Thursday, January 15, 2009

ರಟ್ಟೆ ಬಲದ ಅಕ್ಕಿ ರವೆ

'ನೋಡಿ ಸಾರ್, ರಾಜಮುಡಿ ಅಕ್ಕಿಯ ರವೆ. ಕಲಬೆರಕೆ ಇಲ್ಲ. ಒಳ್ಳೆ ರುಚಿ.' ಬೆಂಗಳೂರು ಕೃಷಿಮೇಳದ ಮಳಿಗೆಯೊಂದರಲ್ಲಿ ಹೊಯ್ಸಳ ಎಸ್. ಅಪ್ಪಾಜಿ ವಿವರಣೆ.

'ಏನ್ರೀ ನಿಮ್ ರವೆಯ ವಿಶೇಷ' - ಒಬ್ಬರ ಕೀಟಲೆ ಪ್ರಶ್ನೆ.

'ಸರ್, ಇದು ಮಿಲ್ಲಿನದಲ್ಲ; ರಾಗಿ ಕಲ್ಲಲ್ಲಿ ಬೀಸಿರೋ ರವೆ.' ಅಷ್ಟರೊಳಗೆ ಪ್ರಶ್ನೆ ಕೇಳಿದವರೇ ನಾಪತ್ತೆ! ಇರಲಿ, ಕಲ್ಲಿನಲ್ಲಿ ಬೀಸಿದ್ದಕ್ಕೆ ಏನು ಪ್ರತ್ಯೇಕತೆ?

ಅಪ್ಪಾಜಿ ಹೇಳುತ್ತಾರೆ: ಯಂತ್ರದೊಳಗೆ ರವೆಯಾಗುವಾಗ ಸಹಜವಾಗಿ ಅಕ್ಕಿಯೂ ಬಿಸಿಯಾಗುತ್ತದೆ. ಇದರಿಂದ ರವೆಯ ಸಹಜ ರುಚಿ ಮತ್ತು ಪರಿಮಳ ಕಡಿಮೆಯಾಗುತ್ತದೆ. ಒಂದರ್ಥದಲ್ಲಿ ರವೆ ಬೆಂದ ಹಾಗೆ. ರುಚಿ, ಪರಿಮಳ ಉಳಿಯಲು ಸಾವಯವ ಕೃಷಿಯ ಪಾಲೂ ಇರಬಹುದು.
ಮತ್ತೆ ತಿರುಗಿತು ರಾಗಿಕಲ್ಲು

ಇವರು ಅಕ್ಕಿ ತೊಳೆದು ಮೊದಲು ಎರಡು-ಎರಡೂವರೆ ಗಂಟೆ ಕಾಲ ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ರಾಗಿ ಕಲ್ಲಲ್ಲಿ ಬೀಸುತ್ತಾರೆ. 'ಯಾವ ಕಾರಣಕ್ಕೂ ಅಕ್ಕಿ ನೀರಿನಲ್ಲಿ ನೆನೆಯಬಾರದು' ಎಚ್ಚರಿಸುತ್ತಾರೆ ಅಪ್ಪಾಜಿ. ನೆರಳಿನಲ್ಲಿ ಒಣಗಿಸಿದರೆ ನಂತರ ಸಣ್ಣ ಅಡ್ಡವಾಸನೆ ಬರುತ್ತದಂತೆ. ಸಿದ್ಧ ರವೆಯನ್ನಿವರು ಜರಡಿಯಲ್ಲಿ ಗಾಳಿಸಿ ದಪ್ಪ ತರಿ, ಸಣ್ಣ ರವೆ ಮತ್ತು ನಯ ರವೆ - ಹೀಗೆ ಮೂರು ವಿಧ. ಸಣ್ಣ ತರಿಗಳು ಉಪ್ಪಿಟ್ಟಿಗೆ, ನಯವಾದದ್ದು ಇಡ್ಲಿಗೆ.

