Monday, October 25, 2010

ಕಾಮ್ ಪರಿಕಲ್ಪನೆಗೆ ದಶಮಾನ

ಕೃಷಿಕಪರ ಪತ್ರಿಕೋದ್ಯಮ - ಎರಡು ದಶಕದ ಈಚೆಗಿನ ಎದ್ದು ಕಾಣಿಸತೊಡಗಿದ ಪರಿಕಲ್ಪನೆ. ಕೃಷಿಯ ಕುರಿತು ವಿಜ್ಞಾನಿಗಳೇ ಬರೆಯಬೇಕು ಎಂದಿದ್ದ ಸ್ಥಿತಿಯನ್ನು ಬದಲಿಸಿ, ರೈತರೂ ತಮ್ಮ ಅನುಭವದ ಮೂಸೆಯಿಂದ ಬರೆಯಬಹುದೆಂದು ಅಡಿಕೆ ಪತ್ರಿಕೆ ತೋರಿಕೊಟ್ಟಿತು. ಈ ಹಾದಿಯಲ್ಲೀಗ ಕೃಷಿ ಮಾಧ್ಯಮ ಕೇಂದ್ರ (ಕಾಮ್ - CAM - Centre for Agricultural Media) ) ದೊಡ್ಡ ಹೆಜ್ಜೆ ಇಟ್ಟಿದೆ. ಮುಖ್ಯವಾಹಿನಿ ಪತ್ರಿಕೆಗಳಿಗೆ 'ಸೆಡ್ಡು ಹೊಡೆಯದೆ' ರೈತರ ದನಿಯಾಗಿ ಪತ್ರಕರ್ತರನ್ನು ರೂಪಿಸುತ್ತಿದೆ.
ಕೃಷಿ ಪತ್ರಿಕೋದ್ಯಮ ಡಿಪ್ಲೊಮಾ
ಕೃಷಿ ಪತ್ರಿಕೋದ್ಯಮ ತರಬೇತಿ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಅನನ್ಯ. ಇಲ್ಲಿ ಸಿದ್ಧ 'ಅಕಾಡೆಮಿಕ್' ಪಠ್ಯಗಳಿಲ್ಲ. ವಿದ್ಯಾರ್ಥಿ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಬೇಕಿಲ್ಲ. ಅಂಕಪಟ್ಟಿಯಿಲ್ಲ. ವಯಸ್ಸಿನ ಕಟ್ಟುಪಾಡುಗಳಿಲ್ಲ. ಕೇಂದ್ರದ ನಿರ್ದೇಶನಗಳನ್ನು ಅಕ್ಷರಶಃ ಪಾಲಿಸಿದರೆ - 'ಸಚಿವರು ಉತ್ಪಾದನಾ ವೆಚ್ಚ ತಗ್ಗಿಸಲು ಕರೆ ಕೊಟ್ಟರು' ಎಂದು ಬರೆವ 'ಮಾಮೂಲಿ ಪತ್ರಕರ್ತ'ರಿಗಿಂತ ಭಿನ್ನವಾಗಿ ಬರೆಯಬಲ್ಲ ಗಟ್ಟಿತನ ಬಂದುಬಿಡುತ್ತದೆ!
ತರಬೇತಿಗೆ ಮೊದಲು ಆಯ್ಕೆಯ ಪ್ರಕ್ರಿಯೆಯಿದೆ. ಇದಕ್ಕಾಗಿ ವಿದ್ಯಾರ್ಥಿ ಕೃಷಿ/ಗ್ರಾಮೀಣ ಕುರಿತಾದ ಬರೆಹ ಬರೆಯಬೇಕು. ಅದರ ಆಳ-ಎತ್ತರ ಹೊಂದಿ ಆಯ್ಕೆ. ವಶೀಲಿ, ಒತ್ತಡ ತಂತ್ರಗಳಿಗೆ ಎಡೆಯಿಲ್ಲ. ವೆಚ್ಚವನ್ನು ಸರಿದೂಗಿಸಲಷ್ಟೇ ಶುಲ್ಕ. ಒಂದು ವರುಷಕ್ಕೆ ಗರಿಷ್ಠ ಅಂದರೆ ಮೂವತ್ತು ವಿದ್ಯಾರ್ಥಿಗಳು. ಮೆಟ್ರಿಕ್ನಿಂದ ಶುರುವಾಗಿ ಪಿಎಚ್.ಡಿ. ತನಕದ ವಿದ್ಯಾಭ್ಯಾಸ ಹೊಂದಿದ; ಹಾರೆ ಹಿಡಿದು ಕೃಷಿ ಮಾಡುವಲ್ಲಿಂದ ಕೃಷಿರಂಗದಲ್ಲೇ ಪೂರ್ತಿಯಾಗಿ ಇದ್ದೂ ಈ ವರೆಗೆ ಲೇಖನ ಬರೆಯದ ಕೃಷಿ ಅಧಿಕಾರಿಗಳೂ ವಿದ್ಯಾರ್ಥಿಗಳು!
