Wednesday, March 7, 2012

ಸಮಾರಂಭಗಳಿಗೆ ಬೇಕು, ಮರು ರೂಪುರೇಷೆ

ರವಿವಾರ (ಫೆ.26, ೨೦೧೨) ಸಂಜೆ ಪೆರ್ಲಂಪಾಡಿ ಸಿದ್ಧಮೂಲೆ ಮನೆಯಲ್ಲಿ ಚಿಕ್ಕ ಕಾರ್ಯಕ್ರಮ. ಮನೆ ಮಂದಿ, ನೆಂಟರಿಷ್ಟರು ಪ್ರೇಕ್ಷಕರು. ಪ್ಲೆಕ್ಸಿಗಳ ಭರಾಟೆಯಿಲ್ಲದ ಚೊಕ್ಕ ವೇದಿಕೆ. ವೇದಿಕೆಯಲ್ಲಿ ಸಂಘಟಕರು ಸೇರಿದಂತೆ ಇಬ್ಬರು ಅತಿಥಿಗಳು. ಮತ್ತೊಬ್ಬರು ಸಂಮಾನಿತರು. ಒಂದು ಗಂಟೆಯೊಳಗೆ ಕಲಾಪ ಮುಕ್ತಾಯ.

ವಿದ್ವಾಂಸ, ಅನುವಾದಕ, ಬಹುಭಾಷಾ ಪಂಡಿತ ಸಿದ್ಧಮೂಲೆ ಶಂಕರನಾರಾಯಣ ಭಟ್ಟರನ್ನು ಅವರ ಮನೆಯಲ್ಲೇ ಸಂಮಾನಿಸಿದ ಪರಿಯಿದು. ಮಂಗಳೂರಿನ ಮುದ್ದಣ ಪ್ರಕಾಶನವು ನಂದಳಿಕೆ ಬಾಲಚಂದ್ರ ರಾಯರ ನೇತೃತ್ವದಲ್ಲಿ 'ಮುದ್ದಣ ಪುರಸ್ಕಾರ'ರವನ್ನು ನೀಡಿದ ಸಮಾರಂಭ. ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ಟರು ಸಮಾರಂಭದ ಅಧ್ಯಕ್ಷರು. ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತಾಧಿಕಾರಿ ಎ.ವಿ.ನಾರಾಯಣ ಅವರಿಂದ ಅಭಿನಂದನಾ ಮಾತು.

ಭಾವನಾತ್ಮಕವಾದ ಸಂಮಾನ. ಪುರಸ್ಕಾರ ನೀಡುವವರಿಗೂ, ಸ್ವೀಕರಿಸುವವರಿಗೂ ಖುಷಿ ನೀಡಿದ ಕ್ಷಣ. ಮನೆಯ ಹಿರಿಯರನ್ನು ಗೌರವಿಸಿದ್ದಕ್ಕೆ ಮನೆಮಂದಿ ಎಲ್ಲರೂ ಸಾಕ್ಷಿಭೂತರಾದರು. ಆದರದ ಉಪಚಾರ. ಹಿರಿಯರ ಸಾಧನೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಅವಕಾಶ. ಸಂಮಾನಿತರ ಮನೆಗೆ ತೆರಳಿ ಸಂಮಾನಿಸುವ ಮುದ್ದಣ ಪ್ರಕಾಶನದ ಪರಿಪಾಠ ಶ್ಲಾಘನೀಯ.
ಇಂದು ಸಂಮಾನ, ಅಭಿನಂದನೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಲೆಕ್ಕ ಹಾಕಿದರೆ ಕನಿಷ್ಠ ದಿವಸಕ್ಕೆ ಒಂದರಂತೆ ನಡೆಯುತ್ತಿರುತ್ತದೆ. ಸುಮಾರು ಶೇ.50ರಷ್ಟು ಮಾತ್ರ ಉತ್ತಮ ಸದುದ್ದೇಶದಿಂದ, ಭಾವನಾತ್ಮಕವಾಗಿ, ಗೌರವಯುತವಾಗಿ ನಡೆಯುವಂತಾದ್ದು. ಮಿಕ್ಕುಳಿದ ಕೆಲವಿದೆಯಲ್ಲಾ, ಸಮಾರಂಭವನ್ನು ವೀಕ್ಷಿಸಿದ ಮೇಲೆ 'ಯಾಕೆ ಬಂದೆವಪ್ಪಾ' ಅನ್ನಿಸುವಷ್ಟು ಮಾನಸಿಕ ಕಿರಿಕಿರಿ.

