ಮಾವು ಹಣ್ಣುಗಳ ರಾಜನಾದರೆ ಹಲಸಿಗೆ 'ಕಿಂಗ್ ಮೇಕರ್' ಕಿರೀಟ - ಹೀಗೆಂದವರು ಹವಾಯಿಯ ಫಲಪ್ರಿಯ ಕೆನ್ಲವ್. ಈ ದಶಕದಲ್ಲಿ ನಾಲ್ಕಾರು ಬಾರಿ ಭಾರತಕ್ಕೆ ಬಂದಿದ್ದರು. ಹಲಸು ಮೇಳಗಳಲ್ಲಿ ಭಾಗವಹಿಸಿ ಆಗ ಅವರಾಡಿದ್ದ ಮಾತುಗಳು ಸತ್ಯವಾಗಿವೆ. ಹಲಸಿಗೆ ರಾಜ ಮಾನ್ಯತೆ ಲಭಿಸಿದೆ. ಕೇರಳದ 'ರಾಜ್ಯಫಲ'ವಾಗಿ ಘೋಷಣೆಯಾಗಿದೆ. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆಯವರು 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ'ಯಾಗಿದ್ದಾರೆ.
ಕೃಷಿ ಮಾಸಿಕ 'ಅಡಿಕೆ ಪತ್ರಿಕೆ'ಯು ಹುಟ್ಟುಹಾಕಿದ ಹಲಸಿನ ಆಂದೋಳನಕ್ಕೆ ಈಗ ದ್ವಾದಶ ವರುಷ. ಆರಂಭದಲ್ಲಿದ್ದ 'ನಿಷ್ಪ್ರಯೋಜಕ' ಹಣೆಪಟ್ಟಿ ಈಗಿಲ್ಲ! ಹಲಸನ್ನು ಹೊಲಸೆಂದ ಪ್ರತಿಷ್ಠಿತರ ಊಟದ ಬಟ್ಟಲಿನಲ್ಲಿ ಖಾದ್ಯವಾಗಿ ಸ್ಥಾನ ಪಡೆದಿದೆ. ಒಂದು ಕಾಲಘಟ್ಟದ ಬಡತನಕ್ಕೆ ಹೆಗಲು ಕೊಟ್ಟ ಹಲಸು ಯಾವಾಗ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತಿಗೆ ವಿಷಯವಾಯಿತೋ, ಅಂದಿನಿಂದ ಮಾತು-ಕತೆಗೆ ವಸ್ತುವಾಯಿತು. ಬಗೆಬಗೆ ರುಚಿಗಳ ದರ್ಶನವಾಗತೊಡಗಿದುವು.
ತಿಂಗಳುಗಳ ಹಿಂದೆ ಕೇರಳದ ಹಲಸಿನ ರಾಯಭಾರಿ ಜೇಮ್ಸ್ ಜೋಸೆಫ್ ವೀಡಿಯೋ ಕಾನ್ಪರೆನ್ಸ್ನಲ್ಲಿ ಪ್ರಧಾನಿಯವರ ಜತೆ ಮಾತನಾಡಿದ್ದರು. ಹಲಸಿನ ವಿಶೇಷಗಳನ್ನು ವೀಡಿಯೋ ಮೂಲಕ ಪ್ರಸ್ತುತ ಪಡಿಸಿದ್ದರು. ಅದು ವಿಶ್ವದಾದ್ಯಂತ ಜನರ ಗಮನ ಸೆಳೆಯುವುದರಲ್ಲಿ ದೊಡ್ಡ ಪಾತ್ರ ವಹಿಸಿತ್ತು.
ಹಲಸಿನ ಅಭಿವೃದ್ಧಿಯ ಗಾಳಿ ಸೋಕದಂತಹ ಉತ್ತರ ಭಾರತದಲ್ಲಿ ಜನಪರ ಚಟುವಟಿಕೆಗಳು ಶುರುವಾಗಿವೆ. ಈಶಾನ್ಯ ರಾಜ್ಯದಿಂದ ಎರಡು ಬಾರಿ ಇಂಗ್ಲೇಂಡಿಗೆ ಹಲಸು ರಫ್ತಾಗಿದೆ. ಒಡಿಸ್ಸಾದಲ್ಲಿ 'ಜಾಕ್ಫ್ರುಟ್ ಫಾರ್ ಎವರ್' ವಾಟ್ಸಾಪ್ ಗುಂಪು ಸಕ್ರಿಯವಾಗಿದೆ. ಗಿಡಗಳನ್ನು ಉತ್ಪಾದಿಸುವ, ಅರಂಭಿಕ ಹಂತದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ತರಬೇತಿಗಳು ನಡೆಯುತ್ತಿವೆ. ಸರಕಾರಿ ಮಟ್ಟದಲ್ಲಿ ಹಲಸಿಗೆ ಸ್ಥಾನ ಒದಗಿಸುವ, ಹೆಚ್ಚು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ರೂಪುರೇಷೆಗಳಾಗಿವೆ.
