Saturday, May 11, 2024

ಒಂದು ಆಪ್ತ ಸಂಜೆ

 

 ಆ ಸಂಜೆ 'ಒಂದಾನೊಂದು ಕಾಲದಲ್ಲಿ'ದ್ದುದು ಅಲ್ಲ. ನಿನ್ನೆ ಅಂದರೆ 10-5-2024. ಅಕ್ಷಯ ತದಿಗೆ. 

     ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ವೇದವ್ಯಾಸ ರಾಮಕುಂಜ ಅವರ 'ಶ್ರೀಮಾ' ಮನೆಯಲ್ಲಿ ಅಕ್ಷಯ ತದಿಗೆಯ ಸಂಭ್ರಮ. ಕೆಲವು ವರುಷಗಳಿಂದ ಅರ್ಥಪೂರ್ಣವಾಗಿ ನಡೆಯುತ್ತಿದೆ. ಆಪ್ತೇಷ್ಟರು, ನೆಂಟರಿಷ್ಟರು ಭಾಗಿ. ಉಪನ್ಯಾಸ, ಗೌರವ, ಸಾಂಸ್ಕೃತಿಕ ಕಲಾಪಗಳ ಬಳಿಕ ಪುಷ್ಕಳ ಉಪಾಹಾರ.

     ಇಲ್ಲಿ ಯಾವುದೇ ಶೋಕಿ ಇಲ್ಲ. ಸ್ವ-ಪ್ರತಿಷ್ಠೆ ಇಲ್ಲ. ಕಾಣಿಸಿಕೊಳ್ಳುವ ಚಾಳಿ ಇಲ್ಲ. ಢಾಂಢೂಗಲಿಲ್ಲ. ವೇದವ್ಯಾಸರ ಬಳಿ ಇವ್ಯಾವುವೂ ಸುಳಿಯುವುದಿಲ್ಲ ಬಿಡಿ.

     ನಿನ್ನೆ ಏಳು ಮಂದಿಗೆ ಗೌರವಾರ್ಪಣೆ. ಅವರಲ್ಲಿ ನಾನೂ ಒಬ್ಬ. (ಅದಕ್ಕಾಗಿ ಈ ಬರಹವಲ್ಲ) ವೇದಿಕೆಯಲ್ಲಿ ಏಳು ಮಂದಿ ಮಾತ್ರ. ಅಧ್ಯಕ್ಷರಿಲ್ಲ, ಅತಿಥಿಗಳಿಲ್ಲ, ಶುಭಾಶಂಸಕರಿಲ್ಲ. ಅತ್ತಿತ್ತ ಓಡಾಡುತ್ತಲೇ ಇರುವ ನಿರೂಪಕರಿಲ್ಲ. ಅದು 'ಮನೆಯ ಕಾರ್ಯಕ್ರಮ, ಮನದ ಕಾರ್ಯಕ್ರಮ'. 

     ಇಲ್ಲಿ ಎತ್ತಿ ಹೇಳಬೇಕಾದ ಅಂಶವೆಂದರೆ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶಕುಮಾರ್ ಅವರ ಅಭಿನಂದನಾ ಭಾಷಣ. ಮೊದಲಿಗೆ 'ಅಕ್ಷಯ ತೃತೀಯ' ಕುರಿತಾದ ಶಾಸ್ತ್ರೀಯ ಮಾಹಿತಿ. ಬಳಿಕ ಬಯೋಡಾಟ ಓದದೆ, ಗೌರವಕ್ಕೆ ಪಾತ್ರರಾದವರನ್ನು 'ತಾನು ಕಂಡಂತೆ' ನಿರೂಪಿಸಿದ, ಮೇಲ್ನೋಟಕ್ಕೆ 'ಕಾಣದ' ವೃತ್ತಿ ಕೌಶಲ, ಗುಣಗಳನ್ನು ಪ್ರಸ್ತುತಪಡಿಸುವ ನುಡಿ ಗೌರವ ತುಂಬಾ ಆಪ್ತವಾಯಿತು.

