ಮಡಿಕೇರಿ ಗಾಳಿಬೀಡಿನ ಕೃಷಿಕ ರಾಯ್ ಮಲೆಯಾಳ ಪತ್ರಿಕೆಯನ್ನು ಓದುತ್ತಿದ್ದರು. ಕೇರಳದಲ್ಲಿ ಬಾಳೆ ಎಲೆಗಳನ್ನು ಮುಕ್ಕಿ ಸೊಕ್ಕಿದ ಪತಂಗಗಳ ಗಾಥೆ ಪ್ರಕಟವಾಗಿತ್ತು. ವರದಿ ಓದಿ ಮುಗಿದಿತ್ತೋ ಇಲ್ವೋ ರಾಯ್ ತನ್ನ ಬಾಳೆ ತೋಟಕ್ಕೆ ಧಾವಿಸಿದರು. ವರದಿಯೊಂದಿಗೆ ಪ್ರಕಟವಾದ ಪತಂಗದ ಲಾರ್ವವನ್ನು (ಪತಂಗ ಯಾ ಚಿಟ್ಟೆಯಾಗುವ ಮೊದಲ ಹಂತ) ತನ್ನ ತೋಟದ ಹುಳುಗಳೊಂದಿಗೆ ಹೋಲಿಸಿದರು. ಬಾಳೆಎಲೆಗಳನ್ನು ಸ್ವಾಹಾ ಮಾಡಿದ ದೃಶ್ಯ ನೋಡಿ ಬೆರಗಾದರು. ಆಗಲೇ ಲಾರ್ವಗಳು ತೋಟ ವ್ಯಾಪಿಸಿದ್ದುವು. ಎಲೆಗಳನ್ನು ತಿಂದಿದ್ದುವು.
ರಾಯ್ ಮತ್ತು ಕೃಷಿಕ, ಇಂಜಿನಿಯರ್ ಶಿವಕುಮಾರ್ ನೆರೆಕರೆ ತೋಟವನ್ನು ಹೊಂದಿದವರು. ಬಾಳೆಯ ಸಂಕಷ್ಟವನ್ನು ಅವರೊಂದಿಗೆ ಹಂಚಿಕೊಂಡರು. ಶಿವಕುಮಾರ್ ತನ್ನ ತೋಟಕ್ಕೆ ಹೋಗಿ ನೋಡುತ್ತಾರೆ, ಲಾರ್ವಗಳ ಸಮ್ಮೇಳನ ಶುರುವಾಗಿತ್ತು! ಆಗಷ್ಟೇ ಅಲ್ಲಿಂದಿಲ್ಲಿಂದ ವರದಿಗಳು ಕಿವಿಗೆ ರಾಚುತ್ತಿದ್ದುವು. ಹತ್ತಿರದ ಚೆಂಬು ಗ್ರಾಮದಲ್ಲಿ ಬಾಳೆ ಗಿಡಗಳನ್ನು ಕಡಿದ ಸುದ್ದಿ ಕೇಳಿ ಶಿವಕುಮಾರ್ ಅಧೀರರಾದರು.
"ಬಾಳೆ ಉಪಕೃಷಿಯಲ್ವಾ. ಎಲ್ಲರಿಗೂ ಅಸಡ್ಡೆ. ನನಗೂ ಹಾಗಾಯಿತು. ಲಾರ್ವ ಅಟಾಕ್ ಮಾಡಿದರೂ ಗಮನಕ್ಕೆ ಬಂದಿಲ್ಲ. ತೀವ್ರತೆ ಮನದಟ್ಟಾದಾಗ ಕಾಲಮಿಂಚಿತ್ತು. ಅಸಡ್ಡೆ ಮಾಡುವಂತಿಲ್ಲ. ಆಗಲೇ ಲಾರ್ವಗಳು ಎಲೆಯನ್ನೆಲ್ಲಾ ತಿಂದುಬಿಟ್ಟಿದ್ದವು. ಗಿಡದಲ್ಲಿ ಎಲೆಗಳೇ ಇಲ್ಲ ಎಂದಾದರೆ ಕಾಯಿ ಸಹಜವಾಗಿ ಸೊರಗುತ್ತದೆ. ಒಂದು ಸೀಸನ್ನಿನ ಬಾಳೆಕಾಯಿ ಕಳೆದುಕೊಳ್ಳುವ ಆತಂಕವಿದೆ," ಎನ್ನುತ್ತಾರೆ.
