Sunday, May 31, 2009

ಪುತ್ತೂರಿನಲ್ಲಿ ಅಮೆರಿಕನ್ ಹಣ್ಣು ಕೃಷಿಕ ಕೆನ್ ಲವ್


ಹವಾಯ್ಯ ಹಣ್ಣು ಕೃಷಿಕ ಕೆನ್ ಲವ್ ಜೂನ್ 2ರಂದು ಪುತ್ತೂರಿನ ಗಿಡ ಗೆಳೆತನ ಸಂಘ ಸಮೃದ್ಧಿಯ ಆಶ್ರಯದಲ್ಲಿ ತಮ್ಮ ಹಣ್ಣು ಕೃಷಿ ಮತ್ತು ಮೌಲ್ಯವರ್ಧನೆಯ ಬಗ್ಗೆ ಸ್ಲೈಡ್ ಶೋ ನಡೆಸಲಿದ್ದಾರೆ.

ಹಣ್ಣು ಬೆಳೆಗಳ ಭಾರೀ ವೈವಿಧ್ಯ ಇರುವ ಹವಾಯ್ಯಲ್ಲಿ ಕೃಷಿಕರಿಗೆ ಅವರದೇ ಆದ ಸಮಸ್ಯೆಗಳಿವೆ. ರೈತರು ಜಮೀನು ಮಾರಿ naಗರಕ್ಕೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಕೃಷಿಕರ ಆದಾಯ ಹೆಚ್ಚಿಸುವ ಕೆಲವು ಉಪಾಯಗಳನ್ನು ಕೆನ್ ಹೇಳಿ ಕೊಡುತ್ತಿದ್ದಾರೆ. 'ಟ್ವೆಲ್ವ್ ಟ್ರೀಸ್ ಪ್ರಾಜೆಕ್ಟ್' ಇದರಲ್ಲೊಂದು.

ಕೆನ್ ಹಣ್ಣುಗಳ ಕೃಷಿ, ಮೌಲ್ಯವರ್ಧನೆಯಲ್ಲಿ ಎತ್ತಿದ ಕೈ. ಕೃಷಿಕ ಸಮುದಾಯಕ್ಕಾಗಿ ಒಂದು ಸಂಸ್ಥೆ ಮಾಡುವಷ್ಟು ಕೆಲಸ ಮಾಡುತ್ತಿದ್ದಾರೆ. 'ಕೃಷಿಕರು ತಂತಮ್ಮ ಅನುಭವಗಳನ್ನು ಇತರ ಕೃಷಿಕರಿಗೆ ಹಂಚುತ್ತಿರಬೇಕು' ಎನ್ನುವುದು ಅವರ ನಂಬಿಕೆ.

ಭಾರತವನ್ನು ತುಂಬ ಪ್ರೀತಿಸುವ ಈ ಮಾಜಿ ಫೋಟೋಜರ್ನಲಿಸ್ಟ್ ಇಲ್ಲಿಗೆ ಭೇಟಿ ಕೊಡುವುದು ಇದೇ ಮೊದಲು. `ಅಡಿಕೆ ಪತ್ರಿಕೆ ನನ್ನ ಮೇಲೆ ಮಾಧ್ಯಮ ಬೆಳಕು ಚೆಲ್ಲುವುದರ ಮೂಲಕ ಆದ ಭಾರತೀಯ ಸಂಪರ್ಕ ನನ್ನನ್ನು ಇಲ್ಲಿಗೆ ಸೆಳೆತಂದಿದೆ' ಎನ್ನುತ್ತಾರೆ ಕೆನ್.

ಭಾರತೀಯ ಅಡುಗೆ, ಹಲಸು ಕೃಷಿ, ಇಲ್ಲಿನ ಉಪ್ಪಿನಕಾಯಿ ತಯಾರಿ, ಬಿರಿಯಾಣಿ - ಅವರಿಗೆ ತುಂಬಾ ಇಷ್ಟ. ಜೂನ್ ಐದರಿಂದ ಕೇರಳದ ವಯನಾಡಿನಲ್ಲಿ ನಡೆಯುವ ಹಲಸಿನ ಮೇಳದಲ್ಲೂ ಇವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕೃಷಿಕರು ತಮ್ಮ ಒಂದಷ್ಟು ಉತ್ಪನ್ನವನ್ನು ನೇರ ಗ್ರಾಹಕರಿಗೆ ತಲಪಿಸುವ ವ್ಯವಹಾರಕುಶಲಿಗಳೂ ಆಗಬೇಕೆನ್ನುವುದು ಕೆನ್ ವಾದ. ಅವರು ಜೂನ್ 2ರಂದು ಪುತ್ತೂರಿನ ಜಿ.ಎಲ್.ಸಭಾಭವನ (ಬ್ಲಡ್ ಬ್ಯಾಂಕ್) ದಲ್ಲಿ ಬೆಳಗ್ಗೆ 10 ಗಂಟೆಗೆ ತಮ್ಮ ಕೃಷಿ ಸಾಧನೆಗಳ ಚಿತ್ರಪ್ರದರ್ಶನ ನಡೆಸಿ ವಿಚಾರ ವಿನಿಮಯ ಮಾಡಲಿದ್ದಾರೆ. ಆಸಕ್ತರಿಗೆ ಸ್ವಾಗತ.

