ಪುತ್ತೂರಿನ ಅಂಬಿಕಾ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ‍್ ಕುಮಾರ್ ಕಮ್ಮಜೆಯವರು ಪುಸ್ತಕದ ಕುರಿತು ‘ಸುದ್ದಿ ಬಿಡುಗಡೆ’ಯಲ್ಲಿ ಬರೆದ ಬರಹ (ಪ್ರಕಟ – 4-3-2021)
Home › Archives for March 2021
ಪುತ್ತೂರಿನ ಅಂಬಿಕಾ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ‍್ ಕುಮಾರ್ ಕಮ್ಮಜೆಯವರು ಪುಸ್ತಕದ ಕುರಿತು ‘ಸುದ್ದಿ ಬಿಡುಗಡೆ’ಯಲ್ಲಿ ಬರೆದ ಬರಹ (ಪ್ರಕಟ – 4-3-2021)
- ನಾಗೇಂದ್ರ ಸಾಗರ್
ಕೃಷಿಕಪರ ಮಾಧ್ಯಮವಾದ ಅಡಿಕೆ ಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ನಾ.ಕಾರಂತರು ನನ್ನ ದೀರ್ಘಕಾಲೀನ ಸ್ನೇಹಿತರು.. ಹೇಗೆ ಅಡಿಕೆ ಪತ್ರಿಕೆ ಕೃಷಿಕರಿಗೆ ಹೊಸ ಹೊಳವುಗಳನ್ನು ನೀಡುತ್ತ ಭರವಸೆ, ವಿಶ್ವಾಸ ಹೊಸ ಚೇತನವನ್ನು ತುಂಬತ್ತ ಬರುತ್ತಿದೆಯೋ ಅದೇ ರೀತಿ ಅಡಿಕೆ ಪತ್ರಿಕೆಯ ಗರಡಿಯಲ್ಲಿ ಪಳಗಿದಂತಹ ಕಾರಂತರು ಧನಾತ್ಮಕ ಚಿಂತನೆಯ ಪಾಸಿಟಿವ್ ಪತ್ರಕರ್ತರು ಎನ್ನುವುದರಲ್ಲಿ ಎರಡು ಮಾತಿಲ್ಲ..
ಕಾರಂತರ ಬಗ್ಗೆ ಈ ಮಾತು ಹೇಳುವುದಕ್ಕೆ ಅವರ ಇತ್ತೀಚಿನ 'ಮುಸ್ಸಂಜೆಯ ಹೊಂಗಿರಣ' ಕಾರಣ.. ಇಡೀ ಜಗತ್ತು ಕೊರೋನಾ ವೈರಾಣುವಿನ ದಾಂಗುಡಿಯಲ್ಲಿ ತತ್ತರಿಸುತ್ತಿರುವಾಗ ವಿಷಮಯುಕ್ತ ಪರಿಸ್ಥಿತಿಯನ್ನು, ಹೊಸ ಸವಾಲುಗಳನ್ನು ಎದುರಿಸಿ ಹೊಸ ಬದುಕನ್ನು ಕಟ್ಟಿಕೊಂಡವರ ಕುರಿತಾದ ಬರಹಗಳಿವೆ.. ಕಷ್ಟ ತನ್ನೊಬ್ಬನದಲ್ಲ ತನಗಿಂತ ಕಡು ಕಷ್ಟದಲ್ಲಿದ್ದವರ ಬಗ್ಗೆ ಮಿಡಿದು ಸಹಕರಿಸಿದ ಹಲವು ಸಮಾಜಮುಖಿ ಕಾರ್ಯಗಳನ್ನು ಬೆಳಕಿಗೆ ತಂದ ಲೇಖನಗಳಿವೆ..
ಬರಹಗಳು ಪುಟ್ಟದಾಗಿ, ವಿಷಯಕ್ಕೆ ನೇರವಾಗಿ ಓದುಗರಿಗೆ ಪ್ರೇರಣೆ ನೀಡುವಂತಹದ್ದಾಗಿದೆ. ಕ್ಷಣಕಾಲ ನಮ್ಮನ್ನೇ ಪ್ರಶ್ನಿಸಿಕೊಳ್ಳುವಂತಿದೆ.. ಜಗತ್ತೇ ವಿನಾಶದ ಅಂಚಿಗೆ ಬಂದು ಬಿಟ್ಚಿದೆ ಎಂದು ಕಳವಳಿಸುವವರಿಗೆ ಹೊಸ ಆಶೋತ್ತರದ ದಾರಿ ತೋರುವಂತಿದೆ..
