Friday, July 20, 2012

'ಮನೆಗೊಂದು ಚೀಲ - ಪ್ಲಾಸ್ಟಿಕ್ಕಿನಿಂದ ದೂರ'


"ಪ್ಲಾಸ್ಟಿಕ್ ಬ್ಯಾಗಿನಲ್ಲಿ ತರಕಾರಿ ಕೊಡೋದಿಲ್ಲ. ಮಣ್ಣಿನಲ್ಲಿ ಕರಗಬಹುದಾದ, ಆರೊಗ್ಯಕ್ಕೆ ಹಾನಿಯಾಗದ (ಬಯೋಡಿಗ್ರೇಡಬಲ್) ಬ್ಯಾಗ್ ಕೊಡ್ತೀನಿ. ಮೂರು ರೂಪಾಯಿ ಚಾರ್ಜ್. ಮುಂದಿನ ಸಾರಿ ಬರುವಾಗ ಕೈಚೀಲ ತಂದರೆ ಮಾತ್ರ ನನ್ನ ಅಂಗಡಿಯಲ್ಲಿ ತರಕಾರಿ ಸಿಗುತ್ತೆ, ಎನ್ನುತ್ತಾ ಪ್ಲಾಸ್ಟಿಕ್ ದುಷ್ಪರಿಣಾಮದ ವಿವರಗಳುಳ್ಳ ಕರಪತ್ರ ನೀಡುತ್ತಾರೆ, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ಮತ್ತು ತರಕಾರಿ ವ್ಯಾಪಾರಿ ನಾಗೇಶ್ ಕಾಮತ್.

          ಒಂಭತ್ತು ವರುಷಗಳಿಂದ ಕಾಮತರು 'ಪ್ಲಾಸ್ಟಿಕ್ ಘೋರ'ತೆಯತ್ತ ದನಿ ಎತ್ತುತ್ತಲೇ ಬಂದಿದ್ದಾರೆ. ಪರಿಣಾಮ, ಶೃಂಗೇರಿ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ನೋಡಲು ಅಪರೂಪ. ತರಕಾರಿಯೋ, ದಿನಸಿಯೋ ಒಯ್ಯಲು ಕೈಚೀಲ ತರುತ್ತಾರೆ. ಒಂದು ಸಾಬೂನು ಖರೀದಿಸಿ, 'ಕ್ಯಾರಿ ಬ್ಯಾಗ್ನಲ್ಲಿ ಹಾಕಿ ಕೊಡಿ' ಎನ್ನುವವರು ಸಿಗುವುದಿಲ್ಲ!

ನಾಗೇಶರು ವಾಕಿಂಗ್ಗೆ, ಶೃಂಗೇರಿ ಬೆಟ್ಟಕ್ಕೆ, ಹೊಳೆ ಸನಿಹದ ಪಾರ್ಕಿಗೆ ಹೋದಾಗಲೆಲ್ಲಾ ಬಿದ್ದಿರುವ ಪ್ಲಾಸ್ಟಿಕ್ಗಳನ್ನು ಹೆಕ್ಕುವುದು ಬದುಕಿನಂಗ. ರೋಟರಿ ಕ್ಲಬ್ನಲ್ಲಿ ಸಕ್ರಿಯ. ಒಂದು ಅವಧಿಯಲ್ಲಿ ಅಧ್ಯಕ್ಷರೂ ಆಗಿದ್ದರು. ಆರಂಭದಲ್ಲಿ ಕ್ಲಬ್ಬಿನ ಸಭೆಗಳಲ್ಲಿ, ಅಂಗಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ಪ್ಲಾಸ್ಟಿಕ್ ತೊಂದರೆಗಳ ಅರಿವು ಮೂಡಿಸುವ ಕೆಲಸ. ವರ್ಷವರ್ಷವೂ ಪುನರಾವರ್ತನೆ. ಪರಿಣಾಮ ಶೂನ್ಯ. 'ಇವೆಲ್ಲಾ ಥಿಯರಿಗಳಾಯಿತು. ಜನರು ಕೇಳಿ ಮರೆಯುತ್ತಾರಷ್ಟೇ. ಅವರಿಗೆ ಪ್ರಾಕ್ಟಿಕಲ್ ಬೇಕು. ಪ್ಲಾಸ್ಟಿಕ್ಕಿಗೆ ಪರ್ಯಾಯವಾಗಿ ಮಾದರಿಗಳನ್ನು ಕೊಡಬೇಕಿತ್ತು. ಅದು ಕಷ್ಟವಾಯಿತು' ಎನ್ನುತ್ತಾರೆ.