Wednesday, May 20, 2009

ಕಾಯಕಲ್ಪಕ್ಕೆ ಕಾದಿದೆ-ಐಗಿನಬೈಲು ಶಾಲೆ


ಸರಕಾರಿ ಶಾಲಾ ಆಧ್ಯಾಪಕರನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಸವಲತ್ತು, ರಜಾ, ವೇತನ.. ಸಮಾಜದಲ್ಲಿ ಗೌರವದ ಸ್ಥಾನ. ಭಾವೀ ಸಮಾಜವನ್ನು ನಿರ್ಮಿಸುವ ರೂವಾರಿಗಳು ಎಂಬ ಹಿರಿಮೆ-ಗರಿಮೆ. ಇಲ್ನೋಡಿ, ಸಾಗರದ ಐಗಿನಬೈಲಿನ ಚೆನ್ನಮ್ಮಾಜಿ ಪ್ರೌಢ ಶಾಲೆಯ ಆಧ್ಯಾಪಕರು ವೇತನರಹಿತವಾಗಿ ದುಡಿಯುತ್ತಿದ್ದಾರೆ!
ಎಲ್ಲರೂ ಕೃಷಿಮನೆಯಿಂದ ಬಂದವರು. ಆದರೆ ಮುಂದೆ 'ನಾವೂ ಸರಕಾರಿ ಉದ್ಯೋಗಿ'ಗಳಾಗುವೆವು ಎಂಬ ಆಸೆಕಂಗಳು. 1993ರಲ್ಲಿ ಈ ಶಾಲೆಯ ಆರಂಭ. ಖಾಸಗಿ ಆಡಳಿತ. ಆರು ಆಧ್ಯಾಪಕರು. ಎಂಟರಿಂದ ಹತ್ತರ ತನಕ ತರಗತಿ. ಐವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬಹುತೇಕ ಎಲ್ಲರೂ ಕೃಷಿ ಹಿನ್ನೆಲೆಯವರು. ಊರವರು ದಾನವಾಗಿ ನೀಡಿದ ಹತ್ತೆಕ್ರೆ ಜಾಗ ಶಾಲೆಯ ಆಸ್ತಿ.
ಜಾಗ ಇದ್ದರೆ ಸಾಕೇ? ಅಭಿವೃದ್ಧಿ ಮಾಡಲು 'ಎಂ ವಿಟಮಿನ್' ಬೇಕಲ್ವಾ! ಆಡಳಿತ ಮಂಡಳಿ ಆರ್ಥಿಕವಾಗಿ ಸದೃಢವಲ್ಲ. ಅಷ್ಟೋ ಇಷ್ಟೋ ಕೂಡಿಹಾಕಿದ್ದು ನಿರ್ವಹಣೆಗೆ ಸರಿಸಮ. ಶಾಲಾ ಶುಲ್ಕ ಉಳಿಸಿಕೊಳ್ಳುವ ಹಾಗಿಲ್ಲ. ಸರಕಾರಕ್ಕೆ ಸಲ್ಲಬೇಕು. ಡೊನೇಶನ್ ಪಡೆಯೋಣವೆಂದರೆ, ಎಲ್ಲರೂ ಹಿಂದುಳಿದವರೇ. ಆದರೂ ಕೈಲಾದಷ್ಟು ನೀಡಿದ್ದಾರೆ.
ಮುಖ್ಯಗುರು ಮಹಾಬಲೇಶ್ವರ ಹೇಳುತ್ತಾರೆ - 'ಪಾಪ, ಕೆಲವು ಮಕ್ಕಳಿಗೆ ಶಾಲಾ ಫೀಸ್ ಕಟ್ಟಲೂ ತ್ರಾಸವಾಗುತ್ತಿದೆ. ಅಂತಹವರ ಫೀಸನ್ನು ಆಧ್ಯಾಪಕರೆಲ್ಲರೂ ಸೇರಿ ನೀಡುತ್ತೇವೆ. ಕೊನೆಯ ಪಕ್ಷ ವಿದ್ಯಾರ್ಥಿಗಳು ಶಾಲೆಗೆ ನಿಯಮಿತವಾಗಿ ಬರಲಿ.' ಶಾಲಾ ಫಲಿತಾಂಶ ಶೇ.80ರ ಹತ್ತಿರವಿದೆ. ಕ್ರೀಡೆಯಲ್ಲೂ ಮುಂದು.
ಎಂ.ಎಸ್.ಐ.ಎಲ್., ಸ್ಥಳೀಯ ಗ್ರಾಮಪಂಚಾಯತ್ ಮತ್ತು ಸೇವಾ ಸಂಸ್ಥೆಗಳು ಕೈಜೋಡಿಸಿ, ಎರಡು ಶೌಚಾಲಯ ನಿರ್ಮಿಸಿವೆ. ಶಾಲಾ ಕಟ್ಟಡ ತೀರಾ ಶಿಥಿಲ. ಕಟ್ಟಡ ನೋಡಿ 'ಶಾಲೆ' ಅಂತ ಗುರುತಿಸುವುದು ಕಷ್ಟ. ಹೇಗೋ ಹೊಂದಿಸಿಕೊಂಡು ಹದಿನೈದು ವರುಷಗಳಿಂದ ವಿದ್ಯಾಸರಸ್ವತಿಯ ಆರಾಧನೆ ನಡೆಯುತ್ತಿದೆ. 'ಈ ವರೆಗೆ ಕೆಲಸ ಮಾಡಿ ಒಗ್ಗಿಹೋಗಿದೆ. ಇನ್ನೆಲ್ಲಿಗೆ ಹೋಗಲಿ' ಎನ್ನುವ ಅಧ್ಯಾಪಕ ಗುಂಡಪ್ಪ, 'ನಮಗೆ ಕೆಲಸ ಮಾಡಿ ಗೊತ್ತು, ಮುಂದಿನದು ಗೊತ್ತಿಲ್ಲ' ಎನ್ನುತ್ತಾರೆ ಮುಖ್ಯಗುರು. ಎಲ್ಲಾ ಆಧ್ಯಾಪಕರ ಒಳ ಮನಸ್ಸು ಇದೇ.
