Monday, October 18, 2010

ಉಳಿಸಬೇಕಿದೆ, ಈ ಕಿರುಧಾನ್ಯ


'ಜಿಕೆವಿಕೆ ಕೃಷಿ ಮೇಳದಲ್ಲಿ ಮೂವತ್ತಕ್ಕೂ ಮಿಕ್ಕಿ ರೈತರು ಹಾರಕವನ್ನು ಹುಡುಕಿಕೊಂಡು ಬಂದಿದ್ದರು. ಅದರ ಬೀಜಕ್ಕಾಗಿ ಆರ್ಡರ್ ಮಾಡಿದ್ದಾರೆ' - ಸಹಜ ಸಮೃದ್ಧದ ಮಳಿಗೆಯಲ್ಲಿದ್ದ ರವಿ ಸಂತೋಷ ಹಂಚಿಕೊಂಡರು. ಮಳಿಗೆಯಲ್ಲಿ ಹಾರಕದ ಮಾದರಿ ಬೀಜಗಳನ್ನು ನೋಡಿ ರೈತರ ಕುತೂಹಲ. 'ನೋಡ್ರೀ.. ಇದನ್ನು ನೋಡ್ದೆ ಹತ್ತು ವರ್ಷ ಆತು' ಎನ್ನುತ್ತಾ ಅಂಗೈಯಲ್ಲಿ ಹಾರಕದ ಕಾಳುಗಳನ್ನು ಹಾಕಿಕೊಂಡಾಗಲೇ ಸಮಾಧಾನ, ಖುಷಿ.
'ಹಾರಕ' ತುಂಬಾ ಅಪರೂಪದ ಕಿರುಧಾನ್ಯ ಬರಗಾಲದ ಮಿತ್ರ. 'ಆರ್ಕ, ಹಾರ್ಕ, ಆರಕ' ಅಂತಲೂ ಕರೆಯುತ್ತಾರೆ. ಸಸ್ಯಶಾಸ್ತ್ರೀಯ ಹೆಸರು ಪಾಸ್ಪಲಮ್ ಸ್ಕ್ರೋಬಿಕುಲೆಟಮ್ (Paspalum scrobiculatum). ). ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳು, ಬೆಂಗಳೂರು ಗ್ರಾಮಾಂತರ ಪ್ರದೇಶವನ್ನುನ್ನು ಬಿಟ್ಟರೆ ಮತ್ತೆಲ್ಲೂ ಹಾರಕದ ಬೆಳೆ ವಿರಳ. 2-3 ದಶಕಗಳ ಹಿಂದೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಹಾರಕದ ಬೆಳೆಯನ್ನು ಉಥೇಷ್ಟವಾಗಿ ಬೆಳೆಯುತ್ತಿದ್ದರು. 'ಹಿಂದೆ ಹಾರ್ಕ ಬಳಸುತ್ತಿದ್ವಿ' ಎನ್ನುವ ಹಿರಿಯರು ಸಾಕಷ್ಟು ಮಂದಿ ಸಿಗ್ತಾರೆ. ರಾಗಿ, ಸಜ್ಜೆ, ಕೊರ್ಲೆ, ನವಣೆ, ಸಾವೆ, ಜೋಳಗಳನ್ನು ಬೆಳೆದು ಬಳಸುವವರಿದ್ದರೂ ಹಾರಕವನ್ನು ಯಾರೂ ಬೆಳೆಯುತ್ತಿಲ್ಲ. ಕಷ್ಟ ಪಟ್ಟು ಹುಡುಕಿದರೆ 10-15 ವರುಷದ ಹಿಂದಿನ ಹಾರಕ ಬೀಜವೇನೋ ಸಿಗಬಹುದು, ಆದರೆ ಬೆಳೆ ಅಪರೂಪ!