ಉಣ್ಣೇನಹಳ್ಳಿಯ ವಸುಂಧರೆ ಜೈವಿಕ ಕೃಷಿಕರ ಸೇವಾ ಸಂಸ್ಥೆಯ ಸ್ವಸಹಾಯ ಗುಂಪುಗಳು ಈ ರವೆಯ ತಯಾರಕರು. ಅನುಕ್ರಮವಾಗಿ ಹದಿನೈದು ಮತ್ತು ಹದಿನಾಲ್ಕು ಮಂದಿಯಿರುವ 'ವಸುಂಧರೆ' ಮತ್ತು 'ವಾರಿಧಿ' - ಪುರುಷರ ಸ್ವಸಹಾಯ ಗುಂಪುಗಳು ಮತ್ತು ಹದಿನಾಲ್ಕು ಮಂದಿಯಿರುವ 'ವಸುಂಧರೆ' ಸ್ತ್ರೀ ಸ್ವಸಹಾಯ ಗುಂಪಿನ ಉತ್ಪನ್ನವಿದು. ಪುರುಷ ಗುಂಪಿನವರು ಸಾವಯವ ರೀತಿಯಲ್ಲಿ ಬೆಳೆಸುವ ರಾಜಮುಡಿ ಅಕ್ಕಿಯನ್ನು 'ಪುಡಿಗಟ್ಟುವವರು' ಸ್ತ್ರೀ ಗುಂಪಿನವರು.

ಮೂರು ವಿಭಾಗಗಳ ಕೆಲಸವಿದು. ಒಂದು ವಿಭಾಗ ಅಕ್ಕಿ ತೊಳೆದು, ಒಣಗಿಸಿಕೊಡುತ್ತದೆ. ಮತ್ತೊಂದು ತಂಡ ಕಲ್ಲಿನಲ್ಲಿ ಬೀಸಿ ರವೆ ಮಾಡುತ್ತದೆ. ಮೂರನೆಯದು ಪ್ಯಾಕಿಂಗ್ ವಿಭಾಗ.

ಐವತ್ತು ಕಿಲೋ ಅಕ್ಕಿಯು ರವೆಯಾಗುವಾಗ ಮೂರು ಕಿಲೋ ಲುಕ್ಸಾನು! ಅಕ್ಕಿಯ ಬೆಲೆ ಇಪ್ಪತೈದು ರೂಪಾಯಿ. ರವೆಗೆ ಇಪ್ಪತ್ತೆಂಟು. ಮೂರು ರೂಪಾಯಿ ಉತ್ಪಾದನಾ ವೆಚ್ಚ. ಇದರಲ್ಲಿ ಅಕ್ಕಿ ಬೀಸಿದವರಿಗೆ ಕಿಲೋಗೆ ಒಂದು ರೂಪಾಯಿ. ಉಳಿದೆರಡು ರೂಪಾಯಿಯಲ್ಲಿ ತಲಾ ಇಪ್ಪತ್ತೈದು ಪೈಸೆ ಮಾತೃಸಂಸ್ಥೆಗೆ ಮತ್ತು ಸ್ತ್ರೀಶಕ್ತಿ ಗುಂಪಿಗೆ. ಮಿಕ್ಕುಳಿದದ್ದರ ಸಮಾನ ಹಂಚಿಕೆ.
'ಕೇವಲ ಭತ್ತ ಮಾರಾಟ ಮಾಡುವುದಲ್ಲ, ಮೌಲ್ಯವರ್ಧನೆ ಮಾಡಬೇಕು ಎಂದು ಸ್ಥಳೀಯ ಸಂಪನ್ಮೂಲ ಬಳಸಿ ಕೆಲಸ ಶುರು ಮಾಡಿದೆವು' ಎನ್ನುತ್ತಾರೆ ಅಪ್ಪಾಜಿ.

