Wednesday, October 20, 2010

ಮೇಳೈಸಲಿ, 'ರೈತರ ಜ್ಞಾನ - ವಿಜ್ಞಾನಿಯ ಬುದ್ಧಿ'


ಧಾರವಾಡ ಕೃಷಿ ಮೇಳ ಮುಗಿಯಿತು. ಇನ್ನು ಬೆಂಗಳೂರು ಕೃಷಿ ಮೇಳ. ಜತೆಗೆ ಜಿಲ್ಲಾ ಮಟ್ಟದ ಕೃಷಿ ಉತ್ಸವಗಳು. ಕನ್ನಾಡಿನಾದ್ಯಂತ 'ಕೃಷಿ'ಯ ಲೇಬಲ್ನಲ್ಲಿ ನಿರಂತರ ಮೇಳಗಳು ನಡೆಯುತ್ತಲೇ ಇವೆ! ಶ್ಲಾಘನೀಯ.ಇಂತಹ ಮೇಳಗಳಿಗೆ ಎಷ್ಟು ಮಂದಿ 'ಸೇರಿದ್ದರು' ಎಂಬುದೇ ಮಾನದಂಡಗಳಾಗುತ್ತಿವೆ. ಜನ ಸೇರಿಸುವಲ್ಲಿ ಇರುವಂತಹ ಆಸಕ್ತಿ ಹೂರಣದಲ್ಲಿ ಕಾಣುತ್ತಿಲ್ಲ. ಕೃಷಿ ಮೇಳವೊಂದರ ಯಶಸ್ಸು ಅಡಗಿರುವುದು ಹೂರಣದಲ್ಲಿ. ಜನ ಬರ್ತಾರೆ ಬಿಡಿ. ಮೇಳಕ್ಕೂ ಬರ್ತಾರೆ, ಜಾತ್ರೆಗೂ ಬರ್ತಾರೆ!
ಧಾರವಾಡ ಕೃಷಿ ಮೇಳ ಸುತ್ತಾಡಿದಾಗ ನನ್ನನ್ನು ಕಾಡಿದ ವಿಚಾರಗಳು. ನೂರಾರು ಮಳಿಗೆಗಳು. ಗಿಜಿಗುಟ್ಟುವ ಜನಸ್ತೋಮ. ಬಲೂನ್ನಿಂದ ತೊಡಗಿ ದೈತ್ಯ ಯಂತ್ರಗಳ ತನಕ ಮಳಿಗೆಗಳು. ಕೃಷಿಯ ಹೊರತಾದ ಮಳಿಗೆಗಳ ಮುಂದೆ ಕೃಷಿ ಸಂಬಂಧಿ ಮಳಿಗೆಗಳಿಗೆ ಮಸುಕು!
ಕಾರ್ಮಿಕರಿಂದ - ಮಾರುಕಟ್ಟೆ ತನಕದ ಒಂದಲ್ಲ ಒಂದು ಸಮಸ್ಯೆಗಳು ಕೃಷಿಕನನ್ನು ಹೈರಾಣ ಮಾಡುತ್ತಿವೆ. ಪರಿಹಾರಕ್ಕೆ ಸರಕಾರದತ್ತ ನೋಡುವ ಹಾಗಿಲ್ಲ. ಅವರದ್ದೇ ಆದ 'ತಲೆಲೆಕ್ಕ'ದಾಟ! ಕೃಷಿ ಮೇಳದಲ್ಲಿ ಪರಿಹಾರ ಸಿಗುತ್ತೋ ನೋಡೋಣ ಅಂತ ಬಂದಾಗ ಇಲ್ಲೂ ಗೊಂದಲ. ವಿಜ್ಞಾನಿಗಳನ್ನು ಕೇಳೋಣವೋ ಅವರ ಭಾಷೆ ಇವನಿಗೆ ಅರ್ಥವಾಗದು. ಅಂತೂ ಅವರು ಹೇಳಿದ್ದನ್ನು ಏನೋ ಬರಕೊಂಡು ಹೊಲಕ್ಕೆ ಹೋಗಿ ಅನುಷ್ಠಾನ ಮಾಡುವ ಹೊತ್ತಿಗೆ ಲೆಕ್ಕಾಚಾರವೆಲ್ಲಾ ಕೈಕೊಟ್ಟು ಬಿಡುತ್ತದೆ. ಹೀಗಾಗಿ ವಿಜ್ಞಾನಿಗಳ ಸಲಹೆಯೊಂದಿಗೆ 'ಮಾಡಿ ನೋಡಿ ಯಶಸ್ಸಾದ' ರೈತನ ಸಲಹೆಯೂ 'ಹುಡುಕಿ ಹೋಗುವ' ರೈತನಿಗೆ ಸಿಕ್ಕರೆ ಚೆನ್ನಾಗಿರುತ್ತಿತ್ತು.
