಾದ ಸಮಸ್ಯೆಯಾದುದರಿಂದ ಅವರಿಗೂ ಇತಿಮಿತಿಗಳಿರುವುದು ಗೊತ್ತಿರುವ ವಿಚಾರ.
                 ಶಿವಕುಮಾರ್ ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಮಿಂಚಂಚೆಯ ಮೂಲಕ ಬಾಳೆ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ,  ಕೇರಳ ತಿರುಚಿನಾಪಳ್ಳಿಯ ಬಾಳೆ ತಳಿ ಸಂಶೋಧನಾ ಕೇಂದ್ರವು ತಕ್ಷಣ ಪ್ರತಿಕ್ರಿಯೆ ನೀಡಿದೆ. ಹೆಚ್ಚಿನ ಅಧ್ಯಯನಕ್ಕಾಗಿ ಹುಳುಗಳನ್ನು ಕಳುಹಿಸಿಕೊಡುವಂತೆ ವಿನಂತಿಸಿದೆ.
                    ಕೊಡಗು ಮಾತ್ರವಲ್ಲ, ಕನ್ನಾಡಿನ ವಿವಿಧ ಭಾಗಗಳಲ್ಲಿ ಇಣುಕಿರುವ ಲಾರ್ವ ತೀವ್ರವಾಗದ ಹಾಗೆ ಆ ಭಾಗದ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಹಾನಿ ತೀವ್ರವಾಗಿ, ನಾಶ-ನಷ್ಟ ಹೊಂದಿದ ಬಳಿಕ ಸ್ಪಂದಿಸಿ ವಿಷಾದಿಸಿದರೆ ಏನೂ ಪ್ರಯೋಜನವಿಲ್ಲ. 'ಮೊದಲೇ ಹೇಳಬೇಕಿತ್ತು, ಲಾರ್ವ ತರಬೇಕಿತ್ತು, ಸಹಕರಿಸಬೇಕಿತ್ತು,' ಎನ್ನುವ ಢಾಳು ಮಾತುಗಳು ಬಾಳೆ ಮಾರಿಗೂ ಅಂಟದಿರಲಿ.


ಐವತ್ತು ಲಕ್ಷ ಕ್ವಿಂಟಾಲ್ ಅಡಿಕೆ ಉತ್ಪಾದನೆ! ಐದು ಲಕ್ಷಕ್ಕೆ ಮಾತ್ರ ತೆರಿಗೆ!


 
  ಡಾ.ಪ್ರಕಾಶ ಕಮ್ಮರಡಿ

              ಚಾಲಿ ಅಡಿಕೆಯು ಕಿಲೋಗೆ ಮುನ್ನೂರು ರೂಪಾಯಿಯ ಗೆರೆ ದಾಟಿತ್ತು. ಇನ್ನೂ ಏರಬಹುದೇನೋ ನಿರೀಕ್ಷೆಗಳ ರಿಂಗಣ. ನಾಲ್ಕು ನೂರು ಮೀರಬಹುದೆಂಬ ವದಂತಿ. ಮಾಧ್ಯಮಗಳಲ್ಲೂ ಪ್ರಕಟ. ವಾಹಿನಿಗಳಲ್ಲೂ ಬಿತ್ತರ. ಬೆಳೆಗಾರನ ಮುಖದಲ್ಲಿ ಸಂತಸ.
