Tuesday, May 28, 2024

'ಫಲಪ್ರದ' : ಒಂದು ಖುಷಿಯ ಕ್ಷಣ


ಮೇ 24ರಿಂದ 26 ಪುತ್ತೂರಿನಲ್ಲಿ ಹಲಸು ಮೇಳ ಸಂಪನ್ನವಾಯಿತು. ಬಂಟ್ವಾಳ ತಾಲೂಕಿನ ಕೇಪು ಉಬರು-ಮುಳಿಯ 'ಹಲಸು ಸ್ನೇಹಿ ಕೂಟ' ಕಲಾಪಗಳ ಹಿನ್ನೋಟ 'ಫಲಪ್ರದ ಪುಸ್ತಕ' ಅನಾವರಣಗೊಂಡಿತ್ತು.

ಹನ್ನೊಂದು ವರುಷಗಳ ಹಿಂದೆ ಕೂಟದ ಆಯೋಜನೆಯಲ್ಲಿ ಮುಳಿಯ ಶಾಲೆಯಲ್ಲಿ 'ಕಾಡು ಮಾವಿನ ಮೆಲುಕು' ಕಾರ್ಯಕ್ರಮ ಜರುಗಿತ್ತು. ನನ್ನಲ್ಲಿದ್ದ ಚಿಕಣಿ ಕ್ಯಾಮರಾದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿದ್ದೆ. ಅದೊಂದು ಹವ್ಯಾಸ. ಬೇಕೋ ಬೇಡ್ವೋ ಬೇರೆ ಮಾತು. ಹಾಗೆಂದು 'ರೈಸಲು' ಅಲ್ಲ. ದಾಖಲೆಗಾಗಿ ಇರಲಿ ಎನ್ನುವ ಕಾರಣಕ್ಕಾಗಿ.

ಅಂದು ಕ್ಲಿಕ್ಕಿಸಿದ ಒಂದು ಚಿತ್ರ 'ಫಲಪ್ರದ'ದಕ್ಕೆ ಆಯ್ಕೆ ಮಾಡಿದೆ. ಚಿತ್ರ ಸಾಮಾನ್ಯವಾಗಿತ್ತು. ಅಧ್ಯಾಪಕ, ಕಲಾವಿದ ಅರವಿಂದ ಕುಡ್ಲರು ತುಂಬಾ ಸುಂದರವಾಗಿ ಚಿತ್ರವನ್ನು ಕ್ಲಿಕ್ಕಿಸಿದ್ದಾರೆಂದು ರಾಧಾ ಮುಳಿಯರಿಂದ ತಿಳಿಯಿತು. ಅವರಲ್ಲಿ ವಿನಂತಿಸಿ ಚಿತ್ರವನ್ನು ಪಡಕೊಂಡೆ.

ಇದನ್ನು ಗುಣಮಟ್ಟಕ್ಕೆ ಏರಿಸಿ, ವಿನ್ಯಾಸಿಸಿದವರು ಹೆಮ್ಮೆಯ ಕಲಾವಿದ ಶಿವರಾಮ್ . (ಎಸ್ಸಾರ್ ಪುತ್ತೂರು). ಚಿತ್ರದಲ್ಲಿರುವ ರೂಪದರ್ಶಿಗಳು - ವರ್ಚಸ್ವಿ ಮತ್ತು ನಿಹಾರಿಕ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಇವರಿಬ್ಬರ ಉಪಸ್ಥಿತಿ ಇರಬೇಕಿತ್ತೆನ್ನುವ ನಿರೀಕ್ಷೆಯಿತ್ತು. ಹಾಗಾಗಲಿಲ್ಲ.

ಮೇಳದ ಎರಡನೇ ದಿವಸ ಪಾಲಕರೊಂದಿಗೆ ಇವರಿಬ್ಬರೂ ಪ್ರತ್ಯಕ್ಷ! ಪುಸ್ತಕವನ್ನು ಹಿಡಿದುಕೊಂಡು ಸಂಭ್ರಮಿಸಿದರು. ಅವರ ನೀರೀಕ್ಷೆಯಲ್ಲಿದ್ದ ಲೇಖಕನಿಗೂ ಹೇಗಾಗಬೇಡ.. ನೀವೇ ಊಹಿಸಿ. ಖುಷಿಯ ಕ್ಷಣ.