          2009-10ರಲ್ಲಿ ಶೃಂಗೇರಿ ಪಟ್ಟಣ ಪಂಚಾಯತಿನ ಅಧ್ಯಕ್ಷರಾದರು. ಪ್ಲಾಸ್ಟಿಕ್ ಆಂದೋಳನ ಹೊಸ ಹಾದಿ ಹಿಡಿಯಿತು. ಥಿಯರಿಗಳು ಮನಸ್ಸಿನಲ್ಲಿದ್ದರೂ ಅದಕ್ಕೆ ರೂಪು ಕೊಡುವ ಕೆಲಸ ವೇಗ ಪಡೆಯಿತು. ತಾಲೂಕಿನ ಒಂಭತ್ತು ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಬಯೋಡಿಗ್ರೇಡಬಲ್ ಬ್ಯಾಗನ್ನು ಉಚಿತವಾಗಿ ನೀಡಿದರೆ ಹೇಗೆ - ಎಂಬ ಯೋಚನೆ. ಯೋಜನೆ ಸಿದ್ಧವಾಯಿತು.

          ಪಂಚಾಯತ್ಗಳಲ್ಲಿ ಸಭೆ. ಯೋಜನೆಯ ಪ್ರಸ್ತುತಿ. ಉಚಿತವಾಗಿ ಚೀಲಗಳ ವಿತರಣೆ. 'ಇನ್ನು ಮುಂದೆ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸಬೇಡಿ' ಎಂಬ ಸಂದೇಶ. ಜತೆಗೆ ಪ್ಲಾಸ್ಟಿಕ್ ದುಷ್ಪರಿಣಾಮಗಳ ಮಾಹಿತಿಪತ್ರ. ಬಹುತೇಕ ಮನೆಯವರು ಯೋಜನೆಯನ್ನು ಸ್ವೀಕರಿಸಿದರು, ಅನುಷ್ಠಾನ ಮಾಡಿದರು. ಅಂಗಡಿಗೆ, ಸಂತೆಗೆ ಬರುವಾಗಲೆಲ್ಲಾ ಪಂಚಾಯತ್ ನೀಡಿದ ಚೀಲಗಳು, ಬಟ್ಟೆಚೀಲಗಳನ್ನು ತರಲಾರಂಭಿಸಿದರು. ನಾಗೇಶ ಕಾಮತರ ಆರೇಳು ವರುಷದ ಪ್ಲಾಸ್ಟಿಕ್ ವಿರೋಧಿ ಆಂದೋಳನ ಭಾಗಶಃ ಯಶಕಂಡಿತು.

ಒಂದು ಬ್ಯಾಗಿಗೆ ಹನ್ನೆರಡು ರೂಪಾಯಿ ವೆಚ್ಚ. ಪಂಚಾಯತ್ಗಳು ಅರ್ಧದಷ್ಟಾದರೂ ಭರಿಸಬೇಕೆಂದು ಮನವಿ ಮಾಡಿದರೂ ಸ್ಪಂದಿಸಿದವರು ವಿರಳ. ಚೀಲದ ಒಂದು ಬದಿಯಲ್ಲಿ 'ಮನೆಗೊಂದು ಚೀಲ, ಪ್ಲಾಸ್ಟಿಕ್ಕಿನಿಂದ ದೂರ' ಎಂಬ ಘೋಷಣೆ. ಮತ್ತೊಂದು ಬದಿಯಲ್ಲಿ ಆಯಾಯ ಪಂಚಾಯತಿನ ವಿಳಾಸ. 'ಒಂಭತ್ತು ಪಂಚಾಯತ್ಗಳಲ್ಲಿ ಏಳಕ್ಕೆ ಚೀಲ ವಿತರಣೆ ಪೂರ್ಣವಾಗಿದೆ. ಇನ್ನೆರಡು ಪಂಚಾಯತ್ಗೆ ಶೀಘ್ರ ವಿತರಿಸುತ್ತೇವೆ' ಎನ್ನುತ್ತಾರೆ ಕಾಮತ್.

