Saturday, May 9, 2009

ಮಾಂಬಳ, ಹಂಬಳ, 'ಹಲಸು ಮಂಚೂರಿ'

ಕೆನ್ಲವ್ ದೂರದ ಹವಾಯ್ ದೇಶದವರು. ಹಲಸಿನ ಹಪ್ಪಳದ ಬಗ್ಗೆ ಅವರಿಗೆ ಕುತೂಹಲ. 'ಶ್ರೀ'ಪಡ್ರೆಯವರೊಂದಿಗೆ ಮಿಂಚಂಚೆ ಮಾತುಕತೆ. ಹಲಸು ಸೊಳೆ ಬಿಡಿಸುವಲ್ಲಿಂದ ಹಪ್ಪಳ ಒತ್ತಿ ಒಣಗಿಸುವ ವಿವಿಧ ಹಂತದ ವಿವರಣೆ. ಇನ್ನೇನು ಒಂದೇ ವಾರದಲ್ಲಿ ಕೆನ್ಲವ್ ಅವರ ಹಪ್ಪಳ ಸುದ್ದಿ ಬರಲಿದೆ!

ಮಂಚಿಯ ಶ್ರೀನಿವಾಸ ಆಚಾರ್ ತಮ್ಮ ಮನೆಯಲ್ಲಿ ಮಾಡುತ್ತಿದ್ದ ಹಪ್ಪಳದ ವಿವಿಧ ಹಂತದ ಚಿತ್ರಗಳನ್ನು ಕಳುಹಿಸಿದ್ದರು. ಮನೆಮಂದಿಯ ಕೂಡುಶ್ರಮ, ಅದರಲ್ಲಿರುವ ಪ್ರೀತಿ ಎದ್ದುಕಾಣುತ್ತಿತ್ತು. ಒಂದೈದು ವರುಷದ ಬಳಿಕ ಈ ಚಿತ್ರಗಳು ಕಾಲದ ಕಥನ ಸಾರುವ ದಾಖಲೆಗಳು.

ಮುಂದಿನ ಮಳೆಗಾಲಕ್ಕಾಗಿ, ನೆಂಟರು ಬಂದಾಗ, 'ಅವರಿಗಿಷ್ಟು, ಇವರಿಗಿಷ್ಟು' ಅನ್ನುತ್ತಾ ಹಪ್ಪಳವನ್ನು ಕಟ್ಟಿಕೊಡುವ 'ಕಾರ್ಯಕ್ರಮ' ಇತ್ತಲ್ಲಾ, ಅದರ ಹಿಂದಿನ ಜೀವನೋತ್ಸಾಹ ಈಗೆಲ್ಲಿ? ಮಳೆಬಂದಾಗ 'ಕಟುಕುಟುಂ' ಅಂತ ಜಗಿಯುವ 'ಸಾಂತಾಣಿ'ಯ ಜಾಗ ಈಗಲೂ ಶೂನ್ಯ!

ಶಿರಸಿಯ ರೇಖಾ ಹೆಗಡೆ ಅವರ ಮನೆಗೆ ಹೋದಾಗ ಕಾಫಿಯೊಂದಿಗೆ 'ಹಣ್ಣು ಹಪ್ಪಳ'ವನ್ನು ಪ್ರತ್ಯೇಕವಾಗಿ ನೀಡಿದ್ದರು. ಒಳ್ಳೆಯ ಕಾಂಬಿನೇಶನ್! ಹಪ್ಪಳ ಮಾಡುತ್ತಿದ್ದಾಗಲೇ ಹೂರಣವನ್ನು ತಿಂದು, ಅಮ್ಮನಿಂದ ಬೈಸಿಕೊಂಡ ಬಾಲ್ಯ ನೆನಪಾಯತು.

'ಚಿಕ್ಕ ಮಕ್ಕಳು ಹಣ್ಣುಹಪ್ಪಳಕ್ಕೆ ಗ್ರಾಹಕರು. ಚಾಕೋಲೇಟ್ ಬದಲಿಗೆ ಹಣ್ಣು ಹಪ್ಪಳ ನೀಡಿ. ಯಾವುದೇ ಕಲಬೆರಕೆ ಇಲ್ಲ. ಮಕ್ಕಳ ಹಲ್ಲು ಹಾಳಾಗದು' ಎನ್ನುತ್ತಾರೆ ರೇಖಾ. ಒಂದು ಹಪ್ಪಳಕ್ಕೆ ಐದು ರೂಪಾಯಿ. ಐದು ಹಪ್ಪಳದ ಒಂದು ಕಟ್ಟು. 'ಕೇಳಿ ಪಡೆವ' ಗಿರಾಕಿಗಳಿದ್ದಾರೆ.

ಸನಿಹದ ಅನ್ನಪೂರ್ಣ ಹೆಗಡೆಯವರು 'ಹಲಸಿನ ಸೊಳೆಯ ಪೌಡರ್' ಮಾಡಿದ್ದಾರೆ. ಅರ್ಧಪಾಲು ಅಕ್ಕಿ, ಉಳಿದರ್ದ ಪೌಡರ್ ಮಿಶ್ರಮಾಡಿದರೆ ದೋಸೆ ಘಮಘಮ! ಬಡಿಸಿದಷ್ಟು ಹೊಟ್ಟೆ ಸೇರುತ್ತದೆ.

