Monday, July 5, 2021

ಇದು ವೈಫೈ ಹಳ್ಳಿ..!

 

ಚನ್ನಪಟ್ಟಣ ತಾಲೂಕಿನ ಚಿಕ್ಕೇನಹಳ್ಳಿಯ ನೂರ ಎಂಭತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ನೆಟ್ವರ್ಕ್  ಚಿಂತೆಯಿಲ್ಲ! ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ. ಕನ್ನಾಡಿನಾದ್ಯಂತ  ನೆಟ್ವರ್ಕ್  ಚಿಂತೆಯಲ್ಲಿ ವಿದ್ಯಾರ್ಥಿ ಸಮುದಾಯ ಒದ್ದಾಡುತ್ತಿದೆ. ಆನ್ಲೈನ್ ತರಗತಿಗಳು ತಪ್ಪಿ ಹೋಗುತ್ತಿದೆ. ಇಂತಹುದರಲ್ಲಿ ಚಿಕ್ಕೇನಹಳ್ಳಿಯಲ್ಲಿ ಫುಲ್ ನೆಟ್ವರ್ಕ್ !  ವಿದ್ಯಾರ್ಥಿಗಳ ಕಿವಿ ನೆಟ್ಟಗಾಗುವ ಸುದ್ದಿಯಿದು.

 ಮಾತೃಭೂಮಿ ಸೇವಾ ಫೌಂಡೇಶನ್  ಸಂಸ್ಥೆಯು ಚಿಕ್ಕೇನಹಳ್ಳಿಯಲ್ಲಿ ರಾಜ್ಯ ಅಲ್ಲ, ದೇಶವೇ ಒಮ್ಮೆ ಕತ್ತು ಹೊರಳಿಸಿ ನೋಡುವಂತಹ ಕೆಲಸ ಮಾಡಿದೆ. ಹಳ್ಳಿಯ ವಿದ್ಯಾರ್ಥಿಗಳ ಕಷ್ಟಗಳಿಗೆ ಸ್ಪಂದಿಸಿದೆ. ಮನೆಮನೆಗೆ ಭೇಟಿ ನೀಡಿ, ಸರ್ವೆ ಆನ್ಲೈನ್ ಕಲಿಕೆಗೆ ನೆರವು ನೀಡಿದವರು ಫೌಂಡೇಶನ್ನಿನ ಮಹೇಶ್ ಮಾತೃಭೂಮಿ ಹಾಗೂ ಹರೀಶ್ ಕುಮಾರ್ ಸಹೋದರರು. ಅವರೆನ್ನುತ್ತಾರೆ, “ಕೇಂದ್ರ, ರಾಜ್ಯ ಸರಕಾರಗಳು ಹಳ್ಳಿಗಳ ಉದ್ಧಾರವಾಗಬೇಕು, ಹಳ್ಳಿಗಳಿಗೆ ಡಿಜಿಟಲ್ ತಂತ್ರಜ್ಞಾನ ಪ್ರವೇಶ ಮಾಡಬೇಕು ಅಂತಿದ್ದಾರೆ. ಅದಕ್ಕಾಗಿ ಯೋಜನೆಗಳು ತಯಾರಾಗಿರಬೇಕು. ಸರಕಾರದಿಂದ ಯಾವುದೇ ಸಹಾಯ ತೆಕ್ಕೊಳ್ಳದೆ ಏನಾದರೂ ಹಳ್ಳಿಗೆ ಉಪಕಾರ ಮಾಡಬೇಕು ಎನ್ನುವ ಉದ್ದೇಶದಿಂದ ಕೆಲಸಕ್ಕೆ ಕೈಹಾಕಿದೆವು.”

ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದ ಚಿಕ್ಕೇನಹಳ್ಳಿಗೆ ಹನ್ನೊಂದು ಕಿಲೋಮೀಟರ್ ದೂರ. ಆಪ್ಟಿಕಲ್ ಕೇಬಲ್ ಮೂಲಕ ಯೂತ್ ಬ್ರಾಂಡ್  ಸಹಯೋಗದಲ್ಲಿ ಅಕ್ಟೋಬರ್ ಮೊದಲ ವಾರದಿಂದ ವೈಫೈ ಸಂಪರ್ಕಗೊಂಡಿದೆ. ಮೂರು ಲಕ್ಷ ರೂಪಾಯಿಯ ದೊಡ್ಡ ಯೋಜನೆ. ಗ್ರಾಮಸ್ಥರಿಂದ ಒಂದು ಪೈಸೆ ಪಡೆದಿಲ್ಲ. ಎಲ್ಲಾ ವೆಚ್ಚವನ್ನು ಸಂಸ್ಥೆಯು ಭರಿಸಿದೆ.

