ಜುಲೈ ಹಸಿರಿನ ತಿಂಗಳು. ಮಳೆಯ ಚುಮುಚುಮು. ಬೇಸಿಗೆಯ ಬೇಗೆಗೆ ಮುರುಟಿದ ಸಸ್ಯ ಸಂಪತ್ತುಗಳಿಗೆ ಮರುಜೀವ. ಸುಪ್ತವಾಗಿ ಮಲಗಿದ್ದ ಬೀಜಗಳಿಗೆ ಮೊಳಕೆಯ ಅವಸರ. ಮನೆಯೊಳಗೆ ಗಿಡಗಳ ಮಾತು. ಮನದೊಳಗೆ ಹಸಿರಿನ ತುಮುಲ. ಹೊಸ ಗಿಡಗಳ ಸ್ವಾಗತಕ್ಕೆ ಹಿತ್ತಿಲು ಸಿದ್ಧವಾಗುತ್ತದೆ. ಆಯವ್ಯಯ ರೂಪುಗೊಳ್ಳುತ್ತದೆ.
ಜುಲೈ ತಿಂಗಳು ವನಮಹೋತ್ಸವ ಪರ್ವ. ಮಹಾಭಾರತದಲ್ಲಾದರೆ ಒಂದು ಪರ್ವದ ಬಳಿಕ ಇನ್ನೊಂದು. ಇಲ್ಲಿ ಮಾತ್ರ ಒಂದೇ ಪರ್ವ! ಇಲಾಖೆಗಳಲ್ಲಿ ಗಿಡಗಳ ಹಂಚೋಣ ಭರಾಟೆ. ಕಾಡುಮರಗಳು ನಾಡೊಳಗೆ ನುಸುಳುವ ಧಾವಂತ. ಅಕೇಶಿಯಾ, ಸಾಗುವಾನಿ, ಮಾಗುವಾನಿಗಳ ದಂಡು. ಸರತಿಯಲ್ಲಿ ಮಾವು, ಹಲಸುಗಳು. ಅವುಗಳ ಬೆನ್ನಿಗೆ ದಾಸವಾಳ, ಗುಲಾಬಿಗಳು.
ಶಾಲೆಗಳಲ್ಲಿ ಹಸಿರಿನ ಪಾಠ. ವನಮಹೋತ್ಸವದ ಕಾರ್ಯಹೂರಣಗಳ ಅನಾವರಣ. ಗಣಿತ, ವಿಜ್ಞಾನದೊಳಗೆ ಹುದುಗಿದ್ದ ಮನಸ್ಸುಗಳನ್ನು ಹಸಿರು ಅಪ್ಪಿಕೊಳ್ಳುವತ್ತ ಒತ್ತಡ. ಒಪ್ಪಿಸುವ ಪ್ರಯತ್ನಗಳಿಗೆ ಆದೇಶದ ಕುಮ್ಮಕ್ಕು! ಶಾಲಾವರಣ ಪೂರ್ತಿ ನುಣುಪಾಗಿರುವುದರಿಂದ ನಾಲ್ಕು ಗೋಡೆಗಳ ಮಧ್ಯೆ ಪರಿಸರದ ಪಾಠ, ಸ್ಪರ್ಧೆಗಳು, ಬಹುಮಾನಗಳು, ಪುರಸ್ಕಾರಗಳು. ಅಬ್ಬಬ್ಬಾ.. ಒಂದೇ ದಿನದಲ್ಲಿ ಧುಮ್ಮಿಕ್ಕುವ ಹಸಿರ ಪ್ರೀತಿ!