ವಾಣಿಜ್ಯ ಬೆಳೆಗಳ ಸುಲಭ ಸಂಸ್ಕರಣೆಯ ವ್ಯವಸ್ಥೆ ಕಿರುಧಾನ್ಯಗಳಿಗೆ ಶಾಪ! ಇವುಗಳ ಜತೆಗೆ ಉಣ್ಣಲೋಸುಗ ಒಂದಷ್ಟು ಜಾಗದಲ್ಲಿ ಬೆಳೆಯುವವರಿದ್ದಾರೆ. ಒರಳಲ್ಲಿ ಕುಟ್ಟಿಯೋ, ರಾಗಿಕಲ್ಲಲ್ಲಿ ಬೀಸಿಯೋ, ಮಿಲ್ಲಿನಲ್ಲಿ ಹುಡಿ ಮಾಡಿ - ಕಿರುಧಾನ್ಯಗಳು ಸಂಸ್ಕರಿತವಾಗಿ ಅನ್ನದ ಬಟ್ಟಲು ಸೇರುತ್ತವೆ. ಹಾರಕ ಅಷ್ಟು ಸುಲಭವಾಗಿ ಸಂಸ್ಕರಣೆಗೆ ಒಗ್ಗಿಕೊಳ್ಳುವ ಕಿರುಧಾನ್ಯವಲ್ಲ. ಕಾಳು ತೀರಾ ಗಟ್ಟಿ. ಕೆಲವು ಕಡೆ ದೇಸಿ ಕ್ರಮದ ಮೂಲಕ ಸಂಸ್ಕರಣೆ ಮಾಡಿ ಬಳಸುತ್ತಾರೆ. ಗಟ್ಟಿ ಹೊರ ಕವಚ ಹಾರಕದ ಕಾಳು ಕಾಫಿ ವರ್ಣವನ್ನು ಹೋಲುತ್ತದೆ. ಅದರಲ್ಲಿ ಏಳು ಪದರಗಳಿವೆ ಎನ್ನಲಾಗಿದೆ. ಪದರ ತೆಗೆದಾಗ ಸಿಗುವ ಕಾಳು - ಹಾರಕದಕ್ಕಿ.
'ಕೊಪ್ಪಳದ ಸಂತೆಯಲ್ಲಿ ಸಾಕಷ್ಟು ಸಿಕ್ತಾ ಇತ್ತು. ಇದನ್ನು ಬೆಳೆದರೆ ಮಾರುಕಟ್ಟೆಯಿಲ್ಲ. ಆಹಾರವಾಗಿ ಸುಲಭವಾಗಿ ಬಳಸೋಣವೆಂದರೆ ಸಂಸ್ಕರಣಾ ಘಟಕಗಳಿಲ್ಲ' - ವಾಸ್ತವದತ್ತ ಬೊಟ್ಟು ಮಾಡುತ್ತಾರೆ ಕೊಪ್ಪಳ-ಕಾಮನೂರಿನ ಕೃಷಿಕ ನಾಗೇಂದ್ರ ಪ್ರಸಾದ್. ಕೊಪ್ಪಳ ಭಾಗದಲ್ಲಿ ಹಾರಕದ ಕಾಳಿಗೆ ಕೆಮ್ಮಣ್ಣು ಹಚ್ಚಿ ಒಂದು ದಿನ ಬಿಸಿಲಿನ ಸ್ನಾನ ಮಾಡಿಸುತ್ತಾರೆ. ಒಣಗಿದ ಹಾರಕವನ್ನು ಬೀಸುಕಲ್ಲಿನಿಂದ (ಹಿಟ್ಟಿನ ಕಲ್ಲು) ಬೀಸಿ ಅಕ್ಕಿ ಮಾಡುತ್ತಾರೆ. ಕಾಳಿನ ಹೊರಪದರ ಎಷ್ಟು ಗಟ್ಟಿಯೆಂದರೆ - ಬೀಸುಕಲ್ಲಿನ ಕೆಳಗಿನ ಕಲ್ಲನ್ನು ತೆಗೆದು, ಗಟ್ಟಿ ಒರಟು ನೆಲದ ಮೇಲೆ ಮೇಲ್ಭಾಗದ ಬೀಸುವ ಕಲ್ಲನ್ನು ಇಟ್ಟು ಬೀಸಿದರೂ ಜಪ್ಪೆನ್ನುವುದಿಲ್ಲ! ಕಲ್ಲಿನಿಂದ ಬೀಸಿದರೂ ಹೊಟ್ಟು ಬಿಟ್ಟುಕೊಡುವುದಿಲ್ಲ. ಒರಳಿಗೆ ಹಾಕಿ ಒನಕೆಯಿಂದ ಕುಟ್ಟಿದರೆ ಹೊಟ್ಟು ಬಿಡುತ್ತದೆ. 