ಸಬ್ಸಿಡಿ ಭರಾಟೆ
ಯಂತ್ರೋಪಕರಣಗಳಿಗೆ ರೈತೊಲವು ಚೆನ್ನಾಗಿತ್ತು. ಮಿನಿ ಯಂತ್ರಗಳು ಮೇಳದ ಆಕರ್ಷಣೆ. ವಿವಿಧ ಮಿಲ್ಗಳು, ಕೈಗಾಡಿಗಳು, ಹೊಂಡ ತೆಗೆವ, ಕಳೆ ತೆಗೆವ ಯಂತ್ರಗಳ ಸದ್ದಿನೊಂದಿಗೆ ರೈತನ ದನಿಯೂ ಸೇರಿತ್ತು. 'ನಮ್ಮ ಮಿತಿಯಲ್ಲಿ ಯಂತ್ರೋಪಕರಣಗಳು ಕೃಷಿಯಲ್ಲಿ ಬೇಕ್ರಿ. ನಾನು ಕುಣಿ ತೆಗೆವ ಮಿಶನ್ ಪರ್ಚೇಸ್ ಮಾಡ್ದೆ' - ಸಂತಸ ಹಂಚಿಕೊಂಡರು ಹಾವೇರಿಸ ಸಮೀಪದ ಬಸಪ್ಪಶಿವಣ್ಣ.
ಟ್ರಾಕ್ಟರ್ ಮೊದಲಾದ ಆರ್ಥಿಕ ಭಾರದ ಯಂತ್ರಗಳು ಒಂದಷ್ಟು ರೈತರ ಮನಸ್ಸೇಳೆದರೆ; ಚಿಕ್ಕ ಚಿಕ್ಕ ಯಂತ್ರಗಳು, ಸಲಕರಣೆಗಳು, ಸಾಧನಗಳತ್ತ ಹೆಚ್ಚು ಮಂದಿ ಆಸಕ್ತರಾಗಿದ್ದುದು ಕಂಡು ಬಂತು. ಬಹುತೇಕ ಎಲ್ಲಾ ಯಂತ್ರಗಳಲ್ಲೂ 'ಶೇ.50 ರೈತರ ಪಾಲು' ಎಂಬ ಫಲಕ ನಮ್ಮ 'ಸಬ್ಸಿಡಿ' ವ್ಯವಸ್ಥೆಯನ್ನು ಅಣಕಿಸುತ್ತಿತ್ತು.
