Wednesday, September 29, 2010

'ಗುರು'ವಿಗೆ ನಮನ


ಪ್ರತೀ ದಿನ ಒಂದಲ್ಲ ಒಂದು 'ದಿನ' ಇದ್ದೇ ಇದೆ! ದಿನದ ಮಹತ್ವವನ್ನು ಸಾರುವ ಬರಹಗಳು, ಚಿಂತನೆಗಳು ಮಾಧ್ಯಮಗಳಲ್ಲಿ, ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ. ಅಷ್ಟೊತ್ತಿಗೆ ಮತ್ತೊಂದು ದಿನ ಬಂದೇ ಬಿಡುತ್ತದೆ!

ಇಂದು (ಸೆ.೫) ಶಿಕ್ಷಕರ ದಿನ. ಶಿಕ್ಷಕರೆಂದರೆ ಗುರುಗಳು. ಗುರುವೆಂದರೆ ಬದುಕಿನಲ್ಲಿ ಮಹತ್ತನ್ನು ತೋರುವ ತೋರಿಸುವ ದೀವಿಗೆ. ಆ ದೀವಿಗೆಯಿಂದ ಬದುಕಿನ ಸತ್ಯವನ್ನು ಹುಡುಕುವ ಪ್ರಯತ್ನ. ಇದರಲ್ಲಿ ಸಫಲರಾಗುವವರ ಸಂಖ್ಯೆ ವಿರಳ.

ವಿಫಲತೆ ಯಾಕೆ? ಎಲ್ಲಿ? ಗುರು ತೋರಿದ ದಾರಿಯಲ್ಲಿ ಸಾಗಲು ಬೇಕಾದ ಉಪಾಧಿಗಳ ಕೊರತೆ. ಅದು ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತದೆ. ಬಾಲ್ಯದ ಶಿಕ್ಷಣ ವಿದ್ಯಾರ್ಥಿಯ ಮೂಲ ಅಡಿಗಟ್ಟು. ಅದು ಉರು ಹೊಡೆವ ಶಿಕ್ಷಣವಲ್ಲ. ಗ್ರಹಿಸಿ, ಅನುಷ್ಠಾನಿಸುವ ಶಿಕ್ಷಣ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅವೆಲ್ಲಿವೆ? ಪರೀಕ್ಷೆ ಬರೆದು 'ಎ,ಬಿ.ಸಿ.ಡಿ' ಶ್ರೇಣಿಗಳು ಸಿಕ್ಕರೆ ಸಾರ್ಥಕದ ಕ್ಷಣ!

ಕೀರ್ತಿಶೇಷ ಡಾ.ಶೇಣಿ ಅಜ್ಜ ಒಮ್ಮೆ ಹೇಳಿದ್ದರು - ಅವರಮ್ಮ ಪ್ರತಿನಿತ್ಯ ಸಂಜೆ ಭಾರತ, ರಾಮಾಯಣ, ಭಾಗವತಗಳ ಕಥೆಗಳನ್ನು ಹೇಳುತ್ತಿದ್ದರಂತೆ. ಮಕ್ಕಳೆಲ್ಲಾ ಅವರ ಮುಂದೆ ಕುಳಿತು ಕಥೆಗಳನ್ನು ಆಲಿಸುವುದು. ಹೀಗೆ ಕಥೆಗಳ ಮೂಲಕ ಪುಸ್ತಕವನ್ನು ಓದದೆ ಪುರಾಣಗಳ ಪರಿಚಯ ಬಾಲ್ಯದಲ್ಲೇ ನಮಗಾಗಿತ್ತು. ಅದೇ ಮುಂದೆ ನನ್ನನ್ನು ಅರ್ಥಧಾರಿಯನ್ನಾಗಿ ರೂಪಿಸಿತ್ತು.

