Wednesday, March 7, 2012

ತ್ರಿಚಕ್ರದಲ್ಲಿದೆ, ಬದುಕಿನ 'ಚಕ್ರ'

ಬೆಳಿಗ್ಗೆ ಏಳು ಗಂಟೆಯ ಆಜುಬಾಜು. ಬೆಂಗಳೂರಿನಿಂದ ರೈಲಲ್ಲಿ ಬಂದಿಳಿದಿದ್ದೆ. ಪುತ್ತೂರು ರೈಲ್ವೇ ಸ್ಟೇಷನ್ನಿಂದ ಪರ್ಲಡ್ಕಕ್ಕೆ ರಿಕ್ಷಾ ಸವಾರಿ. ಈ ಮಾರ್ಗದಲ್ಲಿ ದಶಕಕ್ಕಿಂತಲೂ ಹೆಚ್ಚು ಓಡಾಡಿದ್ದು ಗರಿಷ್ಠ ಅಂದರೆ ನಲವತ್ತು ರೂಪಾಯಿ ಬಾಡಿಗೆ ನೀಡಿದ್ದೆ. ಈಗ ಸ್ವಲ್ಪ ಹೆಚ್ಚಾಗಿರಬಹುದು ಎನ್ನುತ್ತಾ ಐವತ್ತು ರೂಪಾಯಿ ನೀಡಿದೆ. 'ಎಲ್ಲಿದ್ದೀರಿ ನೀವು, ಎಂಭತ್ತು ರೂಪಾಯಿ ಕೊಡಿ. ಮೊದಲೇ ಬಾಡಿಗೆ ಕೇಳಬಾರ್ದಾ, ಈಗ ಎಲ್ಲಾ ರೇಟ್ ಜಾಸ್ತಿಯಾಗಿಲ್ವಾ,..' ಚಾಲಕ ಮಹಾಶಯ ಗೊಣಗುತ್ತಲೇ ಇದ್ದ.

ಚಾಲಕ ಆಸನದಲ್ಲಿ ಕುಳಿತಾಗ ಸ್ಫುರಿಸುವ 'ಭಾಷಾ ವೈವಿಧ್ಯ'ದ ಸೊಗಸು ಅಪಾರ! ಕೆಲವು ಚಾಲಕರ 'ಕಂಠಶ್ರೀ'ಯನ್ನು ತೀರಾ ಹತ್ತಿರದಿಂದ ಆಲಿಸಿದ ಕ್ಷಣಗಳು ನೆನಪಿದ್ದುದರಿಂದ ಎಂಭತ್ತು ರೂಪಾಯಿ ನೀಡಿ ವಿದಾಯ ಹೇಳಿದೆ. ರಿಕ್ಷಾ ನಂಬ್ರವನ್ನು ನೋಟ್ ಮಾಡಿಕೊಳ್ಳಲು ಮರೆತೆ. ಹಾಗಾಗಿ ರಿಕ್ಷಾ ಯೂನಿಯನ್ಗೆ 'ಇತರ ಪ್ರಯಾಣಿಕರಿಗೆ ಮುಂದೆ ತೋಂದರೆಯಾಗದಂತೆ' ದೂರು ನೀಡುವ ಅವಕಾಶ ಕಳೆದುಹೋಯಿತು.

ಇದು ಒಂದು ಘಟನೆಯಷ್ಟೇ. ಇಂತಹ ಹತ್ತಾರು ತ್ರಿಚಕ್ರಿಯ ಕತೆಗಳು ರೋಚಕ! ಬಹುತೇಕರು ಒಂದಲ್ಲ ಒಂದು ರೀತಿಯಲ್ಲಿ ಇಂತಹ ಘಟನೆಗಳ ಫಲಾನುಭವಿಗಳು! 'ಪುತ್ತೂರಿಗೆ ರಿಕ್ಷಾ ಸಾಕು' ಎಂದು ಕರ್ನಾಟಕ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಪುರಂದರ ಭಟ್ಟರ ಹೇಳಿಕೆ ಓದಿದಾಗ ನೆನಪಿನ ಬಂದಷ್ಟನ್ನು ಊರುಸೂರಿನಲ್ಲಿ ದಾಖಲಿಸಬೇಕೆನ್ನಿಸಿತು.