               ಈ ಸಂತಸ ಎಷ್ಟು ಮಂದಿಯ ಮುಖದಲ್ಲಿ ಫಲಿತವಾಗಿದೆ? ಎಷ್ಟು ಕೃಷಿಕರಿಗೆ ಮುನ್ನೂರು ರೂಪಾಯಿ ದರ ಸಿಕ್ಕಿದೆ? ಎನ್ನುವ ಲೆಕ್ಕಾಚಾರದ ಹಿಂದೆ ಬಿದ್ದಾಗ ಖೇದವಾಗುತ್ತದೆ. ದರ ಏರಿದಾಗ ಸಣ್ಣ ಕೃಷಿಕರಲ್ಲಿದ್ದ ಅಡಿಕೆಯು ಮಾರುಕಟ್ಟೆಗೆ ಬಿಕರಿಯಾಗಿತ್ತು. ಅಡಿಕೆಯಿಂದಲೇ ಬದುಕು ನಿರ್ವಹಿಸುವ ಕುಟುಂಬಕ್ಕೆ ಸಿಕ್ಕ ಧಾರಣೆಗೆ ಮಾರಾಟ ಮಾಡುವುದು ಅನಿವಾರ್ಯ.
ಅಡಿಕೆ ಮಾರಾಟ ಮಾಡದೇನೇ ಕುಟುಂಬ ನಿರ್ವಹಣೆ ಮಾಡಬಹುದು ಎಂಬ ವಿಶ್ವಾಸವಿರುವ ಬೆರಳೆಣಿಕೆಯ ಮಂದಿಗೆ ಏರು ದರ ವರದಾನವಾಗಿದೆ. ಇವರಲ್ಲೂ ಕೆಲವು ಮಂದಿ ಕಿಲೋಗೆ ನಾಲ್ಕು ನೂರು ರೂಪಾಯಿ ಆಗಬಹುದೆನ್ನುವ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರುಕಟ್ಟೆಗೆ ಬಿಡದವರೂ ಇದ್ದಾರೆ!
              ಸಣ್ಣ ಕೃಷಿಕರಿಗೆ ಏರು ದರ ಲಭ್ಯವಾಗುತ್ತಿದ್ದರೆ ಬದುಕಿಗದು ಆಸರೆಯಾಗುತ್ತಿತ್ತು. ಕೃಷಿ ಮಾಡಲು ಹುಮ್ಮಸ್ಸು ಬರುತ್ತಿತ್ತು. ಆದರೂ ನಷ್ಟವಾಗದ ಬೆಲೆ ಚಾಲ್ತಿಯಲ್ಲಿದೆಯಲ್ಲಾ ಎನ್ನುವ ಸಮಾಧಾನ. ಅಡಿಕೆ ಕೊಯಿಲು ಆಗುವ ಮೊದಲೇ ಮಾರುಕಟ್ಟೆಯ ಬೆಲೆ ನಿರ್ಧಾಾರವಾದರೆ ಬೆಳೆಗಾರ ಸಮುದಾಯಕ್ಕೆ ಎಷ್ಟೊಂದು ಉಪಯೋಗ?
                ಸರಕಾರವು ತನ್ನ ಮುಂಗಡಪತ್ರದಲ್ಲಿ ಘೋಷಿಸಿದಂತೆ ಕೃಷಿ ಬೆಲೆ ಆಯೋಗವನ್ನು ರಚಿಸಿದೆ. ಮಾರುಕಟ್ಟೆಯ ತಜ್ಞತೆಯುಳ್ಳ ಕೃಷಿಕ ಡಾ.ಪ್ರಕಾಶ ಕಮ್ಮರಡಿಯವರು ಆಯೋಗದ ಅಧ್ಯಕ್ಷರು. ಅಡಿಕೆಯ ಸ್ಥಿತಿ-ಗತಿ ಕುರಿತು ಈಚೆಗೆ ಮಂಗಳೂರಿನಲ್ಲಿ ಅಡಿಕೆ ಸಂಸ್ಥೆಗಳ, ಇಲಾಖೆಗಳ ಮತ್ತು ಕೃಷಿಕರೊಂದಿಗೆ ಮುಖಾಮುಖಿಯಾಗಿತ್ತು. ಅಡಿಕೆ ಕೊಯ್ಲಿನ ಮೊದಲು ದರ ನಿಗದಿಯಾಗಬೇಕು ಎನ್ನುವ ಒಕ್ಕೊರಲ ಬೇಡಿಕೆ ಕೃಷಿಕರದ್ದಾಗಿತ್ತು.
