Monday, September 15, 2014

ಐವತ್ತು ಲಕ್ಷ ಕ್ವಿಂಟಾಲ್ ಅಡಿಕೆ ಉತ್ಪಾದನೆ! ಐದು ಲಕ್ಷಕ್ಕೆ ಮಾತ್ರ ತೆರಿಗೆ!


 
  ಡಾ.ಪ್ರಕಾಶ ಕಮ್ಮರಡಿ

              ಚಾಲಿ ಅಡಿಕೆಯು ಕಿಲೋಗೆ ಮುನ್ನೂರು ರೂಪಾಯಿಯ ಗೆರೆ ದಾಟಿತ್ತು. ಇನ್ನೂ ಏರಬಹುದೇನೋ ನಿರೀಕ್ಷೆಗಳ ರಿಂಗಣ. ನಾಲ್ಕು ನೂರು ಮೀರಬಹುದೆಂಬ ವದಂತಿ. ಮಾಧ್ಯಮಗಳಲ್ಲೂ ಪ್ರಕಟ. ವಾಹಿನಿಗಳಲ್ಲೂ ಬಿತ್ತರ. ಬೆಳೆಗಾರನ ಮುಖದಲ್ಲಿ ಸಂತಸ.
               ಈ ಸಂತಸ ಎಷ್ಟು ಮಂದಿಯ ಮುಖದಲ್ಲಿ ಫಲಿತವಾಗಿದೆ? ಎಷ್ಟು ಕೃಷಿಕರಿಗೆ ಮುನ್ನೂರು ರೂಪಾಯಿ ದರ ಸಿಕ್ಕಿದೆ? ಎನ್ನುವ ಲೆಕ್ಕಾಚಾರದ ಹಿಂದೆ ಬಿದ್ದಾಗ ಖೇದವಾಗುತ್ತದೆ. ದರ ಏರಿದಾಗ ಸಣ್ಣ ಕೃಷಿಕರಲ್ಲಿದ್ದ ಅಡಿಕೆಯು ಮಾರುಕಟ್ಟೆಗೆ ಬಿಕರಿಯಾಗಿತ್ತು. ಅಡಿಕೆಯಿಂದಲೇ ಬದುಕು ನಿರ್ವಹಿಸುವ ಕುಟುಂಬಕ್ಕೆ ಸಿಕ್ಕ ಧಾರಣೆಗೆ ಮಾರಾಟ ಮಾಡುವುದು ಅನಿವಾರ್ಯ.
ಅಡಿಕೆ ಮಾರಾಟ ಮಾಡದೇನೇ ಕುಟುಂಬ ನಿರ್ವಹಣೆ ಮಾಡಬಹುದು ಎಂಬ ವಿಶ್ವಾಸವಿರುವ ಬೆರಳೆಣಿಕೆಯ ಮಂದಿಗೆ ಏರು ದರ ವರದಾನವಾಗಿದೆ. ಇವರಲ್ಲೂ ಕೆಲವು ಮಂದಿ ಕಿಲೋಗೆ ನಾಲ್ಕು ನೂರು ರೂಪಾಯಿ ಆಗಬಹುದೆನ್ನುವ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರುಕಟ್ಟೆಗೆ ಬಿಡದವರೂ ಇದ್ದಾರೆ!
              ಸಣ್ಣ ಕೃಷಿಕರಿಗೆ ಏರು ದರ ಲಭ್ಯವಾಗುತ್ತಿದ್ದರೆ ಬದುಕಿಗದು ಆಸರೆಯಾಗುತ್ತಿತ್ತು. ಕೃಷಿ ಮಾಡಲು ಹುಮ್ಮಸ್ಸು ಬರುತ್ತಿತ್ತು. ಆದರೂ ನಷ್ಟವಾಗದ ಬೆಲೆ ಚಾಲ್ತಿಯಲ್ಲಿದೆಯಲ್ಲಾ ಎನ್ನುವ ಸಮಾಧಾನ. ಅಡಿಕೆ ಕೊಯಿಲು ಆಗುವ ಮೊದಲೇ ಮಾರುಕಟ್ಟೆಯ ಬೆಲೆ ನಿರ್ಧಾಾರವಾದರೆ ಬೆಳೆಗಾರ ಸಮುದಾಯಕ್ಕೆ ಎಷ್ಟೊಂದು ಉಪಯೋಗ?