ಇಡೀ ಹೊತ್ತಿಗೆಯಲ್ಲಿ ನನಗೆ ಬಹಳ ಇಷ್ಟವಾದದ್ದು ಪುತ್ತೂರಿನ ಉದ್ಯಮಿ ಕೇಶವರು SSLC ಸಹಪಾಠಿಗಳನ್ನು ಲಾಕ್ ಡೌನ್ ಸಂದರ್ಭದಲ್ಲಿ ಒಗ್ಗೂಡಿಸಿ ತನ್ಮೂಲಕ ಸಂಕಷ್ಟದಲ್ಲಿರುವ ಬಳಗದ ಇತರ ಸದಸ್ಯರ ನೆರವಿಗೆ ನಿಂತ ದೃಷ್ಟಾಂತ.. ಈ ಡಿಜಿಟಲ್ ಕಾಲಮಾನದಲ್ಲಿ ನಮ್ಮ ನಡುವೆ ಸಾವಿರಾರು ಉದ್ದೇಶದ ಅದೆಷ್ಟೋ ವಾಟ್ಸಪ್ ಮತ್ತು ಎಫ್ ಬಿ ಬಳಗಗಳಿವೆ. ಆದರೆ ಮನಸ್ಸು ಮಾಡಿದರೆ ಈ ರೀತಿಯ ವಾಟ್ಸಪ್ ಬಳಗವು ಸಮಾಜದ ಆಶಾಕಿರಣ ಆಗಬಹುದು ಎಂದು ಪುತ್ತೂರಿನ ಕೇಶವ ಅವರ ಚಿಂತನೆ ತೋರಿಸಿ ಕೊಟ್ಟಿದೆ.
ಪುಟ್ಟದಾಗಿ ಹೇಳುವುದಾದರೆ 1992ರ ಇಸವಿಯಲ್ಲಿ ಪುತ್ತೂರಿನ ಪ್ರೌಢಶಾಲೆಯೊಂದರಲ್ಲಿ sslc ಓದಿದ ಸಹಪಾಠಿಗಳು ಲಾಕ್ ಡೌನ್ ದಿನಗಳಲ್ಲಿ ಒಟ್ಟುಗೂಡಿ ವಾಟ್ಸಪ್ ಗ್ರೂಪನ್ನು ರಚಿಸಿಕೊಳ್ಳುತ್ತಾರೆ.. ಸಮಾಜದ ವಿವಿಧ ಕ್ಷೇತ್ರ , ವರ್ಗಗಳಲ್ಲಿ ಹಂಚಿ ಹೋಗಿ ನೆಲೆ ಕಂಡುಕೊಂಡಿದ್ದ ಸಹಪಾಠಿಗಳು ಒಟ್ಟು ಸೇರಿದಾಗ ಅವರವರ ಬದುಕಿನ ಪುಟಗಳು ತೆರೆದು ಕೊಳ್ಳುತ್ತದೆ. ಕಷ್ಟದಲ್ಲಿರುವ ಇತರರ ಬಗ್ಗೆ ಮನ ಮಿಡಿಯುತ್ತದೆ.. ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವವರು ಹಲವರಿಗೆ ನೆರವಾದರು.. ಬಳಗದ ಸದಸ್ಯರ ಮಕ್ಕಳ ಓದಿಗೆ ನೆರವಾದರು. ಸರಿ ಸುಮಾರು ಮೂರು ಲಕ್ಷದಷ್ಟು ಹಣ ಸಂಗ್ರಹಗೊಂಡು ಅರ್ಹರಿಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ನೆರವಿಗೆ ಬಂದಿದೆ.
'ಲೋಕವು ಕೋವಿಡ್ ಕತ್ತಲೆಯಲ್ಲಿ ಇದ್ದಾಗ ಕೇಶವರ ವಾಟ್ಸಪ್ ಗ್ರೂಪು ಬೆಳಕನ್ನು ಹುಡುಕುತ್ತಿತ್ತು. ಮತ್ತು ಬೆಳಕನ್ನು ಕಂಡಾಗ ಸಂಭ್ರಮ ಪಟ್ಟಿತ್ತು.' ಎನ್ನುವ ಕಾರಂತರ ಮಾತು ನನಗೆ ಅವರ ಮೇಲಿನ ಅಭಿಮಾನವನ್ನು ನೂರು ಪಟ್ಟು ಹೆಚ್ಚಿಸಿತು.