              ಸರಕಾರಿ ಮಟ್ಟದಲ್ಲಿ ಅಡಿಕೆ ಆಗಾಗ್ಗೆ ಸುದ್ದಿ ಮಾಡುವ ಬೆಳೆ. ಸುದ್ದಿಯಾದಾಗಲೆಲ್ಲಾ ಬೆಳೆಗಾರರ ಆತಂಕ. ಅಡಿಕೆಯನ್ನೇ ನಂಬಿರುವವರ ಪಾಡು ಹೇಳತೀರದು. ಇಂತಹ ಆತಂಕವನ್ನು ದೂರಮಾಡುವ ಉದ್ದೇಶದಿಂದ ಕೃಷಿ ಆಯೋಗದ ಅಧ್ಯಕ್ಷರು ರಾಜ್ಯದ ಜಿಲ್ಲೆಗಳಲ್ಲಿ ಸಂಚರಿಸಿ ಅಡಿಕೆ ಮಾತ್ರವಲ್ಲದೆ, ಎಲ್ಲಾ ಕೃಷಿಯ ಮತ್ತು ಕೃಷಿಕರ ಬದುಕಿನ ಅಧ್ಯಯನ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
               ಮಂಗಳೂರಿನಲ್ಲಿ ಜರುಗಿದ ಮಾತುಕತೆಗಳು ಅಡಿಕೆ ಕೃಷಿಗೆ ಸೀಮಿತ. ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮಾರುಕಟ್ಟೆ ಸಮಿತಿ ವರಿಷ್ಠರಿಂದ ಅಂಕಿಅಂಶಗಳ ಪ್ರಸ್ತುತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 32,582 ಹೆಕ್ಟೇರ್ ವಿಸ್ತೀರ್ಣದಲ್ಲಿ ಅಡಿಕೆ ಬೆಳೆಯಿದೆ. ವಾಷರ್ಿಕ 33,155 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ, ಇದು ತೋಟಗಾರಿಕಾ ಇಲಾಖೆಯ ಅಂಕಿಅಂಶ. ಕ್ಯಾಂಪ್ಕೋ ಮತ್ತು ಬೆಳೆಗಾರರ ಲೆಕ್ಕಾಚಾರದಂತೆ ಅಡಿಕೆ ಉತ್ಪಾದನೆ ಐವತ್ತು ಮೆಟ್ರಿಕ್ ಟನ್, ವಿಸ್ತೀರ್ಣ ನಲವತ್ತೈದು ಸಾವಿರ ಹೆಕ್ಟೇರ್ ಮೀರಬಹುದು!
               ಈ ಮಾಹಿತಿಗೆ ಮಾನ್ಯ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಲರ್ಟ್ ಆದರು! ಅಡಿಕೆ ಉತ್ಪಾದನೆಯ ಅಂಕಿಅಂಶಗಳು ನಿಖರವಾಗಲೇ ಬೇಕು. ಅಡಿಕೆ ಸಂಬಂಧಿ ಸರಕಾರದ ಯೋಜನೆಗಳು ಅನುಷ್ಠಾನವಾಗುವಾಗ ಅಂಕಿಸಂಖ್ಯೆಗಳು ಮಾನದಂಡವಾಗುತ್ತವೆ. ಹಾಗಾಗಿ ಖಚಿತ ಮಾಹಿತಿ ಕಲೆಹಾಕಲು ನಿರ್ಧಾರ.
