Thursday, April 26, 2012

ಸಾವಯವ ಎಂದರೆ ಸಂತೃಪ್ತಿ


ಸಾವಯವ ಅಂದರೆ ಕೃಷಿಯಲ್ಲ. ಅದೊಂದು ಬದುಕು. ಸ್ವಾವಲಂಬಿ ಜೀವನಕ್ಕೆ ಮತ್ತೊಂದು ಹೆಸರು. ಇದನ್ನು ಅಳವಡಿಸಿಕೊಂಡದ್ದರಲ್ಲಿ ಖುಷಿಯಿದೆ. ನೆಮ್ಮದಿಯಿದೆ. ಆರೋಗ್ಯವಿದೆ - ಹೀಗೆ ಮಾತಿಗೆ ಸಿಕ್ಕಾಗಲೆಲ್ಲಾ ಅನುಭವವನ್ನು ಹಂಚಿಕೊಳ್ಳುತ್ತಾರೆ, ಸಾವಯವ ಕೃಷಿಕ ಎ.ಪಿ.ಸದಾಶಿವ. 'ಸಾವಯವ ಸದಾಶಿವ' ಅಂತಲೇ ಆಪ್ತವಲಯದಲ್ಲಿ ಪರಿಚಿತ.

ಪುತ್ತೂರು (ದ.ಕ.) ಸನಿಹದ ಆರ್ಯಾಪು ಗ್ರಾಮದ ಮರಿಕೆಯಲ್ಲಿದೆ, ಸದಾಶಿವರ ತಪೋಭೂಮಿ. ಉಣ್ಣಲು ತನ್ನದೇ ಗದ್ದೆಯ ಅಕ್ಕಿ, ತೋಟದ ತರಕಾರಿ, ಹಣ್ಣು ಹಂಪಲು. ಮಾರುಕಟ್ಟೆಯಿಂದ ತರಕಾರಿ, ಬೇಕರಿ ಐಟಂ, ಸಿಹಿ ತಿಂಡಿಗಳು ಇವರ ಅಡುಗೆ ಮನೆ ಪ್ರವೇಶಿಸುವುದಿಲ್ಲ. ಹಲ್ಲುಜ್ಜಲು ತಮ್ಮದೇ ತಯಾರಿಯ ಹಲ್ಲುಪುಡಿ. ಮೈಉಜ್ಜಲು ಸ್ವ-ನಿರ್ಮಿತ ಸಾಬೂನು. ದುಂದುವೆಚ್ಚವಿಲ್ಲದ ಸ್ವಾವಲಂಬಿ ಬದುಕು.

1986ರ ಸುಮಾರಿಗೆ ಸದಾಶಿವರು ರಾಸಾಯನಿಕ ಗೊಬ್ಬರಗಳನ್ನು ಸುರಿದು ಕೃಷಿ ಮಾಡುತ್ತಿದ್ದರು. ಗಂಧಸಾಲೆ ಭತ್ತದ ತಳಿಗೆ ಬಂದ ರೋಗದಿಂದಾಗಿ ವಿಷಗಳ ಸಿಂಪಡಣೆ. ಇದರಿಂದಾಗಿ ಜಲಚರಗಳ ನಾಶ. 'ಇಷ್ಟೊಂದು ವಿಷ ಸಿಂಪಡಿಸಿ, ಅದರಿಂದ ಬೆಳೆದ ಉತ್ಪನ್ನವನ್ನು ನಾವೂ ಉಂಡು ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಭಿನ್ನವಾದ ಕೃಷಿ ಕ್ರಮಗಳನ್ನು ಅನುಸರಿಸಲು ನಿರ್ಧಾರ. ಆಗಷ್ಟೇ ಸಾವಯವ ಕೃಷಿ ಎಂದು ಹೆಜ್ಜೆಯಿರಿಸಿದ ಕೃಷಿ ಕ್ರಮದತ್ತ ಒಲವು. ಡಾ.ನಾರಾಯಣ ರೆಡ್ಡಿಯವರ ಸಾವಯವದ ವೈಚಾರಿಕತೆಯತ್ತ ಪ್ರಭಾವ. ಅಲ್ಲಿಂದೀಚೆಗೆ ಅವರ ಹೊಲಕ್ಕೆ ರಾಸಾಯನಿಕ ಗೊಬ್ಬರದ ಚೀಲ ಬಂದಿಲ್ಲ. ವಿಷ ಸಿಂಪಡಣೆ ಇಲ್ಲವೇ ಇಲ್ಲ.

