Thursday, April 26, 2012

'ಅನ್ನ ಮಾಡೋದು ಹೇಗೆ?'!



ರಾಜಧಾನಿಯಲ್ಲಿ ಎಪ್ರಿಲ್ ಮೊದಲ ವಾರದಲ್ಲಿ 'ಸಹಜ ಸಮೃದ್ಧ'ದ (ಸಸ) ಸಾರಥ್ಯದಲ್ಲಿ ಅಕ್ಕಿ ಮೇಳ. ಹತ್ತಾರು ತಳಿಗಳ ಸಂಗ್ರಹ. ಮಳಿಗೆಯೊಂದರಲ್ಲಿ ಅಮ್ಮಂದಿರು ಅಕ್ಕಿ ಖರೀದಿ ಮಾಡುತ್ತಾ, 'ಇದರ ಅನ್ನ ಮಾಡುವುದು ಹೇಗೆ? ಹೇಳಿ ಕೊಡ್ರಿ, ಬರ್ಕೊಳ್ತೇವೆ' ಎಂದು ಶಾಂತಾರಾಮರಿಗೆ ದುಂಬಾಲು ಬಿದ್ದರು. ಅಮ್ಮಂದಿರಿಗೂ ಅನ್ನ ಮಾಡಲು ಹೇಳಿ ಕೊಡ್ಬೇಕಾ? 'ಅನ್ನ ಏನ್ ಸಾರ್, ಪಾಯಸ ಮಾಡುವ ಕ್ರಮವನ್ನು ಹೇಳಿಕೊಡ್ಬೇಕು. ಅದಕ್ಕಾಗಿಯೇ ಯಾವ್ಯಾವ ತಳಿಗಳ ಅಕ್ಕಿಯ ಅನ್ನವನ್ನು ಹೇಗೆ ಮಾಡ್ಬೇಕು ಅಂತ ಕರಪತ್ರವನ್ನೇ ಮುದ್ರಿಸಿದ್ದೀವಿ' ಎಂದರು ಸಸದ ಕೃಷ್ಣಪ್ರಸಾದ್.

          ಅಮ್ಮನಿಂದ ಮಗಳಿಗೆ ಅಡುಗೆಯ ಜ್ಞಾನ ಹರಿದು ಬರಬೇಕು. ಅದು ಥಿಯರಿ ಅಲ್ಲ, ಪ್ರಾಕ್ಟಿಕಲ್. ಜತೆಯಲ್ಲಿದ್ದು ಕಲಿಯುವಂತಾದ್ದು. ಅಮ್ಮನೇ ಅಡುಗೆ ಮನೆಗೆ ಬಾರದಿದ್ದರೆ? ಕಲಿಯುವ ಬಗೆಯೆಂತು?  ಮಗಳು ಅತ್ತೆ ಮನೆ ಸೇರಿದಾಗ ಗಲಿಬಿಲಿ, ಕಂಗಾಲು. ಅಲ್ಲೂ ಅದೇ ಸ್ಥಿತಿಯಿದ್ದರೆ ಓಕೆ. ಇಲ್ಲದಿದ್ದರೆ? ಪರಿಸ್ಥಿತಿ ಊಹಿಸಿ. 'ಗಂಡ ಸಹಕಾರ ಮಾಡಬೇಡ್ವಾ' ಅಂತ ವಾದವನ್ನು ಮುಂದಿಡಬಹುದು. ಆದರೆ ಜ್ಞಾನಗ್ರಹಿಕೆಗೆ ವಾದಗಳು ಮಾನದಂಡವಲ್ಲ.

          ನಗರದ ಜಂಜಾಟದ ಮಧ್ಯೆ ಅರೋಗ್ಯದೊಂದಿಗೆ ವೈಯಕ್ತಿಕವಾದ ಬದುಕು ಕಳೆದು ಹೋಗುತ್ತದೆ. ಹೊಟ್ಟೆ ಹಸಿವಾದರೆ ಹೋಟೆಲ್ ಇದೆ. ದುಡ್ಡಿದೆಯಲ್ಲಾ, ಬಿಸಾಕಿದರಾಯಿತು! ಸಾಕಷ್ಟು ಮಂದಿಯಲ್ಲಿ ಇಂತಹ 'ಅಹಂ' (ಅಲ್ಲ, ಗುಣ) ಪದಪ್ರಯೋಗದ ಬಳಕೆಯನ್ನು ಕೇಳಿದ್ದೇನೆ. ಗಡದ್ದು ಉಂಡು ತೇಗಿದರೆ ಆಯಿತು. ಅಡುಗೆ ಮನೆಯ ಉಸಾಬರಿ ಯಾಕಲ್ವಾ. ಯಾವಾಗ ಅಡುಗೆ ಮನೆಯ ಮರೆವು ಆಗುತ್ತೋ, 'ಅನ್ನ ಮಾಡುವುದು ಹೇಗೆ' ಎಂಬ ಅಸಹಾಯಕತೆ ಇನ್ನಷ್ಟು ಗಟ್ಟಿಯಾಗುತ್ತದೆ.  

          ಈಚೆಗೆ ಹುಬ್ಬಳ್ಳಿಗೆ ಹೋಗಿದ್ದೆ. ಪರಿಚಿತರೊಬ್ಬರ ಮನೆ ಭೇಟಿ. ಮಕ್ಕಳಿಬ್ಬರು ಅಧ್ಯಯನ ನಿರತರು. ಮನೆಯೊಡತಿ ಕಂಪೆನಿಯಲ್ಲಿ ಹಗಲಿಡೀ ದುಡಿದು ಸುಸ್ತಾಗಿ ಒರಗಿದ್ದರು. ಯಜಮಾನ ಇನ್ನಾವುದೋ ವ್ಯಾವಹಾರಿಕ ಚಿಂತೆ. ಉಭಯ ಕುಶಲೋಪರಿಯ ಬಳಿಕ, ಬನ್ನಿ, ಹತ್ತಿರದಲ್ಲಿ ಹೋಟೆಲ್ ಇದೆ. 'ಹೊಟ್ಟೆ ತುಂಬಿಸಿ' ಬರೋಣ. ಅವಳಿಗೆ ಕೊಂಡೂ ಬರೋಣ ಎನ್ನಬೇಕೆ. ಸರಿ, ದಂಪತಿಗೆ ದುಡಿತ ಅನಿವಾರ್ಯವೆಂದು ಸ್ವೀಕರಿಸೋಣ. ಮನೆ ಮಕ್ಕಳ ಹಸಿದ ಹೊಟ್ಟೆಗೆ ಅಡುಗೆ ಮನೆಯಲ್ಲೇ ಆಹಾರ ತಯಾರಾದರೆ ಅದು ಅಮೃತವಾಗದೇ? ಹೋಟೆಲ್ನಲ್ಲೂ 'ಅಡುಗೆಮನೆಯಿದೆ' ಎಂಬ ಅಡ್ಡ ಮಾತಿಗೆ ಏನು ಹೇಳಲಿ?

          ಅಕ್ಕಿ ಮೇಳದಲ್ಲಿ 'ಅನ್ನ ಮಾಡಲು ಕಲಿವ' ಹೊಸ ಅಮ್ಮಂದಿರು. ಈಗಷ್ಟೇ ಗಂಡನ ಮನೆ ಸೇರಿದವರು. 'ನಮಗೂ ಬ್ರೋಷರ್ ಕೊಡಿ' ಎನ್ನುವಾಗ ಅಯ್ಯೋ ಅನ್ನಬೇಕಷ್ಟೇ. ಬದುಕಿನ ಈ ಸ್ಥಿತಿಯನ್ನು ಪ್ರಶ್ನಿಸುವಂತಿಲ್ಲ. ಫ್ಯಾಷನ್ ಬದುಕಿನ ಅಲಿಖಿತ ರೂಪ. ಅಡುಗೆ ಮನೆಯಲ್ಲಿ 'ರೆಡಿ ಟು ಈಟ್'ನಲ್ಲಿ ಅಮ್ಮಂದಿರ ಪಾತ್ರ ಇದೆಯೇ? 'ಕುಕ್ ಟು ಈಟ್'ನಲ್ಲಾದರೆ 'ಅಮ್ಮನ ಕೈರುಚಿ' ಇದೆ. ಆಗಲೇ ಆರೋಗ್ಯ.