ತರಬೇತಿಯ ಆರಂಭ ನಾಲ್ಕು ದಿವಸಗಳ ಕಾರ್ಯಾಗಾರದ ಮೂಲಕ.
ನಿಮಿಷ ನಿಮಿಷಕ್ಕೂ ಲೆಕ್ಕಣಿಕೆಗೆ ಕೆಲಸ. ಕೃಷಿ/ಗ್ರಾಮೀಣ ಪತ್ರಿಕೋದ್ಯಮದ ಮಹತ್ವ-ಸ್ವರೂಪ, ಬರವಣಿಗೆಯ ತಂತ್ರಗಾರಿಕೆ, ಛಾಯಾ ಪತ್ರಿಕೋದ್ಯಮ, ಕ್ಷೇತ್ರ ಭೇಟಿ, ರೈತರನ್ನು ಸಂದರ್ಶಿಸುವಾಗ ವಹಿಸಬೇಕಾದ ಎಚ್ಚರ ಮೊದಲಾದ ವಿಚಾರಗಳಲ್ಲಿ ಅನುಭವಿಗಳಿಂದ ತಿಳಿವಳಿಕೆ. ಸ್ನೇಹಪೂರ್ಣ ಆದರೆ ಗಂಭೀರ ವಾತಾವರಣ. ಕ್ಲಾಸಿನ ನಂತರವೂ ತರಬೇತಿಯುದ್ದಕ್ಕೂ 'ಮಾತುಕತೆಗೆ ಸಿಗುವ' ಸಂಪನ್ಮೂಲ ವ್ಯಕ್ತಿಗಳು. ಇವರೆಲ್ಲರೂ ಕೃಷಿ ಪತ್ರಿಕೋದ್ಯಮದಲ್ಲಿ ಎದ್ದು ಕಾಣುವ ಹೆಸರುಗಳೇ.
ಸ್ವ-ಮೌಲ್ಯಮಾಪನ
ಎರಡು ದಿವಸ ಕ್ಷೇತ್ರ ಭೇಟಿ. ಅದಕ್ಕೆ ಮುನ್ನ ಭೇಟಿಯಲ್ಲಿ ವಹಿಸಬೇಕಾದ ಎಚ್ಚರದ ಕುರಿತು ಪಾಠ. ಕ್ಷೇತ್ರ ಭೇಟಿಯ ನಂತರ ಲೇಖನ ಬರೆದು ಮರುದಿವಸದ ಸೆಶನ್ ಶುರುವಾಗುವುದರೊಳಗೆ ಒಪ್ಪಿಸಲೇಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಮಾಪನ. ಶಿಕ್ಷಣ ಸಂಸ್ಥೆಗಳಲ್ಲಿ ಇದ್ದಂತೆ ಕೆಂಪು ಶಾಯಿಯ ಗುರುತು ಹಾಕಿ, ಅಂಕ ಕೊಡುವ ಕ್ರಮವಿಲ್ಲ. ಇದಕ್ಕಾಗಿ ಗುಂಪು ಚರ್ಚೆ. ತಮ್ಮ ಲೇಖನವನ್ನು ತಾವೇ ಓದಿದ ನಂತರ, ಲೇಖನ ಪುಷ್ಟಿಗೊಳಿಸಲು ಬೇಕಾದ ಅಂಶಗಳ ಬಗ್ಗೆ ಇತರ ವಿದ್ಯಾರ್ಥಿ, ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ. ಕೊನೆಗೆ 'ಲೇಖನ ಹೀಗಿರಬೇಕಿತ್ತು' ಎಂಬಲ್ಲಿಗೆ ಮೌಲ್ಯಮಾಪನ ಮುಕ್ತಾಯ.