ವಾಹಿನಿಯೊಂದರಲ್ಲಿ ರಸಪ್ರಶ್ನೆ ಕಾರ್ಯಕ್ರಮ. ಸೂಟು, ಬೂಟು, ಕತ್ತುಪಟ್ಟಿ ಧರಿಸಿದ 'ಶಿಸ್ತಿನ' ವಿದ್ಯಾರ್ಥಿಗಳು. ನಿರ್ವಾಹಕರು ತುಳಸಿಯ ಕುಡಿಯೊಂದನ್ನು ತೋರಿಸುತ್ತಾ, 'ಇದು ಯಾವ ಗಿಡದ ಕುಡಿ' ಎಂದರು. ನಾಲ್ಕು ಆಯ್ಕೆಗಳಿದ್ದುವು. ಮುಖಮುಖ ನೋಡಿಕೊಂಡರೂ ಹೊಳೆಯದ ಉತ್ತರ. ಮನೆಯ ಮುಂದಿರುವ ತುಳಸಿಯನ್ನು (ಇದ್ದರೆ?) ಗುರುತಿಸಲಾಗದ ಅಸಹಾಯಕತೆ. ನಿರ್ವಾಹಕರೇ ಉತ್ತರ ಹೇಳಿದಾಗ ವಿದ್ಯಾರ್ಥಿಗಳು ಸುಸ್ತು. ಈ ಹಿನ್ನೆಲೆಯಲ್ಲಿ ದಾರಿತಪ್ಪುತ್ತಿರುವ ಶೈಕ್ಷಣಿಕ ಹೂರಣಗಳ ಬಗ್ಗೆ ಮಾತನಾಡುವಾಗ 'ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದಿರುವುದು ಬೌದ್ಧಿಕ ಮಟ್ಟಕ್ಕೆ ಮಾನದಂಡವಲ್ಲ' ಎಂಬ ಅಡ್ಡಮಾತುಗಳ ಸಮರ್ಥನೆ.
ರಸಪ್ರಶ್ನೆಗಳಲ್ಲಿ ಹಳ್ಳಿ, ಪುರಾಣ, ಪರಿಸರದ ವಿಚಾರಗಳು ಬಂದಾಗ ವಿದ್ಯಾರ್ಥಿಗಳ ಹಣೆಯಲ್ಲಿ ಯಾಕೆ ಬೆವರಿಳಿಯುತ್ತದೆ? 'ತನಗೆ ಗೊತ್ತಿಲ್ಲ, ಹಿರಿಯರು ಹೇಳಿಲ್ಲ, ಪಠ್ಯದಲ್ಲಿ ಇಲ್ಲವೇ ಇಲ್ಲ'! ನಮ್ಮನ್ನು ಬೌದ್ಧಿಕವಾಗಿ ಎತ್ತರಿಸುತ್ತವೆ, ಬದುಕನ್ನು ಅಪ್ಡೇಡ್ ಮಾಡುತ್ತದೆ ಎಂದು ನಂಬಿರುವ 'ವಾಹಿನಿ'ಗಳಲ್ಲಿ ಕೊಲೆ, ದರೋಡೆ, ಎತ್ತಂಗಡಿ, ವಿಚ್ಛೇದನ, ಕೊಳಕು ರಾಜಕೀಯಗಳ ನೇರ ಪಾಠ! 'ಪಠ್ಯದಲ್ಲಿ ಇದ್ದ ಮಾತ್ರಕ್ಕೆ ಹಸಿರು ಪ್ರೀತಿ ಬರುತ್ತದಾ' ಎನ್ನುತ್ತಾ ಮಕ್ಕಳೆದುರೇ ವಿಚಾರಗಳನ್ನು ಹೊಸಕಿಹಾಕುತ್ತೇವೆ.
ಪರಿಸರ, ವೇದಿಕೆಯ ಸರಕಲ್ಲ
ಶಾಲೆಗಳಲ್ಲಿ ಪರಿಸರ ಸಂಘಗಳಿವೆ, ಪರಿಸರ ಕ್ಲಬ್ಗಳಿವೆ. ಉದ್ಘಾಟನೆಯೊಂದಿಗೆ ಸಮಾರೋಪದ ಬೀಜವೂ ನುಸುಳಿರುತ್ತದೆ. ಶಾಲಾರಂಭದಲ್ಲಿ ಮರುಜೀವಗೊಂಡು ಅಲ್ಲಿಂದಿಲ್ಲಿಂದ ಹೆಕ್ಕಿ ಪೋಣಿಸಿದ ವಿಚಾರಗಳನ್ನು ಪ್ರಬಂಧದ ಮೂಲಕವೋ, ಭಾಷಣಗಳ ಮೂಲಕವೋ ಪ್ರಸ್ತುತ ಪಡಿಸಿದರೆ ಮುಗಿಯಿತು. ಪತ್ರಿಕೆಗಳಲ್ಲಿ ವರದಿ ಪ್ರಕಟವಾದಲ್ಲಿಗೆ ಪರಿಸರಾಕ್ಷರ ಅನಾವರಣ! ಎಷ್ಟು ಕ್ಲಬ್ಗಳು, ಸಂಘಗಳು ಮಣ್ಣನ್ನು ಕೈಗೆ ಮೆತ್ತಿಸಿಕೊಂಡಿವೆ. ಇಲ್ಲವೆಂದಲ್ಲ, ಅಪರೂಪಕ್ಕೆ ಬೆರಳೆಣಿಕೆಯ ಶಾಲೆಗಳು ಸದ್ದಿಲ್ಲದೆ ಕೆಲಸ ಮಾಡುತ್ತಿವೆ.