'ಕೆಮ್ಮಣ್ಣು ಹಚ್ಚುವುದರಿಂದ ಹಾರಕದ ಹೊರಪದರಗಳು ಮೃದುವಾಗುತ್ತವೆ. ಕೆಲವು ಕಡೆ ಹಾರಕವನ್ನು ರಾತ್ರಿಯಿಡೀ ಕಟ್ಟಿಗೆ ಒಲೆಯ ಮೇಲೆ ಬೇಯಿಸಿ ಒಂದು ದಿನ ಒಣಗಿಸಿ ನಂತರ ಮಿಲ್ಗೆ ಹಾಕಿಸಿ ಅಕ್ಕಿ ಮಾಡಿಸಿ ಬಳಸುತ್ತಾರೆ. ಹೀಗೆ ಮಿಲ್ಗೆ ಹಾಕಿದಾಗ ಕಾಳಿನ ಒಂದೆರಡು ಪದರ ಮಾತ್ರ ಕಳಚಿಕೊಳ್ಳುತ್ತವೆಯಷ್ಟೇ. ನಿಜ ರುಚಿಯ ಸ್ವಾದ ಸಿಗಲು ಅದರ ಎಲ್ಲಾ ಪದರಗಳು ಕಳಚಿಕೊಳ್ಳಬೇಕು' ಎನ್ನುತ್ತಾರೆ ರವಿ.
ರೈತೊಲವು
'ಯಾವಾಗ ಅಕ್ಕಿಯು ಅಗ್ಗದಲ್ಲಿ ಸಿಕ್ಕಲು ಶುರುವಾಯಿತೋ ಅಂದಿನಿಂದ ಪಾರಂಪರಿಕ ಆಹಾರವಾದ ಕಿರುಧಾನ್ಯಗಳು ಮರೆತುಹೋಯಿತು' ಎಂದು ವಿಷಾದಿಸುತ್ತಾರೆ ಮಧುಗಿರಿಯ ಲಕ್ಷ್ಮೀಕಾಂತಪ್ಪ. ಸುಲಭದಲ್ಲಿ ಅಕ್ಕಿ ಲಭ್ಯವಾದರೂ ಇವರ ಮುಖ್ಯ ಆಹಾರ 'ಹಾರಕ'. ತಮಗೆ ಉಣ್ಣುವುದಕ್ಕಾಗಿಯೇ ಬೆಳೆಯುತ್ತಾರೆ.'ಹಾರಕದ ಕಾಳಿಗೆ ಮಣ್ಣು ಕಟ್ಟಿ (ಮೆತ್ತಿ) ಒಣಗಿಸಿ ರಾಗಿ ಮಿಲ್ಲಲ್ಲಿ ಹೊಡೆಸಿದ್ರೆ ಬೆಳ್ಳಗಿನ ಅಕ್ಕಿ ಬರುತ್ತೆ. ಅದನ್ನು ಚೆನ್ನಾಗಿ ನೀರಲ್ಲಿ ತೊಳೆದು ಬೇಯಿಸಿ ಅನ್ನ ಮಾಡಬಹುದು. ಅನ್ನದೊಂದಿಗೆ ಮೊಸರು ಹಕ್ಕೊಂಡು ತಿನ್ನೋಕೆ ಬಹಳ ರುಚಿ. ತುಪ್ಪ ಮತ್ತು ಬೆಲ್ಲದೊಟ್ಟಿಗೆ ಕೂಡಾ ಚೆನ್ನಾಗಿರುತ್ತದೆ. ಅದರ ಮುಂದೆ ಈಗಿರುವ ಅನ್ನ ಏನೂ ಅಲ್ಲ. ಚಿತ್ರಾನ್ನ ಮಾಡಬಹುದು. ಎಂಬ ಅನುಭವ ಕನಕಪುರದ ಕಲ್ಲಿನಕುಪ್ಪೆಯ ಬಸವೇ ಗೌಡ ಅವರದು. 40 ವರ್ಷ ಹಿಂದೆ ಎಕರೆಗೆ 14 ಖಂಡಗ (ಸುಮಾರು ಇನ್ನೂರು ಕಿಲೋ) ಬೆಳೆದ ಅನುಭವಿ. ದೇವರಹಳ್ಳಿಯ ವರದಯ್ಯ ಹೇಳುತ್ತಾರೆ, 'ಆರಿದ್ರೆ ಮಳೆಗೆ ಬಿತ್ತನೆ ಮಾಡಗತಾ ಇದ್ವಿ. ಮರದ ನೇಗಿಲಿನಲ್ಲಿ ಉಳುಮೆ ಮಾಡಿ ಸತ್ತೆ ತೆಗ್ದು ಕೈಯಲ್ಲಿ ಹಲುಬೆ ಹೊಡ್ಕೊಂಡು ಚೆಲ್ತಾ ಇದ್ವಿ.' ಒಂದು ಎಕರೆಗೆ 15 ಸೇರು ಹಾರಕದ ಬೀಜ ಬೇಕು. 