ಮೋದಕ ತಿನ್ನಲು ಗಣೇಶ ಕಳೆದ ವರುಷ ಬಂದಿದ್ದ. ಈ ವರುಷ ಬಂದಿದ್ದಾನೆ. ಮುಂದಿನ ವರುಷವೂ ಬರುತ್ತಾನೆ. ಮುಂದೆ ಬರುತ್ತಲೇ ಇರುತ್ತಾನೆ. ಆತ ಬರುವಾಗಲಾದರೂ ನಮ್ಮಲ್ಲಿ ಒಂದಷ್ಟು ದಿವಸ ಧಾರ್ಮಿಕ ಪ್ರಜ್ಞೆ ಜಾಗೃತ(!)ವಾಗಿರುತ್ತದಲ್ಲಾ, ಅಷ್ಟೇ ಸಮಾಧಾನ. ಸಂತೃಪ್ತಿ.
ಕುಡ್ಲಕ್ಕೆ ಹೋಗಿದ್ದೆ. ಹನಿಕಡಿಯದ ಮಳೆ. ಕಾರ್ಸ್ಟ್ರೀಟ್ನಲ್ಲಿ ಹಬ್ಬಕ್ಕೆ ಬೇಕಾದ ಪರಿಕರಗಳ ವ್ಯಾಪಾರ ಜೋರಿತ್ತು. ಒಂದೆಡೆ ಸುಮಾರು ಎಪ್ಪತ್ತರ ಅಜ್ಜಿಯೊಬ್ಬರು ರಸ್ತೆಬದಿ ಕೊಡೆಯಡಿಯಲ್ಲಿ ತುಳಸಿ, ಹಿಂಗಾರ, ಕೇದಗೆ, ಗರಿಕೆಯ ಬುಟ್ಟಿಯಿಟ್ಟುಕೊಂಡು ಕುಳಿತಿದ್ದರು. ಆಗಲೋ ಈಗಲೋ ಜನ ಅಜ್ಜಿಯಿಂದ ಖರೀದಿಸುತ್ತಿದ್ದರು.
ಆ ಅಜ್ಜಿ ಕಾರ್ಸ್ಟ್ರೀಟ್ ವಠಾರದಲ್ಲಿ ಕಳೆದ ಮೂವತ್ತು ವರುಷದಿಂದ ವ್ಯಾಪಾರ ಮಾಡುತ್ತಾರೆ. ಗಣೇಶನ ಹಬ್ಬ, ಅಷ್ಟಮಿ, ನವರಾತ್ರಿ ಸಮಯದಲ್ಲಿ ಭರ್ಜರಿ ವ್ಯಾಪಾರ. ಗರಿಕೆಯಂತಹ ಅಪರೂಪದ ವಸ್ತುಗಳು ಬೇರೆಡೆ ಸಿಗುತ್ತಿಲ್ಲ. ಅದು ಅಜ್ಜಿಯಲ್ಲಿ ಸಿಗುತ್ತದೆಂದು ಗೊತ್ತಿದ್ದವರಿಗೆ ಗೊತ್ತು. ಹಾಗಾಗಿ ಹುಡುಕಿ ಬರುವ ಅಜ್ಞಾತ ಗ್ರಾಹಕರು ಅಜ್ಜಿಯ ಅಸ್ತಿ.
ಅಜ್ಜಿಯ ಮಕ್ಕಳೆಲ್ಲಾ ಐದಂಕೆ ಎಣಿಸುವ ಉದ್ಯೋಗದಲ್ಲಿದ್ದಾರೆ. ಈ ವ್ಯಾಪಾರ ಅಜ್ಜಿಗೆ ಹೊಟ್ಟೆಪಾಡಲ್ಲ. ಮಳೆ ಬರುತ್ತಿದ್ದಾಗ ಬಿಸಿಬಿಸಿ ಕಾಫಿ ಹೀರುತ್ತಾ ಹಾಯಾಗಿ ಮನೆಯಲ್ಲಿರಬಹುದಿತ್ತು. ಅಜ್ಜಿಯ ಪಾಲಿಗೆ ಇದು ದೇವರ ಸೇವೆ. 'ಎಷ್ಟೋ ವರುಷದಿಂದ ಸಾಕಷ್ಟು ಮಂದಿಗೆ ತುಳಸಿ, ಕೇದಗೆ, ಗರಿಕೆ ಒದಗಿಸಿದ್ದೇನೆ. ನನ್ನನ್ನೇ ನಂಬಿದವರು ಅದೆಷ್ಟೋ ಮಂದಿ. ಅವರಿಗೆ ಮೋಸ ಮಾಡಿದಂತೆ ಆಗುತ್ತದೆ' ಎಂದರು.