ವಾರಕ್ಕೊಂದು ಅವಧಿಯಲ್ಲಾದರೂ ಪರಿಸರದ ನೇರ ಪಾಠ ಸಿಗುತ್ತಿದ್ದರೆ ತುಳಸಿಯನ್ನು ಗುರುತಿಸಲಾಗದ 'ಬೌದ್ಧಿಕ ದಾರಿದ್ರ್ಯ' ಎದುರಾಗದು. ವಿದ್ಯಾರ್ಥಿಗಳ ಪಾಲಿಗೆ ಪರಿಸರ, ಹಸಿರಿನ ಕುರಿತಾದ ವಿಚಾರಗಳು ವೇದಿಕೆಯ ಸರಕು. ಸ್ಪರ್ಧೆಗಳಿಗೆ ಉರುಹೊಡೆವ ಉಪಾಧಿ. ಗಿಡಗಳನ್ನು ಗುರುತಿಸುವ, ಕೃಷಿಯ ಕನಿಷ್ಠ ಜ್ಞಾನವನ್ನು ನೀಡುವ, ಹಣ್ಣುಗಳು-ಕಾಯಿಗಳನ್ನು ನೋಡುವ-ತಿನ್ನುವ ಪರಿಪಾಠ ಶಾಲಾವಧಿಯಲ್ಲಿ ರೂಪುಗೊಂಡರೆ 'ಪ್ರೌಢ'ರಾದಾಗ ಒದ್ದಾಡಬೇಕಾಗಿಲ್ಲ.
ಈಚೆಗೆ ದೈತೋಟದ ಜಯಕ್ಕನಲ್ಲಿಗೆ ಹೋಗಿದ್ದೆ. ಅವರು ಹಟ್ಟಿಯಲ್ಲಿ ಹಾಲು ಹಿಂಡುತ್ತಿದ್ದರು. ಅಷ್ಟರಲ್ಲಿ ರಾಜಧಾನಿಯಿಂದ ದಂಪತಿ ಕುಟುಂಬ ಆಗಮಿಸಿತ್ತು. ಅದರಲ್ಲೊಬ್ಬ ಹತ್ತರ ವಿದ್ಯಾರ್ಥಿ, ಮತ್ತೊಬ್ಬನಿಗೆ ಪದವೀಧರನಾಗಲು ಇನ್ನೊಂದೇ ವರ್ಷ. 'ನಾನು ಹಟ್ಟಿಯಲ್ಲಿದ್ದೇನೆ. ಕುಳಿತುಕೊಳ್ಳಿ' ಜಯಕ್ಕ ಉವಾಚ. 'ನೋಡಮ್ಮ, ಅವರು ಪ್ರಾಣಿಯೊಂದಿಗಿದ್ದಾರೆ. ಅವರಿಗೆ ಭಯವಾಗುವುದಿಲ್ವಾ' ಎನ್ನಬೇಕೆ. ಜಯಕ್ಕ ಹಟ್ಟಿಯಿಂದ ಹಾಲಿನೊಂದಿಗೆ ಹೊರಬಂದರು. 'ಹಸು ಹಾಲು ಕೊಡುತ್ತಾ' ಎಂದ ಇನ್ನೊಬ್ಬ! ಜಯಕ್ಕ ದಂಗು. ಪ್ಯಾಕೆಟ್ ಹಾಲು ಕುಡಿದು ಬೆಳೆದ ಮಕ್ಕಳಿಗೆ 'ಹಸು ಹಾಲು ಕೊಡುತ್ತದೆ' ಎಂದು ಅಮ್ಮ ಹೇಳಿಲ್ಲ. ಅಮ್ಮನಿಗೆ ಗೊತ್ತಿದ್ದರೆ ಓಕೆ, ಇಲ್ಲದಿದ್ದರೆ?
