Sunday, October 17, 2010

ಸಾವಯವವಾಗಬೇಕಿದೆ, ಅಡುಗೆ ಮನೆ!


ತೋಟಕ್ಕೆ ರಸಗೊಬ್ಬರ, ವಿಷ ಸಿಂಪಡಣೆ ಮಾಡಿರಬಾರದು. ಒಳಸುರಿಗಳು ಅಲ್ಲಲ್ಲೇ ತಯಾರಾಗಿರಬೇಕು. ಕಂಪೆನಿ ಪ್ರಣೀತ ಯಾವುದೇ ವಸ್ತುಗಳು ತೋಟಕ್ಕೆ ನುಗ್ಗಿರಬಾರದು - ಮೇಲ್ನೋಟಕ್ಕೆ 'ಸಾವಯವ ಕೃಷಿ'ಯ ವ್ಯಾಖ್ಯಾನ ಈ ವ್ಯಾಪ್ತಿಯಲ್ಲಿ ಸುತ್ತುತ್ತಿರುತ್ತದೆ.
'ಮೊದಲು ಸರ್ಕಾರಿ ಗೊಬ್ಬರ ಹಾಕುತ್ತಿದ್ದೆ. ಕೀಟಗಳಿಗೆ ವಿಷ (ಔಷಧ) ಸಿಂಪಡಿಸುತ್ತಿದ್ದೆ. ಈಗ ಐದು ವರ್ಷವಾಯಿತು. ನಾನು ಪೂರ್ತಿ ಸಾವಯವ.' ಹೀಗೆನ್ನುವ ಸಾಕಷ್ಟು ಮಂದಿ ಸಿಗುತ್ತಾರೆ. 'ಕಳೆದೆರಡು ವರುಷದಿಂದ ನಮ್ಮ ತೋಟಕ್ಕೆ ನಾವೇ ಗೊಬ್ಬರ ತಯಾರಿಸುತ್ತಿದ್ದೇವೆ. ರಾಸಾಯನಿಕದಿಂದ ದೂರವಾಗುತ್ತಿದ್ದೇವೆ' ಹೀಗೆನ್ನುವ ವರ್ಗ ಇನ್ನೊಂದು. ಇದೊಂದು ಉತ್ತೇಜಕ ಬೆಳವಣಿಗೆ.
'ನಾನೀಗ ಐದು ವರುಷದಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ಎರೆಗೊಬ್ಬರ ನನ್ನ ತೋಟದಲ್ಲೇ ರೆಡಿಯಾಗುತ್ತದೆ. ಸ್ಲರಿ ಧಾರಾಳ ಉಂಟು. ಆದರೂ ಗಿಡ ಸೊರಗಬಾರದಲ್ಲಾ, ಹಾಗಾಗಿ ಸ್ಲರಿಯೊಂದಿಗೆ ಸ್ವಲ್ಪ ಯೂರಿಯಾ, ಪೊಟೇಷ್ ಹಾಕಿದ್ದೇನೆ. ಗೆದ್ದಲು ಬಂದಿತ್ತು. ಆಗ್ರೋದಂಗಡಿಯಿಂದ ಬಿಳಿ ಪುಡಿ ತಂದು ಉದುರಿಸಿದ್ದೇನೆ' ಹೀಗೆನ್ನುವ ಸಾವಯವ ಕೃಷಿಕರ ಮುಖಪರಿಚಯ ಚೆನ್ನಾಗಿದೆ. ಅಂತಹವರ ಗೋಡೌನ್ಗೆ ಹೋದರೆ ಸರ್ಕಾರಿ ಗೊಬ್ಬರದ ಖಾಲಿ ಚೀಲಗಳು ರಾಶಿ ಬಿದ್ದಿರುತ್ತವೆ!