          ಮೇಳದಲ್ಲಿ ಪಾಲಿಶ್ ಮಾಡದ ಕೆಂಪಕ್ಕಿಗೆ ಬೇಡಿಕೆ. ಪಾಯಸಕ್ಕೆ ಸೂಕ್ತವಾಗುವ 'ಕಪ್ಪಕ್ಕಿ', ಇನ್ನೊಂದು ಸಕ್ಕರೆ ಕಾಯಿಲೆಯವರೂ ಸ್ವೀಕರಿಸಬಹುದಾದ ಡಯಾಬಿಟೀಸ್ ರೈಸ್. ಅಕ್ಕಿಯ ಹೆಸರಿನೊಂದಿಗೆ ಕಾಯಿಲೆಯ ಹೆಸರೂ ಥಳಕು ಹಾಕಿಕೊಂಡಿದೆ! ಸುಲಭದಲ್ಲಿ ಆರ್ಥವಾಗಬೇಕಲ್ವಾ. 'ಪಾಲಿಶ್ ಮಾಡದ' ಅಕ್ಕಿಯ ಅನ್ನದ ಸೇವನೆಗೆ ವ್ಯೆದ್ಯರ ಸಲಹೆಯೂ ಇದೆ.  

'ನನ್ನ ಮೊಮ್ಮಗಳೀಗ ಎಲ್.ಕೆ.ಜಿ. ಅವಳಿಗೆ ಕೆಂಪಕ್ಕಿಯ ಅನ್ನವನ್ನು ಮಧ್ಯಾಹ್ನದ ಊಟಕ್ಕೆ ಬುತ್ತಿಯಲ್ಲಿ ಹಾಕಿ ಕಳುಹಿಸುತ್ತಿದ್ದೆವು. ಕೆಂಪು ವರ್ಣದ ಅನ್ನವನ್ನು ನೋಡಿದ ಇತರ ಪುಟಾಣಿಗಲ್ಲಿ ಅಸಹ್ಯ! ಅವರಲ್ಲಿ  ಬಿಸ್ಕತ್ತೋ, ಇನ್ನೇನೋ ಕುರುಕುರು ಇರುತ್ತಿದ್ದುವು. ಗೇಲಿ ಮಾಡಿದರಂತೆ. ಅಲ್ಲಿಂದ ಈ ಮಗು ಕೆಂಪಕ್ಕಿ ಅಂದರೆ ಮಾರುದ್ದ,' ಸಸದ ಅಧ್ಯಕ್ಷ ಎನ್. ಆರ್.ಶೆಟ್ಟರು ಕಥೆ ಹೇಳಿ ಮುಗಿಸುವಾಗ ವಿಷಾದದ ಛಾಯೆ. ನಮ್ಮ ಸುತ್ತಮುತ್ತಲಿನ ವಿಚಾರಗಳು ಮಗುವಿನ ಮೇಲೆ ಬೀರುವ ಪರಿಣಾಮದ ಒಂದು ಎಳೆಯಷ್ಟೇ.

          ಶೆಟ್ಟರು ಇನ್ನೊಂದು ಸಂದರ್ಭವನ್ನು ಜ್ಞಾಪಿಸಿಕೊಂಡರು. ಬೆಂಗಳೂರಿನಲ್ಲಿ ಆಯುರ್ವೇದದ ಕುರಿತು ಅಖಿಲ ಭಾರತ ಸಮ್ಮೇಳನ. ಔಷಧೀಯ ಗುಣಗಳ ಅಕ್ಕಿ ಮತ್ತು ಕಿರುಧಾನ್ಯಗಳ ಪ್ರದರ್ಶನದ ಉಸ್ತುವಾರಿ ಹತ್ತಿದ್ದರು 'ಓ.. ಈ ಅಕ್ಕಿ ಎಲ್ಲಿ ಸಿಗುತ್ತದೆ?', 'ನವರ, ಕರಿಗಜಿವಿಲಿಯನ್ನು ರೋಗಿಗಳಿಗೆ  ಸ್ವೀಕರಿಸುವಂತೆ ಹೇಳಬಹುದಾ?', ವೈದ್ಯ ಬಂಧುಗಳ ಚೋದ್ಯ. ಪಾರಂಪರಿಕವಾದ ಔಷಧೀಯ ಭತ್ತದ ತಳಿಗಳು ಹಿರಿಯರಲ್ಲಿ ಕಂಠಸ್ತ. ಬಳಕೆಯ ಅರಿವು ಸಾಮಾನ್ಯರಿಗೆ ಬಿಡಿ, ವೈದ್ಯರಿಗೂ ಇಲ್ಲವಲ್ಲಾ - ವಿಷಾದಿಸುತ್ತಾರೆ.

          ಅಕ್ಕಿಮೇಳದಲ್ಲಿ ಮಹಿಳೆಯರ ಪಾಲುಗಾರಿಕೆ ಹೆಚ್ಚು. ಅದರಲ್ಲೂ ಮೂವತ್ತೈದರ ಒಳಗಿನವರು. ಅಕ್ಕಿ ಖರೀದಿಯ ಹಿಂದೆ 'ಆಹಾರದೊಂದಿಗೆ ಆರೋಗ್ಯದ ಕಾಳಜಿ'. ಅಕ್ಕಿ ಅಂದರೆ ಸೋನಾ ಮಸ್ಸೂರಿ. ಬೇರೆಯದು ಗೊತ್ತಿಲ್ಲ, ಬೇಕಾಗಿಲ್ಲ. ಅದು ಬಿಳಿಯದಾಗಿರಬೇಕು. ಆಗಷ್ಟೇ ಅಂಗಡಿಯಿಂದ ತಂದಿರಬೇಕು. ಅನ್ನವು ಶ್ವೇತವರ್ಣದಲ್ಲಿ ಉದುರು ಉದುರಾಗಿರಬೇಕು. ಪ್ಯಾಕೆಟ್ ಒಡೆದು ಕುಕ್ಕರಿಗೆ ಹಾಕುವಾಗ ಸಿಗುವ ಆನಂದ ವರ್ಣನಾತೀತ.. - ಈ ರೀತಿಯ 'ಮೈಂಡ್ ಸೆಟ್' ದೂರವಾಗಬೇಕು. ಆಗಲೇ ಆರೋಗ್ಯದ ಕುರಿತು ಮಾತನಾಡಲು ಅರ್ಹತೆ ಬರುತ್ತದಷ್ಟೇ.

          ಸಸವು 'ವಿಷ ಸಿಂಪಡಿಸದೆ' ಭತ್ತ ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಿದೆ. ಬೆಳೆದ ಭತ್ತವನ್ನು ಖರೀದಿಸಿ, ಮಿಲ್ನಲ್ಲಿ ಅಕ್ಕಿ ಮಾಡಿ ಗ್ರಾಹಕರಿಗೆ ಒದಗಿಸುವ ರೈತಸ್ನೇಹಿ ಕೆಲಸ ಮಾಡುತ್ತಿದೆ. ಒಂದು, ಐದು, ಹತ್ತು, ಐವತ್ತು ಕಿಲೋದ ಪ್ಯಾಕೆಟ್ಗಳು. ಹೆಚ್ಚು ಲಾಭಾಂಶ ಇಲ್ಲದ ವ್ಯವಹಾರ. ಕೇಳಿ/ಹುಡುಕಿ ಬರುವ ಗ್ರಾಹಕರನ್ನು ಹೊಂದಿರುವುದು ವಿಶ್ವಾಸಾರ್ಹತೆಯ ದ್ಯೋತಕ. ಭತ್ತವನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಿ, ಅವುಗಳಲ್ಲಿರುವ ಪೌಷ್ಠಿಕಾಂಶಗಳನ್ನು ದಾಖಲಿಸಿ ಕೇಳಿದಾಗ ಒದಗಿಸುವ ವ್ಯವಸ್ಥೆ. 