ಕುಡ್ಲದಲ್ಲೊಮ್ಮೆ ಪ್ರಶಸ್ತಿ ಪ್ರದಾನ ಕಲಾಪದಲ್ಲಿ ಭಾಗವಹಿಸಿದ್ದೆ. ವೇದಿಕೆಯಲ್ಲಿ ಹದಿನಾಲ್ಕು ಮಂದಿ. ನಿರ್ವಾಹಕನ ಆಸನ ಸೇರಿದರೆ ಹದಿನೈದು. ಮೂರುಮುಕ್ಕಾಲು ಗಂಟೆ ಲಂಬಿಸಿದ ಕಾರ್ಯಕ್ರಮದಲ್ಲಿ ಶೇ.40ರಷ್ಟು ನಿರ್ವಾಹಕನದ್ದೇ ಕಾರುಬಾರು. ಅಭಿನಂದನಾ ಭಾಷಣವೇ ಒಂದೂಕಾಲು ಗಂಟೆ! ಈ ಭಾಷಣವನ್ನು ಹಿಂಡಿ ತೆಗೆದರೆ ಐದು ನಿಮಿಷ ಮಾತನಾಡುವಷ್ಟು ವಿಷಯ ಸಿಕ್ಕಿತಷ್ಟೇ!

ಭಾಷಣದ ಎಳೆಯನ್ನು ಜಗ್ಗಿ ಇತರರು 'ಅವರೇ.. ಇವರೇ.. ಎನ್ನುತ್ತಾ' ಕೊರೆತ. ಹಕ್ಕಿನದ್ದಾದ 'ಪ್ರಶಸ್ತಿ ಪುರಸ್ಕೃತರ ಎರಡು ಮಾತು'ಗಳು ಒಂದು ನಿಮಿಷಕ್ಕೆ ಸೀಮಿತವಾಗಬೇಕಾದಲ್ಲಿ ಬರೋಬ್ಬರಿ ಅರ್ಧ ಗಂಟೆ ತೆಕ್ಕೊಳ್ಳಬೇಕೇ? 'ತಾನು ಈ ಪ್ರಶಸ್ತಿಗೆ ಅರ್ಹನೋ, ಅಲ್ಲವೋ' ಎಂಬ ಸಂಶಯದೊಂದಿಗೆ ಆರಂಭವಾದ ಮಾತುಗಳು ಸಂಘಟಕರಿಗೆ ಕನ್ನಡಿ ಹಿಡಿದಿತ್ತು! ಪ್ರಸ್ತಾವನೆ, ಸ್ವಾಗತ, ಧನ್ಯವಾದಗಳೂ ಉಪನ್ಯಾಸಗಳೇ ಆದುವು.