'ಮೌಲ್ಯಮಾಪನದ ಎರಡನೆ ದಿನಕ್ಕಾಗುವಾಗ ಮೊದಲ ದಿವಸದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಯಿತು' ಎನ್ನುತ್ತಾರೆ ಉಡುಪಿಯ ಶಶಿಧರ ಹೆಮ್ಮಣ್ಣ. ಮೂರು ದಿವಸದ ತರಬೇತಿಯ ನಂತರ, ಅಭ್ಯರ್ಥಿಗಳು ಪ್ರತಿ ತಿಂಗಳು ಒಂದೊಂದು ವಿಚಾರದ ಬಗ್ಗೆ ಲೇಖನ ಬರೆಯಬೇಕು. ಅಂಚೆ ಅಥವಾ ಮಿಂಚಂಚೆ ಮೂಲಕ ರವಾನೆ. ಇದನ್ನು ಕೇಂದ್ರವೇ ಮೌಲ್ಯಮಾಪನ ಮಾಡಿ, ಏನು ಪೂರಕ ಮಾಹಿತಿ ಬೇಕಿತ್ತು, ಎಲ್ಲೆಲ್ಲಿ ತಪ್ಪಿತು, ವಿಷಯದ ಯಾವ ಭಾಗ ಸುಧಾರಣೆಯಾಗಬೇಕು.. ಹೀಗೆ ಲೇಖನದಲ್ಲೇ ತಿದ್ದಿ ಅಭ್ಯರ್ಥಿಗೆ ಮರಳಿಸುತ್ತದೆ. ಸತತ ಎರಡು ತಿಂಗಳು ಅಸೈನ್ಮೆಂಟ್ ಕಳಿಸದ ಅಭ್ಯರ್ಥಿಗಳ ನೊಂದಾವಣೆ ರದ್ದು.
ಸ್ಪೂನ್ ಫೀಡಿಂಗ್!
ಕಾರ್ಯಾಗಾರಕ್ಕೂ ಮೊದಲೇ ವರ್ಷದುದ್ದಕ್ಕೂ ವಹಿಸಬೇಕಾದ ಎಚ್ಚರಗಳನ್ನು ಕಿಟ್ ರೂಪದಲ್ಲಿ ಅಭ್ಯರ್ಥಿಗೆ ನೀಡಲಾಗುತ್ತದೆ. ಪರಿಣಾಮಕಾರಿ ಕೃಷಿಕಪರ ಲೇಖನ ಬರೆಯಲು ಏನೇನು ವಿಚಾರ ಗಮನಿಸಬೇಕು, ಏನು ಮಾಡಬಾರದು, ಲೇಖನ ಬರೆಯುವಾಗ ಮಾರ್ಜಿನ್ ಎಷ್ಟು ಬೇಕು, ಲೇಖನದಲ್ಲಿ ಬರಹಗಾರರ ವಿಳಾಸ ಎಲ್ಲಿರಬೇಕು, ಫೋಟೋದ ಹಿಂದೆ ವಿವರಗಳನ್ನು ಹೇಗೆ ಬರೆಯುವುದು, ಲೇಖನಗಳನ್ನು ಅಂಚೆಗೆ ಹಾಕುವ ಮುನ್ನ ಕವರಿಗೆ ವಿಳಾಸ ಬರೆಯುವುದು ಹೇಗೆ, ಸ್ಟಾಂಪ್ ಎಲ್ಲಿ ಹಚ್ಚಬೇಕು, 'ಇಂದ' ವಿಳಾಸ ಎಲ್ಲಿ ಬರೆಯುವುದು. ಲೇಖನ ಮೂರ್ನಾಲ್ಕು ಪುಟಗಳಿದ್ದರೆ ಅದನ್ನೆಲ್ಲಾ ಜೋಡಿಸುವ ಕುರಿತು ಮಾಹಿತಿಯಿದೆ. ಕಿಟ್ನೊಂದಿಗೆ ಮಾದರಿ ರೂಪದಲ್ಲಿ ಸೂಕ್ತ ಜೆಮ್ ಕ್ಲಿಪ್, ಅಂಟು ಇತ್ಯಾದಿ ಸಾಮಗ್ರಿಗಳನ್ನೂ ಅಭ್ಯರ್ಥಿಗಳಿಗೆ ನೀಡುವಲ್ಲಿಯ ತನಕದ ಕಾಳಜಿ ಕೇಂದ್ರದ್ದು. ಕಿಟ್ನ ಜತೆಗೆ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಬಂದ ಉತ್ತಮ ಕೃಷಿ-ಗ್ರಾಮೀಣ ಲೇಖನಗಳನ್ನೂ ಪರಾಮರ್ಶೆಗಾಗಿ ಕೊಡುತ್ತಾರೆ. ಈ ರೀತಿಯ 'ಸ್ಪೂನ್ ಫೀಡಿಂಗ್' ಪತ್ರಿಕೋದ್ಯಮ ಶಿಕ್ಷಣ ಕ್ಷೇತ್ರದಲ್ಲೇ ಅನನ್ಯ!