ಅಜ್ಜಿಯ ವ್ಯಾಪಾರ ಇಲ್ಲದಿದ್ದರೆ, ಅವರಲ್ಲಿಗೆ ಬರುವ ಗ್ರಾಹಕರು ಬೇರೆಡೆ ಹೋಗ್ತಾರೆ ಎಂಬುದು ಬೇರೆ ಮಾತು. 'ನಂಬಿದವರಿಗೆ ತೊಂದರೆಯಾಗಬಾರದು' ಎಂಬ ಅಜ್ಜಿಯ ನಂಬುಗೆ' ಇದೆಯಲ್ಲಾ, ಇದಕ್ಕಿಂತ ದೊಡ್ಡ ಪೂಜೆ ಬೇರಿಲ್ಲ. ತನ್ನಿಂದ ಒಯ್ದ ತುಳಸಿ, ಪುಷ್ಪಗಳು ದೇವರ ಮುಡಿಗೆ ಸೇರುತ್ತದಲ್ಲಾ, ಆ ಪುಣ್ಯ ನನಗೆ ಸಾಕು ಎಂದು ಬಾಯಿ ತುಂಬಾ ನಕ್ಕು, ನಶ್ಯ ಬುರುಡೆ ಕೈಗಿತ್ತು, 'ಬರ್ಸ ಜೋರುಂಡು, ಒಯ್ಪುಲೆ' ಎನ್ನಬೇಕೇ! ನಯವಾಗಿ ತಿರಸ್ಕರಿಸಿದೆ.
ರಂಗುರಂಗಿನ ಬಣ್ಣಗಳ-ಭರಾಟೆಗಳ ಮಧ್ಯೆ ಅಜ್ಜಿಯಂತಹ ಮನಸ್ಸುಗಳು, ನಂಬುಗೆಗಳು ಪ್ರಕಟವಾಗುವುದಿಲ್ಲ. ನೋಟುಗಳ ಮೇಲೆ ಭವಿಷ್ಯ ಬರೆವ ಕಾಲಘಟ್ಟದಲ್ಲಿ ಕಳೆದ ಕಾಲದ ಕಥನಗಳಿಗೆ ಇಂತಹ ಅಜ್ಜಿಯಂದಿರು ಅಲ್ಲಲ್ಲಿ ಸಿಗ್ತಾರೆ. ಇವರೆಲ್ಲಾ ಭೂತಕಾಲದ ಯಶದ ರೂವಾರಿಗಳು.
ಅಜ್ಜಿಯನ್ನು ಜ್ಞಾಪಿಸಿಕೊಳ್ಳುತ್ತಿದ್ದಂತೆ, ದೂರದ ಧಾರವಾಡದಿಂದ ಮಾಧ್ಯಮ ಮಿತ್ರ ಹರ್ಷವರ್ಧನ ಶೀಲವಂತ ಮಿಂಚಂಚೆ ಕಳುಹಿಸಿದ್ದರು. 'ಧಾರವಾಡದಲ್ಲಿ ಗಣಪನ ಮೂರ್ತಿಗಳೆಲ್ಲಾ ಈ ವರುಷ ಸಾವಯವವಾಗಿದ. ಅಂದರೆ ರಾಸಾಯನಿಕ ಬಣ್ಣಗಳಿಂದ ಮುಕ್ತವಾಗಿವೆ' ಎಂದರು.
ಸುಮಾರು ನೂರೈವತ್ತಕ್ಕೂ ಮಿಕ್ಕಿ ಚಿಕ್ಕ-ದೊಡ್ಡ ಗಣಪನ ಮೂರ್ತಿಗಳು ನೈಸರ್ಗಿಕ ಬಣ್ಣಗಳಿಂದ ರೂಪಿಸಲಾಗಿದೆ. ಪರಿಣಾಮ, ಮೂರ್ತಿ ವಿಸರ್ಜನೆ ಮಾಡಿದ ಕೆರೆ ಬಾವಿಗಳು ವಿಷದಿಂದ ಮುಕ್ತ. ಈ ಆಂದೋಳನಕ್ಕೆ ಅಲ್ಲಿನ ಸಮಾನಾಸಕ್ತ ಮನಸ್ಸುಗಳು ಒಂದಾಗಿವೆ. ಜನರಲ್ಲಿ ಅರಿವನ್ನು ಮೂಡಿಸುವ ಕೆಲಸ ಮಾಡಿದೆ. ಕರಪತ್ರಗಳ ಮುಲಕ, ಪತ್ರಿಕಾ ಬರೆಹಗಳ ಮೂಲಕ, ಮನೆಮನೆಭೇಟಿ ಮೂಲಕ ಜನರಲ್ಲಿ ರಾಸಾಯನಿಕದ ಕುರಿತಾದ ತೊಂದರೆಯನ್ನು ವಿಷದೀಕರಿಸಿದೆ. ಇದರಿಂದಾಗಿ ಶೇ.50ಕ್ಕೂ ಮಿಕ್ಕಿ ತಂತಮ್ಮ ಮನೆಗಳಲ್ಲಿ ಆರಾಧನೆಗಿಡುವ ಗಣಪನಿಗೆ ನೈಸರ್ಗಿಕ ಬಣ್ಣವನ್ನು ಆರಿಸಿಕೊಂಡಿದ್ದಾರಂತೆ.