ಸ್ಮಾರ್ಟ್ ಫೋನ್ ಇಲ್ಲದಿರುವ ವಿದ್ಯಾರ್ಥಿಗಳಿಗೆ ಹಳ್ಳಿಯ ಮೂರ್ನಾಲ್ಕು ಕಡೆಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಮಾಡಿದ್ದಾರೆ. ಯಾವ ವಿದ್ಯಾರ್ಥಿಯೂ ಆನ್ಲೈನ್ ಕ್ಲಾಸನ್ನು ತಪ್ಪಿಸಿಕೊಳ್ಳಬಾರದು. ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ ಗಿರೀಶ್. ಸಾರ್ವಜನಿಕರಿಗೂ ಕೂಡಾ ಉಚಿತ ವೈಫೈ.

ಉಚಿತ ನೆಟ್ವರ್ಕ್  ಸಿಕ್ಕಾಗ ಮೊಬೈಲಿನಲ್ಲೇ ಬಹುತೇಕರು ಕಾಲಹರಣ ಮಾಡಲಾರರೇ? ಎನ್ನುವ ಸಂಶಯ ಬರುವುದು ಸಹಜ. ಹಾಗಾಗದು, ಎಲ್ಲರೂ ಕೃಷಿ ಕೆಲಸಗಳಿಗೆ ತೆರಳುವ ಕಾರಣ ರಾತ್ರಿ ಹೊತ್ತಲ್ಲಿ ಮಾತ್ರ ಮೊಬೈಲ್ ಆನ್ ಮಾಡಿಯಾರಷ್ಟೇ! ಆಗಲೇ ವಾಟ್ಸಾಪ್, ಫೇಸ್ಬುಕ್, ವೀಡಿಯೋ, ಆಡಿಯೋ, ನೋಡಲಾಗದೆ ಹಿಡಿಶಾಪ ಹಾಕುತ್ತಿರುವ ಮಂದಿ ಈಗ ಮಹೇಶ್, ಗಿರೀಶರನ್ನು ಹರಸುತ್ತಿದ್ದಾರೆ. ಹಳ್ಳಿಯಲ್ಲಿ ಈಗಾಗಲೇ ಶೇ.80ರಷ್ಟು ಕೆಲಸಗಳು ಪೂರ್ತಿಯಾಗಿವೆ.

ಗ್ರಾಮಸ್ಥರ ಮನೆ ಬಾಗಿಲಿಗೆ ಬ್ಯಾಂಕಿಗ್, ವಿಮೆ ಮತ್ತು ಪಿಂಚಣಿ ಸೇವೆಗಳನ್ನು ಒದಗಿಸಲು ಸಹಕಾರಿ. ಮುಂದೆ ಹಳ್ಳಿಯಲ್ಲಿ ಯುವಜನತೆಗೆ ಉದ್ಯೋಗವನ್ನು ಉತ್ತೇಜಿಸಲು ಉಪಯೋಗವಾಗಲಿದೆ. ವೈಫೈ ಬಳಕೆ ಎಲ್ಲರಿಗೂ ಸಿಗುವುದರಿಂದ ಇಡೀ ಹಳ್ಳಿಯು ಡಿಜಿಟಲ್ ಸಾಕ್ಷರತೆಗೆ ತೆರೆದುಕೊಳ್ಳುತ್ತಿದೆ. ಚಿಕ್ಕೇನಹಳ್ಳಿಯು ತಾಂತ್ರಿಕ ವಿಲೇಜ್ ಆಗಿ ರೂಪುಗೊಳ್ಳಬೇಕೆನ್ನುವುದು ಫೌಂಡೇಶನ್ನಿನ ಆಶೆ.

