Friday, May 15, 2009

ಹಲಸು ಹೊಲಸಲ್ಲ!

ಹಲಸು - ಬಡವರ ಹಣ್ಣು! ಈ ವಿಶೇಷಣ ಯಾಕೆ ಅಂಟಿಕೊಂಡಿತೋ?

ಒಂದು ಕಾಲಘಟ್ಟದಲ್ಲಿ ಬಡತನವನ್ನು ನೀಗಿದ್ದು ಹಲಸು. ತುತ್ತಿಗೂ ತತ್ವಾರದ ಸಮಯದಲ್ಲಿ ಕೃಷಿಕಾರ್ಯಗಳನ್ನು ಮುನ್ನಡೆಸಿದ್ದು ಹಲಸು. ಮಾಂಬಳ, ಹಪ್ಪಳ, ಸೋಂಟೆ ಅನ್ನುತ್ತಾ ಮೌಲ್ಯವರ್ಧನೆಯಾಗುತ್ತಿತ್ತು. ಹಲಸು ಬಡವಲ್ಲ. ಅದು ಶ್ರೀಮಂತ.

ನಾಲ್ಕೈದು ತಿಂಗಳ ಹಲಸಿನ ಫಸಲನ್ನು ನಂಬಿ ವರ್ಷವಿಡೀ ಬದುಕುವ ಕುಟುಂಬಗಳೆಷ್ಟು ಬೇಕು? 'ಮುಂದುವರಿದಿದ್ದೇವೆ' ಅನ್ನುವ ಈ ಕಾಲಘಟ್ಟದಲ್ಲೂ ಕೆಲವು ಹಳ್ಳಿಯ ಉಸಿರಿರುವುದು ಹಲಸಲ್ಲೇ ತಾನೆ. ದಶಕಗಳ ಹಿಂದೆ ದಕ್ಷಿಣ ಕೇರಳದ ಬಡವರನ್ನು ಉಳಿಸಿದ್ದು ಮರಗೆಣಸಾದರೆ, ಮಲೆನಾಡಿನ ಈ ಭಾಗವನ್ನು ಆಧರಿಸಿದ್ದು-ಹಲಸು.

ಬಾಲ್ಯದ ನೆನಪುಗಳು ಇನ್ನೂ ಮಾಸಿಲ್ಲ - ಅನ್ನದ ಬದಲಿಗೆ ಹಲಸಿನ ಪಲ್ಯದಂತಹ ತಿಂಡಿ (ಚಂಗುಳಿ) ತಿಂದು ದಿನವಿಡೀ ದುಡಿಯುತ್ತಿದ್ದ ಚೆನ್ನಪ್ಪ, ತಿಪ್ಪ, ಆನಂದ, ವಾಸು..ನೆನಪಿಗೆ ಬರುತ್ತಾರೆ. ಕೆಲಸ ಮುಗಿಸಿ ಬರುವಾಗ ತಮ್ಮ ಮಕ್ಕಳಿಗೆ ಹಲಸಿನ ಹಣ್ಣಿನ ಅರ್ಧ ಭಾಗವನ್ನು ತಲೆಮೇಲೆ ಹೊತ್ತು ತರುವ ಮಾತೆಯರ ಚಿತ್ರ ಮಿಂಚಿ ಮರೆಯಾಗುತ್ತದೆ! ಮಳೆಗಾಲಕ್ಕಾಗಿ ಹಲಸಿನ ಹಪ್ಪಳವನ್ನು ಮಾಡುವ ಹಳ್ಳಿ ಸಡಗರ ಈಗೆಲ್ಲಿ?

ಶಿರಸಿಯ ರೇಖಾ ಶರಶ್ಚಂದ್ರರಲ್ಲಿಗೆ ಹೋಗಿ. ಹಲಸಿನ ಹಪ್ಪಳದಲ್ಲೇ ಮುಳುಗಿರುತ್ತಾರೆ. ಸಾಗರದ ಗೀತಕ್ಕ ಹಲಸಿನ ನೂರಕ್ಕೂ ವಿವಿಧ ಖಾದ್ಯಗಳನ್ನು ತಯಾರಿಸುವುದರಲ್ಲಿ ನಿಪುಣೆ. ಕೇರಳದ 'ಉರವು' ಮೌಲ್ಯವರ್ಧನೆಯತ್ತ ಹಜ್ಜೆಯಿಟ್ಟಿದೆ. ಕಳೆದ ವರುಷ ಶಿರಸಿಯ ಕದಂಬ ಸಂಸ್ಥೆ, ತಿಪಟೂರಿನ ಬೈಫ್ ಸಂಸ್ಥೆ, ತ್ರಿಶೂರ್, ವಯನಾಡ್ಗಳಲ್ಲಿ ಹಲಸಿನ ಮೇಳ ನಡೆಸಿತ್ತು. ಈ ವರುಷ ಇನ್ನಷ್ಟು ಮೇಳಗಳ ಭಾಗ್ಯ! ಕದಂಬವು ಹಲಸಿನ 'ಬ್ರಾಂಡೆಡ್ ಹಪ್ಪಳ'ವನ್ನು ತಯಾರಿಸಿವೆ.