ಕಥಾಶ್ರವಣ ಬದುಕಿನಿಂದ ಅಜ್ಞಾತವಾಗಿದೆ. ಅಜ್ಜಿಯಂದಿರೇ ಇಲ್ಲದ ಮೇಲೆ ಕಥೆ ಎಲ್ಲಿಂದ ಅಲ್ವಾ! ಕತೆ ಕೇಳುವುದು ಬೇಡವಪ್ಪಾ, ಓದೋಣವೇ? ಆ ಹೊತ್ತಿಗೆ ಆಕಳಿಕೆ ಸುನಾಮಿಯಂತೆ ಅಟ್ಟಿಸಿಕೊಂಡು ಬರುತ್ತದೆ. ಅಕ್ಷರಗಳೆಲ್ಲಾ ಮಯಮಯವಾಗಿ ಕಾಣುತ್ತದೆ.
ಮಕ್ಕಳು ಟಿವಿಯ ದಾಸರಾದರಪ್ಪಾ ಅಂತ ಹಿರಿಯರು ಗೊಣಗಾಟ. ಅವನು ಸೀರಿಯಲ್ ನೋಡದೆ ಊಟ ಮಾಡದು ಎಂಬ ಅಮ್ಮನ ಆಕ್ಷೇಪ. ಅವಳಿಗೆ ಝೀ ಟೀವಿಯೇ ಆಗಬೇಕು ಎನ್ನುವ ಅಪ್ಪ. ಹೀಗೆ ಟಿವಿಯ ಸುತ್ತವೇ ಗಿರಕಿ ಹೊಡೆವ ಚಿಂತನೆ. ಮಗುವನ್ನು ಇಷ್ಟೆಲ್ಲಾ ಆಕ್ಷೇಪ ಮಾಡುವ ಅಪ್ಪಾಮ್ಮಂದಿರಿಗೆ ಸೀರಿಯಲ್ ಎಲ್ಲಾದರೂ ಕಳೆದು ಹೋಯಿತೆಂದರೆ ಗುಡುಗು, ಸಿಡಿಲು! ಇಲ್ಲಿ ಯಾರ ಪರ ವಕಾಲತ್ತು ಮಾಡೋಣ, ಮಗುವಿನ ಮೇಲೋ, ಅಪ್ಪಾಮ್ಮನ ಮೇಲೋ?

ಮಗುವಿನ ಭವಿಷ್ಯದ ಅಡಿಕಟ್ಟು ರೂಪಿತವಾಗುವುದು ಬಾಲ್ಯಶಿಕ್ಷಣದಿಂದ ತಾನೆ. ಇದು ಶಾಲೆಯಲ್ಲೇ ಸಿಗಬೇಕು ಎನ್ನುವ ಹಠ ಒಂದೆಡೆ. ಶಾಲೆಯಲ್ಲಿ ನಿಗದಿಪಡಿಸಿದ ಪಠ್ಯವನ್ನು ಹೊರತು ಪಡಿಸಿ ಬೇರೇನನ್ನು ನಿರೀಕ್ಷಿಸೋಣ. ಅದು ಸರಕಾರಿ ಕೃಪಾಪೋಶಿತ ಪಠ್ಯ. ಮಗುವಿನ ಶಿಕ್ಷಣಕ್ಕೆ ಪೋಷಕವಾಗುವ ವಾತಾವರಣ ಮನೆಯಲ್ಲಿ ರೂಪಿತವಾಗದಿದ್ದರೆ ಗುರು ತೋರಿದ ದಾರಿ ವಿದ್ಯಾರ್ಥಿಗೆ ಮಯಮಯವಾಗಿ ಕಂಡೀತು.

ಇಷ್ಟನ್ನು ಹೇಳುವಾಗ ನನ್ನ ಪ್ರಾಥಮಿಕ ಶಾಲಾ ದಿನಗಳು ಅಸ್ಪಷ್ಟವಾಗಿ ನೆನಪಾಗುತ್ತದೆ. ಅದು ಚಿಕ್ಕ ಹಳ್ಳಿ ಶಾಲೆ. ಗೋದಾಮಿನಂತಿರುವ ಚಿಕ್ಕ ಕಟ್ಟಡ. ಕೋಣೆಯೊಳಗೆ ಒಂದರಿಂದ ನಾಲ್ಕು ತರಗತಿಗಳು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಜವಾಬ್ದಾರಿ.