ಚಿಟ್ಟೆಯು ಬಾಳೆ ಎಲೆಯ ತಳಭಾಗದಲ್ಲಿ ಮೊಟ್ಟೆಗಳನ್ನಿಡುತ್ತದೆ. ಐದಾರು ದಿವಸದಲ್ಲಿ ಮೊಟ್ಟೆಯೊಡೆದು ಚಿಕ್ಕ ಹುಳಗಳು ಹೊರಬರುತ್ತವೆ. ಸುಮಾರು 20-25 ದಿವಸಗಳ ತನಕ ಎಲೆಯನ್ನು ನಿಧಾನವಾಗಿ ತಿನ್ನುತ್ತಾ ಮೈತುಂಬಿಕೊಳ್ಳುತ್ತವೆ. ಬಳಿಕ ಕೋಶಾವಸ್ಥೆಗೆ ಹೋಗಿ ಹತ್ತೇ ದಿವಸದಲ್ಲಿ ಕಂದು ಬಣ್ಣದ ಚಿಟ್ಟೆಯಾಗಿ ಹಾರುತ್ತವೆ. ನಂತರ ಪುನಃ ಮೊಟ್ಟೆಯಿಡುವ ಪ್ರಕ್ರಿಯೆಯ ಪುನರಾವರ್ತನೆ.
ಎಲೆಯನ್ನು ತಿನ್ನುತ್ತಾ ಸುರಳಿಯಾಕಾರ ಮಾಡಿಟ್ಟುಕೊಳ್ಳುತ್ತದೆ. ಬಾಯಿಂದ ಜಿನುಗುವ ಅಂಟು ದ್ರವವನ್ನು ಸುರುಳಿಯ ಅಂಚಿಗೆ ಸವರುತ್ತಾ ಬಂದು ಸುರುಳಿ ಗಟ್ಟಿಯಾದಲ್ಲಿಗೆ ಹುಳುಗಳ ತೊಟ್ಟಿಲು ಸಿದ್ಧ. ಬಾಳೆ ಎಲೆಯನ್ನು ಗಮನಿಸಿದರೆ ಅಲ್ಲಲ್ಲಿ ಸುರುಳಿಯಾಕಾರದ ತೊಟ್ಟಿಲುಗಳು ತೂಗಾಡುತ್ತಿರುತ್ತವೆ. ಬ್ಲೇಡಿನಲ್ಲಿ ಎಲೆಯನ್ನು ಕೊಯ್ದಂತೆ ಲಾರ್ವಗಳು ತನ್ನ ಮೂತಿಯಲ್ಲಿ ಎಲೆಯನ್ನು ಕೊರೆಯುತ್ತಾ ಹೊಟ್ಟೆಗಳಿಸುವ ಚಿತ್ತಾರ ನಿಜಕ್ಕೂ ಬೆರಗು, ಆಶ್ಚರ್ಯ! ಕೊಡಗಿನಲ್ಲಿ ಪ್ರಸಿದ್ಧವಾದ ಮರಬಾಳೆ(ಗಾಳಿ) ಲಾರ್ವಗಳಿಗೆ ಹೆಚ್ಚು ಬಲಿಯಾದ ತಳಿ. ನೇಂದ್ರ, ಕದಳಿಯನ್ನೂ ಬಿಟ್ಟಿಲ್ಲ.
ಬಾಳೆಎಲೆಯನ್ನು ಕಡಿದರೆ ಬಾಳೆಗೊನೆಯಲ್ಲಿ ಒಂದು ಕಿಲೋ ಕಡಿಮೆ ಎಂದು ಹಿರಿಯರು ಹೇಳುತ್ತಿರುವುದು ನೆನಪಾಗುತ್ತದೆ, ಎಂದು ಜ್ಞಾಪಿಸಿಕೊಂಡರು ಶಿವಕುಮಾರ್. ಲಾರ್ವಗಳು ಎಲೆಗಳನ್ನು ಪೂರ್ತಿ ತಿಂದುಬಿಟ್ಟರೆ ಗೊನೆಯ ಗತಿ! ಅಧೋಗತಿ! ಕೃಷಿ ಬದುಕಿನ ಒಂದಂಗವನ್ನು ಆಧರಿಸುವ ಬಾಳೆಯ ಅವನತಿ ದೊಡ್ಡ ಹೊಡೆತ.