 ಭವಿಷ್ಯದ ಒಳನೋಟದ ಸುಳಿವು ನೀಡಿದರು ಮಹೇಶ್ - ಕಲ್ಪನೆಯ ಹಳ್ಳಿಯಲ್ಲಿ ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ  ವ್ಯವಸ್ಥೆಗಳ ಕುರಿತು ಟೆಲಿ-ಮೆಡಿಸಿನ್ ಸಮಾಲೋಚನೆಗಳ ಮೂಲಕ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಬಹುದು. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಐದಾರು ತಿಂಗಳಿನಲ್ಲಿ ಚಿಕ್ಕೇನಹಳ್ಳಿಯು ಡಿಜಿಟಲ್ ಗ್ರಾಮವಾಗಿ ಬದಲಾಗುತ್ತದೆ.

 ಸಮಸ್ಯೆಗಳತ್ತ ಮಹೇಶ್ ಗಮನ ಸೆಳೆಯುತ್ತಾರೆ, “ಕೇಡನ್ನು ಬಯಸುವ ಮಂದಿ ಮತ್ತು ವಿನೋದಪ್ರಿಯರು ಆಪ್ಟಿಕಲ್ ಕೇಬಲಿಗೆ ಹಾನಿ ಮಾಡುತ್ತಾರೆ. ಸಾಮುದಾಯಿಕ ಕೆಲಸವಾದ್ದರಿಂದ ಸಹಿಸಿಕೊಳ್ಳಬೇಕಾಗುತ್ತದೆ. ಒಳ್ಳೆಯದು ಮಾಡುವಾಗ ಕೆಟ್ಟದ್ದು ಇದ್ದೇ ಇದೆಯಲ್ವಾ.” ಫೌಂಡೇಶನ್ನಿನಲ್ಲಿ ಮಹೇಶ್ ಮಾತೃಭೂಮಿ, ಹರೀಶ್ ಕುಮಾರ್, ಗಿರೀಶ್ ಟಿ.ಆರ್, ದಯಾನಂದ, ಮಹೇಶ ಗೌಡ.. ಇವರ ಸಾರಥ್ಯದ ತಂಡದಲ್ಲಿ ಸಾವಿರಕ್ಕೂ ಮಿಕ್ಕಿ ಸ್ವಯಂಸೇವಕರಿದ್ದಾರೆ.

ವೈಫೈ ಬರುವುದಕ್ಕಿಂತ ಮುಂಚಿನ ಗೋಳು ಹೇಳಿ ಮುಗಿಯದು. ಕ್ಷೀಣ ನೆಟ್ವರ್ಕಿನಿಂದಾಗಿ ತರಗತಿಯ ವಿಷಯಗಳು ಅರ್ಧರ್ಧ ಗ್ರಹಿಸಲು ಸಾಧ್ಯವಾಗುತ್ತಿತ್ತು. ಕೆಲವೊಮ್ಮೆ ವೀಡಿಯೋಗಳು ನೆಟ್ವರ್ಕ್  ಕಳಚಿಕೊಂಡು ಒಂದೆರಡು ನಿಮಿಷ ಕಂಡು, ಮತ್ತೆ ಮಾಯವಾಗುತ್ತಿತ್ತು. ಹೀಗಾಗಿ ನಿರಂತರ ತರಗತಿಗಳಲ್ಲಿ ಭಾಗವಹಿಸಲು ಅನನುಕೂಲವಾಗುತ್ತಿತ್ತು. ಈಗ ಸಮಸ್ಯೆಯಿಲ್ಲ. ಎನ್ನುತ್ತಾರೆ ಯಶವಂತ. ಪಿಯುಸಿ ವಿದ್ಯಾರ್ಥಿ.

ಮಾತೃಭೂಮಿ ಸೇವಾ ಫೌಂಡೇಶನ್ ಸಮಾಜಮುಖಿ ಕೆಲಸ ಮಾಡುತ್ತಿದೆ. ಚೆನ್ನಪಟ್ಟಣದಲ್ಲಿ ಮಾತೃಭೂಮಿ ಮಡಿಲು ಮಕ್ಕಳು ಸೇವಾಶ್ರಮ, ಬೆಂಗಳೂರಿನಲ್ಲಿ ಹಿರಿಮನೆ. ವೃದ್ಧಾಶ್ರಮ ನಡೆಸುತ್ತಿದ್ದಾರೆ. ವೈಫೈ ಅಂತಹ ಸಾಮುದಾಯಿಕ ಕೆಲಸಗಳು ಕೋವಿಡ್ ವಿಷಾದಗಳ ಮಧ್ಯೆ ಒಂದು ಹೊಂಗಿರಣ.


0 comments:

Post a Comment