ಸುಳ್ಯ ತಾಲೂಕಿನಲ್ಲಿ ನೆಲೆ ನಿಂತ ಕೇರಳದ ಪಾಲಕ್ಕಾಡಿನ ಬಾಬಣ್ಣ ಕೊರೋನಾ ದಿನಗಳಲ್ಲಿ ತನ್ನೂರಿನ ವಿಶಿಷ್ಟ ಉಣ್ಣೆಯಪ್ಪ ತಿನಿಸನ್ನು ಪರಿಚಯಿಸಿ ಬಳಿಕ ಅದೇ ಒಂದು ಉದ್ಯಮ ಆಗಿ ನಾಲ್ಕು ಜನರಿಗೆ ಉದ್ಯೋಗ ಕೊಡುವಂತಾದದ್ದೂ ಒಂದು ಉತ್ತಮ ಸ್ಟೋರಿ. ಉದ್ಯೋಗಸ್ತರಿಗೆ, ಆವಶ್ಸಕತೆ ಉಳ್ಳವರಿಗೆ ಬಿಸಿ ಬುತ್ತಿಯೂಟ ಕೊಟ್ಟ ಪರ್ಲಡ್ಕದ ಆದರ್ಶ ಅವರ ಕತೆ, ತೋಟದ ಮಾವನ್ನು ಮೌಲ್ಯವರ್ಧನೆ ಮಾಡಿ ಗೆದ್ದ ಧಾರವಾಡದ ಮಾಲತಿ ಮುಕುಂದರ ಕತೆ, ಹಾಗೇ ಸಣ್ಣ ಉದ್ಯಮವನ್ನು ಮಾಡಿ ಭರವಸೆ ಕಂಡವರು..
ಕೃಷಿಯೇ ಲೇಸು ಎಂದು ಮರಳಿ ಮಣ್ಣಿಗೆ ಬಂದವರ ಹಲವು ಕತೆಗಳನ್ನು ಕಾರಂತರು ತೆರೆದು ಕೊಟ್ಟಿದ್ದಾರೆ. ಪೇಟೆಯಲ್ಲಿ ಬದುಕು ನಡೆಸುತ್ತಿದ್ದ ರವಿ ಎಂಬ ಯುವಕ ಹಳ್ಳಿಗೆ ಮರಳಿ ಅಪ್ಪನೊಂದಿಗೆ ಕೈ ಜೋಡಿಸಿ ತರಕಾರಿ ಬೆಳೆದು ಅಪ್ಪನ ಬಿಸಿಯಪ್ಪುಗೆಯ ಸುಖ ಕಂಡ ಕತೆಯಂತೂ ಸೊಗಸಾಗಿದೆ.. ಅದೇ ರೀತಿ ಶಿಕ್ಷಕ ಕಿಶೋರ ಮಾಸ್ತರರು ಹಡಿಲು ಬಿದ್ದ ಗದ್ದೆಯನ್ನು ಲೀಸಿಗೆ ಪಡೆದು ಭತ್ತ ಬೆಳೆದ ಉಮೇದಿನ ಕತೆಯೂ ಸ್ಪೂರ್ತಿದಾಯಕ.
ಮಹರಾಷ್ಟ್ರದ ಸತಾರ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಡಾ. ಅವಿನಾಶ್ ಪೋಲ್ ತಮ್ಮ ಪಾನಿ ಫೌಂಡೇಶನ್ನಿನ ಮೂಲಕ ರೈತರು ಬೆಳೆದ ತರಕಾರಿಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿದ್ದು ಅದೇ ಸೂತ್ರದಡಿಯಲ್ಲಿ ನಮ್ಮಲ್ಲೂ ಕೆಲವು ಯಶಸ್ವೀ ಪ್ರಯತ್ನಗಳಾಗಿದ್ದು, ಬೆವರಿಳಿಸಿ ತರಕಾರಿ ಬೆಳೆದು ಹಸನ್ಮುಖರಾದವರ ಕತೆಗಳು ಕೊರೋನಾ ದಾಟು ದಿನಗಳಲ್ಲೂ ಮಾದರಿ ಆಗುವಂತದು.
ವ್ಯಕ್ತಿಗತ ಬದುಕಿನ ಯಶಸ್ವೀ ಪ್ರಯತ್ನಗಳು ಮಾತ್ರವಲ್ಲದೇ ಮಕ್ಕಳ ಆನ್ ಲೈನ್ ಓದಿಗೆ ಸ್ಪಂದಿಸಿ ಮಾದರಿಯಾದ ಹಲವು ಸ್ಟೋರಿಗಳೂ ಇಲ್ಲಿವೆ.
