- ಡಾ . ಬಿ .ಎ . ವಿವೇಕ ರೈ
ಕೊರೋನ ಉಂಟುಮಾಡಿದ ಬಹುರೂಪಿ ಪಾಸಿಟಿವ್ ಪರಿಣಾಮಗಳನ್ನು ನೈಜ ಘಟನೆಗಳ ನಿದರ್ಶನಗಳ ಮೂಲಕ ಮನಮುಟ್ಟುವಂತೆ ವರ್ಣಿಸಿದ್ದೀರಿ . ಈ ಪುಸ್ತಕದ ಒಂದೊಂದು ಕಿರು ಕಥನವೂ ಬದುಕು ಕಟ್ಟುವ ಒಂದೊಂದು ಸಾಹಸಗಾಥೆಯಾಗಿದೆ . ಸಂಕಷ್ಟದ ಕಾಲದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ , ಹೊಸ ಬದುಕನ್ನು ಕಟ್ಟಬಹುದು ಎಂದು ಮಾಡಿ ತೋರಿಸಿದ ಜನರು ನಮಗೆ ನಿಜವಾದ ಮಾರ್ಗದರ್ಶಕರಾಗಿದ್ದಾರೆ . ನೂರು ಉಪದೇಶಗಳಿಗಿಂತ ಇಂತಹ ಒಂದು ದಿಟ್ಟಹೆಜ್ಜೆ ಹೆಚ್ಚು ಆತ್ಮವಿಶ್ವಾಸವನ್ನು ಉಂಟುಮಾಡುತ್ತದೆ .
ಇಲ್ಲಿನ ಕಥನಗಳ ಇನ್ನೊಂದು ಪಾಸಿಟಿವ್ ಅಂಶವೆಂದರೆ ಕೊರೋನ ಪೀಡಿತ ಕಾಲಾವಧಿಯಲ್ಲಿ ಜನರು ಹಳ್ಳಿಗಳೆಗೆ ಮರಳಿದ್ದು , ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು , ಗ್ರಾಮೀಣ ಬದುಕಿನ ಜೊತೆಗೆ ಮನುಷ್ಯ ಸಂಬಂಧಗಳನ್ನು ಬೆಸೆದದ್ದು . ಅಂತರ್ಜಾಲದ ನೆಟ್ವರ್ಕ್ ಮತ್ತು ಮನುಷ್ಯ ಸಂಬಂಧದ ನೆಟ್ವರ್ಕ್ ಗಳು ಮುಖಾಮುಖಿಯಾದದ್ದು , ಕೆಲವೊಮ್ಮೆ ಪೂರಕವಾದದ್ದು.
ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆ ಮತ್ತು ಪರ್ಯಾಯ ವ್ಯವಸ್ಥೆಗಳ ದೃಷ್ಟಿಯಿಂದ ನಾಗೇಂದ್ರರ ಮೊಬೈಲ್ ದಾನದ ಉಪಕ್ರಮ , ಧರ್ಮಸ್ಥಳದ ಧರ್ಮಾಧಿಕಾರಿ ಡಾ . ವೀರೇಂದ್ರ ಹೆಗ್ಗಡೆ ಅವರ ಜ್ಞಾನತಾಣದ ಮೂಲಕ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ , ಚಿಕ್ಕೇನಹಳ್ಳಿಯ ಮಾತೃಭೂಮಿ ಸೇವಾ ಪೌಂಡೇಶನ್ ರೂಪಿಸಿದ ವೈ ಫೈ ಹಳ್ಳಿ , ನೆಟ್ ವರ್ಕ್ ಇಲ್ಲದ ಮನೆಗಳಿಗೆ ಶಿಕ್ಷಕರು ಹೋಗಿ ಮಕ್ಕಳಿಗೆ ಪಾಠಮಾಡಿದ ಸುಳ್ಯದ ಪ್ರಯೋಗ - ಇವು ಹಣದ ದೃಷ್ಟಿಯ 'ಧನಾತ್ಮಕ ಚಿಂತನೆಗಳು ' ಅಲ್ಲ ! ಇವೆಲ್ಲ ಶಿಕ್ಷಣ ಪ್ರೀತಿಯ ಸಕಾರಾತ್ಮಕ ಮನೋಧರ್ಮದ ಧನಾತ್ಮಕ ಹೆಜ್ಜೆಗಳು .