                ಸರಕಾರವು ತನ್ನ ಮುಂಗಡಪತ್ರದಲ್ಲಿ ಘೋಷಿಸಿದಂತೆ ಕೃಷಿ ಬೆಲೆ ಆಯೋಗವನ್ನು ರಚಿಸಿದೆ. ಮಾರುಕಟ್ಟೆಯ ತಜ್ಞತೆಯುಳ್ಳ ಕೃಷಿಕ ಡಾ.ಪ್ರಕಾಶ ಕಮ್ಮರಡಿಯವರು ಆಯೋಗದ ಅಧ್ಯಕ್ಷರು. ಅಡಿಕೆಯ ಸ್ಥಿತಿ-ಗತಿ ಕುರಿತು ಈಚೆಗೆ ಮಂಗಳೂರಿನಲ್ಲಿ ಅಡಿಕೆ ಸಂಸ್ಥೆಗಳ, ಇಲಾಖೆಗಳ ಮತ್ತು ಕೃಷಿಕರೊಂದಿಗೆ ಮುಖಾಮುಖಿಯಾಗಿತ್ತು. ಅಡಿಕೆ ಕೊಯ್ಲಿನ ಮೊದಲು ದರ ನಿಗದಿಯಾಗಬೇಕು ಎನ್ನುವ ಒಕ್ಕೊರಲ ಬೇಡಿಕೆ ಕೃಷಿಕರದ್ದಾಗಿತ್ತು.
              ಸರಕಾರಿ ಮಟ್ಟದಲ್ಲಿ ಅಡಿಕೆ ಆಗಾಗ್ಗೆ ಸುದ್ದಿ ಮಾಡುವ ಬೆಳೆ. ಸುದ್ದಿಯಾದಾಗಲೆಲ್ಲಾ ಬೆಳೆಗಾರರ ಆತಂಕ. ಅಡಿಕೆಯನ್ನೇ ನಂಬಿರುವವರ ಪಾಡು ಹೇಳತೀರದು. ಇಂತಹ ಆತಂಕವನ್ನು ದೂರಮಾಡುವ ಉದ್ದೇಶದಿಂದ ಕೃಷಿ ಆಯೋಗದ ಅಧ್ಯಕ್ಷರು ರಾಜ್ಯದ ಜಿಲ್ಲೆಗಳಲ್ಲಿ ಸಂಚರಿಸಿ ಅಡಿಕೆ ಮಾತ್ರವಲ್ಲದೆ, ಎಲ್ಲಾ ಕೃಷಿಯ ಮತ್ತು ಕೃಷಿಕರ ಬದುಕಿನ ಅಧ್ಯಯನ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
               ಮಂಗಳೂರಿನಲ್ಲಿ ಜರುಗಿದ ಮಾತುಕತೆಗಳು ಅಡಿಕೆ ಕೃಷಿಗೆ ಸೀಮಿತ. ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮಾರುಕಟ್ಟೆ ಸಮಿತಿ ವರಿಷ್ಠರಿಂದ ಅಂಕಿಅಂಶಗಳ ಪ್ರಸ್ತುತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 32,582 ಹೆಕ್ಟೇರ್ ವಿಸ್ತೀರ್ಣದಲ್ಲಿ ಅಡಿಕೆ ಬೆಳೆಯಿದೆ. ವಾಷರ್ಿಕ 33,155 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ, ಇದು ತೋಟಗಾರಿಕಾ ಇಲಾಖೆಯ ಅಂಕಿಅಂಶ. ಕ್ಯಾಂಪ್ಕೋ ಮತ್ತು ಬೆಳೆಗಾರರ ಲೆಕ್ಕಾಚಾರದಂತೆ ಅಡಿಕೆ ಉತ್ಪಾದನೆ ಐವತ್ತು ಮೆಟ್ರಿಕ್ ಟನ್, ವಿಸ್ತೀರ್ಣ ನಲವತ್ತೈದು ಸಾವಿರ ಹೆಕ್ಟೇರ್ ಮೀರಬಹುದು!