ಈಗಾಗಲೇ ಅಡಿಕೆ ಕೃಷಿಗೆ ಬೇರುಹುಳ, ಕೊಳೆರೋಗ, ಹಳದಿರೋಗ.. ಗಳಿಂದ ಹೈರಾಣಾದ ಹೊತ್ತಲ್ಲೇ ಬಾಳೆಗೂ ಮಹಾಮಾರಿ! ಕೃಷಿ ಬದುಕಿನಲ್ಲಿ ಬಾಳೆಯ ಅಲಭ್ಯತೆಯನ್ನು ಒಂದು ಕ್ಷಣ ಜ್ಞಾಪಿಸಿಕೊಳ್ಳಿ. ಬಾಳೆ ಎಲೆ, ಬಾಳೆ ಕಾಯಿ, ಬಾಳೆ ಹಣ್ಣು, ಬಾಳೆ ದಿಂಡು, ಕುಂಡಿಗೆ.. ಹೀಗೆ ಎಲ್ಲಾ ಭಾಗಗಳು ಒಂದಲ್ಲ ಒಂದು ಹಂತದಲ್ಲಿ ಬಳಕೆಯಾಗುತ್ತಲೇ ಇವೆ. ಬಾಳೆಯ ಒಂದು ಋತುವಿನಲ್ಲಿ ಇವು ಸಿಗಲಾರವು ಎನ್ನುವುದು ನಂಬಲು ಕಷ್ಟವಾಗುತ್ತದೆ.
ಶಿವಕುಮಾರ್ ಬಾಳೆಯ ಕೊಡಗಿನ ಸ್ಥಿತಿಯನ್ನು ವಿವರಿಸುತ್ತಾರೆ : ಬಾಳೆಹಣ್ಣಿಗೆ ಈಗಾಗಲೇ ಕಿಲೋವೊಂದಕ್ಕೆ ಅರುವತ್ತು ರೂಪಾಯಿಗೂ ಮಿಕ್ಕಿ ದರವಿದೆ. ಕೊಡಗಿನಿಂದ ಪಳನಿಗೆ ಲೋಡುಗಟ್ಟಲೆ ಮರಬಾಳೆ ಕಾಯಿಯು ಮಾರಾಟವಾಗುತ್ತದೆ. ಮೂರ್ನಾಾಲ್ಕು ಮಂದಿ ದೊಡ್ಡ ಮಟ್ಟದಲ್ಲಿ ಈ ವ್ಯವಹಾರ ಮಾಡುವವರಿದ್ದಾರೆ. ಬಹುಶಃ ಧಾರ್ಮಿಕ ಕಾರ್ಯಗಳಿಗೆ ಇವು ಬಳಕೆಯಾಗುತ್ತಿರಬಹುದು. ಮರಬಾಳೆಯ ಹಣ್ಣಿಗೆ ಧಾರ್ಮಿಕ ನಂಟಿದೆ. ಕೆಲವು ಪೂಜೆಗಳಿಗೆ ಇದರ ಹಣ್ಣೇ ಆಗಬೇಕೆಂಬ ನಂಬುಗೆಯಿದೆ. ಬಾಳೆಗಂಟಿದ ಮಹಾಮಾರಿಯಿಂದಾಗಿ ನಂಬುಗೆಯ ಕೊಂಡಿ ಸಡಿಲವಾಗುತ್ತಿದೆ.