ಫಲಪ್ರದ ಪುಸ್ತಕ ಬಿಡುಗಡೆಯೂ ಮೇಳದೊಂದಿಗೆ ಹೊಸೆದ ಚಿಕ್ಕ ಕಲಾಪ. ಹಲಸು ಸ್ನೇಹಿ ಕೂಟದೊಂದಿಗೆ ಮನಸಾ ಹದಿಮೂರು ವರುಷಗಳ ನಂಟು. ಅಲ್ಲಿನ ಕಾರ್ಯಕ್ರಮಗಳ ವರದಿ ಅಲ್ಲ, ಸಾರವನ್ನು ಅಡಿಕೆ ಪತ್ರಿಕೆಯಲ್ಲಿ ದಾಖಲಿಸುತ್ತಾ ಬಂದಿದ್ದೆ. ಅದನ್ನೆಲ್ಲಾ ಒಟ್ಟು ಸೇರಿಸಿದ ಗುಚ್ಛ 'ಫಲಪ್ರದ'.

ಕೂಟದ ಎಲ್ಲರೂ ಸುಮನಸ ಸ್ನೇಹಿತರು. ಎಂದೂ ಹಗುರವಾಗಿ ಕಂಡವರಲ್ಲ, ಮಾತನಾಡಿದವರಲ್ಲ. ದರ್ಪವನ್ನು ತೋರಿದವರಲ್ಲ. ಚುಚ್ಚಿ ಮಾತನಾಡಿದವರಲ್ಲ. ಕಷ್ಟ ಕಾಲದಲ್ಲಿ ಬೊಗಸೆ ತುಂಬಿಸಿದವರು. ತಮ್ಮನಂತೆ, ಅಣ್ಣನಂತಿರುವ ಬಾಂಧವ್ಯ. ಭಾವ, ಗುಣ, ಸಹಕಾರಕ್ಕೆ ಹೇಗೆ ಪ್ರತಿಫಲ ಸಲ್ಲಿಸಲಿ? ಕಾಲ ಕೂಡಿ ಬಂತು, 'ಫಲಪ್ರದ' ಪುಸ್ತಕ ಅವರ ಹಸ್ತದಲ್ಲಿಟ್ಟಾಗ ತೃಪ್ತಭಾವ. ಪುಸ್ತಕ ಪ್ರಕಟಣೆಯ ವೆಚ್ಚವನ್ನು ಕೂಟದ ಸ್ನೇಹಿತರು ಭರಿಸಿದ್ದಾರೆ.

ಫಲಪ್ರದ : 'ಹಲಸು ಸ್ನೇಹಿ ಕೂಟ' ಹಿನ್ನೋಟದ ಹೆಜ್ಜೆಗಳು. ಒಂದು ದಾಖಲಾತಿ. ಪುಸ್ತಕಕ್ಕಾಗಿ ಬೇಡಿಕೆ ಸಲ್ಲಿಸಿದವರ ಪಟ್ಟಿ ದೊಡ್ಡದಿದೆ. ಇದು 'ಲಾಭ ಮಾಡಲು' ಪ್ರಕಟಿಸಿದ ಪುಸ್ತಕವಲ್ಲ. ಹಾಗೆಂದು ಉಚಿತವಾದರೆ 'ನಂಗೊಂದಿರಲಿ, ಮನೆಗೆ ಇನ್ನೊಂದಿರಲಿ' ಎಂಬ ಮನವಿ ರಾಚುತ್ತದೆ!

ಒಬ್ಬ ವ್ಯಕ್ತಿ, ಆತನಲ್ಲಿರುವ ಕಲೆ, ಪ್ರಕಟಗೊಂಡ ಕೃತಿ..ಗಳ ಸ್ವೀಕಾರಕ್ಕೆ ಜಾತಿ, ಪಂಥ, ಅಂತಸ್ತು, ಪ್ರತಿಷ್ಠೆಗಳೇ ಮಾನದಂಡವಾಗಬಹುದಾದ ಕಾಲಘಟ್ಟದಲ್ಲಿ 'ಪುಸ್ತಕವನ್ನು ಜನರು ಇಷ್ಟಪಡಬೇಕು' ಎನ್ನುವ ನಿರೀಕ್ಷೆಗಳೇ ಢಾಳಾಗಿ ಕಾಣುತ್ತದೆ.