          'ಈ ಅಕ್ಕಿಯ ಬ್ರಾಂಡ್ ಯಾವುದು? ಎಕ್ಸ್ಪಾಯಿರಿ ಡೇಟ್ ಯಾವಾಗ? ಎಂ.ಆರ್.ಪಿ.ಎಷ್ಟು?' ಹೀಗೆ ಇಂಗ್ಲಿಷ್ ಜಾತಕವನ್ನು ಅಪೇಕ್ಷಿಸುವವರೂ ಇಲ್ಲದಿಲ್ಲ. ಇಂತಹವರಿಗೆ ಅಕ್ಕಿಯ, ಆರೋಗ್ಯದ ಕುರಿತು ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ಎನ್.ಆರ್.ಶೆಟ್ಟರು. ಆದರೆ ನಗರದ ಹಳ್ಳಿ ಮೂಲದ ಮಂದಿಗೆ ಪಾರಂಪರಿಕ ಅಕ್ಕಿಯ ರುಚಿ ಗೊತ್ತು.

          ಅಕ್ಕಿಮೇಳದಲ್ಲಿ ಗಮನ ಸೆಳೆದಿರುವುದು ವಿವಿಧ ಭತ್ತದ ತಳಿಗಳ ಪ್ರದರ್ಶನ. ಒರಿಸ್ಸಾ ಮೂಲದ 'ನಾರಿಕೇಳಾ' ಮತ್ತು 'ಕಾಳಜೀರಾ', ಖಾನಾಪುರ ಮೂಲದ ಬಾಣಂತಿ ಭತ್ತ 'ಕರಿಗಜಿವಿಲಿ' ಮತ್ತು 'ಕಪ್ಪು ಭತ್ತ', ಶಿರಸಿ-ಸೊರಬಾ ನದಿ ತೀರದ ಆಳ ನೀರಿನ ಭತ್ತ 'ಕರಕಂಠಕ', ಮಹಾರಾಷ್ಟ್ರ ಮೂಲದ ರೈತ ಸಂಶೋಧಿತ ತಳಿ 'ಎಚ್.ಎಂ.ಟಿ'.. ಇನ್ನೂ ಅನೇಕ. ಕೋಲಾರ-ಬೆಂಗಳೂರು ಗ್ರಾಮಾಂತರ ಪ್ರದೇಶದ 'ಭೈರನೆಲ್ಲು' ಇದರ ಭತ್ತವನ್ನು ಕುಟ್ಟಿ, ಹಾಲು ತೆಗೆದು, ಬೆಲ್ಲ ಸೇರಿಸಿ ಮಾಡಿದ ಬರ್ಫಿಯನ್ನು ಎದೆನೋವಿರುವವರಿಗೆ ನೀಡಿದರೆ ನೋವು ಶಮನವಾಗುತ್ತದಂತೆ.

          ವಿಪ್ರೋ ಐಟಿಗಳಲ್ಲಿ ಸಾವಯವದ ಹುಡುಕಾಟ ಶುರುವಾಗಿದೆ. ಸಸವು ಮಳಿಗೆ ತೆರೆದಿದೆ. ಇನ್ನೂರಕ್ಕೂ ಮಿಕ್ಕಿ ಐಟಿ ಲೋಕದ ಬಂಧುಗಳು ಆರೋಗ್ಯ ಕಾಳಜಿಯತ್ತ ಹೊರಳಿದ್ದಾರೆ! ಇಂಪೋಸಿಸ್ನವರಿಗೂ ಒಲವು. ಎಲ್ಲರಿಗೂ ಗೊತ್ತಿದೆ, ನಾವು ಮಾಡುತ್ತಿರುವ ಉದ್ಯೋಗ, ಕೈತುಂಬಾ ಸಿಗುವ ಸಂಬಳ ಕಾಸು - ಬದುಕನ್ನು ಆಧರಿಸುತ್ತಿದೆ, ಆದರೆ ಆರೋಗ್ಯವನ್ನಲ್ಲ. ಅದು ಹಾಳಾದರೆ ಕಂಪೆನಿಯೂ ಮರುಭರ್ತಿ ಮಾಡಲಾರದು. ಅವರವರೇ ದಾರಿ ಕಂಡುಕೊಳ್ಳಬೇಕಷ್ಟೇ.

           'ಸಾರ್, ಬೆಂಗಳೂರಿನಲ್ಲಿರುವ ಕ್ರಾಸ್ರೋಡ್ಗಳಲ್ಲೆಲ್ಲಾ ವಸತಿಗಳು ಹೆಚ್ಚು. ಇಲ್ಲಿ ಜೀನಸಿ ಅಂಗಡಿಗಳು ಯಥೇಷ್ಟವಾಗಿ ತೆರೆಯಬೇಕಿತ್ತು. ಆದರೆ ಪ್ರತಿ ರೋಡಲ್ಲೂ ಮೆಡಿಕಲ್ ಶಾಪ್ಗಳು ತಲೆ ಎತ್ತುತ್ತಿವೆ,' - ನಗರದ ಬದುಕಿನ ಚಿತ್ರಣವನ್ನು ನಗರದಲ್ಲಿರುವ ಎನ್. ಆರ್.ಶೆಟ್ಟರು ಕಟ್ಟಿಕೊಟ್ಟ ಬಗೆ. ಸೇವಿಸುವ ಆಹಾರ ಆರೋಗ್ಯಕ್ಕೆ ಮುಳುವಾಗಿದೆ. ಅದನ್ನು ಆಹಾರದ ಮೂಲಕವೇ ಸರಿಪಡಿಸಬೇಕು. ಇದಕ್ಕಾಗಿ ಬೇಕು, ವಿಷ ರಹಿತವಾದ ಆಹಾರದ ಸೇವನೆ. ಈ ಹಿನ್ನೆಲೆಯಲ್ಲಿ ಅಕ್ಕಿಮೇಳಕ್ಕೆ ಬರುವ ಗ್ರಾಹಕರು ತಮ್ಮ 'ಆರೋಗ್ಯ'ವನ್ನು ಲಕ್ಷ್ಯದಲ್ಲಿಟ್ಟಿರುವುದು ಮೆಚ್ಚತಕ್ಕ ವಿಚಾರ.

ಸಾವಯವ ಎಂದರೆ ಸಂತೃಪ್ತಿ


ಸಾವಯವ ಅಂದರೆ ಕೃಷಿಯಲ್ಲ. ಅದೊಂದು ಬದುಕು. ಸ್ವಾವಲಂಬಿ ಜೀವನಕ್ಕೆ ಮತ್ತೊಂದು ಹೆಸರು. ಇದನ್ನು ಅಳವಡಿಸಿಕೊಂಡದ್ದರಲ್ಲಿ ಖುಷಿಯಿದೆ. ನೆಮ್ಮದಿಯಿದೆ. ಆರೋಗ್ಯವಿದೆ - ಹೀಗೆ ಮಾತಿಗೆ ಸಿಕ್ಕಾಗಲೆಲ್ಲಾ ಅನುಭವವನ್ನು ಹಂಚಿಕೊಳ್ಳುತ್ತಾರೆ, ಸಾವಯವ ಕೃಷಿಕ ಎ.ಪಿ.ಸದಾಶಿವ. 'ಸಾವಯವ ಸದಾಶಿವ' ಅಂತಲೇ ಆಪ್ತವಲಯದಲ್ಲಿ ಪರಿಚಿತ.

ಪುತ್ತೂರು (ದ.ಕ.) ಸನಿಹದ ಆರ್ಯಾಪು ಗ್ರಾಮದ ಮರಿಕೆಯಲ್ಲಿದೆ, ಸದಾಶಿವರ ತಪೋಭೂಮಿ. ಉಣ್ಣಲು ತನ್ನದೇ ಗದ್ದೆಯ ಅಕ್ಕಿ, ತೋಟದ ತರಕಾರಿ, ಹಣ್ಣು ಹಂಪಲು. ಮಾರುಕಟ್ಟೆಯಿಂದ ತರಕಾರಿ, ಬೇಕರಿ ಐಟಂ, ಸಿಹಿ ತಿಂಡಿಗಳು ಇವರ ಅಡುಗೆ ಮನೆ ಪ್ರವೇಶಿಸುವುದಿಲ್ಲ. ಹಲ್ಲುಜ್ಜಲು ತಮ್ಮದೇ ತಯಾರಿಯ ಹಲ್ಲುಪುಡಿ. ಮೈಉಜ್ಜಲು ಸ್ವ-ನಿರ್ಮಿತ ಸಾಬೂನು. ದುಂದುವೆಚ್ಚವಿಲ್ಲದ ಸ್ವಾವಲಂಬಿ ಬದುಕು.