ಈಚೆಗೆ ಪ್ರವಾಸಿಗರು ಬರುವಲ್ಲಿ, ದೇವಾಲಯಗಳಲ್ಲಿ ಕಡ್ಡಾಯವಾಗಿ ನಲವತ್ತು ಮೈಕ್ರಾನ್ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಸರ್ಕಾರದ ಆದೇಶ ನೀಡಿತು. ಕಾಮತರ ಹೋರಾಟಕ್ಕೆ ಇನ್ನಷ್ಟು ಪುಷ್ಠಿ. ಶೃಂಗೇರಿ ಶಾರದಾಂಬಿಕೆ ದೇವಾಲಯದಲ್ಲೂ ಪ್ಲಾಸ್ಟಿಕ್ಕಿಗೆ ವಿದಾಯ. ಬಯೋಡಿಗ್ರೇಡಬಲ್ ಚೀಲಗಳ ಬಳಕೆ. ಈ ಎಲ್ಲಾ ಅಭಿಯಾನಕ್ಕೆ ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳ ಬೆಂಬಲ. ಈಗ ಶೃಂಗೇರಿ ದೇವಾಲಯದ ಆವರಣಕ್ಕೆ ಪ್ಲಾಸ್ಟಿಕ್ ಚೀಲ ಹಿಡಕ್ಕೊಂಡು ಹೊಕ್ಕರೆ ಪಹರೆಯವರಿಂದ ನೀವು ತಪ್ಪಿಸಲಾರಿರಿ!

'ಭಕ್ತಾದಿಗಳು ಆನೆಗೆ, ಮೀನಿಗೆ ಸಮರ್ಪಿಸಲು ಹುರಿಯಕ್ಕಿ (ಮಂಡಕ್ಕಿ) ಖರೀದಿಸುತ್ತಾರೆ. ಅದು ಪ್ಲಾಸ್ಟಿಕ್ ಪೊಟ್ಟಣದಲ್ಲಿರುತ್ತಿತ್ತು. ಆನೆಯು ಪೊಟ್ಟಣ ಸಹಿತವಾಗಿ ಹುರಿಯಕ್ಕಿಯನ್ನು ಎಳೆದು ನುಂಗುವ ಸಾಧ್ಯತೆಗಳೇ ಹೆಚ್ಚು. ಇದರಿಂದಾಗಿ ಆನೆಗೆ ಅಪಾಯವೂ ಆಗಿತ್ತು. ಮೀನಿಗೆ ಮಂಡಕ್ಕಿ ಸಮರ್ಪಿಸಿದ ಬಳಿಕ ಪ್ಲಾಸ್ಟಿಕ್ಕನ್ನು ಅಲ್ಲೇ ಬಿಸಾಡುತ್ತಿದ್ದರು,' ಕೃಷಿಕ, ಉದ್ಯಮಿ ಅನಂತಯ್ಯನವರು ಮಾತಿನ ಮಧ್ಯೆ ನೆನಪಿಸಿದರು.

