Tuesday, December 25, 2012

ಕಜೆ ಮನೆಯಲ್ಲಿ 'ಬಲು ಉಪಕಾರಿ ಗಡ್ಡೆ ತರಕಾರಿ'











             ಬಂಟ್ವಾಳ ತಾಲೂಕಿನ ಮಂಚಿಯ ಕಜೆ ರಾಮಕೃಷ್ಣ ಭಟ್, ಕುಂಭಕೋಡಿ ಇವರ ಮನೆಯಂಗಳದಲ್ಲಿ ದಶಂಬರ 25ರಂದು ಗಡ್ಡೆತರಕಾರಿ ಹಬ್ಬ. ಅಂಗಳವಿಡೀ ಗಡ್ಡೆಗಳ ಪ್ರದರ್ಶನ. ಮರೆತುಹೋದ, ಮರೆಯಾಗುತ್ತಿರುವ, ಬಳಕೆಯಲ್ಲಿಲ್ಲದ ಹಲವಾರು ಗಡ್ಡೆಗಳು ನೆಲದಿಂದ ಮೇಲೆದ್ದು ಬಂದಿದ್ದುವು! ಇನ್ನೂರಕ್ಕೂ ಮಿಕ್ಕಿ ಆಸಕ್ತ ಕೃಷಿಕರ ಉಪಸ್ಥಿತಿ. ಹಲಸು ಸ್ನೇಹಿ ಕೂಟದ ಆಯೋಜನೆ.

ಉದ್ಘಾಟನೆ :            ರೈತರಿರಲ್ಲಿ ಜಮೀನು, ನೀರು, ಉತ್ಸಾಹ ಇವಿಷ್ಟಿದ್ದರೆ ತರಕಾರಿಯಲ್ಲಿ ಹೇಗೆ ಸುರಕ್ಷತೆ ತಂದುಕೊಳ್ಳಬಹುದು, ಹೆಚ್ಚು ಶ್ರಮ ಹಾಕದೆ ಬೆಳೆಯವ ತರಕಾರಿಗಳ ಕೃಷಿ ಕ್ರಮ ಮತ್ತು ಕರಾವಳಿ ಭಾಗಕ್ಕೆ ಹೊಂದಿಕೊಳ್ಳುವ, ಸುಲಭವಾಗಿ ಬೆಳೆದುಕೊಳ್ಳಬಹುದಾದ ರೈತರ ಅನುಭವಾಧಾರದ ಕೃಷಿಕ್ರಮದ ಹಿನ್ನೆಲೆಯಲ್ಲಿ ರೈತರದ್ದೇ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ರೂಪುಗೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಶ್ರೀ ಪಡ್ರೆ ಹೇಳಿದರು.

            ಅವರು 'ಬಲು ಉಪಕಾರಿ ಗಡ್ಡೆ ತರಕಾರಿ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, 'ಅಂತರ್ಜಾಲವನ್ನು ಬಳಸುವಂತಹ ಅಭ್ಯಾಸ ಈಗೀಗ ಹೆಚ್ಚಾಗುತ್ತದೆ. ಕೃಷಿ, ಮಾರುಕಟ್ಟೆಯಂತಹ ವಿಚಾರಗಳಿಗೆ ಅಂತರ್ಜಾಲದ ಸಹಾಯ ಪಡೆಯುವಂತಹ ವ್ಯವಸ್ಥೆ ರೂಪಿತವಾಗಬೇಕು' ಎಂದು ಆಶಿಸಿದರು.

            ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕೃಷಿಕ ಕೊಲ್ಲರಮಜಲು ಶಂಕರ ಭಟ್ ವಹಿಸಿ, 'ಮನೆ ನೆಮ್ಮದಿಯ ತಾಣವಾಗಬೇಕು. ಅದಕ್ಕೆ ಪೂರಕವಾದ ವಿಷ ರಹಿತ ಆಹಾರ ಸೇವನೆಯನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಅಸಡ್ಡೆಯಿಂದ ಗಡ್ಡೆ ಅಜ್ಞಾತವಾಗಿದೆ. ಅದನ್ನು ಮರಳಿ ಬಳಸುವಂತಾಗಬೇಕು' ಎಂದರು. ಈ ಸಂದರ್ಭದಲ್ಲಿ ಅಡಿಕೆ ಪತ್ರಿಕೆಯ ಬೆಳ್ಳಿವರ್ಷದ ಮೂರನೇ ಸಂಚಿಕೆಯನ್ನು ಅಶೋಕವರ್ಧನ ಅತ್ರಿ ಅನಾವರಣಗೊಳಿಸಿದರು. ಶ್ರೀಲತಾ ಎಪಿಸಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಶಿಲ್ಪಾ ಕಜೆ ನಿರ್ವಹಿಸಿದರು. ಜಯಲಕ್ಷ್ಮೀ ಭಟ್ ಸ್ವಾಗತಿಸಿದರು. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ಮುಳಿಯ ಪ್ರಸ್ತಾವನೆ ಮಾಡಿದರು. ವೇದಿಕೆಯಲ್ಲಿ ರಾಮಕೃಷ್ಣ ಭಟ್ಟರು ಉಪಸ್ಥಿತರಿದ್ದರು.