     ಅನೇಕ ಸಭೆಗಳಲ್ಲಿ ಅಭಿನಂದನಾ ಭಾಷಣಗಳನ್ನು ಕೇಳಿದ್ದೇನೆ. ಒಂದಷ್ಟು ಕಡೆ ಅನುಭವಿಸಿದ್ದೇನೆ. ಕೆಲವೆಡೆ 'ಎದ್ದು ಹೊರ ನಡೆದಿದ್ದೇನೆ'! ಮತ್ಸರದಿಂದಲ್ಲ! ನಂಜಿನಿಂದಲ್ಲ! ಅದನ್ನು ಕೇಳುವ ಶ್ರವಣ ಶಕ್ತಿ ಕುಂದಿಹೋದುದರಿಂದ..! ಅಪಸವ್ಯಗಳಿಗೆ ಕಿವಿ ಕಿವುಡಾದ್ದರಿಂದ..!

ಸಂಮಾನಿತರನ್ನು ಸಾಲಾಗಿ ಕುಳಿತುಕೊಳ್ಳಿಸಿ, ಅವರ ಕೊರಳಿಗೆ ಹಾರವನ್ನು ಬಿಸಾಡುವ, ಶಾಲನ್ನು ಒಗೆಯುವ, ಹಣ್ಣುಹಂಪಲು-ಗುಣಕಥನ ಫಲಕಗಳನ್ನು ಮಡಿಲಿಗೆ ತಳ್ಳುವ ಹಲವು ಸಂಮಾನಗಳಿಗೆ ಸಾಕ್ಷಿಯಾಗಿದ್ದೇನೆ. ಸಂಮಾನ ಮಾಡುವವರ ತಪ್ಪಲ್ಲ. ಇಪ್ಪತ್ತು, ಇಪ್ಪತ್ತೈದು, ಮೂವತ್ತೈದು ಮಂದಿ ಸಂಮಾನಿತರು ಇದ್ದರೆ ಹೀಗೇ ಆಗೋದು... ಆಟೋಟ ಸ್ಪರ್ಧೆಯಲ್ಲಿ ಬಹುಮಾನ ಕೊಟ್ಟ ಹಾಗೆ..! ಇದು ಯಾರನ್ನು ಉದ್ದೇಶಿಸಿ ಬರೆದುದಲ್ಲ. ಅನುಭವಿಸಿದ ಸತ್ಯ. 'ಇದು ನಮಗೆ ಹೇಳಿದ್ದು' ಎಂದು ತಿಳಿದುಕೊಂಡರೆ ಅದು ನನ್ನ ಸಮಸ್ಯೆಯಲ್ಲ.

ಅಧ್ಯಕ್ಷ, ಮುಖ್ಯ ಅತಿಥಿ, ಗೌರವ ಅತಿಥಿ, ಗೌರವ ಉಪಸ್ಥಿತಿ.. ಇವೆಲ್ಲಾ ಇದ್ದರೂ ತೊಂದರೆಯಿಲ್ಲ. ಸಂಮಾನ, ಪ್ರಶಸ್ತಿ ಪಡೆಯುವವರ ಫೋಕಸ್, ಅವರ ಸಾಧನೆಗಳು ಪ್ರಸ್ತುತ ಆಗದೇ ಇದ್ದರೆ 'ಬರಿಗುಲ್ಲು, ನಿದ್ದೆಗೇಡು' ಅಷ್ಟೇ. ಒಂದು ಕಾರ್ಯಕ್ರಮ. ಒಂದು ಸಂಮಾನ! ಮರುದಿವಸ 'ನಾನು/ನಾವು ಇಂತಹವರಿಗೆ ಸಂಮಾನ ಮಾಡಿದೆವು' ಎನ್ನುವ ಆತ್ಮಶಾಂತಿ. ಹಾಗೆಂದು ತುಂಬಾ ಅರ್ಥಪೂರ್ಣವಾಗಿ ಆಯೋಜಿಸುವ ಸಂಘಟಕರೂ ಇದ್ದಾರೆ.