'ಇಷ್ಟೆಲ್ಲಾ ವಿವರ ಕೊಟ್ಟರೂ ಹೆಚ್ಚಿನವರೂ ಅದನ್ನು ಓದಿಕೊಂಡು ಬರುವುದಿಲ್ಲ. ಪತ್ರಕರ್ತನಿಗೆ ಓದು ಮುಖ್ಯ' ಎನ್ನುತ್ತಾರೆ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಅಡ್ಡೂರು ಕೃಷ್ಣರಾವ್. ಕೇಂದ್ರ ನೀಡಿದ್ದ ಸೂಚನೆಯನ್ನು ಅಭ್ಯರ್ಥಿ ಎಷ್ಟು ಪಾಲಿಸಿದ್ದಾರೆ, ಬರೆಹ ಎಷ್ಟು ಸುಧಾರಿಸಿದೆ ಎಂಬ ಮಾನದಂಡದಂತೆ 'ಉತ್ತಮ ಅಭ್ಯರ್ಥಿ' ಎಂಬ ಆಯ್ಕೆ. ಇವರಿಗೆ 'ಕಾಮ್ ಫೆಲೋ' ಎಂಬ ಬಿರುದು. ತರಬೇತಿಯ ಕೊನೆಗೆ ಕೆಂದ್ರದ ವಾರ್ಷಿಕೋತ್ಸವ. ಅದರಲ್ಲಿ ಬಿರುದು ಪ್ರದಾನ.
ನಾಗೇಶ ಹೆಗಡೆ, ಆನಂದ ಹೆಚ್.ಎನ್., ಶ್ರೀ ಪಡ್ರೆ, ಶಿವಾನಂದ ಕಳವೆ, ಅಡ್ಡೂರು ಕೃಷ್ಣ ರಾವ್, ಗಾಣಧಾಳು ಶ್ರೀಕಂಠ, ಆನಂದತೀರ್ಥ ಪ್ಯಾಟಿ, ಮಲ್ಲಿಕಾಜರ್ುನ ಹೊಸಪಾಳ್ಯ, ಜಿ. ಕೃಷ್ಣಪ್ರಸಾದ್...ಹೀಗೆ ಕನ್ನಾಡಿನ ಪ್ರಮುಖ ಅಭ್ಯುದಯ ಪತ್ರಕರ್ತರು ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು.
ಅಕಡೆಮಿಕ್ ಶಿಬಿರಗಳಲ್ಲಿ ತಂತಮ್ಮ 'ಲೆಕ್ಚರ್' ಆದ ನಂತರ ಸಂಪನ್ಮೂಲ ವ್ಯಕ್ತಿಗಳು ತಮ್ಮಷ್ಟಕ್ಕೆ ತೆರಳುತ್ತಾರೆ. ಇಲ್ಲ ಹಾಗಲ್ಲ. ಮೂರೂ ದಿವಸವೂ ಅಭ್ಯರ್ಥಿಗಳೊಂದಿಗೆ ಇರುತ್ತಾರೆ. ಊಟ-ವಸತಿ ಅವರೊಂದಿಗೆ. ಹೀಗಾಗಿ ಪತ್ರಿಕೋದ್ಯಮದ ಕುರಿತಾದ ವಿಚಾರಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶ. ಸಂಪನ್ಮೂಲ ವ್ಯಕ್ತಿಗಳು ಮತ್ತು ಅಭ್ಯರ್ಥಿಗಳ ಮಧ್ಯೆ ಯಾವುದೇ ಅಂತರವಿಲ್ಲ, ಗತ್ತು-ಗೈರತ್ತುಗಳಿಲ್ಲ.
ಕಾಮ್ ಫೆಲೋ!
