Tuesday, July 17, 2012

ದೇವರನಾಡಿನ ದೇವಳವೊಂದರಲ್ಲಿ ಹಲಸಿನ ಹಣ್ಣಿಗೆ ಸ್ಥಾನ-ಮಾನ!

ಅದು ಹಳ್ಳಿ ದೇವಸ್ಥಾನ. ದೇವರಿಗಂದು ಹಲಸಿನ ಹಬ್ಬ! ಹಲಸಿನ ಹಣ್ಣಿನಿಂದ ಸಿದ್ಧಪಡಿಸಿದ  ಖಾದ್ಯ 'ಅಪ್ಪ'ದ ನೈವೇದ್ಯ. ಪೂಜೆಯ ಬಳಿಕ ಅಪ್ಪ ಪ್ರಸಾದ ವಿತರಣೆ. ಕಾಸರಗೋಡು (ಕೇರಳ) ಜಿಲ್ಲೆಯ ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ 'ಅಪ್ಪದ ಸೇವೆ'ಗೆ (ಹಲಸಿನ ಹಬ್ಬ) ಆರ್ಧ ಶತಮಾನಕ್ಕೂ ಮೀರಿದ ಇತಿಹಾಸ.

'ಅಪ್ಪ' ಎಂದರೇನು? ಇದೊಂದು ಸಿಹಿ ಖಾದ್ಯ. ಪ್ರಚಲಿತವಿರುವ ಸಿಹಿಖಾದ್ಯ 'ಮುಳುಕ'ದ ಸಹೋದರ. ಅಕ್ಕಿಹುಡಿ, ತೆಂಗಿನತುರಿ, ಬೆಲ್ಲದ ಮಿಶ್ರಣ.  ರುಚಿಗೆ ಏಲಕ್ಕಿ. ಚೂರುಚೂರಾಗಿ ಕೊಚ್ಚಿದ ಹಲಸಿನ ಸೊಳೆಗಳನ್ನು ಬೆರೆಸಿ, ಈ ಪಾಕವನ್ನು ತುಪ್ಪದಲ್ಲಿ ಕರಿದರೆ 'ಅಪ್ಪ' ರೆಡಿ. ಅಕ್ಕಿ ಹುಡಿಯ ಬದಲು ಬೆಳ್ತಿಗೆ ಅಕ್ಕಿಯನ್ನು ಬಳಸಿ ರುಬ್ಬಿದರೂ ಓಕೆ. ಅಪ್ಪವನ್ನು ತಯಾರಿಸಲೆಂದೇ ಗುಳಿಯಿರುವ ಚಿಕ್ಕ ಬಾಣಲೆ(ಉರುಳಿ)ಯಿದೆ. ಇದಕ್ಕೆ ತುಪ್ಪವನ್ನು ಸುರುವಿ, ಕುದಿಯುತ್ತಿರುವಾಗ ಸೌಟಿನಲ್ಲಿ ಗುಳಿ ತುಂಬುವಂತೆ ಪಾಕವನ್ನು ಸುರಿಯುತ್ತಾರೆ. ಕೇರಳ, ದಕ್ಷಿಣ ಕನ್ನಡದ ಬಹುತೇಕ ದೇವಸ್ಥಾನದಲ್ಲಿ 'ಅಪ್ಪ' ಮಾಡುವ ರೀತಿ ಇದಾದರೂ, ಏತಡ್ಕದಲ್ಲಿ ಮಾತ್ರ ವರುಷಕ್ಕೊಮ್ಮೆ ಹಲಸಿನ ಹಣ್ಣಿಗೆ ಮಾನ! 

ಜೂನ್ 15ರಿಂದ ಜುಲೈ 15ರೊಳಗೆ ಅನುಕೂಲಕರ ದಿವಸದಂದು ಹಬ್ಬ ನಡೆಯುತ್ತದೆ. ಹಲಸಿನ ಹಣ್ಣು ಲಭ್ಯವಾಗುವ ಸಮಯವಿದು. ಒಂದು ಕಾಲಘಟ್ಟದಲ್ಲಿ ಆಹಾರ ಭದ್ರತೆಯನ್ನು ನೀಡಿದ ಹಲಸಿಗೆ ಕೃತಜ್ಞತೆ ಸಲ್ಲಿಸಲು ಹಬ್ಬದ ವ್ಯವಸ್ಥೆ ಬಂದಿದೆಯೋ ಏನೋ? 'ಕಳೆದ ಎರಡು ವರುಷದಿಂದ ಬಾಯ್ಮಾತಿನ ಮತ್ತು ಮಾಧ್ಯಮ ಮೂಲಕ ಪ್ರಚಾರ ಪಡೆದಿರುವುದರಿಂದ ಈ ಬಾರಿ ಭಕ್ತರ ಸಂಖ್ಯೆ ಆಧಿಕ' ಎನ್ನುತ್ತಾರೆ, ದೇವಳದ ಮುಖ್ಯಸ್ಥ ಡಾ.ವೈ.ಸುಬ್ರಾಯ ಭಟ್. ಐದಾರು ಅಪ್ಪವನ್ನೊಳಗೊಂಡ ಪ್ಯಾಕೆಟಿಗೆ ಮೂವತ್ತು ರೂಪಾಯಿ.