ಶಾಲೆಗೆ ಕಾಂಕ್ರಿಟ್ ಆವರಣವಿಲ್ಲ. ಶಾಲಾ ಕಟ್ಟಡದ ಸುತ್ತ ಚಿಕ್ಕ-ಚೊಕ್ಕ ಹೂದೋಟ. ಅದಕ್ಕೆ ಬಿದಿರಿನ ಬೇಲಿ. ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಲ್ಲಿ ಕೆಲವು ಸೊಂಟತ್ರಾಣಿಗಳನ್ನು ಸನಿಹದ ಕಾಡಿಗೆ ಅಟ್ಟಿ, ಬಿದಿರಿನ ಮುಳ್ಳನ್ನು ತರುವಂತೆ ಅಧ್ಯಾಪಕರು ಸೂಚಿಸುತ್ತಿದ್ದರು. ಬೇಲಿಗೆ ಆಧಾರವಾಗಿ ಬೇಕಾಗುವ ಗೂಟಗಳನ್ನು ಆಯಲು ಇನ್ನೊಂದಿಷ್ಟು ಮಂದಿ. ಗಿಡಗಳ ಬುಡಕ್ಕೆ ಬೇಕಾಗುವ ಸೊಪ್ಪು, ಗೊಬ್ಬರದ ಹೊಣೆ ಬಡಕಲು ದೇಹದವರಿಗೆ! ಈ ಪಂಕ್ತಿಯಲ್ಲಿ ನಾನೂ ಇದ್ದೆ!

ವಿವಿಧ ತಂಡಗಳಾಗಿ ಹೋದ ವಿದ್ಯಾರ್ಥಿಗಳ ಶ್ರಮದ ಫಲವಾಗಿ ಹೂದೋಟಕ್ಕೆ ಚೊಕ್ಕದಾದ ಬೇಲಿ ತಯಾರಾಗುತ್ತಿತ್ತು. ಇದು ಸುಮಾರು ನಾಲ್ಕು ದಶಕದ ಹಿಂದಿನ ಸ್ಥಿತಿ. ಬೇಲಿಯೂ ತಯಾರಾಗಬೇಕು. ಜೊತೆಗೆ ಮಕ್ಕಳಿಗೂ ನೇರ ಶಿಕ್ಷಣ ಸಿಗುವಂತಿರಬೇಕು ಎಂಬ ಆಶಯ. (ಶಾಲೆಗೆ ಆರ್ಥಿಕ ದುಃಸ್ಥಿತಿಯಿಲ್ಲ) ನಾಲ್ಕು ದಶಕದ ಹಿಂದಿನ ಆ ಪರೋಕ್ಷ ಶಿಕ್ಷಣವನ್ನು 2010ರಲ್ಲಿ ನಾವು ಹೇಗೆ ಆಲೋಚಿಸಿಯೇವು - 'ಛೇ.. ಶಾಲೆಗೆ ಫೀಸ್ ಕೊಡುವುದಿಲ್ವಾ. ನಿಜಕ್ಕೂ ಮಕ್ಕಳನ್ನು ಈ ರೀತಿ ಶೋಷಿಸಬಾರದಪ್ಪಾ' ಎನ್ನುತ್ತೇವೆ. ಆದರೆ ಆ ಕಾಲಘಟ್ಟದಲ್ಲಿ ಯಾವೊಬ್ಬ ಹೆತ್ತವರೂ ಈ ರೀತಿ ಯೋಚಿಸಲಿಲ್ಲ.

ಇದು ಬೇಲಿಯ ಕತೆಯಾದರೆ ಶಾಲಾ ಕ್ರೀಡೋತ್ಸವ, ಶಾರದಾ ಪೂಜೆ, ರಾಷ್ಟ್ರೀಯ ಹಬ್ಬಗಳಂದು ಎಲ್ಲಾ ಮಕ್ಕಳಿಗೂ ಸಂಭ್ರಮ. ಮೆರವಣಿಗೆ ಮೂಲಕ ರಾಷ್ಟ್ರನಾಯಕರ, ದೇಶದ ಕುರಿತಾದ ಗುಣಗಾನ. ಶುಚಿಯಿಂದ ತೊಡಗಿ, ಕಾರ್ಯಕ್ರಮವನ್ನು ನಡೆಸಿಕೊಳ್ಳುವಲ್ಲಿಯ ತನಕದ ಸಮಸ್ತ ಕೆಲಸಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ದರು.