     ವೇದವ್ಯಾಸರ ಮನೆಯಲ್ಲಿ ಜರುಗಿದ ಗೌರವ ಸಮಾರಂಭ ತೀರಾ ತೀರಾ ಭಿನ್ನ. ಯಾರಿಗೆ ಗೌರವ ನೀಡುತ್ತೇವೋ ಅವರನ್ನು ಇದ್ದ ಸಮಯದಲ್ಲಿ ಪೂರ್ತಿಯಾಗಿ 'ಫೋಕಸ್' ಮಾಡುವ, 'ಯಾಕಾಗಿ ಸಂಮಾನ ಮಾಡುತ್ತೇವೆ' ಎಂಬ ನಿರೂಪಣೆ. ಕಾರ್ಯಕ್ರಮ ಮುಗಿದ ಮೇಲೂ ಚಿತ್ತಪಟಲದಲ್ಲಿ ಅಳಿಸಿಹೋಗದ ಅಪರೂಪದ ಕಾರ್ಯಕ್ರಮ ಅನುಕರಣೀಯ.

     ಪ್ರೊ.ವೇದವ್ಯಾಸರು, ಪತ್ನಿ ಶೈಲಶ್ರೀ, ಮಗಳು ನಿವೇದಿತಾ, ಸಹೋದರ ರಾಜಮಣಿ ಬಿ.ಸಿ.ರೋಡು, ಆಪ್ತೇಷ್ಟರು ಮನೆತುಂಬಾ ಓಡಾಡಿಕೊಂಡು ಇಡೀ ಕಲಾಪವನ್ನು 'ಮನೆಯ ಕಾರ್ಯಕ್ರಮ'ವನ್ನಾಗಿ ರೂಪಿಸಿದ್ದಾರೆ. ʼಅಕ್ಷಯ ತದಿಗೆಯು ಲಕ್ಷ್ಮೀಯು ಜನಿಸಿದ ದಿನ. ಹಾಗಾಗಿ ಇಂದು ಚಿನ್ನ ಖರೀದಿಸುವುದರ ಬದಲು  ಚಿನ್ನವನ್ನು ದಾನ ಮಾಡಬೇಕಾದ ದಿವಸʼ ಎಂದು ಸಾಂದರ್ಭಿಕವಾಗಿ  ಹೇಳಿದ ಡಾ.ಶ್ರೀಶಕುಮಾರ್ ಅವರ ಮಾತು ಮರೆವಿಗೆ ಜಾರಲಾರದು. ಅ

ಸಮ್ಮನಸ್ಸಿನ ಪ್ರೊ.ವೇದವ್ಯಾಸರಿಗೆ ಅಭಿನಂದನೆಗಳು.

(ಸಂಮಾನಿತರು : ‍ಶ್ರೀಗಳಾದ... ಪುತ್ತೂರಿನ ಹಿರಿಯ ನ್ಯಾಯವಾದಿ ಸುಬ್ರಹ್ಮಣ್ಯಂ ಕೊಳತ್ತಾಯ, ಹಿರಿಯ ದೈವ ನರ್ತಕರಾದ ವಸಂತ ನಲಿಕೆ, ಬೆಂಗಳೂರಿನ ಇಸ್ರೋ ಸಂಸ್ಥೆಯ ಕೃಷ್ಣಮೋಹನ್‌ ಶ್ಯಾನುಭೋಗ್‌, ಅಧ್ಯಾಪಿಕೆ ಶ್ರೀಮತಿ ಕವಿತಾ ಅಡೂರು, ಹಿರಿಯ ಗಾರೆ ಕೆಲಸಗಾರರಾದ ನಾರಾಯಣ ಮೇಸ್ತ್ರಿ, ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ.ಎಚ್.ಜಿ.ಶ್ರೀಧರ್‌ ಮತ್ತು ನಾರಾಯಣ)

0 comments:

Post a Comment