ಈ ಸಂತೋಷದ ನಡುವೆ ಬೇಸರದ ಘಟನೆಯನ್ನೂ ಹೇಳಿದ್ದರು. ಅಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಗಣೇಶನನನ್ನು ಅಲಂಕಾರ ಮಾಡುವಾಗ ಹೂಗಳ ಜತೆ, ಗೀಜಗ ಹಕ್ಕಿಯ ಗೂಡು ಬಳಸುತ್ತಾರೆ. ಇದೊಂದು ಸಂಪ್ರದಾಯವಾಗಿಬಿಟ್ಟಿದೆ. ಬೇಡಿಕೆಯಿದ್ದರೆ ಮಾರುಕಟ್ಟೆಯಲ್ಲಿ ಮಾರುವವರೂ ಇದ್ದಾರೆನ್ನಿ.
ಗೀಜಗದ ಹಕ್ಕಿನ ಒಣಗಿದ ಗೂಡಿಗಿಂತ ಹಸಿ ಗೂಡಿಗೆ ಹೆಚ್ಚು ಬೇಡಿಕೆ. ಜನರ ಮರ್ಮವನ್ನರಿತ ವ್ಯಾಪಾರೀ ಹೊಂತಕಾರಿಗಳಿಗೆ ಮತ್ತೇನು ಕೆಲಸ - ಮರ, ಪೊಟರೆ, ಪೊದರು, ಪಾಳುಬಾವಿ, ಕೆರೆಬದುಗಳಲ್ಲೆಲ್ಲಾ ಜಾಲಾಟ. ಗೂಡಿನಲ್ಲಿದ್ದ ಮರಿ, ಮೊಟ್ಟೆ ಯಾವುದನ್ನೂ ಲೆಕ್ಕಿಸದೆ ನಾಶ ಮಾಡಿ, ಸಿಗುವ ರೊಕ್ಕದ ನಿರೀಕ್ಷೆಯಲ್ಲಿ ಆಯ್ದು ತರುತ್ತಾರೆ. ಪ್ರತೀವರುಷ ಏನಿಲ್ಲವೆಂದರೂ ಎರಡುಸಾವಿರಕ್ಕಿಂತ ಹೆಚ್ಚಿನ ಹಸಿ ಗೂಡುಗಳು ಮಾರಾಟವಾಗುತ್ತವಂತೆ.
ಮಾರಾಟಗಾರರಿಗೆ ಏನೋ ಕಾಸು ಕಿಸೆಗೆ ಸೇರಿತು. ಗಣೇಶನ ಅಲಂಕಾರವೂ ಭರ್ಜರಿಯಾಗಿಯೇ ಆಯಿತೆನ್ನಿ. ಗಣೇಶೋತ್ಸವವೂ ಮುಗಿಯಿತು. ಆದರೆ ಹಸಿ ಗೂಡನ್ನು ಆರಿಸುವಾಗ ಅದರೊಳಗೆ ಬೆಚ್ಚನೆ ಕಾವು ಕೊಡುತ್ತಿದ್ದ, ಹಾರಲಾರದ ಕಂದಮ್ಮಗಳಿಗೆ ಗುಟುಕು ನೀಡುತ್ತಿದ್ದ ತಾಯಿಹಕ್ಕಿಯ ರೋದನವು ಕಾಂಚಣದ ಮುಂದೆ ಕುರುಡು-ಕಿವುಡು. ಹಬ್ಬದ ಅಲಂಕಾರದ ಹಿನ್ನೆಲೆಯಲ್ಲಿ ಎಷ್ಟೊಂದು ಗೂಡು, ಅದರೊಳಗಿದ್ದ ಮೊಟ್ಟೆಗಳು, ಎಷ್ಟೊಂದು ಮರಿಹಕ್ಕಿಗಳ ನಾಶ! ಜೀವವೈವಿಧ್ಯದ ಕೊಂಡಿ ಸಡಿಲವಾಗುತ್ತಿರುವುದು ನಿಜಕ್ಕೂ ಗಣೇಶನಿಗೆ ಖುಷಿ ತಾರದ ವಿಚಾರ.