ಸರಕಾರವು ಸಾವಯವ ಕೃಷಿಗೆ ಪ್ರೋತ್ಸಾಹ ನೀಡುತ್ತಿದೆ. ಅದರ ಅನುಷ್ಠಾನಕ್ಕೆ 'ಸಾವಯವ ಮಿಶನ್' ಸ್ಥಾಪಿಸಿದೆ. ತಾಲೂಕು ಮಟ್ಟದಲ್ಲಿ ವ್ಯವಸ್ಥಿತವಾಗಿ ಮಿಶನ್ ಕಾರ್ಯವೆಸಗುತ್ತಿದೆ. 'ಒಂದೆರಡು ವರುಷದಲ್ಲಿ ಹೊಲಗಳು ಸಾವಯವವಾಗದು. ಇದು ಆರಂಭ ಮಾತ್ರ. ರಸಗೊಬ್ಬರ ತಿಂದು ರಸಹೀನವಾದ ಮಣ್ಣಿನ ಫಲವತ್ತತೆ ಹೆಚ್ಚಬೇಕು. ವಿಷ ಕುಡಿದು ನಿಸ್ತೇಜವಾದ ಗಿಡಗಳು ಪುನಶ್ಚೇತನಗೊಳ್ಳಬೇಕು. ಅದಕ್ಕಾಗಿ ಐದಾರು ವರುಷ ಕಾಯಬೇಕು'-ರಾಜ್ಯ ಸಾವಯವ ಮಿಶನ್ ಅಧ್ಯಕ್ಷ ಡಾ.ಆ.ಶ್ರೀ.ಆನಂದ್ ಹೇಳಿದ ಮಾತು ವಾಸ್ತವಕ್ಕೆ ಕನ್ನಡಿ.
ಸಾವಯವದ ಕುರಿತು ಆರೋಗ್ಯಕರ ಫಲಶ್ರುತಿ ಕನ್ನಾಡಿನಾದ್ಯಂತ ಕಂಡುಬರುತ್ತಿದೆ. ಉತ್ತಮ ಆರೋಗ್ಯಕ್ಕೆ ಸಾವಯವ ಕೃಷಿಯೊಂದೇ ದಾರಿ. ವಿಷ ಸಿಂಪಡಿಸಿದ ಆಹಾರ ಮೆದ್ದು ನಾವೆಲ್ಲಾ ವಿಷಕಂಠರಾಗಿದ್ದೇವೆ! ಮಾರುಕಟ್ಟೆಯಲ್ಲಿ 'ಶ್ರೇಷ್ಠವೆಂದು ಸಿಗುವ' ಕಾಯಿಪಲ್ಲೆಯ ಅಕರಾಳ-ವಿಕರಾಳ ಮುಖ ಎಷ್ಟು ಮಂದಿಗೆ ಗೊತ್ತು? ಈಚೆಗೆ ಟಿವಿ9 ವಾಹಿನಿಯಲ್ಲಿ 'ತರಕಾರಿಗಳಲ್ಲಿ ವಿಷ' ಎಂಬ ವೈಚಾರಿಕ ಕಾರ್ಯಕ್ರಮ ಪ್ರಸಾರವಾಗಿತ್ತು. ಆ ದಿನ ಕನಿಷ್ಟವೆಂದರೂ ನೂರರ ಹತ್ತಿರ ಆತ್ಮೀಯರ ಕರೆಗಳನ್ನು ಸ್ವೀಕರಿಸಿದ್ದೆ.
ತರಕಾರಿಗೆ ಸಿಂಪಡಿಸುವ ವಿಷಗಳು ದೇಹವನ್ನು ನೇರವಾಗಿ ಹೇಗೆ ಸೇರುತ್ತವೆ, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಬಿತ್ತರವಾಗಿತ್ತು. ಬಹಳ ಪರಿಣಾಮಕಾರಿಯಾದ ಕಾರ್ಯಕ್ರಮ.