'ಪಠ್ಯಪುಸ್ತಕ ಹೀಗಿರಬೇಕು' ಎಂದು ದಿನಕ್ಕೊಂದು ಹೇಳಿಕೆಯಡಿ ಬೊಬ್ಬಿಡುವ 'ಅಕ್ಷರ ಪ್ರೇಮಿ'ಗಳಿಗೆ ಪರಿಸರ ಕಾಣುತ್ತಿಲ. ಅವರ ಪಾಲಿಗೆ ಹಸಿರು ಮಸುಕು. 'ಹಸಿರಿನ ಪಾಠ ಪಠ್ಯದಲ್ಲಿ ಸೇರಲೇ ಬೇಕು' ಎಂದು ಒತ್ತಾಯಿಸುವ, ಒತ್ತಾಯಿಸಿದ ಮನಸ್ಸುಗಳು ನಿಷ್ಕ್ರಿಯವಾಗಿವೆ? ಎಲ್ಲದಕ್ಕೂ ರಾಜಕಾರಣವನ್ನು ತುರುಕಿ, ಗೊಂದಲವಾದಾಗ ಸಂತೋಷಪಡುವ 'ಪತನಸುಖಿ'ಗಳ ಸಾಮ್ರಾಜ್ಯದಲ್ಲಿ ಅಕ್ಷರಗಳಿಗೆ, ಹಸಿರಿಗೆ ಎಲ್ಲಿದೆ ಸ್ಥಾನ-ಮಾನ? ಅಕ್ಷರಸ್ಥರಾಗಿದ್ದೂ ಅನಕ್ಷರಸ್ಥರಂತೆ ವರ್ತಿಸುವ ನಾಡಿನ ದೊರೆಗಳಿಂದ ಏನನ್ನು ನಿರೀಕ್ಷಿಸಬಹುದು? ವಿದ್ಯಾರ್ಥಿಗಳಲ್ಲಿ ಭವಿಷ್ಯದ ಕನಸುಗಳನ್ನು ಬೆಳೆಸುವ ಕಾಯಕ ಅವರಿಗೆ ಬೇಕಾಗಿಲ್ಲ. ನೆನಪಿಡಿ. ಹಸುವಿನ ಪರಿಚಯವಿಲ್ಲದ, ಹಸು ನೀಡುವ ಹಾಲಿನ ಗುರುತಿಲ್ಲದ, ತುಳಸಿ ಗೊತ್ತಿಲ್ಲದ ಅನೇಕ ಹಸಿರು ಮನಸ್ಸುಗಳು ಹಸುರ ಪಾಠಕ್ಕೆ ಕಾಯುತ್ತಿವೆ.
ಹುಡುಕಾಟದ ಹುಡುಗಾಟ!
ಇನ್ನು ಇಲಾಖೆಗಳತ್ತ ಮುಖಮಾಡಿದರೆ ರೋಚಕ ಅನುಭವ. ಜುಲೈ ಹತ್ತಿರವಾದಾಗ ಗಿಡಗಳ ಹುಟುಕಾಟ. ಹತ್ತಿಪ್ಪತ್ತು ಗಿಡಗಳನ್ನು ನೀಡಿ 'ಕೃಷಿಕ ವಲಯಕ್ಕೆ ದೊಡ್ಡ ಕೊಡುಗೆ ನೀಡಿದ್ದೇವೆ' ಎಂದು ಭಾಷಣ ಬಿಗಿಯುವವರ ಹಸಿರು ಬಿಗಿತದ 'ಶುಚಿಮುಖ' ಶುಚಿತ್ವವಾಗುವುದು ಹೇಗೆ? ಕೃಷಿಕನು ಸದ್ದಿಲ್ಲದೆ ತನ್ನ ಜ್ಞಾನದ ನಿಲುಕಿನಲ್ಲಿ ಗುಡ್ಡದೆಲ್ಲೆಡೆ ಗಿಡಗಳನ್ನು ನೆಟ್ಟು ಪೋಶಿಸುತ್ತಾನೆ. ಅದರ ಫಲವನ್ನು ಹೆಂಡತಿ, ಮಕ್ಕಳ ಜತೆ ಸವಿಯುತ್ತಾ ಆನಂದವನ್ನು ಅನುಭವಿಸುತ್ತಿರುವಾಗ 'ವೇದಿಕೆಯ ಭಾಷಣ'ಗಳು ಢಾಳಾಗಿ ಕಾಣುತ್ತದೆ.