ದಶಕದ ಹಿಂದೆ. ಪೆರಾಜೆಯಿಂದ ಸುಳ್ಯಕ್ಕೆ ಆರು ಕಿಲೋಮೀಟರ್ ದೂರ. ಬಸ್ ವಿರಳ. ರಿಕ್ಷಾಕ್ಕೆ ಶರಣು. ಆಗಲೇ ಏಳೆಂಟು ರಿಕ್ಷಾಗಳಿದ್ದುವು. ಅದರಲ್ಲಿ ವಾಸು/ವಾಸುದೇವ ಎಂಬವರ 'ಚಿರಂಜೀವಿ' ರಿಕ್ಷಾ ಮನೆಮಾತು. ಕಾರಣ ಚಾಲಕನಲ್ಲಿಟ್ಟಿದ್ದ ನಂಬುಗೆ, ವಿಶ್ವಾಸ. ಆತನ ರಿಕ್ಷಾ ಬರಲು ಕಾಯುವ ಮಂದಿ ಅಧಿಕ. ಹಾಗೆಂತ ಉಳಿದ ರಿಕ್ಷಾದವರ ಸೇವೆಯೂ ಚೆನ್ನಾಗಿತ್ತು.

ಬೆಳಿಗ್ಗೆ ಏಳೂವರೆಗೆ ವಾಸುವಿನ ರಿಕ್ಷಾ ಸುಳ್ಯಕ್ಕೆ ಹೊರಡುವಾಗಲೇ ಗಜಗರ್ಭ. ಜತೆಗೆ ಆತನ ಕಿಸೆಯಲ್ಲಿ ಮೆಡಿಕಲ್ ಚೀಟಿ, ಪೇಪರ್, ಪಾರ್ಮ್ಗಳು.. ಹೀಗೆ ಬೇಡಿಕೆಗಳ ಪಟ್ಟಿ. ಅವನ್ನು ಪೂರೈಸಿದ್ದಕ್ಕೆ ಭಕ್ಷೀಸು. ಯಾವುದಾದರೊಂದು ವಸ್ತು ಅಗತ್ಯ ಬೇಕೆಂದಾದರೆ 'ಚಿರಂಜೀವಿಯಲ್ಲಿ ಹೇಳಿದರೆ ಆಯಿತು' ಎನ್ನುವಷ್ಟರ ಮಟ್ಟಿಗೆ ಎಲ್ಲರ ಬದುಕಿಕೊಂದಿಗೆ ವಾಸು ಹೊಕ್ಕಿದ್ದ. ಆಕಸ್ಮಿಕವಾದಾಗ ಅಕಾಲದಲ್ಲೂ ಆತನ ಮನೆಯ ಕದ ತಟ್ಟಬಹುದಿತ್ತು. ಎಂದೂ ಗಂಟುಮುಖದವನಲ್ಲ. ನಗುನಗುತ್ತಾ ಇರುವವನೂ ಅಲ್ಲ. ಮಂದಸ್ಮಿತ. ಹೆಚ್ಚು ವಿದ್ಯಾಭ್ಯಾಸವೂ ಆಗಿರಲಿಲ್ಲ. ಪ್ರಯಾಣಿಕರಲ್ಲಿ ಎಂದೂ 'ಅಕರಾಳ-ವಿಕರಾಳ' ದರ್ಶನ ಮಾಡಿದವನಲ್ಲ! ರಿಕ್ಷಾ ಮಾತ್ರವಲ್ಲ, ಬಾಡಿಗೆಗಿರುವ ಎಲ್ಲಾ ವಾಹನಗಳ ಚಾಲಕರೂ ಅನುಸರಿಸಬಹುದಾದ 'ದೊಡ್ಡ ಗುಣ'ಗಳನ್ನು ವಾಸು ಅನುಭವದಲ್ಲಿ ರೂಢಿಸಿಕೊಂಡಿದ್ದ.