               ಈ ಮಾಹಿತಿಗೆ ಮಾನ್ಯ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಲರ್ಟ್ ಆದರು! ಅಡಿಕೆ ಉತ್ಪಾದನೆಯ ಅಂಕಿಅಂಶಗಳು ನಿಖರವಾಗಲೇ ಬೇಕು. ಅಡಿಕೆ ಸಂಬಂಧಿ ಸರಕಾರದ ಯೋಜನೆಗಳು ಅನುಷ್ಠಾನವಾಗುವಾಗ ಅಂಕಿಸಂಖ್ಯೆಗಳು ಮಾನದಂಡವಾಗುತ್ತವೆ. ಹಾಗಾಗಿ ಖಚಿತ ಮಾಹಿತಿ ಕಲೆಹಾಕಲು ನಿರ್ಧಾರ.
               ಕಾಫಿ, ಏಲಕ್ಕಿ, ತಂಬಾಕಿಗೆ ಇದ್ದಂತೆ ಅಡಿಕೆಗೂ ಬೋರ್ಡ್ ರೂಪುಗೊಳ್ಳಬೇಕು - ಡಾ.ಕಮ್ಮರಡಿಯವರ ಒತ್ತಾಸೆ. ಬೋರ್ಡ್ ರೂಪುಗೊಂಡರೆ ಅಡಿಕೆ ಕೃಷಿಕರ ಸಮಸ್ಯೆಗಳನ್ನು ಸರಕಾರದ ವರಿಷ್ಠರಿಗೆ ಮನದಟ್ಟು ಮಾಡಲು ಅನುಕೂಲವಾಗಬಹುದೆಂಬ ದೂರದೃಷ್ಟಿ.
               "ಬೋರ್ಡ್ ಗಳಲ್ಲಿ ಅಧಿಕಾರಿಗಳದ್ದೇ ಪ್ರಾಬಲ್ಯ. ಕೃಷಿಕನ ಮಾತಿಗೆ ಮನ್ನಣೆ ಸಿಗಬಹುದೆನ್ನುವ ವಿಶ್ವಾಸವಿಲ್ಲ. ಹಾಗಾಗಿ ಕೃಷಿ ಸಂಸ್ಥೆಗಳನ್ನು, ತಜ್ಞರನ್ನು, ಬೆಳೆಗಾರರನ್ನು ರೂಪಿಸಲುದ್ದೇಶಿಸಿದ ಬೋರ್ಡ್ ಗಳಲ್ಲಿ ಸದಸ್ಯರನ್ನಾಗಿ ಸೇರಿಸಲು ಅವಕಾಶ ಬೇಕು.," ಎಂದವರು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ.
                 ವ್ಯವಸ್ಥಿತ ಜಾಲವೊಂದು ತೆರಿಗೆ ತಪ್ಪಿಸಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ವ್ಯವಹಾರ ಮಾಡುತ್ತಿದೆ. ಆಜೂಬಾಜು ಐವತ್ತು ಲಕ್ಷ ಕ್ವಿಂಟಾಲ್ ಉತ್ಪಾದನೆಯಲ್ಲಿ ತೆರಿಗೆ ವ್ಯಾಪ್ತಿಗೆ ಬರುವುದು ಕೇವಲ ಐದು ಲಕ್ಷ ಕ್ವಿಂಟಾಲ್ ಮಾತ್ರ!. ಕಾಣದ ಕೈಗಳ ಕರಾಮತ್ತು ಅಡಿಕೆ ಮಾರುಕಟ್ಟೆಯನ್ನು ಹೇಗೆ ಹಿಂಡುತ್ತಿದೆ ಎನ್ನುವುದಕ್ಕೆ ದಿಗಿಲು ಹುಟ್ಟಿಸುವ ಈ ಲೆಕ್ಕಾಚಾರ ಸಾಕು. ಎಲ್ಲವನ್ನೂ ತೆರಿಗೆ ವ್ಯಾಪ್ತಿಯೊಳಗೆ ತರಬೇಕೆಂಬ ಆಗ್ರಹ ಬೆಳೆಗಾರರದು. ಇದಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯನ್ನು ಗಟ್ಟಿಗೊಳಿಸಲು ಜಿಲ್ಲಾಧಿಕಾರಿಗಳಲ್ಲಿ ಬೆಳೆಗಾರರ ವಿನಂತಿ.