               ಕಾಫಿ, ಏಲಕ್ಕಿ, ತಂಬಾಕಿಗೆ ಇದ್ದಂತೆ ಅಡಿಕೆಗೂ ಬೋರ್ಡ್ ರೂಪುಗೊಳ್ಳಬೇಕು - ಡಾ.ಕಮ್ಮರಡಿಯವರ ಒತ್ತಾಸೆ. ಬೋರ್ಡ್ ರೂಪುಗೊಂಡರೆ ಅಡಿಕೆ ಕೃಷಿಕರ ಸಮಸ್ಯೆಗಳನ್ನು ಸರಕಾರದ ವರಿಷ್ಠರಿಗೆ ಮನದಟ್ಟು ಮಾಡಲು ಅನುಕೂಲವಾಗಬಹುದೆಂಬ ದೂರದೃಷ್ಟಿ.
               "ಬೋರ್ಡ್ ಗಳಲ್ಲಿ ಅಧಿಕಾರಿಗಳದ್ದೇ ಪ್ರಾಬಲ್ಯ. ಕೃಷಿಕನ ಮಾತಿಗೆ ಮನ್ನಣೆ ಸಿಗಬಹುದೆನ್ನುವ ವಿಶ್ವಾಸವಿಲ್ಲ. ಹಾಗಾಗಿ ಕೃಷಿ ಸಂಸ್ಥೆಗಳನ್ನು, ತಜ್ಞರನ್ನು, ಬೆಳೆಗಾರರನ್ನು ರೂಪಿಸಲುದ್ದೇಶಿಸಿದ ಬೋರ್ಡ್ ಗಳಲ್ಲಿ ಸದಸ್ಯರನ್ನಾಗಿ ಸೇರಿಸಲು ಅವಕಾಶ ಬೇಕು.," ಎಂದವರು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ.
                 ವ್ಯವಸ್ಥಿತ ಜಾಲವೊಂದು ತೆರಿಗೆ ತಪ್ಪಿಸಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ವ್ಯವಹಾರ ಮಾಡುತ್ತಿದೆ. ಆಜೂಬಾಜು ಐವತ್ತು ಲಕ್ಷ ಕ್ವಿಂಟಾಲ್ ಉತ್ಪಾದನೆಯಲ್ಲಿ ತೆರಿಗೆ ವ್ಯಾಪ್ತಿಗೆ ಬರುವುದು ಕೇವಲ ಐದು ಲಕ್ಷ ಕ್ವಿಂಟಾಲ್ ಮಾತ್ರ!. ಕಾಣದ ಕೈಗಳ ಕರಾಮತ್ತು ಅಡಿಕೆ ಮಾರುಕಟ್ಟೆಯನ್ನು ಹೇಗೆ ಹಿಂಡುತ್ತಿದೆ ಎನ್ನುವುದಕ್ಕೆ ದಿಗಿಲು ಹುಟ್ಟಿಸುವ ಈ ಲೆಕ್ಕಾಚಾರ ಸಾಕು. ಎಲ್ಲವನ್ನೂ ತೆರಿಗೆ ವ್ಯಾಪ್ತಿಯೊಳಗೆ ತರಬೇಕೆಂಬ ಆಗ್ರಹ ಬೆಳೆಗಾರರದು. ಇದಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯನ್ನು ಗಟ್ಟಿಗೊಳಿಸಲು ಜಿಲ್ಲಾಧಿಕಾರಿಗಳಲ್ಲಿ ಬೆಳೆಗಾರರ ವಿನಂತಿ.