ಮರಳಿ ಹಳ್ಳಿಗೆ ಬಂದು ಕೃಷಿಯನ್ನು ಬದುಕಿನ ಜೀವಧಾತುವಾಗಿ ಸ್ವೀಕರಿಸಿದವರ ಕಥನಗಳು ಸಾಕಷ್ಠಿವೆ : ಅಡಿಕೆ ಮರ ಏರುವ ವಿದ್ಯೆ ಕಲಿತ ಯುವಕರು , ನಗರದಿಂದ ಹಳ್ಳಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿದ ರಮೇಶ , ಬೆಂಗಳೂರಿನಿಂದ ಹಳ್ಳಿಗೆ ಬಂದು ತರಕಾರಿ ಬೆಳೆದು ಮಾರಾಟಮಾಡಿ ಹೊಸ ಬದುಕು ಕಂಡ ರವಿ , ಹಳ್ಳಿಗೆ ಬಂದು ಅಡಿಕೆ ಕೃಷಿಯೊಂದಿಗೆ ತರಕಾರಿ ಬೆಲೆ ಬೆಳೆದು ಬದುಕು ಸಾಗಿಸಲು ನಿರ್ಧರಿಸಿದ ಇಂಜಿನಿಯರ್ ದಂಪತಿಗಳು ನಿಖಿಲ್ - ಲತಾ , ಅಧ್ಯಾಪಕ ವೃತ್ತಿ ಬಿಟ್ಟು ಹಳ್ಳಿಯಲ್ಲಿ ಭತ್ತದ ಕೃಷಿ ಶುರುಮಾಡಿದ ಕಿಶೋರ್ ಕುಮಾರ್ : ಈರೀತಿ ಮಣ್ಣಿನ ಪ್ರೀತಿಯೇ ಅವರ ಅನ್ನದ ಬಟ್ಟಲನ್ನು ತುಂಬಿದ ಸಂತೃಪ್ತಿಯ ಕಥನಗಳು ಇಲ್ಲಿವೆ .
ಲಾಕ್ ಡೌನ್ ಅವಧಿಯಲ್ಲಿ ಮತ್ತು ಬಳಿಕ ಜನರು ಹೆಚ್ಚು ಹಂಬಲಿಸಿದ್ದು ತರಕಾರಿಗಳಿಗೆ . ಹೊರಗಿನಿಂದ ತರಕಾರಿಗಳ ಪೂರೈಕೆ ಇರಲಿಲ್ಲ .ಸ್ಥಳೀಯವಾಗಿ ತರಕಾರಿಗಳನ್ನು ಹೆಚ್ಚು ಬೆಳೆಯುತ್ತಿರಲಿಲ್ಲ . ಹಾಗಾಗಿ ತರಕಾರಿಗಳನ್ನೇ ಬೆಳೆಸಲು ಮತ್ತು ಜನರಿಗೆ ಪೂರೈಸಲು ನಡೆಸಿದ ಸಾಹಸಗಳ ಕಥನಗಳು ಈ ಸಂಕಲನದಲ್ಲಿ ಸಾಕಷ್ಟಿವೆ : 'ತರಕಾರಿ ಕೃಷಿಕರ ಮಾತಿನ ತಾಣ 'ದಲ್ಲಿ ಶ್ರೀಪಡ್ರೆಯವರ ನೇತೃತ್ವದಲ್ಲಿ ನಿರ್ಮಾಣವಾದ ಏಟಿವಿ ಎಂಬ ವಾಟ್ಸ್ ಅಪ್ ಗುಂಪಿನ ಮೂಲಕ ತರಕಾರಿ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿದ್ದು , ಮಹಾರಾಷ್ಟ್ರದ ಅವಿನಾಶ್ ಪ್ರಯತ್ನದಿಂದ ಕೃಷಿಕರೇ ಗ್ರಾಹಕರ ಮನೆಬಾಗಿಲಿಗೆ ತರಕಾರಿ ಹಣ್ಣುಗಳನ್ನು ಒಯ್ದು ಮಾರಿದ್ದು , 'ನಮ್ಮ ಊಟಕ್ಕೆ ನಮ್ಮದೇ ತರಕಾರಿ ' ಎನ್ನುವ ಮನಸ್ಥಿತಿಯಿಂದ ಸಾವಯವ ತರಕಾರಿ ಬೆಳೆಸಲು ಶುರುಮಾಡಿದ ಕೃಷಿಕರ ಸ್ವಾವಲಂಬನೆಯ ಬೇರಿಳಿಸುತ್ತಿರುವ ಕರಾವಳಿ , ಧಾರವಾಡ ಮಾಲತಿ ಮುಕುಂದ ಅವರು ಮಾವಿನಹಣ್ಣುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಿ ಅವುಗಳ ಮಾರಾಟದಿಂದ ಲಕ್ಷ ಮೀರಿದ ಸಂಪಾದನೆ ಮಾಡಿದ್ದು , ಮೀಯಪದವಿನ ಚೌಟರ ಚಾವಡಿಯಲ್ಲಿ ಸೇರಿದ ಕೃಷಿಕರು ವಾಟ್ಸ್ ಅಪ್ ಬಳಗ ಮಾಡಿಕೊಂಡು ಸಾವಯವ ಕೃಷಿ ಮಳಿಗೆಗಳನ್ನು ತೆರೆದದ್ದು, ಕುಳಾಯಿ ಬಳಿ ಖಾಲಿ ಜಾಗದಲ್ಲಿ ನಿವೃತ್ತ ಹಿರಿಯರು ಕೈತೋಟ ಮಾಡಿ ತರಕಾರಿ ಬೆಳೆಸಿದ್ದು - ಇಂತಹ ಹೊಸ ಆವಿಷ್ಕಾರದ ಸಂಗತಿಗಳು ಇಲ್ಲಿವೆ .
ಅಡಿಕೆ ಕೃಷಿಗೆ ಸಂಬಂಧಿಸಿದಂತೆ 'ಕೈಹಿಡಿದ ಅಡಿಕೆ ಖೇಣಿ ' ಮತ್ತು 'ಮರುಜೀವಗೊಂಡ ಅಡಿಕೆ ತೋಟ ' ಕತೂಹಲಕಾರಿಯಾಗಿವೆ . ಡಿಜಿಟಲ್ ತಂತ್ರಜ್ನಾದ ಪಾಸಿಟಿವ್ ಪ್ರಯೋಜನಗಳಲ್ಲಿ 'ದಿನಸಿ ವ್ಯಾಪಾರಕ್ಕೆ ಡಿಜಿಟಲ್ ಸ್ಪರ್ಶ ' ಲೇಖನ ಒಳ್ಳೆಯ ಉದಾಹರಣೆ .ಹಾಗೆಯೇ ಹಳೆಯ ಸಹಪಾಠಿಗಳು ಮತ್ತೆ ಒಗ್ಗೂಡುವ ಮತ್ತು ಸಂಬಂಧ ಬೆಸೆದ ಗಾಥೆಯೂ ಹ್ರದಯಸ್ಪರ್ಶಿಯಾಗಿದೆ . ಅಲ್ಲಿ ಕೇವಲ ಒಟ್ಟಿಗೆ ಸೇರುವುದಷ್ಟೇ ಅಲ್ಲದೆ ಕಷ್ಟದಲ್ಲಿ ಇರುವವರಿಗೆ ಪರಸ್ಪರ ನೆರವಾಗುವ ಮಾನವೀಯ ಸ್ಪರ್ಶ ಇದೆ .
