Wednesday, March 7, 2012

ಹಾಳೆಯಿಂದ 'ಒಳಾಂಗಣ ಚಪ್ಪಲಿ'

ಅಡಿಕೆಯಿಂದ ಏನು ಪ್ರಯೋಜನ? ಜಗಿದರೆ ಸ್ಫೂರ್ತಿ, ಮಾರಾಟ ಮಾಡಿದರೆ ಕಾಸು, ಸೋಗೆಯಿಂದ ಸೂರು, ಕಾಂಡದಿಂದ ಸೂರಿಗೆ ಬಳಸಬಹುದಾದ ಎಲ್ಲವೂ; ಹಾಳೆಯಿಂದ ಊಟದ ಬಟ್ಟಲು, ತಟ್ಟೆ, ಟೋಪಿ.. ಹೀಗೆ


ಅಡಿಕೆ ಹಾಳೆಯಿಂದ ತಯಾರಿಸಬಹುದಾದ ಉತ್ಪನ್ನಗಳ ಪಟ್ಟಿಗೆ ಈಗ 'ಪಾದುಕೆ'ಯ ಸೇರ್ಪಡೆ. ಕೇರಳ ರಾಜ್ಯದ ತ್ರಿಶೂರಿನ ಕೆ.ಎ.ಜೋಸೆಫ್ ಅವರ ಮಲ್ಟಿಕೇರ್ ಸಂಸ್ಥೆಯು ಅಡಿಕೆ ಹಾಳೆಯೇ ಮುಖ್ಯಕಚ್ಚಾವಸ್ತುವಾಗುಳ್ಳ ಚಪ್ಪಲಿಯನ್ನು ತಯಾರಿಸುತ್ತಿದೆ. ಏನಿಲ್ಲವೆಂದರೂ ತಿಂಗಳಿಗೆ ನಾಲ್ಕು ಸಾವಿರಕ್ಕೂ ಮಿಕ್ಕಿ ಮಾರಾಟ. ನೂರ ಇಪ್ಪತ್ತೈದು ರೂಪಾಯಿಯಿಂದ ನಾಲ್ಕು ನೂರು ರೂಪಾಯಿ ತನಕ ದರ.


ಚಪ್ಪಲಿ ಅಂದಾಗ ಅಬ್ಬಬ್ಬಾ ಅಂದರೂ ನಾಲ್ಕರಿಂದ ಆರು ತಿಂಗಳ ಬಾಳಿಕೆ. ಕೆಲವದರ ಆಯಷ್ಯ ಒಂದೇ ತಿಂಗಳು! ಹಾಳೆಯ ಪಾದುಕೆಯ ಕತೆ ತೀರಾ ಭಿನ್ನ. ಅದು ಒಳಾಂಗಣದಲ್ಲಿ ಧರಿಸುವಂತಾದ್ದು. ಎಲ್ಲೆಲ್ಲೂ ಧರಿಸುವಂತಿಲ್ಲ. ನೀರಲ್ಲಿ ಮುಳುಗಿಸುವಂತಿಲ್ಲ. ಹೀಗೆ ಎಚ್ಚರದಿಂದ ಒಳಾಂಗಣದಲ್ಲಿ ಮಾತ್ರ ಬಳಸಿದರೆ ವರ್ಷ ಬರಬಹುದು. ಆರೆಂಟು ತಿಂಗಳಂತೂ ಖಚಿತ. ಹಿಂಗಾಲು ಒಡೆಯುವವರು, ಕಾಲಿನಲ್ಲಿ ಆಣಿ, ಅಲರ್ಜಿ.. ಇರುವವರು ಮನೆಯೊಳಗೆ ಬಳಸುತ್ತಾರೆ.