ಬೇರೆ ಬೇರೆ ಸಂದರ್ಭದಲ್ಲಿ ಇದೆಲ್ಲಾ ಅನುಭವಕ್ಕೆ ಬಂದ ವಿಚಾರಗಳು. ಅಂತಹ ಹತ್ತಾರು ಘಟನೆಗಳಿವೆ. ಮುಂದೆ ಬರೆಯುವೆ.

 

 

Saturday, May 11, 2024

ಹಸಿರು ತುಂಬಿದ ಮನ


 12-4-2024. ಮಂಗಳೂರು ಸನಿಹದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿ.ಸುಧನ್ವನಿಗೆ ಉಪನಯನ. ಬಂಧುಗಳು, ಇಷ್ಟ-ಮಿತ್ರರ ಸಮಾಗಮ. ಲೋಕಾಭಿರಾಮ ಮಾತುಕತೆ. ಮೃಷ್ಟಾನ್ನ ಭೋಜನ. ಓಟಿನ ಸಮಯವಲ್ವಾ... ಒಂದಷ್ಟು ಓಟು-ಗೀಟು ಚರ್ಚೆ. ರಣ ಬಿಸಿಲು ಬೇರೆ. ಹೊಟ್ಟೆ ತಂಪು ಮಾಡಿಕೊಳ್ಳಲು ತಂಪಿನ ಪಾನೀಯಗಳು.

     ಇದರಲ್ಲೇನು ವಿಶೇಷ? ಊಟದ ಪಂಕ್ತಿಯ ಮಧ್ಯೆ ವಟುವಿನ ಹೆತ್ತವರಾದ ಶ್ರೀಮತಿ ಅಂಬಿಕಾ - ಗಿರೀಶ್ ಹೊಳ್ಳರು ಉಪಚಾರ ಮಾಡುತ್ತಾ, ಎಲ್ಲರನ್ನೂ ಪರಿಚಯಿಸುತ್ತಾ ಹೋದರು. ಸ್ವಲ್ಪ ಹೊತ್ತಲ್ಲಿ ಪುನಃ ಬಂದು 'ತಾವು ತೆರಳುವಾಗ ಒಂದೊಂದು ಗಿಡವನ್ನೂ ಕೊಂಡೊಯ್ಯಬೇಕು' ವಿನಂತಿಸಿದರು.

     ಊಟ ಮಾಡಿದ ಬಳಿಕ ಸಿಹಿ ಪೊಟ್ಟಣ, ಐಸ್ಕ್ರೀಮ್, ಐಸ್ಕ್ಯಾಂಡಿ.. ಇತ್ಯಾದಿಗಳೊಂದಿಗೆ ಕಲಾಪ ಪೂರ್ಣಗೊಳ್ಳುತ್ತದೆ. ಆದರೆ ಉಪನಯನಕ್ಕೆ ಆಗಮಿಸಿದವರೆಲ್ಲರ ಕೈಗೆ ಗಿರೀಶ್ ದಂಪತಿ ಹಣ್ಣಿನ ಕಸಿ ಗಿಡಗಳನ್ನು ನೀಡಿದ್ದರು.

ಅಂದು ಮ್ಯಾಂಗೋಸ್ಟಿನ್, ವಿಯೆಟ್ನಾಂ ಹಲಸು, ಮೇಣ ರಹಿತ ಹಲಸು, ಜಂಬೂ ನೇರಳೆ, ಮೈಸೂರು ನೇರಳೆ, ಡ್ರ್ಯಾಗನ್ ಹಣ್ಣು, ಪವಾಡ ಹಣ್ಣು, ಲಕ್ಷ್ಮಣ ಫಲ.. ಹೀಗೆ ವೈವಿಧ್ಯ ಕಸಿಗಿಡಗಳನ್ನು  ಗಿರೀಶ್ ಆಯ್ಕೆ ಮಾಡಿದ್ದರು. 