ಈ ವರುಷ ಪಕ್ಷಿ, ಪರಿಸರ ಪ್ರಿಯರ ಹೋರಾಟ ಫಲಕೊಟ್ಟಿದೆ. ಗೀಜಗನ ಗೂಡು ಮಾರಾಟ ಮಾಡುವ ಯಾರೇ ಆಗಲಿ, ಅವರ ಸುಳಿವು ಸಿಕ್ಕರೆ ಅರಣ್ಯ ಇಲಾಖೆ, ಪೋಲೀಸ್ ಇಲಾಖೆಗೆ ದೂರು ನೀಡಬಹುದೆಂದು ವರಿಷ್ಠರು ತಿಳಿಸಿದ್ದಾರಂತೆ. 'ಈ ಸಲ ಗೀಜಗನ ಗೂಡಿಲ್ಲದೆ ಹಬ್ಬದ ಆಚರಣೆಯಾಗ್ತದೋ ನೋಡಬೇಕು' ಎನ್ನುತ್ತಾರೆ ಹರ್ಷ. ಬಹುಶಃ ಎಂದೋ ಯಾರೋ ಗೂಡನ್ನಿಟ್ಟು ಗಣೇಶನಿಗೆ ಅಲಂಕಾರ ಮಾಡಿರಬೇಕು. ಅದೇ ಮುಂದೆ ಪರಂಪರೆಯಾಗಿ ಬಂತು. ಶ್ರಾದ್ಧದಲ್ಲಿ ಬೆಕ್ಕು ಹಿಡಿದು ಬಂಧಿಸಿದ ಹಾಗೆ!
ಒಂದೆಡೆ 'ಭರ್ಜರಿ-ಬರೋಬ್ಬರಿ' ಉತ್ಸವ' ಮತ್ತೊಂದೆಡೆ ಪರಿಸರ ಕಾಳಜಿ, ಆರೋಗ್ಯ ರಕ್ಷಣೆಯತ್ತ ಮನಮಾಡಿರುವ ಒಳ್ಳೆಯ ಮನಸ್ಸುಗಳ ಕಾಣದ ಕೆಲಸ. ಗಣೇಶನ ರಕ್ಷೆಯಿರುವುದು ಎರಡನೇ ಕೆಲಸಕ್ಕಂತೂ ಖಚಿತ. ಏನಂತೀರಿ?
ಚಿತ್ರ, ಮಾಹಿತಿ: ಹರ್ಷವರ್ಧನ ಶೀಲವಂತ
Home › Unlabelled › ಗೀಜಗ ಗೂಡಿಗೆ 'ವಿಘ್ನ'!
1 comments:
ಅತ್ಯತ್ತಮ ಲಲಿತ ಪ್ರಭಂಧ. ಅಜ್ಜಿಯ೦ತಹರು ಪ್ರಸ್ತುತದಲ್ಲಿ ನಮ್ಮ ಮಾಧ್ಯಮಗಳಲ್ಲಿ. ಅಲ್ಲೇನಿದ್ದರೂ ಕುದುರೆ(ಅಲ್ಲ ಕತ್ತೆ ಅದು ಅಲ್ಲ ಬಿಡಿ ಕಷ್ಟ ಪಟ್ಟು ದುಡಿದು ತಿನ್ನೋ ಪ್ರಾಣಿ -)ವ್ಯಾಪಾರದಲ್ಲಿ ವ್ಯಾಪರವಗುತ್ತಿರುವ ನಿರ್ಲಜ್ಜ ಜನಪ್ರತಿನಿಧಿಗಳ ವೈಭವೀಕರಣ.
ಗೀಜಗನ ಗೂಡಿಗೇ ಕೈ ಹಾಕಿದ್ದನ್ನು ತಪ್ಪಿಸುವ ಪ್ರಯತ್ನ ಪ್ರಶಾ೦ಷಾಹನೀಯ.
ಲೇಖನ ಮಾರ್ಮಿಕವಾಗಿದೆ.
Post a Comment