ಹಲಸಿನ ಮೌಲ್ಯವರ್ಧನೆಯ ರಂಗದಲ್ಲಿ ಒಂದೆರಡು ವರುಷದೀಚೆಗಿನ ಬೆಳವಣಿಗೆಗಳು ಗುರುತರವಾದುದು. ಕೇರಳದ ಪತ್ನಾಂತಿಟ್ಟದ 'ಕಾರ್ಡ್’ ಕೃಷಿ ವಿಜ್ಞಾನ ಕೇಂದ್ರವು (ಕೇವಿಕೆ) ಹಲಸಿನ ಕಾಯಿಸೊಳೆಯಿಂದ 'ಸಿದ್ಧ ದೋಸೆ ಹಿಟ್ಟು' ಆಭಿವೃದ್ಧಿ ಪಡಿಸಿದೆ. ಅರ್ಧ ಭಾಗ ಅಕ್ಕಿ, ಹಲಸಿನ ಹಿಟ್ಟು ಅರ್ಧ ಭಾಗ ಬಳಸಿ ಮಾಡಿದ ದೋಸೆಯು ಅಮ್ಮಂದಿರ ಮನವನ್ನು ಗೆದ್ದಿದೆ. ಕೇವಿಕೆ ಗೃಹವಿಜ್ಞಾನದ ವಿಷಯ ತಜ್ಞೆ ಡಾ.ಶಾನಾ ಹರ್ಷನ್ ಹೇಳುತ್ತಾರೆ, ಇಂದು ಮಧುಮೇಹಿಗಳಿಗೆ ಆಹಾರದ ಜತೆಯಲ್ಲಿ ಒಂದು ಚಮಚ ಹಲಸಿನ ಕಾಯಿ ಸೊಳೆಯ ಹುಡಿಯನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಈ ದೋಸೆಹಿಟ್ಟು ಕೂಡಾ ಮಧುಮೇಹಿಗಳು ಬಳಸುವಂತಿದೆ.
ಬೆಂಗಳೂರಿನ ಜಿ.ವಿ.ನ್ಯಾಚುರಲ್ ಪ್ರಾಡಕ್ಟ್ಸ್ ಅವರ 'ಅಡುಗೆಗೆ ಸಿದ್ಧ' (ರೆಡಿ ಟು ಕುಕ್) ಎಳೆ ಹಲಸು (ಗುಜ್ಜೆ) ಉತ್ಪನ್ನವು ಮಾರುಕಟ್ಟೆ ಗೆಲ್ಲುತ್ತಿದೆ. ಇದಕ್ಕೆ ಎರಡು ದಿವಸಗಳ ತಾಳಿಕೆ. ತಂಪುಪೆಟ್ಟಿಗೆಯಲ್ಲಿಟ್ಟರೆ ಐದು ದಿವಸ ಬಳಸಬಹುದು. ಉತ್ಪನ್ನವನ್ನು ಮಾರುಕಟ್ಟೆಗಿಳಿಸುವಲ್ಲಿ ಸಂಸ್ಥೆಯ ಜಿ.ವಿ.ನವೀನ್ ಸಾಕಷ್ಟು ಅಧ್ಯಯನ, ಪ್ರಯೋಗ ಮಾಡಿದ್ದರು. ಸಾಗಾಟ ವ್ಯವಸ್ಥೆಯ ಸವಾಲು ಒಂದೆಡೆ, ಉತ್ಪನ್ನ ತಾಳಿಕೆಯ ಕನಿಷ್ಠ ಅವಧಿ ಇನ್ನೊಂದೆಡೆ - ಇವೆರಡನ್ನು ಗೆಲ್ಲುವುದು ಸುಲಭವಲ್ಲ. ಇದಕ್ಕೆ ಬೇಕಾದ ಕಚ್ಚಾವಸ್ತುಗಳ ಲಭ್ಯತೆಯು ಆರು ತಿಂಗಳು ತೊಂದರೆಯಿಲ್ಲ. ಅದು ಒಂಭತ್ತು ತಿಂಗಳೂ ಸಿಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ನವೀನರ ದೂರದೃಷ್ಟಿ.
