ಕೃಷಿಯಲ್ಲಿ ಭಾರೀ ಹಣ ಮಾಡಲು ಎಂದೂ ಸಾಧ್ಯವಿಲ್ಲ. ಅದು ಪ್ರಕೃತಿಯ ಮಿತಿ, ನೀತಿ. ಆದರೆ ಪ್ರತಿಯೊಬ್ಬರ ನಿಜದ ಬೇಕುಗಳನ್ನು ಕೃಷಿಯಿಂದ ಪಡೆಯಲು ಯಾವುದೇ ತೊಂದರೆಯಿಲ್ಲ, ಮೈಸೂರು 'ಇಂದ್ರಪ್ರಸ್ಥ' ತೋಟದ ಎ.ಪಿ.ಚಂದ್ರಶೇಖರ್ (ಎಪಿಸಿ) ಮಾತಿಗಿಳಿದರು. ಕೃಷಿಯನ್ನು ವ್ಯಾಪಾರವಾಗಿ ಕಂಡ ಪ್ರಕೃತಿ ವಿರೋಧಿ ಧೋರಣೆ, ಎಲ್ಲವನ್ನೂ ಹಣದ ರೂಪದಲ್ಲಿ ಕಾಣುವ ದುರಾಗ್ರಹ, ಕೆಲಸಕ್ಕಿಂತ ಹೆಚ್ಚು ಆದಾಯ ಕಾಣುವ ಹವಣಿಕೆಗಳ ಬೀಜಗಳನ್ನು ಸುಟ್ಟರೆ ಮಾತ್ರ ಕೃಷಿಯಲ್ಲಿ ಖುಷಿ ಸಾಧ್ಯ.
ಸರಿ, ಕಿಲೋ ಅಡಿಕೆಗೆ ಇನ್ನೂರು ರೂಪಾಯಿ ದಾಟಿತು! ಕಾಳುಮೆಣಸಿಗೆ ನಾಲ್ಕುನೂರು ದಾಟಿದರೂ ಅಟ್ಟದಿಂದಿಳಿಯುವುದಿಲ್ಲ! 'ನೋಡಿ.. ಇನ್ನೂ ದರ ಜಾಸ್ತಿಯಾಗಬಹುದು' ಎನ್ನುವ ಆಪ್ತರ ಸಲಹೆ. ನಿತ್ಯ ಮೂಟೆಗಳನ್ನು ನೋಡುತ್ತಾ ಹಣದ ಎಣಿಕೆಯಲ್ಲಿ ಟೆನ್ಶನ್ನ್ನು ಅಪ್ಪಿಕೊಂಡಿರುವುದು ಖುಷಿಯ ಹೊತ್ತಲ್ಲಿ ಮಸುಕಾಗಿರುತ್ತದೆ. ಒಂದು ದಿವಸ ಐದು ರೂಪಾಯಿ ದರ ಇಳಿಯೆತೆನ್ನಿ. ಏರಿದ ಟೆನ್ಶನ್ ಮತ್ತೂ ಏರುತ್ತದೆ!
ಚಂದ್ರಶೇಖರ್ರ ಕೃಷಿ ಬದುಕಿನಲ್ಲಿ ಇಂತಹ ಟೆನ್ಶನ್ಗಳು ನುಸುಳುವುದಿಲ್ಲ. ಹಾಗಾಗಿ ಕೃಷಿ ಒಳನೋಟಗಳನ್ನು ಸ್ಪಷ್ಟವಾಗಿ, ಅಷ್ಟೇ ಧೈರ್ಯವಾಗಿ ಹೇಳಲು ಸಾಧ್ಯವಾಗಿದೆ. ವೇಗವೇ ಮಾನದಂಡವಾಗುಳ್ಳ ವಾಹನ, ಹಣ, ಬದುಕುಗಳು ನಮ್ಮನ್ನು ಪ್ರಕೃತಿಯಿಂದ ದೂರವಿಟ್ಟಿವೆ. ಯಾವುದಾದರೂ ಗಿಡ ಕಾಣಬೇಕಾದರೆ 'ಎಕ್ರೆಗಟ್ಟಲೆ ಬೆಳೆದು ಸಂಪಾದಿಸು' ಎಂದು ಯಾರಾದರೂ ಹೇಳಬೇಕು ಅಥವಾ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು, ಸೆಮಿನಾರುಗಳಲ್ಲಿ ಹೇಳಬೇಕು.'