ವೇತನ ಅನುದಾನಕ್ಕಾಗಿ ನೀಡಿದ ಮನವಿಗಳ ಕಡತ ದೊಡ್ಡದಾಗಿದೆ. 'ಕಳೆದ ಆರೇಳು ವರುಷಗಳಿಂದ ಮಂಜೂರಾತಿಯು ಬಜೆಟ್ನಲ್ಲಿ ಇನ್ನೇನು ಸೇರುತ್ತದೆ ಎಂದು ನಿರೀಕ್ಷಿಸುತ್ತಿದ್ದಂತೆ ಮಾಯ! ಆದರೆ ಈ ವರುಷದ ಬಜೆಟ್ನಲ್ಲಿ ಶಾಲೆಯನ್ನು ಸೇರಿಸಿದ್ದಾರೆ' ಎಂಬ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಶಾಲಾಡಳಿತದ ಆಧ್ಯಕ್ಷ ಚೌಡಪ್ಪನವರು. ಸರಕಾರಿ ಅನುದಾನ ಸಿಕ್ಕಿದರೆ ಎಲ್ಲಾ ಅಧ್ಯಾಪಕರೂ ಸರಕಾರಿ ವೇತನ ಪಡೆಯುತ್ತಾರೆ.
ಹತ್ತೆಕ್ರೆಯಲ್ಲಿ ಕೃಷಿ ಮಾಡಿ, ಬರುವ ಆದಾಯವನ್ನು ಶಾಲಾಭಿವೃದ್ಧಿಗೆ ಬಳಸಲು ನೀಲನಕ್ಷೆ ಸಿದ್ಧವಾಗುತ್ತಿದೆ. ಬೆಂಗಳೂರಿನ ಫಲದಾಯಿ ಪೌಂಡೇಶನ್ನ ಮುಖ್ಯಸ್ಥ ಹಾಗೂ ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಸಿ.ಎಂ.ಎನ್.ಶಾಸ್ತ್ರಿಯವರು ಈಗಾಗಲೇ ಐದಂಕೆ ಮೊತ್ತ ನೀಡಿದ್ದಾರೆ. ಪೌಂಡೇಶನ್ ಮೂಲಕ ಮಕ್ಕಳಿಗೆ ಕೃಷಿಯ ನೇರ ಪಾಠ.
ಕಳೆದ ಸಾಲಿನಲ್ಲಿ ಮಕ್ಕಳೇ ಸಾವಿರಕ್ಕೂ ಮಿಕ್ಕಿ ತುಳಸಿ ಗಿಡಗಳನ್ನು ಮತ್ತು ಜೀರಿಗೆ ಮೆಣಸು ಕೃಷಿ ಮಾಡಿದ್ದಾರೆ. ಪೌಂಡೇಶನ್ನಿಂದ ಖರೀದಿ. ಈ ವರುಷ ಶತಾವರಿ ಕೃಷಿ. ಮರದ ಬುಡದಲ್ಲಿ ಬಿದ್ದ ಅಳಲೆಕಾಯಿ, ತಾರೆಕಾಯಿಗಳ ಸಂಗ್ರಹ. ಇದರಿಂದಾಗಿ ಶಾಲೆಗೂ ಒಂದಷ್ಟು ಮೊತ್ತ, ಜತೆಗೆ ಮಕ್ಕಳಿಗೂ ಪಾಠ. ಕೃಷಿಯನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಪ್ರತ್ಯೇಕವಾಗಿ ಕಲಿಸಲಾಗುತ್ತದೆ. 'ವಿಶಾಲ ಸ್ಥಳವಿದೆ. ಶಾಲಾಜಗಲಿಯಲ್ಲಿ ಕುಳಿತು ಪಶುಮಂದೆಯನ್ನು ಮೇಯಲು ಬಿಡುವುದು ಇಲ್ಲಿ ಆಭ್ಯಾಸವಾಗಿದೆ. ಹಾಗಾಗಿ ಮೊದಲಾಗಬೇಕಾದುದು ಆವರಣಕ್ಕೆ ಬೇಲಿ ವ್ಯವಸ್ಥೆ' ಮುಖ್ಯಗುರು ಆವಶ್ಯಕತೆಯತ್ತ ಬೊಟ್ಟು ಮಾಡುತ್ತಾರೆ..
ಇಲ್ಲಿ ಬೆಳೆದ ಯಾವುದೇ ವಸ್ತುಗಳು ಪೌಂಡೇಶನ್ ಮೂಲಕ ಮಾರಾಟ. ಅವರಿಂದ ಖರೀದಿಸಿದ ಕಡಲಾಚೆಯ ವ್ಯಾಪಾರಿ ಬಂಧುವೊಬ್ಬರು ಶಾಲೆಯ ಸ್ಥಿತಿಯನ್ನು ಕಂಡು ತಮ್ಮ ಕೊಡುಗೆಯನ್ನೂ ಪ್ರಕಟಿಸಿದ್ದರು.'ಕೃಷಿಯಿಂದ ಶಾಲೆಗೆ ಒಂದಷ್ಟು ಆದಾಯ ತರಬಹುದು. ವಿದ್ಯಾರ್ಥಿಗಳು, ಆಧ್ಯಾಪಕರಿಗೆ ಉತ್ಸಾಹವಿದೆ. ಹೆತ್ತವರ ಪ್ರೋತ್ಸಾಹವಿದೆ'-ಶಾಸ್ತ್ರಿಯವರ ದೂರದೃಷ್ಟಿ. ಎಲ್ಲವೂ ಸರಿಹೋದರೆ, ನಿಕಟ ಭವಿಷ್ಯದಲ್ಲಿ ಹಳ್ಳಿ ಶಾಲೆ 'ಸರ್ವ ಸಂಪನ್ಮೂಲ'ಗಳನ್ನು ಹೊಂದುವಂತಾದೀತು. ಈಗಾಗಲೇ ಅಡಿಕಟ್ಟು ನಿರ್ಮಾಣವಾಗಿದ್ದು ಕಟ್ಟಡ ಮೇಲೇಳಬೇಕಷ್ಟೇ. ಅಕ್ಷರಪ್ರೀತಿಯ ಮನಸ್ಸುಗಳು ಸ್ಪಂದಿಸಿದರೆ ಕಷ್ಟವಲ್ಲ.