ತುಮಕೂರಿನ 'ಸೌತ್ ಫೈನ್ ಫ್ರುಟ್ಸ್ ಪ್ರೈ ಲಿ.,' ಎಳೆ ಹಲಸನ್ನು ಆಧುನಿಕ ತಂತ್ರಜ್ಞಾನದಲ್ಲಿ ಸಂಸ್ಕರಿಸಿದೆ. ಮುನ್ನೂರು ಗ್ರಾಮಿನ ಪೊಟ್ಟಣಕ್ಕೆ ನೂರ ಇಪ್ಪತ್ತೈದು ರೂಪಾಯಿ. ಡಿ.ವಿ.ಭಾಸ್ಕರ ರೆಡ್ಡಿ, ರಘುನಾಥ ರೆಡ್ಡಿ, ವಿನಯಬಾಬು ಮೂವರು ಪಾಲುದಾರರು ಸೇರಿ ರೂಪಿಸಿದ ಉದ್ದಿಮೆ. ಬೆಂಗಳೂರಿನ 20-25 ಸೂಪರ್ ಮಾಲ್ಗಳಲ್ಲಿ ಉತ್ಪನ್ನ ಲಭ್ಯ. ದೊಡ್ಡ ಮಟ್ಟದ ಅಡಿಗಟ್ಟಿರುವ ಉದ್ದಿಮೆಯು ದಿವಸಕ್ಕೆ ಮೂರರಿಂದ ನಾಲ್ಕು ಟನ್ ಉತ್ಪಾದನಾ ಸಾಮಥ್ರ್ಯ ಹೊಂದಿದೆ.
ಅಕಾಲದಲ್ಲಿ ತಾಜಾ ಹಣ್ಣಿನದ್ದೇ ಸವಿ ಬೇಕೆಂದರೆ? ಹಣ್ಣಿನ ಸೊಳೆಯನ್ನು (ತೊಳೆ) ತಂಪುಪೆಟ್ಟಿಗೆಯ ಫ್ರೀಝರಿನಲ್ಲಿಟ್ಟು ಕಾಪಿಡುವ 'ಪ್ರೋಝನ್' ವಿಧಾನವು ವಿದೇಶದಲ್ಲಿ ಸ್ವೀಕೃತಿ ಪಡೆಯುತ್ತಿದೆ. ಎಂಟು ವರುಷಗಳಿಂದ ಪುಣೆಯ ಮಹಾವೀರ್ ಅಗ್ರವಾಲ್ ತಮ್ಮ 'ಪಿಂಪ್ರಿಯ ಸುಯೋಗ್ ಫುಡ್ ಪ್ರಾಡಕ್ಸ್ಟ್' ಕಂಪೆನಿಯ ಮೂಲಕ ಪ್ರೋಝನ್ ರೂಪದ ಹಣ್ಣನ್ನು ದೇಶ ವಿದೇಶಗಳ ಐವತ್ತಕ್ಕೂ ಮಿಕ್ಕಿ ಆಹಾರೋದ್ಯಮಗಳಿಗೆ ವಿತರಿಸುತ್ತಿದೆ.
ಕರಾವಳಿಯಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಕಾಯಿ ಹಲಸಿನ ಸೊಳೆ 'ಉಪ್ಪಾಡ್ ಪಚ್ಚಿಲ್' (ಉಪ್ಪುಸೊಳೆ) ಖಾದ್ಯಗಳನ್ನು ಗ್ರಹಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ! ತುಳುನಾಡಿನ ಕೆಲವು ಮದ್ಯದ ಅಂಗಡಿಗಳಿಗೆ ಉಪ್ಪಾಡ್ ಪಚ್ಚಿಲ್ ನುಗ್ಗಿದೆ! ಶ್ರೀಲಂಕಾದಲ್ಲಿ ಹಲಸಿನ ಬೀಜದ ಮಸಾಲೆ ಮದ್ಯದಂಗಡಿಯಲ್ಲಿ ಜನಪ್ರಿಯ. ಹದ ಬಲಿತ ಹಲಸಿನ ಬೀಜದಿಂದ ಉಪ್ಕರಿ, ಮಸಾಲೆ ತಿಂಡಿಗಳನ್ನು ಮಾಡಿದರೆ ಪ್ರವಾಸಿಗಳನ್ನು ಆಕರ್ಷಿಸಬಹುದು. ಕೊಡಗಿನ ಬಹುತೇಕ ಮನೆಮನೆಗಳಲ್ಲಿ ಉಪ್ಪುಗುಜ್ಜೆ ತಯಾರಿ ನಡೆಯುತ್ತಿದೆ. ಅದನ್ನು ಮಾರಾಟ ಮಾಡುವಲ್ಲಿ ಯತ್ನಗಳಾಗುತ್ತಿವೆ.
ಬಂಟ್ವಾಳ ತಾಲೂಕಿನ (ದ.ಕ.) 'ಹಲಸು ಸ್ನೇಹಿ ಕೂಟ'ವು ದಶಕದೀಚೆಗೆ ಹಲಸು ಅಲ್ಲದೆ ವಿವಿಧ ಹಣ್ಣುಗಳ ತಳಿ ಹಾಗೂ ಮೌಲ್ಯವರ್ಧನೆಯ ಕಾರ್ಯಕ್ರಮಗಳನ್ನು ನಡೆಸಿದೆ. ಹಲಸಿನ ತಳಿ ಆಯ್ಕೆಯಲ್ಲಿಂದ ಮೌಲ್ಯವರ್ಧಿತ ಉತ್ಪನ್ನಗಳು ಮನೆಗಳಲ್ಲಿ ಸಿದ್ಧವಾಗಬೇಕು ಮತ್ತು ಬಳಸುವವರ ಸಂಖ್ಯೆ ಅಧಿಕವಾಗಬೇಕೆಂಬ ಹಿನ್ನೆಲೆಯ ಕಾರ್ಯಹೂರಣಗಳನ್ನು ರೂಢಿಸಿಕೊಂಡಿತ್ತು. ಈಗ ಹಲಸಿನ ಹಣ್ಣಿನ ಹಲ್ವ ತಯಾರಿಗೆ ಯಾಂತ್ರಿಕ ಸ್ಪರ್ಶ ನೀಡಿದೆ. “ಇದನ್ನು ಜಾಬ್ ವರ್ಕ್ ಮೂಲಕ ನಡೆಸಬಹುದು. ಈಗ ಪ್ರಾಯೋಗಿಕವಾಗಿ ಕೆಲವೇ ಮಂದಿ ಹಲ್ವ ಮಾಡಿಸಿ ಒಯ್ಯುತ್ತಿದ್ದಾರೆ. “ನನ್ನ ಕೃಷಿ ಚಟುವಟಿಕೆಗಳ ಮಧ್ಯೆ ಇಷ್ಟೇ ಸಾಧ್ಯವಾಗುತ್ತದೆ,” ಎನ್ನುತ್ತಾರೆ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ.
ಹಲಸಿನ ಆಂದೋಳನದ ದ್ವಾದಶ ವರುಷಗಳಲ್ಲಿ ಏನಿಲ್ಲವೆಂದರೂ ಇನ್ನೂರಕ್ಕೂ ಮಿಕ್ಕಿ ಉತ್ಪನ್ನಗಳು ಸಿದ್ಧವಾಗಿ ಗ್ರಾಹಕರ ಉದರ ಸೇರುತ್ತಿವೆ, ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೂ ಸೇರಿವೆ. ಮೇಳಗಳು, ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಖಾಸಗಿಯಾಗಿ ಸದ್ದಿಲ್ಲದೆ ನಡೆದಿವೆ. ಮೂರು ಡಜನ್ನಿನಷ್ಟು ಮೌಲ್ಯವರ್ಧಿತ ಘಟಕಗಳು ಕಾರ್ಯಾಚರಿಸುತ್ತಿವೆ. ಚಿಪ್ಸ್, ಬೆರಟ್ಟಿಯಂತಹ ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಯಲ್ಲದೆ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುವ ಪ್ರಯೋಗಶೀಲತೆ ಹಬ್ಬುತ್ತಿದೆ.