ಕಳೆದ ವರುಷ ವನಮಹೋತ್ಸವದಂದು ನೆಟ್ಟ ಹೊಂಡಕ್ಕೆ ಪುನಃ ಈ ವರುಷ ಗಿಡ ನೆಡುವ ದೌರ್ಭಾಗ್ಯ! ಅದೇ ಜಾಗದಲ್ಲಿ ಈ ವರುಷವೂ ಫೋಟೋ ಕ್ಲಿಕ್ಕಿಸಬೇಕಾದ ಸ್ಥಿತಿ. ಗಿಡ ನೆಡುವ ವ್ಯಕ್ತಿ ಮತ್ತು ಗಿಡಗಳು ಮಾತ್ರ ಬದಲಾಗಿರುತ್ತದೆ. ಅಧಿಕಾರಿಗಳು, ನೆಲ, ಹೊಂಡ ಎಲ್ಲವೂ ಹಳೆಯದೆ. ಮರುದಿವಸ ಪತ್ರಿಕೆಗಳಲ್ಲಿ ಫೋಟೋ ಬಂದರೆ ಆಯಿತು, ನಿಸರ್ಗ ಹಸಿರುಡುಗೆ ತೊಟ್ಟು ನಗುತ್ತಿರುತ್ತದೆ! ನೆಟ್ಟ ಗಿಡದ ಪಾಲನೆ, ಪೋಷಣೆಗಳು ಕಡತದೊಳಗೆ ಬೆಚ್ಚಗೆ ಮಲಗಿರುತ್ತದೆ. ಅಪರೂಪಕ್ಕೆಂಬಂತೆ ನೆಟ್ಟ ಗಿಡಗಳನ್ನು ಪೋಶಿಸುವ, ಜೋಪಾನವಾಗಿಡುವ, 'ಗಿಡಗಳನ್ನು ನೆಡಿ' ಎಂಬ ಅರಿವನ್ನು ಮೂಡಿಸುವ ಮನಸ್ಸುಗಳು ಇಲಾಖೆಯಲ್ಲಿರುವುದರಿಂದ ಇಷ್ಟಾದರೂ 'ಹಸುರು' ನಳನಳಿಸುತ್ತಿವೆ.
ಜುಲೈ ತಿಂಗಳಲ್ಲಿ ನರ್ಸರಿಗಳು (ಗಿಡಗಳ ಅಂಗಡಿ) ಬಾಗಿಲು ತೆಗೆಯುತ್ತವೆ. ದೂರದೂರಿನಿಂದ ಗಿಡಗಳನ್ನು ತರಿಸುತ್ತವೆ. ಗಿಡಗಳ ಜಾತಕವನ್ನು ಪಟಪಟನೆ ಉದುರಿಸುವ ಯಜಮಾನನ ಕೈಗೆ ನೂರೋ ಇನ್ನೂರೋ ತೆತ್ತು ಗಿಡಗಳನ್ನು ತರುತ್ತೇವೆ. ನೆಡುತ್ತೇವೆ. ಮರೆತುಬಿಡುತ್ತೇವೆ. ಮುಂದಿನ ಜುಲೈ ಬಂದಾಗ ಮತ್ತೆ ನರ್ಸರಿ ನೆನಪಾಗುತ್ತದೆ. ಮತ್ತದೇ ಹುಡುಕಾಟದ ಹುಡುಗಾಟ!