          ಹತ್ತೆಕ್ರೆ ಕೃಷಿ ಭೂಮಿ. ಹದಿನೈದೆಕ್ರೆ ಕಾಡು. ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೊ, ಭತ್ತ ಮುಖ್ಯ ಕೃಷಿಗಳು. ವಿವಿಧ ನಮೂನೆಯ ಹಣ್ಣಿನ ಗಿಡಗಳು, ಔಷಧೀಯ ಗಿಡಗಳು, ಕಾಡುಮರಗಳು ಹೇರಳ.

          ಸದಾಶಿವರಿಗೆ ಹೈನುಗಾರಿಕೆಯು ಪಾರಂಪರಿಕ. ಹದಿನೈದು ಜಾನುವಾರು ಕುಟುಂಬಗಳಿವೆ. ಅದರಲ್ಲಿ ನಾಲ್ಕು ಸ್ಥಳೀಯ, ಎರಡು ಹೆಚ್.ಎಫ್. ಮಿಕ್ಕಿದ್ದೆಲ್ಲಾ ಜರ್ಸಿ ತಳಿಯ ಹಸುಗಳು. ದಿವಸಕ್ಕೆ ಒಂದು ಹೊತ್ತು ಹಸಿಹುಲ್ಲು ಆಹಾರ. ಜತೆಗೆ ತಮ್ಮದೇ ಮಿಶ್ರಣದ ಹಿಂಡಿ ಪಾಕ. ಅಕ್ಕಿತೌಡು, ಜೋಳ-ರಾಗಿಯ ಹುಡಿ, ನೆಲಗಡಲೆ ಹಿಂಡಿ, ಉದ್ದಿನತೌಡು, ಎಳ್ಳಿನಹಿಂಡಿ.. ಇವುಗಳ ಮಿಶ್ರಣ. ಮಿಕ್ಕ ಹೊತ್ತಲ್ಲಿ ಸೋಗೆ, ಹಾಳೆ, ಬಾಳೆದಿಂಡುಗಳ ಸಮಾರಾಧನೆ. ಹಲಸಿನ ಸೀಸನ್ನಲ್ಲಿ ಹಲಸು. ಒಟ್ಟೂ ಪಶುಸಮೂಹದಲ್ಲಿ ಮೂರು ಮಾತ್ರ ಹಾಲಿಳಿಸುವಂತಾದ್ದು.

ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಗೋಬರ್ಗ್ಯಾಸ್ ಸ್ಥಾವರಗಳ ಪೈಕಿ ಇವರದು ಬಹುಶಃ ನಾಲ್ಕನೆಯದು! ಸ್ಲರಿ ಸಂಗ್ರಹಕ್ಕೆ 40 ಅಡಿ ಉದ್ದ, 6 ಅಡಿ ಅಳತೆಯ ಟ್ಯಾಂಕ್. ಸ್ಲರಿಯು ತೋಟಕ್ಕೆ ಮುಖ್ಯ ಗೊಬ್ಬರ. ಸ್ಲರಿ ಪಂಪ್ ಮೂಲಕ ಸರಬರಾಜು. ಶೇ.25ರಷ್ಟು ಡೀಸೆಲ್ ಮತ್ತು ಶೇ.75ರಷ್ಟು ಗೋಬರ್ ಗ್ಯಾಸ್ನಿಂದ ಸ್ಲರಿ ಪಂಪ್ ಚಾಲೂ.