ಪುರಂದರ ಭಟ್ಟರ ಹೇಳಿಕೆ ಓದುತ್ತಿದ್ದಾಗ ಚಿರಂಜೀವಿಯ ನೆನಪಿನೊಂದಿಗೆ ಪುತ್ತೂರಿನ ಕೆಲವು ರಿಕ್ಷಾಗಳು ಮಿಂಚಿ ಮರೆಯಾಯಿತು! ಚಾಲಕನಿಗೆ ಬೇಕೋ ಬೇಡ್ವೋ ಬೊಬ್ಬಿಡುವ ನಾಲ್ಕಾರು ಸ್ಪೀಕರ್ಗಳು. ವಾಲ್ಯೂಂ ಕಡಿಮೆ ಮಾಡಿ ಎಂದು ಬೇಡಿಕೆ ಮುಂದಿಟ್ಟಾಗ, 'ಬೇಕಾದರೆ ಬನ್ನಿ, ಇಲ್ಲದಿದ್ದರೆ ಇಳಿಯಿರಿ, ನಮಗೋಸ್ಕರ ಬರಬೇಡಿ' ಎನ್ನುವ ಖಡಕ್ ಉತ್ತರ. ಈ ಮಾತನ್ನು ಆಲಿಸಿದಾಗ ನನಗನ್ನಿಸಿದ್ದು ಇಷ್ಟು - ನಿಜಕ್ಕೂ ಇಂತಹವರು ಹೊಟ್ಟೆಪಾಡಿಗಾಗಿ ರಿಕ್ಷಾ ಓಡಿಸುವುದಿಲ್ಲ. ಸಂಜೆಯಾಗುವಾಗ 'ಬಾಡಿಗೆ ಹಣ ಎಷ್ಟು ಬಂತು, ಅದರಲ್ಲಿ ಎಷ್ಟು ಉಳಿಯಿತು' ಎಂಬ ಲೆಕ್ಕಾಚಾರ ಹಾಕುವ; ಅದರಿಂದ ಮನೆಗೆ ಅಕ್ಕಿಯೋ, ಬೇಳೆಯೋ ಒಯ್ಯಬೇಕೆನ್ನುವ 'ಬದುಕಿನ ಜವಾಬ್ದಾರಿ' ಇರುವವರಲ್ಲಿ ಇಂತಹ ಮಾತು ಖಂಡಿತಾ ಬಾರದು.

'ಬಿಸಿರಕ್ತ'ದ ಗುಣ ಇಂತಹ ವರ್ತನೆಯನ್ನು ಸೃಷ್ಟಿಸುತ್ತದೆ. ಇವರಿಗೆ ಮನೆಗೆ ಹೋದಾಗ ಬಿಸಿಬಿಸಿ ಅನ್ನ ತಯಾರಾಗಿರುತ್ತದೆ. ತಟ್ಟೆ ಹಿಡಿದರೆ ಆಯಿತಷ್ಟೇ. ಅಪ್ಪ-ಅಮ್ಮ ದುಡಿದು ಹೇಗೂ ತರುತ್ತಾರೆ. ಮನೆಗೆ ಸಂಪಾದನೆಯನ್ನು ಒಯ್ಯುವ ಹಂಗಿರುವುದಿಲ್ಲ. ರಿಕ್ಷಾ ನೆಪ ಮಾತ್ರ. ಇವರಿಗೆ 'ಸಮಯ ಕೊಲ್ಲುವುದು' (ಟೈಂಪಾಸ್) ಮುಖ್ಯ. ಈ ರೀತಿಯ ವ್ಯಕ್ತಿಗಳಿಗೆ ಕಷ್ಟ, ಸುಖ, ಒಳ್ಳೆಯ ಮಾತುಗಳು.. ಯಾವುವೂ ಪಥ್ಯವಾಗುವುದಿಲ್ಲ.
ಈಚೆಗೆ ಒಂದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದೆ. ಐದಾರು ಮಂದಿ ತುಂಬಿದ್ದರು. ಈತನ ರಿಕ್ಷಾಕ್ಕೆ ಯಾರಾದರೂ ಅಡ್ಡ ಬಂದರೆ, ಬೇರೆ ವಾಹನ ಹಿಂದಿಕ್ಕಿ ಹೋದರೆ, ಎದುರಿದ್ದ ವಾಹನ ಬ್ರೇಕ್ ಹಾಕಿದರೆ.. ಸಾಕು, ಕೆಂಡಾಮಂಡಲವಾಗುತ್ತಿದ್ದ. ಜನ್ಮ ಜಾಲಾಡುತ್ತಿದ್ದ. ಪ್ರಯಾಣಿಕರು ತಲೆತಗ್ಗಿಸುವಷ್ಟೂ ಸಹಸ್ರನಾಮಗಳ ಅರ್ಚನೆ! ಇಳಿಯುವಾಗ ಯಾರಾದರೂ ಹತ್ತೋ, ಇಪ್ಪತ್ತು ರೂಪಾಯಿಗಳ ನೋಟು ಕೊಟ್ಟರೆ ಸಾಕು, ಚಿಲ್ಲರೆಗಾಗಿ ಗಲಾಟೆ, ಅಸಹನೆ. ನಂತರ ಆತನ ಚಿಲ್ಲರೆ ಗಂಟು ಹೊರಬರುತ್ತೆನ್ನಿ. ಇದು ಒಂದು ದಿವಸದ ಪ್ರಹಸನವಲ್ಲ, ನಿತ್ಯ ಪ್ರದರ್ಶನ. 'ರಿಕ್ಷಾದಲ್ಲಿ ಬರುವವರೆಲ್ಲಾ ನನ್ನಷ್ಟು ಸುಭಗ(?)ರಲ್ಲ' ಎಂಬ ಕನಿಷ್ಠ ಜ್ಞಾನವಾದರೂ ಬೇಡ್ವಾ?