Friday, May 15, 2009

ಹಲಸು ಹೊಲಸಲ್ಲ!

ಹಲಸು - ಬಡವರ ಹಣ್ಣು! ಈ ವಿಶೇಷಣ ಯಾಕೆ ಅಂಟಿಕೊಂಡಿತೋ?

ಒಂದು ಕಾಲಘಟ್ಟದಲ್ಲಿ ಬಡತನವನ್ನು ನೀಗಿದ್ದು ಹಲಸು. ತುತ್ತಿಗೂ ತತ್ವಾರದ ಸಮಯದಲ್ಲಿ ಕೃಷಿಕಾರ್ಯಗಳನ್ನು ಮುನ್ನಡೆಸಿದ್ದು ಹಲಸು. ಮಾಂಬಳ, ಹಪ್ಪಳ, ಸೋಂಟೆ ಅನ್ನುತ್ತಾ ಮೌಲ್ಯವರ್ಧನೆಯಾಗುತ್ತಿತ್ತು. ಹಲಸು ಬಡವಲ್ಲ. ಅದು ಶ್ರೀಮಂತ.

ನಾಲ್ಕೈದು ತಿಂಗಳ ಹಲಸಿನ ಫಸಲನ್ನು ನಂಬಿ ವರ್ಷವಿಡೀ ಬದುಕುವ ಕುಟುಂಬಗಳೆಷ್ಟು ಬೇಕು? 'ಮುಂದುವರಿದಿದ್ದೇವೆ' ಅನ್ನುವ ಈ ಕಾಲಘಟ್ಟದಲ್ಲೂ ಕೆಲವು ಹಳ್ಳಿಯ ಉಸಿರಿರುವುದು ಹಲಸಲ್ಲೇ ತಾನೆ. ದಶಕಗಳ ಹಿಂದೆ ದಕ್ಷಿಣ ಕೇರಳದ ಬಡವರನ್ನು ಉಳಿಸಿದ್ದು ಮರಗೆಣಸಾದರೆ, ಮಲೆನಾಡಿನ ಈ ಭಾಗವನ್ನು ಆಧರಿಸಿದ್ದು-ಹಲಸು.

ಬಾಲ್ಯದ ನೆನಪುಗಳು ಇನ್ನೂ ಮಾಸಿಲ್ಲ - ಅನ್ನದ ಬದಲಿಗೆ ಹಲಸಿನ ಪಲ್ಯದಂತಹ ತಿಂಡಿ (ಚಂಗುಳಿ) ತಿಂದು ದಿನವಿಡೀ ದುಡಿಯುತ್ತಿದ್ದ ಚೆನ್ನಪ್ಪ, ತಿಪ್ಪ, ಆನಂದ, ವಾಸು..ನೆನಪಿಗೆ ಬರುತ್ತಾರೆ. ಕೆಲಸ ಮುಗಿಸಿ ಬರುವಾಗ ತಮ್ಮ ಮಕ್ಕಳಿಗೆ ಹಲಸಿನ ಹಣ್ಣಿನ ಅರ್ಧ ಭಾಗವನ್ನು ತಲೆಮೇಲೆ ಹೊತ್ತು ತರುವ ಮಾತೆಯರ ಚಿತ್ರ ಮಿಂಚಿ ಮರೆಯಾಗುತ್ತದೆ! ಮಳೆಗಾಲಕ್ಕಾಗಿ ಹಲಸಿನ ಹಪ್ಪಳವನ್ನು ಮಾಡುವ ಹಳ್ಳಿ ಸಡಗರ ಈಗೆಲ್ಲಿ?

ಶಿರಸಿಯ ರೇಖಾ ಶರಶ್ಚಂದ್ರರಲ್ಲಿಗೆ ಹೋಗಿ. ಹಲಸಿನ ಹಪ್ಪಳದಲ್ಲೇ ಮುಳುಗಿರುತ್ತಾರೆ. ಸಾಗರದ ಗೀತಕ್ಕ ಹಲಸಿನ ನೂರಕ್ಕೂ ವಿವಿಧ ಖಾದ್ಯಗಳನ್ನು ತಯಾರಿಸುವುದರಲ್ಲಿ ನಿಪುಣೆ. ಕೇರಳದ 'ಉರವು' ಮೌಲ್ಯವರ್ಧನೆಯತ್ತ ಹಜ್ಜೆಯಿಟ್ಟಿದೆ. ಕಳೆದ ವರುಷ ಶಿರಸಿಯ ಕದಂಬ ಸಂಸ್ಥೆ, ತಿಪಟೂರಿನ ಬೈಫ್ ಸಂಸ್ಥೆ, ತ್ರಿಶೂರ್, ವಯನಾಡ್ಗಳಲ್ಲಿ ಹಲಸಿನ ಮೇಳ ನಡೆಸಿತ್ತು. ಈ ವರುಷ ಇನ್ನಷ್ಟು ಮೇಳಗಳ ಭಾಗ್ಯ! ಕದಂಬವು ಹಲಸಿನ 'ಬ್ರಾಂಡೆಡ್ ಹಪ್ಪಳ'ವನ್ನು ತಯಾರಿಸಿವೆ.