ಎಪಿಸಿಯವರ ಇಂದ್ರಪ್ರಸ್ಥದೊಳಗೆ ಮೂರು ವರುಷದ ಹಿಂದೊಮ್ಮೆ ಸುತ್ತಿದ್ದೆ. ಮೊನ್ನೆಯಷ್ಟೇ ಪುನಃ ಸುತ್ತಾಡಿದೆ. ಅಂದಿನ ಅನುಭವಕ್ಕೂ, ಈಗಕ್ಕೂ ತುಂಬಾ ವ್ಯತ್ಯಾಸ. ಅಂದಿದ್ದ ಇಂದ್ರಪ್ರಸ್ಥ ಹಾಗೆನೇ ಇದೆ. ನಾವು ಪ್ರಕೃತಿಯನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ತಿದ್ದುಪಡಿ ಮಾಡಿಕೊಂಡರೆ ಹೇಗೆ, ಎನ್ನುತ್ತಾ ಚಿನ್ನದ ಸೂಜಿಯಿಂದ ಚುಚ್ಚಬೇಕೇ!
ಮೈಸೂರಿನಿಂದ ಹದಿನೈದು ಕಿಲೋಮೀಟರ್ ದೂರದ ಕಳಲವಾಡಿ ಗ್ರಾಮದಲ್ಲಿ ಹದಿಮೂರೆಕ್ರೆ ಜಾಗ. ಬಯಲು ಸೀಮೆ. ಮಳೆ ತೀರಾ ಕಡಿಮೆ. ಈ ಜಾಗಕ್ಕೆ ಕಾಲಿರಿಸಿದಾಗ ಎಲ್ಲಾ ತೋಟಗಳಂತೆ ಒಂದಷ್ಟು ತೆಂಗು, ಕಬ್ಬು, ಹಣ್ಣಿನ ಮರಗಳು ಬಿಟ್ಟರೆ ಮತ್ತೆಲ್ಲಾ ಬೋಳು ಬೋಳು. ಮೂವತ್ತು ವರ್ಷವಾಯಿತು, ಇಂದ್ರಪ್ರಸ್ಥದಲ್ಲೀಗ ಎರಡೂವರೆ ಸಾವಿರಕ್ಕೂ ಮಿಕ್ಕಿ ಸಸ್ಯವೈವಿಧ್ಯಗಳಿವೆ. ಇವುಗಳಲ್ಲಿ ಮನುಷ್ಯ ಪ್ರಯತ್ನದಿಂದ ಅರ್ಧದಷ್ಟಾದರೆ, ಮಿಕ್ಕಿದ್ದೆಲ್ಲಾ ಪ್ರಕೃತಿಯ ಕೊಡುಗೆ.
ತಾಂತ್ರಿಕ ಪದವೀಧರರಾದ ಎಪಿಸಿ ಐದಂಕೆ ಹಣ ಬರುವ ಉದ್ಯೋಗವನ್ನು ಆಯ್ಕೆ ಮಾಡಬಹುದಿತ್ತು. ನಗರದ ಮಧ್ಯೆ ತಂಪು ಕಾರಿನಲ್ಲಿ ಓಡಾಡುವಷ್ಟು ವಿತ್ತಸಂಪನ್ನತೆ ಗಳಿಸಬಹುದಿತ್ತು. 'ಇನ್ನೊಬ್ಬರ ಅಧೀನದಲ್ಲಿ ದುಡಿಯುವುದಿಲ್ಲ. ಪೇಟೆಯ ವಾತಾವರಣ ಸಲ್ಲ' ಎಂಬ ಎರಡು ಕಾರಣಗಳಿಗಾಗಿ ಕೃಷಿಯನ್ನು ಆಯ್ದುಕೊಂಡಾಗ, ಅಪ್ಪ ತಿಮ್ಮಪ್ಪಯ್ಯನವರು ಬೆನ್ನುತಟ್ಟಿದರು. ಅನುಭವವನ್ನು ಧಾರೆಯೆರೆದರು. ಮಗನ ಕೃಷಿ ಕಾಯಕಕ್ಕೆ ಹೆಗಲಾದರು.
ಅಲ್ಲಿಂದ ಶುರುವಾಯಿತು, ಕೃಷಿಯೊಂದಿಗೆ ಪ್ರಕೃತಿಯ ಓದುವಿಕೆ. ಅವುಗಳೊಂದಿಗೆ ಮಾತುಕತೆ. 'ಆಧುನಿಕ ಒಳಸುರಿಗಳ ಗಾಢತೆ ಮತ್ತು ಪರಿಣಾಮಗಳ ಅಧ್ಯಯನ. ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಪರಿ. ಇವುಗಳಿಂದ ಹೊರ ಬಾರದೆ ತಾನು ನಂಬಿದ ಕೃಷಿ ಅಸಾಧ್ಯ' ಎನ್ನುತ್ತಾ ರಾಸಾಯನಿಕ ಗೊಬ್ಬರ, ಸಿಂಪಡಣೆಗಳಿಗೆ ತಿಲಾಂಜಲಿಯಿಟ್ಟರು.
