12-4-2024. ಮಂಗಳೂರು ಸನಿಹದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿ.ಸುಧನ್ವನಿಗೆ ಉಪನಯನ. ಬಂಧುಗಳು, ಇಷ್ಟ-ಮಿತ್ರರ ಸಮಾಗಮ. ಲೋಕಾಭಿರಾಮ ಮಾತುಕತೆ. ಮೃಷ್ಟಾನ್ನ ಭೋಜನ. ಓಟಿನ ಸಮಯವಲ್ವಾ... ಒಂದಷ್ಟು ಓಟು-ಗೀಟು ಚರ್ಚೆ. ರಣ ಬಿಸಿಲು ಬೇರೆ. ಹೊಟ್ಟೆ ತಂಪು ಮಾಡಿಕೊಳ್ಳಲು ತಂಪಿನ ಪಾನೀಯಗಳು.
ಇದರಲ್ಲೇನು ವಿಶೇಷ? ಊಟದ ಪಂಕ್ತಿಯ ಮಧ್ಯೆ
ವಟುವಿನ ಹೆತ್ತವರಾದ ಶ್ರೀಮತಿ ಅಂಬಿಕಾ - ಗಿರೀಶ್ ಹೊಳ್ಳರು ಉಪಚಾರ ಮಾಡುತ್ತಾ, ಎಲ್ಲರನ್ನೂ ಪರಿಚಯಿಸುತ್ತಾ
ಹೋದರು. ಸ್ವಲ್ಪ ಹೊತ್ತಲ್ಲಿ ಪುನಃ ಬಂದು 'ತಾವು ತೆರಳುವಾಗ ಒಂದೊಂದು ಗಿಡವನ್ನೂ ಕೊಂಡೊಯ್ಯಬೇಕು'
ವಿನಂತಿಸಿದರು.
ಊಟ ಮಾಡಿದ ಬಳಿಕ ಸಿಹಿ ಪೊಟ್ಟಣ, ಐಸ್ಕ್ರೀಮ್,
ಐಸ್ಕ್ಯಾಂಡಿ.. ಇತ್ಯಾದಿಗಳೊಂದಿಗೆ ಕಲಾಪ ಪೂರ್ಣಗೊಳ್ಳುತ್ತದೆ. ಆದರೆ ಉಪನಯನಕ್ಕೆ ಆಗಮಿಸಿದವರೆಲ್ಲರ
ಕೈಗೆ ಗಿರೀಶ್ ದಂಪತಿ ಹಣ್ಣಿನ ಕಸಿ ಗಿಡಗಳನ್ನು ನೀಡಿದ್ದರು.
ಅಂದು ಮ್ಯಾಂಗೋಸ್ಟಿನ್, ವಿಯೆಟ್ನಾಂ ಹಲಸು, ಮೇಣ ರಹಿತ ಹಲಸು, ಜಂಬೂ ನೇರಳೆ, ಮೈಸೂರು ನೇರಳೆ, ಡ್ರ್ಯಾಗನ್ ಹಣ್ಣು, ಪವಾಡ ಹಣ್ಣು, ಲಕ್ಷ್ಮಣ ಫಲ.. ಹೀಗೆ ವೈವಿಧ್ಯ ಕಸಿಗಿಡಗಳನ್ನು ಗಿರೀಶ್ ಆಯ್ಕೆ ಮಾಡಿದ್ದರು.
ಅನೇಕರು 'ಜಾಗ ಇಲ್ಲ, ಎಲ್ಲಿ ನೆಡಲಿ' ಎನ್ನುವ ಅಸಹಾಯಕತೆಯನ್ನು
ತೋರಿದರೂ, 'ಒಂದು ಗಿಡ ಇರಲಿ, ಇದ್ದ ಜಾಗದಲ್ಲಿ ನೆಡೋಣ' ಎಂದು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಂಡು
ಗಿಡವನ್ನು ಒಯ್ದಿದ್ದರು. 'ಮ್ಯಾಂಗೋಸ್ಟೀನ್.. ಹಾಗೆಂದರೇನು' ಎನ್ನುವ ಚೋದ್ಯವನ್ನು 'ಗೂಗಲ್ ಮಾಮ'
ಉತ್ತರ ನೀಡುತ್ತಿದ್ದ! 'ಎರಡು ವರುಷದಲ್ಲೇ ಹಣ್ಣು ಬಿಡುತ್ತಂತೆ' ಎಂದು ಇನ್ನಷ್ಟು ಮಂದಿಯ ವಿಸ್ಮಯ.