ಅಮಾಸೆಬೈಲಿನ ಕೊಡ್ಗಿ ಕುಟುಂಬವು ಹಲಸಿನ ಹಣ್ಣನ್ನು ನಿರ್ಜಲೀಕರಿಸಿ ಕಡಲಾಚೆ ಕಳುಹಿಸುವ ಪ್ರಯತ್ನವನ್ನು ಮಾಡುತ್ತಿದೆ. ಹಿತ್ತಲಿನಲ್ಲಿ ಹಾಳಾಗಿ ಹೋಗುವ ಹಲಸಿಗೆ 'ಮಾನ' ಬಂದಿದೆ. ರುಚಿ ಗೊತ್ತಿದ್ದ ಪಟ್ಟಣಿಗರನ್ನು ಸೆಳೆಯುತ್ತಿದೆ. 'ಹಲಸಿನ ಹಣ್ಣಿನ ಮಾಂಬಳ ಎಷ್ಟು ವೆಚ್ಚವಾದರೂ ತೊಂದರೆಯಿಲ್ಲ. ನನಗೆ ಕಳಿಸ್ತಿಯಾ' ರಾಜಧಾನಿಯ ಸ್ನೇಹಿತನ ಫೋನ್.
ಇದೇ ಹೊತ್ತಿಗೆ ಮೈಸೂರಿನಿಂದ ಎ.ಪಿ.ಚಂದ್ರಶೇಖರರ 'ಹಲಸು ಬಿಡಿಸಿದಾಗ' ಪುಸ್ತಕವು ಅಂಚೆಯಲ್ಲಿ ಬಂತು. ಎಲ್ಲವೂ ಕಾಕತಾಳೀಯ. ಆಂಗ್ಲ ಭಾಷೆಯಲ್ಲಿ ಹಲಸಿನ ಬಗ್ಗೆ ಒಂದಷ್ಟು ಅಕಾಡೆಮಿಕ್ ಪುಸ್ತಕಗಳಿವೆ. ಖಾಸಗಿಯಾಗಿ, ಅದರಲ್ಲೂ ನೇರ ಅಡುಗೆಮನೆಯಿಂದಲೇ ಹೊರಬಂದ ಪಾಕ.

ಹದಿಮೂರು ವಿಧದ ಮೇಲೋಗರ, ಹತ್ತು ಖಾರ ತಿಂಡಿಗಳು, ಹದಿಮೂರು ಸಿಹಿತಿಂಡಿಗಳು, ಎಂಟು ಹೊಟ್ಟೆ ತುಂಬಾ ತಿನ್ನಬಹುದಾದ ತಿಂಡಿಗಳು ಮತ್ತು ಹದಿನಾರು ಹಲಸಿನ ಬೀಜದ ಅಡುಗೆಗಳು-ಎಪಿಯವರು ದಾಖಲಿಸಿದ್ದಾರೆ. ಇದು ಮಾಡಿ ನೋಡಿದ, ತಿಂದು ಅನುಭವಿಸಿದ ಪಾಕ. ಎಳಸಾದ ಹಲಸಿನ ಗುಜ್ಜೆಯಿಂದ ಹಣ್ಣಿನವರೆಗೆ ವರುಷದ ಆರೇಳು ತಿಂಗಳ ಕಾಲ ಹಸಿವೆ ತಣಿಸುತ್ತದೆ. ನಂತರ ಉಪ್ಪು ನೀರಿನಲ್ಲಿ ಶೇಖರಿಸಿಟ್ಟ ನೀರುಸೊಳೆ. ಬಹುತೇಕ ಪ್ರತಿನಿತ್ಯ ಅಥವಾ ದಿನಬಿಟ್ಟು ದಿನ ಹಲಸಿನ ಪಲ್ಯ, ಸಾಂಬಾರು, ಬೆಂದಿ, ಬೋಳುಹುಳಿ..ಹೀಗೆ ಒಂದಿಲ್ಲೊಂದು ಅನ್ನಕ್ಕೆ ಸಾಥಿ ನೀಡುವ ಸಾಮಥ್ರ್ಯ.

ಹಲಸಿನ ಹಿಂಬೀಳಿಕೆಯನ್ನು ಎಪಿ ಹೀಗೆ ಹೇಳುತ್ತಾರೆ ಕಾಲ ಬದಲಾದ ಹಾಗೆ ಹಲಸು ತಿನ್ನುವ ಬಾಯಿಗಳು ಬದಲಾದುವು. ಪೇಟೆಯ ಕೋಸು, ಬೀನ್ಸ್ಗಳು, ಬ್ರೆಡ್-ಜ್ಯಾಂಗಳು ಆ ಸ್ಥಾನ ತುಂಬಿದುವು. ಶ್ರಮ ಸಂಸ್ಕೃತಿ ಬದಲಾದುವು. ಹಲಸಿನ ಪಲ್ಯವನ್ನು ಜೀರ್ಣಿಸಿಕೊಳ್ಳುವುದು ಅಸಾಧ್ಯವೆಂಬ ಮಟ್ಟಕ್ಕೆ ಜನರ ಹೊಟ್ಟೆ ಕೆಟ್ಟುಹೋಯಿತು. ಹಲಸು 'ಗ್ಯಾಸ್' ಎಂಬುದು ಮನೆಮಾತಾಯಿತು.

'ನಮ್ಮ ಹಿತ್ತಲಿನಲ್ಲಿ ೩-೪ ಮರ ಉಂಟು ಮಾರಾಯ. ಯಾರಿಗೆ ಬೇಕು? ದನವೂ ತಿನ್ನುವುದಿಲ್ಲ' ತಮಾಷೆಗೆ ಊರಮಿತ್ರ ಕುಮಾರಣ್ಣ ಹೇಳಿದ. ಇದು ಕುಮಾರಣ್ಣನ ಕತೆಯಲ್ಲ. ಮನೆಮನೆ ಕತೆ. ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿ ವಾಸಮಾಡುವ ಮಂದಿಗೆ ಹಲಸಿನ ರುಚಿ ಗೊತ್ತು. ೩-೪ ಸೊಳೆಯನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿಟ್ಟು ಸೀಲ್ ಮಾಡಿ ಮಾರಾಟಕ್ಕಿಟ್ಟರೆ ಮುಗಿಬಿದ್ದು ಐದೋ ಹತ್ತೋ ತೆತ್ತು ತಿನ್ನುವುದನ್ನು ನೋಡಿದ್ದೇನೆ! ಸೀಲ್ ಪ್ಲಾಸ್ಟಿಕನ್ನು ಕಚ್ಚಿಯೋ, ಹಿಡಿದೆಳೆದೋ ಒಡೆದು, ಸೊಳೆಯನ್ನು ತಿನ್ನುವಾಗ ಎಂತಹ ಸ್ವಾದ! ಅದನ್ನೇ ಮನೆಬಟ್ಟಲಲ್ಲಿಟ್ಟು ಕೊಟ್ಟರೆ?