1986ರ ಸುಮಾರಿಗೆ ಸದಾಶಿವರು ರಾಸಾಯನಿಕ ಗೊಬ್ಬರಗಳನ್ನು ಸುರಿದು ಕೃಷಿ ಮಾಡುತ್ತಿದ್ದರು. ಗಂಧಸಾಲೆ ಭತ್ತದ ತಳಿಗೆ ಬಂದ ರೋಗದಿಂದಾಗಿ ವಿಷಗಳ ಸಿಂಪಡಣೆ. ಇದರಿಂದಾಗಿ ಜಲಚರಗಳ ನಾಶ. 'ಇಷ್ಟೊಂದು ವಿಷ ಸಿಂಪಡಿಸಿ, ಅದರಿಂದ ಬೆಳೆದ ಉತ್ಪನ್ನವನ್ನು ನಾವೂ ಉಂಡು ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಭಿನ್ನವಾದ ಕೃಷಿ ಕ್ರಮಗಳನ್ನು ಅನುಸರಿಸಲು ನಿರ್ಧಾರ. ಆಗಷ್ಟೇ ಸಾವಯವ ಕೃಷಿ ಎಂದು ಹೆಜ್ಜೆಯಿರಿಸಿದ ಕೃಷಿ ಕ್ರಮದತ್ತ ಒಲವು. ಡಾ.ನಾರಾಯಣ ರೆಡ್ಡಿಯವರ ಸಾವಯವದ ವೈಚಾರಿಕತೆಯತ್ತ ಪ್ರಭಾವ. ಅಲ್ಲಿಂದೀಚೆಗೆ ಅವರ ಹೊಲಕ್ಕೆ ರಾಸಾಯನಿಕ ಗೊಬ್ಬರದ ಚೀಲ ಬಂದಿಲ್ಲ. ವಿಷ ಸಿಂಪಡಣೆ ಇಲ್ಲವೇ ಇಲ್ಲ.

          ಹತ್ತೆಕ್ರೆ ಕೃಷಿ ಭೂಮಿ. ಹದಿನೈದೆಕ್ರೆ ಕಾಡು. ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೊ, ಭತ್ತ ಮುಖ್ಯ ಕೃಷಿಗಳು. ವಿವಿಧ ನಮೂನೆಯ ಹಣ್ಣಿನ ಗಿಡಗಳು, ಔಷಧೀಯ ಗಿಡಗಳು, ಕಾಡುಮರಗಳು ಹೇರಳ.

          ಸದಾಶಿವರಿಗೆ ಹೈನುಗಾರಿಕೆಯು ಪಾರಂಪರಿಕ. ಹದಿನೈದು ಜಾನುವಾರು ಕುಟುಂಬಗಳಿವೆ. ಅದರಲ್ಲಿ ನಾಲ್ಕು ಸ್ಥಳೀಯ, ಎರಡು ಹೆಚ್.ಎಫ್. ಮಿಕ್ಕಿದ್ದೆಲ್ಲಾ ಜರ್ಸಿ ತಳಿಯ ಹಸುಗಳು. ದಿವಸಕ್ಕೆ ಒಂದು ಹೊತ್ತು ಹಸಿಹುಲ್ಲು ಆಹಾರ. ಜತೆಗೆ ತಮ್ಮದೇ ಮಿಶ್ರಣದ ಹಿಂಡಿ ಪಾಕ. ಅಕ್ಕಿತೌಡು, ಜೋಳ-ರಾಗಿಯ ಹುಡಿ, ನೆಲಗಡಲೆ ಹಿಂಡಿ, ಉದ್ದಿನತೌಡು, ಎಳ್ಳಿನಹಿಂಡಿ.. ಇವುಗಳ ಮಿಶ್ರಣ. ಮಿಕ್ಕ ಹೊತ್ತಲ್ಲಿ ಸೋಗೆ, ಹಾಳೆ, ಬಾಳೆದಿಂಡುಗಳ ಸಮಾರಾಧನೆ. ಹಲಸಿನ ಸೀಸನ್ನಲ್ಲಿ ಹಲಸು. ಒಟ್ಟೂ ಪಶುಸಮೂಹದಲ್ಲಿ ಮೂರು ಮಾತ್ರ ಹಾಲಿಳಿಸುವಂತಾದ್ದು.

ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಗೋಬರ್ಗ್ಯಾಸ್ ಸ್ಥಾವರಗಳ ಪೈಕಿ ಇವರದು ಬಹುಶಃ ನಾಲ್ಕನೆಯದು! ಸ್ಲರಿ ಸಂಗ್ರಹಕ್ಕೆ 40 ಅಡಿ ಉದ್ದ, 6 ಅಡಿ ಅಳತೆಯ ಟ್ಯಾಂಕ್. ಸ್ಲರಿಯು ತೋಟಕ್ಕೆ ಮುಖ್ಯ ಗೊಬ್ಬರ. ಸ್ಲರಿ ಪಂಪ್ ಮೂಲಕ ಸರಬರಾಜು. ಶೇ.25ರಷ್ಟು ಡೀಸೆಲ್ ಮತ್ತು ಶೇ.75ರಷ್ಟು ಗೋಬರ್ ಗ್ಯಾಸ್ನಿಂದ ಸ್ಲರಿ ಪಂಪ್ ಚಾಲೂ.

          ಅಡಿಕೆ ಮರದ ಬುಡವನ್ನು ಬಿಡಿಸಿ ಪ್ರತ್ಯೇಕವಾಗಿ ಗೊಬ್ಬರವನ್ನು ಹಾಕುವ ಪರಿಪಾಠವಿಲ್ಲ. ಬಿದ್ದ ಸೋಗೆಯನ್ನು ಕೊಚ್ಚಿ ಬುಡಕ್ಕೆ ಹಾಕುತ್ತಾರೆ. ವಾರಕ್ಕೆ ಎರಡು ಗಂಟೆ ಪಂಪ್ ಮೂಲಕ ಸ್ಲರಿ ಉಣಿಕೆಯಿಂದ ಅರ್ಧ ಎಕ್ರೆಯಷ್ಟು ತೋಟ ತೋಯುತ್ತದೆ.

          ನಾಲ್ಕು ಕೆರೆಗಳಿವೆ. ಅವುಗಳಲ್ಲಿ ಎರಡು ಮಾತ್ರ ಬಳಕೆ. ಮತ್ತೆರಡು ನೀರು ಮರುಪೂರಣ ಪ್ರಕ್ರಿಯೆಗಾಗಿ. ಒಂದು ಕೊಳವೆ ಬಾವಿಯಿದೆ. ಅದು ಆಪತ್ತಿಗಾಗಿ ಮಾತ್ರ! ಸ್ಪ್ರಿಂಕ್ಲರ್ ಮೂಲಕ ನೀರಾವರಿ. ಸುತ್ತಲೂ ಕಾಡು ಸಮೃದ್ಧವಾಗಿರುವುದರಿಂದ ನೀರಿನ ಸಂಪನ್ನತೆ ಚೆನ್ನಾಗಿದೆ.

          ಒಂದೆಕ್ರೆಯಲ್ಲಿ ಭತ್ತದ ಕೃಷಿ. ಎರಡು ಬೆಳೆ. ಒಂದು ಬೆಳೆಯಲ್ಲಿ ಗಂಧಸಾಲೆ ಬೆಳೆದರೆ, ಮತ್ತೊಂದರಲ್ಲಿ ಬಿಟಿ ತಳಿ. ಗದ್ದೆಗೆ ನೂರೈವತ್ತು ಬುಟ್ಟಿ (ಒಂದು ಬುಟ್ಟಿ ಅಂದರೆ 30 ಕಿಲೋ) ಹಟ್ಟಿಗೊಬ್ಬರ ಹೊರತು ಬೇರ್ಯಾವುದೇ ಗೊಬ್ಬರವಿಲ್ಲ. ಭತ್ತವನ್ನು ಮನೆಯಲ್ಲೇ ಮಿಲ್ ಮಾಡುತ್ತಾರೆ. ಮನೆಬಳಕೆಗೆ ಮಿಕ್ಕಿ ಒಂದೂವರೆ ಕ್ವಿಂಟಾಲಿನಷ್ಟು ಅಕ್ಕಿಯನ್ನು ಮಾರಾಟ ಮಾಡುತ್ತಾರೆ.