          ಅಡಿಕೆ ಮರದ ಬುಡವನ್ನು ಬಿಡಿಸಿ ಪ್ರತ್ಯೇಕವಾಗಿ ಗೊಬ್ಬರವನ್ನು ಹಾಕುವ ಪರಿಪಾಠವಿಲ್ಲ. ಬಿದ್ದ ಸೋಗೆಯನ್ನು ಕೊಚ್ಚಿ ಬುಡಕ್ಕೆ ಹಾಕುತ್ತಾರೆ. ವಾರಕ್ಕೆ ಎರಡು ಗಂಟೆ ಪಂಪ್ ಮೂಲಕ ಸ್ಲರಿ ಉಣಿಕೆಯಿಂದ ಅರ್ಧ ಎಕ್ರೆಯಷ್ಟು ತೋಟ ತೋಯುತ್ತದೆ.

          ನಾಲ್ಕು ಕೆರೆಗಳಿವೆ. ಅವುಗಳಲ್ಲಿ ಎರಡು ಮಾತ್ರ ಬಳಕೆ. ಮತ್ತೆರಡು ನೀರು ಮರುಪೂರಣ ಪ್ರಕ್ರಿಯೆಗಾಗಿ. ಒಂದು ಕೊಳವೆ ಬಾವಿಯಿದೆ. ಅದು ಆಪತ್ತಿಗಾಗಿ ಮಾತ್ರ! ಸ್ಪ್ರಿಂಕ್ಲರ್ ಮೂಲಕ ನೀರಾವರಿ. ಸುತ್ತಲೂ ಕಾಡು ಸಮೃದ್ಧವಾಗಿರುವುದರಿಂದ ನೀರಿನ ಸಂಪನ್ನತೆ ಚೆನ್ನಾಗಿದೆ.

          ಒಂದೆಕ್ರೆಯಲ್ಲಿ ಭತ್ತದ ಕೃಷಿ. ಎರಡು ಬೆಳೆ. ಒಂದು ಬೆಳೆಯಲ್ಲಿ ಗಂಧಸಾಲೆ ಬೆಳೆದರೆ, ಮತ್ತೊಂದರಲ್ಲಿ ಬಿಟಿ ತಳಿ. ಗದ್ದೆಗೆ ನೂರೈವತ್ತು ಬುಟ್ಟಿ (ಒಂದು ಬುಟ್ಟಿ ಅಂದರೆ 30 ಕಿಲೋ) ಹಟ್ಟಿಗೊಬ್ಬರ ಹೊರತು ಬೇರ್ಯಾವುದೇ ಗೊಬ್ಬರವಿಲ್ಲ. ಭತ್ತವನ್ನು ಮನೆಯಲ್ಲೇ ಮಿಲ್ ಮಾಡುತ್ತಾರೆ. ಮನೆಬಳಕೆಗೆ ಮಿಕ್ಕಿ ಒಂದೂವರೆ ಕ್ವಿಂಟಾಲಿನಷ್ಟು ಅಕ್ಕಿಯನ್ನು ಮಾರಾಟ ಮಾಡುತ್ತಾರೆ.

          ಸದಾಶಿವರಿಗೆ ರಬ್ಬರ್ ಕೃಷಿಯಲ್ಲಿ ಒಲವಿಲ್ಲ. 'ಯಾವಾಗ ರಬ್ಬರ್ ಕೃಷಿ ಪ್ರವೇಶವಾಯಿತೋ, ಅಲ್ಲಿಂದ ಕಾಡುಗಳು ನಾಶವಾಯಿತು, ಗುಡ್ಡಗಳು ನುಣುಪಾದುವು. ನಂತರ ಶುರುವಾಯಿತು, ಮಂಗ ಮತ್ತು ಹಂದಿಯ ಕಾಟ.' ಇವರ ಮಾತಿನಲ್ಲಿ ಸತ್ಯವಿಲ್ಲದಿಲ್ಲ.

