Thursday, May 22, 2014

ಮರದ ಬೇರಿನೊಳಗಿದೆ, ಬದುಕಿನ ನರ

               ಹೆದ್ದಾರಿ ಪಕ್ಕದಲ್ಲಿರುವ ಯಾವ ರಸ್ತೆ ಕೆಲಸಕ್ಕೂ ತೊಂದರೆ ಕೊಡದ ಕಾಡು ಮಾವಿನ ಮರವೊಂದು ಆಗಷ್ಟೇ ಧರಾಶಾಯಿಯಾಗಿತ್ತು. ಯಾಂತ್ರೀಕೃತ ಗರಗಸವು ಕಣ್ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ರೆಂಬೆಕೊಂಬೆಗಳನ್ನು ಬೇರ್ಪಡಿಸಿತ್ತು. ಅರ್ಧ ಗಂಟೆಯೊಳಗೆ ಶತಮಾನಕ್ಕೆ ಸಾಕ್ಷಿಯಾದ ಮರ ಛಿದ್ರವಾಗಿ ಲಾರಿಯೇರಲು ಸಿದ್ಧವಾಯಿತು. ವರಿಷ್ಠರಿಂದ ಯಶಸ್ವೀ ಪೋಸ್ಟ್ ಮಾರ್ಟ್ಂ. ಸಾಧಕನೋರ್ವನ ಸಾಧನೆಯ ಭಾವ, ಆನಂದದ ಪುಳಕ ಮಾತು-ಕೃತಿಗಳಲ್ಲಿ ವ್ಯಕ್ತವಾಗುತ್ತಿತ್ತು.
               ಸನಿಹದ ಅರುವತ್ತರ ವೃದ್ಧೆ ಯಮುನಾಬಾಯಿ ಮರವೊಂದರ ಸಾವನ್ನು ಕಣ್ಣೆವೆಯಿಕ್ಕದೆ ನೋಡುತ್ತಾ, ಈ ಮರದೊಂದಿಗೆ ಕಳೆದ ಬಾಲ್ಯವನ್ನು ನೆನಪು ಮಾಡಿಕೊಂಡರು. ಸ್ವಾದದ ಹಣ್ಣು ಕೊಡುತ್ತಿದ್ದ ಮರದ ಕೆಳಗೆ ಬಾಲ್ಯದ ಬದುಕನ್ನು ಕಟ್ಟಿಕೊಂಡಿದ್ದ ಕುಟುಂಬದ ಮಕ್ಕಳನ್ನು ಜ್ಞಾಪಿಸಿಕೊಂಡರು. ಒಂದು ಗಾಳಿ ಬೀಸಿದರೂ ಸಾಕು, ಮಕ್ಕಳೆಲ್ಲಾ ಓಡಿ ಬಂದು ಹಣ್ಣನ್ನು ಹೆಕ್ಕಿಕೊಳ್ಳಲು  ಪೈಪೋಟಿ. ಕನಿಷ್ಠ ಹದಿನೈದು ಮನೆಗಳ ಮಾವಿನ ಬಯಕೆಯನ್ನು ಈ ಮರ ನೀಗಿಸುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಮರಕ್ಕೆ ಬೀಜಾಂಕರ ಮಾಡಿದ ತನ್ನ ಕುಟುಂಬದ ಹಿರಿಯರನ್ನು ಜ್ಞಾಪಿಸಿಕೊಂಡರು.
                 ಮರ ನೆಲಕ್ಕೊರಗಿದಾಗ ಯಮುನಾಬಾಯಿಯವರ ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರು ಮರವನ್ನೊರಗಿಸುವ ಭರದಲ್ಲಿದ್ದ ಯಾರೂ ಗಮನಿಸಿಲ್ಲ. ಗಮನಿಸಿಯೂ ಆಗಬೇಕಾದ್ದಿಲ್ಲ ಬಿಡಿ! ಉಳಿಸುವ ಮನಸ್ಸುಗಳು ಕಾಂಚಾಣಕ್ಕೆ ಬಾಯ್ತೆರೆದುಕೊಂಡಿರುವಾಗ ಉರುಳಿಸುವ ಪ್ರಕ್ರಿಯೆಗಳು ನಿರಂತರ ನಡೆಯುತ್ತಲೇ ಇರುತ್ತದೆ. ಮಾವು, ಹಲಸುಗಳ ಹಿಂದೆ ಒಂದೊಂದು ಪ್ರದೇಶದ ಬದುಕಿನ ಕತೆಗಳು ನೆಲಕಚ್ಚುತ್ತಿವೆ.
                 ದೇಶಾದ್ಯಂತ ರಸ್ತೆಗಳು ಅಗಲವಾಗುತ್ತಿವೆ. ಅಭಿವೃದ್ಧಿಯತ್ತ ದೊಡ್ಡ ಹೆಜ್ಜೆಯಿಡುತ್ತಿದ್ದೇವೆ. ಸಹಜವಾಗಿ ಮರಗಳಿಗೂ ಕೊಡಲಿ. ರಸ್ತೆಯ ಕಾಮಗಾರಿಗಳಿಗೆ ತೊಡಕಾಗುವಂತಹ ಮರಗಳನ್ನು ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಡಿಯುವುದು ಅನಿವಾರ್ಯ. ಆದರೆ ಯಾವ ಕೆಲಸಗಳಿಗೂ ತೊಂದರೆ ಕೊಡದ, ಕೇವಲ ರಸ್ತೆಯ ಪಕ್ಕದಲ್ಲಿರುವುದೇ ಪಾಪ ಎನ್ನುವ ಕಾರಣಕ್ಕಾಗಿ ಅಸಂಖ್ಯಾತ ಮರಗಳು ಉರುಳಿವೆ. ಮಾವು, ಹಲಸು ಮತ್ತು ಮೌಲ್ಯಯುತ ಬೃಹತ್ ಮರಗಳ ಸಂಖ್ಯೆ ಕ್ಷೀಣಿಸುತ್ತಿವೆ.  ಯಮುನಾಬಾಯಿಯಂತಹ ಹಿರಿಯ ಜೀವಗಳಿಗೆ ಮಾವಿನ ಮರವು ಪರಿಸರ-ಬದುಕಿನ ಪಾಠವನ್ನು ಹೇಳಿತ್ತು ನೋಡಿ, ಜಿನುಗಿದ ಕಣ್ಣೀರಿನ ಒಂದೊಂದು ಹನಿಗಳಲ್ಲಿ ಭವಿಷ್ಯದ ಕರಾಳ ದಿನಮಾನಗಳ ಚಿತ್ರವಿದೆ.
              ವಾರಗಳ ಹಿಂದೆ ಅಕಾಲಿಕ ಮಳೆ ಬಂತು. ಗಾಳಿ, ಗುಡುಗು, ಸಿಡಿಲಿನ ಅಬ್ಬರ. ಆ ಸಮಯದಲ್ಲಿ ಹಳ್ಳಿಯಲ್ಲಿದ್ದೆ. ರಾತ್ರಿಯ ಗಾಳಿಯು ವಾತಾವರಣವನ್ನು ಹೈರಾಣ ಮಾಡಿತ್ತು. ಬೆಳ್ಳಂಬೆಳಿಗ್ಗೆ  ಮಾವಿನ ಮರದ ಸುತ್ತ ಚಿಣ್ಣರ ಕಲರವ! ಜತೆಗೆ ಹೆತ್ತವರ ಕಮಾಂಡ್! ಕಾಡು ಮಾವಿನ ಹಣ್ಣನ್ನು ಆಯುವ ಕೈಗಳಿಗೆ ಪುರುಸೊತ್ತಿಲ್ಲ. ಒಂದೊಂದು ಮರದ ಹಣ್ಣುಗಳಿಗೆ ಪ್ರತ್ಯೇಕಪ್ರತ್ಯೇಕವಾದ ರುಚಿ. ಹಿರಿಯರು ನೆಟ್ಟು ಪೋಷಿಸಿದ ಮರಗಳ ಹಿಂದೆ-ಮುಂದೆ ಬದುಕಿನ ಸ್ಪಷ್ಟ ಕಲ್ಪನೆಯಿತ್ತು. ಮಾವು-ಹಲಸಿಗಾಗಿ ಇನ್ನೊಬ್ಬರ ಮುಂದೆ ಕೈಚಾಚಬಾರದೆನ್ನುವ ಸಂದೇಶವಿತ್ತು. ಹಾಗಾಗಿಯೇ ತನ್ನ ತೋಟವಲ್ಲದೆ ಸರಹದ್ದಿನ ಜಾಗದಲ್ಲೆಲ್ಲಾ ಕಾಡುಮಾವಿನ ಸಸಿಗಳನ್ನು ಬೆಳೆಸುವ ಪ್ರಕ್ರಿಯೆ ಒಂದು ಕಾಲಘಟ್ಟದ ಸಮಾಜಮುಖಿ ಮನಸ್ಸಿನ ಜೀವಂತಿಕೆ.