ಒಂದು ಯಂತ್ರಕ್ಕಿರುವ ನಿಜವಾದ ಬೆಲೆಯನ್ನು ಸಬ್ಸಿಡಿಗಾಗಿ ದುಪ್ಪಟ್ಟುಗೊಳಿಸಿ, 'ಸಬ್ಸಿಡಿ ಪಾಲು, ರೈತನ ಪಾಲು' ಅಂತ ಪಾಲು ವಿಭಾಗಿಸುವ ವ್ಯವಸ್ಥೆಗಳಿವೆಯಲ್ಲಾ, ನಿಜಕ್ಕೂ ಭಾರತಕ್ಕೆ ಇದೊಂದು ಶಾಪ! ಸಬ್ಸಿಡಿ ಫೈಲಿನೊಳಗೆ ಯಂತ್ರಗಳು ನುಸುಳದೆ ರೈತನ ಮನೆಯಂಗಳಕ್ಕೆ ಕಾಲಿಡುವುದೇ ಇಲ್ಲ. 'ಭಾರತದ ಕೃಷಿ ವ್ಯವಸ್ಥೆಯಲ್ಲಿ ರೈತನಿಗೆ ನೀಡುವ ಸಬ್ಸಿಡಿ ವ್ಯವಸ್ಥೆ ದೊಡ್ಡ ರೋಗ. ಅದು ಗುಣವಾಗದೆ ಕೃಷಿ ರಂಗಕ್ಕೆ ಉದ್ದಾರವಿಲ್ಲ' ಎಂದು ಸಾವಯವ ತಜ್ಞ ಡಾ.ನಾರಾಯಣ ರೆಡ್ಡಿಯವರು ಪ್ರಾಸಂಗಿಕವಾಗಿ ಹೇಳಿದ ಮಾತು ಪ್ರಸ್ತುತವಾಗುತ್ತದೆ.
ಮನದ ಮಾತು
ರಸಗೊಬ್ಬರ ಮತ್ತು ಸಿಂಪಡಣಾ ಮಳಿಗೆಗಳ ಕತೆನೇ ಬೇರೆ. ರೈತರನ್ನು ಆಕರ್ಷಿಸಬಹುದಾದ ಎಲ್ಲಾ ಜಾಣ್ಮೆಗಳಲ್ಲಿ ನಿಷ್ಣಾತರಿವರು. 'ಕಳೆದ ವರುಷ ಒಂದು ಟಿನ್ ಒಯ್ದಿದ್ದೆ. ಈ ವರುಷ ಎರಡು ಕೊಡ್ರಿ' ರಾಸಾಯನಿಕ ಸಿಂಪಡಣೆಯೊಂದಕ್ಕೆ ರೈತ ಆರ್ಡರ್ ಮಾಡುತ್ತಿದ್ದುದ್ದನ್ನು ಹತ್ತಿರದಿಂದ ಗಮನಿಸಿದ್ದೆ. 'ತೆಗೊಳ್ರಿ, ಎರಡಕ್ಕೆ ಒಂದು ಫ್ರೀ' ಎನ್ನಬೇಕೇ?
ಕಂಪೆನಿ ತರಕಾರಿ ಬೀಜಗಳ ಮಳಿಗೆಗಳಲ್ಲಿ ರಶ್. ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸುತ್ತಾರೆ. ಎಕ್ರೆಗೆ ಎಷ್ಟು ಬೀಜ ಬೇಕು, ಯಾವ ಗೊಬ್ಬರ ಬೇಕು, ಏನು ಸಿಂಪಡಿಸಬೇಕು ಎಂಬ ಪೂರ್ತಿ ಬಯೋಡಾಟ ಕೊಟ್ಟುಬಿಡುತ್ತಾರೆ. ಹೊಲದ ಯಜಮಾನನೊಂದಿಗೆ ಒಂದಿಬ್ಬರು ಸಹಾಯಕರು ಬಂದಿರುತ್ತಾರೆ. ಅವರ ಸಲಹೆ(!)ಯಂತೆ ಹಣದ ಮುಖ ನೋಡಿದೆ, 'ದುಬಾರಿ' ಬೀಜಗಳನ್ನು ಪ್ಯಾಕ್ ಮಾಡಿಸಿದಾಗಲೇ ಆ ಯಜಮಾನನಿಗೆ ಖುಷಿ.