7 ದಿವಸಗಳಲ್ಲಿ ಮೊಳಕೆ. ಒಮ್ಮೆ ಕಳೆ ತೆಗೆದರೆ ಸಾಕು. 'ವಿಶಾತಿ ಮಳೆಗೆ ಕೊಯಿಲು. ರಾಗಿ ಥರ ಗುಂಡು ಕಟ್ಟಿ ರಾಶಿ ಮಾಡ್ಬಹುದು. ಎಕರೆಗೆ 25 ಮೂಟೆ ಬಂದದ್ದಿದೆ. ರಾಗಿ ಕಲ್ಲಲ್ಲಿ ಚಿಪ್ಪು ಹೋಗುವ ಹಾಗೆ ಮಾಡಿ ಒನಕೆಯಲ್ಲಿ ಕುಟ್ಟಿ ಚೆನ್ನಾಗಿ ತೊಳೆದು ಅನ್ನ ಮಾಡ್ಬೇಕು. ಈಗಿನ ಸೋನಾ ಮಸ್ಸೂರಿ ಅಕ್ಕಿ ಕೂಡಾ ಸೋಲ್ಬೇಕು ಅಷ್ಟು ರುಚಿ' ಎನ್ನುತ್ತಾರೆ. ಬಿಸಿಲ ಊರಿನಲ್ಲಿ ತಂಪಿಗಾಗಿ ಹಾರಕವನ್ನು ಆಹಾರವಾಗಿ ಬಳಸುತ್ತಾರೆ. ಬಾಣಂತಿಯರಿಗದು ಅಮೃತ! ಪಾಯಸವನ್ನೂ ತಯಾರಿಸುತ್ತಾರೆ. ವಾತ-ಪಿತ್ಥಕ್ಕೆ ಒಳ್ಳೆಯ ಔಷಧಿಯಂತೆ. 'ಕೊಪ್ಪಳದ ಕಿನ್ನಾಳ ಸಂತೆಯಲ್ಲಿ ಹಾರಕ ಈಗಲೂ ಸಿಗುತ್ತೆ' ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದ ಪ್ರಸಾದ್, 'ಇದರ ಅಕ್ಕಿಯಿಂದ ತಯಾರಿಸಿದ ಅಂಬಲಿ ಒಂದು ಗ್ಲಾಸ್ ಕುಡಿದರೆ ಸಾಕು, ಅರ್ಧ ಹೊತ್ತಿಗೆ ಹೊಟ್ಟೆ ಗಟ್ಟಿ' ಎನ್ನುತ್ತಾರೆ. ಹಾರಕದ ಅನ್ನ ಮೂರು ದಿನದ ತಂಗಳಾದರೂ ರುಚಿ ಕೆಡದು, ಹಳಸಾಗದು.
ಬೆಳೆ-ವಿಧಾನ
ಪಾಳು ಬಿದ್ದ ಜಮೀನು, ಕಲ್ಲುಮಿಶ್ರಿತ ಕೆಂಪು ಮಣ್ಣು, ಸಾರವಿಲ್ಲದ ಬಂಜರು ಭೂಮಿಗಳಲ್ಲಿ ಮಾಡಬಹದಾದ ಬೆಳೆ. ಮೇ-ಜೂನ್ ತಿಂಗಳಲ್ಲಿ ಮೊದಲ ಮಳೆ ಬಿದ್ದ ತಕ್ಷಣ ಹೊಲವನ್ನು ಉಳುಮೆ ಮಾಡಿ, ಕುರಿಗೊಬ್ಬರ ಮಣ್ಣಿಗೆ ಸೇರಿಸುತ್ತಾರೆ. ಮೂರು ಇಂಚುಗಳಷ್ಟು ಆಳದಲ್ಲಿ ಬಿತ್ತನೆ. ನಾಲ್ಕು ದಿನದ ನಂತರ `ದಿಂಡು' ಹೊಡೆಯಬೇಕು. ಅಂದರೆ ಕಬ್ಬಿಣದ ತುಂಡು ಅಥವಾ ಕಟ್ಟಿಗೆಯ ಹಲಗೆಯನ್ನು ಉಳುಮೆ ಮಾಡುವ ಕುಂಟೆಗೆ ಕಟ್ಟಿ, ಒಂದು ಇಂಚು ಮೇಲ್ಮಣ್ಣಿನ ಪದರು ಒಡೆಯುವಂತೆ ಮಾಡುವುದು. ಇದರಿಂದ ಬೀಜ ಮೊಳಕೆಗೆ ಸಹಕಾರಿ.