          ಪುತ್ತೂರಿನಲ್ಲಿರುವ ಗಿಡಗೆಳೆತನ ಸಂಘ 'ಸಮೃದ್ಧಿ'ಯಲ್ಲಿ ಸಕ್ರಿಯರು. ಅವರು ಅಧ್ಯಕ್ಷರಾಗಿ ಸಮೃದ್ಧಿಯನ್ನು ಮುನ್ನಡೆಸಿದ್ದರು. ಇದರ ಸಂಪರ್ಕದಿಂದಾಗಿ ಸಾಕಷ್ಟು ಬೀಜಗಳು, ಸಸ್ಯಗಳು ಮತ್ತು ಅನುಭವಗಳು ಕೃಷಿಗೆ ಅನುಕೂಲವಾಗಿರುವುದನ್ನು ಸದಾಶಿವರು ಜ್ಞಾಪಿಸಿಕೊಳ್ಳುತ್ತಾರೆ. 

          ಅಡುಗೆ ಮನೆಯ ಒಳಸುರಿಗಳನ್ನು ಮಾರುಕಟ್ಟೆಯಿಂದ ಖರೀದಿಸುವುದು ಅನಿವಾರ್ಯ. ಎಲ್ಲವನ್ನೂ ಬೆಳೆಯಲಾಗುವುದಿಲ್ಲವಲ್ಲಾ. ಅದರಲ್ಲಿ ಸಾವಯವ ವಸ್ತುಗಳಿಗೆ ಮೊದಲ ಮಣೆ. ಅನಾವಶ್ಯಕ ದುಂದುವೆಚ್ಚಗಳಿಗೆ ಕಡಿವಾಣ. ಸದಾಶಿವರ ಮನೆಯಲ್ಲಿ ಸಾವಯವ ಕೃಷಿಯನ್ನು ಮತ್ತು ಸಾವಯವ ಬದುಕನ್ನು ಕುಟುಂಬಸ್ಥರು ಒಪ್ಪಿದ್ದಾರೆ. ಸಾಮಾಜಿಕವಾಗಿ ಗೌರವ ಪ್ರಾಪ್ತವಾಗಿದೆ.

ಒಂದು ಕಡೆಯಿಂದ 'ಸಾವಯವ' ಎಂಬುದು ಫ್ಯಾಶನ್ ಆಗುತ್ತಿದೆ. ಮತ್ತೊಂದೆಡೆಯಿಂದ ಮಾರುಕಟ್ಟೆ ತಂತ್ರಕ್ಕಿರುವ ಐಕಾನ್! ಇವೆರಡರ ಮಧ್ಯೆ ಸಾವಯವದ ನಿಜಾರ್ಥವನ್ನು ಗ್ರಹಿಸಿ, ಅದರಂತೆ ಬದುಕನ್ನು ನಡೆಸುತ್ತಿರುವ ಸದಾಶಿವರ ಕೃಷಿ ಎಂದೂ ಸದ್ದಾಗುವುದಿಲ್ಲ. ಸುದ್ದಿಯಾಗುವುದಿಲ್ಲ. ಸುದ್ದಿಯಾಗುವ ಮೋಹವೂ ಅವರಿಗಿಲ್ಲ.

ಕೃಷಿಕನ ಮನೆಯವರೆಲ್ಲರೂ ದುಡಿಯಬೇಕು. ದುಡಿದು ತಿನ್ನುವುದು ಇದೆಯಲ್ಲಾ, ಅದಕ್ಕಿಂತ ಸಂತೃಪ್ತಿ ಬೇರೊಂದಿಲ್ಲ - ಈ  ವಿಚಾರಗಳಿಗೆ ಸದಾಶಿವರು ಅಂಟಿಕೊಂಡುದರಿಂದ ಅವರದು ಗೊಣಗಾಟವಿಲ್ಲದ ಕೃಷಿ ಬದುಕು.

0 comments:

Post a Comment