ಅಮಾಸೆಬೈಲಿನ ಕೊಡ್ಗಿ ಕುಟುಂಬವು ಹಲಸಿನ ಹಣ್ಣನ್ನು ನಿರ್ಜಲೀಕರಿಸಿ ಕಡಲಾಚೆ ಕಳುಹಿಸುವ ಪ್ರಯತ್ನವನ್ನು ಮಾಡುತ್ತಿದೆ. ಹಿತ್ತಲಿನಲ್ಲಿ ಹಾಳಾಗಿ ಹೋಗುವ ಹಲಸಿಗೆ 'ಮಾನ' ಬಂದಿದೆ. ರುಚಿ ಗೊತ್ತಿದ್ದ ಪಟ್ಟಣಿಗರನ್ನು ಸೆಳೆಯುತ್ತಿದೆ. 'ಹಲಸಿನ ಹಣ್ಣಿನ ಮಾಂಬಳ ಎಷ್ಟು ವೆಚ್ಚವಾದರೂ ತೊಂದರೆಯಿಲ್ಲ. ನನಗೆ ಕಳಿಸ್ತಿಯಾ' ರಾಜಧಾನಿಯ ಸ್ನೇಹಿತನ ಫೋನ್.
ಇದೇ ಹೊತ್ತಿಗೆ ಮೈಸೂರಿನಿಂದ ಎ.ಪಿ.ಚಂದ್ರಶೇಖರರ 'ಹಲಸು ಬಿಡಿಸಿದಾಗ' ಪುಸ್ತಕವು ಅಂಚೆಯಲ್ಲಿ ಬಂತು. ಎಲ್ಲವೂ ಕಾಕತಾಳೀಯ. ಆಂಗ್ಲ ಭಾಷೆಯಲ್ಲಿ ಹಲಸಿನ ಬಗ್ಗೆ ಒಂದಷ್ಟು ಅಕಾಡೆಮಿಕ್ ಪುಸ್ತಕಗಳಿವೆ. ಖಾಸಗಿಯಾಗಿ, ಅದರಲ್ಲೂ ನೇರ ಅಡುಗೆಮನೆಯಿಂದಲೇ ಹೊರಬಂದ ಪಾಕ.

ಹದಿಮೂರು ವಿಧದ ಮೇಲೋಗರ, ಹತ್ತು ಖಾರ ತಿಂಡಿಗಳು, ಹದಿಮೂರು ಸಿಹಿತಿಂಡಿಗಳು, ಎಂಟು ಹೊಟ್ಟೆ ತುಂಬಾ ತಿನ್ನಬಹುದಾದ ತಿಂಡಿಗಳು ಮತ್ತು ಹದಿನಾರು ಹಲಸಿನ ಬೀಜದ ಅಡುಗೆಗಳು-ಎಪಿಯವರು ದಾಖಲಿಸಿದ್ದಾರೆ. ಇದು ಮಾಡಿ ನೋಡಿದ, ತಿಂದು ಅನುಭವಿಸಿದ ಪಾಕ. ಎಳಸಾದ ಹಲಸಿನ ಗುಜ್ಜೆಯಿಂದ ಹಣ್ಣಿನವರೆಗೆ ವರುಷದ ಆರೇಳು ತಿಂಗಳ ಕಾಲ ಹಸಿವೆ ತಣಿಸುತ್ತದೆ. ನಂತರ ಉಪ್ಪು ನೀರಿನಲ್ಲಿ ಶೇಖರಿಸಿಟ್ಟ ನೀರುಸೊಳೆ. ಬಹುತೇಕ ಪ್ರತಿನಿತ್ಯ ಅಥವಾ ದಿನಬಿಟ್ಟು ದಿನ ಹಲಸಿನ ಪಲ್ಯ, ಸಾಂಬಾರು, ಬೆಂದಿ, ಬೋಳುಹುಳಿ..ಹೀಗೆ ಒಂದಿಲ್ಲೊಂದು ಅನ್ನಕ್ಕೆ ಸಾಥಿ ನೀಡುವ ಸಾಮಥ್ರ್ಯ.

ಹಲಸಿನ ಹಿಂಬೀಳಿಕೆಯನ್ನು ಎಪಿ ಹೀಗೆ ಹೇಳುತ್ತಾರೆ ಕಾಲ ಬದಲಾದ ಹಾಗೆ ಹಲಸು ತಿನ್ನುವ ಬಾಯಿಗಳು ಬದಲಾದುವು. ಪೇಟೆಯ ಕೋಸು, ಬೀನ್ಸ್ಗಳು, ಬ್ರೆಡ್-ಜ್ಯಾಂಗಳು ಆ ಸ್ಥಾನ ತುಂಬಿದುವು. ಶ್ರಮ ಸಂಸ್ಕೃತಿ ಬದಲಾದುವು. ಹಲಸಿನ ಪಲ್ಯವನ್ನು ಜೀರ್ಣಿಸಿಕೊಳ್ಳುವುದು ಅಸಾಧ್ಯವೆಂಬ ಮಟ್ಟಕ್ಕೆ ಜನರ ಹೊಟ್ಟೆ ಕೆಟ್ಟುಹೋಯಿತು. ಹಲಸು 'ಗ್ಯಾಸ್' ಎಂಬುದು ಮನೆಮಾತಾಯಿತು.

