ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ (ರಾಷ್ಟ್ರೀಯ ಗೇರು ಸಂಶೋಧನಾಲಯ - Directorate of Cashew Research, Puttur) 'ಗೇರು ದಿನೋತ್ಸವ'. ದೂರದ ಕೋಲಾರದಿಂದ ಮೂವತ್ತಕ್ಕೂ ಮಿಕ್ಕಿ ರೈತರು ಭಾಗಿ. ತಮ್ಮೂರಲ್ಲೂ ಗೇರು ಕೃಷಿಯನ್ನು ಕೈಗೊಳ್ಳಬಹುದೇ? ಅವರ ಮುಂದಿದ್ದ ಪ್ರಶ್ನೆ. 'ನಮ್ಮಲ್ಲಿ ಟೊಮೆಟೋ ವಾಣಿಜ್ಯ ಕೃಷಿ. ಅದಕ್ಕೆ ರಸಗೊಬ್ಬರ, ಸಿಂಪಡಣೆ ಅನಿವಾರ್ಯ. ದರವೂ ಏರಿಳಿತ. ನೀರಾವರಿ ಹೆಚ್ಚು ಬೇಡದ ಗೇರು ಕೃಷಿಯು ಟೊಮೆಟೋಗೆ ಪರ್ಯಾಯವಾಗಬಹುದೇ?' ಎಂಬ ಸಂಶಯಕ್ಕೆ ಕೇಂದ್ರದ ಹಿರಿಯ ವಿಜ್ಞಾನಿ ಗಂಗಾಧರ ನಾಯಕ್ - ಆಗದು - ಎಂದಷ್ಟೇ ಉತ್ತರಿಸಿದರು.
ಕಾರಣವೂ ಇಲ್ಲದಿಲ್ಲ. ಟೊಮೆಟೋ ಕೃಷಿಯಲ್ಲಿ ಲಕ್ಷದ ಲಕ್ಷ್ಯ. ಎಕರೆ ಇಂತಿಷ್ಟು ಲಕ್ಷ ಸಿಗಲೇ ಬೇಕೆಂಬ ನಿರೀಕ್ಷೆ. ಒಳಸುರಿಗಳೂ ಯಥೇಷ್ಟ. ಇಳುವರಿಯಲ್ಲಿ ಮಾತ್ರ ಅದೃಷ್ಟದಾಟ. ಆ ರೀತಿಯ ಲಕ್ಷವನ್ನು ಗೇರು ಕೃಷಿಯಲ್ಲಿ ನಿರೀಕ್ಷಿಸುವಂತಿಲ್ಲ. ಎಕರೆಗೆ ಸೀಮಿತ ಗಿಡಗಳು. ಹೆಚ್ಚು ಇಳುವರಿ ಸಿಗಬೇಕೆಂದರೆ ಕೆಲವು ವರುಷಗಳು ಕಾಯಬೇಕು. ಜತೆಗೆ ಮಾರುಕಟ್ಟೆಯಲ್ಲಿ ದರವೂ ಚೆನ್ನಾಗಿರಬೇಕು. ಕೋಲಾರ ಸುತ್ತಮುತ್ತ ಗೇರುಬೀಜದ ಫ್ಯಾಕ್ಟರಿಗಳು ಇವೆ. ಹಾಗಾಗಿ ಸಂಸ್ಕರಣೆ, ಮಾರಾಟ ಸುಲಭ.
ಮುಳಬಾಗಿಲು, ಕೋಲಾರ ಪ್ರದೇಶವು ಮಾವಿಗೆ ಖ್ಯಾತಿ. ಮಾವಿಗೆ ಪರ್ಯಾಯವಾಗಿ ಗೇರು ಕೃಷಿಯತ್ತ ಬಹುತೇಕರ ಒಲವು. ಮಾವು ಈ ವರುಷ ಹೆಚ್ಚು ಇಳುವರಿ ನೀಡಿದರೆ, ಮುಂದಿನ ವರುಷ ಅಷ್ಟಕ್ಕಷ್ಟೇ. ಜತೆಗೆ ರೋಗಬಾಧೆ. ಅಸಮರ್ಪಕವಾಗುತ್ತಿರುವ ಪ್ರಾಕೃತಿಕ ಸ್ಥಿತಿ. ಮಾರುಕಟ್ಟೆಯೂ ಅನಿಶ್ಚಿತ. ಹೀಗಾಗಿ ಹೊಸ ತಂತ್ರಜ್ಞಾನದಲ್ಲಿ ಬೆಳೆಯಬಹುದಾದ ಗೇರು ಕೃಷಿಯನ್ನು ನೆಚ್ಚಿಕೊಂಡ ರೈತರು ಪುತ್ತೂರಿನ ಸಂಶೋಧನಾ ಕೇಂದ್ರಕ್ಕೆ ಆಗಮಿಸಿ, ಕೃಷಿ ಕ್ರಮವನ್ನು ನೋಡಿ ನಿರ್ಧಾರಕ್ಕೆ ಬಂದರು - ಮಾವಿಗೆ ಪರ್ಯಾಯವಾಗಿ ಗೇರು ಕೃಷಿಯನ್ನು ಆಯ್ದುಕೊಳ್ಳಬಹುದು.