ಸರ್ಕಾರಿ ಆದೇಶವಲ್ವಾ. ಅಂಗಡಿ, ತರಕಾರಿ ಸಂತೆಗಳಿಗೆ ಅಧಿಕಾರಿಗಳಿಂದ ಲಗ್ಗೆ, ತಪಾಸಣೆ. ಸಾತ್ವಿಕವಾದ ವ್ಯವಹಾರ. ಅದಕ್ಕೂ ಬಗ್ಗದಿದ್ದಾಗ ಶುಲ್ಕ ಹೇರಿಕೆ. ಕೆಲವೆಡೆ ವಸ್ತುಗಳನ್ನು ಮುಟ್ಟುಗೋಲು ಮಾಡಿದ್ದೂ ಇದೆ. ಈ ಭಯದಿಂದಾಗಿ ಬಹುತೇಕರು ಬಯೋಡಿಗ್ರೇಡಬಲ್ ಚೀಲಗಳನ್ನು ಬಳಸುತ್ತಾರೆ. ಕಾಮತರು ವರ್ತಕ ಸಂಘದ ಕಾರ್ಯದರ್ಶಿಗಳಾದ್ದರಿಂದ ವರ್ತಕರ ಬಳಗ 'ಪ್ಲಾಸ್ಟಿಕ್ ಬಳಕೆಯಿಲ್ಲ' ಎಂಬ ಸ್ಟಿಕ್ಕರ್ಗಳನ್ನು ಅಂಗಡಿಗಳಲ್ಲಿ ಅಂಟಿಸುವ ಮೂಲಕ ಬೆಂಬಲ ನೀಡಿದ್ದಾರೆ. ಅನುಷ್ಠಾನ ಮಾಡಿದ್ದಾರೆ.

'ಪ್ಲಾಸ್ಟಿಕ್ ವಿರೋಧಿ' ಕಾರ್ಯಗಳನ್ನು ಒಪ್ಪದೇ ಇದ್ದವರೂ ಇದ್ದಾರೆ. 'ಹಾಲು, ಎಣ್ಣೆ, ಸಿದ್ಧವಸ್ತುಗಳು ಪ್ಲಾಸ್ಟಿಕ್ಕಿನಲ್ಲಿ ಬರುವುದಿಲ್ವಾ. ಅದನ್ನು ಮೊದಲು ನಿಷೇಧಿಸಿ, ನಂತರ ನಮಗೆ ಹೇಳಿ' ಎನ್ನುವ ಅಡ್ಡ ಮಾತುಗಳು; 'ನಮಗೆ ಕೈಚೀಲ ಅಭ್ಯಾಸವಿಲ್ಲ, ಅದನ್ನು ಇನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ ಮಾರಾಯ್ರೆ. ಪ್ಲಾಸ್ಟಿಕ್ ಸೇಫ್ ಅಲ್ವಾ, ಮಳೆಗೆ ಒದ್ದೆಯಾಗುವುದಿಲ್ಲ' ಎನ್ನುವ ಮಂದಿ. ಸರಕಾರಿ ಆದೇಶ ಮತ್ತು ಆಂದೋಳನದ ವೇಗಕ್ಕೆ ಇವೆಲ್ಲಾ ಗಣನೆಗೆ ಬಂದಿಲ್ಲ.

'ಶೃಂಗೇರಿ ಪಟ್ಟಣ ಶೇ.80ರಷ್ಟು ಪ್ಲಾಸ್ಟಿಕ್ ಮುಕ್ತವಾಗಿದೆ. ಇನ್ನಷ್ಟು ಕೆಲಸ ಬಾಕಿಯುಳಿದಿವೆ. ಜನರು ಸ್ವಯಂ ಆಗಿ ಭವಿಷ್ಯದತ್ತ ನೋಟ ಹರಿಸಿದರೆ ನೂರಕ್ಕೆ ನೂರರಷ್ಟು ಸಾಧಿಸಬಹುದು. ಎಲ್ಲವೂ ಕಾನೂನಿನಿಂದ, ಅರಿವನ್ನು ಮೂಡಿಸುವುದರಿಂದ ಆಗುವುದಿಲ್ಲ' ಎನ್ನುತ್ತಾರೆ ಕಾಮತ್. ಇವರು ಬಯೋಡಿಗ್ರೇಡಬಲ್ ಚೀಲಕ್ಕೆ ಹೆಚ್ಚು ಒತ್ತು ಕೊಡುವುದರಿಂದ ಅವರ ವಿರುದ್ಧ ಅಪಪ್ರಚಾರವೂ ನಡೆದಿತ್ತು.