ಆಗ ಅಧ್ಯಾಪಕರಾಗಿದ್ದ ನಾರಾಯಣ ಮಾಸ್ತರರು (ಅವರು ಟೊಪ್ಪಿ ಧರಿಸುತ್ತಿದ್ದುದರಿಂದ ಟೊಪ್ಪಿ ಮಾಸ್ತರೆಂದೇ ಖ್ಯಾತಿ) ನಮ್ಮ ಮನೆಗೆ ಬಂದಿದ್ದಾಗ ಹೇಳಿದ ಮಾತನ್ನು ಅಪ್ಪ ಆಗಾಗ್ಗೆ ಜ್ಞಾಪಿಸಿಕೊಳ್ಳುತ್ತಿದ್ದರು - ಮಕ್ಕಳಿಗೆ ಪಾಠ ಬಾಯಿಪಾಠ ಮಾಡಿದ್ದರಿಂದ ಏನೂ ಪ್ರಯೋಜನವಿಲ್ಲ. ಮಾರ್ಕ್ ಸಿಗಬಹುದಷ್ಟೇ. ಪಾಠಪಠ್ಯದೊಂದಿಗೆ ದುಡಿಯುವ ಶಿಕ್ಷಣವನ್ನು ಶಾಲೆಯಲ್ಲಿ ನೀಡಬೇಕು.' ಟೊಪ್ಪಿ ಮಾಸ್ತರರು ಹೇಳಿದ ಅನುಭವದ ಪಾಠ ಈಗಿನ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾದಂತಹ ಸರಕು.

ಗುರು ತೋರಿದ ಕೈದೀವಿಗೆಯಲ್ಲಿ ನಮ್ಮ ಪಾತ್ರಕ್ಕೆ ನಿಲುಕುವಷ್ಟು ಮಾತ್ರ ಬೆಳಕು ಸಿಗಬಲ್ಲುದು. ಹೆಚ್ಚು ಬೆಳಕು ಬೀರಲು ಸಹಾಯಕವಾಗುವ ಸಂಪನ್ಮೂಲಗಳನ್ನು ಬಾಚಿಕೊಳ್ಳಲು ಸಮರ್ಥರಾದರೆ ಅದೇ 'ಗುರು'ವಿಗೆ ಸಲ್ಲಿಸುವ ಪ್ರಣಾಮಗಳು.
ಆಧುನಿಕ ಶಿಕ್ಷಣವೇ ಮೇಲು, ಹಿಂದಿನ ಶಿಕ್ಷಣ ವ್ಯವಸ್ಥೆಗಳೆಲ್ಲಾ ಅರ್ಥಶೂನ್ಯ ಎಂದು ಒಂದೇ ಉಸಿರಿಗೆ ಅಡ್ಡಮಾತಾಡುತ್ತೇವೆಲ್ಲಾ, ಆ ಹೊತ್ತಿಗೆ ಕೈಗೆ ಬರುವುದು ಕಂಪ್ಯೂ 'ಮೌಸ್' ಮಾತ್ರ!

2 comments:

Pandit Sri Subrahmanya Bhat said...

Thanks ನಾರಾಯಣ............... ಹಳೇ ಶಾಲಾ ದಿನಗಳನ್ನು ನೆನಪಿಸಿದ್ದಕ್ಕೆ ಅದರಲ್ಲೂ ನಾರಾಯಣ ಮಾಸ್ತರು

ಸೀತಾರಾಮ. ಕೆ. / SITARAM.K said...

ಹಿಂದಿನ ಮತ್ತು ಇಂದಿನ ವಿಧ್ಯಾರ್ಥಿಗಳ ಬದುಕನ್ನ ತಮ್ಮ ನೆನಪ ಮೂಸೆಯಲ್ಲಿ ಚೆನ್ನಾಗಿ ತುಲನೆ ಮಾಡಿದ್ದಿರಾ... ಕಾಲಾಯ ತಸ್ಮೈ ನಮಃ

Post a Comment