'ದೇವಸ್ಥಾನಕ್ಕೆ ಬರುವಾಗ ಎಲ್ಲರೂ ಒಂದೊಂದು ಹಲಸಿನ ಹಣ್ಣನ್ನು ತರಬೇಕು' ಎಂಬ ಅಲಿಖಿತ ನಂಬುಗೆ ಇದ್ದರೂ, ಪ್ರಚಲಿತ ಸಮಸ್ಯೆಯಿಂದಾಗಿ ಆಗುತ್ತಿಲ್ಲ. ಮರವನ್ನು ಏರಿ ಹಣ್ಣನ್ನು ಕೊಯ್ಯುವ ಜಾಣ್ಮೆಯ ಕುಶಲಿಗರ ಸಂಖ್ಯೆ ಕಡಿಮೆಯಾಗುತ್ತದೆ. ಮರದಲ್ಲಿ ಹಣ್ಣು ಗೋಚರವಾದರೂ ಕೊಯ್ಯಲು ಅಸಹಾಯಕತೆ.  ಹಣ್ಣು ಲಭ್ಯವಾದರೂ ಸಾಗಾಟ ಸಮಸ್ಯೆ. ಈ ಹಿನ್ನೆಲೆಯಲ್ಲಿ ಮುಂದಿನ ವರುಷದಿಂದ ಹಲಸಿನ ಹಣ್ಣನ್ನು ತರುವ ಬದಲು, ಮನೆಯಲ್ಲೇ ಶುಚಿಯಾಗಿ ಸೊಳೆಯನ್ನು ಆಯ್ದು ತರುವಂತೆ ವಿನಂತಿಸಿದರೆ ಹೇಗೆ? ಎಂಬ ಚಿಂತನೆ ನಡೆಯುತ್ತಿದೆ.

'ಈ ರೀತಿ ಮಾಡಿದರೆ ಅಪ್ಪದ ಜತೆಯಲ್ಲಿ ಎಲ್ಲರಿಗೂ ಹಲಸಿನ ಸೊಳೆಯನ್ನು ಹಂಚಬಹುದು. ಇದರಿಂದಾಗಿ ಉತ್ತಮ ರುಚಿ. ಸ್ವಾದವಿರುವ ತಳಿಯನ್ನು ಆಯ್ಕೆ ಮಾಡಿ, ಅದನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ,' ದೇವಳಕ್ಕೆ ತೀರಾ ಹತ್ತಿರ ಸಂಬಂಧವಿರುವ ಚಂದ್ರಶೇಖರ ಏತಡ್ಕರ ದೂರದೃಷ್ಟಿ.

ಬೇರೆ ಬೇರೆ ಕಾರಣಗಳಿಂದಾಗಿ ಹಿತ್ತಿಲಿನಲ್ಲಿ ಕೊಳೆಯುವ ಹಲಸಿನ ಬಳಕೆ, ಸಂರಕ್ಷಣೆಯ ಅರಿವು ಮೂಡುತ್ತಿದೆ. ಏತಡ್ಕ ಸದಾಶಿವ ದೇವಾಲಯದ 'ಹಲಸಿನ ಹಬ್ಬ'ವು ಹಲಸನ್ನು ಉಳಿಸುವ, ಬಳಸುವ ಸಂದೇಶವನ್ನು ನೀಡುತ್ತದೆ. ಹಬ್ಬದಿಂದಾಗಿ ಊರಿನಲ್ಲಿ ಹಲಸಿನ ಕುರಿತು ಮರುಚಿಂತನೆ ನಡೆಯುತ್ತಿದೆ. ಕಳೆದ ಕಾಲದ ಕಥನದ ಮರುಓದು ಆರಂಭವಾಗುತ್ತದೆ.

ಪೊಳಲಿಯಲ್ಲಿ ಕಲ್ಲಂಗಡಿಗೆ ಸ್ಥಾನ. ಏತಡ್ಕದಲ್ಲಿ ಹಲಸಿನ ಹಣ್ಣಿಗೆ ಮಾನ. ಹೀಗೆ ಒಂದೊಂದು ಹಣ್ಣಿಗೆ ಧಾರ್ಮಿಕ ನಂಟು ಅಂಟಿಸಲ್ಪಟ್ಟರೆ ನಶಿಸುತ್ತಿರುವ ಹಣ್ಣುಗಳಿಗೆ ಉಳಿಗಾಲ. ನಾಡಹಣ್ಣುಗಳ ಜತೆಗೆ ಕಾಡುಹಣ್ಣುಗಳನ್ನು ಉಳಿಸುವುದು ಕಾಲದ ಆವಶ್ಯಕತೆ.

ಚಿತ್ರ, ಮಾಹಿತಿ : ಚಂದ್ರಶೇಖರ ಏತಡ್ಕ

0 comments:

Post a Comment