Thursday, January 15, 2009

ಮುಳುಗಿದ ನೌಕೆ ತೇಲಿತು

ಆಡಳಿತ ಯಂತ್ರವು 'ಬಡತನದ ರೇಖೆಗಿಂತ ಕೆಳಗಿನವರು' ಎಂಬ ಶಬ್ಧವನ್ನು ಆಗಾಗ್ಗೆ ಬಳಸುತ್ತಿರುತ್ತದೆ. ಸರಿ, ಈ 'ಕೆಳಗಿನವರಿಗಿಂತಲೂ ಕೆಳಗಿನ'ವರಿಗೆ ಯಾವ ರೇಖೆ?

ಇಲ್ಲಿ ನೋಡಿ, ಪುತ್ತೂರು ಕೆಮ್ಮಾಯಿಯ ರಾಮಣ್ಣ ಗೌಡರು ಯಾವ 'ರೇಖೆಗೆ' ಸೇರುತ್ತಾರೋ ಗೊತ್ತಿಲ್ಲ! ಅದೊಂದು ಜೋಪಡಿ. ಅಲ್ಲ, ಕೋಣೆ! ಹಳೆ ಕಟ್ಟಡದ ಒಂದು ಪಾರ್ಶ್ವ. ಮತ್ತೊಂದು ಪಾರ್ಶ್ವದಲ್ಲಿ ಅಂಗಡಿಯಿತ್ತು. ಲೋಟ ನೆಲದಲ್ಲಿಟ್ಟರೆ ನೆಟ್ಟಗೆ ನಿಲಲಾಗದ ನೆಲ. ಅರೆ ಬಿರಿದ ಗೋಡೆಗಳು. ಮುರಿದ ಬಾಗಿಲು, ಸೋರುವ ಸೂರು. ಮಳೆಗಾಲದಲ್ಲಿ ಕೊಡೆ ಹಿಡಿದೇ ಬೆಳಗು ಮಾಡುವ ಸ್ಥಿತಿ.

ಸ್ನಾನ-ಶೌಚಕ್ಕೆ ಬಟ್ಟೆಯ ತೆರೆ-ಮರೆ. ಯಾವುದಕ್ಕೂ ರಿಪೇರಿಗೆ ಬಗ್ಗದ ಸೂರು. ಕಳೆದ ಮಳೆಗಾಲಾರಂಭದಲ್ಲಂತೂ ಗೋಡೆಯೂ ಬೀಳಬೇಕೇ. ಇದಕ್ಕೆ ತಿಂಗಳಿಗೆ ಐವತ್ತು ರೂಪಾಯಿ ಬಾಡಿಗೆ! ಇದು ರಾಮಣ್ಣ ಗೌಡರ ಮನೆ. ಹೆಂಡತಿ, ಮಗಳೊಂದಿಗೆ 17 ವರುಷದ ವಾಸ. ಬಂಧು-ಬಳಗ ಇದ್ದರೂ ಅವರನ್ನು ಮರೆತು ಎರಡು ದಶಕ ಸಂದಿತು.

ಜೊತೆಗೆ ಅಂಟಿದ ಅನಾರೋಗ್ಯ. ನಡೆಯಲು ಸಾಹಸಪಡುವ, ಎಲ್ಲರಂತೆ ಉಣ್ಣಲು ಪರದಾಡುವ ದೇಹಸ್ಥಿತಿ. ಯಾರೊಬ್ಬರೂ ಹತ್ತಿರ ಸೇರಿಸಿಕೊಳ್ಳಲಾಗದ ಬದುಕು. ಪತ್ನಿ ರುಕ್ಮಿಣಿ. ಅಂಗನವಾಡಿ ಸಹಾಯಕಿ. ಗಂಡ ಅಶಕ್ತನಾದಾಗ ನೆರಳಾದರು. ಹೋಟೆಲ್, ಕೂಲಿ, ಮೇಸ್ತ್ರಿಯಾಗಿ....ಕುಟುಂಬವನ್ನು ಹೇಗೋ ನಿಭಾಯಿಸುತ್ತಿದ್ದ ಗಂಡನ ಅಶಕ್ತತೆ ರುಕ್ಮಿಣಿಯವರಿಗೆ ಅಗ್ನಿಪರೀಕ್ಷೆಯಾಗಿತ್ತು