 'ಅವರು ಚೀಲದ ಫ್ಯಾಕ್ಟರಿ ಮಾಡ್ತಾರೆ. ಅದಕ್ಕಾಗಿ ಪ್ಲಾಸ್ಟಿಕ್ ವಿರೋಧಿ ನಾಟಕವಾಡ್ತಾ ಇದ್ದಾರೆ' ಎಂಬ ಆರೋಪ! ಆಂದೋಳನದ ಫಲಶೃತಿಗಳು ಬರಲಾರಂಭಿಸಿದಾಗ ಆರೋಪ ಸುಳ್ಳೆಂದು ಜನರಿಗೆ ಮನವರಿಕೆಯಾಯಿತು. 'ಪತನಸುಖಿ'ಗಳು ಎಲ್ಲಾ ಕಾಲದಲ್ಲಿ ಧುತ್ತೆಂದು ಹುಟ್ಟಿಕೊಳ್ಳುತ್ತಾ ಇರುತ್ತಾರಲ್ವಾ.

ಹಳ್ಳಿಗಳಲ್ಲಿ ಹೇಳುವಂತಹ ಅರಿವು ಮೂಡಿಲ್ಲ. ಅಷ್ಟು ಸುಲಭವೂ ಅಲ್ಲ. 'ಪ್ರತೀ ಮನೆಯವರು ಅವರವರ ಮನೆಯ ಕಸವನ್ನು ಒಂದೆಡೆ ಪೇರಿಸಿಟ್ಟುಕೊಳ್ಳಬೇಕು. ಪಂಚಾಯತ್ ಯಾ ಇತರ ಸಂಘಸಂಸ್ಥೆಗಳು ಅಲ್ಲಿಂದ ಸಂಗ್ರಹಿಸಿ ತ್ಯಾಜ್ಯ ವಿಲೆವಾರಿ ಘಟಕಕ್ಕೆ ರವಾನಿಸುವುದು' -  ಮುಂದಿರುವ ಯೋಜನೆಗಳು.

'ಹಾಲಿನ ಪ್ಲಾಸ್ಟಿಕ್, ಇತರ ಬ್ಯಾಗ್ಗಳನ್ನು ಚೆನ್ನಾಗಿ ತೊಳೆದು ತನ್ನಿ. ಅದಕ್ಕೆ ಚಿಕ್ಕ ಮೊತ್ತ ಕೊಡ್ತೇನೆ' ಎಂದು ಕಾಮತರು ವಿನಂತಿಸಿದ್ದರಂತೆ. ಅದಕ್ಕೂ ಸ್ಪಂದನ ಅಷ್ಟಕ್ಕಷ್ಟೇ. ಸಾಮಾಜಿಕ ಕಾರ್ಯಕರ್ತರಾಗಿದ್ದ ಕಾಮತರು 'ತನ್ನ ಬದುಕಿನಲ್ಲಿ ಪ್ಲಾಸ್ಟಿಕ್ಕಿಗೆ ಸ್ಥಾನವಿಲ್ಲ' ಎಂಬ ಪ್ರತಿಜ್ಞೆ ಮಾಡಿದ್ದರಿಂದ ಪ್ಲಾಸ್ಟಿಕ್ ವಿರುದ್ಧದ ಜಾಗೃತಿಗೆ ಬೀಸುಹೆಜ್ಜೆ ಬಂತು. ಈಗಿನ ಶೃಂಗೇರಿ ಪಟ್ಟಣ ಪಂಚಾಯತ್ ಅಧ್ಯಕ್ಷ ಪರಾಶರರು ಪ್ಲಾಸ್ಟಿಕ್ ಅಂದೋಳನವನ್ನು ಮುಂದುವರಿಸುತ್ತಿದ್ದಾರೆ.