ಗೇರು ದಿನೋತ್ಸವದಂದು ಕೇಂದ್ರದ ನಿರ್ದೇಶನದಲ್ಲಿ ರೂಪಿತವಾದ ಗೇರು ಕೃಷಿಕರ ತೋಟವನ್ನು ಸಂದರ್ಶಿಸುವುದು ವಾಡಿಕೆ. ಈ ವರುಷ ಪುತ್ತೂರು (ದ.ಕ.) ಸನಿಹದ ಇರ್ದೆ-ಪಾಪನಡ್ಕ ಕೆ.ದೇರಣ್ಣ ರೈಯವರ ಗೇರು ತೋಟದ ವೀಕ್ಷಣೆ. ಹೀಗೆ ನೇರವಾಗಿ ವೀಕ್ಷಿಸುವುದರಿಂದ ಕೃಷಿಯ ಸುಖ-ದುಃಖಗಳ ವಿನಿಮಯ. ಬೇಕು-ಬೇಡಗಳ ನಿರ್ಧಾರ ಸುಲಲಿತ. ಕೋಲಾರದ ಕೃಷಿಕರಿಗೆ ಅವರ ಕೃಷಿ, ಇಳುವರಿ ಮತ್ತು ಮಾರುಕಟ್ಟೆ ಆಕರ್ಶಿತವಾಯಿತು.
ಸರಿ, ದೇರಣ್ಣ ರೈಯವರ ಗೇರು ತೋಟದ ವೈಶಿಷ್ಯವೇನು? ಒಮ್ಮೆ ತಿರುಗಾಡಿ ಬರೋಣ. ಇವರದು ಅತಿ ಸಾಂದ್ರ ಕೃಷಿ ಪದ್ಧತಿ. ಎಕ್ರೆಗೆ ನಾಲ್ಕು ನೂರು ಗೇರು ಗಿಡಗಳು. ಗಿಡದಿಂದ ಗಿಡಕ್ಕೆ ಮೂರಡಿ ಅಂತರ. ಎನ್.ಆರ್.ಸಿ.ಸಿ.ಸೆಲೆಕ್ಷನ್ 2, ವಿಆರ್ಐ3, ವಿ-4, ಉಳ್ಳಾಲ-3 ತಳಿಗಳು. 2010ರಲ್ಲಿ ಗಿಡಗಳ ನಾಟಿ.
ನೆಡುವಾಗಲೇ ಇಪ್ಪತ್ತು ಕಿಲೋ ಹಟ್ಟಿಗೊಬ್ಬರ, ಕಾಲು ಕಿಲೋ ರಾಕ್ಫಾಸ್ಪೇಟ್ ಗೊಬ್ಬರ ಉಣಿಕೆ. ಆರು ತಿಂಗಳಲ್ಲಿ ಮೂರಡಿ ಎತ್ತರಕ್ಕೆ ಗಿಡವು ಆರೋಗ್ಯವಾಗಿ ಬಂತಂತೆ. ಹನಿ ನೀರಾವರಿ ಪದ್ಧತಿಯಲ್ಲಿ ನೀರಾವರಿ. ಆರಂಭದ ಹೂವನ್ನು ಕೇಂದ್ರದ ಸಲಹೆಯಂತೆ ಚಿವುಟಿದರು. 'ಅಷ್ಟು ಚೆನ್ನಾಗಿ ಬಂದ ಹೂವನ್ನು ಕೀಳಲು ಮನಸ್ಸು ಬರಲಿಲ್ಲ. ಒಂದಷ್ಟು ಗಿಡದಲ್ಲಿ ಹೂವನ್ನು ಚಿವುಟದೆ ಬಿಟ್ಟಿದ್ದೆ' ಎನ್ನುತ್ತಾರೆ. ಇದರಿಂದಾಗಿ ಚಿವುಟಿದ ಮರಕ್ಕೂ, ಚಿವುಟದ ಮರಕ್ಕೂ ಇಳುವರಿಯಲ್ಲಿ ವ್ಯತ್ಯಾಸವನ್ನು ರೈಗಳು ಗಮನಿಸಿದ್ದಾರೆ.