ಅಂಗನವಾಡಿಯಲ್ಲಿ ಅರ್ಧಹೊತ್ತು ಕೆಲಸ. ಉಳಿದ ಹೊತ್ತಲ್ಲಿ ಕೂಲಿಕೆಲಸ. ತನಗೆ ಸಿಗುವ ಒಂಭೈನೂರು ಮತ್ತು ಗಂಡನಿಗೆ ಸರಕಾರದಿಂದ ಬರುವ ನಾಲ್ಕುನೂರು ರೂಪಾಯಿ, ಕೂಲಿಯಲ್ಲಿ ಸಿಕ್ಕುವ ನಾಲ್ಕು ಕಾಸು - ಇವಿಷ್ಟೇ ಸಂಪಾದನೆ. ಇದರಲ್ಲಿ ಸಂಸಾರದ ನೌಕೆ ತೇಲಬೇಕು! ನೌಕೆ ಮುಳುಗುತ್ತಿದ್ದಾಗ ಎತ್ತಿ ಹಿಡಿವವರೇ ಇಲ್ಲದ ದಿನಗಳನ್ನು ರುಕ್ಮಿಣಿ ನೆನೆಯುತ್ತಾರೆ - 'ಒಲೆ ಮೇಲೆ ನೀರಿಟ್ಟು, ಗಂಡ ತರುವ ಅಕ್ಕಿಗಾಗಿ ಕಾದು ಕಾದು ಬೇಸತ್ತು, ಬರಿಗೈಯಲ್ಲಿ ಬಂದಾಗ ಪಕ್ಕದ ಮನೆಯಿಂದ ಅಕ್ಕಿ ಸಾಲ ತಂದು ಹೊಟ್ಟೆ ತುಂಬಿಸುತ್ತಿದ್ದೆವು.'

ಮಗಳು ವನಿತಾ. ಪಿ.ಯು.ಸಿ.ಉತ್ತೀರ್ಣಳಾಗಿದ್ದಾಳೆ! ಇಂತಹ ಸ್ಥಿತಿಯಲ್ಲೂ ದಂಪತಿಗಳು ಮಗಳನ್ನು ಶಾಲೆಗೆ ಕಳುಹಿಸಿರುವುದು ನಿಜಕ್ಕೂ ಶಹಬ್ಬಾಸ್! ಗೌಡರು ರಾತ್ರಿ ಹೊತ್ತು ಹೆಂಡತಿ ಮತ್ತು ಮಗಳನ್ನು ಮನೆಯ ಯಜಮಾನರ ಮನೆಗೆ 'ತಂಗಲು' ಕಳುಹಿಸುತ್ತಿದ್ದರು. 'ನಾನಾದರೋ ಗಂಡನ ಜತೆ ಉಳಿಯಬಹುದಿತ್ತು. ಆದರೆ ಬೆಳೆಯುತ್ತಿರುವ ಮಗಳ ಜವಾಬ್ದಾರಿ-ರಕ್ಷಣೆ ಮುಖ್ಯ ಅಲ್ವಾ' - ಇಬ್ಬರ ಕಾಳಜಿ.