ಇದಾದ ಎರಡೇ ದಿವಸದಲ್ಲಿ ಬಹುತೇಕ ಎಲ್ಲಾ ಮೊಬೈಲ್ಗಳಿಗೂ ದೆಹಲಿ ಮೂಲದಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ 'ಹೂಕೋಸನ್ನು ತಿನ್ನಬೇಡಿ. ತಿಂದರೆ 'ಹೈಬೋನ್ ಫೀವರ್'ನ ವೈರಸ್ ಹರಡುತ್ತದೆ ಎಂದಿತ್ತು. ಈ ಸಂದೇಶವನ್ನು ಡಿಲೀಟ್ ಮಾಡಬಹುದಿತ್ತು. ಹೂಕೋಸು ಎಷ್ಟು ಸಲ ವಿಷದಲ್ಲಿ ಸ್ನಾನ ಮಾಡುತ್ತೆ ಎಂಬ ಪ್ರತ್ಯಕ್ಷ ಅರಿವಿದ್ದುದರಿಂದ ಆ ಸಂದೇಶವನ್ನು ಡಿಲೀಟ್ ಮಾಡಿಲ್ಲ! ಇತ್ತೀಚೆಗೆ ಕೇಂದ್ರ ಸರಕಾರವೇ ತರಕಾರಿಗಳಿಗೆ ಸಿಂಪಡಿಸುವ ವಿಷಗಳ ಕುರಿತು ಆತಂಕ ವ್ಯಕ್ತಪಡಿಸಿತ್ತು.
ಕಳೆದ ವಾರ ಪುತ್ತೂರಿನ ತರಕಾರಿ ಅಂಗಡಿಯೊಂದರಿಂದ ಮುಳ್ಳುಸೌತೆಯ ಚಿಕ್ಕ ಮಿಡಿಗಳನ್ನು ಖರೀದಿಸಿ ತಿಂದಿದ್ದೆ. ತಿಂದದ್ದು ಸ್ವಲ್ಪ ಹೆಚ್ಚೇ ಆಗಿತ್ತು! ಎರಡು ದಿವಸ ನಾಲಗೆ 'ದಡ್ಡು' ಕಟ್ಟಿತ್ತು! ಹಿಂದೊಮ್ಮೆ ಎಳೆ ಜೋಳವನ್ನು ತಿಂದಾಗಲೂ ಇಂತಹುದೇ ಅನುಭವವಾಗಿತ್ತು. ಇದು ವಿಷ ಸಿಂಪಡಣೆಯ ಪ್ರಭಾವ. ಇದರ ಒಟ್ಟೂ ನೇರ ಪರಿಣಾಮ ಅರೋಗ್ಯದ ಮೇಲೆ ಬಾರದೆ ಇದ್ದೀತೇ?'
ನಿಮ್ಮ ಮಕ್ಕಳಿಗೆ ವಿಷವನ್ನು ಕೊಡಬೇಡಿ. ಸಾವಯವ ಕೃಷಿ ತೋಟದಲ್ಲಾದರೆ ಸಾಲದು, ನಮ್ಮ ಅಡುಗೆ ಮನೆಗಳೂ ಸಾವಯವವಾಗಬೇಕು' ಆನಂದ್ ಸಭೆಯೊಂದರಲ್ಲಿ ವಿನಂತಿಸಿದ ಬಗೆ. ಹೌದಲ್ಲಾ, ನಮ್ಮ ಅಡುಗೆ ಮನೆ ಎಷ್ಟು ವಿಷರಹಿತವಾಗಿದೆ? ಒಮ್ಮೆ ಇಣುಕಿದರೆ ಸತ್ಯದರ್ಶನವಾಗುತ್ತದೆ. ತರಕಾರಿ ಅಂಗಡಿಯಲ್ಲಿ ಪೇರಿಸಿಟ್ಟ ಕೆಂಪುರಂಗಿನ ಟೊಮೆಟೋ, ನುಣುಪಾದ ಗುಳ್ಳಬದನೆ, ಮಾರುದ್ದದ ಹೀರೆಕಾಯಿ, ಬೆರಳಗಾತ್ರದ ತೊಂಡೆಕಾಯಿ ಹೀಗೆ ಮಾರುಕಟ್ಟೆಗೆ ಬರುವ 'ಪಾಷ್' ತರಕಾರಿಗಳ ವಿಷದ ಕತೆಗಳು ಹೆಜ್ಜೆಗೊಂದರಂತಿದೆ.