ದೇಶ ಮಟ್ಟದಲ್ಲಿ ಇನ್ನೂ ಕೂಡಾ ಹಲಸಿನ ಮೌಲ್ಯವರ್ಧನೆಯ ತರಬೇತಿ ಕೊಡುವ ಪೂರ್ಣಕಾಲಿಕ ವ್ಯವಸ್ಥೆಗಳಿಲ್ಲ. ಮೌಲ್ಯವರ್ಧನೆಯ ವಿವಿಧ ಸಾಧ್ಯತೆಗಳ ತಂತ್ರಜ್ಞಾನಗಳ, ಲಿಖಿತ ಸಾಹಿತ್ಯಗಳ ಕೊರತೆಯಿದೆ. ಆರಂಭದಲ್ಲಿ ಉದ್ಯಮ ಮಾಡುವಂತಹವರೆಲ್ಲ ಅವರವರೇ 'ಆರ್ ಅಂಡ್ ಡಿ' (ಸಂಶೋಧನೆ-ಅಭಿವೃದ್ಧಿ) ಮಾಡಿ ಮುಂದಕ್ಕೆ ಹೋಗಬೇಕಾದಂತಹ ಸ್ಥಿತಿಯಿದೆ. ಆದರೆ ಸಾಕಷ್ಟು ಮಂದಿ ಕೃಷಿಕರು ಹಲಸನ್ನು ಗಂಭೀರವಾಗಿ ಕೃಷಿ ಮಾಡುವ ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಅಲ್ಲಲ್ಲಿ ಹಲಸಿನ ಪ್ಲಾಂಟೇಶನ್ಗಳು ಏಳುತ್ತಾ ಇವೆ. ಆದರೆ ಕೇವಲ ಹಲಸಿನ ಪ್ಲಾಂಟೇಶನ್ಗಳು ಮೋನೋಕಲ್ಚರ್ ಆಗುವುದು ಕೂಡಾ ಆರೋಗ್ಯಕರವಾಗದು.
ಹಲಸಿನ ಆಂದೋಳನಕ್ಕೆ ಶ್ರೀಕಾರ ಬರೆದ ಶ್ರೀ ಪಡ್ರೆ ಹೇಳುತ್ತಾರೆ, “ಹಲಸಿನ ಸ್ಥಾನ-ಮಾನ ಏರುತ್ತಾ ಇದೆ. ವೆಬಿನಾರ್ಗಳು ಆಗುತ್ತಾ ಇವೆ. ಜನರು ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ. ಹೊಸ ಹೊಸ ತಳಿಗಳ ಸೃಷ್ಟಿಯಾಗಿವೆ. ವೀಡಿಯೋಗಳು ಬಂದಿವೆ. ಯಾವ ರೀತಿ ಕಾಯಿ ಸೊಳೆಯ ಹುಡಿಯು ಮಧುಮೇಹಿಗಳಿಗೆ ಪೂರಕ ಆಹಾರವಾಗಿ ಕಾಯಿಲೆಯನ್ನು ತಗ್ಗಿಸಲು ಸಹಾಯ ಆಗುವುದೋ, ಅಂತೆಯೇ ಹಲಸಿನ ಎಲೆಗಳ ಕಷಾಯ, ಪುಡಿಗಳಲ್ಲಿ ಕೂಡಾ ಸಾಧ್ಯತೆಗಳಿವೆ. ಈ ಕುರಿತು ಸಂಶೋಧನೆಗಳಾಗಬೆಕು. ನಮ್ಮಲ್ಲಿ ಸಂಶೋಧನೆಗೆ ಒತ್ತು ಬಂದಿರುವುದು ಸಾಕಾಗಿಲ್ಲ. ವಿಶ್ವವಿದ್ಯಾನಿಲಯಗಳು, ಸಂಶೋಧನಾ ಕೇಂದ್ರಗಳು ಹಲಸಿನ ಪ್ರಾಮುಖ್ಯತೆಗೆ ಅನುಗುಣವಾಗಿ ಗಮನ ಹರಿಸುವುದು ಸಾಕಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ.”