ಅಲ್ಲಿ ಅಲ್ಪಸ್ವಲ್ಪ ಕೆಲಸ. ಕೊಟ್ಟ ತಿಂಡಿ ಮಗಳಿಗೆ ಬುತ್ತಿಗೆ. ಮಿಕ್ಕುಳಿದುದನ್ನು ಗಂಡ-ಹೆಂಡತಿ ಹಂಚಿ ತಿನ್ನುತ್ತಿದ್ದರು. ಉಡಲು ಒಂದೇ ವಸ್ತ್ರ. 'ನಮ್ಮ ಸ್ಥಿತಿ ನೋಡಿ ಮರುಗಿ ಸೀರೆ ಕೊಟ್ಟವರೂ ಇದ್ದಾರೆ' ಎನ್ನುವ ರುಕ್ಮಿಣಿ ಅಮ್ಮನಿಗೆ, 'ಇಷ್ಟೆಲ್ಲಾ ಬಡತನವಿದ್ದರೂ ಮಗಳು ಶಾಲೆಗೆ ಹೋಗಬೇಕು' ಎಂಬ ಛಲ. ಕಳೆದ ವರುಷದ ಪಠ್ಯ ಪುಸ್ತಕ ವನಿತಾಳಲ್ಲಿ ಹೊಸತಾಗುತ್ತದೆ. ಬರೆಯುವ ಪುಸ್ತಕ, ಶಾಲಾ ಶುಲ್ಕಗಳನ್ನು ದಾನಿಗಳು ನೀಡಿದ್ದಾರೆ.

ಮಧ್ಯಂತರ ಮತ್ತು ಬೇಸಿಗೆ ರಜಾದಲ್ಲಿ ವನಿತಾ ಎಲ್ಲರಂತೆ 'ರಜಾಮಜಾ' ಕಳೆಯುವುದಿಲ್ಲ! ಬದಲಿಗೆ, ಗೇರು ಫ್ಯಾಕ್ಟರಿಯಲ್ಲಿ ದುಡಿದು ಅಷ್ಟಿಷ್ಟು ಸಂಪಾದಿಸಿದುದರಲ್ಲಿ ತನ್ನ ಆವಶ್ಯಕತೆಯನ್ನು ಸರಳವಾಗಿ ಪೂರೈಸಿಕೊಳ್ಳುತ್ತಾಳೆ. ಅಪ್ಪಾಮ್ಮಂದಿರ ಸಂಕಷ್ಟ ನೋಡಿದ ವನಿತಾ, 'ನಾನು ಶಾಲೆಗೆ ಹೋಗದೆ ದುಡಿದು ನಿಮ್ಮಿಬ್ಬರನ್ನು ಸಾಕುತ್ತೇನೆ' ಅಂದಾಗ ಗೌಡರು ಬಿಕ್ಕಿಬಿಕ್ಕಿ ಅಳುತ್ತಾರೆ. ಮಗಳು ಆಗಾಗ್ಗೆ ಈ ಮಾತನ್ನು ಹೇಳುವುದು ಅವರಿಗೆ ಸಮ್ಮತವಾಗುವುದಿಲ್ಲ.

ಓಟು ಪಟ್ಟಿಯಲ್ಲಿ ಈ ಕುಟುಂಬದ ದಾಖಲಾತಿ ಇದೆ. ಮತ್ತೆಲ್ಲಿಯೂ ಇಲ್ಲ. ಜನಮಾನಸದಲ್ಲಿಯೂ ಕೂಡಾ! 'ಬಡತನ ಇರಲಿ, ಆದರೆ ತೀರಾ ಬಡತನ ಬೇಡ.' ತಮಗೆ ಸೂರಿಗಾಗಿ ಈ ದಂಪತಿಗಳು ಅಲೆಯದ ಕಚೇರಿಯಿಲ್ಲ. ಅರ್ಜಿ ಸಲ್ಲಿಸಿ ಸಲ್ಲಿಸಿ ಅವರ ಲೇಖನಿಯ ಮಸಿ ಆರಿಹೋಗಿದೆ! ಓಟು ಕೇಳಲು ಬಂದವರ ಆಶ್ವಾಸನೆ ಕೊಟ್ಟವರ ಮುಖಪರಿಚಯ ಇವರಿಗಿದೆ. ಓಟಿನ ಬಳಿಕ 'ಕಿರು ನಗು'ವೂ ಇಲ್ಲವಂತೆ. ಇದುವರೆಗೆ ಸಂಪಾದಿಸಿದ್ದು 'ಅನುಕಂಪ' ಮಾತ್ರ.

