Thursday, March 4, 2021

ಹೊಸ ಪುಸ್ತಕ: ಕೊರೊನಾ ಕಾಲದ ಸ್ಫೂರ್ತಿಯ ಕ್ಯಾಪ್ಸೂಲ್ ‘ಮುಸ್ಸಂಜೆಯ ಹೊಂಗಿರಣ’

 

ದೀಪ್ತಿ ಗಣಪತಿ ಪಳ್ಳತ್ತಡ್ಕ

ಪಾಸಿಟಿವ್ಎಂಬೊಂದು ಪದ ನಮ್ಮನ್ನು ಅತೀವ ಆತಂಕಕ್ಕೀಡುಮಾಡಿದ ಸನ್ನಿವೇಶವಿದು. ಕಾರಣಕೋವಿಡ್-19’ ಸಾಂಕ್ರಾಮಿಕ. ಪಾಸಿಟಿವ್ಬಗ್ಗೆನೆಗೆಟಿವ್ಬಿತ್ತರಿಸಿ ಜನರನ್ನು ಮತ್ತಷ್ಟು ಭೀತಿಗೆ ಒಳಗಾಗುವಂತೆ ಮಾಡಿದ ಕುಖ್ಯಾತಿ ದೃಶ್ಯ ಮಾಧ್ಯಮಗಳದ್ದು.

ಒಂದೆಡೆ ಲಾಕ್ಡೌನ್, ಮತ್ತೊಂದೆಡೆ ಸೋಂಕು ಹರಡುವಿಕೆಯ ಆತಂಕ, ಉದ್ಯೋಗ ನಷ್ಟ, ಆರ್ಥಿಕ ಹಿನ್ನಡೆ ಇತ್ಯಾದಿ ನಕಾರಾತ್ಮಕ ಸುದ್ದಿಗಳೇ ಮೆರೆಯುತ್ತಿದ್ದ ಮತ್ತು ಜನರನ್ನು ಮತ್ತಷ್ಟು ಗಾಬರಿ ಹುಟ್ಟಿಸುತ್ತಿದ್ದ ಇದೇ ಸಂದರ್ಭದಲ್ಲಿ ಅದೆಷ್ಟೋ ಸಕಾರಾತ್ಮಕ ಸಂಗತಿಗಳೂ ನಮ್ಮ ನಡುವೆ ಆಗಿಹೋಗಿವೆ. ಆದರೆ ಬೆಳಕಿಗೆ ಬಂದದ್ದು ಕಡಿಮೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡದ, ಆದರೆ ಅದೆಷ್ಟೋ ಮಂದಿಯ ಬಾಳು ಬೆಳಗಿದ ವಿದ್ಯಮಾನಗಳ ಹಾಗೂ ಯಶೋಗಾಥೆಗಳ ಗುಚ್ಛವೇ ಹಿರಿಯ ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರ ಲೇಖನಿಯಲ್ಲಿ ಅರಳಿದಮುಸ್ಸಂಜೆಯ ಹೊಂಗಿರಣ; ಕೊರೋನಾ ಕೃಪೆಯ ವರಗಳತ್ತ ಇಣುಕುನೋಟಕೃತಿ.

ಕೋವಿಡ್ ಲಾಕ್ಡೌನ್ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ನಡೆದಿರುವ ಸಕಾರಾತ್ಮಕ ಸಂಗತಿಗಳನ್ನು, ಸಾಧನೆಗಳನ್ನು, ಸ್ವ-ಉದ್ಯೋಗ ಕ್ಷೇತ್ರದ ಹೊಸ ಹೊಳಹುಗಳನ್ನು, ಬದುಕಿನ ಹೊಸ ದಾರಿಗಳನ್ನು ಕೃತಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಕೋವಿಡ್ ಸಾಂಕ್ರಾಮಿಕ ಒಂದೆಡೆ ಜನರು ಅಂತರ ಕಾಯ್ದುಕೊಳ್ಳುವಂತೆ ಮಾಡಿದರೆ, ಮತ್ತೊಂದೆಡೆ ಹೊಸ ಸಾಧ್ಯತೆಗಳ ಮೂಲಕ ಹೇಗೆ ಜನ ಒಗ್ಗೂಡುವಂತೆ ಮಾಡಿತು ಎಂಬುದನ್ನೂ ಕೃತಿಯಲ್ಲಿ ಕಾಣಬಹುದು.

ಕೃಷಿ, ಸ್ವ ಉದ್ಯೋಗದ ಮೂಲಕ ಹೊಸ ಬದುಕು ಕಟ್ಟಿಕೊಳ್ಳಬೇಕೆಂದು ಬಯಸುವವರಿಗೆ ಹಲವು ಸಾಧ್ಯತೆಗಳನ್ನು ಕೃತಿ ಕಟ್ಟಿಕೊಡಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇದಕ್ಕೆ ಕೃತಿಯಲ್ಲಿರುವ, ಐಟಿ ಕಂಪನಿ ತೊರೆದುಅಡಿಕೆ ಖೇಣಿಆರಂಭಿಸಿ ಯಶಸ್ಸುಕಂಡ ದಾವಣಗೆರೆಯ ಶಿವಕುಮಾರ್, ಲಾಕ್ಡೌನ್ ವೇಳೆ ಮನೆಮನೆಗೆ ಊಟ ತಲುಪಿಸುವ ಪುತ್ತೂರಿನ ಆದರ್ಶ ಎಂಬವರಬುತ್ತಿಯೂಟಪರಿಕಲ್ಪನೆಯ ನವೋದ್ಯಮದ ಕುರಿತಾದ ಲೇಖನಗಳೇ ಉತ್ತಮ ಉದಾಹರಣೆ.