ಹಲಸಿನ ಹಣ್ಣಿನ 'ಮಾಂಬಳ'ದ ಗಮ್ಮತ್ತೇ ಬೇರೆ! ಬಿಡುವಾದಾಗಿನ ಕೈಕೆಲಸ. ಹಳ್ಳಿಜ್ಞಾನ. ಇದಕ್ಕೆ ಕಾಟು (ಕಾಡು) ಮಾವಿನ ಬಳಕೆ. ಹೈಬ್ರಿಡ್ಗೆ ಆ ರುಚಿಯಿಲ್ಲ. ಇದಕ್ಕೆ ನಗರವೇ ಮಾರುಕಟ್ಟೆ. 'ಮಾಂಬಳ, ಹಲಸಿನ ಎಳೆ ಕಾಯಿ, ಹಣ್ಣಿಗೆ ನಿಗದಿತ ಜನರಿದ್ದಾರೆ. ಅವರಿಗೆ ಒದಗಿಸಲೇ ಬೇಕು' ಎನ್ನುತ್ತಾರೆ ತರಕಾರಿ ವ್ಯಾಪಾರಿಗಳಾದ ಅಶೋಕ್ ನಾಯಕ್.

ಮಾಂಬಳ ಗೊತ್ತು. 'ಹಂಬಳ' ಗೊತ್ತೇ? ಪಾಣಾಜೆಯ ಜಯಲಕ್ಷ್ಮೀ ದೈತೋಟ ಹೊಸ ರುಚಿಯನ್ನು ಪರಿಚಯಿಸಿದ್ದಾರೆ. ಬಕ್ಕೆ ಹಲಸು ತೊಳೆಯನ್ನು ಶುಚಿಮಾಡಿ, ಹದವಾಗಿ ಬೇಯಿಸಿ, ನುಣ್ಣಗೆ ರುಬ್ಬಿ. ಬಿಳಿ ಬಟ್ಟೆಯ ಮೇಲೆ ದಪ್ಪಕ್ಕೆ ಲೇಪ ಹಾಕಿ (ಹಚ್ಚುವುದು) ಬಿಸಿಲಲ್ಲಿ ಒಣಗಲು ಇಡಿ. ಅದರಲ್ಲಿರುವ ನೀರಿನಾಂಶ ಆರುವಲ್ಲಿಯ ತನಕ ಒಣಗಿಸಿ. ನಂತರ ಒಂದು ರಾತ್ರಿ ಅದನ್ನು ಆರಲು ಬಿಡಿ. ಮರುದಿವಸ ಬಟ್ಟೆಯಿಂದ ಬಿಟ್ಟುಕೊಡುತ್ತದೆ. ಮಗಚಿಟ್ಟು ಬಿಸಿಲಲ್ಲಿ ಪುನಃ ಒಣಗಿಸಿ. ಚೆನ್ನಾಗಿ ಬಿಸಿಲಲ್ಲಿ ಕಾದ ಇದನ್ನು ತುಂಡುತುಂಡು ಮಾಡಿಟ್ಟುಕೊಳ್ಳಿ. ಮಕ್ಕಳು ಹಟ ಮಾಡಿದರೆ ಅಂಗಡಿ ಚಾಕೋಲೇಟ್ಗೆ ಬದಲು ಇದನ್ನು ಕೊಡಿ. ಪುನಃಪುನಃ ಕೇಳಿ ಪಡೆಯುತ್ತಾರೆ!

ಸಾಗರದ ಗೀತಾ ಭಟ್ 'ಹಲಸಿನ ಗೀತಕ್ಕ' ಎಂದೇ ಪರಿಚಿತ. ಹಲಸಿನ ಮುಳ್ಳಿದ್ದ ಹೊರಕವಚ ಹೊರತುಪಡಿಸಿ ಮಿಕ್ಕೆಲ್ಲಾ ಭಾಗಗಳಿಂದ ಖಾದ್ಯ ತಯಾರಿಸುವ ಪ್ರವೀಣೆ! ಮೊನ್ನೆ ಶಿರಸಿಯ ಕಳವೆಯಲ್ಲಿ ಗೀತಕ್ಕ ಮೂವಕ್ಕೂ ಮಿಕ್ಕಿ ಹಲಸಿನ ಬೇರೆ ಬೇರೆ ಖಾದ್ಯಗಳನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿದ್ದರಂತೆ. ನಂತರ ತಿನ್ನಲೂ ಕೂಡಾ.