'ಚೀಲ ವಿತರಣೆಯಿಂದ ಪ್ಲಾಸ್ಟಿಕ್ ಮುಕ್ತ ಎನ್ನಲು ಸಾಧ್ಯವೇ?' ಎಂಬ ಪ್ರಶ್ನೆ ಮುಂದೆ ಬರುತ್ತದೆ. ಚೀಲ ನೀಡಿಕೆ ಕೇವಲ ಸಂದೇಶವಷ್ಟೇ. ಅದನ್ನು ಅನುಷ್ಠಾನ ಮಾಡಬೇಕೆಂಬುದಕ್ಕೆ ಉಪಾಧಿ. ಕಾನೂನು ಉಂಟಲ್ವಾ, ಪಾಲನೆ ಮಾಡುತ್ತಿದ್ದಾರೆ. ಎಲ್ಲಾ ಸಂಸ್ಥೆಗಳು, ವ್ಯಕ್ತಿಗಳು ಕಾಮತರಿಗೆ ಬೆಂಬಲ, ಪ್ರೋತ್ಸಾಹ ನೀಡಿವೆ. ಇಷ್ಟಿದ್ದರೂ ಚೀಲಗಳ ತಯಾರಿ ಮತ್ತು ಓಡಾಟ ವೆಚ್ಚಗಳಿಗೆ ಸಂಪನ್ಮೂಲಗಳನ್ನು ಅಪೇಕ್ಷಿಸದೆ 'ಅರ್ಧಕ್ಕರ್ಧ' ಕಿಸೆಯಿಂದ ಭರಿಸಿದ್ದೇ ಕೆಲವು ಲಕ್ಷ ರೂಪಾಯಿಗಳಾಗಬಹುದು. ಅದನ್ನವರು ಹೇಳುತ್ತಿಲ್ಲ. ಅವರಿಗದು ಇಷ್ಟವೂ ಇಲ್ಲ. ಈ ವಿಚಾರಗಳು ಆಪ್ತರಿಗೆ, ಸಮಾನಾಸಕ್ತರಿಗೆ ಮಾತ್ರ ಗೊತ್ತು. ಅವರೆಂದು ಸುದ್ದಿ ಮಾಡಿಲ್ಲ, ಸದ್ದು ಮಾಡಿಲ್ಲ ಎಂದು ಆಪ್ತವಾಗಿ ಗುಟ್ಟಲ್ಲಿ ಹೇಳುತ್ತಾರೆ, ಅನಂತಯ್ಯನವರು. 

ಶೃಂಗೇರಿಯಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯ ದಾರಿಗಳನ್ನು ಕಂಡುಕೊಳ್ಳಲಾಗಿದೆ. ನಮ್ಮಿಂದಲೂ ಸಾಧ್ಯವಲ್ವಾ. ಸರಕಾರದಲ್ಲಿ ಫಂಡ್ ಇದೆ. ಸಾಮಾಜಿಕ ಸಂಸ್ಥೆಗಳಲ್ಲೂ ಸಂಪನ್ಮೂಲಗಳಿಗೆ ತೊಂದರೆಯಿಲ್ಲ. ವೇದಿಕೆಗಳಲ್ಲಿ ಪ್ಲಾಸ್ಟಿಕ್ ದುಷ್ಟರಿಣಾಮಗಳ ಕುರಿತು ಮಾತನಾಡುತ್ತೇವೆ. ಏರು ಸ್ವರದಲ್ಲಿ ಉಗ್ರವಾಗಿ ಖಂಡಿಸುತ್ತೇವೆ. ಎಲ್ಲಿಯವರೆಗೆ ಮನಸ್ಸು ಪ್ಲಾಸ್ಟಿಕ್ನ ದುಷ್ಪರಿಣಾಮ, ಭವಿಷ್ಯದ ಆರೋಗ್ಯದ ಬದುಕಿನತ್ತ ವಾಲುವುದಿಲ್ಲವೋ; ಅಲ್ಲಿಯವರೆಗೆ ನಾಗೇಶ ಕಾಮತರಂತಹ ಸಮಾಜಮುಖಿ ವ್ಯಕ್ತಿತ್ವದ ವ್ಯಕ್ತಿಗಳ ಕೆಲಸಗಳೂ ಕಾಣುವುದಿಲ್ಲ.

0 comments:

Post a Comment