ವಿಜ್ಞಾನಿಗಳಿಗೆ ಮನದಟ್ಟು
ಲಾರ್ವ ತಂದಿತ್ತ ಬಾಳೆಯ ಸಂಕಷ್ಟವನ್ನು ಸಂಶೋಧನಾ ಕೇಂದ್ರಗಳಿಗೆ ಚಿತ್ರ ಸಹಿತ ಶಿವಕುಮಾರ್ ಕಳುಹಿಸಿದರು. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ವಿಜ್ಞಾನಿಗಳಿಗೆ ಮನದಟ್ಟು ಮಾಡಿದರು. ತೋಟಗಾರಿಕಾ ಇಲಾಖೆಯ ವರಿಷ್ಠರು ಸಾಥ್ ನೀಡಿದರು. ಆಗಸ್ಟ್ ಮಧ್ಯ ಭಾಗದಲ್ಲಿ ಗಾಳಿಬೀಡಿನ ಲಾರ್ವ ಪೀಡಿತ ಬಾಳೆ ತೋಟಕ್ಕೆ ಭೇಟಿ. ಸಮಸ್ಯೆಯ ಗಾಢತೆಯ ವೀಕ್ಷಣೆ. ಸಂಶೋಧನೆಗಾಗಿ ಹುಳಗಳನ್ನು ಪ್ಯಾಕ್ ಮಾಡಿ ಒಯ್ದರು.
ಸಂಶೋಧನೆಯ ವರದಿ ಬಂದಿದೆ, ಮಾಧ್ಯಮಗಳಲ್ಲಿ ಬಿತ್ತರವಾಗಿದೆ : ಬಾಳೆ ಎಲೆಯನ್ನು ತಿನ್ನುವ ಹುಳುವಿನ ಹೆಸರು 'ಎರಿಯೋನೇಟ ತ್ರ್ಯಾಕ್ಸ್'. 1973ರಲ್ಲಿ ಮೊದಲ ಬಾರಿಗೆ ಹವಾಯಿಯಲ್ಲಿ ಕಂಡು ಬಂತಂತೆ. ಬಾಳೆ, ತೆಂಗು, ಬಿದಿರಿಗೆ ಬಾಧಿಸುವ ಕೀಟವಿದು. ರಾತ್ರಿ ಹೊತ್ತು ಹುಳುಗಳು ಸಕ್ರಿಯ. ಹಗಲಲ್ಲಿ ಬಹುತೇಕ ಸುರುಳಿಯೊಳಗೆ ಧ್ಯಾನ. ಮರಿ ಹುಳು ತಿಳಿ ಹಸಿರು ಬಣ್ಣ. ಬೆಳೆಯುತ್ತಾ ಹೋದಂತೆ ಕಡು ಹಸಿರಿಗೆ ಬದಲಾಗುತ್ತದೆ. ಹುಳುವಿನ ಮೇಲೆ ಬಿಳಿಯ ಪೌಡರ್ ಲೇಪನಗೊಂಡಂತಿರುವ ರೇಷ್ಮೆ ಎಳೆಯನ್ನು ಹೋಲುವ ಕೂದಲುಗಳು.. ವರದಿಯಲ್ಲಿ ಹಲವು ರಾಸಾಯನಿಕ ಸಿಂಪಡಣೆಗಳನ್ನು ಶಿಫಾರಸು ಮಾಡಿದ್ದಾರೆ. ಆದರೆ ಲಾರ್ವ ಅವಿತಿದ್ದ ಸುರುಳಿಯನ್ನು ತೆಗೆದು ನಾಶ ಮಾಡುವತ್ತ ಒಲವು ಹೆಚ್ಚಿದ್ದಂತೆ ಭಾಸವಾಯಿತು. ಇದೆಷ್ಟು ಪ್ರಾಕ್ಟಿಕಲ್ ಅನ್ನುವುದೇ ಪ್ರಶ್ನೆ. 'ಹಿಂದಿನ ವರುಷ ಮತ್ತು ಮೂರ್ನಾಲ್ಕು ತಿಂಗಳ ಹಿಂದೆ ಕೆವಿಕೆಗೆ ಕೃಷಿಕರು ಲಾರ್ವ ಹುಳುಗಳನ್ನು ತಂದಿದ್ದರು' ಎಂದು ಗಾಳಿಬೀಡಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ವಿಜ್ಞಾನಿಗಳು ನೆನಪಿಸಿಕೊಂಡರು.