          ಸದಾಶಿವರಿಗೆ ರಬ್ಬರ್ ಕೃಷಿಯಲ್ಲಿ ಒಲವಿಲ್ಲ. 'ಯಾವಾಗ ರಬ್ಬರ್ ಕೃಷಿ ಪ್ರವೇಶವಾಯಿತೋ, ಅಲ್ಲಿಂದ ಕಾಡುಗಳು ನಾಶವಾಯಿತು, ಗುಡ್ಡಗಳು ನುಣುಪಾದುವು. ನಂತರ ಶುರುವಾಯಿತು, ಮಂಗ ಮತ್ತು ಹಂದಿಯ ಕಾಟ.' ಇವರ ಮಾತಿನಲ್ಲಿ ಸತ್ಯವಿಲ್ಲದಿಲ್ಲ.

          ಪುತ್ತೂರಿನಲ್ಲಿರುವ ಗಿಡಗೆಳೆತನ ಸಂಘ 'ಸಮೃದ್ಧಿ'ಯಲ್ಲಿ ಸಕ್ರಿಯರು. ಅವರು ಅಧ್ಯಕ್ಷರಾಗಿ ಸಮೃದ್ಧಿಯನ್ನು ಮುನ್ನಡೆಸಿದ್ದರು. ಇದರ ಸಂಪರ್ಕದಿಂದಾಗಿ ಸಾಕಷ್ಟು ಬೀಜಗಳು, ಸಸ್ಯಗಳು ಮತ್ತು ಅನುಭವಗಳು ಕೃಷಿಗೆ ಅನುಕೂಲವಾಗಿರುವುದನ್ನು ಸದಾಶಿವರು ಜ್ಞಾಪಿಸಿಕೊಳ್ಳುತ್ತಾರೆ. 

          ಅಡುಗೆ ಮನೆಯ ಒಳಸುರಿಗಳನ್ನು ಮಾರುಕಟ್ಟೆಯಿಂದ ಖರೀದಿಸುವುದು ಅನಿವಾರ್ಯ. ಎಲ್ಲವನ್ನೂ ಬೆಳೆಯಲಾಗುವುದಿಲ್ಲವಲ್ಲಾ. ಅದರಲ್ಲಿ ಸಾವಯವ ವಸ್ತುಗಳಿಗೆ ಮೊದಲ ಮಣೆ. ಅನಾವಶ್ಯಕ ದುಂದುವೆಚ್ಚಗಳಿಗೆ ಕಡಿವಾಣ. ಸದಾಶಿವರ ಮನೆಯಲ್ಲಿ ಸಾವಯವ ಕೃಷಿಯನ್ನು ಮತ್ತು ಸಾವಯವ ಬದುಕನ್ನು ಕುಟುಂಬಸ್ಥರು ಒಪ್ಪಿದ್ದಾರೆ. ಸಾಮಾಜಿಕವಾಗಿ ಗೌರವ ಪ್ರಾಪ್ತವಾಗಿದೆ.

ಒಂದು ಕಡೆಯಿಂದ 'ಸಾವಯವ' ಎಂಬುದು ಫ್ಯಾಶನ್ ಆಗುತ್ತಿದೆ. ಮತ್ತೊಂದೆಡೆಯಿಂದ ಮಾರುಕಟ್ಟೆ ತಂತ್ರಕ್ಕಿರುವ ಐಕಾನ್! ಇವೆರಡರ ಮಧ್ಯೆ ಸಾವಯವದ ನಿಜಾರ್ಥವನ್ನು ಗ್ರಹಿಸಿ, ಅದರಂತೆ ಬದುಕನ್ನು ನಡೆಸುತ್ತಿರುವ ಸದಾಶಿವರ ಕೃಷಿ ಎಂದೂ ಸದ್ದಾಗುವುದಿಲ್ಲ. ಸುದ್ದಿಯಾಗುವುದಿಲ್ಲ. ಸುದ್ದಿಯಾಗುವ ಮೋಹವೂ ಅವರಿಗಿಲ್ಲ.

ಕೃಷಿಕನ ಮನೆಯವರೆಲ್ಲರೂ ದುಡಿಯಬೇಕು. ದುಡಿದು ತಿನ್ನುವುದು ಇದೆಯಲ್ಲಾ, ಅದಕ್ಕಿಂತ ಸಂತೃಪ್ತಿ ಬೇರೊಂದಿಲ್ಲ - ಈ  ವಿಚಾರಗಳಿಗೆ ಸದಾಶಿವರು ಅಂಟಿಕೊಂಡುದರಿಂದ ಅವರದು ಗೊಣಗಾಟವಿಲ್ಲದ ಕೃಷಿ ಬದುಕು.

Thursday, April 12, 2012

ಮುಳಿಯದಲ್ಲಿ 'ಹಲಸು ಸ್ನೇಹಿ ಕೂಟ'ಕ್ಕೆ ಚಾಲನೆ




"ನಿರ್ಲಕ್ಷಿತ ಹಲಸು ರೆಡಿ ಟು ಕುಕ್ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸಿದೆ. ಅದರ ಕನಿಷ್ಠ ಸಂಸ್ಕರಣೆಯ ತೊಡಕಿನಿಂದಾಗಿ ಅಡುಗೆ ಮನೆಯಿಂದ ದೂರವಾಗಿತ್ತು. ಈಗ ಆ ತೊಡಕು ದೂರವಾಗಿದೆ. ಪ್ಯಾಕೆಟ್ ಒಡೆದು ನೇರವಾಗಿ ಅಡುಗೆಗೆ ಬಳಸುವಂತಹ ಉತ್ಪನ್ನಗಳು ಕೇರಳದಲ್ಲಿ ಮಾರುಕಟ್ಟೆಗೆ ಬಂದಿವೆ, ಎಂದು ಹಲಸು ಆಂದೋಳನದ ರೂವಾರಿ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ ಹೇಳಿದರು.


ಅವರು ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ 'ಹಲಸು ತನ್ನಿ, ತಿನ್ನೋಣ ಬನ್ನಿ' ಕಾರ್ಯಕ್ರಮದಲ್ಲಿ ಹಲಸು ಪ್ರಿಯರನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ರೂಪಿತವಾದ 'ಹಲಸು ಸ್ನೇಹಿ ಕೂಟ'ವನ್ನು 'ಹಲಸಿನ ಹಣ್ಣನ್ನು ತುಂಡರಿಸುವ' ಮೂಲಕ ಉದ್ಘಾಟಿಸಿದರು. ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ವೇದಿಕೆಯಲ್ಲಿ ಕೃಷಿಕ ಅಮ್ಮಂಕಲ್ಲು ಕೇಶವ ಭಟ್, ಡಾ.ಡಿ.ಸಿ.ಚೌಟ ಉಪಸ್ಥಿತರಿದ್ದರು.


ಅಳಿಕೆ ಸುತ್ತಮುತ್ತಲಿನ ಸುಮಾರು ಇಪ್ಪತ್ತೈದು ಹಲಸಿನ ತಳಿಗಳು 'ರುಚಿ ನೋಡಿ, ತಳಿ ಆಯ್ಕೆ'ಗಾಗಿ ಬಂದಿದ್ದು, ಅದರಲ್ಲಿ ಉತ್ತಮ ಐದು ಹಲಸಿನ ತಳಿಯನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಕಾಡು ಹಣ್ಣುಗಳು, ನಾಡ ಹಣ್ಣುಗಳು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಹಲಸಿನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ. ಕೆ.ಎಸ್.ಕಾಮತ್ ಬಹುಮಾನ ವಿತರಿಸಿದರು.