ಆದೇಶ ಬಂದಂತೆ ರವೆ ತಯಾರಿ. ಸಿದ್ಧ ಮಾಡಿಟ್ಟುಕೊಳ್ಳುವುದಿಲ್ಲ. 'ಕನಿಷ್ಠ ಐವತ್ತು ಕಿಲೋಕ್ಕೆ ಆದೇಶ ಬರಬೇಕು. ಅದಕ್ಕಿಂತ ಕಡಿಮೆಯಾದರೆ ತಯಾರಿ ವೆಚ್ಚವೇ ಹೆಚ್ಚಾಗುತ್ತದೆ.'

ಕಿಲೋ, ಅರ್ಧ ಕಿಲೋಗಳ ಪ್ಯಾಕಿಂಗ್. ಆದೇಶ ಕೊಟ್ಟು, ಮೊತ್ತವನ್ನು ಬ್ಯಾಂಕಿಗೆ ಪಾವತಿಸಿದರೆ ಲಾರಿ ಮೂಲಕ ಪಾರ್ಸೆಲ್ ಪಾರ್ಸೆಲ್. 'ವರುಷದಲ್ಲಿ ಕನಿಷ್ಠ ಒಂದೂವರೆ ಟನ್ ಬಿಕರಿ.' ಮಳೆಗಾಲದಲ್ಲಿ ತಯಾರಿ ಕಷ್ಟ. ಬಿಸಿಲು ಬಾರದಿದ್ದರೆ ಗುಣಮಟ್ಟ ಕೆಡುತ್ತದೆ.

'2007ರ ಜಿಕೆವಿಕೆ ಕೃಷಿಮೇಳದಲ್ಲಿ ಉಚಿತ ಮಳಿಗೆ ಸಿಕ್ಕಿತ್ತು. ಒಳ್ಳೆ ಪ್ರತಿಕ್ರಿಯೆಯೂ. ಒಯ್ದವರು ಪುನಃ ಫೋನಿಸಿ ಬೇಕು ಎಂದರು.' ಸ್ಥಳೀಯ ಮಾರಾಟವಷ್ಟೇ ಆಗುತ್ತಿದ್ದ ಅಕ್ಕಿ ರವೆ ರಾಜಧಾನಿ ಹೊಕ್ಕಿತು!

ಬೆಂಗಳೂರಿನ ಸಹಜ ಸಮೃದ್ಧ, ಗ್ರೀನ್ ಫೌಂಡೇಶನ್, ಜೈವಿಕ ಕೃಷಿಕರ ಸೊಸೈಟಿ ಮೊದಲಾದ ಸಂಸ್ಥೆಗಳ ಸಂಪರ್ಕ. 'ಅವರಿಂದ ಪಡೆದ ಗ್ರಾಹಕರು ಈಗ ನೇರ ಸಂಪರ್ಕಿಸುತ್ತಿದ್ದಾರೆ. ಬೆಂಗಳೂರಲ್ಲೇ ದೊಡ್ಡ ಗ್ರಾಹಕವರ್ಗವಿದೆ. ಮೈಸೂರು, ಹಾಸನಗಳಲ್ಲಿ ನಮ್ಮ ರವೆಯನ್ನೇ ನಿತ್ಯ ತಿನ್ನುವವರಿದ್ದಾರೆ!' ಎಂಬ ಸಂತಸ ಇವರದು.
ರಾಜಮುಡಿ
ಹಿಂದೆ ಮೈಸೂರು ಮಹಾರಾಜರಿಗೆ ಹೊಳೆನರಸೀಪುರದಿಂದ ಸರಬರಾಜಾಗುತ್ತಿದ್ದ ಅಕ್ಕಿಯಿದು. ರಾಜರಿಗೆ ಮುಡಿಪಾದುದರಿಂದ 'ರಾಜಮುಡಿ'. ನಾಲ್ಕೂವರೆ ಅಡಿ ಬೆಳೆಯುತ್ತದೆ. ಅಕ್ಕಿ ಸಿಹಿ. 'ಒಂದು ಕಪ್ನಿಂದ ನಾಲ್ಕು ಕಪ್ ಅನ್ನ ಆಗುವಷ್ಟು ಒದಗು.' ಕೆಂಪು ತಳಿಯೂ ಇದೆ - 'ರಾಜಭೋಗ'. 'ಇತ್ತೀಚೆಗೆ ಕಡಿಮೆ ಅವಧಿಯ ಹೈಬ್ರಿಡ್ ತಳಿಗಳು ದಾಂಗುಡಿಯಿಡುತ್ತಿವೆ. ರಾಜಮುಡಿ ಹಂತಹಂತವಾಗಿ ಕೃಷಿಕ ಒಲವು ಕಳಕೊಳ್ಳುತ್ತಿದೆ' - ಹೊಯ್ಸಳರ ಖೇದ ಒಂದೆಡೆ. 'ವರುಷಕ್ಕೆ 50-60 ಕ್ವಿಂಟಾಲ್ ಅಕ್ಕಿ ಮಾರಾಟವಾಗುತ್ತದೆ' ಎಂಬ ಸಂತಸ ಮತ್ತೊಂದೆಡೆ.