ಗಿಡಗಳನ್ನು ನೆಡುವ ಪ್ರಕ್ರಿಯೆ ಮನೆಯಿಂದ ಆರಂಭವಾಗಬೇಕು. ಅದಕ್ಕಾಗಿ ಮನ ಸಜ್ಜಾಗಬೇಕು. ಪಕ್ಕದ ಮನೆಯವನ ಮುಂದೆ ಸುಭಗನಾಗುವುದಕ್ಕೆ ನಾಲ್ಕಾರು ಗಿಡಗಳನ್ನು ತಂದು ನೆಟ್ಟಲ್ಲಿಗೆ ಹಸಿರು ಪ್ರೀತಿ ಅನಾವರಣವಾಗದು. ನೆಡುವ ಒಂದೊಂದು ಗಿಡದ ಮುಂದೆ 'ನಾಳೆಗಳು' ಕಣ್ಣೆದುರಿಗೆ ಬಂದು ಬದುಕಿಗದು ಪಾಠವಾಗದಿದ್ದರೆ ಮುಂದಿನ ವರುಷ ಮತ್ತೆ ಜುಲೈ ಬಂದು ಬಿಡುತ್ತದೆ. ತಂದ ಬೀಜಗಳು ಕಿಟಕಿಯ ಸಂದಿನಿಂದ ಭೂಮಿಗೆ ಬೀಳಲಿ.
ಈಚೆಗೆ ಕರಾವಳಿಗೆ ಬಂದ ಸಾಲುಮರದ ತಿಮ್ಮಕ್ಕ 'ಗಿಡಗಳನ್ನು ಮಕ್ಕಳಂತೆ ಪೋಷಿಸಿ' ಎಂದು ಹೇಳಿದ ಕಿವಿಮಾತಿನಲ್ಲಿ ಪಾಠವಿಲ್ವಾ. ಯಾವುದೇ ಅಪೇಕ್ಷೆಯಿಲ್ಲದೆ ಸಾಲುಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ ಪ್ರಶಸ್ತಿಗಾಗಿ ಹಪಹಪಿಸಲಿಲ್ಲ. ತನಗೊಂದು ಸೈಟ್ ಕೊಡಿ ಎಂದು ದುಂಬಾಲು ಬಿದ್ದಿಲ್ಲ. 'ತನ್ನೂರಿಗೊಂದು ಹೆರಿಗೆ ಆಸ್ಪತ್ರೆ ಮಾಡಿಸಿಕೊಡಿ' ಎಂದಿರುವುದು ಗ್ರೇಟ್ ಅಲ್ವಾ. ಇಂತಹ ಮನಸ್ಸುಗಳು ರೂಪುಗೊಳ್ಳಬೇಕಾದುದು ಭವಿಷ್ಯ ಭಾರತದ ಪ್ರಥಮಾವಶ್ಯಕತೆ.
ಕೃಷಿಕ ಗೊರಗೋಡಿ ಶ್ಯಾಮ ಭಟ್ ಸಮಾರಂಭವೊಂದರಲ್ಲಿ ಸಿಕ್ಕಿ ಹೇಳಿದ್ದೇನು ಗೊತ್ತೇ, 'ನನ್ನಲ್ಲಿಗೆ ಬರುವ ಚಾರಣಿಗರ ಕೈಗೆ ಒಂದಷ್ಟು ಬೀಜಗಳನ್ನು ಕೊಡುತ್ತೇನೆ. ಇದನ್ನು ಕಾಡಿನಲ್ಲಿ ರಾಚಿಬಿಡಿ ಎಂದು ವಿನಂತಿಸುತ್ತೇನೆ'. ಕಣ್ಣಿಗೆ ಫಕ್ಕನೆ ಕಾಣದ, ಸದ್ದು ಮಾಡದ ಇಂತಹ ಚಿಕ್ಕ ಚಿಕ್ಕ ಪ್ರಯತ್ನಗಳು ಪರಿಸರವನ್ನು ಉಳಿಸಲು ಸಹಕಾರಿ. ಇದೇ ಪ್ರಕೃತಿಗೆ ಕೊಡುವ ಕಾಣ್ಕೆ. ಹಸಿದ ಹಸಿರು ಮನಸ್ಸುಗಳಿಗೆ ಇಂತಹ ಪಾಠಗಳು ಬೇಕಾಗಿವೆ.
0 comments:
Post a Comment