ಕೊರೋನ ಕಾಲದಲ್ಲಿ ಮನೆಯಲ್ಲೇ ಉಳಿಯಬೇಕಾಗಿ ಬಂದವರು ಅಡುಗೆ ಮಾಡಲು ಕಲಿತದ್ದು , ಮನೆಯ ಊಟದಲ್ಲಿ ರುಚಿ ಕಂಡದ್ದು , ಊಟ ಬೇಕಾದವರಿಗೆ ಬುತ್ತಿ ಊಟವನ್ನು ಪೂರೈಕೆಮಾಡಿದ್ದು , ಬಾಬಣ್ಣ ಉಣ್ಣಿಯಪ್ಪ ಮಾಡಿ ತಾನೂ ಉಣ್ಣುವ ಸಂತೃಪ್ತಿ ಪಡೆದದ್ದು : ಇವು ಕೂಡಾ ಕೊರೋನ ಯುಗದ ಇತ್ಯಾತ್ಮಕ ಉತ್ಪನ್ನಗಳು .
ಯಕ್ಷಗಾನದ ಕ್ಷೇತ್ರದಲ್ಲಿ ನಡೆಸಿದ ಪ್ರಯೋಗಗಳನ್ನು ನಾನು ಸ್ವತಃ ಆನ್ ಲೈನ್ ನಲ್ಲಿ ನೋಡಿದ್ದೇನೆ .ನಾ ಕಾರಂತ ಪೆರಾಜೆ ಅವರು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ವತಿಯಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ನಡೆಸಿದ ಪ್ರಯೋಗಗಳನ್ನು ವಿವರಿಸಿದ್ದಾರೆ .ಆ ಎಲ್ಲ ಪ್ರಯೋಗಳನ್ನು ನಾನು ಆನ್ ಲೈನ್ ನಲ್ಲಿ ನೋಡಿದ್ದೇನೆ .ಹಾಗೆಯೇ ಪಟ್ಲ ಸತೀಶ ಶೆಟ್ಟರು ನಡೆಸಿದ ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟಗಳನ್ನೂ ನೋಡಿದ್ದೇನೆ .ಅದೇ ರೀತಿ ಉಜಿರೆ ಅಶೋಕ ಭಟ್ಟರು ನಡೆಸಿದ ತಾಳಮದ್ದಳೆ ಪ್ರದರ್ಶನಗಳನ್ನೂ ಆನ್ ಲೈನ್ ನಲ್ಲಿ ವೀಕ್ಷಿಸಿದ್ದೇನೆ . ಇವರು ಎಲ್ಲರೂ ಮಾಡಿದ ಸಾಹಸದ ಪ್ರಯೋಗಳಿಂದಾಗಿ ಈಗ ಆನ್ ಲೈನ್ ನಲ್ಲಿ ಯಕ್ಷಗಾನವನ್ನು ನೋಡುವವರ ಪ್ರಮಾಣ ಹೆಚ್ಚಾಗಿದೆ . ಯಕ್ಷಜಾಗೃತಿಯ ಬಗ್ಗೆ ನಾ ಕಾರಂತ ಪೆರಾಜೆಯವರು ಕೊಟ್ಟ ಮಾಹಿತಿಗಳು ಸಾಂಸ್ಕೃತಿಕ ಸಂಗತಿಗಳ ದಾಖಲೀಕರಣದ ನೆಲೆಯಿಂದಲೂ ಮುಖ್ಯವಾಗಿವೆ .
ಬದುಕನ್ನು ಹೊಸತಾಗಿ ಕಟ್ಟುವವರು , ಹಳ್ಳಿಗಳ ನೈಸರ್ಗಿಕ ಸುಖವನ್ನು ಅರಸುವವರು , ಕೃಷಿಯ ಮೂಲಕ ಜೀವನಪ್ರೀತಿಯನ್ನು ಬೆಳೆಸಿಕೊಳ್ಳುವವರು , ಸಾವಯವ ಸಾಮೂಹಿಕ ಜೀವನಕ್ಕೆ ಒಲಿಯುವವರು ಓದಬೇಕಾದ ಪುಸ್ತಕ ' ಮುಸ್ಸಂಜೆಯ ಹೊಂಗಿರಣ ' . ಅದು ಗಾತ್ರದಲ್ಲಿ ಕಿರಿದಾದುದು , ಸೂತ್ರದಲ್ಲಿ ಹಿರಿದಾದುದು .
0 comments:
Post a Comment