ಎಪ್ಪತ್ತಕ್ಕೂ ಮಿಕ್ಕಿ 'ಕಾಮ್ ಫೆಲೋ'ಗಳು ಕೃಷಿ ಮಾಧ್ಯಮ ಕೇಂದ್ರದ ದೊಡ್ಡ ಆಸ್ತಿ. ಮುಖ್ಯವಾಹಿನಿಯ ಕೃಷಿ ಪುಟಗಳಲ್ಲಿ ಕೆಲವೊಂದು ಸಲ ಫೆಲೋಗಳ ಬರೆಹಗಳೇ ತುಂಬಿರುವುದು ಯಶಸ್ವೀ ತರಬೇತಿಯ ಫಲ. ಅಡಿಕೆ ಪತ್ರಿಕೆ ಕಾಮ್ ಅಭ್ಯರ್ಥಿಗಳ ಬರೆಹದ ಬೈಲೈನ್ ಜತೆ 'ಕಾಮ್ ಫೆಲೋ' ಅಂತ ಉಲ್ಲೇಖಿಸುವ ಪರಿಪಾಠ ಶುರುಮಾಡಿದೆ. 'ಇದರಿಂದಾಗಿ ಇನ್ನಷ್ಟು ಸ್ಪೂರ್ತಿ ಸಿಗುತ್ತದೆ' ಎನ್ನುತ್ತಾರೆ ಈ ಸಾಲಿನ ಕಾಮ್ ಫೆಲೋ ಪಡೆದ ಬೆಳಗಾವಿಯ ಕೃಷಿ ಅಧಿಕಾರಿ ಲೀಲಾ ಕೌಜಗೇರಿ.
'ಯಾಕೆ ಬರೆಯಬೇಕು, ಯಾರಿಗಾಗಿ ಬರೆಯಬೇಕು ಎಂಬುದನ್ನು ಕಾಮ್ ಕಲಿಸಿಕೊಟ್ಟಿದೆ' ಎಂಬ ಅನುಭವ ಅರುವತ್ತರ ಯೌವನೆ ಅನುಸೂಯಾ ಶರ್ಮಾ ಅವರದು.
ರಾಜ್ಯಮಟ್ಟದ ಪ್ರಶಸ್ತಿ
ಕೃಷಿ-ಗ್ರಾಮೀಣ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಕೇಂದ್ರವು ಪ್ರತೀವರುಷ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿದೆ. 'ಕೃಷಿಕರ ಅಗತ್ಯಗಳನ್ನಾಧರಿಸಿದ, ಅವರ ನೋವು ನಲಿವುಗಳ ಮೇಲೆ ಬೆಳಕು ಚೆಲ್ಲುವ, ಅವರ ಸಮಸ್ಯೆಗಳ ಬಗ್ಗೆ ಜನಾಭಿಪ್ರಾಯ ಮೂಡಿಸುವ ವಸ್ತುನಿಷ್ಠ ಹಾಗೂ ವಿಚಾರಪೂರ್ಣ ಬರೆಹಗಳು ಕೃಷಿ ಪತ್ರಿಕೋದ್ಯಮವನ್ನು ಸದೃಢಗೊಳಿಸಬೇಕೆಂಬ ಆಶಯದೊಂದಿಗೆ ಪ್ರಶಸ್ತಿ ನೀಡಲಾಗುತ್ತದೆ' ಎನ್ನುತ್ತಾರೆ ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು.
ಇದೀಗ ದೇಶಪಾಂಡೆ ಪೌಂಡೇಶನ್ ನೆರವಿನೊಂದಿಗೆ ಕೇಂದ್ರ ತನ್ನ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತ್ತರಿಸಿದೆ. 'ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ ಸರಣಿ'ಗೆ ಚಾಲನೆ. ವಿವಿಧ ಪತ್ರಿಕೋದ್ಯಮ ವಿಭಾಗಗಳು, ಕೃಷಿ ಸಂಬಂಧಿ ವಿದ್ಯಾಲಯಗಳಲ್ಲಿ ಕಾರ್ಯಾಗಾರ ನಡೆಸುವ ಮೂಲಕ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಉದ್ದೇಶ.