'ಕಾಡಿನ ವಾತಾವರಣವು ತೋಟಕ್ಕೆ ಸಮೀಪವಾಗಿರಬೇಕು. ಆಗಲೇ ಜೀವವೈವಿಧ್ಯ', ಎಂಬ ತತ್ವವನ್ನು ನಂಬಿದ್ದು ಮಾತ್ರವಲ್ಲ, ಅನುಷ್ಠಾನಿಸಿದ್ದಾರೆ ಎಪಿಸಿ. ಪ್ರಕೃತಿಯೊಂದಿಗೆ ಬದುಕನ್ನು ಅನುಸಂಧಾನ ಮಾಡಿಕೊಂಡರೆ ಕಷ್ಟವಿಲ್ಲ. ಒಮ್ಮೆ ಅಭ್ಯಾಸವಾದರೆ ಮತ್ತೆಲ್ಲಾ ಸಲೀಸು.
ಈಗ ಇಂದ್ರಪ್ರಸ್ಥದಲ್ಲಿ ಏನೇನಿದೆ? ಹನ್ನೊಂದು ಜಾತಿಯ ತೆಂಗು, ಹದಿನಾರು ಜಾತಿಯ ಬಾಳೆ, ತೊಂಭತ್ತು ಜಾತಿಯ ಗಡ್ಡೆಗಳು, ಅಷ್ಟೇ ತರಕಾರಿಗಳು; ನೂರೈವತ್ತು ಜಾತಿಯ ಔಷಧೀಯ ಗಿಡಗಳು, ಐನೂರೈವತ್ತು ಜಾತಿಯ ಅಲಂಕಾರಿಕ ಗಿಡಗಳು, ಇನ್ನೂರ ಇಪ್ಪತ್ತೈದು ಕಾಡು ಮರಗಳು, ಹದಿಮೂರು ಜಾತಿಯ ಅಡಿಕೆ, ನೂರ ಎಂಭತ್ತು ವಿಧದ ಹಣ್ಣುಗಳು, ಎಂಭತ್ತೈದು ಜಾತಿಯ ಸೊಪ್ಪುಗಳು, ಅರುವತ್ತು ಸುವಾಸನಾ ಸಸ್ಯಗಳು, ಇಪ್ಪತ್ತೈದು ಜಾತಿಯ ಹುಲ್ಲುಗಳು, ನೂರು ಜಾತಿಯ ಕಳ್ಳಿಗಳು. ಅಲ್ಲದೆ ಹೆಸರು ಗೊತ್ತಿಲ್ಲದ ಅಲಂಕಾರಿಕ ಗಿಡಗಳು, ಬಳ್ಳಿಗಳು, ಕಳೆಗಳು ಸಾವಿರಕ್ಕೂ ಮಿಕ್ಕಿ..!
'ನನ್ನ ತೋಟದಲ್ಲಿ ಎಲ್ಲೆಲ್ಲೂ ಹಣವೇ ಬಿದ್ದಿರುತ್ತದೆ' ಎನ್ನುತ್ತಾರೆ. ಫಕ್ಕನೆ ಕೇಳುವಾಗ ಒಗಟಾಗಿ ಕಾಣುತ್ತದೆ. ಅಲ್ಲಿನ ಒಂದೊಂದು ಹಣ್ಣು, ಚಿಗುರು ಪ್ರಕೃತಿ ನೀಡಿದ ಹಣ. ಪೃಕೃತಿ ನೀಡುವ ಕೃತಜ್ಞತೆ. ವರ್ಷಪೂರ್ತಿ ಒಂದಲ್ಲ ಒಂದು ಉತ್ಪನ್ನದ ಕೊಯಿಲು. ಅವನ್ನು ನಗದೀಕರಿಸುವ ಕೈತುಂಬಾ ಕೆಲಸಗಳು. ಜತೆಗೆ ಹಟ್ಟಿ, ಬೋನ್ಸಾಯಿ, ಗಿಡಗಳು.. ಹೀಗೆ ದಿನವಿಡೀ ದುಡಿತ. ಹೀಗಿರುತ್ತಾ ನಗರದ ಬೇರೆ ಆಲೋಚನೆಗಳು ಹೇಗೆ ಬಂದಾವು? ದಿನವಿಡೀ 'ಶೆಡ್ಯೂಲ್' ಆದಾಗ ಮನಸ್ಸು ಗೆಜಲುವುದಿಲ್ಲ! ವಿಕಾರ ನುಸುಳುವುದಿಲ್ಲ. ಇಂದಿನ ಕೆಲಸ ಮಾಡುತ್ತಿದ್ದಂತೆ, ನಾಳೆಯ ಕೆಲಸಗಳ ಪಟ್ಟಿ ಮನಃಪಟಲದಲ್ಲಿ ಸಿದ್ಧವಾಗಿರುತ್ತದೆ.