    ಅನೇಕರು 'ಜಾಗ ಇಲ್ಲ, ಎಲ್ಲಿ ನೆಡಲಿ' ಎನ್ನುವ ಅಸಹಾಯಕತೆಯನ್ನು ತೋರಿದರೂ, 'ಒಂದು ಗಿಡ ಇರಲಿ, ಇದ್ದ ಜಾಗದಲ್ಲಿ ನೆಡೋಣ' ಎಂದು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಂಡು ಗಿಡವನ್ನು ಒಯ್ದಿದ್ದರು. 'ಮ್ಯಾಂಗೋಸ್ಟೀನ್.. ಹಾಗೆಂದರೇನು' ಎನ್ನುವ ಚೋದ್ಯವನ್ನು 'ಗೂಗಲ್ ಮಾಮ' ಉತ್ತರ ನೀಡುತ್ತಿದ್ದ! 'ಎರಡು ವರುಷದಲ್ಲೇ ಹಣ್ಣು ಬಿಡುತ್ತಂತೆ' ಎಂದು ಇನ್ನಷ್ಟು ಮಂದಿಯ ವಿಸ್ಮಯ.

ಎಲ್ಲರಿಗೂ ಒಂದೊಂದು ಗಿಡ. ಆದರೆ ಒಂದಿಬ್ಬರು 'ನನಗೆರಡು ಬೇಕು, ಮೂರು ಇರಲಿ' ಎಂದು ಅಲ್ಲಿನ ಸಹಾಯಕರನ್ನು ವಿನಂತಿ ಮಾಡುತ್ತಿದ್ದರು. 'ನೀವು ಗಿಡ ಕೊಂಡೋಗುವುದು ಮಾತ್ರ. ನಾನೇ ನೆಟ್ಟು ಆರೈಕೆ ಮಾಡಬೇಕಷ್ಟೇ. ಗಂಡನನ್ನು ಛೇಡಿಸುವ ಪತ್ನಿ... ಹೀಗೆ ಕಸಿ ಗಿಡಗಳ ಉಡುಗೊರೆಗಳ ಸುತ್ತ ಮಾತುಗಳ ಸರಮಾಲೆಗಳು.

ಗಿರೀಶ್ ದಂಪತಿಯ ಹಿರಿಯ ಪುತ್ರನ ಉಪನಯನದ ಸಂದರ್ಭದಲ್ಲೂ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದರು. ಅಂದು ಒಯ್ದ ಹಲಸಿನ ಗಿಡದಲ್ಲಿ ಕಳೆದ ವರುಷವೇ ಕಾಯಿ ಬಂದಿದೆ., ಮಾವು ಚೆನ್ನಾಗಿ ರುಚಿಯಾಗಿತ್ತು. ಹೀಗೆ ಹಿಮ್ಮಾಹಿತಿ ನೀಡುವಾಗ ಗಿರೀಶ್ ಮುಖ ಅರಳಿತ್ತು. ಅಂದು ಸಿಹಿ ಪೊಟ್ಟಣವನ್ನು ನೀಡಲು ಸಹ ಸೆಣಬಿನ ಚೀಲ ವ್ಯವಸ್ಥೆ ಮಾಡಿದ್ದರು. ಊಟದ ಎರಡನೇ ಪಂಕ್ತಿ ಮುಗಿಯುವಾಗ ಗಿಡಗಳೆಲ್ಲಾ ಖಾಲಿ ಖಾಲಿ! ಯಾರೋ ಒಬ್ಬರು ತೆಗೆದಿರಿಸಿದ್ದ ಗಿಡವೂ ನಾಪತ್ತೆ!

ಉಪನಯನ ಮುಗಿಸಿ ಹೊರಡುವಾಗ 'ಗಿರೀಶ ಹೊಳ್ಳ ದಂಪತಿಯ ಹಸಿರು ಕಾಳಜಿ' ಮನತುಂಬಿತ್ತು. ಅವರೊಳಗಿನ 'ಸಾರ್ಥಕ್ಯ ಭಾವ'ದ ಖುಷಿ ಆಗಾಗ್ಗೆ ಇಣುಕುತ್ತಿದ್ದುವು.

 ನಮ್ಮ ನಡುವೆ ಅದೆಷ್ಟೋ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತವೆ. ನಡೆಯಲಿ, ಅವೆಲ್ಲಾ ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಏರ್ಪಡುತ್ತವೆ. ಇದರ ಮಧ್ಯೆ ಹಸಿರಿಗೂ ಜಾಗ ಇರಲಿ.