ಮೂರು ವಾರಗಳ ನಂತರ ಮತ್ತೊಮ್ಮೆ ಎಡೆ ಹೊಡೆದರೆ, ಮುಂದೆ ಸುರಿಯುವ ಮಳೆ ನೀರು ಅಲ್ಲೇ ಇಂಗಲು ಸಹಾಯಕ. ಹಾರಕದ ಬೇರುಗಳು ವಿಶಾಲವಾಗಿ ಹರಡುತ್ತದೆ. ಇದು ಪರಸ್ಪರ ಒಂದನ್ನೊಂದು ಸಂಧಿಸಿದಾಗ, ಅಲ್ಲಿ ಕಳೆ ಸಸ್ಯವೊಂದು ಬೆಳೆಯುತ್ತದೆ. ಇದು ಮಣ್ಣಿನೊಳಗೆ ಅವಿತುಕೊಂಡು, ದಿಢೀರನೆ ಕಾಣಿಸಿಕೊಳ್ಳುತ್ತದೆ. ಹೀಗೆ ಕಳೆ ಕಾಣಿಸಿಕೊಂಡರೆ 'ಹಾರಕ ಬೆಳೆ ಫೈಲ್' ಎಂದರ್ಥ. ಇದಕ್ಕಾಗಿ ಬಿತ್ತನೆಯಾದ ಮೂರು ತಿಂಗಳಲ್ಲಿ ಸಾಲುಗಳ ಮಧ್ಯೆ ಉಳುಮೆ ಮಾಡ್ತಾರೆ. ಇದರಿಂದಾಗಿ ಬೇರುಗಳು ಬೇರ್ಪಡುತ್ತವೆ. 'ಹಾರಕ ಬಿತ್ತಿ ಮೊಳಕೆ ಬಂದು ಒಂದಡಿ ಎತ್ತರಕ್ಕೆ ಬೆಳೆದಾಗ - ಆ ಹೊಲಕ್ಕೆ ದನ, ಕುರಿ, ಆಡುಗಳನ್ನು ಮೇಯಲು ಬಿಡುತ್ತಾರೆ. ಎಳೆ ಹುಲ್ಲನ್ನು ಅವುಗಳು ಚೆನ್ನಾಗಿ ಮೇಯುತ್ತವೆ. ನಂತರದ ಒಂದೇ ತಿಂಗಳಲ್ಲಿ ಮತ್ತೆ ಚಿಗುರುತ್ತವೆ. ಆದರೆ ಗಿಡಗಳ ಬುಡಕ್ಕೆ ಅವುಗಳ ಪಾದಾಘಾತವಾಗಿ ಹಾರಕದ ಗಿಡಗಳು ಹೆಚ್ಚು ತೆಂಡೆ ಬಿಟ್ಟು, ಇಳುವರಿಯೂ ಹೆಚ್ಚು ಬರುತ್ತದೆ' - ಹಾರಕದ ಕುರಿತ ವಿಶೇಷ ಮಾಹಿತಿ ನೀಡುತ್ತಾರೆ ತುಮಕೂರಿನ ಮಲ್ಲಿಕಾರ್ಜುನ ಹೊಸಪಾಳ್ಯ.