(94494 62397, 08175-272525)

1 comments:

marike said...

ನನಗೆ ರಾಜಮುಡಿ ಬೈಹುಲ್ಲು ಮಾತ್ರ ಗೊತ್ತು - ಅದೂ ಅಸಲಿಯೋ ಅಲ್ಲವೋ?
ಕಳೆದ ವರ್ಷ ೨೦೦೦ ಕ೦ತೆ ಬೈಹುಲ್ಲು ಹಾಕಿದ ಯೋಗೀಶ ಇದು ಒಳ್ಳೆಯ ರಾಜ
ಮುಡಿ ಬೈಹುಲ್ಲು ಎ೦ದು ಶಿಫಾರಸು ಮಾಡಿದ್ದ, ಅವನ ಬೆನ್ನಿಗೇ ಕೆಲಸದಾಳು ಪಿಜಿನ
ಅ೦ದ "ರಾಜಮುಡಿ ಎಡ್ಡೆ ಮೆತ್ತನೆ ಇಪ್ಪೋಡು, ಇ೦ದು ಕೊದ೦ಟಿದ ಲೆಕ್ಕ ಉ೦ಡು"
(ರಾಜಮುಡಿ ಮೃದುವಾಗಿರಬೇಕು, ಇದು ಕೋಲು ಕಡ್ಡಿಯ೦ತಿದೆ). ಒ೦ದು ವರ್ಷ
ಅನುಭವ ಹಿರಿಯ ನಾನು ಆ ಹುಲ್ಲು ಮೃದುವಾಗಿಲ್ಲದಿದ್ದರೂ, ಒ೦ದೊ೦ದು ಕ೦ತೆಯೂ
೩- ೪ ಕೆಜಿ ತೂಕವಿದ್ದು, ನನ್ನ ಹಟ್ಟಿಯ ಒ೦ದು ವರ್ಷಕ್ಕೂ ಮೀರಿದ ಅವಶ್ಯಕತೆ ನೀಗಿ
ಸಿದ ಲಾಭ ಪಡೆದಿದ್ದೇನೆ. ಈ ವರ್ಷ ಅ೦ತಹುದೇ ಬೈ ಹುಲ್ಲು ಸಿಕ್ಕಿಲ್ಲ, ಮಲ್ಲಿಪಟ್ಣ ಕಡೆಯ
ಮೃದುವಾದ ಹುಲ್ಲು ಸಿಕ್ಕಿದೆ, ಆದರೆ ತೂಕ ಕಮ್ಮಿ, ೮ ತಿ೦ಗಳಲ್ಲಿ ಮುಗಿದುಹೋಗುತ್ತ
ದೆಯೇನೋ ಎ೦ಬ ಆತ೦ಕ. ದಯವಿಟ್ಟು ಹೇಳಿ ರಾಜಮುಡಿ ಹುಲ್ಲು ಹೇಗಿರುತ್ತದೆ ?

Post a Comment