ಬಳಿಕ ಪುಟಾಣಿಗಳಿಂದ ಯಕ್ಷಗಾನ ಕಾರ್ಯಕ್ರಮವಿತ್ತು. ಎರಡೂವರೆ ಗಂಟೆಯಿಂದ ಕಿರೀಟಧರಿಸಿದ ಬಾಲ ಕಲಾವಿದರು ಸುಸ್ತಾಗಿದ್ದರು. ಕೆಲವರು ನಿದ್ರಿಸಿದ್ದರು. 'ಆಟ ಬೇಗ ಮುಗಿಸಿ' ಯಕ್ಷಗಾನ ತಂಡಕ್ಕೆ ಆದೇಶ! ಪ್ರೌಢರ ಯಕ್ಷಗಾನವಾದರೆ ಓಕೆ. 'ಹೇಳಿ ಕೊಟ್ಟಷ್ಟನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸುವ' ಮಕ್ಕಳಿಂದ 'ಬೇಗ ಮುಗಿಸಲು' ಸಾಧ್ಯವೇ? ಮೂರು ಗಂಟೆಗಳ ಕಾಲದ ಯಕ್ಷಗಾನ ಬಯಲಾಟ ಒಂದೂ ಮುಕ್ಕಾಲು ಗಂಟೆಯೊಳಗೆ ಮುಗಿಯುವಾಗ ರಾತ್ರಿ ಹನ್ನೊಂದು ಗಂಟೆ.

ಇಂತಹ ಸಮಾರಂಭಗಳ ಆಮಂತ್ರಣ ಪತ್ರಿಕೆಗಳೇ ಬಣ್ಣದ ವೇಷಗಳಾಗುತ್ತವೆ. ಎರಡು ಪುಟ ಪೂರ್ತಿ ಸಮಿತಿಯ ಸದಸ್ಯರ ನಾಮಾವಳಿಗಳು. ಎಷ್ಟು ಮಂದಿ ಆಗಮಿಸಿದ್ದಾರೋ ಗೊತ್ತಿಲ್ಲ. ಸಂಘಟಕರಿಗೂ ಇವರೆಲ್ಲರೂ ಬರಬೇಕೆಂದೇನೂ ಇಲ್ಲ! ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರಿದೆ ಎಂದು ಬಹುತೇಕರಿಗೂ ಗೊತ್ತಿಲ್ಲ! ಇಂತಹ 'ಭರ್ಜರಿ' ಸಮಾರಂಭಗಳಲ್ಲಿ ಆಗುವ ಸಂಮಾನ, ಪ್ರಶಸ್ತಿ ಪ್ರದಾನಗಳು ಪ್ರೇಕ್ಷಕರಿಗೆ ಖುಷಿಯಾಗಲಂತೂ ಅಲ್ಲ.

ಐದಾರು ಮಂದಿಯ 'ಪ್ರೀತ್ಯರ್ಥ'ಕ್ಕೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ನಗರದಲ್ಲಿ ಬೆನ್ನು ತಟ್ಟುವ ದಾನಿಗಳು ಇರುತ್ತಾರೆ. ಕಾರ್ಯಕ್ರಮದ ಗುಣಮಟ್ಟಕ್ಕಿಂತಲೂ, ದೇಣಿಗೆಗಾಗಿ ಬಂದಿರುವ ವ್ಯಕ್ತಿಗಳ ಮುಖ ನೋಡಿ 'ದಾನ' ನೀಡಿರುತ್ತಾರಷ್ಟೇ. ದಾನ ನೀಡದಿದ್ದರೆ? 'ಅಕರಾಳ-ವಿಕಾರಳ' ದರ್ಶನ! ಆಟೋಟ ಸ್ಪರ್ಧೆಯಲ್ಲಿ ಬಹುಮಾನಿತರ ಹೆಸರು ಘೋಷಿಸುವಂತೆ, ದಾನಿಗಳ ಹೆಸರನ್ನೂ ಸಮಾರಂಭದಲ್ಲಿ ಬಿತ್ತರಿಸಲಾಗುತ್ತದೆ. ದಾನ ನೀಡಿದವರು ಉಪಸ್ಥಿತರಿದ್ದರಂತೂ ಹೊಗಳಿಕೆಯ ಮಹಾಪೂರ. ಮುಜುಗರವಾಗುವಷ್ಟು. ವಾಕರಿಕೆ ಬರುವಷ್ಟು. ಅದೂ ಸಮಯದ ಪರಿವೆ ಇಲ್ಲದೆ.