ಜೋಸೆಫ್ ಅವರಿಗೆ ಈ ಐಡಿಯಾ ಬಂದದ್ದಾದರೂ ಹೇಗೆ? ರಾಜಸ್ಥಾನದಿಂದ ಹುಲ್ಲಿನಿಂದ ಮಾಡಿದ ಚಪ್ಪಲಿಗಳು ಬರುತ್ತವಷ್ಟೇ. ಇದನ್ನು ನೋಡಿ ಹಾಳೆಯ ಚಪ್ಪಲಿ ತಯಾರಿಸಿದರಂತೆ. ಪಾದಸ್ಪರ್ಶಿಸುವ ಭಾಗದಲ್ಲಿ ಮಾತ್ರ ಹಾಳೆಯ ಪದರ. ಮಿಕ್ಕಂತೆ ರಬ್ಬರ್.
ಹಾಳೆಯನ್ನು ಉರುಟಾಗಿ ಕತ್ತರಿಸುವುದು ತ್ರಾಸ. ಹಾಳೆಯ ದಪ್ಪದಲ್ಲೂ ಏರಿಳಿತವಿರುವುದರಿಂದ ಆರಂಭದಲ್ಲಿ ತೊಡಕು. ರಬ್ಬರಿನ ದಪ್ಪನೆಯ ಅಡಿಭಾಗದಲ್ಲಿ ಮೇಲ್ಬದಿಯಲ್ಲಿ ಹಾಳೆ ಅಂಟಿಸಿ ಅಡಿಭಾಗ ಸಿದ್ಧಪಡಿಸಿದರು ಜೋಸೆಫ್. ಹಾಳೆಯ ಹೊರಮೈಯ ಬಣ್ಣವು ಹಾಳೆಯಿಂದ ಹಾಳೆಗೆ ವ್ಯತ್ಯಾಸವಿರುತ್ತದೆ. ಕೃತಕವಾಗಿ ಯಾವುದೇ ಬಣ್ಣವನ್ನು ಕೊಡುವುದಿಲ್ಲ. ಎರಡು ಚಪ್ಪಲಿಯ ಬಣ್ಣ ಒಂದೇ ತೆರವಾಗಿಸುವಲ್ಲಿ ಬಹಳ ಎಚ್ಚರ ಬೇಡುತ್ತದೆ.


ತಮಿಳುನಾಡಿನಲ್ಲಿ ಬೇಡಿಕೆ ಅಧಿಕ. ಚೆನ್ನೈ, ಕೊಯಂಬತ್ತೂರು ಮೊದಲಾದ ನಗರದಲ್ಲಿ ಮಾರುಕಟ್ಟೆ. ದೆಹಲಿ, ಜೈಪುರಗಳಲ್ಲೂ ಕೇಳಿ ಪಡೆಯುವವರಿದ್ದಾರೆ. ಕೇರಳದಲ್ಲಿರುವ ಆಯುರ್ವೇದ ವೈದ್ಯಶಾಲೆಗಳಲ್ಲಿ ಚಿಕಿತ್ಸೆ ನಡೆಸುವ ಸ್ಥಳಗಳ ನೆಲದಲ್ಲಿ ಸಹಜವಾಗಿ ಎಣ್ಣೆ ಪಸೆ ಇರುತ್ತದೆ. ಇಂತಹ ಜಾಗದಲ್ಲಿ ಹಾಳೆ ಚಪ್ಪಲಿ ಕ್ಲಿಕ್ ಆಗಿದೆ.


ಜೋಸೆಫ್ ಎಲ್ಲಾ ಗಾತ್ರದ, ಎಲ್ಲರಿಗೂ ಸೂಕ್ತವಾಗುವ ಚಪ್ಪಲಿಗಳನ್ನು ತಯಾರಿಸುತ್ತಿದ್ದರೂ ಬಹುಪಾಲು ಹೆಣ್ಮಕ್ಕಳೇ ಗ್ರಾಹಕರು. ಬೇಡಿಕೆಗನುಸಾರವಾಗಿ ತಯಾರಿ. ಮೊದಲೇ ಸಿದ್ಧಪಡಿಸಿಟ್ಟು ಕೊಳ್ಳುವುದಿಲ್ಲ. ತಮ್ಮ ಉತ್ಪನ್ನಗಳ ಕ್ಯಾಟಲಾಗ್ ಮಾಡಿದ್ದಾರೆ. ಇದನ್ನು ನೋಡಿ ಆದೇಶ ಕೊಟ್ಟರೆ ಅಂತಹುದೇ ವಿನ್ಯಾಸದ ಪಾದುಕೆಗಳನ್ನು ಸಿದ್ಧಪಡಿಸುತ್ತಾರೆ. ಚಪ್ಪಲಿಯ 'ಸ್ಟ್ರ್ಯಾಪ್' ಕಚ್ಚಾವಸ್ತುವನ್ನು ಕುಟುಂಬಶ್ರೀ ಘಟಕಗಳ ಮೂಲಕ ಹೆಣೆಯಿಸಿಕೊಳ್ಳುತ್ತಾರೆ. ಇದಕ್ಕೆ ಉತ್ಪಾದನಾ ವೆಚ್ಚ ಹೆಚ್ಚು. ಕೆಲಸ ನಿಧಾನ.