ಮಳಿಗೆಯಲ್ಲಿ ರಸಗೊಬ್ಬರ, ಕಂಪೆನಿ ಬೀಜಗಳ ಭರಾಟೆ ನಡೆಯುತ್ತಿರುವಾಗಲೇ ಅತ್ತ ವೇದಿಕೆಯಲ್ಲಿ ಸಾವಯವ ಕೃಷಿಯಲ್ಲಿ ಖುಷಿ ಕಂಡ ರೈತರ ಕೃಷಿ ಕಥನ-ಮನದ ಮಾತುಕತೆ ನಡೆಯುತ್ತಿತ್ತು. ಅತ್ತ 'ವಿಷ ಹೊಡೀರಿ' ಅನ್ನುತ್ತಿದ್ದರೆ, ಇತ್ತ 'ಬೇರೆ ಬೇರೆ ಸೊಪ್ಪುಗಳಿಂದ ತಯಾರಿಸಿದ ಕಷಾಯ ಹೊಡೀರಿ' ಅನ್ನುವ ಸಲಹೆ. ಇಬ್ಬರ ಮಾತನ್ನೂ ಮೌಲ್ಯಮಾಪನ ಮಾಡಿದರೆ, ಸಾವಯವ ಕೃಷಿಕನಿಗೇ ಅಂಕ ಹೆಚ್ಚು! ಹಣ ಸುರಿಯದೆ, ವಿಷ ಮುಟ್ಟದೆ ತನ್ನ ಹೊಲದ ಔಷಧೀಯ ಸಸ್ಯಗಳಿಂದ ಕಷಾಯ ಮಾಡಿಕೊಂಡು ಸಿಂಪಡಿಸಿ ಯಶಕಂಡಿದ್ದಾನೆ.
ರೈತನ ದನಿಗೆ ಮಣೆ
'ರೈತರಿಂದ ರೈತರಿಗಾಗಿ' ಎಂಬ ಗೋಷ್ಠಿಯನ್ನು ಕೃಷಿಮೇಳ ಚೆನ್ನಾಗಿ ಆಯೋಜಿಸಿತ್ತು. ಇಲ್ಲಿ ರೈತನ ದನಿಗೆ ಮಣೆ. ಅಧಿಕಾರಿ ಗಡಣವಿಲ್ಲ. ಸಭಾಭವನ ರೈತರಿಂದ ತುಂಬಿತ್ತು. ಒಬ್ಬೊಬ್ಬ ರೈತನಿಂದಲೂ ಸೋಲು-ಗೆಲುವುಗಳ ವಿವರಣೆ. ಲಾಭ-ನಷ್ಟದ ಅಂಕಿಅಂಶ. ಕೀಟ ಹತೋಟಿ, ರೋಗ ಹತೋಟಿಗೆ ದೇಸಿ ಯತ್ನ. ಉತ್ಪನ್ನಗಳಿಗೆ ಸ್ವ-ಮಾರುಕಟ್ಟೆ. ಯಾರೊಡನೆಯೂ ಅಂಗಲಾಚದ ಸ್ವಾವಲಂಬಿ ಬದುಕು ನೀಡಿದ ಯಶೋಗಾಥೆಗಳು ರಾಸಾಯನಿಕ ಮಳಿಗೆಗಳನ್ನು ಅಣಕಿಸುತ್ತಿತ್ತು. ಈಗಾಗಲೇ ರಾಸಾಯನಿಕ ಕೃಷಿಯಲ್ಲಿ ತೊಡಗಿದ್ದ ಒಂದಷ್ಟು ಮಂದಿ ಸಾವಯವದತ್ತ ಆಸಕ್ತಿ ತೋರುತ್ತಿರುವುದು ಗಮನಾರ್ಹ ಅಂಶ. ಇಂತಹ ಗೋಷ್ಠಿ ಹೆಚ್ಚೆಚ್ಚು ನಡೆಯಬೇಕು.