              ನೆಟ್ಟು ಬೆಳೆಸಿದ ಹಿರಿಯರ ಸಂಖ್ಯೆ ಕ್ಷೀಣಿಸುತ್ತಿದೆ. ಮೊಬೈಲ್ ಹಿಡಿದ ಕೈಗಳಿಗೆ ಮಾವು ಯಾಕೆ, ಬದುಕೇ ಭಾರ! ಹೊಸದಾಗಿ ರೂಪುಗೊಳ್ಳುತ್ತಿರುವ ಚಿಣ್ಣರಿಗೆ ಕಾಡುಮಾವಿನ ರುಚಿ ಗೊತ್ತಿಲ್ಲ. ಹಿರಿಯರಿಗೆ ರುಚಿ ಮೂಡಿಸಲು ಪುರುಸೊತ್ತಿಲ್ಲ. ಇಲ್ಲಗಳ ಮಧ್ಯೆಯೂ ಕಾಡುಮಾವಿಗೆ ಪ್ರತ್ಯೇಕ ಸ್ಥಾನ. ಅಲ್ಲೋ ಇಲ್ಲೋ ಕೆಲವರು ಮಾತುಕತೆಗೆ ಸಿಗುತ್ತಾರೆ. ತಳಿಗಳನ್ನು ಉಳಿಸಿಕೊಳ್ಳುತ್ತಿದ್ದಾರೆ. ಅದರ ಸವಿಯನ್ನು ನೆನಪಿಸಿಕೊಳ್ಳುತ್ತಾರೆ. ಆ ಅಡುಗೆ ಮನೆಯಲ್ಲಿ ಕಾಡುಮಾವಿಗೆ ಪ್ರತ್ಯೇಕ ಸ್ಥಾನ-ಮಾನ. ಖಾದ್ಯಗಳ ವೈಭವ. ಒಂದೆರಡು ತುತ್ತು ಅನ್ನವನ್ನು ಅಧಿಕವಾಗಿ ಉದರಕ್ಕೆ ತಳ್ಳುವ ತಾಕತ್ತು ಅದಕ್ಕಿದೆ.
              ಸುಳ್ಯ ತಾಲೂಕಿನ ಮರ್ಕಂಜದ ಮಾಪಲ್ತೋಟ ಸುಬ್ರಾಯ ಭಟ್ಟರಲ್ಲಿ ಏನಿಲ್ಲವೆಂದರೂ ನೂರಕ್ಕೂ ಅಧಿಕ ಕಾಡು ಮಾವಿನ ತಳಿಗಳಿವೆ. ಎಲ್ಲವೂ ನೆಟ್ಟು ಪೋಷಿಸಿದವುಗಳು. ಮಾಂಬಳ, ಗೊಜ್ಜು, ಹುಳಿ ಪದಾರ್ಥಗಳಿಗೆ ಒಗ್ಗುವ ಹಲವು ವಿಧದ ತಳಿ ಬ್ಯಾಂಕ್ ರೂಪುಗೊಂಡದ್ದರ ಹಿಂದೆ ಬೆವರ ಶ್ರಮವಿದೆ. ಉಪ್ಪಿನಕಾಯಿಗೆ ಹೊಂದುವ ಹನ್ನೆರಡು ತಳಿಗಳು, ನೀರು ಮಾವಿನಕಾಯಿಗೆಂದೇ ಇರುವ ಎರಡು ಜಾತಿಗಳ ಜಾತಕ ಬಿಡಿಸಲು ಭಟ್ಟರಿಗೆ ಖುಷಿ. ಜತೆಗೆ ಹೈಬ್ರಿಡ್ ಸಂಸಾರ ದೊಡ್ಡದಿದೆ.  'ಮಾವು, ಹಲಸಿನ ಗಿಡಗಳನ್ನು ಸಂರಕ್ಷಿಸಿ ಅದರ ಹಣ್ಣನ್ನು ತಿಂದ ಸಂತೃಪ್ತಿ ಕೋಟಿ ರೂಪಾಯಿಗೂ ಮಿಗಿಲು. ಹಾಗಾಗಿ ನಾನು ಕೋಟ್ಯಾಧೀಶ್ವರ' ಎನ್ನುತ್ತಾರೆ.
             ಉಪ್ಪಿನಕಾಯಿ ಯಾರಿಗೆ ಬೇಡ? ಸವಿಯುವ ನಾಲಗೆಯು ಕಾಡುಮಾವಿನ ಪ್ರೀತಿಯನ್ನು ಬಯಸುವುದಿಲ್ಲ. ಮರಗಳ ಕಾಳಜಿಯನ್ನು ಬೇಡುವುದಿಲ್ಲ! ಎಲ್ಲಾ ಮರಗಳ ಮಾವಿನ ಮಿಡಿಗಳು ಉಪ್ಪಿನಕಾಯಿಗೆ ಸೂಕ್ತವಲ್ಲ. ಹಾಗಾದರೆ ತಳಿ ಆಯ್ಕೆ ಹೇಗೆ? ಸುಬ್ರಾಯ ಭಟ್ ಹೇಳುತ್ತಾರೆ, ಮಿಡಿಯ ಆಯ್ಕೆಗೆ ಹೇಳುವಂತಹ ಮಾನದಂಡಗಳಿಲ್ಲ. ಸೊನೆಯಿರುವ ಮಾವನ್ನೇ ಆರಿಸಿ, ಸೊನೆಯ ಮುಖಾಂತರ ಮಿಡಿಗೆ ರುಚಿ. ಮಿಡಿಯನ್ನು ಹೋಳುಮಾಡಿ, ಪದಾರ್ಥ ಮಾಡುವಾಗ ಇತರ ತರಕಾರಿಯೊಂದಿಗೆ ಹಾಕಿಬಿಡಿ. ಉಪ್ಪು, ಮೆಣಸು, ಹುಳಿಯೊಂದಿಗೆ ಮಿಳಿತವಾಗಿ ಮಾವಿನ ಹೋಳು ಕಪ್ಪಾಗದಿದ್ದರೆ ಮಿಡಿ ಪಾಸ್, ಕಪ್ಪಾದರೆ ರಿಜೆಕ್ಟ್...
          ಕಾಡುಮಾವಿನ ಅಪರೂಪದ ತಳಿಯೊಂದನ್ನು ಮಾಪಲ್ತೋಟ ಪರಿಚಯಿಸುತ್ತಾರೆ, "ದಿವಂಗತ ಮಂಚಿ ನಾರಾಯಣ ಆಚಾರ್ ಅವರ ಹಿತ್ತಿಲಿನಲ್ಲಿ 'ಕುಡಿಯುವ ಮಾವು' (ತಿನ್ನುವ ಮಾವಲ್ಲ) ಇತ್ತು. ಅಲ್ಲಿಂದ ಕುಡಿ ತಂದು ಗಿಡ ಮಾಡಿದೆ. ಇದು ಉತ್ಕೃಷ್ಟ ಹಣ್ಣು. ತಿಕ್ಕಿದಾಗ ಜ್ಯೂಸ್ ಬಿಟ್ಟುಕೊಡುತ್ತದೆ. ನಂತರ ತೊಟ್ಟಿನ ಬಳಿ ಕಚ್ಚಿದರೆ ಸಾಕು, ಕುಡಿಯಲು ಸಿದ್ಧ". ಕಲ್ಲಡ್ಕ ಕರಿಂಗಾಣದ ಡಾ.ಕೆ.ಎಸ್.ಕಾಮತರಲ್ಲಿ ಕಾಡುಮಾವಿನ ಡಾಟಾದ ಪೈಲ್ ದೊಡ್ಡದಿದೆ.. ಪಾಸ್ ವರ್ಡ್ ಕೊಟ್ಟರೆ ಸಾಕು, ಬೇಕಾದಾಗ ಬೇಕಾದಷ್ಟು ಮೊಗೆಯುವಂತಹ ಜ್ಞಾನ. ಕರಾವಳಿಯ ಹಿತ್ತಿಲಲ್ಲಿ ಮಲೆನಾಡಿನ ಅಪ್ಪೆಮಿಡಿ ತಳಿಗಳು ಸಾಕಷ್ಟಿವೆ. ಇಳುವರಿ ಅಷ್ಟಕ್ಕಷ್ಟೇ. ಕಾಯಿ ಬಿಡುತ್ತಿಲ್ಲವೆಂದು ಕಡಿಯುವವರಿಗೆ ಕಾಮತರ ಕಿವಿಮಾತೊಂದಿದೆ - ಅದಕ್ಕೆ ಊರತಳಿಗಳಾದ ಕಾಳಪ್ಪಾಡಿ, ತೋತಾಪುರಿಗಳ ಕಸಿಕಟ್ಟಿ. ಪ್ರತೀ ವರುಷವೂ ಕಾಯಿ ಕೊಡುವ ಸಾಧ್ಯತೆಯಿದೆ.