ಉಳಿದಂತೆ, ಸವಾಲುಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೂ ಹಲವು ನಿದರ್ಶನಗಳನ್ನು ಇಲ್ಲಿ ಕಾಣಬಹುದು. ಚನ್ನಪಟ್ಟಣದವೈಫೈ ಹಳ್ಳಿ’, ‘ದಿನಸಿ ವ್ಯಾಪಾರಕ್ಕೆ ಡಿಜಿಟಲ್ ಸ್ಪರ್ಶ!’ ಇತ್ಯಾದಿ ಲೇಖನಗಳ ಮೂಲಕ ಬದುಕಿನ ಹೊಸ ಸಾಧ್ಯತೆಗಳು, ನವೀನ ಚಿಂತನೆಗಳ ಕುರಿತಾದ ಸೂಕ್ಷ್ಮಗಳನ್ನು ವಿವರಿಸಲಾಗಿದೆ.

ಎಂಜಿನಿಯರ್ ದಂಪತಿಯನ್ನು ಸೆಳೆದ ಮಣ್ಣಿನ ಗಂಧಲೇಖನವು ಉದ್ಯಾನ ನಗರಿಯಿಂದ ಉದ್ಯೋಗ ಬಿಟ್ಟು ಹಳ್ಳಿಗೆ ಬಂದ ದಂಪತಿಯು ಕೃಷಿಯಲ್ಲಿ ಹೊಸ ಸಾಧ್ಯತೆಯನ್ನು ಕಂಡುಕೊಳ್ಳುತ್ತಿರುವ ಬಗ್ಗೆ ಬೆಳಕು ಚೆಲ್ಲಿದೆ.

ಕಲೆ, ಸಾಹಿತ್ಯ ಚಟುವಟಿಕೆಗಳು ಕೋವಿಡ್ ಕಾಲದ ಏಕತಾನತೆಯನ್ನು ಹೋಗಲಾಡಿಸುವಲ್ಲಿ ಮತ್ತು ಜನಜಾಗೃತಿ ಮೂಡಿಸುವಲ್ಲಿ ಕ್ರಿಯಾತ್ಮಕವಾಗಿ ಹೇಗೆ ಕೆಲಸ ಮಾಡಿವೆ ಎಂಬುದನ್ನುಯಕ್ಷ ಜಾಗೃತಿ’, ‘ಅಂತರಂಗದ ಕಥನ ಮಾತಿನ ಮಂಟಪಇತ್ಯಾದಿ ಲೇಖನಗಳ ಮೂಲಕ ವಿವರಿಸಲಾಗಿದೆ.

ಒಟ್ಟಿನಲ್ಲಿ, ಲೇಖಕರೇ ಹೇಳಿರುವಂತೆ ಕೃತಿಯು ಕೋವಿಡ್ ಕಾಲದ ಪಾಸಿಟಿವ್ ಅಂಶಗಳನ್ನೊಳಗೊಂಡಸ್ಫೂರ್ತಿಯ ಕ್ಯಾಪ್ಸೂಲ್’. ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಅವರ ಮುನ್ನುಡಿ, ಡಾ. ಪಿ.ಮನೋಹರ ಉಪಾಧ್ಯರ ಬೆನ್ನುಡಿ, ದಿನೇಶ ಹೊಳ್ಳ ಅವರು ರಚಿಸಿರುವ ಮುಖಪುಟ ಚಿತ್ರದೊಂದಿಗೆ ಹೊರಬಂದಿರುವ ಕ್ಯಾಪ್ಸೂಲ್ನೊಂದ ಸಮಾಜಕ್ಕೆ ಭರವಸೆಯ ವಿಟಮಿನ್ ನೀಡುವುದು ಖಂಡಿತ.

ಪುಸ್ತಕದ ಹೆಸರುಮುಸ್ಸಂಜೆಯ ಹೊಂಗಿರಣ
ಲೇಖಕರುನಾ. ಕಾರಂತ ಪೆರಾಜೆ
ಪುಟಗಳು – 108
ಮುದ್ರಣಕೋಡ್ವರ್ಡ್ಪ್ರೊಸೆಸ್ ಆಂಡ್ ಪ್ರಿಂಟರ್ಸ್, ಮಂಗಳೂರು
ಬೆಲೆರೂ. 100


 

 

1 comments:

Search Coorg Media said...

"ಮುಸ್ಸಂಜೆಯ ಹೊಂಗಿರಣ" ಪುಸ್ತಕ ಎಲ್ಲಿ ದೊರೆಯುತ್ತದೆ. ಸಂಪರ್ಕ ಸಂಖ್ಯೆ ಕೊಡಿ.

Post a Comment