ಸಾಂದ್ರ ಬೇಸಾಯವಾದ್ದರಿಂದ ಮಧ್ಯೆ ಅಂತರ ಬೆಳೆ ಅಸಾಧ್ಯ. ಅಂತರ ಬೆಳೆಯನ್ನು ಬಯಸುವವರು ಗಿಡಗಳ ಅಂತರವನ್ನು ಕನಿಷ್ಠ ಏಳಡಿಯಷ್ಟು ವಿಸ್ತರಿಸಬೇಕು. ಈ ಭಾಗದಲ್ಲಿ ಸಾಂದ್ರ ಬೇಸಾಯವನ್ನು ಮಾಡಿದವರು ವಿರಳ. ತೋಟ ವೀಕ್ಷಣೆ ಬಳಿಕ ಗೇರು ಮಾತುಕತೆ ಜರುಗಿತು. ಹೆಚ್ಚು ವ್ಯಾಪ್ತಿಯಲ್ಲಿ ಗೇರು ಕೃಷಿ ಇರುವ ಮಹಾರಾಷ್ಟ್ರ. ಭಾರತದಲ್ಲಿ ಪ್ರಸ್ತುತ ಹದಿಮೂರುವರೆ ಟನ್ ಬೇಡಿಕೆಯಿದ್ದು, ಆರೂವರೆ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. 2001ರಲ್ಲಿ ಗೇರು ಬೀಜ ಉತ್ಪಾದನೆಯಲ್ಲಿ ಭಾರತವು ನಂ.1 ಆಗಿತ್ತು. ಈಗದು ವಿಯೆಟ್ನಾಂಗೆ ಜಾಗ ಬಿಟ್ಟುಕೊಟ್ಟಿದೆ!
ಉಳಿದ ಬೆಳೆಗಳಂತೆ ಗೇರುಬೀಜಕ್ಕೂ ಉತ್ತಮ ಧಾರಣೆ ಸಿಗುವಂತಾಗಬೇಕು. ಬೇಕಾದಂತೆ ಧಾರಣೆ ಪಡೆಯಲು ಆಗುತ್ತಿಲ್ಲ. ಮಾರುಕಟ್ಟೆ ವ್ಯವಸ್ಥೆಯನ್ನು ನಿಯಂತ್ರಿಸುವ ರೈತರ ಸಂಘಟನೆ ಬೇಕು. ಅಡಿಕೆ, ಕಾಫಿಗೆ ಇದ್ದಂತೆ ಕೃಷಿಕರ ಲಾಬಿ ಮುಖ್ಯ. ಮಾರುಕಟ್ಟೆಯನ್ನು ಕೃಷಿಕರೇ ನಿರ್ಧರಿಸುವಂತಾಗಬೇಕು. ಸರಿಯಾದ ಧಾರಣೆ ಸಿಗದ ಕಾರಣ ಕೃಷಿಗೆ ಮುತುವರ್ಜಿ ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ 'ಗೇರು ಬೆಳೆಗಾರರ ಸಂಘ'ವೊಂದರ ಸ್ಥಾಪನೆಗೆ ಕೃಷಿಕರೇ ನಿರ್ಧರಿಸಿರುವುದು ಶ್ಲಾಘನೀಯ. ಅದರ ರೂಪುರೇಷೆ, ಸ್ವರೂಪ..ಗಳ ಕುರಿತು ಶೀಘ್ರದಲ್ಲೇ ಕಾರ್ಯಹೂರಣ ಸಿದ್ಧವಾಗಲಿದೆ.
ಗೇರು ಸಂಶೋಧನಾ ಕೇಂದ್ರವು ನಮ್ಮ ನಡುವೆ ಇರುವ ಉಳಿದ ಸಂಶೋಧನಾ ಕೇಂದ್ರಗಳಿಗಿಂತ ಭಿನ್ನ. ಇಲ್ಲಿ ರೈತರಿಗೆ ಮಣೆ. ಅವರ ಮಾತು, ಅನುಭವಗಳ ಸ್ವೀಕಾರ. ರೈತರು ಕೇಂದ್ರಕ್ಕೆ ಯಾವ ವೇಳೆಗೆ ಬರಲಿ, ವಾಚ್ ನೋಡದೆ ಸೇವೆ ನೀಡುವ ವಿಜ್ಞಾನಿಗಳು, ವರಿಷ್ಠರು ಕೇಂದ್ರದ ಆಸ್ತಿ. ಇಲ್ಲಿ ಒತ್ತಡ ಇಲ್ಲ. ಸಬ್ಸಿಡಿಯನ್ನು ಮನೆಬಾಗಿಲಿಗೆ ಚೆಕ್ ಮೂಲಕ ಕೊಡುವ ವ್ಯವಸ್ಥೆ. ಅವಿದ್ಯಾವಂತ ರೈತರೂ ಇಲ್ಲಿ ಮುಕ್ತವಾಗಿ ಮಾತನಾಡಬಹುದು. ಸಂಶೋಧನಾ ಫಲಿತಾಂಶ ನೇರವಾಗಿ ರೈತರ ಹೊಲಕ್ಕೆ. ಲ್ಯಾಬ್ ಟು ಲ್ಯಾಂಡ್.
ಗೇರು ದಿನೋತ್ಸವದಲ್ಲಿ ಮಂಚಿಯ ಶ್ರೀಮತಿ ಸತ್ಯಭಾಮ ಅವರು ತಯಾರಿಸಿದ ಗೇರು ಹಣ್ಣಿನ ಹಲ್ವ ಮತ್ತು ಪಾಯಸ - ಮೌಲ್ಯವರ್ಧನೆಯ ಅವಕಾಶಕ್ಕೆ ಕನ್ನಡಿ.