ಎರಡರಿಂದ ಮೂರಡಿ ಎತ್ತರಕ್ಕೆ ಬೆಳೆಯುತ್ತದೆ. 5-6 ತಿಂಗಳಲ್ಲಿ ಕಟಾವ್. ಯಾವುದೇ ರೋಗವಿಲ್ಲ. ಸರಾಸರಿ ಇಳುವರಿ ಎಕರೆಗೆ ಐದರಿಂದ ಆರು ಕ್ವಿಂಟಾಲ್. ಹುಲ್ಲು ಜಾನುವಾರುಗಳಿಗೆ ಮೇವಾಗಿ ಬಳಸುವುದುಂಟು. ದನಗಳಿಗೆ ಜ್ವರ ಬಂದಾಗ ಹುಲ್ಲನ್ನು ಸುಟ್ಟು, ಇದರ ಹೊಗೆಯನ್ನು ತಾಗುವಂತೆ ಮಾಡುತ್ತಾರೆ ಇದರಿಂದ ಜ್ವರ ಕಡಿಮೆಯಾಗುತ್ತದಂತೆ. ಕಾಳು ಬೇರ್ಪಟ್ಟ ಹಾರಕದ ಹುಲ್ಲನ್ನು ಮನೆಯ ಮಾಡಿಗೆ ಹಾಸುತ್ತಾರೆ, ಬೀಜ ಸಂಗ್ರಹಿಸಿಡುವ 'ಮೂಡೆ' ಕಟ್ಟಲು ಬಳಸುತ್ತಾರೆ. ಹುಲ್ಲಿನಲ್ಲಿರುವ ಯಾವುದೇ ಪ್ರತಿರೋಧ ಗುಣದಿಂದಾಗಿ ಹುಳುಗಳು ಮೂಡೆಗೆ ಪ್ರವೇಶಿಸುವುದಿಲ್ಲ. ಕುದುರಿದ ಮಾರುಕಟ್ಟೆಹಾರಕಕ್ಕೆ ಇಂತಿಷ್ಟೇ ಅಂತ ಹೇಳುವಂತಹ ಬೆಲೆ ವ್ಯವಸ್ಥೆಯಿಲ್ಲ. ನೆಂಟರಿಷ್ಟರ ಮಧ್ಯೆ ಅಲ್ಲಿಂದಿಲ್ಲಿಂದ ಕೊಳ್ಳುವುದು ವಾಡಿಕೆ. 'ಇತ್ತೀಚೆಗೆ ಆರೋಗ್ಯದ ಕಾಳಜಿಯಿಂದಾಗಿ ಮರೆತುಹೋದ ಹಾರಕವನ್ನು ಹುಡುಕುವುದು ಕಂಡುಬರುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿದೆ. ಈ ವರುಷ ಕ್ವಿಂಟಾಲಿಗೆ ಒಂದು ಸಾವಿರದ ಐನೂರು ರೂಪಾಯಿ ಬೆಲೆಯಿದೆ.' ಎಂಬ ಸಿಹಿಸುದ್ದಿಯನ್ನು ಕೊಪ್ಪಳದ ಪ್ರಸಾದ್ ಹೇಳುತ್ತಾರೆ. ಹಾರಕದ ಅಕ್ಕಿ ಮಾಡಿ ಉಣ್ಣುವುದಕ್ಕೆ ಬಳಸುವುದಿದ್ದರೆ 3-4 ವರುಷದ ಹಳೆಯ ಅಕ್ಕಿಯನ್ನು ಬಳಸಬಹುದು. ಬಿತ್ತನೆಗಾದರೆ
ಆಯಾಯ ವರುಷದ ಬೀಜವೇ ಬೇಕು.ಅತ್ಯಧಿಕ ಪೌಷ್ಠಿಕಾಂಶ ಹೊಂದಿರುವ ಹಾರಕದ ಆಹಾರವನ್ನು ಯಾಕೆ ನಮ್ಮ ಸೈನಿಕರಿಗೆ ನೀಡಬಾರದು? ಪ್ರಸಾದ್ರ ಕೀಟಲೆ ಪ್ರಶ್ನೆ. ಮೈಸೂರಿನಲ್ಲಿ ಸೈನಿಕರಿಗೆ ಆಹಾರವನ್ನು ಸಿದ್ಧಪಡಿಸುವ ಸಂಸ್ಥೆಯ ಅಡುಗೆ ಮುಖ್ಯಸ್ಥರಿಗೆ ಒಂದು ಕ್ವಿಂಟಾಲ್ ಹಾರಕವನ್ನು ನೀಡಿಯೇ ಬಿಟ್ಟರು. 'ಈ ಬಗ್ಗೆ ಸಂಶೋಧನೆ ಮಾಡುತ್ತೇವೆ' ಎಂದರಂತೆ. ಎರಡು ವರುಷವಾಯಿತು, ಇನ್ನೂ ಉತ್ತರ ಬಂದಿಲ್ಲ!