             ಶಿರಸಿಯ ಪರಿಸರ ಪತ್ರಕರ್ತ ಶಿವಾನಂದ ಕಳವೆ ಅರಣ್ಯ ಇಲಾಖೆಯ ವರಿಷ್ಠರ ಮನವೊಲಿಸಿ ಸರಕಾರಿ ಜಾಗದಲ್ಲಿ ಅಕೇಶಿಯಾದ ಬದಲು ಹಲಸು, ಮಾವು, ಹಣ್ಣಿನ ಗಿಡಗಳನ್ನು ನೆಡುವಲ್ಲಿ ಯಶಸ್ಸಾಗಿದ್ದಾರೆ. ಎಷ್ಟೋ ಸಲ ಇಲಾಖೆಯ ಕೆಲಸಗಳನ್ನು ಹಳಿಯುತ್ತೇವೆ. ಅಧಿಕಾರಿಗಳನ್ನು ದೂರುತ್ತೇವೆ. ಆದರೆ ಸಾಮಾಜಿಕ ಕಾಳಜಿಯಿದ್ದ, ನಿಜದ ನೇರಕ್ಕೆ ನಡೆಯುವ, ಮನವಿಯನ್ನು ಮನಸಾ ಸ್ವೀಕರಿಸುವ ಮನಸ್ಸುಗಳು ಇಲಾಖೆಯೊಳಗಿದ್ದಾರೆ. ಅವರನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೋ ಅಷ್ಟು ಫಲಿತಾಂಶ. ಕಳವೆಯವರು ಇಲಾಖೆಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಫಾರೆಸ್ಟ್ ಕಾಡಿನಲ್ಲಿ ಹಲಸು-ಮಾವುಗಳು ಬೆಳೆಯುವುದಕ್ಕೆ ಸಾಧ್ಯವಾಯಿತು.
          ಈಚೆಗೆ ಹಲವೆಡೆ ಗಮನಿಸಿದ್ದೇನೆ. ಅಕೇಶಿಯಾ ಗುಡ್ಡಗಳು ನುಣುಪಾಗುತ್ತಿವೆ. ಕಾಂಡಗಳು ಪ್ರವಾಸಕ್ಕೆ ಕಾದಿರುವ ದೃಶ್ಯ. ಒಮ್ಮೆ ಜತೆಗಿದ್ದ ರಾಕೇಶ್ ಕಮ್ಮಾಜೆ ಹೇಳಿದರು, 'ಸರ್, ಅಕೇಶಿಯಾ ಕಡಿದಾಯಿತು. ಇನ್ನು ಪುನಃ ನೆಡುವುದು ಅಕೇಶಿಯಾ ಗಿಡಗಳನ್ನು,' ಎಂದರು. ಸರಿ, ಅಕೇಶಿಯಾವೇ ಬೇಕೆಂದರೆ ಓಕೆ. ಅದರೊಂದಿಗೆ ಒಂದಿಷ್ಟು ಹಲಸು, ಮಾವು, ಕಾಡುಹಣ್ಣುಗಳೂ ಇದ್ದರೇನಂತೆ. ಬಹುಶಃ ಆದೇಶದ ಪತ್ರದಲ್ಲಿ ಅಕೇಶಿಯಾ ಮಾತ್ರ ಇದ್ದಿರಬೇಕು. ಅದಕ್ಕೆ ಉಳಿದವನ್ನು ಸೇರಿಸುವ ಕೆಲಸ ಆಗಬೇಕು. ಸಾರ್ವಜನಿಕರಿಂದ ಒತ್ತಡ ಬೀಳದಿದ್ದರೆ ಮುಂದೆಯೂ ಅಕೇಶಿಯಾ ಸಂಸಾರ ಬೆಳೆಯುತ್ತದೆ. ಆದರೆ ಸಾರ್ವಜನಿಕರ ಮಾತಿಗೆ ಮನ್ನಣೆ ಕೊಡುವ ಮನಸ್ಸುಗಳು ಬೇಕಷ್ಟೇ. ನೆನಪಿಟ್ಟುಕೊಳ್ಳೋಣ, ಹೊಟ್ಟೆಯನ್ನು ತಂಪು ಮಾಡುವ ಮರಗಳ  ಬೇರಿನೊಂದಿಗಿದೆ, ಬದುಕಿನ ನರನಾಡಿ.
              ಹೆದ್ದಾರಿಗಳ ಸುತ್ತಮುತ್ತದ ದೈತ್ಯ ಮರಗಳು ಅಭಿವೃದ್ಧಿಗಾಗಿ ಪ್ರಾಣ ಕಳೆದುಕೊಂಡಿವೆ. ಇತ್ತ ಹೈಬ್ರಿಡ್ ತಳಿಗಳಿಗೆ ಬಾಧಿಸುವ ಕೀಟಗಳನ್ನು ಕೊಲ್ಲಲು ವಿಷ ಸಿಂಪಡಣೆ. ಈಚೆಗೆ ಇಪ್ಪತ್ತೆಂಟು ರಾಷ್ಟ್ರಗಳನ್ನೊಳಗೊಂಡ ಐರೋಪ್ಯ ಸಂಘವು ಭಾರತದ ಅಲ್ಪಾನ್ಸೋ ಮಾವಿನ ಹಣ್ಣಿಗೆ ಕಾಲಮಿತಿ ನಿಷೇಧ ಹೇರಿದೆ. ಹಣ್ಣಿನೊಂದಿಗೆ ಬದನೆ, ಕೆಸು, ಹಾಗಲಕಾಯಿ, ಪಡುವಲಕ್ಕೂ ನಿಷೇಧ ಭಾಗ್ಯ. ಚುನಾವಣೆಯ ಗುಂಗಿನಲ್ಲಿದ್ದ ದೇಶದ ನಾಯಕರಿಗೆ ಈ ನಿಷೇಧವು 'ಒಂದು ವಾಕ್ಯದ ಖಂಡನೆ'ಯೊಂದಿಗೆ ಕಾಲಗರ್ಭಕ್ಕೆ ಸೇರಿಹೋಯಿತು!
             ತಿನ್ನುವ ಆಹಾರದಲ್ಲಿ ಗೊತ್ತಿಲ್ಲದೇ ಉದರ ಸೇರಿದ ವಿಷವು ತಾಮಸ ಗುಣವಾಗಿ ಪ್ರವರ್ತಿತವಾಯಿನೋ ಎನ್ನುವ ಗುಮಾನಿಯಂತೂ ನನಗಿದೆ. ಯಾಕೆ ಹೇಳಿ? ಈ ಸಲದ ಚುನಾವಣೆಯ ಸಮಯದಲ್ಲಿ ಜನನಾಯಕರ ಬಾಯಿಂದ ಉದುರಿದ್ದ ಅಣಿಮುತ್ತುಗಳ ಮುಂದೆ ಬದುಕಿನ ಸಂಸ್ಕಾರವು ನಾಚಿ ನೀರಾಯಿತು!

ಪುನರ್ಪುಳಿಯ ಸೋದರ - ಗಾರ್ಸೀನಿಯಾ ಕೋವಾ








              "ಈ ವರುಷ ಬಿಟ್ಟಷ್ಟು ಹಣ್ಣು ಇಷ್ಟು ವರುಷ ಬಿಟ್ಟಿರಲಿಲ್ಲ, ಯಥೇಷ್ಟ," ಕಸಿತಜ್ಞ ಶ್ಯಾಮ್ ಸುಂದರ್ ಖುಷಿ ಹಂಚಿಕೊಂಡರು. ಗಾರ್ಸೀನಿಯಾ ಕೋವಾ - ಇದು ಮುರುಗಲು (ಪುನರ್ಪುಳಿ, ಕೋಕಂ) ಹಣ್ಣಿನ ಸೋದರ. ಬಣ್ಣ, ರುಚಿಗಳಲ್ಲಿ ಭಿನ್ನ! ಗಾಢ ಹಳದಿ ಬಣ್ಣ. ನೋಡಲು ಚಂದ. ಜಾಯಿಕಾಯಿಯ ಗಾತ್ರ. ಕರಾವಳಿಗೆ ಅಪರೂಪ. ಸದಾ ಹಸಿರು ಮರ. ಕಿತ್ತಳೆ ವರ್ಣದ ಹಣ್ಣುಗಳು. ತೊಟ್ಟಿನಿಂದಾರಂಭಿಸಿ ಮೈಮೇಲೆ ಆರೆಂಟು ತಗ್ಗುಗೆರೆಗಳು. ಒತ್ತಡ ಹಾಕಿ ಒತ್ತಿದಾಗಲಷ್ಟೇ ಹಣ್ಣು ಇಬ್ಬಾಗವಾಗುವಷ್ಟು ಗಟ್ಟಿ. ಒಳಗೆ ಕಿತ್ತಳೆ ಬಣ್ಣದ ಗುಳ.  ಹುಳಿಮಿಶ್ರಿತ ಸಿಹಿ. ಪುನರ್ಪುಳಿ ಹಾಗೆ ತಿಂದಾಗ ಹಲ್ಲಿಗೆ ಅಂಟು ಮೆತ್ತಿಕೊಳ್ಳುವುದಿಲ್ಲ. ಬಣ್ಣವೂ ಅಂಟುವುದಿಲ್ಲ..