ಅಂಗಡಿಗಳಲ್ಲಿ ಪಾದುಕೆಗಳನ್ನು ಖರೀದಿಸುವಂತೆ ಹಾಳೆಯ ಪಾದುಕೆಯನ್ನು ಖರೀದಿಸಲಾಗುವುದಿಲ್ಲ. ಜನರಿಗೆ ಬಾಳ್ವಿಕೆಯ ಗುಮಾನಿ. ಸ್ವಲ್ಪ ಹೆಚ್ಚೇ ಅನ್ನಿಸುವಂತಹ ದರ. ಅದಕ್ಕೂ ಮಿಗಿಲಾಗಿ ಚೀನಾ ನಿರ್ಮಿತ ಅಗ್ಗದ ಚಪ್ಪಲಿಗಳು ಮಾರುಕಟ್ಟೆಯಲ್ಲಿರುವುದರಿಂದ ಸಹಜವಾಗಿ ಸ್ಪರ್ಧೆ. ಕರಕುಶಲ ಮಳಿಗೆಗಳಲ್ಲಷ್ಟೇ ಮಾರಾಟ ಸಾಧ್ಯತೆ.


ಈ ಮಧ್ಯೆ ಕೊಯಂಬತ್ತೂರಿನ 'ಇಕೊಗ್ರೀನ್' ಸಂಸ್ಥೆಯು ಬಳಸಿ ಬಿಸಾಡಬಹುದಾದ ಹಾಳೆ ಚಪ್ಪಲಿಯನ್ನು ತಯಾರಿಸುತ್ತಿದೆ. 350-400 ರೂಪಾಯಿ ದರ. ಫೈವ್ಸ್ಟಾರ್ ಹೋಟೆಲ್ಗಳಲ್ಲಿ ಇವುಗಳ ನೆಲೆ. ಈ ಚಪ್ಪಲಿಯ ಕೆಳಭಾಗ ಹಾಳೆಯದು. ಮೇಲೆ ಸೆಣಬು. ವರುಷಕ್ಕೆ ಐದು ಸಾವಿರ ಜತೆ ಚಪ್ಪಲಿ ಮಾರಾಟ!


ಜೋಸೆಪ್ ಉದ್ದಿಮೆ ಆರಂಭಿಸುವ ಮೊದಲು ದಿ.ಎಸ್.ಆರ್.ಕೆ.ಮೆನನ್ ಹಾಳೆಯ ಚಪ್ಪಲಿ ತಯಾರಿಸಿದ್ದರು ಎಂಬುದು ಗೊತ್ತಿರಲಿಲ್ಲ. ಎಪತ್ತರ ದಶಕಾರ್ಧದಲ್ಲಿ ಯಾವುದೇ ನೆರವು ಇಲ್ಲದೆ ಹಾಳೆಗೆ ಮರುಜನ್ಮ ಕೊಟ್ಟ ಮೆನನ್ ಅವರ ಕೆಲಸವನ್ನು ಜೋಸೆಫ್ ಮುಂದುವರಿಸುತ್ತಿದ್ದಾರೆ. (info@palmproducts.in)


(ಮಾಹಿತಿ : ಶ್ರೀ ಪಡ್ರೆ)

0 comments:

Post a Comment