ಎಪಿ ಹೇಳುತ್ತಾರೆ - ಹಲಸಿನ ಸೊಳೆ ಬಿಡಿಸುವುದೂ ಒಂದು ಕಲೆ. ಬೀದಿ ಬದಿಯ ಮಾರಾಟಗಾರರು ಬಿಡಿಸಿಟ್ಟ ಹಲಸನ್ನು ನೋಡುವುದೇ ಒಂದು ಆನಂದ. ಅಷ್ಟೊಂದು ಚಂದ. ಮೇಣದ ಮಧ್ಯದಿಂದ, ಹತ್ತಾರು ಸಮಸ್ಯೆಗಳ ನಡುವಿಂದ ಜೇನಿನಂತಹ ಸೊಳೆಗಳನ್ನು ಹೆಕ್ಕಿ ತೆಗೆಯುವುದೊಂದು ವಿದ್ಯೆ. ಪ್ರಕೃತಿಯಲ್ಲಿ ಪ್ರತೀಯೊಂದು ಜೀವಿಗೂ ತಿನ್ನುವ ವಿದ್ಯೆ ತಾನಾಗಿ ಬಂದು ಬಿಡುತ್ತದೆ. ಆದರೆ ನಾಗರಿಕ ಮಾನವನಿಗಿಂದು ಹಾಗಲ್ಲ. ವಿದ್ಯಾವಂತರಿಗಿಂದು ಎಲ್ಲವೂ ಶಾಲೆಗಳಿಂದ ಬರಬೇಕಾಗಿದೆ. ಹಾಗಾಗಿ ಹಲಸಿನ ಹಣ್ಣು ಸೋಸುವ ಕಲೆಯನ್ನು ಹೇಳಿಕೊಡಲು ಒಂದು ತರಬೇತಿ ಶಿಬಿರ - ಯಾರಾದರೂ ಆಯೋಜಿಸಿದರೆ ಅದಕ್ಕೆ ಶುಲ್ಕ ತೆತ್ತು ಜನ ಬಂದರೆ, ಬಹಳ ಅಗತ್ಯ ಕಾರ್ಯಕ್ರಮವೆಂದು ಬುದ್ಧಿವಂತರೆನಿಸಿಕೊಂಡವರು ಹೊಗಳಿದರೆ, ರಾಜಕಾರಣಿಗಳು ಉದ್ಘಾಟಿಸಿದರೆ, ಆಶ್ಚರ್ಯ ಪಡಬೇಕಿಲ್ಲ!ಹಲಸಿನ ಹಣ್ಣಿನ ಪರಿಮಳ ಕಡಲಾಚೆಯವರ ಮೂಗರಳಿಸಿದೆ. ಈಗ ಹೇಳಿ. ಹಲಸು ಹೊಲಸೇ? ಅಲ್ಲ, ಮನಸ್ಸು ಹೊಲಸು.

Saturday, May 9, 2009

ಮಾಂಬಳ, ಹಂಬಳ, 'ಹಲಸು ಮಂಚೂರಿ'

ಕೆನ್ಲವ್ ದೂರದ ಹವಾಯ್ ದೇಶದವರು. ಹಲಸಿನ ಹಪ್ಪಳದ ಬಗ್ಗೆ ಅವರಿಗೆ ಕುತೂಹಲ. 'ಶ್ರೀ'ಪಡ್ರೆಯವರೊಂದಿಗೆ ಮಿಂಚಂಚೆ ಮಾತುಕತೆ. ಹಲಸು ಸೊಳೆ ಬಿಡಿಸುವಲ್ಲಿಂದ ಹಪ್ಪಳ ಒತ್ತಿ ಒಣಗಿಸುವ ವಿವಿಧ ಹಂತದ ವಿವರಣೆ. ಇನ್ನೇನು ಒಂದೇ ವಾರದಲ್ಲಿ ಕೆನ್ಲವ್ ಅವರ ಹಪ್ಪಳ ಸುದ್ದಿ ಬರಲಿದೆ!

ಮಂಚಿಯ ಶ್ರೀನಿವಾಸ ಆಚಾರ್ ತಮ್ಮ ಮನೆಯಲ್ಲಿ ಮಾಡುತ್ತಿದ್ದ ಹಪ್ಪಳದ ವಿವಿಧ ಹಂತದ ಚಿತ್ರಗಳನ್ನು ಕಳುಹಿಸಿದ್ದರು. ಮನೆಮಂದಿಯ ಕೂಡುಶ್ರಮ, ಅದರಲ್ಲಿರುವ ಪ್ರೀತಿ ಎದ್ದುಕಾಣುತ್ತಿತ್ತು. ಒಂದೈದು ವರುಷದ ಬಳಿಕ ಈ ಚಿತ್ರಗಳು ಕಾಲದ ಕಥನ ಸಾರುವ ದಾಖಲೆಗಳು.

ಮುಂದಿನ ಮಳೆಗಾಲಕ್ಕಾಗಿ, ನೆಂಟರು ಬಂದಾಗ, 'ಅವರಿಗಿಷ್ಟು, ಇವರಿಗಿಷ್ಟು' ಅನ್ನುತ್ತಾ ಹಪ್ಪಳವನ್ನು ಕಟ್ಟಿಕೊಡುವ 'ಕಾರ್ಯಕ್ರಮ' ಇತ್ತಲ್ಲಾ, ಅದರ ಹಿಂದಿನ ಜೀವನೋತ್ಸಾಹ ಈಗೆಲ್ಲಿ? ಮಳೆಬಂದಾಗ 'ಕಟುಕುಟುಂ' ಅಂತ ಜಗಿಯುವ 'ಸಾಂತಾಣಿ'ಯ ಜಾಗ ಈಗಲೂ ಶೂನ್ಯ!