ಚಿಲ್ಲರೆ ಕಿಸೆಯಲ್ಲಿಟ್ಟುಕೊಂಡು ನೋಟು ನೀಡುವ ಚಾಳಿ ಹೆಚ್ಚಿನ ಪ್ರಯಾಣಿಕರಿಗಿದೆ. ಇದನ್ನು ನವಿರಾಗಿ ಹೇಳಬಹುದಲ್ವಾ. ಕೆಲವು ಸಲ ಚಿಲ್ಲರೆ ಕೈಕೊಟ್ಟಾಗ ಚಾಲಕರೂ ಕೈಕೊಡುತ್ತಾರೆ! ಚಿಲ್ಲರೆ ಒಯ್ಯಲು ಮರೆತು ಹೋಗಿ ಅಥವಾ ಚಿಲ್ಲರೆ ಇಲ್ಲದ ಕಾರಣ; ಐದು ರೂಪಾಯಿ ಕೊಡಬೇಕಾದಲ್ಲಿ ಹತ್ತು, ಇಪ್ಪತ್ರ ನೋಟನ್ನು ತೆತ್ತು ತೆಪ್ಪಗಿರುವ ದಿವಸಗಳು ತಿಂಗಳಲ್ಲಿ ಏಳೆಂಟು ಸಲವಾದರೂ ಬಂದೇ ಬರುತ್ತದೆ. ಇನ್ನೊಮ್ಮೆ ಆ ರಿಕ್ಷಾದಲ್ಲಿ ಪ್ರಯಾಣ ಮಾಡುವ ಸಂದರ್ಭ ಬಂದಾಗ ಹಿಂದಿನ ಘಟನೆ ಅವರಿಗೆ ನೆನಪಿರುವುದಿಲ್ಲ. ನೆನಪಿರಬೇಕಾದ್ದೂ ಇಲ್ಲ ಬಿಡಿ!

ರಿಕ್ಷಾ ಚಾಲೂ ಇದ್ದಾಗ ಮೊಬೈಲಲ್ಲಿ ಮಾತನಾಡುವ, ಸಿಗರೇಟು ಸೇದುತ್ತಿರುವ, ಸೀಟಲ್ಲಿ ಪ್ರಯಾಣಿಕರಿದ್ದರೂ ಎದುರು ಸೀಟಲ್ಲಿ ಸ್ನೇಹಿತನನ್ನು ಕುಳ್ಳಿರಿಸಿ ಗೇಲಿ-ತಮಾಶೆ ಎನ್ನುತ್ತಾ 'ಗಮ್ಮತ್ತು' ಮಾಡುವ, ನಿತ್ಯ ಮುಖ ಗಂಟಿಕ್ಕಿಕ್ಕೊಂಡಿರುವ, ಸಹಜ ಬಾಡಿಗೆಗಿಂತಲೂ ದುಪ್ಪಟ್ಟು ಪಡೆಯುವ (ಅಲ್ಲ, ವಸೂಲಿ ಮಾಡುವ)... ಹೀಗೆ ವಿಭಿನ್ನ 'ತಾಜಾ ಮುಖ'ಗಳ ಪರಿಚಯಕ್ಕೆ ಸಾಹಸ ಪಡಬೇಕಾಗಿಲ್ಲ.