ಮಾತುಕತೆ :             ಗಡ್ಡೆ ತರಕಾರಿ ಕೃಷಿಯ ಕುರಿತು ಅನಿಲ್ ಬಳೆಂಜ ಮತ್ತು ಶಿವಕುಮಾರ್ ಮಡಿಕೇರಿ ಅನುಭವ ಹಂಚಿಕೊಂಡರು. ಗಡ್ಡೆಗಳ ಬಳಕೆ ಮತ್ತು ಉಪಯೋಗದ ಕುರಿತು ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಕರಿಂಗಾಣ ಮತ್ತು ಮೈಸೂರಿನ ಸಾವಯವ ಕೃಷಿಕ ಎ.ಪಿ.ಚಂದ್ರಶೇಖರ್ ಮಾತನಾಡಿದರು. ಗಡ್ಡೆಗಳ ಔಷಧೀಯ ಗುಣಗಳ ಕುರಿತು ಪಾಣಾಜೆಯ ವೆಂಕಟ್ರಾಮ ದೈತೋಟ ಮತ್ತು ಜಯಲಕ್ಷ್ಮೀ ವಿ ದೈತೋಟ ಸವಿವರವಾದ ಮಾಹಿತಿ ನೀಡಿದರು.

ಸಮಾರೋಪ            ಕೃಷಿಕ ರಾಮ್ ಕಿಶೋರ್ ಮಂಚಿ ಇವರಿಂದ ಸಮಾರೋಪ ಭಾಷಣ ಮಾಡುತ್ತಾ, ಗಡ್ಡೆಗಳ ಬಳಕೆ ನಮಗೆ ಮರೆತುಹೋಗಿದೆ. ವೈವಿಧ್ಯಮಯವಾದ ಅಡುಗೆ ತಯಾರಿಸಬಹುದೆನ್ನುವುದು ಹಬ್ಬದಿಂದ ವಿಶ್ವಾಸ ಮೂಡಿದೆ. ಪ್ರಕೃತಿಯೇ ಇಂತಹ ಕಾರ್ಯಕ್ರಮಗಳನ್ನು ಮಾಡಿಸುತ್ತಿದೆ ಎನ್ನುವುದು ಅತಿಶಯವಲ್ಲ ಎಂದರು.

           ನಳಿನಿ ಮಾಯಿಲಂಕೋಡಿಯವರು ಅನಿಸಿಕೆ ವ್ಯಕ್ತಪಡಿಸಿದರು. ನಾ. ಕಾರಂತ ಪೆರಾಜೆ ಇವರ ಗೌರವ ಸಂಪಾದಕತ್ವದ ಹಲಸು ಸ್ನೇಹಿ ಕೂಟದ ಮುಖವಾಣಿ ವಾರ್ತಾಪತ್ರವನ್ನು ಕೋನಡ್ಕ ಗೌರಿ ಕೆ.ಪಿ.ಭಟ್ ಅನಾವರಣಗೊಳಿಸಿದರು. ಅತಿಥೇಯರಾದ ವಸಂತ ಕಜೆ ವಂದಿಸಿದರು. ಮಧ್ಯಾಹ್ನ ಗಡ್ಡೆ ತರಕಾರಿಗಳಿಂದಲೇ ತಯಾರಿಸಿದ ಅಡುಗೆ ಹಬ್ಬದ ಔಚಿತ್ಯಕ್ಕೆ ಸಾಕ್ಷಿಯಾಯಿತು. ವಿವಿಧ ಗಡ್ಡೆಗಳ ಪ್ರದರ್ಶನವಿದ್ದುವು. ವರ್ಮುಡಿ ಶಿವಪ್ರಸಾದ್, ನಾರಾಯಣ ಕಾರಂತ ವಿವಿಧ ಕಲಾಪಗಳನ್ನು ನಿರ್ವಹಿಸಿದರು. ಹಳ್ಳಿ ಮನೆಯಂಗಳದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದರುವುದು ಗಮನಾರ್ಹ.

1 comments:

ramesh delampady said...

ಉತ್ತಮ ಮಾಹಿತಿಗಾಗಿ ಧನ್ಯವಾದಗಳು.

Post a Comment