ಕೃಷಿ ಯಶಸ್ಸಾದರೆ ಸಾಲದಲ್ವಾ, ಅಡುಗೆ ಮನೆಯೂ ಸಂಪನ್ನವಾಗಬೇಕು. ಆಗಲೇ ಆರೋಗ್ಯ, ಭಾಗ್ಯ. 'ನನ್ನ ತೋಟದ ಎಲ್ಲಾ ಚಿಗುರು, ಕಾಯಿಗಳು ಅಡುಗೆ ಮನೆಗೆ ಹೋಗುತ್ತದೆ. ಬಳಕೆಯ ಸಾಧ್ಯಾಸಾಧ್ಯತೆಗೆ ಇದೊಂದು ಪ್ರಾಕ್ಟಿಕಲ್ ಪ್ರಯೋಗಾಲಯ,' ಮಡದಿ ನಿರ್ಮಲ ಎ.ಪಿ.ಸಿ.ಯವರತ್ತ ಕಣ್ಣುಮಿಟುಕಿಸುತ್ತಾ ಚಂದ್ರಶೇಖರ್ ಹೇಳುತ್ತಾರೆ, ತಿಂದು ನೋಡಿದರೆ ತಾನೆ; ತಿನ್ನಲು ಆಗುತ್ತೋ, ಇಲ್ವೋ ಅಂತ ಗೊತ್ತಾಗೋದು? ದನಗಳು ತಿಂದರೆ ಏನೂ ಆಗುವುದಿಲ್ಲ ಅಂತಾದರೆ ಮನುಷ್ಯರು ಧಾರಾಳ ತಿನ್ನಬಹುದು. ಶೇ.99ರಷ್ಟು ಬಾಯಿಗೆ ಇಷ್ಟವಾದರೆ ಅದು ಆಹಾರಕ್ಕೆ ಓಕೆ. ಪಕ್ಷಿಗಳಿಗೆ ಮೂಸಿದ ತಕ್ಷಣ ಗೊತ್ತಾಗಿ ಬಿಡುವುದಿಲ್ವಾ. ರುಚಿ ಇಲ್ಲದ್ದನ್ನು ರುಚಿ ಬರುವಂತೆ ಮಾಡಿ ಸೇವಿಸುತ್ತೇವೆ. ಹಾಗಾಗಿ ಹೊಸತನ್ನು ಹುಡುಕಿ ತಿನ್ನಲು ಕಲಿಯಬೇಕು. ಆಹಾರ ಸಂಸ್ಕೃತಿಯ ಮೂಲ ಆಸರೆಯಾಗಿದ್ದ ಅಡುಗೆ ಮನೆಯು ಯಾಂತ್ರಿಕ ಬದುಕಿನಲ್ಲಿ ಕಳೆದುಹೋಗುತ್ತಿದೆ!
ಎಪಿಸಿಯವರ ಆಹಾರ ಸಂಶೋಧನೆಗಳ ಫಲವಾಗಿ ಅವರ ಅಡುಗೆ ಮನೆಯಲ್ಲಿ ಇನ್ನೂರಕ್ಕೂ ಮಿಕ್ಕಿ ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧವಾಗುತ್ತದೆ. ತೋಟದ ಉತ್ಪನ್ನಗಳು ಹೊಸ ಹೊಸ ಅವತಾರದೊಂದಿಗೆ ಗ್ರಾಹಕರ ಕೈಗೆ 'ತಾಜಾ'ವಾಗಿ ಸಿಕ್ಕಿದಾಗ ಯಾರಿಗೆ ಬೇಡ ಹೇಳಿ? ಗಂಡ-ಹೆಂಡಿರ ಸತತ ದುಡಿಮೆ. ತೋಟ ಭೇಟಿಗೆ ಬಂದವರಿಗೆ ಖರೀದಿಗೆ ಅವಕಾಶವಾಗಲಿ ಎಂಬುದಕ್ಕಾಗಿ ಮನೆಯಲ್ಲೇ ಔಟ್ಲೆಟ್. ಬಹ್ವಂಶ ಮೈಸೂರು ಪೇಟೆಯಲ್ಲಿರುವ 'ನೇಸರ' ಸಾವಯವ ಮಳಿಗೆಗೆ ರವಾನೆ.