              ಹಣ್ಣಾದರೆ ನೋಡಲು ಚಂದ. ಮೂಲ ಮಲೇಶ್ಯಾ. ಬೀಜದಿಂದಾದ ಗಿಡವನ್ನು ಸಾಕಷ್ಟು ಮಂದಿ ಬೆಳೆಸಿದ್ದಾರೆ. ಬಹುತೇಕ ಯಾರಿಗೂ ಇಳುವರಿ ಇಲ್ಲ. ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಶ್ಯಾಮಸುಂದರ್ ಪುನರ್ಪುಳಿಯ ಅಡಿಗಿಡಕ್ಕೆ ಗಾರ್ಸೀನಿಯಾದ ಕುಡಿಯನ್ನು ಕಸಿ ಕಟ್ಟಿ (ಟಾಪ್ ವರ್ಕ್ ) ಅಭಿವೃದ್ಧಿ ಪಡಿಸಿದ್ದಾರೆ. ನೀರು, ಗೊಬ್ಬರ ಉಣಿಸಿ ಆರೈಕೆ ಮಾಡಿದ್ದಾರೆ. ಶ್ಯಾಮ ಸುಂದರ್ ಅವರಲ್ಲಿ ಏಳು ವರುಷದಿಂದ ಫಲ ನೀಡುತ್ತಿದೆ. 'ಬೀಜದಿಂದ ಹುಟ್ಟಿದ ಸಸಿಗಿಂತಲೂ ಕಸಿ ಕಟ್ಟಿದ ಸಸಿಯಲ್ಲಿ ಇಳುವರಿ ಪಡೆಯಲು ಸಾಧ್ಯ' ಎನ್ನುತ್ತಾರೆ.
             ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯ ಮೂಲಕ ಸಿಕ್ಕ ಎರಡು ಕುಡಿಗಳನ್ನು ಇವರು ಪುನರ್ಪುಳಿಯ (ಗಾರ್ಸೀನಿಯಾ ಇಂಡಿಕಾ, ಮುರುಗುಲು, ಕೋಕಂ) ಕಾಂಡಕ್ಕೆ ಕಸಿ ಮಾಡಿದ್ದರು. ಜನವರಿಯಲ್ಲಿ ಹೂ ಬಿಟ್ಟು, ಮೇ ತಿಂಗಳಲ್ಲಿ ಹಣ್ಣು ತಿನ್ನಲು ರೆಡಿ. ಮೇ ಕೊನೆಗೆ ಹಣ್ಣಿನ ಋತು ಮುಗಿಯುತ್ತದೆ. 
              ಉತ್ತಮ ನೋಟ ಮತ್ತು ಆಕರ್ಷಕ ಬಣ್ಣವಿರುವುದರಿಂದ ಮಾರಾಟ ಸಾಧ್ಯತೆಯಿದೆ. ಪ್ಯಾಕ್ ಮಾಡಿ ಮಾರಾಟಕ್ಕಿಟ್ಟರೆ ಮ್ಯಾಂಗೋಸ್ಟಿನ್, ರಂಬುಟಾನ್ಗಳ ಜತೆ ಪೈಪೋಟಿ ಮಾಡುವಷ್ಟು ಅಂದ ಹೊಂದಿದೆ. ಶ್ಯಾಮ್ ಸುಂದರ್ ಅವರಿಗೆ ಮಾರಾಟ ಅವಕಾಶಗಳು ಕಡಿಮೆ. ಹಾಗಾಗಿ ಆಸಕ್ತರಿಗೆ, ಸ್ನೇಹಿತರಿಗೆ, ಬಂಧುವರ್ಗದವರಿಗೆ ನೀಡುತ್ತಾರೆ.
               ಇದರ ಮೌಲ್ಯವರ್ಧನೆ ಕುರಿತು ಏನೂ ಅರಿವಿಲ್ಲ. ಮನೆಗೆ ಬಂದವರು ಹಣ್ಣನ್ನು ಒಯ್ಯುತ್ತಾರೆ, ತಿನ್ನುತ್ತಾರೆ ಅಷ್ಟೇ. ಮತ್ಯಾವ ಫೀಡ್ಬ್ಯಾಕೂ ಕೊಡುವುದಿಲ್ಲ ಎನ್ನುವುದು ಶ್ಯಾಮಸುಂದರ ಬೇಸರ. ಕೇರಳದ ತಳಿಪರಂಬದ ಕರಿಂಬಂ ಫಾರ್ಮಿನಲ್ಲಿ ಇದರ ದೊಡ್ಡ ತಾಯಿಮರವಿದೆ. ತೊಂಭತ್ತರ ದಶಕದ ಮಧ್ಯದಲ್ಲಿ ಗಾರ್ಸೀನಿಯಾ ಕನ್ನಾಡಿಗೆ ಬಂತು.
                ಮೂರ್ನಾಲ್ಕು ವರುಷದ ಹಿಂದೆ ಹವಾಯಿಯ ಹಣ್ಣು ಕೃಷಿಕ ಕೆನ್ ಲವ್ ಕನ್ನಾಡಿಗೆ ಬಂದಿದ್ದಾಗ ಇದರ ರಸಕ್ಕೆ ಮಾರುಹೋಗಿದ್ದರು. 'ಇದನ್ನು ಬೆಳೆದರೆ ಮಾರುಕಟ್ಟೆ ಮಾಡಬಹುದು' ಎಂದಿದ್ದರು. ಎರಡು ದಶಕದ ಹಿಂದೆ ಪುತ್ತೂರಿನ ಕೃಷಿಕ ಸೇಡಿಯಾಪು ಜನಾರ್ದನ ಭಟ್ಟರು ತಳಿಪರಂಬದ ಫಾರ್ಮಿನಿಂದ ಹಣ್ಣುಗಳನ್ನು ತಂದಿದ್ದರು. 'ಇದರ ಸ್ಕ್ವಾಷ್ ಮಾಡಿದ್ದೆ. ರುಚಿ ಸಾಮಾನ್ಯ. ತುಂಬಾ ಅಕರ್ಷಣೆ. ಜೇನಿನ ಬಣ್ಣ. ಶರಬತ್ತಿಗೆ ಉತ್ತಮ. ಸೋಡಾದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಒಂದು ಗ್ಲಾಸ್ ಕುಡಿದಾಗ ಮತ್ತೊಂದು ಗ್ಲಾಸ್ ಬೇಕೆನಿಸುತ್ತದೆ' ಎನ್ನುತ್ತಾರೆ.
             ಐದು ವರುಷದ ಹಿಂದೆ ಶ್ಯಾಮ್ಸುಂದರ್ ಅವರಲ್ಲಿಂದ ಮುಳಿಯ ವೆಂಕಟಕೃಷ್ಣ ಶರ್ಮರು ತಂದ ಕುಡಿಯನ್ನು ಪುನರ್ಪುಳಿಯ ಅಡಿಗಿಡಕ್ಕೆ ಕಸಿ ಕಟ್ಟಿದ್ದರು. ಈ ವರುಷ ಪ್ರಸವ ಪ್ರಕ್ರಿಯೆ ಶುರು! ಐದಾರು ಹಣ್ಣು ಸವಿಯಲು ಸಿಕ್ಕಿದೆ ಎನ್ನುತ್ತಾರೆ ಶರ್ಮ. ಮರದ ತುಂಬಾ ಹಣ್ಣುಗಳು ಹೆಚ್ಚಿರುವುದರಿಂದಲೋ ಏನೋ, ಈ ವರುಷ ಹಣ್ಣಿನ ಗಾತ್ರ ಸಣ್ಣದಾಗಿದೆ. ರುಚಿಯಲ್ಲಿ ವ್ಯತ್ಯಾಸವಿಲ್ಲ ಎನ್ನುವ ಹಿಮ್ಮಾಹಿತಿ ಕೊಡುತ್ತಾರೆ ಶ್ಯಾಮ್ ಸುಂದರ್. .(೦೮೨೫೬-೨೬೪೩೯೩)


Saturday, May 17, 2014

ಹರಟೆಯಲ್ಲಿ ಹುಟ್ಟಿಕೊಂಡ ವರ್ತಮಾನ ಭಾರತ






                ಸುಳ್ಯದ 'ಕೇಶವ ಕೃಪಾ'ದಲ್ಲೊಂದು ಹರಟೆ. ಬದುಕಿನ ಅಲಾರಂಗೆ ಪೂರಕ. ಇಲ್ಲಿ ಬುದ್ಧಿಗೆ ಕೆಲಸವಿತ್ತು.  ಯೋಚನೆಗಳನ್ನು ಕೆದಕುವ ಯತ್ನವಿತ್ತು. ಬೌದ್ಧಿಕ ಜ್ಞಾನಕ್ಕೆ ಮಸೆತ ನೀಡುವ ಗುರಿಯಿತ್ತು. ಮುಖ್ಯವಾಗಿ ಬದುಕಿನಲ್ಲಿ 'ಎಲ್ಲಿ ಎಡವಿದ್ದೇವೆ' ಎನ್ನುವ ಪಾಠವಿತ್ತು. ಉಳಿಸಿಕೊಂಡದ್ದಕ್ಕಿಂತ ಹೆಚ್ಚು ಕಳೆದುಕೊಂಡಿದ್ದರ ಜ್ಞಾಪನವಿತ್ತು. ಎಲ್ಲವನ್ನು ಗಾಳಿಸಿದಾಗ ಸಿಕ್ಕ ಉತ್ತರಕ್ಕೆ ಇಳಿಸಂಜೆಯ ಭಾವವಿತ್ತು. ಬದುಕಿನ ಕಾಲ ಮಿಂಚಿತ್ತು.
