Wednesday, August 14, 2013

ಒಡಲಿಗಿಳಿಯದ ಜಲ ಸಂಪತ್ತು


               ಗಂಗಪ್ಪಯ್ಯ ರಾಜಾ ವಿಷ್ಣುವರ್ಧನನ ಓರ್ವ ದಂಡನಾಯಕ. ಈತ ಕಣಗಿಲೆಯ ಯುದ್ಧವನ್ನು ಗೆದ್ದು ಬರುತ್ತಾನೆ. ರಾಜನಿಗೆ ಖುಷಿ. 'ನಿನಗೇನು ಉಡುಗೊರೆ ನೀಡಲಿ, ನೀನೇ ಕೇಳಿ ಪಡಕೊಂಡರೆ ಚೆನ್ನ,' ರಾಜನಿಂದ ಘೋಷಣೆ. ವಜ್ರ, ಸಂಪತ್ತು, ವೈಢೂರ್ಯ.. ಮೊದಲಾದ ಆಯ್ಕೆಗಳಿದ್ದುವು.

               ನೀವು ಕೊಡುವಂತಹ ಮೌಲ್ಯಯುತ ಬಂಗಾರ, ವಜ್ರದ ಜತೆಯಲ್ಲಿ 'ಒಂದು ಕೆರೆ ಕಟ್ಟಿಸಿ ಕೊಡಿ' ಎನ್ನುವಾಗ ರಾಜ ದಂಗು. ಆಶ್ಚರ್ಯದಿಂದ 'ಕೆರೆಯಿಂದ ನೀನೇನು ಸಾಧಿಸಿದಂತಾಯಿತು' ಎನ್ನುತ್ತಾನೆ. 'ಕೆರೆಯ ನೀರನ್ನು ಕುಲ ದೇವರಿಗೆ ಅರ್ಪಣೆ ಮಾಡುತ್ತೇನೆ. ಉಳಿದುದನ್ನು ರೈತರಿಗೆ ಕೃಷಿ ಮಾಡಲು ಕೊಡುತ್ತೇನೆ. ಸಿಕ್ಕಿದ ಅಕ್ಕಿಯನ್ನು ಊರಿನ ಜನರಿಗೆ ಅನ್ನ ಸಂತರ್ಪಣೆ ಮಾಡಲು ಬಳಸಿಕೊಳ್ಳುತ್ತೇನೆ.'

               ಹಂಪಿಯಲ್ಲಿರುವ ಲಕ್ಷ್ಮೀಧರಾತ್ಮನ ಶಾಸನದಲ್ಲಿ ಉಲ್ಲೇಖವಾಗಿರುವ ಈ ಮಾಹಿತಿಯನ್ನು ಜಲತಜ್ಞ ಶ್ರೀ ಪಡ್ರೆಯವರು ಮಕ್ಕಳಿಗಾಗಿ ಸಿದ್ಧಪಡಿಸಿದ ಪುಸ್ತಿಕೆಯೊಂದರಲ್ಲಿ ದಾಖಲಿಸಿದ್ದಾರೆ. ಕುಡ್ಸೆಂಪ್ ಯೋಜನೆಯಡಿ ಇದು ಪ್ರಕಾಶನಗೊಂಡಿತ್ತು.

                 ನೀರು, ಕೃಷಿ, ಕೃಷಿಕನ ಕುರಿತಾದ ಕಾಳಜಿ ಮತ್ತು ಮಹತ್ತುಗಳು ರಾಜರ ಕಾಲದಿಂದಲೇ ಮೊದಲಾದ್ಯತೆಯಲ್ಲಿದ್ದುವು. ಕೃಷಿಕ ಸಂತೋಷವಾಗಿದ್ದರೆ ಮಾತ್ರ ರಾಜ್ಯ ಸುಭಿಕ್ಷೆಯಿಂದ ಕೂಡಿರುತ್ತದೆ ಎಂಬ ಭಾವನೆಗಳೂ ಇದ್ದುವು. ಬದುಕಿಗೆ ಉಸಿರಾಗಿರುವಂತಹ ನೀರಿನ ಜಾಗೃತಿ ಬದುಕಿನಂಗವಾಗಿದ್ದುವು.