ಚಿಟ್ಟೆಗಳು ಎಲೆಯ ಕೆಳಗೆ ಸೂಕ್ಷ್ಮಾತಿಸೂಕ್ಷ್ಮವಾಗಿ ಮೊಟ್ಟೆಗಳನ್ನಿಡುತ್ತವೆ. ಆ ಹೊತ್ತಲ್ಲಿ ವಿಜ್ಞಾನಿಗಳು ಹೇಳಿದ ರಾಸಾಯನಿಕಗಳನ್ನು ಸಿಂಪಡಣೆ ಮಾಡಿದರೆ ಪ್ರಯೋಜನವಾಗಬಹುದೋ ಏನೋ? ಆದರವು ಯಾವ ಎಲೆಯ ಕೆಳಗೆ ಮೊಟ್ಟೆ ಇಟ್ಟಿವೆ ಎಂದು ತಿಳಿಯುವುದಾದರೂ ಹೇಗೆ? ಹಾಗಾಗಿ ಸಿಂಪಡಣೆಯನ್ನು ವ್ಯಾಪಕವಾಗಿ ಮಾಡುವುದು ಅನಿವಾರ್ಯವಾದೀತು. ಇವು ಎಷ್ಟರ ಮಟ್ಟಿಗೆ ಫಲಿತಾಂಶ ನೀಡಬಹುದು ಎನ್ನುವುದನ್ನು ಕಾದು ನೋಡಬೇಕಷ್ಟೇ.
ಕೇರಳದಿಂದ ಕನ್ನಾಡಿಗೆ
'ಕೇರಳದಲ್ಲಿ ಈಗಾಗಲೇ ನಾಶ ಮಾಡಿದ ಲಾರ್ವಗಳು ಈಕಡೆ ಬಂದಿರಬೇಕು,' ಎನ್ನುವ ಸಂಶಯ ರಾಯ್ ಅವರದು. ದಕ್ಷಿಣ ಕನ್ನಡ, ಕಾಸರಗೋಡು, ದಾವಣಗೆರೆ ಮೊದಲಾದೆಡೆ ಲಾರ್ವಗಳ ಅಟ್ಟಹಾಸ ಆರಂಭವಾಗಿದೆ. ಮಳೆ ವಿಪರೀತವಾಗುತ್ತಿದ್ದು ಅಡಿಕೆಗೆ ಕೊಳೆರೋಗ ಅಂಟಿದ ಹೊತ್ತಲ್ಲೇ ಬಾಳೆಗೂ ಮಾರಿ ಅಂಟಿರುವುದು ಆತಂಕ ಮೂಡಿಸಿದೆ.
"ಕೊಡಗಿನಲ್ಲಿ ಬಾಳೆಯ ಒಂದು ಬೆಳೆ ಬಹುತೇಕ ನಾಶವಾಗಿದೆ. ಈ ಬಾರಿ ಬಾಳೆಹಣ್ಣಿಗೆ ಕಿಲೋಗೆ ನೂರು ರೂಪಾಯಿ ದಾಟಿದರೂ ಆಶ್ಚರ್ಯವಿಲ್ಲ. ಅಷ್ಟು ಹಣ ಕೊಟ್ಟರೂ ಹಣ್ಣು ಸಿಗುವುದು ಸಂಶಯ," ಎಂದು ಶಿವಕುಮಾರ್ ಗುಮಾನಿ ವ್ಯಕ್ತಪಡಿಸುತ್ತಾ ಹೇಳುತ್ತಾರೆ, ’ಸಾವಿರದೈನೂರು ಅನಾನಸು ಬೆಳೆಸಿದ್ದೆ. ಅವು ಕಾಡು ಹಂದಿಯ ಪಾಲಾಯಿತು. ಬಾಳೆ ಆದರೂ ಉಳಿಯುತ್ತದಲ್ಲಾ ಎನ್ನುವ ಸಮಾಧಾನವಿತ್ತು. ಈಗ ಬಾಳೆಯೂ ಕೈಕೊಟ್ಟಿತು. ಹೀಗಿರುತ್ತಾ ಎಕ್ರೆಗಟ್ಟಲೆ ಬಾಳೆ ಬೆಳೆದವರ ಪಾಡೇನು?”