                'ಮೌಲ್ಯಗಳನ್ನು ರಕ್ಷಿಸುತ್ತಿರುವುದು ಹಿರಿಯರೋ? ಕಿರಿಯರೋ?' ಹರಟೆಯ ವಿಷಯ. ಕೇಶವ ಕೃಪಾಕ್ಕೆ ಕಾಲಿಟ್ಟಾಗ 'ನಿಮ್ಮದು ಯಾವ ಪಕ್ಷ, ಹಿರಿಯರದೋ, ಕಿರಿಯರದೋ' ವಿದ್ಯಾರ್ಥಿಗಳಿಂದ ಪ್ರಶ್ನೆ. ಅರೆ, ಸಂಸ್ಕಾರ ಶಿಕ್ಷಣವನ್ನು ಕಲಿಯುವ ಪುಟಾಣಿಗಳಿಗೆ ಪಕ್ಷದ ಉಸಾಬರಿ ಯಾಕಪ್ಪಾ? ಮತ್ತೆ ತಿಳಿಯಿತು, ಹರಟೆ ವೇದಿಕೆಯ ಎರಡು ಪಂಗಡಗಳನ್ನು ಪಕ್ಷ ಎಂದಿದ್ದಾರಷ್ಟೇ. ಚಿಕ್ಕ ಪುಟಾಣಿಗಳಲ್ಲೂ ಕುತೂಹಲ. ವಿಷಯದ ಆಳಕ್ಕೆ ಇಳಿಯಲು ತ್ರಾಸವಾದರೂ ಸ್ಪರ್ಶಿಸುವ ಕಾತರ. ಸುಮಾರು ಎರಡು ಗಂಟೆ ಪುಟಾಣಿಗಳು ಆಕಳಿಸಲಿಲ್ಲ. ಹಿರಿಯರು ಮೊಬೈಲುಗಳಲ್ಲಿ ಬೆರಳಾಡಿಸಲಿಲ್ಲ. ಹಸಿದ ಜ್ಞಾನದ ಮೂಸೆಯೊಂದಿಗೆ ಹರಟೆಯ ರಿಂಗಣದೊಂದಿಗೆ ದಿಂಞಣ.
              ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ, ಹರಟೆಯ ಮಧ್ಯೆ ಚಿಮ್ಮಿದ ಸೊಲ್ಲು. ಕೃಷಿಯೂ ಗೌರವದ ವೃತ್ತಿ, ಹೊಟ್ಟೆ ತುಂಬುವ ಕಾಯಕ ಎನ್ನುವ ಮನಃಸ್ಥಿತಿ ಹೆತ್ತವರಲ್ಲಿ ಎಲ್ಲಿಯವರೆಗೆ ಇರುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆ ಲಂಬಿಸುತ್ತಲೇ ಇರುತ್ತದೆ. ತನಗೆ ಬದುಕನ್ನು, ಐಶ್ವರ್ಯವನ್ನು ನೀಡಿದ ಭೂಮಿಯನ್ನು ಕಾಂಚಾಣದ ಅಹಮಿಕೆ ಕುಣಿಸಿದಾಗ 'ಮನೆಯ ಸಂಸ್ಕೃತಿ' ಮೌನವಾಗುತ್ತದೆ. ಕೃಷಿ ಪ್ರಯೋಜನವಿಲ್ಲವೆಂದ ಹಿರಿಯರ ನಿತ್ಯ ಗೊಣಗಾಟದ ಮಾಲೆ ಪಟಾಕಿಗಳಿಂದ ಬಾಲ್ಯವನ್ನು ಕಟ್ಟಿಕೊಂಡ ಮನಸ್ಸುಗಳು ನಗರ ಸೇರುತ್ತವೆ. ಒಮ್ಮೆ ಯುವಕನನ್ನು ನಗರ ಸೆಳೆದುಕೊಂಡಿತೋ ಮತ್ತೆಂದೂ ಆತ ಹಳ್ಳಿಯ ಬಸ್ಸನ್ನು ಏರಲಾರ. ಈ ವಾಸ್ತವದೊಳಗೆ ಸುತ್ತಿದ ಹರಟೆ ಕೃಷಿಕನಿಗೆ ಹೆಣ್ಣು ಕೊಡುವುದಿಲ್ಲ ಎನ್ನುವಲ್ಲಿಗೆ ತಲಪುವಾಗ 'ಹಿರಿಯರ-ಕಿರಿಯರ' ಸಮರ್ಥನೆಗಳ ಮಹಾಪೂರ ಹರಿದಿತ್ತು.
              ಆಧುನಿಕ ವ್ಯವಸ್ಥೆಗಳು ಯುವಕರ ಜ್ಞಾನಾಭಿವೃದ್ಧಿಗೆ ಪೂರಕ ಎನ್ನುವಂತೆ ಬಿಂಬಿಸಲಾಗುತ್ತದೆ. ಎಸ್.ಎಂ.ಎಸ್.ಗಳು ಬದುಕನ್ನು ಕಸಿದುಕೊಳ್ಳುತ್ತವೆ. ಆವೇಶಭರಿತ ಮಾತು-ಕೃತಿಗಳಿಂದ ಅಪಾಯ ಹೆಚ್ಚು. ಅಪಕ್ವತೆಯನ್ನೇ ಪಕ್ವತೆಯೆಂದು ಪ್ರಸ್ತುತಪಡಿಸುವ ಕಾಲಮಾನದಲ್ಲಿ ಮೌಲ್ಯಗಳು ನಾಚಿ ನೀರಾಗುತ್ತವೆ. ಆ ಹೊತ್ತಿಗೆ ಬೇಕು, ಹಿರಿಯರ ಅನುಭವಜನ್ಯ ಅನುಭವಗಳು. ಅಂಗೈಯೊಳಗಿನ ಪ್ರಪಂಚ ಕ್ಷಣಿಕ. ಬೊಗಸೆ ಜ್ಞಾನ ಪರಿಪೂರ್ಣವಲ್ಲ. ಅದರಾಚೆಗೂ ಭಿನ್ನವಾದ ಲೋಕವಿದೆ ಎನ್ನುವ ಸತ್ಯವನ್ನು ಕಿರಿಯರಿಗೆ ತೋರಿಸುವ ಕೈತಾಂಗುಗಳು ಬೇಕಾಗಿವೆ. ಆಗಲೇ ಕಿರಿಯರ ಮೌಲ್ಯದ ಹುಡುಕಾಟದ ಹಾದಿ ಸುಗಮ.
                  ಪ್ರತಿಯೊಬ್ಬ ಕಿರಿಯನ ಹಿಂದೆ ಹಿರಿಯನೊಬ್ಬನ ತ್ಯಾಗವಿದೆ. ಅದಕ್ಕೆ 'ಬದುಕಿನ ಅನಿವಾರ್ಯ' ಪಟ್ಟವನ್ನು ಕಟ್ಟಲಾಗದು. ಅದು ಹಿರಿತನದ ವ್ಯಾಪ್ತಿ. ಮಾಡಲೇಬೇಕಾದ ಕರ್ಮ. ಹುಕ್ಕಬುಕ್ಕರ ಹಿಂದೆ ವಿದ್ಯಾರಣ್ಯ, ನರೇಂದ್ರರ ಹಿಂದೆ ರಾಮಕೃಷ್ಣ ಪರಮಹಂಸ, ಚಾಣಕ್ಯರ ಹಿಂದೆ ಚಂದ್ರಗುಪ್ತ.. ಇಲ್ಲಿರುವ ಮನಸ್ಸುಗಳಿಗೆ ಹೇಗೆ 'ಹಿರಿಯ-ಕಿರಿಯ' ಪಟ್ಟವನ್ನು ಕಟ್ಟಬಹುದು? ಒಬ್ಬನಿಂದಾಗಿ ಇನ್ನೊಬ್ಬನಲ್ಲ. ಅವನಿಲ್ಲದೆ ನಾನಿಲ್ಲ ಎಂಬ ಭಾವವಲ್ಲ.  ಎರಡೂ ಮಿಳಿತವಾದ ವ್ಯಕ್ತಿತ್ವ. ಹರಟೆಯಲ್ಲಿ ಬಹು ಸ್ವಾರಸ್ಯವಾಗಿ ಮೂಡಿ ಬಂದ ಪ್ರಸ್ತುತಿಗಳಿವು.