               ಜಯಗಢದ ಕೋಟೆ - ಇತಿಹಾಸ ಪ್ರಸಿದ್ಧ. ರಾಜಸ್ಥಾನದ ಜೈಪುರದಿಂದ ಹನ್ನೊಂದು ಕಿಲೋಮೀಟರ್ ದೂರವಷ್ಟೇ. 1726ರಲ್ಲಿ ಎರಡನೇ ಜಯಸಿಂಹ ಮಹಾರಾಜ ಕಟ್ಟಿಸಿದ್ದ. ಸನಿಹದ ಗುಡ್ಡದಿಂದ ಹರಿದು ಬಂದ ಮಳೆಯನೀರು ಸೋಸಿ ಒಂದು ಕೋಟಿ ಲೀಟರ್ ಸಾಮಥ್ರ್ಯದ ಟ್ಯಾಂಕಿಯಲ್ಲಿ ತುಂಬುತ್ತದೆ! ಹತ್ತು ಸಾವಿರ ಮಂದಿಗೆ ಎರಡು ವರುಷ ಕಾಲ ಕುಡಿನೀರಿಗೆ ಇದು ಸಾಕು. ಇಂದಿಗೂ ಈ ವ್ಯವಸ್ಥೆ ಚೆನ್ನಾಗಿ ನಡೆಯುತ್ತದೆ. ಟ್ಯಾಂಕಿನಿಂದ ನೀರೆತ್ತಿ ಸಂದರ್ಶಕರಿಗೆ ಕುಡಿಯಲು ಕೊಡುತ್ತಾರೆ ಎನ್ನುವ ಅಂಶವನ್ನು ಪುಸ್ತಿಕೆಯಲ್ಲಿ ಶ್ರೀ ಪಡ್ರೆ ವಿವರಿಸುತ್ತಾರೆ.

              ಇತಿಹಾಸದುದ್ದಕ್ಕೂ ನೀರಿನ ಪ್ರಾಧಾನ್ಯತೆಯ ವಿಚಾರಗಳು, ದೃಷ್ಟಾಂತಗಳು ಸಿಗುತ್ತವೆ. ಇಂತಹ ಘಟನೆಗಳು ಪಠ್ಯದಲ್ಲಿ ಬಂದಿಲ್ಲ. ಮಕ್ಕಳಿಗೆ ಗೊತ್ತಿಲ್ಲ. ಪಠ್ಯ ಬರೆಯುವ ತಜ್ಞರಿಗೆ ಬೇಕಾಗಿಲ್ಲ. ಶಾಲಾ ಜೀವನದಿಂದಲೇ ನೆಲ-ಜಲದ ಮಹತ್ವ ಮಕ್ಕಳಿಗೆ ತಿಳಿಸಬೇಕಾದುದು ಅಗತ್ಯ. ಕೇವಲ ಥಿಯರಿಗಳಷ್ಟೇ ಅಲ್ಲ, ಜತೆಗೆ ಪ್ರಾಕ್ಟಿಕಲ್ ಕೂಡಾ ಪಾಠದೊಂದಿಗೆ ಹೊಸೆದು ಬರಬೇಕು.

               ಇಲ್ಲೊಂದು ನೀರಿನ ದುಂರತ ನೋಡಿ. ದಾವಣಗೆರೆ ಜಿಲ್ಲೆಯ ಚನ್ನಗಿರಿಯು ಅತಿ ಹೆಚ್ಚು ಕೊಳವೆ ಬಾವಿಗಳ ಸಾಂದ್ರತೆಯಿರುವ ಊರು. 1500 ರಿಂದ 200 ಅಡಿ ಅಳದವರೆಗೆ ಕೊರೆತ. ಅಲ್ಲಿನ ಕೃಷಿಕರೊಬ್ಬರು ಮುನ್ನೂರೈವತ್ತಕ್ಕೂ ಮಿಕ್ಕಿ ಕೊಳವೆ ಬಾವಿಗಳನ್ನು ಕೊರೆಸಿದರೂ, ಹತ್ತೋ-ಹನ್ನೆರಡೋ ಮಾತ್ರ ಉಸಿರಾಡುತ್ತಿವೆಯಷ್ಟೇ! ಹತ್ತು ವರುಷದ ಹಿಂದಿನ ಈ ಅಂಕಿಅಂಶದ ಅಡಿಕೆ ಕೃಷಿ ವಿಸ್ತರಣೆಯ ಕತೆಯಿದೆ.

              ಜನಸಂಖ್ಯೆ ಹೆಚ್ಚಳವೂ ನೀರಿನ ಅಸಮತೋಲನ ಕಾರಣ. ಕೃಷಿ ವಿಸ್ತರಣೆಯಾದಾಗ ಸಹಜವಾಗಿ ನೀರಿನ ಬಳಕೆಯೂ ಅಧಿಕ. ಪೇಟೆಗಳಲ್ಲಿ 10-15 ಕುಟುಂಬಗಳು ವಾಸಿಸುತ್ತಿದ್ದ ಜಾಗದಲ್ಲೆಲ್ಲಾ ಬಹುಮಹಡಿಯ ಪ್ಲ್ಯಾಟ್ಗಳು ಎದ್ದಿವೆ. ಇಲ್ಲಿಗೆ ಕೊಳವೆ ಬಾವಿಯೊಂದೇ ಆಧಾರ. ಮೊದಲಿಗಿಂತ ಇಪ್ಪತೋ, ಮೂವತ್ತೋ ಪಟ್ಟು ನೀರು ಹೆಚ್ಚು ಬೇಕು. ಒಂದು ಕೊಳವೆ ಬಾವಿ ನಿಭಾಯಿಸಿ ಕೊಡಬಹುದೆ? ಇಲ್ಲ ಎಂದಾದರೆ ಇನ್ನೊಂದು, ಮತ್ತೊಂದು ಕೊರೆತಗಳ ಮಾಲೆ.

               ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಇದೆ. ಕೃಷಿ ಭೂಮಿಗಳು ಮಾತ್ರ ಕ್ಷೀಣಿಸುತ್ತಿವೆ! ನೀರಿನ ಮೂಲಸೆಲೆಗಳು ಮಾನವನಿರ್ಮಿತ ಪ್ರಾಕೃತಿಕ ಅಸಮತೋಲನಕ್ಕೆ ಬಲಿಯಾಗಿವೆ. ಇರುವ ನೀರನ್ನು ಎಚ್ಚರಿಂದ ಬಳಸಿ, ಜಲಮೂಲಗಳನ್ನು ರಕ್ಷಿಸಬೇಕಾಗಿದೆ. ಮಳೆನೀರನ್ನು ಭೂಮಿಯೊಳಕ್ಕೆ ಇಂಗಿಸಿಕೊಳ್ಳುವುದು ಆದ್ಯತೆಯ ಕೆಲಸ. ಎಲ್ಲರಿಗೂ ನೀರು ಒದಗಿಸುವಷ್ಟು ಮಳೆಸಂಪತ್ತು ಇದೆ. ನಿರ್ವಹಣೆ ಮಾತ್ರ ಇಲ್ಲ.

                ಈ ಸಲ ಕರಾವಳಿಯಲ್ಲಿ ಯಥೇಷ್ಟ ಮಳೆಯಿದ್ದರೂ 'ನಮ್ಮಲ್ಲಿಗೆ ನೀರು ಬಾರದೆ ವಾರ ಕಳೆಯಿತು' ಎಂದು ಮರುಗುವ ಅಮ್ಮಂದರನ್ನು ಬಲ್ಲೆ. ನೀರು ಎಲ್ಲಿಂದ ಬರಬೇಕು? ಕೆಲವರಿಗೆ ನೀರಿನ ನಿರ್ವಹಣೆ ಗೊತ್ತಿಲ್ಲ ಬಿಡಿ. ಇನ್ನೂ ಕೆಲವರಿಗೆ ಗೊತ್ತಿದೆ, ಆದರೆ ನಮಗ್ಯಾಕೆ ಮಾರಾಯ್ರೆ ಎಂದು ಆಕಳಿಸುವ ಪ್ರವೃತ್ತಿ. ಸಂಪತ್ತಿನ ಪೆಟ್ಟಿಗೆಯಿದೆ, ಪೆಟ್ಟಿಗೆಯೊಳಗೆ ಖಾಲಿ!

               ಚೆನ್ನೈ ನಗರದ ಶೇ.20ರಷ್ಟಿರುವ ಶಿಕ್ಷಣ ಸಂಸ್ಥೆಗಳ ಜಮೀನನ್ನು ಹೊರತು ಪಡಿಸಿ, ಮಿಕ್ಕಲ್ಲೆಲ್ಲಾ ಸಿಮೆಂಟ್ಮಯ. ಇದರಿಂದಾಗಿ ನೀರು ಇಂಗುತ್ತಿಲ್ಲ. ಭೂಗರ್ಭಕ್ಕೆ ಸೇರಬೇಕಾದ ಮಳೆ ನೀರಿನ ಪ್ರಮಾಣವು ಕಡಿಮೆಯಾಗುತ್ತಿದೆ.'
ಚೆನ್ನೈ ಯಾಕೆ? ನಮ್ಮ ಮನೆಯ ಸುತ್ತ ಒಮ್ಮೆ ಕಣ್ಣು ಹಾಯಿಸಿ. ಉತ್ತರ ಸಿಕ್ಕಿಬಿಡುತ್ತದೆ.

 
ಸಾಂದರ್ಭಿಕ ಚಿತ್ರ: ಕೇರಳದ ಮಳೆಕೊಯ್ಲಿನ ಒಂದು ಮಾದರಿ

(ಚಿತ್ರ : ಶ್ರೀ ಪಡ್ರೆ)

1 comments:

Lanabhat said...

ಕಾರಂತರೇ ಪೊಟ್ಟು ಕೊಳವೆ ಬಾವಿಗೆ ವ್ಯರ್ಥವಾಗುವ ನೀರನ್ನು ಹರಿಸುವ ಮೂಲಕ ಅಂತರ್ಜಲ ಮರುಪೂರಣೆ ಮಾಡಬಹುದೇ ?

Post a Comment