ಈ ಗೋಷ್ಠಿಯ ಕೊನೆಯಲ್ಲಿ ನಿಕಟಪೂರ್ವ ಕುಲಪತಿ ಡಾ.ಪಾಟೀಲ್ ಹೇಳಿದ ಮಾತು ಮೇಳದ ದಿಕ್ಸೂಚಿ - ರೈತರ ಜ್ಞಾನ, ವಿಜ್ಞಾನಿಯ ಬುದ್ಧಿ ಎರಡೂ ಮೇಳೈಸುವ ದಿನಗಳಿವು. ಪೇಪರ್ನಲ್ಲಿನ ರಾಜಕೀಯ ಸುದ್ದಿಗಳ, ರಾಜಕೀಯ ನಾಯಕರ ವಿಚಾರಗಳನ್ನು ವಿಮರ್ಶೆ ಮಾಡುವುದನ್ನು ಬಿಟ್ಟುಬಿಡಿ. ತಲೆ ಲೆಕ್ಕ, ರಿಸಾರ್ಟ್ ಅವರಿಗೇ ಇರಲಿ. ಅನಾವಶ್ಯಕವಾದ ತಿರುಗಾಟ, ಹರಟೆ ಕಡಿಮೆ ಮಾಡಿ. ಆ ಹೊತ್ತನ್ನು ಹೊಲದಲ್ಲಿ ಕಳೆಯಿರಿ. ಒಕ್ಕಲುತನ ಮಾಡಿ. ಮೇಳದಲ್ಲಿ ಸಿಕ್ಕ ಮಾಹಿತಿ ಹೊಲಕ್ಕೆ ಸೂಕ್ತವಾಗುತ್ತೋ ನೋಡಿ. ಅದರಂತೆ ಬೆಳೆಯಿರಿ. ಐದು ಸಾವಿರದಿಂದ ಐವತ್ತು ಸಾವಿರ ತನಕದ ವಿವಿಧ ನಾಯಿಗಳ ಪ್ರದರ್ಶನ-ಮಾರಾಟ, ಐವತ್ತು ಸಾವಿರದಿಂದ ಲಕ್ಷಕ್ಕೂ ಮಿಕ್ಕಿ ಮೌಲ್ಯ ಹೊಂದಿದ ಜಾನುವಾರುಗಳ ಪ್ರದರ್ಶನ, ಆಡು ಪ್ರದರ್ಶನ ಮೇಳದ ಆಕರ್ಷಣೆ. ದೇವಣಿ, ಹಳ್ಳಿಕಾರ್, ಖಿಲಾರ, ಗಿರ್ ತಳಿಗಳ ಹಸುಗಳು. ಈ ಪಶು ಸಂದೋಹದ ಮಧ್ಯೆ 'ನಮ್ಮ ಕಂಪೆನಿಯ ಹಿಂಡಿ ಖರೀದಿಸಿ' ಎನ್ನುವ ಕಂಪೆನಿ ಪ್ರತಿನಿಧಿಗಳು. ಹೂ-ಹಣ್ಣು ತರಕಾರಿಗಳ ಪ್ರದರ್ಶನ ಸೊರಗಿತ್ತು!