                 'ಕಿರಿಯರಿಗೆ ಹಿರಿಯರು ಮಾರ್ಗದರ್ಶನ ಮಾಡುತ್ತಾ ಇಲ್ಲ'? ಸತ್ಯವಲ್ವಾ? ಶಾಲೆಗೆ ಫೀಸು ಕಟ್ಟಿ, ಸಮವಸ್ತ್ರ ಖರೀದಿಸಿ, ಅಟೋರಿಕ್ಷಾಗೆ ವ್ಯವಸ್ಥೆ ಮಾಡಿದಲ್ಲಿಗೆ ಹಿರಿಯರ ಕರ್ತವ್ಯ ಮುಗಿಯಿತು ಎನ್ನುವ ಕಾಲಮಾನದಲ್ಲಿದ್ದೇವೆ. ಬೇಕಾದರೆ ಟ್ಯೂಶನ್ ಹೊರೆ. ಎಷ್ಟು ಹಿರಿಯರು ಮಕ್ಕಳಿಗೆ ಜೀವನಪಾಠ ಕಲಿಸಿದ್ದಾರೆ. ಗಿಡ, ಮರ, ಬಳ್ಳಿ, ಕಾಡುಹಣ್ಣುಗಳು, ತರಕಾರಿ, ಪರಿಸರ.. ತೋರಿಸಿದ್ದಾರೆ? ಊಟದ ಬಟ್ಟಲಿನಲ್ಲಿ ಎಷ್ಟು ರುಚಿಗಳನ್ನು ಉಣಿಸಿದ್ದಾರೆ? ಪೌರಾಣಿಕವಾದ ಸತ್ಯಗಳನ್ನು ದರ್ಶನ ಮಾಡುವ ಸ್ಥಿತಿ ಮನೆಯಲ್ಲಿದೆಯೇ? ಓದುವ ಪಾಲಕರು ಎಷ್ಟಿದ್ದಾರೆ? ನಾವು ಓದದೆ ಮಕ್ಕಳನ್ನು ಓದೆಂದು ಒತ್ತಾಯಿಸುವ ನಮಗೆ ನೈತಿಕ ಹಕ್ಕಿದೆಯೇ? ಮಗುವಿಗೆ ಕೆಟ್ಟ ಬಾಲ್ಯವನ್ನು ಕೊಟ್ಟವರು ಯಾರು? ಈ ಪ್ರಶ್ನೆಗಳನ್ನು ಮುಂದಿಟ್ಟಾಗ ಹಿರಿಯರ ಮಾತು ಮೌನವಾಗುತ್ತದೆ.
              ತಾಳ್ಮೆ ಇದ್ದರೆ ಮೌಲ್ಯ ಉಳಿಯುತ್ತದೆ. ಆವೇಶದಿಂದ ನಾಶ. ಬದುಕಿನಲ್ಲಿ ಅರ್ಚನೆ ಬೇಡ, ಅರ್ಪಣೆ ಬೇಕು. ಮೌಲ್ಯ ಎನ್ನುವುದು ಧರ್ಮದಿಂದ ಧರ್ಮಕ್ಕೆ ಬದಲಾಗುತ್ತದೆ. ಒಬ್ಬನ ಕಷ್ಟ ತನಗೆ ಗೊತ್ತಾಗಬೇಕಾದರೆ ತನಗೆ ಸ್ವತಃ ಕಷ್ಟ ಬಂದಾಗಲಷ್ಟೇ ಸಾಧ್ಯ. ಹಿರಿಯರ ಜ್ಞಾನ ದೀವಿಗೆಯು ಕಿರಿಯರಿಗೆ ಮಾರ್ಗದರ್ಶಿಯಾದಾಗ ಮೌಲ್ಯ ಉಳಿಯುತ್ತದೆ, ಬೆಳೆಯುತ್ತದೆ. ಆಗ ಮೌಲ್ಯಾಧಾರಿತ ಜೀವನಕ್ಕೆ ನಾಂದಿ. ಹಿರಿಯರಲ್ಲಿ ಜೀವನಾನುಭವ ಇದೆ. ಕಿರಿಯರಲ್ಲಿ ಕ್ರಿಯಾಶೀಲತೆಯಿದೆ. ಇವೆರಡೂ ಮಿಳಿತವಾದಾಗ ಮೌಲ್ಯದ ಉನ್ನತಿ.
               ಹರಟೆಯ ಕೊನೆಗೆ ಅರಿವಾಯಿತು, 'ಹಿರಿಯರ ನುಡಿ-ಕಿರಿಯರ ನಡೆ' ಒಂದಾಗಬೇಕಾದುದು ಭವಿಷ್ಯ ಭಾರತದ ಅಗತ್ಯ. ಹರಟೆಯಲ್ಲಿ ಎರಡೂ ಪಂಗಡಗಳ ತಿಕ್ಕಾಟ, ವಿಮರ್ಶೆ, ಕೊಂಕು, ವ್ಯಂಗ್ಯ, ಚುಚ್ಚುಮಾತುಗಳು ಸೋದಾಹರಣಗಳ ಮೂಲಕ ಮಿಂಚಿ ಮರೆಯಾಯಿತು. ಮಧ್ಯೆ ವಾತಾವರಣ ಬಿಸಿಯೇರಿದ ಅನುಭವ. ಪೌರಾಣಿಕ, ಚಾರಿತ್ರಿಕ, ಸಮಕಾಲೀನ ರಾಜಕೀಯ ವಿಶ್ಲೇಷಣೆ.
                  ವಾಹಿನಿಗಳಲ್ಲಿ ಹಿರೆಮಗಳೂರು ಕಣ್ಣನ್ ನಡೆಸಿಕೊಡುವ ಮಾದರಿ ಎಲ್ಲರಿಗೂ ಪರಿಚಿತ. ಕೇಶವ ಕೃಪಾದ ಹರಟೆಯೂ ಇದರದ್ದೇ ಅಚ್ಚು. ಹರಟೆ ಮುಗಿದ ಬಳಿಕವೂ ಮೌಲ್ಯಗಳ ಹುಡುಕಾಟದಲ್ಲಿ ಎಲ್ಲರ ಚಿತ್ತ ಸಕ್ರಿಯವಾಗಿರುವುದು ಕಾರ್ಯಕ್ರಮದ ಯಶದ ಸಂಕೇತ. ಒಂದು ಕಲಾಪ ಇಷ್ಟು ಗುಂಗು ಹಿಡಿಸಿದ್ದರೆ ಸಾರ್ಥಕ.
                 ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ 'ಹಿರಿಯ ವಿದ್ಯಾರ್ಥಿಗಳ ಪರಿಷತ್' ಸ್ಥಾಪನೆಯ ದಿನದಂದು ಹರಟೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಸ್ಖಲಿತ ಮಾತುಗಾರ ತುಮಕೂರಿನ ನಿಕೇತ್ ರಾಜ್, ಆಳ ಯೋಚನೆಯ ಪೂರ್ಣಾತ್ಮರಾಮ ಈಶ್ವರಮಂಗಲ, ಚಿಂತಕ ಸಂಪದಸಾಲು ಸಂಪಾದಕ ವೆಂಕಟೇಶ ಸಂಪ, ಚಿಮ್ಮು ಉತ್ಸಾಹದ ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆ, ವಿಚಾರಗಳನ್ನು ತೂಗಿ ಮಾತನಾಡುವ ಅಧ್ಯಾಪಕ ಪಿ. ಪ್ರಕಾಶ್ ಮೂಡಿತ್ತಾಯ, ಭಾವಕ್ಕೆ ಭಾಷೆ ಕೊಡುವ ಲೇಖಕಿ ಸೌಮ್ಯಾ ಭಾಗ್ವತ್ ಕುಮಟಾ ಹರಟೆ ಮಾಡುತ್ತಿದ್ದರೆ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರು ವಿಷಯ ಮತ್ತು ಸಮಯದ ಮಿತಿಯಲ್ಲಿ ಮೂಗುದಾರ ಹಾಕುತ್ತಿದ್ದರು. ಒಟ್ಟಂದದ ಕಾರ್ಯಕ್ರಮ.
              ಸಮಕಾಲೀನ ವಿಚಾರವೊಂದರ ಮಥನಕ್ಕೆ ಹರಟೆಯಂತಹ ಮಾಧ್ಯಮ ಉತ್ತಮ. ಅದೂ ಪ್ರೇಕ್ಷಕರಲ್ಲಿ ಮತ್ತು ತರಲೆ ಮಾಡುವವರಲ್ಲಿ ಸಮಾನ ಮನಸ್ಕತೆ ಇದ್ದಾಗ ಮಾತ್ರ.
               ಕೇಶವ ಕೃಪಾವು ವೇದ-ಯೋಗ-ಕಲೆಗಳ ತಾಣ. ಪುರೋಹಿತ ನಾಗರಾಜ ಭಟ್ಟರ ಮೆದುಳಮರಿ. ಸಂಸ್ಕೃತಿಯನ್ನು ಪ್ರೀತಿಸುವ ಅಧ್ಯಾಪಕರು, ವಿದ್ಯಾರ್ಥಿಗಳು, ಪಾಲಕರು ಇಲ್ಲಿನ ಆಸ್ತಿ. ಜೀವನ ಪಾಠವನ್ನು ಕಲಿಸುವ ಅಪರೂಪದ ಗುರುಕುಲ.