ಇವುಗಳ ನಡುವೆ ಆರ್ಥಿಕವಾಗಿ ಸಶಕ್ತರಲ್ಲದ ಮಕ್ಕಳಿಗೆ ಮೊಬೈಲ್ ದಾನದ ಕೆಲಸ ಮಾಡಿದ ನಮ್ಮ ಕುಟುಂಬದ ಸಣ್ಣ ಪ್ರಯತ್ನವನ್ನು ದಾಖಲಿಸಿದ ಗೌರವವನ್ನು ಕಾರಂತರು ನಮಗೆ ನೀಡಿದ್ದಾರೆ. ನಮ್ಮ ಕುರಿತಾದ ಬರಹವು ಈ ಪುಸ್ತಕದಲ್ಲಿದೆ. ಅದಕ್ಕಾಗಿ ನಾವವರಿಗೆ ಕೃತಜ್ಞರು.
ಯಕ್ಷಗಾನ ಕಾರಂತರ ಪ್ರೀತಿಯ ಕ್ಷೇತ್ರ.. ಕೊರೋನಾ ಮಾರಿಯನ್ನೇ ಮುಂದೆ ಮಾಡಿ ಪ್ರಸ್ತುತ ಪಡಿಸಿದ ಕೊರೋನಾಸುರ ಎಂಬ ಕಥಾ ಪ್ರಸಂಗವನ್ನೂ ಕಾರಂತರು ಸ್ವರಸ್ಯಕರವಾಗಿ ನಮೂದಿಸಿದ್ದರೆ.. ಅದೇ ರೀತಿ ಇನ್ನು ಕೆಲವು ಪ್ರಸಂಗಗಳು ಕೂಡ ಪುಸ್ತಕದಲ್ಲಿದೆ.. ಈ ರೀತಿಯ ಹಲವು ವೈಶಿಷ್ಟ್ಯಗಳ ಕಾರಣದಿಂದ ಈ ಪುಸ್ತಕ ಓದು ಯೋಗ್ಯ. ಸಂಗ್ರಹ ಯೋಗ್ಯ. ಸುಳ್ಯ ತಾಲೂಕು ಗುತ್ತಿಗಾರಿನ ದ ರೂರಲ್ ಮಿರರ್ ಪ್ರಕಾಶನ ಪುಸ್ತಕ ಹೊರ ತಂದಿದೆ. ಅಚ್ಚುಕಟ್ಟಾಗಿದೆ. ರೂ.100 ಮುಖ ಬೆಲೆ. ಕಾರಂತರನ್ನು 9448625794 ಈ ನಂಬರ್ರಿನಲ್ಲಿ ಸಂಪರ್ಕಿಸ ಬಹುದು.
ಕೊನೆಯದಾಗಿ: ಕೊರೋನಾ ದಿನಗಳಲ್ಲಿ ನಾವು ಜೀವನದ ಸತ್ಯಗಳನ್ನು ಬಲು ಹತ್ತಿರದಿಂದ ಕಂಡಿದ್ದೇವೆ.. ನೆಗೆಟಿವ್ ಯೋಚನೆಗಳು, ಕಾಲೆಳೆದ ಫೇಕು ಸುದ್ದಿಗಳು.. ಕೆಸರೆರಚಾಟಗಳನ್ನು ನೋಡಿದ್ದೇವೆ.. ಆಕಾಶವೇ ತಲೆಯ ಮೇಲೆ ಕವುಚಿ ಬಿದ್ದಂತೆ ಪರಿತಪಿಸಿದವರನ್ನೂ ಗಮನಿಸಿದ್ದೇವೆ. ಆದರೆ ಪ್ರತಿಕೂಲ ಪರಿಸ್ಥಿತಿಯನ್ನೂ ನಿಭಾಯಿಸಿದ ಜಾಣಿಗರು, ವಿಶ್ವಾಸಿಗರು ನಮ್ಮ ನಡುವಿದ್ದಾರೆ.. ಮತ್ತು ಅಂತಹ ಘಟನೆಗಳನ್ನು ದಾಖಲು ಮಾಡಿದ ಕಾರಂತರಂತಹ ಪಾಸಿಟಿವ್ ಜರ್ನಲಿಸ್ಟುಗಳು ನಮ್ಮ ನಡುವೆ ಇರುವುದು ಸಮಾಧಾನದ ಸಂಗತಿ.. ಇಂತಹವರ ಸಂತತಿ ನೂರ್ಮಡಿಸಲಿ.....