ಮೌಲ್ಯವರ್ಧನೆ-ರುಚಿವರ್ಧನೆ
ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಕಿರುಧಾನ್ಯಗಳ ಮೌಲ್ಯವರ್ಧನೆ; ಬಿಜಾಪೂರ ಕೆವಿಕೆಯ ಜೋಳದ ಬಿಸ್ಕತ್, ಪೇಡಾ, ಉಂಡಿ, ನಿಪ್ಪಟ್ಟು, ಚೂಡಾ; ಬೆಳಗಾಗಿ ಕೆವಿಕೆಯ ಶೇಂಗಾ ಸಿಪ್ಪೆ ತೆಗೆಯುವ ಸಲಕರಣೆ; ಧಾರವಾಡ ಕೆವಿಕೆಯ ರಾಗಿ ಉಂಡಿ, ಚಕ್ಕುಲಿ, ಬಿಸ್ಕತ್; ಕೃಷಿ ವಿವಿಯ ಕಿರುಧಾನ್ಯ ಆಧಾರಿತ ಮೌಲ್ಯವರ್ಧನೆ, ಗ್ರಾಮೀಣ ಗೃಹ ವಿಜ್ಞಾನ ವಿಭಾಗದ ಆಹಾರ ಕಲಬೆರಕೆ ಕಂಡು ಹಿಡಿವ ಸರಳ ಉಪಾಯ; ಅರಣ್ಯ ಸಸ್ಯಗಳ-ಬೀಜಗಳ ಮಳಿಗೆಗಳು ಎಕ್ಸ್ಕ್ಲೂಸಿವ್. ಕೃಷಿ ವಿವಿಯ ವಿವಿಧ ತಾಕುಗಳಿಗೆ ರೈತರ ಭೇಟಿ. ಸಂಬಂಧಪಟ್ಟ ಅಧಿಕಾರಿಗಳು, ಸಹಾಯಕರು ಖುದ್ದು ಹಾಜರಿದ್ದು ಮಾಹಿತಿ ನೀಡುತ್ತಿದ್ದರು. ಸೊಂಪಾಗಿ ಬೆಳೆದ ಬೆಳೆಯನ್ನು ನೋಡಿದಾಗ, 'ನಮ್ಮ ಹೊಲದಲ್ಲಿ ಹೀಂಗೆ ಬರೋದಿಲ್ವಲ್ಲಾ' ಅಂತ ಅನ್ನಿಸದೆ ಬಿಡದು. ಸಾವಯವ ಮಳಿಗೆಗಳು ಇನ್ನಷ್ಟು ಬೇಕಿತ್ತು. ವಿವಿ ಕಡೆಯಿಂದ ಮಾತ್ರವಲ್ಲದೆ, ಸಾವಯವ ರೈತರ ಪಾಲುಗಾರಿಕೆಯೂ ಹೆಚ್ಚು ಬೇಕಿತ್ತು. ಸಾವಯವ ವಸ್ತುಗಳ ಮಾರಾಟ, ಮಾಹಿತಿ, ಮಾರುಕಟ್ಟೆಯತ್ತ ಪರಸ್ಪರ ವಿಚಾರ ವಿನಿಮಯಕ್ಕೆ ಮಳಿಗೆ ವೇದಿಕೆಯಾಗುತ್ತಿತ್ತು. ಕೃಷಿ ಸಾಹಿತ್ಯಗಳಿಗೆ ಮೇಳ ಚೆನ್ನಾದ ಅವಕಾಶ ಮಾಡಿಕೊಟ್ಟಿತ್ತು.
'ಟೀಚರ್ ಇಲ್ಲದೆ ಮಕ್ಕಳಿಗೆ ಪಾಠ ಮಾಡಿ ಸಾರ್. ತೆಗೊಳ್ಳಿ ಈ ಸಿಡಿ', 'ಈ ಯಂತ್ರವನ್ನು ಮನೆಯ ಇಂತಹ ದಿಕ್ಕಿನಲ್ಲಿಡಿ. ನೀವು ಶ್ರೀಮಂತರಾಗ್ತೀರಿ - ಈ ಮಳಿಗೆ ನೋಡಿದಾಗ, 'ಡಿಬಾರ್ ಮಾಡಬೇಕು ಅನ್ನಿಸಿತು, ಆದರೆ ಎಲ್ಲಿದೆ ಅಧಿಕಾರ'? ಪಾಪ, ಹೊಟ್ಟೆಪಾಡಲ್ಲವೇ?! ಯಂತ್ರ ಇಟ್ಟು ಶ್ರೀಮಂತರಾಗ್ತಿದ್ರೆ ಕೃಷಿ ಮೇಳವೇ ನಡೆಯುತ್ತಿರಲಿಲ್ಲವೋ ಏನೋ? ಎಲ್ಲಿಯವರೆಗೆ ಜನ ನಂಬ್ತಾರೋ, ಅಲ್ಲಿಯ ವರೆಗೆ ನಂಬಿಸುವವರು ಇದ್ದೇ ಇರ್ತಾರೆ ತಾನೆ.