ಸ್ಥಳೀಯ ಆರೋಗ್ಯ ಸಹಾಯಕಿ ಶ್ರೀಮತಿ ಚಂಚಲಾಕ್ಷಿಯವರು ಈ ಕುಟುಂಬವನ್ನು ಹತ್ತಿರದಿಂದ ಬಲ್ಲವರು. ತನ್ನ ಕೈಲಾದಷ್ಟು ಸಹಾಯ-ಸಹಕಾರವನ್ನು ಅಷ್ಟಿಷ್ಟು ಮಾಡುತ್ತಾ ಬಂದವರು. ಬಹುಶಃ ಇವರ ಕಷ್ಟಕ್ಕೆ ಸ್ಪಂದಿಸುತ್ತಾ ಬಂದವರು ಇವರು ಮಾತ್ರ ಎಂದರೂ ಅತಿಶಯವಲ್ಲ. ಚಂಚಲಾಕ್ಷಿಯವರ ಮೂಲಕ ಗೌಡರ ದುಃಖದ ಕಥೆ ಪುತ್ತೂರಿನ ರೋಟರಿ ಅಧ್ಯಕ್ಷ ಎಂ.ಎಸ್. ರಘುನಾಥ ರಾಯರನ್ನು ತಲಪಿತು.

ಅಷ್ಟು ಹೊತ್ತಿಗೆ ಯೋಗಾಯೋಗವೋ ಎಂಬಂತೆ ರುಕ್ಮಿಣಿಯವರ ಪಾಲಿನ ಹತ್ತು ಸೆಂಟ್ಸ್ ಜಾಗವೂ ಅವರಿಗೆ ಒದಗಿತು. ಅದರಲ್ಲಿ ತಲೆಎತ್ತಿತು - 'ರೋಟರಿ ಮನೆ.' ಗಟ್ಟಿಮುಟ್ಟಾದ ಕಿಟಕಿ ಬಾಗಿಲುಗಳು, ಟೈಲ್ಸ್ ಹಾಕಿದ ನೆಲ, ಮೇಲೆ ಸೀಲಿಂಗ್, ಅಡುಗೆಮನೆ, ಸ್ನಾನದ ಕೊಠಡಿ, ಶೌಚಾಲಯ, ಸುಣ್ಣ-ಬಣ್ಣಗಳಿಂದ ಕೂಡಿದ ಮನೆ! ಈ ಮನೆಯೊಳಗೆ ರುಕ್ಮಿಣಿ-ವನಿತಾ ಪ್ರವೇಶಿಸಿದ ತಕ್ಷಣ ಆಡಿದ ಮಾತುಗಳು ಇವು - 'ಅಬ್ಬಾ...ಇನ್ನು ನಿರ್ಭಿತಿಯಿಮ್ದ ಸ್ನಾನ ಮಾಡಬಹುದಲ್ಲಾ!'. ಮನದಲ್ಲಿ ಮಡುಗಟ್ಟಿನ ಮೌನ ಅಂದು ಮಾತಾಡಿತು.