ಭಾಗವಹಿಸಿದ ಎಲ್ಲರಿಗೂ ಹಲಸಿನ ಹಣ್ಣಿನ ಸಮಾರಾಧನೆ. ಶಿರಂಕಲ್ಲು ನಾರಾಯಣ ಭಟ್, ಉಬರು ರಾಜಗೋಪಾಲ ಭಟ್, ಮಲ್ಯ ಶಂಕರನಾರಾಯಣ ಭಟ್ ಹಲಸಿನ ಸಂಸ್ಕರಣೆ ಕಾಯಕದ ಸಾರಥ್ಯ ವಹಿಸಿದ್ದರು. 'ಹಲಸಿ ತನ್ನಿ, ತಿನ್ನೋಣ ಬನ್ನಿ' ಕಾರ್ಯಕ್ರಮದ ರೂವಾರಿ ಮುಳಿಯ ವೆಂಕಟಕೃಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು.


ಕಳೆದ ವರುಷ ಎಪ್ರಿಲ್ 14ರಂದು ಮುಳಿಯ ಶರ್ಮರ ಮನೆಯಲ್ಲಿ ಜರುಗಿದ ಪ್ರಥಮ 'ರುಚಿ ನೋಡಿ ತಳಿ ಆಯ್ಕೆ' ಪ್ರಕ್ರಿಯೆ, ಶಿರಂಕಲ್ಲು ನಾರಾಯಣ ಭಟ್ಟರ ಮನೆಯಲ್ಲಿ ಜರುಗಿದ ’ಸಾತ್ವಿಕ ಆಹಾರ’ ಕಾರ್ಯಾಗಾರ, ಆ ಬಳಿಕ ಉಬರಿನಲ್ಲಿ ಜರುಗಿದ ಹಲಸಿನ ಹಣ್ಣಿನ ಹಬ್ಬದ ಮುಂದುವರಿಕೆಯಾಗಿ ಈ ಕಾರ್ಯಕ್ರಮ ಜರುಗಿರುವುದು ಉಲ್ಲೇಖಾರ್ಹ.

Monday, April 2, 2012

ಬರಡು ಬಯಲಲಿ ಹಸುರು ಭವನ



ಕೃಷಿಯಲ್ಲಿ ಭಾರೀ ಹಣ ಮಾಡಲು ಎಂದೂ ಸಾಧ್ಯವಿಲ್ಲ. ಅದು ಪ್ರಕೃತಿಯ ಮಿತಿ, ನೀತಿ. ಆದರೆ ಪ್ರತಿಯೊಬ್ಬರ ನಿಜದ ಬೇಕುಗಳನ್ನು ಕೃಷಿಯಿಂದ ಪಡೆಯಲು ಯಾವುದೇ ತೊಂದರೆಯಿಲ್ಲ, ಮೈಸೂರು 'ಇಂದ್ರಪ್ರಸ್ಥ' ತೋಟದ ಎ.ಪಿ.ಚಂದ್ರಶೇಖರ್ (ಎಪಿಸಿ) ಮಾತಿಗಿಳಿದರು. ಕೃಷಿಯನ್ನು ವ್ಯಾಪಾರವಾಗಿ ಕಂಡ ಪ್ರಕೃತಿ ವಿರೋಧಿ ಧೋರಣೆ, ಎಲ್ಲವನ್ನೂ ಹಣದ ರೂಪದಲ್ಲಿ ಕಾಣುವ ದುರಾಗ್ರಹ, ಕೆಲಸಕ್ಕಿಂತ ಹೆಚ್ಚು ಆದಾಯ ಕಾಣುವ ಹವಣಿಕೆಗಳ ಬೀಜಗಳನ್ನು ಸುಟ್ಟರೆ ಮಾತ್ರ ಕೃಷಿಯಲ್ಲಿ ಖುಷಿ ಸಾಧ್ಯ.

ಸರಿ, ಕಿಲೋ ಅಡಿಕೆಗೆ ಇನ್ನೂರು ರೂಪಾಯಿ ದಾಟಿತು! ಕಾಳುಮೆಣಸಿಗೆ ನಾಲ್ಕುನೂರು ದಾಟಿದರೂ ಅಟ್ಟದಿಂದಿಳಿಯುವುದಿಲ್ಲ! 'ನೋಡಿ.. ಇನ್ನೂ ದರ ಜಾಸ್ತಿಯಾಗಬಹುದು' ಎನ್ನುವ ಆಪ್ತರ ಸಲಹೆ. ನಿತ್ಯ ಮೂಟೆಗಳನ್ನು ನೋಡುತ್ತಾ ಹಣದ ಎಣಿಕೆಯಲ್ಲಿ ಟೆನ್ಶನ್ನ್ನು ಅಪ್ಪಿಕೊಂಡಿರುವುದು ಖುಷಿಯ ಹೊತ್ತಲ್ಲಿ ಮಸುಕಾಗಿರುತ್ತದೆ. ಒಂದು ದಿವಸ ಐದು ರೂಪಾಯಿ ದರ ಇಳಿಯೆತೆನ್ನಿ. ಏರಿದ ಟೆನ್ಶನ್ ಮತ್ತೂ ಏರುತ್ತದೆ!


ಚಂದ್ರಶೇಖರ್ರ ಕೃಷಿ ಬದುಕಿನಲ್ಲಿ ಇಂತಹ ಟೆನ್ಶನ್ಗಳು ನುಸುಳುವುದಿಲ್ಲ. ಹಾಗಾಗಿ ಕೃಷಿ ಒಳನೋಟಗಳನ್ನು ಸ್ಪಷ್ಟವಾಗಿ, ಅಷ್ಟೇ ಧೈರ್ಯವಾಗಿ ಹೇಳಲು ಸಾಧ್ಯವಾಗಿದೆ. ವೇಗವೇ ಮಾನದಂಡವಾಗುಳ್ಳ ವಾಹನ, ಹಣ, ಬದುಕುಗಳು ನಮ್ಮನ್ನು ಪ್ರಕೃತಿಯಿಂದ ದೂರವಿಟ್ಟಿವೆ. ಯಾವುದಾದರೂ ಗಿಡ ಕಾಣಬೇಕಾದರೆ 'ಎಕ್ರೆಗಟ್ಟಲೆ ಬೆಳೆದು ಸಂಪಾದಿಸು' ಎಂದು ಯಾರಾದರೂ ಹೇಳಬೇಕು ಅಥವಾ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು, ಸೆಮಿನಾರುಗಳಲ್ಲಿ ಹೇಳಬೇಕು.'


ಎಪಿಸಿಯವರ ಇಂದ್ರಪ್ರಸ್ಥದೊಳಗೆ ಮೂರು ವರುಷದ ಹಿಂದೊಮ್ಮೆ ಸುತ್ತಿದ್ದೆ. ಮೊನ್ನೆಯಷ್ಟೇ ಪುನಃ ಸುತ್ತಾಡಿದೆ. ಅಂದಿನ ಅನುಭವಕ್ಕೂ, ಈಗಕ್ಕೂ ತುಂಬಾ ವ್ಯತ್ಯಾಸ. ಅಂದಿದ್ದ ಇಂದ್ರಪ್ರಸ್ಥ ಹಾಗೆನೇ ಇದೆ. ನಾವು ಪ್ರಕೃತಿಯನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ತಿದ್ದುಪಡಿ ಮಾಡಿಕೊಂಡರೆ ಹೇಗೆ, ಎನ್ನುತ್ತಾ ಚಿನ್ನದ ಸೂಜಿಯಿಂದ ಚುಚ್ಚಬೇಕೇ!


ಮೈಸೂರಿನಿಂದ ಹದಿನೈದು ಕಿಲೋಮೀಟರ್ ದೂರದ ಕಳಲವಾಡಿ ಗ್ರಾಮದಲ್ಲಿ ಹದಿಮೂರೆಕ್ರೆ ಜಾಗ. ಬಯಲು ಸೀಮೆ. ಮಳೆ ತೀರಾ ಕಡಿಮೆ. ಈ ಜಾಗಕ್ಕೆ ಕಾಲಿರಿಸಿದಾಗ ಎಲ್ಲಾ ತೋಟಗಳಂತೆ ಒಂದಷ್ಟು ತೆಂಗು, ಕಬ್ಬು, ಹಣ್ಣಿನ ಮರಗಳು ಬಿಟ್ಟರೆ ಮತ್ತೆಲ್ಲಾ ಬೋಳು ಬೋಳು. ಮೂವತ್ತು ವರ್ಷವಾಯಿತು, ಇಂದ್ರಪ್ರಸ್ಥದಲ್ಲೀಗ ಎರಡೂವರೆ ಸಾವಿರಕ್ಕೂ ಮಿಕ್ಕಿ ಸಸ್ಯವೈವಿಧ್ಯಗಳಿವೆ. ಇವುಗಳಲ್ಲಿ ಮನುಷ್ಯ ಪ್ರಯತ್ನದಿಂದ ಅರ್ಧದಷ್ಟಾದರೆ, ಮಿಕ್ಕಿದ್ದೆಲ್ಲಾ ಪ್ರಕೃತಿಯ ಕೊಡುಗೆ.