ಸಾವಯವ ಕೃಷಿಯು ಉಪದೇಶ, ಭಾಷಣದಿಂದ ಬರುವಂತಹುದಲ್ಲ. ಬಹುತೇಕರು ರಾಸಾಯನಿಕ ಕೃಷಿಯಿಂದ ರೋಸಿಯೇ ಸಾವಯವವನ್ನು ನೆಚ್ಚಿಕೊಂಡಿದ್ದಾರೆ. ನನ್ನ ತೋಟದಲ್ಲಿ ಇಳುವರಿಗಿಂತ, ಜ್ಞಾನಕ್ಕೆ ಪ್ರಾಧಾನ್ಯತೆ. ಇದು 'ನಾಲೇಜ್ ಬ್ಯಾಂಕ್'. ಇದನ್ನು ಗಳಿಸಲು ಮಾನಸಿಕ ದೃಢತೆ ಬೇಕು. ಸಾವಯವದ ಕುರಿತು ಅಧಿಕೃತ ಮತ್ತು ಗಟ್ಟಿ ಅನುಭವಗಳ ಪರಿಣಾಮವಾಗಿ ಕೆಲವೊಂದು ಸಲ ಎಪಿಸಿ ನಿಷ್ಠುರವಾಗಿ ಮಾತನಾಡಿದಂತೆ ಭಾಸವಾಗುತ್ತದೆ.
ತನ್ನ ಕೃಷಿಯನ್ನು ಅವರೇ ಒಂದೆಡೆ ಹೇಳುತ್ತಾರೆ - ಇಂದ್ರಪ್ರಸ್ಥವೆಂಬ ನಮ್ಮ ತೋಟದಲ್ಲಿ ಏನಾದರೊಂದಷ್ಟು ಭಿನ್ನ ಸಾಧನೆ ಆಗಿದ್ದರೆ, ಇತರರಿಗೆ ಹೇಳಬಹುದಾದ ಒಂದಷ್ಟು ವಿಷಯಗಳು ನನಗೆ ತಿಳಿದಿದ್ದರೆ, ಅದಕ್ಕೆ ಅತ್ಯಂತ ಪ್ರಮುಖ ಕಾರಣ - ನಮಗೆ ಇರುವುದರೊಂದೇ ಮನೆ, ಅದುವೇ ನಮ್ಮ ತೋಟದ ಮನೆ. ಮನವೆಲ್ಲೋ? ಮನೆಯೆಲ್ಲೋ? ಇರುವವರಿಗೆ ಎಲ್ಲಿದ್ದಿತು ನೆಮ್ಮದಿ ಸುಮ್ಮನೆ?! ಇಷ್ಟೆಲ್ಲಾ ಸಂಪನ್ಮೂಲವಿದ್ದ ಇಂದ್ರಪ್ರಸ್ಥದ ಆದಾಯ ಎಷ್ಟು? 'ಸಾಲಸೋಲಗಳಿಲ್ಲದೆ ಜೀವನ ನಡೆಸುವಷ್ಟು'!
ತೀರ್ಥಹಳ್ಳಿಯ ಕುರುವಳ್ಳಿ ಪುರುಷೋತ್ತಮ ರಾವ್ ಪ್ರತಿಷ್ಠಾನವು ಪ್ರತೀ ವರುಷ ಅಪ್ಪಟ ಸಾವಯವ ಕೃಷಿಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಸಾವಯವವನ್ನು ಬದುಕಾಗಿ ಸ್ವೀಕರಿಸಿ, ಬರಡು ಬಯಲಲಿ ಹಸುರು ಭವನ ರೂಪಿಸಿದ ಮರಿಕೆಯ ಎ.ಪಿ.ತಿಮ್ಮಪ್ಪಯ್ಯ ಕುಟುಂಬಕ್ಕೆ (ಎ.ಪಿ.ಚಂದ್ರಶೇಖರ್, ಎ.ಪಿ.ಸದಾಶಿವ) ಈ ಸಾಲಿನ 'ಪುರುಷೋತ್ರಮ ಸಂಮಾನ್'. ಎಪ್ರಿಲ್ 8, 2012ರಂದು ತೀರ್ಥಹಳ್ಳಿಯಲ್ಲಿ ಪ್ರಶಸ್ತಿ ಪ್ರದಾನ-ಸಂವಾದ.
0 comments:
Post a Comment