                ಕ್ಲುಪ್ತ ಸಮಯಕ್ಕೆ ಉತ್ಪಾದನಾ ವೆಚ್ಚ ನಿರ್ಧಾರ, ರೈತರ ಸಾಂಘಿಕ ಶಕ್ತಿಯನ್ನು ಬಲಗೊಳಿಸುವುದು, ಅಧಿಕಾರಿಗಳಿಗೆ ಪ್ರಾಮಾಣಿಕತೆಯ(!) ಪಾಠ, ಉತ್ತಮ ಮಾರುಕಟ್ಟೆ ಬೆಲೆ, ಅಡಿಕೆಯ ವಿಸ್ತೀರ್ಣದ ಲೆಕ್ಕಾಚಾರಕ್ಕೆ ಸೆಟಲೈಟ್ ಸರ್ವರ್ರ್, ಕೃಷಿಕರಿಗೆ ಗೌರವಾರ್ಹವಾದ ಸ್ಥಾನ-ಮಾನ ನಿರ್ಧಾರ, ಪ್ರಾದೇಶಿಕ ಕೃಷಿ ನೀತಿ, ಕೃಷಿಗೆ ಯುವಕರನ್ನು ಸೆಳೆಯುವ ಬಗೆ, ಅಂದಂದಿನ ಅಡಿಕೆ ಧಾರಣೆಯು ಹಳ್ಳಿಯ ಕೃಷಿಕರಿಗೂ ಸಿಗುವ ವ್ಯವಸ್ಥೆ.. ಇವೇ ಮೊದಲಾದ ವಿಚಾರಗಳನ್ನು ಡಾ.ಕಮ್ಮರಡಿ ದಾಖಲಿಸಿಕೊಂಡರು.
                ಅಡಿಕೆ ಮಾರುಕಟ್ಟೆಯು ವ್ಯವಸ್ಥಿತ ಚೌಕಟ್ಟಿನೊಳಗೆ ವ್ಯವಹಾರ, ತೆರಿಗೆ ಪಾವತಿಸಿಯೇ ಅಡಿಕೆ ಮಾರಾಟ, ಅಡಿಕೆಗಾಗಿ ಪ್ರತ್ಯೇಕ ಮಂಡಳಿ, ರೈತರ ಸಹಭಾಗಿತ್ವದಲ್ಲಿ ಉತ್ಪಾದನಾ ವೆಚ್ಚದ ನಿರ್ಧಾಾರ, ಅಡಿಕೆ ಕೃಷಿಗೆ ಪೂರಕವಾದ ಯಂತ್ರೋಪಕರಣಗಳಿಗೆ ಪ್ರೋತ್ಸಾಹ.. ಈ ವಿಚಾರಗಳ ಸುತ್ತ ಮಾತುಕತೆ ನಡೆಸಿದ ಆಯೋಗದ ಆಧ್ಯಕ್ಷರ ಕೃಷಿಕ ಪರ ಕಾಳಜಿ ಶ್ಲಾಘ್ಯ.
                    'ಕೃಷಿ ಬೆಲೆ ಆಯೋಗ' ಎರಡು ತಿಂಗಳ ಕೂಸು. ರಾಜ್ಯದೆಲ್ಲೆಡೆ ಓಡಾಡಿ ಸಂಗ್ರಹಿಸಿದ ಇವರ ವರದಿಗಳು ಸರಕಾರದ ಮುಖ್ಯಸ್ಥರಿಗೆ ಎಷ್ಟು ಮನವರಿಕೆಯಾಗಬಹುದು? ವರದಿಯ ಅನುಷ್ಠಾನಕ್ಕೆ ಇಲಾಖೆಗಳು ಹೇಗೆ ಸಹಕರಿಸಬಹುದು? ಮೂರು ಇಲಾಖೆಗಳ ಮಿಳಿತದೊಂದಿಗೆ ಕಾರ್ಯನಿರ್ವಹಿಸಬೇಕಾದುರಿಂದ ಹೊಂದಾಣಿಕೆಗೆ ತಿಣುಕಾಡಬೇಕೇನೋ? ರಾಜಕೀಯ ಜಿದ್ದಾಜಿದ್ದು, ಇಲಾಖೆಗಳ ಮರ್ಜಿ, ಅಧಿಕಾರಿಗಳ ಇಸಂ, ಕಾಣದ ಕೈಗಳ ಕಸರತ್ತುಗಳನ್ನು  ಎದುರಿಸುವುದು ಡಾ.ಕಮ್ಮರಡಿಯವರಿಗೆ ದೊಡ್ಡ ಸವಾಲು.