                ಕ್ಲುಪ್ತ ಸಮಯಕ್ಕೆ ಉತ್ಪಾದನಾ ವೆಚ್ಚ ನಿರ್ಧಾರ, ರೈತರ ಸಾಂಘಿಕ ಶಕ್ತಿಯನ್ನು ಬಲಗೊಳಿಸುವುದು, ಅಧಿಕಾರಿಗಳಿಗೆ ಪ್ರಾಮಾಣಿಕತೆಯ(!) ಪಾಠ, ಉತ್ತಮ ಮಾರುಕಟ್ಟೆ ಬೆಲೆ, ಅಡಿಕೆಯ ವಿಸ್ತೀರ್ಣದ ಲೆಕ್ಕಾಚಾರಕ್ಕೆ ಸೆಟಲೈಟ್ ಸರ್ವರ್ರ್, ಕೃಷಿಕರಿಗೆ ಗೌರವಾರ್ಹವಾದ ಸ್ಥಾನ-ಮಾನ ನಿರ್ಧಾರ, ಪ್ರಾದೇಶಿಕ ಕೃಷಿ ನೀತಿ, ಕೃಷಿಗೆ ಯುವಕರನ್ನು ಸೆಳೆಯುವ ಬಗೆ, ಅಂದಂದಿನ ಅಡಿಕೆ ಧಾರಣೆಯು ಹಳ್ಳಿಯ ಕೃಷಿಕರಿಗೂ ಸಿಗುವ ವ್ಯವಸ್ಥೆ.. ಇವೇ ಮೊದಲಾದ ವಿಚಾರಗಳನ್ನು ಡಾ.ಕಮ್ಮರಡಿ ದಾಖಲಿಸಿಕೊಂಡರು.
                ಅಡಿಕೆ ಮಾರುಕಟ್ಟೆಯು ವ್ಯವಸ್ಥಿತ ಚೌಕಟ್ಟಿನೊಳಗೆ ವ್ಯವಹಾರ, ತೆರಿಗೆ ಪಾವತಿಸಿಯೇ ಅಡಿಕೆ ಮಾರಾಟ, ಅಡಿಕೆಗಾಗಿ ಪ್ರತ್ಯೇಕ ಮಂಡಳಿ, ರೈತರ ಸಹಭಾಗಿತ್ವದಲ್ಲಿ ಉತ್ಪಾದನಾ ವೆಚ್ಚದ ನಿರ್ಧಾಾರ, ಅಡಿಕೆ ಕೃಷಿಗೆ ಪೂರಕವಾದ ಯಂತ್ರೋಪಕರಣಗಳಿಗೆ ಪ್ರೋತ್ಸಾಹ.. ಈ ವಿಚಾರಗಳ ಸುತ್ತ ಮಾತುಕತೆ ನಡೆಸಿದ ಆಯೋಗದ ಆಧ್ಯಕ್ಷರ ಕೃಷಿಕ ಪರ ಕಾಳಜಿ ಶ್ಲಾಘ್ಯ.
                    'ಕೃಷಿ ಬೆಲೆ ಆಯೋಗ' ಎರಡು ತಿಂಗಳ ಕೂಸು. ರಾಜ್ಯದೆಲ್ಲೆಡೆ ಓಡಾಡಿ ಸಂಗ್ರಹಿಸಿದ ಇವರ ವರದಿಗಳು ಸರಕಾರದ ಮುಖ್ಯಸ್ಥರಿಗೆ ಎಷ್ಟು ಮನವರಿಕೆಯಾಗಬಹುದು? ವರದಿಯ ಅನುಷ್ಠಾನಕ್ಕೆ ಇಲಾಖೆಗಳು ಹೇಗೆ ಸಹಕರಿಸಬಹುದು? ಮೂರು ಇಲಾಖೆಗಳ ಮಿಳಿತದೊಂದಿಗೆ ಕಾರ್ಯನಿರ್ವಹಿಸಬೇಕಾದುರಿಂದ ಹೊಂದಾಣಿಕೆಗೆ ತಿಣುಕಾಡಬೇಕೇನೋ? ರಾಜಕೀಯ ಜಿದ್ದಾಜಿದ್ದು, ಇಲಾಖೆಗಳ ಮರ್ಜಿ, ಅಧಿಕಾರಿಗಳ ಇಸಂ, ಕಾಣದ ಕೈಗಳ ಕಸರತ್ತುಗಳನ್ನು  ಎದುರಿಸುವುದು ಡಾ.ಕಮ್ಮರಡಿಯವರಿಗೆ ದೊಡ್ಡ ಸವಾಲು.


0 comments:

Post a Comment