ಕುಟುಂಬ ಸಹಿತವಾಗಿ, ಸ್ನೇಹಿತರೊಂದಿಗೆ ಹೋಟೇಲ್, ಜಾತ್ರೆಗೆ ಹೋದಾಗ 'ಗೋಬಿಮಂಚೂರಿ' ಸೆಳೆಯುತ್ತದೆ. ಅದಕ್ಕೆ ಬಳಸುವ ಒಳಸುರಿ!? ಗೀತಕ್ಕ ಹಲಸಿನ ಮಂಚೂರಿ ತಯಾರಿಸುತ್ತಾರೆ.. ಮಂಚೂರಿ 'ಮಾಡಿ ತೋರಿಸಿ'ದಾಗಲೇ ಜನ ನಂಬ್ತಾರಂತೆ! ಸಭೆಗಳಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದಾಗ ಹಲಸಿನ ಮೌಲ್ಯವರ್ಧನೆ, ಮಾನವರ್ಧನೆಯ ಬಗ್ಗೆಯೇ ಆಲೋಚಿಸುವ ಗೀತಕ್ಕ ಅವರ ಸ್ಪೆಷಲ್ - 'ಜ್ಯಾಕ್ ಮಂಚೂರಿ' ಹೋಟೇಲಿನ ಪಾಕಶಾಲೆಗೆ ನುಗ್ಗಿದರೆ, ಹಿತ್ತಿಲಿನ ಹಲಸಿಗೆ ಮಾನ ಬಾರದೇ!

ಹಲಸು ಎಂದಾಗ 'ಅಜೀರ್ಣ' ಮಾರಾಯ್ರೆ - ಅಷ್ಟಾವಕ್ರನಂತೆ ಮುಖ ಸೊಟ್ಟಗಾಗುತ್ತದಲ್ಲಾ. ಅಂತಹವರಿಗೆ ಗೀತಕ್ಕ ಹೇಳ್ತಾರೆ - 'ಹಲಸು ತಿಂದ ಮೇಲೆ ಒಂದಿಷ್ಟು ಶುಂಠಿಚೂರುಗಳನ್ನು ಜಗಿದು ತಿನ್ನಿ'.

ದಶಕಕ್ಕಿಂತ ಹಿಂದೆ ನನ್ನೂರಿನ ಸುತ್ತಮುತ್ತ ಮಾಂಸಾಹಾರಪ್ರಿಯ ಬಂಧುಗಳ ಮದುವೆ, ಶುಭ ಸಮಾರಂಭಗಳಲ್ಲಿ 'ಮಾಂಸದೂಟ'ವಿದ್ದರೆ ಒಂದೈವತ್ತು ಮಂದಿಯಾದರೂ ಊಟಕ್ಕೆ ಜಾಸ್ತಿ! ಇದೇ ರೀತಿ ಹಲಸಿನ 'ಕೆತ್ತುಕಾಯಿ ಸಾಂಬಾರು' ಇದ್ದರೆ ಇಲ್ಲಿಯೂ ಊಟಕ್ಕೆ ಜನ ಜಾಸ್ತಿ ಎಂಬ ಹೊಸ ಸುದ್ದಿ ಹೇಳಿದ್ದಾರೆ ತುಮಕೂರಿನ ಪತ್ರಕರ್ತ ಮಿತ್ರ ಪದ್ಮರಾಜ್.

ಇಷ್ಟೆಲ್ಲಾ ಹಲಸಿನ ವಿಶೇಷಗಳು, ವಿಶೇಷಜ್ಞರು ಹಲಸಿನ ಮೇಣವನ್ನು ಅಂಟಿಸಿಕೊಂಡಿದ್ದಾರೆ. 'ಹಲಸಿನ ಮರದಲ್ಲಿ ಎಷ್ಟು ಮೋಪು ಸಿಗಬಹುದು, ಅದರಿಂದ ಎಷ್ಟು ರೊಕ್ಕ ಕಿಸೆ ಸೇರಬಹುದು, ಕಡಿಯಲು ಇನ್ನು ಎಷ್ಟು ದಿವಸ ಬೇಕಾದೀತು - ಎಂಬ ಲೆಕ್ಕಾಚಾರ ಮಾತ್ರ ನೋಡುವವರೇ. ಹಣ್ಣು, ಕಾಯಿಗಾಗಿ ಕತ್ತೆತ್ತಿ ಮರವನ್ನು ಯಾರೂ ನೋಡುವುದಿಲ್ಲ' ಮೈಕೆ ಗಣೇಶರಲ್ಲಿ ಊಟದ ಮಧ್ಯೆ ಎ.ಪಿ.ಸದಾಶಿವರು ಹೇಳಿದ ಮಾತು ವಾಸ್ತವಕ್ಕೆ ಕೈಗನ್ನಡಿ.

ಇನ್ನೇನು ಹಲಸಿನ ಸುದ್ದಿ ಮುಗಿಯಿತು ಎಂದಾವಾಗ ಪಾತನಡ್ಕದ ಸುಶೀಲಕ್ಕರಿಂದ ಮಾಹಿತಿ - 'ಗೇರು ಹಣ್ಣಿನ ಹಲ್ವ ಮಾಡಿದ್ದೇನೆ. ಚೆನ್ನಾಗಿದೆ. ಕಳುಹಿಸಿಕೊಡುತ್ತೇನೆ'.

0 comments:

Post a Comment