ಬೇಕು, ಕಾಯಕಲ್ಪ
ಹಳೆಯ ತಲೆಮಾರಿನ ರೈತರಲ್ಲಿ ಈಗಲೂ ಸಿರಿಧಾನ್ಯದೊಲವು ಇದೆ. ಆದರೆ ಎಳೆಯರಲ್ಲಿ ಹೈಬ್ರಿಡ್ ಮೋಹ ಎದ್ದು ಕಾಣುತ್ತದೆ. ನವಣೆ, ರಾಗಿ, ಸಾಮೆ ಬೆಳೆಯುತ್ತಿದ್ದ ರೈತರು ಪಡಿತರ ವ್ಯವಸ್ಥೆಯಲ್ಲಿ ಸುಲಭವಾಗಿ ಕಡಿಮೆ ಬೆಲೆಗೆ ಸಿಗುವ ಅಕ್ಕಿಯತ್ತ ಒಲವು ತೋರಿಸುತ್ತಿದ್ದಾರೆ. ಆಹಾರದಲ್ಲಿ ಅನ್ನದ ಬಳಕೆ ಹೆಚ್ಚಾಗಿದೆ. ಮೊದಲೆಲ್ಲಾ ಹಾರಕ ಬೆಳೆಯುವಲ್ಲಿ ಈಗ ನೀರಾವರಿ ಬೆಳೆಗಳು ಬಂದಿವೆ. ಹೀಗೆ ಬೇರೆ ಬೇರೆ ಕಾರಣಗಳಿಂದ ಕಿರುಧಾನ್ಯಗಳ ಬಳಕೆಗೆ ಹಿಂಬೀಳಿಕೆ.ಬದುಕಿನಿಂದ ಹಾರಕ ಮರೆಯಾಗುತ್ತಿದೆ. ಒಂದು ಬೆಳೆ ಅಜ್ಞಾತವಾಗುವುದೆಂದರೆ, ಒಂದು ಸಂಸ್ಕೃತಿಯೇ ಹೊರಟು ಹೋದಂತೆ. ಕೃಷಿಯಲ್ಲಿ ಯಂತ್ರೋಪಕರಣಗಳ ಧಾವಂತದ ಕಾಲಘಟ್ಟದಲ್ಲಿ ನಾವಿರುವಾಗ, ಸಂಸ್ಕರಣ ಘಟಕದ ಆವಿಷ್ಕಾರ ಕಷ್ಟವೇನಲ್ಲ. ಇತರ ಆಹಾರ ವಸ್ತುಗಳಿಗೆ ಸಂಸ್ಕರಣಾ ಘಟಕವಿದ್ದಂತೆ, ಹಾರಕಕ್ಕೂ ಪ್ರತ್ಯೇಕವಾದ 'ಮಿಲ್' ರೂಪೀಕರಣವಾದಲ್ಲಿ, ಮರೆಯಾಗುತ್ತಿರುವ ಈ ಕಿರುಧಾನ್ಯ ಹೊಲಕ್ಕೆ ಮರಳಬಲ್ಲುದು. ಅನ್ನದ ಬಟ್ಟಲು ಸೇರಬಲ್ಲದು. ಹಿರಿಯರಲ್ಲಿದ್ದ ಹಾರಕದ ಅನ್ನ ಉಣ್ಣುವ ಒಲವು ಕಿರಿಯರಲ್ಲೂ ಮೂಡಬಹುದು. ಬಸ್ ವ್ಯವಸ್ಥೆ ಇಲ್ಲದ, ಮಾರುಕಟ್ಟೆ ತಲುಪದ ಹಳ್ಳಿಗಳಗೆ ಇನ್ನೂ ಹೈಬ್ರಿಡ್ ಧಾಂಗುಡಿಯಿಟ್ಟಿಲ್ಲ. ಹಾಗಾಗಿ ಅಧಿಕ ಪೌಷ್ಠಿಕಾಂಶವಿರುವ ಕಿರುಧಾನ್ಯಗಳ ಬೆಳೆ ಮತ್ತು ಬಳಕೆ ಅಲ್ಲಿ ಹೆಚ್ಚು ಉಳಿದುಕೊಂಡಿದೆ.