ಎಷ್ಟೋ ಸಲ ದೂರದ ಸುದ್ದಿಗಳು ಸ್ಥಳೀಯವಾಗಿ ಪರಿಣಾಮ ಬೀರುತ್ತದೆ. ಎತ್ತಿ ಹೇಳುವಂತಹ ಅಭಿವೃದ್ಧಿ ಕಾಣದಿದ್ದರೂ, ಒಂದು ರೀತಿಯ ತಂಗಾಳಿಯ ಸಂಚಲನ ಆಗುತ್ತಲೇ ಇರುತ್ತದೆ. ಊಟದ ಬಟ್ಟಲಿಗೆ, ಸಮಾರಂಭಗಳ ಭೋಜನಕ್ಕೆ, ತಿಂಡಿ ತಟ್ಟೆಗೆ ಒಂದಾದರೂ ಹಲಸು ಐಟಂ ಅನಿವಾರ್ಯ ಅಂತ ಕಂಡು ಬಂದಿದ್ದರೆ ಅದಕ್ಕೆ ಈ ಆಂದೋಳನಗಳು ಕಾರಣ. ಕೋವಿಡ್ ಪೂರ್ವದಲ್ಲಿ ಜರುಗಿದ ಹಲಸು ಮೇಳಗಳಲ್ಲಿ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಹಲಸಿನ ಉತ್ಪನ್ನಗಳನ್ನು ಕಾಣಬಹುದಾಗಿತ್ತು. ಹಲಸಿನ ರುಚಿ ಗೊತ್ತಿದ್ದ, ಹೊಸ ರುಚಿ ತಯಾರಿಸಲು ಉತ್ಸಾಹವಿದ್ದ ನೂರಾರು ಹೆಣ್ಮಕ್ಕಳಿಗಿಂದು ಹಲಸಿನ ಪರಿಮಳ ಬದುಕು ನೀಡಿದೆ, ನೀಡುತ್ತಿದೆ.
ಕ್ಯಾಂಪ್ಕೊ ಹಹ ಚಾಕೊಲೇಟ್
ಮಂಗಳೂರಿನ ಪ್ರತಿಷ್ಠಿತ ಅಂತಾರಾಜ್ಯ ಸಹಕಾರಿ ಅಡಿಕೆ ಸಂಸ್ಥೆ 'ಕ್ಯಾಂಪ್ಕೋ'ದ ಹೆಮ್ಮೆಯ ಉತ್ಪನ್ನ ಹಲಸಿನ ಹಣ್ಣಿನ ಎಕ್ಲೇರ್ ಚಾಕೊಲೇಟ್. ಜುಲೈ ಮೊದಲ ವಾರದಲ್ಲಿ ಮಾರುಕಟ್ಟೆಗಿಳಿದಿದೆ. ಎಕ್ಲೆರ್ ರೂಪದ ಚಾಕೊಲೇಟ್ ಸವಿದವರ ಮನ ಗೆದ್ದಿದೆ. ಉತ್ತಮ ಹಿಮ್ಮಾಹಿತಿ ಬರುತ್ತಿದೆ. ದೇಶದಲ್ಲಿದು ಪ್ರಥಮ. ಚಾಕೊಲೇಟಿನಲ್ಲಿ ಶೇ.12ರಷ್ಟು ಹಲಸಿನ ಹಣ್ಣಿದೆ. ಮಿಕ್ಕುಳಿದಂತೆ ಸಕ್ಕರೆ, ಹಾಲು ಮತ್ತು ಫ್ಯಾಟ್ಗಳಿವೆ. ಒಂಭತ್ತು ತಿಂಗಳ ತಾಳಿಕೆ. ಎಕ್ಲೇರ್ ಚಾಕೊಲೇಟ್ ಒಂದರ ಎರಡು ರೂಪಾಯಿ. ಇದರಲ್ಲಿ ಹಾನಿಕಾರಕವಲ್ಲದ ಯಾವುದೇ ಒಳಸುರಿಗಳಿಲ್ಲ. ಎನ್ನುವ ಮಾಹಿತಿ ನೀಡಿದರು ಆಡಳಿತ ನಿರ್ದೇಶಕ ಕೃಷ್ಣ ಕುಮಾರ್. ಶೀಘ್ರದಲ್ಲೇ ಚಾಕೊಲೇಟ್ ಅಮೇಜಾನ್ ಆನ್ಲೈನ್ ಖರೀದಿ ವ್ಯವಸ್ಥೆಗೆ ಪ್ರವೇಶವಾಗಲಿದೆ.