ಹತ್ತೋ ಹದಿನೈದೋ ಮಂದಿ ವೇದಿಕೆಯಲ್ಲಿ ಕೂರಿಸಿದ ಬಳಿಕ ಸಂಘಟಕರಿಗೂ ಕನಿಷ್ಠ ಶಿಸ್ತಾದರೂ ಬೇಡ್ವೇ? ನಿರ್ವಾಹಕನಿಂದ ತೊಡಗಿ, ಸಂಘಟಕರ (ಕೆಲವೇ ಮಂದಿ) ತನಕ ವೇದಿಕೆಯಲ್ಲಿ 'ಅತ್ತಿಂದಿತ್ತ, ಇತ್ತಿಂದತ್ತ' ಸಂಚರಿಸುವ ಚಾಳಿ. ಛಾಯಾಚಿತ್ರಗ್ರಾಹಕರೇ ಕಲಾಪವನ್ನು ನಿಯಂತ್ರಿಸಿದ ದೃಷ್ಟಾಂತ ಎಷ್ಟು ಬೇಕು? ಈ ಕುರಿತು ಸ್ನೇಹಿತ ಛಾಯಾಚಿತ್ರಗ್ರಾಹಕರೊಬ್ಬರಲ್ಲಿ ಮಾತನಾಡಿಸಿದಾಗ, 'ಮತ್ತೆ ಫೋಟೋ ಹಾಳಾದರೆ ಅವರು ಹಣ ಕೊಡ್ತಾರಾ. ಹಾಗಾಗಿ ನಮಗೆ ಬೇಕಾದಂತೆ ನಿಲ್ಲಿಸಿ ಫೋಟೋ ತೆಗೆಯುತ್ತೇವೆ,' ಎನ್ನುತ್ತಾರೆ. ಅದೂ ಸರಿ ಬಿಡಿ.

ಇವರ ಮಾತು ಕೇಳಿದಾಗ ಖ್ಯಾತ ಛಾಯಾಚಿತ್ರಗ್ರಾಹಕ ಮಂಗಳೂರಿನ ಯಜ್ಞರು ಹೇಳಿದ ಮಾತು ನೆನಪಾಗುತ್ತದೆ, 'ಕಾರ್ಯಕ್ರಮ ನಡೆಯುವುದು ನನಗಾಗಿ ಅಲ್ಲ. ಅಲ್ಲಿ ಏನು ನಡೆಯುತ್ತದೋ ಅದನ್ನು ಸದ್ದಿಲ್ಲದೆ ತೆಗೆಯುವುದು ಫೋಟೋಗ್ರಾಫರ್ನ ಕೆಲಸ'.
ಇಷ್ಟೆಲ್ಲಾ ಅಬ್ಬರವಿದ್ದೂ, ಮರುದಿವಸ ಪತ್ರಿಕೆಗಳಲ್ಲಿ ಸುದ್ದಿ ಬರಲೇ ಬೇಕು. ಯಾರೋ ಒಬ್ಬರ ಹೆಸರು ಬಿಟ್ಟು ಹೋದರಂತೂ ಸಂಘಟನೆಯಲ್ಲೇ ವಿಚ್ಛೇದನದ ರಾದ್ದಾಂತ. ಪತ್ರಕರ್ತರಿಗಂತೂ ನಿತ್ಯ ಕಿರಿಕಿರಿ. 'ಒತ್ತಾಯಕ್ಕೆ ಕಟ್ಟುಬಿದ್ದು' ಕಾರ್ಯಕ್ರಮದಲ್ಲಿ ಭಾಗವಹಿಸಿ ಮೂರೂವರೆ ಗಂಟೆ ಕೊಲ್ಲುವ ಕ್ಷಣಗಳು ಇವೆಯಲ್ಲಾ.. ರೋಷದ ಕ್ಷಣಗಳು. ಅಲ್ಲ, ಜಿಗುಪ್ಸೆಯ ಘಳಿಗೆಗಳು.. ಸಮಾರಂಭಗಳಿಗೆ ಬೇಕು, ಮರು ರೂಪುರೇಷೆ.