ಎಲ್ಲರಿಗೂ ಒಂದೊಂದು ಗಿಡ. ಆದರೆ ಒಂದಿಬ್ಬರು 'ನನಗೆರಡು ಬೇಕು,
ಮೂರು ಇರಲಿ' ಎಂದು ಅಲ್ಲಿನ ಸಹಾಯಕರನ್ನು ವಿನಂತಿ ಮಾಡುತ್ತಿದ್ದರು. 'ನೀವು ಗಿಡ ಕೊಂಡೋಗುವುದು ಮಾತ್ರ.
ನಾನೇ ನೆಟ್ಟು ಆರೈಕೆ ಮಾಡಬೇಕಷ್ಟೇ. ಗಂಡನನ್ನು ಛೇಡಿಸುವ ಪತ್ನಿ... ಹೀಗೆ ಕಸಿ ಗಿಡಗಳ ಉಡುಗೊರೆಗಳ
ಸುತ್ತ ಮಾತುಗಳ ಸರಮಾಲೆಗಳು.
ಗಿರೀಶ್ ದಂಪತಿಯ ಹಿರಿಯ ಪುತ್ರನ ಉಪನಯನದ ಸಂದರ್ಭದಲ್ಲೂ ಗಿಡಗಳನ್ನು
ಉಡುಗೊರೆಯಾಗಿ ನೀಡಿದ್ದರು. ಅಂದು ಒಯ್ದ ಹಲಸಿನ ಗಿಡದಲ್ಲಿ ಕಳೆದ ವರುಷವೇ ಕಾಯಿ ಬಂದಿದೆ., ಮಾವು ಚೆನ್ನಾಗಿ
ರುಚಿಯಾಗಿತ್ತು. ಹೀಗೆ ಹಿಮ್ಮಾಹಿತಿ ನೀಡುವಾಗ ಗಿರೀಶ್ ಮುಖ ಅರಳಿತ್ತು. ಅಂದು ಸಿಹಿ ಪೊಟ್ಟಣವನ್ನು
ನೀಡಲು ಸಹ ಸೆಣಬಿನ ಚೀಲ ವ್ಯವಸ್ಥೆ ಮಾಡಿದ್ದರು. ಊಟದ ಎರಡನೇ ಪಂಕ್ತಿ ಮುಗಿಯುವಾಗ ಗಿಡಗಳೆಲ್ಲಾ ಖಾಲಿ
ಖಾಲಿ! ಯಾರೋ ಒಬ್ಬರು ತೆಗೆದಿರಿಸಿದ್ದ ಗಿಡವೂ ನಾಪತ್ತೆ!
ಉಪನಯನ ಮುಗಿಸಿ ಹೊರಡುವಾಗ 'ಗಿರೀಶ ಹೊಳ್ಳ ದಂಪತಿಯ ಹಸಿರು ಕಾಳಜಿ'
ಮನತುಂಬಿತ್ತು. ಅವರೊಳಗಿನ 'ಸಾರ್ಥಕ್ಯ ಭಾವ'ದ ಖುಷಿ ಆಗಾಗ್ಗೆ ಇಣುಕುತ್ತಿದ್ದುವು.
ನಮ್ಮ ನಡುವೆ ಅದೆಷ್ಟೋ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತವೆ. ನಡೆಯಲಿ, ಅವೆಲ್ಲಾ ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಏರ್ಪಡುತ್ತವೆ. ಇದರ ಮಧ್ಯೆ ಹಸಿರಿಗೂ ಜಾಗ ಇರಲಿ.
0 comments:
Post a Comment