'ನಮ್ಮ ಹಿತ್ತಲಿನಲ್ಲಿ ೩-೪ ಮರ ಉಂಟು ಮಾರಾಯ. ಯಾರಿಗೆ ಬೇಕು? ದನವೂ ತಿನ್ನುವುದಿಲ್ಲ' ತಮಾಷೆಗೆ ಊರಮಿತ್ರ ಕುಮಾರಣ್ಣ ಹೇಳಿದ. ಇದು ಕುಮಾರಣ್ಣನ ಕತೆಯಲ್ಲ. ಮನೆಮನೆ ಕತೆ. ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿ ವಾಸಮಾಡುವ ಮಂದಿಗೆ ಹಲಸಿನ ರುಚಿ ಗೊತ್ತು. ೩-೪ ಸೊಳೆಯನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿಟ್ಟು ಸೀಲ್ ಮಾಡಿ ಮಾರಾಟಕ್ಕಿಟ್ಟರೆ ಮುಗಿಬಿದ್ದು ಐದೋ ಹತ್ತೋ ತೆತ್ತು ತಿನ್ನುವುದನ್ನು ನೋಡಿದ್ದೇನೆ! ಸೀಲ್ ಪ್ಲಾಸ್ಟಿಕನ್ನು ಕಚ್ಚಿಯೋ, ಹಿಡಿದೆಳೆದೋ ಒಡೆದು, ಸೊಳೆಯನ್ನು ತಿನ್ನುವಾಗ ಎಂತಹ ಸ್ವಾದ! ಅದನ್ನೇ ಮನೆಬಟ್ಟಲಲ್ಲಿಟ್ಟು ಕೊಟ್ಟರೆ?

ಎಪಿ ಹೇಳುತ್ತಾರೆ - ಹಲಸಿನ ಸೊಳೆ ಬಿಡಿಸುವುದೂ ಒಂದು ಕಲೆ. ಬೀದಿ ಬದಿಯ ಮಾರಾಟಗಾರರು ಬಿಡಿಸಿಟ್ಟ ಹಲಸನ್ನು ನೋಡುವುದೇ ಒಂದು ಆನಂದ. ಅಷ್ಟೊಂದು ಚಂದ. ಮೇಣದ ಮಧ್ಯದಿಂದ, ಹತ್ತಾರು ಸಮಸ್ಯೆಗಳ ನಡುವಿಂದ ಜೇನಿನಂತಹ ಸೊಳೆಗಳನ್ನು ಹೆಕ್ಕಿ ತೆಗೆಯುವುದೊಂದು ವಿದ್ಯೆ. ಪ್ರಕೃತಿಯಲ್ಲಿ ಪ್ರತೀಯೊಂದು ಜೀವಿಗೂ ತಿನ್ನುವ ವಿದ್ಯೆ ತಾನಾಗಿ ಬಂದು ಬಿಡುತ್ತದೆ. ಆದರೆ ನಾಗರಿಕ ಮಾನವನಿಗಿಂದು ಹಾಗಲ್ಲ. ವಿದ್ಯಾವಂತರಿಗಿಂದು ಎಲ್ಲವೂ ಶಾಲೆಗಳಿಂದ ಬರಬೇಕಾಗಿದೆ. ಹಾಗಾಗಿ ಹಲಸಿನ ಹಣ್ಣು ಸೋಸುವ ಕಲೆಯನ್ನು ಹೇಳಿಕೊಡಲು ಒಂದು ತರಬೇತಿ ಶಿಬಿರ - ಯಾರಾದರೂ ಆಯೋಜಿಸಿದರೆ ಅದಕ್ಕೆ ಶುಲ್ಕ ತೆತ್ತು ಜನ ಬಂದರೆ, ಬಹಳ ಅಗತ್ಯ ಕಾರ್ಯಕ್ರಮವೆಂದು ಬುದ್ಧಿವಂತರೆನಿಸಿಕೊಂಡವರು ಹೊಗಳಿದರೆ, ರಾಜಕಾರಣಿಗಳು ಉದ್ಘಾಟಿಸಿದರೆ, ಆಶ್ಚರ್ಯ ಪಡಬೇಕಿಲ್ಲ!ಹಲಸಿನ ಹಣ್ಣಿನ ಪರಿಮಳ ಕಡಲಾಚೆಯವರ ಮೂಗರಳಿಸಿದೆ. ಈಗ ಹೇಳಿ. ಹಲಸು ಹೊಲಸೇ? ಅಲ್ಲ, ಮನಸ್ಸು ಹೊಲಸು.

0 comments:

Post a Comment