ಸಂಮಾನಿತರ ಯಾ ಪ್ರಶಸ್ತಿ ಪುರಸ್ಕೃತರ ಸಾಧನೆಗಳಿಗೆ, ಬದುಕಿಗೆ ಕನ್ನಡಿ ಹಿಡಿಯುವಂತಹ ವ್ಯವಸ್ಥೆಗಳು ಸಮಾರಂಭದಲ್ಲಿ ಬರಬೇಕು. ವೇದಿಕೆಯಲ್ಲಿ ಗರಿಷ್ಠ ಅಂದರೆ ಐದು ಮಂದಿ. ಅಧ್ಯಕ್ಷರೇ ನಿರ್ವಾಹಕ. ನಿರೂಪಕ ಬೇಕೆಂದಾದರೆ ಆತನಿಗೆ ಪ್ರತ್ಯೇಕವಾದ 'ಕಟ್ಟುಪಾಡು'ಗಳನ್ನು ರೂಪಿಸಲೇ ಬೇಕು. ಒಂದು- ಒಂದೂವರೆ ಗಂಟೆಯೊಳಗೆ ಇಡೀ ಕಲಾಪವನ್ನು ಮುಗಿಸುವತ್ತ ಯೋಚನೆ ಮಾಡಬೇಕಾದ ದಿನಗಳಿವು. ಇದರಿಂದಾಗಿ ಯಾವ ಉದ್ದೇಶಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೋ ಅದು ಈಡೇರುತ್ತದೆ. ನ್ಯಾಯ ಸಲ್ಲುತ್ತದೆ.

ಈ ಹಿನ್ನೆಲೆಯಲ್ಲಿ ನಂದಳಿಕೆ ಬಾಲಚಂದ್ರ ರಾಯರು ಹಮ್ಮಿಕೊಳ್ಳುವ 'ಮುದ್ದಣ ಪ್ರಕಾಶನ'ದ ಕಲಾಪಗಳು ಅನುಸರಣ ಯೋಗ್ಯ. ಕಾಲದ ಅನಿವಾರ್ಯತೆ. ಮಾನನೀಯರಾದ ಮಲ್ಪೆ ಶಂಕರನಾರಾಯಣ ಸಾಮಗ, ಡಾ.ಹಾ.ಮ.ನಾಯಕ್, ಪ್ರೊ:ಕು.ಶಿ.ಹರಿದಾಸ್ ಭಟ್, ಡಾ.ಶೇಣಿ, ಮಲ್ಪೆ ರಾಮದಾಸ ಸಾಮಗ (ಇವರೆಲ್ಲಾ ಈಗ ಕೀರ್ತಿಶೇಷರು); ಡಾ. ಅಮೃತ ಸೋಮೇಶ್ವರ, ಪ್ರೊ: ವೆಂಕಟಸುಬ್ಬಯ್ಯ, ಬಲಿಪ ನಾರಾಯಣ ಭಾಗವತ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಡಾ.ಪಾಟೀಲ ಪುಟ್ಟಪ್ಪ, ಪ್ರೊ.ಟಿ.ಕೇಶವ ಭಟ್ - ಈ ಹಿಂದಿನ ವರುಷಗಳಲ್ಲಿ ಮುದ್ದಣ ಪುರಸ್ಕಾರ ಪಡೆದವರು. ಈ ವರುಷ ಸಿದ್ಧಮೂಲೆ ಶಂಕರನಾರಾಯಣ ಭಟ್ಟರಿಗೆ ಮುದ್ದಣ ಪುರಸ್ಕಾರ.

0 comments:

Post a Comment