ಶಿರಸಿಯ ರೇಖಾ ಹೆಗಡೆ ಅವರ ಮನೆಗೆ ಹೋದಾಗ ಕಾಫಿಯೊಂದಿಗೆ 'ಹಣ್ಣು ಹಪ್ಪಳ'ವನ್ನು ಪ್ರತ್ಯೇಕವಾಗಿ ನೀಡಿದ್ದರು. ಒಳ್ಳೆಯ ಕಾಂಬಿನೇಶನ್! ಹಪ್ಪಳ ಮಾಡುತ್ತಿದ್ದಾಗಲೇ ಹೂರಣವನ್ನು ತಿಂದು, ಅಮ್ಮನಿಂದ ಬೈಸಿಕೊಂಡ ಬಾಲ್ಯ ನೆನಪಾಯತು.

'ಚಿಕ್ಕ ಮಕ್ಕಳು ಹಣ್ಣುಹಪ್ಪಳಕ್ಕೆ ಗ್ರಾಹಕರು. ಚಾಕೋಲೇಟ್ ಬದಲಿಗೆ ಹಣ್ಣು ಹಪ್ಪಳ ನೀಡಿ. ಯಾವುದೇ ಕಲಬೆರಕೆ ಇಲ್ಲ. ಮಕ್ಕಳ ಹಲ್ಲು ಹಾಳಾಗದು' ಎನ್ನುತ್ತಾರೆ ರೇಖಾ. ಒಂದು ಹಪ್ಪಳಕ್ಕೆ ಐದು ರೂಪಾಯಿ. ಐದು ಹಪ್ಪಳದ ಒಂದು ಕಟ್ಟು. 'ಕೇಳಿ ಪಡೆವ' ಗಿರಾಕಿಗಳಿದ್ದಾರೆ.

ಸನಿಹದ ಅನ್ನಪೂರ್ಣ ಹೆಗಡೆಯವರು 'ಹಲಸಿನ ಸೊಳೆಯ ಪೌಡರ್' ಮಾಡಿದ್ದಾರೆ. ಅರ್ಧಪಾಲು ಅಕ್ಕಿ, ಉಳಿದರ್ದ ಪೌಡರ್ ಮಿಶ್ರಮಾಡಿದರೆ ದೋಸೆ ಘಮಘಮ! ಬಡಿಸಿದಷ್ಟು ಹೊಟ್ಟೆ ಸೇರುತ್ತದೆ.

ಹಲಸಿನ ಹಣ್ಣಿನ 'ಮಾಂಬಳ'ದ ಗಮ್ಮತ್ತೇ ಬೇರೆ! ಬಿಡುವಾದಾಗಿನ ಕೈಕೆಲಸ. ಹಳ್ಳಿಜ್ಞಾನ. ಇದಕ್ಕೆ ಕಾಟು (ಕಾಡು) ಮಾವಿನ ಬಳಕೆ. ಹೈಬ್ರಿಡ್ಗೆ ಆ ರುಚಿಯಿಲ್ಲ. ಇದಕ್ಕೆ ನಗರವೇ ಮಾರುಕಟ್ಟೆ. 'ಮಾಂಬಳ, ಹಲಸಿನ ಎಳೆ ಕಾಯಿ, ಹಣ್ಣಿಗೆ ನಿಗದಿತ ಜನರಿದ್ದಾರೆ. ಅವರಿಗೆ ಒದಗಿಸಲೇ ಬೇಕು' ಎನ್ನುತ್ತಾರೆ ತರಕಾರಿ ವ್ಯಾಪಾರಿಗಳಾದ ಅಶೋಕ್ ನಾಯಕ್.

ಮಾಂಬಳ ಗೊತ್ತು. 'ಹಂಬಳ' ಗೊತ್ತೇ? ಪಾಣಾಜೆಯ ಜಯಲಕ್ಷ್ಮೀ ದೈತೋಟ ಹೊಸ ರುಚಿಯನ್ನು ಪರಿಚಯಿಸಿದ್ದಾರೆ. ಬಕ್ಕೆ ಹಲಸು ತೊಳೆಯನ್ನು ಶುಚಿಮಾಡಿ, ಹದವಾಗಿ ಬೇಯಿಸಿ, ನುಣ್ಣಗೆ ರುಬ್ಬಿ. ಬಿಳಿ ಬಟ್ಟೆಯ ಮೇಲೆ ದಪ್ಪಕ್ಕೆ ಲೇಪ ಹಾಕಿ (ಹಚ್ಚುವುದು) ಬಿಸಿಲಲ್ಲಿ ಒಣಗಲು ಇಡಿ. ಅದರಲ್ಲಿರುವ ನೀರಿನಾಂಶ ಆರುವಲ್ಲಿಯ ತನಕ ಒಣಗಿಸಿ. ನಂತರ ಒಂದು ರಾತ್ರಿ ಅದನ್ನು ಆರಲು ಬಿಡಿ. ಮರುದಿವಸ ಬಟ್ಟೆಯಿಂದ ಬಿಟ್ಟುಕೊಡುತ್ತದೆ. ಮಗಚಿಟ್ಟು ಬಿಸಿಲಲ್ಲಿ ಪುನಃ ಒಣಗಿಸಿ. ಚೆನ್ನಾಗಿ ಬಿಸಿಲಲ್ಲಿ ಕಾದ ಇದನ್ನು ತುಂಡುತುಂಡು ಮಾಡಿಟ್ಟುಕೊಳ್ಳಿ. ಮಕ್ಕಳು ಹಟ ಮಾಡಿದರೆ ಅಂಗಡಿ ಚಾಕೋಲೇಟ್ಗೆ ಬದಲು ಇದನ್ನು ಕೊಡಿ. ಪುನಃಪುನಃ ಕೇಳಿ ಪಡೆಯುತ್ತಾರೆ!