Thursday, May 1, 2014

ಅನ್ನದ ಬಟ್ಟಲಲ್ಲಿ 'ಸತ್ಯದ ಬೆಳೆ'

                 ಎಪ್ರಿಲ್ 26. ರಾತ್ರಿ ಧಾರಾಕಾರ ಮಳೆ. ಕರೆಂಟ್ ಕೈಕೊಟ್ಟಿತ್ತು. ಜನರೇಟರ್ ಮುಷ್ಕರ ಹೂಡಿತ್ತು. ಚಾರ್ಜರಿನ ಬೆಳಕು ನಿಧಾನವಾಗಿ ನಿದ್ರೆಗೆ ಜಾರುತ್ತಿದ್ದಂತೆ ಪಾಕಶಾಲೆಯಲ್ಲಿ ಸೂಪಜ್ಞರ ಒತ್ತಡ ಏರುತ್ತಿತ್ತು! ಅನ್ನ, ಸಾರು, ಸಾಂಬಾರು, ಪಲ್ಯ, ಹೋಳಿಗೆ.. ಮಾಮೂಲಿ ಖಾದ್ಯಗಳಿರುತ್ತಿದ್ದರೆ ನಿರಾಳವಾಗಿರುತ್ತಿದ್ದರು. ಮರುದಿವಸ ದಕ್ಷಿಣ ಕನ್ನಡ ಜಿಲ್ಲೆಗೆ ಅಪರೂಪದ್ದಾದ ಸಿರಿಧಾನ್ಯಗಳ ಹಬ್ಬ. ಅಂದು ಸಿರಿಧಾನ್ಯಗಳದ್ದೇ ಖಾದ್ಯಗಳು. ತಯಾರಿಸಿದ ಅನುಭವವಿಲ್ಲ. ವ್ಯತ್ಯಾಸವಾದರೆ ಹೊಣೆಯನ್ನು ಅಡುಗೆಯವರೇ ಹೊತ್ತುಕೊಳ್ಳಬೇಕಲ್ಲಾ.. ಸೂಪಜ್ಞ ಚಂದ್ರಶೇಖರ ಭಟ್ ಆತಂಕ.
                 ಕಡಂಬಿಲ ಕೃಷ್ಣಪ್ರಸಾದ್, ಮುಳಿಯ ವೆಂಕಟಕೃಷ್ಣ ಶರ್ಮರು ಎರಡು ತಿಂಗಳ ಹಿಂದಿನಿಂದಲೇ ಹುಬ್ಬಳ್ಳಿಯಿಂದ ಸಿರಿಧಾನ್ಯ(millet, ಕಿರುಧಾನ್ಯ, ತೃಣಧಾನ್ಯ)ಗಳನ್ನು ತರಿಸಿ, ಜಿಲ್ಲೆಯ ಅಡುಗೆಗೆ ಮಿಳಿತವಾಗಬಹುದಾದ ಖಾದ್ಯಗಳನ್ನು ಅಡುಗೆಮನೆಯಲ್ಲಿ ಪ್ರಾಯೋಗಿಕವಾಗಿ ತಯಾರಿಸಿ, ಸವಿದು ಮೆನು ಸಿದ್ಧಪಡಿಸಿದ್ದರು. ಸೂಪಜ್ಞರ ಕ್ಷಣಕ್ಷಣದ ಸಂದೇಹಗಳನ್ನು ಅಡುಗೆಮನೆಯಲ್ಲಿದ್ದೇ ಪರಿಹರಿಸಬೇಕಾದ ಸವಾಲುಗಳು.
                ಅಂತೂ ಸಿದ್ಧವಾಯಿತು ನೋಡಿ : ರಾಗಿ ಹಾಲುಬಾಯಿ. ಊದಲು ಚಿತ್ರಾನ್ನ. ನವಣೆ ಅನ್ನ. ಸಾವೆ ಪಾಯಸ ಮತ್ತು ಮೊಸರನ್ನ. ಬರಗ ಕೇಸರಿಬಾತ್. ಜೋಳದ ರೊಟ್ಟಿ. ರಾಗಿ ಪಾನೀಯ. ಅಂದಿನ ಭೋಜನದಲ್ಲಿ ಅಕ್ಕಿಯ ಅನ್ನಕ್ಕೆ ರಜೆ. ಸಾರು, ಸಾಂಬಾರಿಗೆ ವಿಶ್ರಾಂತಿ. ಇದನ್ನೆಲ್ಲಾ ನಿತ್ಯ ಉಂಡ ನಾಲಗೆಗೆ ಸಿರಿಧಾನ್ಯಗಳ ಖಾದ್ಯಗಳು ಸವಿಯಾದುವು. ಜತೆಗೆ ಐಟಿ ಉದ್ಯೋಗಿ ಮಂಚಿಯ ವಸಂತ ಕಜೆಯವರ ರಾಗಿ ಐಸ್ಕ್ರೀಂ.
               ರಾಗಿಯ ಬಳಕೆ ಗೊತ್ತು. ರಾಗಿ ಮುದ್ದೆ, ದೋಸೆ, ಕಷಾಯ, ಅಂಬಲಿ..ಗಳ ಸವಿಯ ಪರಿಚಯವಿದೆ. ಒಂದು ಕಾಲಘಟ್ಟದಲ್ಲಿ ರಾಗಿಯನ್ನು ಕುಮೇರಿಗಳಲ್ಲಿ ಬೆಳೆಸುವ ಪರಿಪಾಠವಿತ್ತು. ಅರ್ಧ ಶತಮಾನಗಳ ಹಿಂದೆ ನವಣೆ, ಬರಗ, ಸಾಮೆ ಕರಾವಳಿಯಲ್ಲಿ ಬೆಳೆಯುತ್ತಿರುವ ಕಾಲವನ್ನು ಜ್ಞಾಪಿಸಿಕೊಳ್ಳುವ ಹಿರಿಯರು ಸಿಗುತ್ತಾರೆ. ಈಗ ಸಿರಿಧಾನ್ಯ ಬಿಡಿ, ಅನ್ನಕ್ಕೂ ಪರಾವಲಂಬನೆ. 
                 ಬದುಕಿನಿಂದ ದೂರವಾದ, ಬುದ್ಧಿಪೂರ್ವಕವಾಗಿ ದೂರಮಾಡಿದ, ಅರೋಗ್ಯಕ್ಕೆ ಸಾಥ್ ಆದ ಸಿರಿಧಾನ್ಯಗಳಲ್ಲಿ ಕೆಲವಾದರೂ ಊಟದ ಬಟ್ಟಲು ಸೇರಬೇಕು ಎನ್ನುವ ಆಶಯ. ಹಬ್ಬದಲ್ಲಿ ಮಾತಿನಷ್ಟೇ ಭೋಜನಕ್ಕೂ ಮಹತ್ವ.  ದೂರದೂರಿನಿಂದ ತರಿಸಿಕೊಂಡ ಸಿರಿಧಾನ್ಯಗಳು ಉದರ ಸೇರಿದಾಗ, 'ನಾವೂ ಬೆಳೆಯಬೇಕು, ತಿನ್ನಬೇಕು, ಸಿರಿಧಾನ್ಯಗಳು ಎಲ್ಲಿ ಸಿಗುತ್ತವೆ' ಎನ್ನುವ ಪ್ರಶ್ನೆ. 'ಸಿರಿಧಾನ್ಯಗಳು ಅನ್ನಕ್ಕೆ ಪರ್ಯಾಯವಾಗಬಹುದೆ?' ಎಂಬ ಕುತೂಹಲ.
                 ಇವುಗಳ ಮುಂದೆ ನಮ್ಮೂರಿನ ಭತ್ತದ ಸ್ಥಿತಿಯನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಭತ್ತದ ಬದುಕಿನಿಂದ ಸಂಸ್ಕೃತಿ ದೂರವಾಗಿದೆ. ಗದ್ದೆಗಳಲ್ಲೆಲ್ಲಾ ಬಹುಮಹಡಿ ಕಟ್ಟಡಗಳ ಅಡಿಪಾಯಗಳಾಗಿವೆ.  'ದುಡ್ಡು ಕೊಟ್ಟರೆ ಅಕ್ಕಿ ಅಂಗಡಿಯಲ್ಲಿದೆ' ಎನ್ನುವ ಮೈಂಡ್ ಸೆಟ್.  ಅಳಿದುಳಿದ ಗದ್ದೆಗಳಲ್ಲಿ ಬೇಸಾಯವಾಗುತ್ತಿರುವುದು ಸಮಾಧಾನ. ಅಮೈ ದೇವರಾಯರ ಮಾತು ನೆನಪಾಗುತ್ತದೆ, ಭತ್ತದ ಬೇಸಾಯವು ಕ್ಯಾಲಿಕ್ಯುಲೇಟರನ್ನು ಕೈಯಲ್ಲಿ ಹಿಡಿದು ಮಾಡುವಂತಹುದಲ್ಲ. ಅದು ಹೊಟ್ಟೆಯ ಪ್ರಶ್ನೆ.
ರಾಸಾಯನಿಕ ಬೇಡದ, ಎಲ್ಲಾ ಕಾಲದಲ್ಲೂ ಹೊಂದುವ ಸಿರಿಧಾನ್ಯವು ನಿಜಕ್ಕೂ 'ಸತ್ಯದಬೆಳೆ.' ಜನರಿಗೆ ಯಾವ ರೀತಿ ಖಾದ್ಯ ಇಷ್ಟವೋ ಅದನ್ನು ಮಾಡಿದರೆ ಇಷ್ಟವಾಗಬಹುದು. ಪಾಕವಿಧಾನಗಳ ದಾಖಲಾತಿ ಬೇಕಾಗಿದೆ. ಇದರಲ್ಲಿರುವ ಪೌಷ್ಟಿಕಾಂಶಗಳನ್ನು ಪ್ರಸ್ತುತ ಪಡಿಸಿದಷ್ಟೇ ಸಾಲದು; ಎಲ್ಲಿ ಸಿಗುತ್ತದೆ, ಬೆಳೆಯುವ ವಿಧಾನಗಳೂ ಕೃಷಿಕರನ್ನು ತಲುಪಬೇಕು - ಹಿರಿಯ ಪತ್ರಕರ್ತ ಶ್ರೀಪಡ್ರೆಯವರ ಕಿವಿಮಾತು.