ತಾಂತ್ರಿಕ ಪದವೀಧರರಾದ ಎಪಿಸಿ ಐದಂಕೆ ಹಣ ಬರುವ ಉದ್ಯೋಗವನ್ನು ಆಯ್ಕೆ ಮಾಡಬಹುದಿತ್ತು. ನಗರದ ಮಧ್ಯೆ ತಂಪು ಕಾರಿನಲ್ಲಿ ಓಡಾಡುವಷ್ಟು ವಿತ್ತಸಂಪನ್ನತೆ ಗಳಿಸಬಹುದಿತ್ತು. 'ಇನ್ನೊಬ್ಬರ ಅಧೀನದಲ್ಲಿ ದುಡಿಯುವುದಿಲ್ಲ. ಪೇಟೆಯ ವಾತಾವರಣ ಸಲ್ಲ' ಎಂಬ ಎರಡು ಕಾರಣಗಳಿಗಾಗಿ ಕೃಷಿಯನ್ನು ಆಯ್ದುಕೊಂಡಾಗ, ಅಪ್ಪ ತಿಮ್ಮಪ್ಪಯ್ಯನವರು ಬೆನ್ನುತಟ್ಟಿದರು. ಅನುಭವವನ್ನು ಧಾರೆಯೆರೆದರು. ಮಗನ ಕೃಷಿ ಕಾಯಕಕ್ಕೆ ಹೆಗಲಾದರು.


ಅಲ್ಲಿಂದ ಶುರುವಾಯಿತು, ಕೃಷಿಯೊಂದಿಗೆ ಪ್ರಕೃತಿಯ ಓದುವಿಕೆ. ಅವುಗಳೊಂದಿಗೆ ಮಾತುಕತೆ. 'ಆಧುನಿಕ ಒಳಸುರಿಗಳ ಗಾಢತೆ ಮತ್ತು ಪರಿಣಾಮಗಳ ಅಧ್ಯಯನ. ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಪರಿ. ಇವುಗಳಿಂದ ಹೊರ ಬಾರದೆ ತಾನು ನಂಬಿದ ಕೃಷಿ ಅಸಾಧ್ಯ' ಎನ್ನುತ್ತಾ ರಾಸಾಯನಿಕ ಗೊಬ್ಬರ, ಸಿಂಪಡಣೆಗಳಿಗೆ ತಿಲಾಂಜಲಿಯಿಟ್ಟರು.


'ಕಾಡಿನ ವಾತಾವರಣವು ತೋಟಕ್ಕೆ ಸಮೀಪವಾಗಿರಬೇಕು. ಆಗಲೇ ಜೀವವೈವಿಧ್ಯ', ಎಂಬ ತತ್ವವನ್ನು ನಂಬಿದ್ದು ಮಾತ್ರವಲ್ಲ, ಅನುಷ್ಠಾನಿಸಿದ್ದಾರೆ ಎಪಿಸಿ. ಪ್ರಕೃತಿಯೊಂದಿಗೆ ಬದುಕನ್ನು ಅನುಸಂಧಾನ ಮಾಡಿಕೊಂಡರೆ ಕಷ್ಟವಿಲ್ಲ. ಒಮ್ಮೆ ಅಭ್ಯಾಸವಾದರೆ ಮತ್ತೆಲ್ಲಾ ಸಲೀಸು.


ಈಗ ಇಂದ್ರಪ್ರಸ್ಥದಲ್ಲಿ ಏನೇನಿದೆ? ಹನ್ನೊಂದು ಜಾತಿಯ ತೆಂಗು, ಹದಿನಾರು ಜಾತಿಯ ಬಾಳೆ, ತೊಂಭತ್ತು ಜಾತಿಯ ಗಡ್ಡೆಗಳು, ಅಷ್ಟೇ ತರಕಾರಿಗಳು; ನೂರೈವತ್ತು ಜಾತಿಯ ಔಷಧೀಯ ಗಿಡಗಳು, ಐನೂರೈವತ್ತು ಜಾತಿಯ ಅಲಂಕಾರಿಕ ಗಿಡಗಳು, ಇನ್ನೂರ ಇಪ್ಪತ್ತೈದು ಕಾಡು ಮರಗಳು, ಹದಿಮೂರು ಜಾತಿಯ ಅಡಿಕೆ, ನೂರ ಎಂಭತ್ತು ವಿಧದ ಹಣ್ಣುಗಳು, ಎಂಭತ್ತೈದು ಜಾತಿಯ ಸೊಪ್ಪುಗಳು, ಅರುವತ್ತು ಸುವಾಸನಾ ಸಸ್ಯಗಳು, ಇಪ್ಪತ್ತೈದು ಜಾತಿಯ ಹುಲ್ಲುಗಳು, ನೂರು ಜಾತಿಯ ಕಳ್ಳಿಗಳು. ಅಲ್ಲದೆ ಹೆಸರು ಗೊತ್ತಿಲ್ಲದ ಅಲಂಕಾರಿಕ ಗಿಡಗಳು, ಬಳ್ಳಿಗಳು, ಕಳೆಗಳು ಸಾವಿರಕ್ಕೂ ಮಿಕ್ಕಿ..!

'ನನ್ನ ತೋಟದಲ್ಲಿ ಎಲ್ಲೆಲ್ಲೂ ಹಣವೇ ಬಿದ್ದಿರುತ್ತದೆ' ಎನ್ನುತ್ತಾರೆ. ಫಕ್ಕನೆ ಕೇಳುವಾಗ ಒಗಟಾಗಿ ಕಾಣುತ್ತದೆ. ಅಲ್ಲಿನ ಒಂದೊಂದು ಹಣ್ಣು, ಚಿಗುರು ಪ್ರಕೃತಿ ನೀಡಿದ ಹಣ. ಪೃಕೃತಿ ನೀಡುವ ಕೃತಜ್ಞತೆ. ವರ್ಷಪೂರ್ತಿ ಒಂದಲ್ಲ ಒಂದು ಉತ್ಪನ್ನದ ಕೊಯಿಲು. ಅವನ್ನು ನಗದೀಕರಿಸುವ ಕೈತುಂಬಾ ಕೆಲಸಗಳು. ಜತೆಗೆ ಹಟ್ಟಿ, ಬೋನ್ಸಾಯಿ, ಗಿಡಗಳು.. ಹೀಗೆ ದಿನವಿಡೀ ದುಡಿತ. ಹೀಗಿರುತ್ತಾ ನಗರದ ಬೇರೆ ಆಲೋಚನೆಗಳು ಹೇಗೆ ಬಂದಾವು? ದಿನವಿಡೀ 'ಶೆಡ್ಯೂಲ್' ಆದಾಗ ಮನಸ್ಸು ಗೆಜಲುವುದಿಲ್ಲ! ವಿಕಾರ ನುಸುಳುವುದಿಲ್ಲ. ಇಂದಿನ ಕೆಲಸ ಮಾಡುತ್ತಿದ್ದಂತೆ, ನಾಳೆಯ ಕೆಲಸಗಳ ಪಟ್ಟಿ ಮನಃಪಟಲದಲ್ಲಿ ಸಿದ್ಧವಾಗಿರುತ್ತದೆ.