ಸಾಗರದ ಗೀತಾ ಭಟ್ 'ಹಲಸಿನ ಗೀತಕ್ಕ' ಎಂದೇ ಪರಿಚಿತ. ಹಲಸಿನ ಮುಳ್ಳಿದ್ದ ಹೊರಕವಚ ಹೊರತುಪಡಿಸಿ ಮಿಕ್ಕೆಲ್ಲಾ ಭಾಗಗಳಿಂದ ಖಾದ್ಯ ತಯಾರಿಸುವ ಪ್ರವೀಣೆ! ಮೊನ್ನೆ ಶಿರಸಿಯ ಕಳವೆಯಲ್ಲಿ ಗೀತಕ್ಕ ಮೂವಕ್ಕೂ ಮಿಕ್ಕಿ ಹಲಸಿನ ಬೇರೆ ಬೇರೆ ಖಾದ್ಯಗಳನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿದ್ದರಂತೆ. ನಂತರ ತಿನ್ನಲೂ ಕೂಡಾ.

ಕುಟುಂಬ ಸಹಿತವಾಗಿ, ಸ್ನೇಹಿತರೊಂದಿಗೆ ಹೋಟೇಲ್, ಜಾತ್ರೆಗೆ ಹೋದಾಗ 'ಗೋಬಿಮಂಚೂರಿ' ಸೆಳೆಯುತ್ತದೆ. ಅದಕ್ಕೆ ಬಳಸುವ ಒಳಸುರಿ!? ಗೀತಕ್ಕ ಹಲಸಿನ ಮಂಚೂರಿ ತಯಾರಿಸುತ್ತಾರೆ.. ಮಂಚೂರಿ 'ಮಾಡಿ ತೋರಿಸಿ'ದಾಗಲೇ ಜನ ನಂಬ್ತಾರಂತೆ! ಸಭೆಗಳಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದಾಗ ಹಲಸಿನ ಮೌಲ್ಯವರ್ಧನೆ, ಮಾನವರ್ಧನೆಯ ಬಗ್ಗೆಯೇ ಆಲೋಚಿಸುವ ಗೀತಕ್ಕ ಅವರ ಸ್ಪೆಷಲ್ - 'ಜ್ಯಾಕ್ ಮಂಚೂರಿ' ಹೋಟೇಲಿನ ಪಾಕಶಾಲೆಗೆ ನುಗ್ಗಿದರೆ, ಹಿತ್ತಿಲಿನ ಹಲಸಿಗೆ ಮಾನ ಬಾರದೇ!

ಹಲಸು ಎಂದಾಗ 'ಅಜೀರ್ಣ' ಮಾರಾಯ್ರೆ - ಅಷ್ಟಾವಕ್ರನಂತೆ ಮುಖ ಸೊಟ್ಟಗಾಗುತ್ತದಲ್ಲಾ. ಅಂತಹವರಿಗೆ ಗೀತಕ್ಕ ಹೇಳ್ತಾರೆ - 'ಹಲಸು ತಿಂದ ಮೇಲೆ ಒಂದಿಷ್ಟು ಶುಂಠಿಚೂರುಗಳನ್ನು ಜಗಿದು ತಿನ್ನಿ'.

ದಶಕಕ್ಕಿಂತ ಹಿಂದೆ ನನ್ನೂರಿನ ಸುತ್ತಮುತ್ತ ಮಾಂಸಾಹಾರಪ್ರಿಯ ಬಂಧುಗಳ ಮದುವೆ, ಶುಭ ಸಮಾರಂಭಗಳಲ್ಲಿ 'ಮಾಂಸದೂಟ'ವಿದ್ದರೆ ಒಂದೈವತ್ತು ಮಂದಿಯಾದರೂ ಊಟಕ್ಕೆ ಜಾಸ್ತಿ! ಇದೇ ರೀತಿ ಹಲಸಿನ 'ಕೆತ್ತುಕಾಯಿ ಸಾಂಬಾರು' ಇದ್ದರೆ ಇಲ್ಲಿಯೂ ಊಟಕ್ಕೆ ಜನ ಜಾಸ್ತಿ ಎಂಬ ಹೊಸ ಸುದ್ದಿ ಹೇಳಿದ್ದಾರೆ ತುಮಕೂರಿನ ಪತ್ರಕರ್ತ ಮಿತ್ರ ಪದ್ಮರಾಜ್.

ಇಷ್ಟೆಲ್ಲಾ ಹಲಸಿನ ವಿಶೇಷಗಳು, ವಿಶೇಷಜ್ಞರು ಹಲಸಿನ ಮೇಣವನ್ನು ಅಂಟಿಸಿಕೊಂಡಿದ್ದಾರೆ. 'ಹಲಸಿನ ಮರದಲ್ಲಿ ಎಷ್ಟು ಮೋಪು ಸಿಗಬಹುದು, ಅದರಿಂದ ಎಷ್ಟು ರೊಕ್ಕ ಕಿಸೆ ಸೇರಬಹುದು, ಕಡಿಯಲು ಇನ್ನು ಎಷ್ಟು ದಿವಸ ಬೇಕಾದೀತು - ಎಂಬ ಲೆಕ್ಕಾಚಾರ ಮಾತ್ರ ನೋಡುವವರೇ. ಹಣ್ಣು, ಕಾಯಿಗಾಗಿ ಕತ್ತೆತ್ತಿ ಮರವನ್ನು ಯಾರೂ ನೋಡುವುದಿಲ್ಲ' ಮೈಕೆ ಗಣೇಶರಲ್ಲಿ ಊಟದ ಮಧ್ಯೆ ಎ.ಪಿ.ಸದಾಶಿವರು ಹೇಳಿದ ಮಾತು ವಾಸ್ತವಕ್ಕೆ ಕೈಗನ್ನಡಿ.

ಇನ್ನೇನು ಹಲಸಿನ ಸುದ್ದಿ ಮುಗಿಯಿತು ಎಂದಾವಾಗ ಪಾತನಡ್ಕದ ಸುಶೀಲಕ್ಕರಿಂದ ಮಾಹಿತಿ - 'ಗೇರು ಹಣ್ಣಿನ ಹಲ್ವ ಮಾಡಿದ್ದೇನೆ. ಚೆನ್ನಾಗಿದೆ. ಕಳುಹಿಸಿಕೊಡುತ್ತೇನೆ'.