ಭಾರತದ ರಾಜಸ್ಥಾನ, ಉತ್ತರಪ್ರದೇಶದ ಉತ್ತರ ಭಾಗದಲ್ಲಿ, ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಹಾಗೂ ಪಶ್ಚಿಮ ಬಂಗಾಳದ ಪೂರ್ವ ಭಾಗದಲ್ಲಿ ಮತ್ತು ಮಧ್ಯ ಪ್ರದೇಶ, ಆಂಧ್ರಪ್ರದೇಶಗಳಲ್ಲಿ ಹಾರಕ ಬೆಳೆಯಿದೆ. ರಾಸಾಯನಿಕ ಬಳಸದ, ಸಿಂಪಡಣೆ ಕೇಳದ, ಪ್ರತ್ಯೇಕವಾದ ಯಾವುದೇ ಆರೈಕೆ ಬೇಕಾದ ಈ ಕಿರುಧಾನ್ಯ ಬರಸಹಿಷ್ಣು. ಹಾರಕವೂ ಸೇರಿದಂತೆ ಎಲ್ಲಾ ಕಿರುಧಾನ್ಯಗಳೂ ಅಕ್ಕಿ, ಗೋಧಿಗಿಂತ ಹೆಚ್ಚು ಪೋಷಕಾಂಶ ಹೊಂದಿದೆ. ನೂರು ಗ್ರಾಂ ಹಾರಕದಕ್ಕಿಯಲ್ಲಿ 8.3% ಪ್ರೊಟೀನ್, 9% ನಾರಿನಂಶ, 2.6 ಖನಿಜಾಂಶ, 0.5% ಕಬ್ಬಿಣ, 27 ಮಿ.ಗ್ರಾಂ. ಕ್ಯಾಲ್ಸಿಯಂ ಇದೆ.
(ಸಿರಿಧಾನ್ಯಗಳನ್ನು ಕುರಿತು ಕಾಮ್ ಬಳಗದವರು ಬರೆದಿರುವ ಉತ್ತಮ ಕನ್ನಡ ಲೇಖನಗಳಿಗೆ 'ಮಿಲೆಟ್ ನೆಟ್ ವರ್ಕ್ ಇಂಡಿಯಾ' ನೀಡುತ್ತಿರುವ ಬಹುಮಾನಗಲ್ಲಿ ಮೊದಲನೇ ಬಹುಮಾನ ಪಡೆದ ಬರೆಹ. ಈ ಬರೆಹವು 21-07-2010ರ ಉದಯವಾಣಿಯ ಹುಬ್ಬಳ್ಳಿ ಆವೃತ್ತಿಯಲ್ಲಿ ಪ್ರಕಟವಾಗಿತ್ತು.)



1 comments:

Unknown said...

ಕಿರುಧಾನ್ಯಗಳು/ಜೋಳಗಳು:-

ಆರಿಕೆ, ಕಂಬು, ಕೊರ್ಲೆ, ಜೋಳ, ನವಣೆ, ಬರಗು, ರಾಗಿ, ಸೆಜ್ಜೆ, ಸಾಮೆ/ಸಾವೆ -

ārike the Indian millet, Panicum italicum;


ದ್ರಾವಿಡಿಯನ್ ಎಟಿಮಲಾಜಿಕಲ್ ಡಿಕ್ಶನರಿಯಿಂದ:- http://dsal.uchicago.edu/dictionaries/burrow/

ārike the Indian millet, Panicum italicum; hāraka, hāraku Paspalum scrobiculatum Lin
kambu, pul bulrush millet, Italian millet.
koṟale, korle a kind of millet, Panicum italicum Lin
jōḷa a generic name for several species of millet
navaṇe, navaṇi a small grain, the Italian millet or panic seed, Panicum italicum
baraga, baragu P. frumentaceum; Indian millet; a kind of hill grass of which writing pens are made
rāgi.Eleusine coracana
----
tene-giḍa Italian millet, P. italicum.
soppe straw of various kinds of millet.
kaṇike, kaṇuku stalk of the great millet when deprived of its ear; kaṇḍike a stalk or stem

Post a Comment