ಇಂದು ರಿಕ್ಷಾ ಸಂಪಾದನೆಯನ್ನೇ ನಂಬಿ ಬದುಕು ನಡೆಸುವ ಎಷ್ಟು ಮಂದಿ ಚಾಲಕರಿಲ್ಲ? ಆಳುವನ್ನು ನುಂಗಿ ಉತ್ತಮ ಸೇವೆ ಕೊಡುವ, ಅಳುವಿನ ಕಾರಣವನ್ನು ಪ್ರಯಾಣಿಕರ ಮೇಲೆ ಎರಚದೆ 'ಚಾಲಕ' ಸ್ಥಾನಕ್ಕೆ ಗೌರವ ತಂದಿಟ್ಟ ಚಾಲಕರ ಸೇವೆ ಎಲ್ಲೂ ದಾಖಲಾಗುವುದಿಲ್ಲ. ಪ್ರಯಾಣಿಕರಲ್ಲೂ 'ಒರಟು' (ಪೆದಂಬು) ತೋರಿಸುವವರಿಲ್ವಾ. ಅಂತಹವರಲ್ಲಿ 'ಅಕರಾಳ-ವಿಕಾರಳ' ತೋರಬಹುದೇನೋ? ಎಲ್ಲರನ್ನೂ ಒಂದೇ ತಟ್ಟೆಯಲ್ಲಿ ತೂಗುವಂತಿಲ್ಲ ಅಲ್ವಾ.
ದಶಕ, ಎರಡು ದಶಕಕ್ಕೂ ಮಿಕ್ಕಿ ಸ್ವಂತ ರಿಕ್ಷಾವನ್ನು ಹೊಂದಿ ಅದನ್ನು ದೇವರೆಂದು ಪೂಜಿಸುವ ಹಲವಾರು ಮಂದಿ ಚಾಲಕರ ಪರಿಚಯವಿದೆ. ಇವರಿಗೆ ಟ್ರಾಫಿಕ್ ರೂಲ್ಸ್ ಗೊತ್ತಿದೆ. ಚಾಲನೆಯಲ್ಲಿದ್ದಾಗ ಮೊಬೈಲ್ನಲ್ಲಿ ಮಾತನಾಡಬಾರದು ಎಂಬ ಜ್ಞಾನವೂ ಇದೆ. ಹಸಿವಿನ ಪರಿಚಯವಿದೆ. ಮಡದಿ, ಮಕ್ಕಳನ್ನು ಸಾಕುವ ಪರಿಜ್ಞಾನವಿದೆ. ಡ್ರೈವರ್ ಸೀಟಲ್ಲಿ ಕುಳಿತು ಸ್ವಂತದ್ದಾದ ನೋವನ್ನು ನುಂಗಿ ನಗುಮುಖದ ಸೇವೆ ಕೊಡುವ ಸಾಕಷ್ಟು ಮಂದಿ ಚಾಲಕರಿರುವುದರಿಂದಲೇ ಆ ಕ್ಷೇತ್ರಕ್ಕೆ ಮಾನ, ಸಂಮಾನ ಪ್ರಾಪ್ತವಾಗಿದೆ.

ಪುಟಾಣಿಗಳನ್ನು ಶಾಲೆಗೆ ಕರೆದುಕೊಂಡು ಹೋಗುವ, ಪುನಃ ಮನೆಗೆ ತಲಪಿಸುವ ಬಹುತೇಕ ಚಾಲಕರ 'ತಾಜಾ' ಸೇವೆಯನ್ನು ಜ್ಞಾಪಿಸಿಕೊಳ್ಳಿ. ಮಕ್ಕಳೊಂದಿಗೆ ಮಕ್ಕಳಾಗುವ, ಸಮಯದ ಶಿಸ್ತನ್ನು ರೂಢಿಸಿಕೊಳ್ಳುವ, ಪುಟಾಣಿಗಳಿಗೆ ಸಿಹಿ ಹಂಚುವ, ಮನೆಯವರೊಂದಿಗೆ ಉತ್ತಮ ಸಂಪರ್ಕವನ್ನು ಬೆಳೆಸುವ ಪ್ರಾಮಾಣಿಕ ಚಾಲಕರನ್ನು ಕಂಡಾಗ ಮನಸಾ ತಲೆ ಬಾಗುತ್ತದೆ. ಗೌರವ ಹೆಚ್ಚಾಗುತ್ತದೆ. ಇಂತಹ ರಿಕ್ಷಾವನ್ನು ಕಾಯುವ, ಅವರ ಮೊಬೈಲ್ ನಂಬ್ರವನ್ನು 'ಸೇವ್' ಮಾಡಿಡುವ ಮನಃಸ್ಥಿತಿ ಪ್ರಯಾಣಿಕನಿಗೂ ಉಂಟಾಗುತ್ತದೆ.

0 comments:

Post a Comment