ಸ್ವಲ್ಪ ಸಮಯ ಇರಬಹುದು. ನಂತರ ಹಾರಿ ಹೋಗಬಹುದು - ಎಂಬ ಸಲಹೆ ನೀಡಿದವರೂ ಇದ್ದಾರೆ ಎನ್ನುತ್ತಾರೆ. ಅವು ಹಾರಿ ಹೋಗುವಾಗ ಬಾಳೆ ನಾಶವಾಗಿರುತ್ತದೆ! ಕನ್ನಾಡಿಗೆ ಈ ರೀತಿಯ ಬಾಳೆ ರೋಗ ಹೊಸತು. ಅಲ್ಲಿಲ್ಲಿ ಕಂಡುಬಂದಿದ್ದರೂ ವ್ಯಾಪಕವಾಗಿ ಇದೇ ಮೊದಲ ಬಾರಿಗೆ ಹರಡಿದೆ. ಇಲಾಖೆ, ವಿಜ್ಞಾನಿಗಳು ತಕ್ಷಣ ಸ್ಪಂದಿಸಿರುವುದು ಶ್ಲಾಘ್ಯ. ಹೊಸತಾದ ಸಮಸ್ಯೆಯಾದುದರಿಂದ ಅವರಿಗೂ ಇತಿಮಿತಿಗಳಿರುವುದು ಗೊತ್ತಿರುವ ವಿಚಾರ.
ಶಿವಕುಮಾರ್ ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಮಿಂಚಂಚೆಯ ಮೂಲಕ ಬಾಳೆ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಕೇರಳ ತಿರುಚಿನಾಪಳ್ಳಿಯ ಬಾಳೆ ತಳಿ ಸಂಶೋಧನಾ ಕೇಂದ್ರವು ತಕ್ಷಣ ಪ್ರತಿಕ್ರಿಯೆ ನೀಡಿದೆ. ಹೆಚ್ಚಿನ ಅಧ್ಯಯನಕ್ಕಾಗಿ ಹುಳುಗಳನ್ನು ಕಳುಹಿಸಿಕೊಡುವಂತೆ ವಿನಂತಿಸಿದೆ.
ಕೊಡಗು ಮಾತ್ರವಲ್ಲ, ಕನ್ನಾಡಿನ ವಿವಿಧ ಭಾಗಗಳಲ್ಲಿ ಇಣುಕಿರುವ ಲಾರ್ವ ತೀವ್ರವಾಗದ ಹಾಗೆ ಆ ಭಾಗದ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಹಾನಿ ತೀವ್ರವಾಗಿ, ನಾಶ-ನಷ್ಟ ಹೊಂದಿದ ಬಳಿಕ ಸ್ಪಂದಿಸಿ ವಿಷಾದಿಸಿದರೆ ಏನೂ ಪ್ರಯೋಜನವಿಲ್ಲ. 'ಮೊದಲೇ ಹೇಳಬೇಕಿತ್ತು, ಲಾರ್ವ ತರಬೇಕಿತ್ತು, ಸಹಕರಿಸಬೇಕಿತ್ತು,' ಎನ್ನುವ ಢಾಳು ಮಾತುಗಳು ಬಾಳೆ ಮಾರಿಗೂ ಅಂಟದಿರಲಿ.
1 comments:
ಇದಕ್ಕೊಂದು ಉತ್ತಮ ಉಪಾಯ ಇದೆ. ಒಂದು ಕೊಕ್ಕೆಯನ್ನು ತೆಗೆದುಕೊಳ್ಳಿ. ಹಾಗೆ ಸಾಧಾರಣ ಒಂದು ಕೋಲು ಉದ್ದದ ಬಿದಿರ ಕಣೆಯನ್ನು ಆ ಕೊಕ್ಕೆಯ ತುದಿಗೆ ಅಡ್ಡಲಾಗಿ T ಅಕಾರ ಬರುವಂತೆ ಕಟ್ಟಿ. ಇದನ್ನು ಉಪಯೋಗಿಸಿ ಎಲ್ಲ ಬಾಳೆ ಎಲೆಗಳನ್ನು ಹರಿಯುತ್ತಾ ಹೋಗಿ. ಇದರಿಂದಾಗಿ ಹುಳುಗಳಿಗೆ, ಚಾಪೆ ಸುತ್ತಿದಂತೆ ಸುತ್ತಲು ಅಸಾಧ್ಯವಾಗಿ ಬಿದ್ದು ಹೋಗುತ್ತವೆ. ಮಾಡಿ ನೋಡಿ ನಮಗೆ ಹೇಳಿ.
Post a Comment