ಒಟ್ಟಿನಲ್ಲಿ ಕೃಷಿ ಮೇಳ ಅದ್ದೂರಿಯಾಗಿಯೇ ನಡೆದಿದೆ. ರೈತರೂ ಸ್ವತಃ ಭಾಗವಹಿಸುವಂತೆ ಆಕರ್ಷಣೀಯವಾಗಿ ಮಾಡಿದೆ. ಕೃಷಿ ವಿವಿಯ ವರಿಷ್ಠರೂ ಸೇರಿದಂತೆ ಎಲ್ಲರೂ ಮಳಿಗೆ ತುಂಬಾ ಓಡಾಡಿಕೊಂಡು ವಿಚಾರಿಸುತ್ತಿದ್ದರು. ದೊಡ್ಡ ದೊಡ್ಡ ಕಂಪೆನಿಗಳಿಗೆ ಮಣೆ ಹಾಕುವುದು ಆರ್ಥಿಕ ದೃಷ್ಟಿಯಿಂದ ಅನಿವಾರ್ಯ. ಆದರೆ ಚಿಕ್ಕ ಪುಟ್ಟ ಪತ್ರಿಕೆ, ಮೌಲ್ಯವರ್ಧಿತ ಉತ್ಪನ್ನಗಳು, ರೈತಾವಿಷ್ಕಾರ.. ಇಂತಹ ವಸ್ತುಗಳಿಗೆ ಮಳಿಗಾ ಶುಲ್ಕದಲ್ಲಿ ಮನ್ನಾ ಮಾಡಬೇಕು. ಮುಂದಿನ ಕೃಷಿ ಮೇಳಗಳಲ್ಲಿ ಈ ಕುರಿತು ವಿವಿ ವರಿಷ್ಠರು ಆಲೋಚಿಸಿ, ಅನುಷ್ಠಾನಿಸಿದರೆ ಮಳಿಗೆಗಳಲ್ಲಿ ರೈತರ ಪಾಲ್ಗೊಳ್ಳುವಿಕೆಯನ್ನು ಹೆಚ್ಚು ನಿರೀಕ್ಷಿಸಬಹುದು.
ಮೇಳದಲ್ಲಿ ಆಸಕ್ತಿಯಿಂದ ಭಾಗವಹಿಸಿದ ರೈತರಿಗೆ ಮಳೆ ನಿರಾಶೆ ತಂದಿತ್ತು. ಒಬ್ಬರಂತೂ ತಮಾಶೆಗೆ ಹೇಳಿಬಿಟ್ಟರು - 'ಉಮೇಶ ಕತ್ತಿಯವರು ಎಡಗೈಯಲ್ಲಿ ಕ್ಯಾಂಡಲ್ನಿಂದ ದೀಪಜ್ವಲನ ಮಾಡಿ ಕೃಷಿಮೇಳವನ್ನು ಉದ್ಘಾಟಿಸಿದ್ರಲ್ಲಾ, ಹಾಂಗಾಗಿ ಕೃಷಿಮೇಳ ಪೂರ್ತಿ ಮಳೆಯೋ ಮಳೆ'!
'ರೈತರ ಬಳಿಗೇ ಕೃಷಿ ವಿವಿಗಳು ಬರಲಿ' - ಪರಮಪೂಜ್ಯ ಶ್ರೀ ಶ್ರೀ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಮಾತು ಕಾಲದ ಆವಶ್ಯಕತೆ.

0 comments:

Post a Comment