ಪರಿಹಾರ ಹೇಗೆ? ಎಲ್ಲರೂ ಸಾವಯವ ಕೃಷಿ ಮಾಡಲು ಸಾಧ್ಯವೇ? ಎಲ್ಲರೂ ಕೃಷಿಕರಾಗಲು ಸಾಧ್ಯವೇ? ಹೀಗೆ 'ಅಡ್ಡ ಪ್ರಶ್ನೆ'ಗಳು, ತಕ್ಷಣದ ಪ್ರತಿಕ್ರಿಯೆಗಳು ಬಂದುಬಿಡುತ್ತವೆ. 'ನಮಗೆ, ನಮ್ಮ ಮಕ್ಕಳಿಗೆ, ನಮ್ಮ ಕುಟುಂಬದ ಮಂದಿ ಆರೋಗ್ಯವಾಗಿರಬೇಕಾದರೆ ಅಡುಗೆ ಮನೆಗಳು ಸಾವಯವವಾಗಲೇ ಬೇಕು'. ಇದಕ್ಕಾಗಿ ದಿಢೀರ್ ಸಾವಯವ ಕೃಷಿಕರಾಗಿ ನಾವು ರೂಪಾಂತರವಾಗಬೇಕಿಲ್ಲ. ಅಪ್ಪಟ ಸಾವಯವ ಕೃಷಿಕರನ್ನು ಪ್ರೋತ್ಸಾಹಿಸಿದರೆ ಸಾಕು. ಅವರಲ್ಲಿರುವ ವಸ್ತುಗಳನ್ನು, ಉತ್ಪನ್ನಗಳನ್ನು ಕೊಂಡು ಅಡುಗೆ ಮನೆಯನ್ನು ಸಾವಯವಗೊಳಿಸಬಹುದಲ್ಲಾ.
'ಸಾವಯವದ ವಸ್ತುಗಳಿಗೆ ಬೆಲೆ ಜಾಸ್ತಿಯಲ್ವಾ' ಎಂಬ ನಂಬುಗೆ ಇದೆ. ವಿಚಾರ ಹೌದಾದರೂ, ಸಾವಯವ ಕೃಷಿಯ ಕಷ್ಟವನ್ನರಿತರೆ ಇಂತಹ ಪ್ರಶ್ನೆ ಬಾರದು. ನಮ್ಮ ಆರೋಗ್ಯ ಚೆನ್ನಾಗಿರಬೇಕು, ಯಾವುದೇ ಕಾರಣಕ್ಕೂ ಆಸ್ಪತ್ರೆಯ ಬೆಡ್ನಲ್ಲಿ ಮಲಗುವ 'ಯೋಗ' ಬಾರದಿರಲು ಅಡುಗೆ ಮನೆ ಸಾವಯವಗೊಳ್ಳುವುದು ಒಂದೇ ದಾರಿ.ಉತ್ಪನ್ನ 'ಸಾವಯವ' ಎಂದ ಕೂಡಲೇ ಮಾರುಕಟ್ಟೆ ದರಕ್ಕಿಂತ ನಾಲ್ಕೈದು ಪಟ್ಟು ದರ ನಿಗದಿ ಮಾಡುವುದೂ ಸರಿಯಲ್ಲ. ಕೃಷಿಕ-ಗ್ರಾಹಕ ಒಂದೇ ಸರಳರೇಖೆಯ ಬಿಂದುಗಳು. ಉತ್ಪನ್ನದ ಗುಣಮಟ್ಟ ಚೆನ್ನಾಗಿದ್ದರೆ, ಸತತವಾಗಿ ದೊರೆಯುವಂತಿದ್ದರೆ ಗ್ರಾಹಕಪ್ರಭು ಉತ್ಪನ್ನಗಳನ್ನು ಹುಡುಕಿ ಬರುತ್ತಾನೆ. ಆನಂದ್ ಹೇಳುವಂತೆ, ಇದು ಆರಂಭ. ಸಾಗಲು ಇನ್ನೂ ದೂರವಿದೆ. ಸಾವಯವವೆಂದರೆ ವಿಶ್ವಾಸ. ಅದೊಂದು ಬದುಕು. ಮಣ್ಣಿನ ಫಲವತ್ತತೆಯ ಖಾತ್ರಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಿದೆ.

2 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಉತ್ತಮವಾದ ವಿಚಾರಪ್ರಚೋದಕ ಲೇಖನ.

Jagadeesha Pai B said...

Sir, very informative. Your attempt is very good.More than that your way of writing is with concern, so that it reaches directly to the heart of the reader. I have read almost all of your articles. really they are wonderful.-Jagadeesha Pai B

Post a Comment