ಇಷ್ಟು ಸುಲಭದಲ್ಲಿ ಮನೆ ಹೇಗಾಯಿತು? ಋಣಾನುಬಂಧ ರೂಪೇಣ ಪಶುಪತ್ನಿಸುತಾಲಯ - ಇದು ರಾಮಣ್ಣ ಗೌಡರ ಪಾಲಿಗೆ ಸತ್ಯವಾಯಿತು. ಇಷ್ಟು ವರ್ಷ ತಮ್ಮ ಅಳಿಯನ ದುಸ್ಥಿತಿಯನ್ನು ನೋಡುತ್ತಾ, ಅಸಹಾಯಕರಾಗಿದ್ದ ಅತ್ತೆ ಕೊರಪ್ಪೊಳು ಕರೆದು ಜಾಗ ನೀಡಿದರು. ರೋಟರಿ ಕ್ಲಬ್ ಮನೆ ಕಟ್ಟಿ ಕೊಡುವ ಸಂಕಲ್ಪ ತೊಟ್ಟಿತು. ರೋಟರಿ ಹಿರಿಯ ಸದಸ್ಯ ಡಾ. ಶ್ಯಾಮ್ ಪೂರ್ಣ ಬೆಂಬಲದ ಭರವಸೆ. ಉಮೇಶ್ ಆಚಾರ್, ಡಾ.ಶ್ರೀಪ್ರಕಾಶ್ ಹೆಗಲೆಣೆ. ಆಸ್ಕರ್ ಆನಂದ್ ವಯರಿಂಗ್. ಖ್ಯಾತ ಇಂಜಿನಿಯರ್ ಹಾಗೂ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದರವರು ನಲವತ್ತು ಸಾವಿರದಷ್ಟು ಹೆಚ್ಚುವರಿ ಹಣ ನೀಡಿ ಮನೆಯನ್ನು ನಿರ್ಮಣದ ಜವಾಬ್ದಾರಿ ಹೊತ್ತರು. ನ್ಯಾಯವಾದಿ ಕೆ.ಆರ್.ಆಚಾರ್ ದಾಖಲೆ ಪತ್ರಗಳನ್ನು ಸರಿಪಡಿಸಿದರು - ಕೇವಲ ಮೂರೇ ವಾರಗಳಲ್ಲಿ ಮನೆ ಸಿದ್ಧ.

'ಈಗಿದ್ದ ಜೋಪಡಿ ಮನೆಯಿಂದ ಎದ್ದೇಳಲು ಹೇಳಿದ್ದಾರೆ. ಮುಂದೇನು ಮಾಡಬೇಕೆಂದು ಕಾಣುತ್ತಿರಲಿಲ್ಲ ಈ ಹೊತ್ತಲ್ಲಿ ನಮಗೆ ಮನೆ ಸಿಗದಿರುತ್ತಿದ್ದರೆ, ಮರದ ಬುಡದಲ್ಲೋ, ರಸ್ತೆ ಬದಿಯಲ್ಲೋ ನರಳಬೇಕಿತ್ತು' ಎನ್ನುವಾಗ ಇಡೀ ಕುಟುಂಬ ಕಣ್ಣೀರಿಡುತ್ತದೆ. 'ಚಂದದ ಮನೆ ಸಿಕ್ಕಿದರೆ ಸಾಲದು, ರಾಮಣ್ಣ ಗೌಡರ ಬದುಕು ಹಸನಾಗಬೇಕು. ಅದಕ್ಕಾಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಿಸಲು, ಮಗಳು ಉನ್ನತ ಶಿಕ್ಷಣ ಪಡೆದು ಉದ್ಯೋಗ ಅರಸಿಕೊಳ್ಳಲು ರೋಟರಿ ನೆರವಾಗಲಿದೆ' ಎಂಬ ಸಂಕಲ್ಪ ಅಧ್ಯಕ್ಷ ರಘುನಾಥ ರಾಯರದು.

'ರೋಟರಿ ಮನೆ'ಯಲ್ಲಿ ಗೃಹಪ್ರವೇಶವಾಗಿದೆ. ಹೊಸ ಜೀವನ ಶುರುವಾಗಿದೆ. ನಿತ್ಯ ಬದುಕಿನ ಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಸುದ್ದಿ ಕೇಳಿದ ಗೌಡರ ಬಂಧುಗಳೆನಿಸಿಕೊಂಡವರು ಈಗ ಬರಲಾರಂಭಿಸಿದ್ದಾರಂತೆ! ಇದು ಜೀವನ. ಇದುವೇ ಜೀವನ. ಈ ಕುಟುಂಬಕ್ಕೆ ಈಗ ಬೇಕಾಗಿರುವುದು ಅನುಕಂಪವಲ್ಲ. ನೆರವಿನ ಆಸರೆ.

0 comments:

Post a Comment