ಕೃಷಿ ಯಶಸ್ಸಾದರೆ ಸಾಲದಲ್ವಾ, ಅಡುಗೆ ಮನೆಯೂ ಸಂಪನ್ನವಾಗಬೇಕು. ಆಗಲೇ ಆರೋಗ್ಯ, ಭಾಗ್ಯ. 'ನನ್ನ ತೋಟದ ಎಲ್ಲಾ ಚಿಗುರು, ಕಾಯಿಗಳು ಅಡುಗೆ ಮನೆಗೆ ಹೋಗುತ್ತದೆ. ಬಳಕೆಯ ಸಾಧ್ಯಾಸಾಧ್ಯತೆಗೆ ಇದೊಂದು ಪ್ರಾಕ್ಟಿಕಲ್ ಪ್ರಯೋಗಾಲಯ,' ಮಡದಿ ನಿರ್ಮಲ ಎ.ಪಿ.ಸಿ.ಯವರತ್ತ ಕಣ್ಣುಮಿಟುಕಿಸುತ್ತಾ ಚಂದ್ರಶೇಖರ್ ಹೇಳುತ್ತಾರೆ, ತಿಂದು ನೋಡಿದರೆ ತಾನೆ; ತಿನ್ನಲು ಆಗುತ್ತೋ, ಇಲ್ವೋ ಅಂತ ಗೊತ್ತಾಗೋದು? ದನಗಳು ತಿಂದರೆ ಏನೂ ಆಗುವುದಿಲ್ಲ ಅಂತಾದರೆ ಮನುಷ್ಯರು ಧಾರಾಳ ತಿನ್ನಬಹುದು. ಶೇ.99ರಷ್ಟು ಬಾಯಿಗೆ ಇಷ್ಟವಾದರೆ ಅದು ಆಹಾರಕ್ಕೆ ಓಕೆ. ಪಕ್ಷಿಗಳಿಗೆ ಮೂಸಿದ ತಕ್ಷಣ ಗೊತ್ತಾಗಿ ಬಿಡುವುದಿಲ್ವಾ. ರುಚಿ ಇಲ್ಲದ್ದನ್ನು ರುಚಿ ಬರುವಂತೆ ಮಾಡಿ ಸೇವಿಸುತ್ತೇವೆ. ಹಾಗಾಗಿ ಹೊಸತನ್ನು ಹುಡುಕಿ ತಿನ್ನಲು ಕಲಿಯಬೇಕು. ಆಹಾರ ಸಂಸ್ಕೃತಿಯ ಮೂಲ ಆಸರೆಯಾಗಿದ್ದ ಅಡುಗೆ ಮನೆಯು ಯಾಂತ್ರಿಕ ಬದುಕಿನಲ್ಲಿ ಕಳೆದುಹೋಗುತ್ತಿದೆ!

ಎಪಿಸಿಯವರ ಆಹಾರ ಸಂಶೋಧನೆಗಳ ಫಲವಾಗಿ ಅವರ ಅಡುಗೆ ಮನೆಯಲ್ಲಿ ಇನ್ನೂರಕ್ಕೂ ಮಿಕ್ಕಿ ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧವಾಗುತ್ತದೆ. ತೋಟದ ಉತ್ಪನ್ನಗಳು ಹೊಸ ಹೊಸ ಅವತಾರದೊಂದಿಗೆ ಗ್ರಾಹಕರ ಕೈಗೆ 'ತಾಜಾ'ವಾಗಿ ಸಿಕ್ಕಿದಾಗ ಯಾರಿಗೆ ಬೇಡ ಹೇಳಿ? ಗಂಡ-ಹೆಂಡಿರ ಸತತ ದುಡಿಮೆ. ತೋಟ ಭೇಟಿಗೆ ಬಂದವರಿಗೆ ಖರೀದಿಗೆ ಅವಕಾಶವಾಗಲಿ ಎಂಬುದಕ್ಕಾಗಿ ಮನೆಯಲ್ಲೇ ಔಟ್ಲೆಟ್. ಬಹ್ವಂಶ ಮೈಸೂರು ಪೇಟೆಯಲ್ಲಿರುವ 'ನೇಸರ' ಸಾವಯವ ಮಳಿಗೆಗೆ ರವಾನೆ.


ಸಾವಯವ ಕೃಷಿಯು ಉಪದೇಶ, ಭಾಷಣದಿಂದ ಬರುವಂತಹುದಲ್ಲ. ಬಹುತೇಕರು ರಾಸಾಯನಿಕ ಕೃಷಿಯಿಂದ ರೋಸಿಯೇ ಸಾವಯವವನ್ನು ನೆಚ್ಚಿಕೊಂಡಿದ್ದಾರೆ. ನನ್ನ ತೋಟದಲ್ಲಿ ಇಳುವರಿಗಿಂತ, ಜ್ಞಾನಕ್ಕೆ ಪ್ರಾಧಾನ್ಯತೆ. ಇದು 'ನಾಲೇಜ್ ಬ್ಯಾಂಕ್'. ಇದನ್ನು ಗಳಿಸಲು ಮಾನಸಿಕ ದೃಢತೆ ಬೇಕು. ಸಾವಯವದ ಕುರಿತು ಅಧಿಕೃತ ಮತ್ತು ಗಟ್ಟಿ ಅನುಭವಗಳ ಪರಿಣಾಮವಾಗಿ ಕೆಲವೊಂದು ಸಲ ಎಪಿಸಿ ನಿಷ್ಠುರವಾಗಿ ಮಾತನಾಡಿದಂತೆ ಭಾಸವಾಗುತ್ತದೆ.


ತನ್ನ ಕೃಷಿಯನ್ನು ಅವರೇ ಒಂದೆಡೆ ಹೇಳುತ್ತಾರೆ - ಇಂದ್ರಪ್ರಸ್ಥವೆಂಬ ನಮ್ಮ ತೋಟದಲ್ಲಿ ಏನಾದರೊಂದಷ್ಟು ಭಿನ್ನ ಸಾಧನೆ ಆಗಿದ್ದರೆ, ಇತರರಿಗೆ ಹೇಳಬಹುದಾದ ಒಂದಷ್ಟು ವಿಷಯಗಳು ನನಗೆ ತಿಳಿದಿದ್ದರೆ, ಅದಕ್ಕೆ ಅತ್ಯಂತ ಪ್ರಮುಖ ಕಾರಣ - ನಮಗೆ ಇರುವುದರೊಂದೇ ಮನೆ, ಅದುವೇ ನಮ್ಮ ತೋಟದ ಮನೆ. ಮನವೆಲ್ಲೋ? ಮನೆಯೆಲ್ಲೋ? ಇರುವವರಿಗೆ ಎಲ್ಲಿದ್ದಿತು ನೆಮ್ಮದಿ ಸುಮ್ಮನೆ?! ಇಷ್ಟೆಲ್ಲಾ ಸಂಪನ್ಮೂಲವಿದ್ದ ಇಂದ್ರಪ್ರಸ್ಥದ ಆದಾಯ ಎಷ್ಟು? 'ಸಾಲಸೋಲಗಳಿಲ್ಲದೆ ಜೀವನ ನಡೆಸುವಷ್ಟು'!


ತೀರ್ಥಹಳ್ಳಿಯ ಕುರುವಳ್ಳಿ ಪುರುಷೋತ್ತಮ ರಾವ್ ಪ್ರತಿಷ್ಠಾನವು ಪ್ರತೀ ವರುಷ ಅಪ್ಪಟ ಸಾವಯವ ಕೃಷಿಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಸಾವಯವವನ್ನು ಬದುಕಾಗಿ ಸ್ವೀಕರಿಸಿ, ಬರಡು ಬಯಲಲಿ ಹಸುರು ಭವನ ರೂಪಿಸಿದ ಮರಿಕೆಯ ಎ.ಪಿ.ತಿಮ್ಮಪ್ಪಯ್ಯ ಕುಟುಂಬಕ್ಕೆ (ಎ.ಪಿ.ಚಂದ್ರಶೇಖರ್, ಎ.ಪಿ.ಸದಾಶಿವ) ಈ ಸಾಲಿನ 'ಪುರುಷೋತ್ರಮ ಸಂಮಾನ್'. ಎಪ್ರಿಲ್ 8, 2012ರಂದು ತೀರ್ಥಹಳ್ಳಿಯಲ್ಲಿ ಪ್ರಶಸ್ತಿ ಪ್ರದಾನ-ಸಂವಾದ.