ಪ್ರಕಟಣೆಗಳು
ಹತಾಶೆಕವಿದಿರುವ ಒಕ್ಕಲುತನದಲ್ಲಿ ಸ್ಪೂರ್ತಿಯ ಚಿಲುಮೆಗಳಂತಿರುವ ಮೌನ ಸಾಧಕರ ಯಶೋಗಾಥೆಗಳನ್ನು ಪುಸ್ತಕ ರೂಪದಲ್ಲಿ - ಅದರಲ್ಲೂ ಸುಲಭವಾಗಿ ಕೈಗೆಟಕುವ ದರದಲ್ಲಿ ಮುದ್ರಿಸಿ ರೈತರ ಕೈಗಿಡುವತ್ತ ಹೊಸ ಹೆಜ್ಜೆ ಇಟ್ಟಿದೆ. ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ, ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ, ಸಾವಯವದ ಹಾದಿ.. ಹೀಗೆ ಚಿಕ್ಕ ಚೊಕ್ಕ ಪುಸ್ತಕ. ಅಲ್ಲದೆ ಕಾಕೋಳದ ಯಶೋಗಾಥೆ, ನಂದಿ ಹಳ್ಳಿಯ ಉದ್ಯಮಶೀಲ ದಂಪತಿ, ಸಾವಯವ ತಾರಸಿ ತೋಟ, ಜಲನೆಮ್ಮದಿಯತ್ತ ಕಾಕೋಳ ಇತರ ಪ್ರಕಟಣೆಗಳು.
ಕಾಮ್ ಚಟುವಟಿಕೆಗಳ ಮುಖವಾಣಿ 'ಕಾಮ್ ನ್ಯೂಸ್' ಮಾಸಿಕ ಪ್ರಕಟಣೆ. ದಾನಿಗಳ ಸಹಯೋಗ. ಅದರಲ್ಲಿ ಕಾಮ್ ಅಭ್ಯರ್ಥಿಗಳ, ಫೆಲೋಗಳ ಮತ್ತು ಚಟುವಟಿಕೆಗಳ ವರದಿ. ಪತ್ರಿಕೋದ್ಯಮ ತರಬೇತಿಗೆ ನೂರೈವತ್ತಕ್ಕೂ ಮಿಕ್ಕಿ ಪ್ರವೇಶಗಳು ಬರುತ್ತಿವೆ. 'ಬಂದ ಅರ್ಜಿಗಳಲ್ಲಿ 25-30ನ್ನು ಹಿಂಡಿ ತೆಗೆದರೂ ಕೊನೆಯಲ್ಲಿ ಉಳಿಯುವವರು 10-15 ಮಂದಿ ಮಾತ್ರ.
ಕೇಂದ್ರದ ಕೇಂದ್ರಸ್ಥಳ ಧಾರವಾಡ. ಮಾಧ್ಯಮ ಕೇಂದ್ರದ ಸಾರಥ್ಯ ಅನಿತಾ ಪೈಲೂರು. ಆರಂಭದಲ್ಲಿ ಪರ್ಯಾಯ ಕೃಷಿ ಮಾಧ್ಯಮ ಕೇಂದ್ರ ಎಂದಿತ್ತು. ಇತ್ತೀಚೆಗೆ ಹೆಸರು ಹೃಸ್ವವಾಗಿದೆ. ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಂಘಟಕರು ಎದುರು ಕಾಣಿಸಿಕೊಳ್ಳುವುದೇ ಇಲ್ಲ! ನೇಪಥ್ಯದಲ್ಲಿರುತ್ತಾರೆ.
ಸಂಸ್ಥೆ ಈಗ ಹತ್ತರ ಹೊಸ್ತಿಲಲ್ಲಿದೆ. ಅಕ್ಟೋಬರ್ ೩೧ - ಮೂಡಿಗೆರೆ ಸನಿಹದ ದೇವವೃಂದದಲ್ಲಿ ಹತ್ತರ ಸಂಭ್ರಮ ಸಮಾಂಭ ನಡೆಯಲಿದೆ. 'ಕಾಮ್' ಅಜೆಂಡಾದಲ್ಲಿ ಅಮೂರ್ತವಾಗಿರುವ ಕೃಷಿ-ಗ್ರಾಮೀಣ ವಿಚಾರಗಳ ಕುರಿತಾದ ಮನೋಪ್ಯಾಕೇಜ್ನ ಮೂರ್ತತೆಗೆ ಇನ್ನಷ್ಟು ಹೆಗಲುಗಳು ಬೇಕಾಗಿವೆ. ನಮ್ಮ ಪತ್ರಿಕಾ ಸಂಸ್ಥೆಗಳೂ ಈ ಕೆಲಸಕ್ಕೆ ಸಹಕಾರ ಕೊಟ್ಟರೆ ಇನ್ನಷ್ಟು 'ಸಾಮಥ್ರ್ಯವರ್ಧನೆ' ಸಾಧ್ಯವಾಗಬಹುದು.

0 comments:

Post a Comment