                   ಮಂಗಳೂರಿನ ಗೃಹಿಣಿ ನಳಿನಿ ಮಾಯಿಲಂಕೋಡಿ, ಮಂಚಿಯ ಶಿಲ್ಪಾ ವಸಂತ ಕಜೆ ಸಿರಿಧಾನ್ಯ ಪ್ರಾತ್ಯಕ್ಷಿಕೆಗಾಗಿ ತೆಗೆದುಕೊಂಡ ಶ್ರಮ ಗುರುತರ. 'ನಮ್ಮ ಜನರ ಬಾಯಿಗೆ ಸಿರಿಧಾನ್ಯಗಳು ಹೇಗೆ ರುಚಿಸಬಹುದು. ಯಾವುದು ಆಗದೇ ಇರುವಂತಾದ್ದು' ಎಂದು ಯೋಚಿಸಿ ಡೆಮೋ ನೀಡಿದ್ದಾರೆ. ತಂತಮ್ಮ ಅಡುಗೆ ಮನೆಯಲ್ಲಿ ತಯಾರಿಸಿ, ಆಸಕ್ತರಿಗೆ ಹಂಚಿ, ಹಿಮ್ಮಾಹಿತಿ ಪಡೆದು, ಕೊನೆಗೆ ಅದನ್ನು ಕಾಗದಕ್ಕಿಳಿಸಿದ್ದಾರೆ. ಪ್ರಾತ್ಯಕ್ಷಿಕೆಯೊಂದಿಗೆ ಮಾಡುವ ವಿಧಾನವೂ ಜತೆಯಲ್ಲೇ ಸಿಕ್ಕಾಗ ಪರಿಣಾಮ ಹೆಚ್ಚು.
                ಅಡುಗೆ ಪ್ರಾತ್ಯಕ್ಷಿಕೆಗಳಿಗೆ ಮಹಿಳೆಯರ ಒಲವು ಹೆಚ್ಚು. ಸಿರಿಧಾನ್ಯ ಕಾರ್ಯಕ್ರಮದಲ್ಲಿ ಗಂಡಸರ ಸಂಖ್ಯೆಯೂ ಅಧಿಕವಿತ್ತು. ಕಾರಣವಿಷ್ಟೇ, ಹೊಸತಾದ ಬೆಳೆಯೊಂದರ ಕುರಿತ ಕಾಳಜಿ. ತಿಳಿದುಕೊಳ್ಳಬೇಕೆಂಬ ಹಪಾಹಪಿ. ಪ್ರಾತ್ಯಕ್ಷಿಕೆಯಲ್ಲಿ ತಯಾರಾದ ಖಾದ್ಯಗಳನ್ನು ಸವಿಯುವ ಕುತೂಹಲ. ಅಕ್ಕಿಯಿಂದ ಮಾಡಬಹುದಾದ ಎಲ್ಲಾ ಪದಾರ್ಥಗಳನ್ನು ಸಿರಿಧಾನ್ಯಗಳಿಂದ ಮಾಡಬಹುದು.
                 ಇಷ್ಟೊಂದು ಪೌಷ್ಟಿಕಾಂಶವಿರುವ ಸಿರಿಧಾನ್ಯಗಳು ಯಾಕೆ ಅಜ್ಞಾತವಾದುವು? ಸಿರಿಧಾನ್ಯಗಳ ಉಳಿವಿಗೆ ಶ್ರಮಿಸುತ್ತಿರುವ ಅನಿತಾ ಪೈಲೂರು ಹೇಳುತ್ತಾರೆ, ಪಡಿತರ ಬಂದ ನಂತರ ಅಕ್ಕಿ, ಗೋಧಿಗೆ ಬೇಡಿಕೆ. ಇದರ ಊಟ ಮಾಡಿದರೆ ಸ್ಟೇಟಸ್ ಹೆಚ್ಚು ಎನ್ನುವ ಭಾವನೆ. ಅಂಗಡಿಯಿಂದ ಕೊಂಡು ಉಣ್ಣುವ ಹಂಬಲ ಹೆಚ್ಚಾಯಿತು. ಜತೆಗೆ ಸಿರಿಧಾನ್ಯ ಉಣ್ಣುವವರು ಬಡವರು ಎನ್ನುವ ಮನಃಸ್ಥಿತಿ. ಇಳುವರಿ ಕೇಂದ್ರಿತ ಬೆಳೆಯನ್ನು ಮಾಡಲು ಆರಂಭಿಸಿದ ಬಳಿಕ ಸಿರಿಧಾನ್ಯಗಳಿಗೆ ಇಳಿಲೆಕ್ಕ. ನೂರಾರು ತಳಿಗಳು ಇರಬೇಕಾದ್ದಲ್ಲಿ ಈಗ ಕೇವಲ 20-25 ತಳಿಗಳು ಉಳಿದುಕೊಂಡಿವೆಯಷ್ಟೇ.
                 ಸಿರಿಧಾನ್ಯಗಳಿಗೆ ಹದಿನೈದು ಸಾವಿರ ವರುಷಗಳಿಗೂ ಮಿಕ್ಕಿದ ಇತಿಹಾಸವಿದೆ. 1940ರ ಹೊತ್ತಿಗೆ ಬೆಂಗಳೂರು ಸುತ್ತಮುತ್ತ ಹಾರಕ ಯಥೇಷ್ಟವಾಗಿ ಬೆಳೆಯುತ್ತಿದ್ದರು. ಯಾವ್ಯಾವ ಋತುವಿನಲ್ಲಿ ಏನೆಲ್ಲಾ ತಿನ್ನಬೇಕು ಎನ್ನುವುದು ಹಿರಿಯರಿಗೆ ಗೊತ್ತಿತ್ತು. ಅದು ಅನುಭವದಿಂದ ಬಂದಿರುವ ಜ್ಞಾನ. ಅಡುಗೆ ಮಾಡುವುದು ವಿಜ್ಞಾನವಲ್ಲ. ಅದೊಂದು ಅದ್ಭುತ. ಅಲ್ಲಿ ಪ್ಯಾಕೇಜ್ ಗುಲ್ಲು ಇಲ್ಲ, ಮಾರುಕಟ್ಟೆ ಲಾಬಿ ಇಲ್ಲ, ಬ್ರಾಂಡ್ಗಳ ಪೈಪೋಟಿ ಇಲ್ಲ!
                    ಬೆಂಗಳೂರಿನ ಡಾ.ಕೆ.ಸಿ.ರಘು - ಜಾಗತಿಕವಾಗಿ ಆಹಾರ, ಆರೋಗ್ಯದ ಕಣ್ಣಿಗೆ ಕಾಣದ ವ್ಯವಸ್ಥಿತ ಜಾಲಗಳತ್ತ ಬೆಳಕು ಹಾಕಿದರು : ಡಯಾಬಿಟೀಸ್ ಅಕ್ಕಿ, ಶುಗರ್ ಇಲ್ಲದ ಸಕ್ಕರೆ.. ಹೀಗೆ ಕಾಯಿಲೆಯ ಕನ್ನಡಕ ಹಾಕಿ ಆಹಾರವನ್ನು ನೋಡುತ್ತಿದ್ದೇವೆ. ಆಹಾರದಲ್ಲಿ ವೈವಿಧ್ಯತೆಯನ್ನು ಎಷ್ಟು ಉಳಿಸಿಕೊಳ್ಳುತ್ತೇವೋ ಆಗಲೇ ಆರೋಗ್ಯ. ನಾವು ಮಾದರಿ ಎಂದು ಸ್ವೀಕರಿಸಿದ ಅಮೇರಿಕಾದಲ್ಲಿ ಒಬ್ಬ ವರ್ಷಕ್ಕೆ ನಾಲ್ಕು ಸಾವಿರ ಡಾಲರ್ ಆಹಾರಕ್ಕೆ ಖರ್ಚು ಮಾಡಿದರೆ, ಎಂಟು ಸಾವಿರ ಡಾಲರ್ ಔಷಧಿಗೆ ಖರ್ಚಾಗುತ್ತದೆ. ಆದರೂ ಶೇ.60ರಷ್ಟು ಬೊಜ್ಜು ಇನ್ನೂ ಉಳಕೊಂಡಿದೆ!
                        ಆಹಾರಗಳು ಮನುಷ್ಯ ಸಮುದಾಯವನ್ನು ಸಾಕಿಕೊಂಡು ಬಂದಿದೆ. ಅದನ್ನು ಕಳೆಯೋದಕ್ಕೆ ನಮಗೆ ಹಕ್ಕಿದೆಯೇ? ಯಾವುದೇ ಒಂದು ಬೆಳೆಯ ಔಷಧೀಯ ಗುಣ ಗೊತ್ತಿಲ್ಲದೇ ಇದ್ದರೆ ಅದು ಕಳೆಯಾಗುತ್ತದೆ. ಮರೆಯಾಗುತ್ತದೆ. ಭಾರತದಲ್ಲಿ ಶೇ.71 ಮಂದಿ ರೈತರು ಕೃಷಿಯನ್ನು ಬಿಡಲು ಸಿದ್ಧರಾಗಿದ್ದಾರೆ. ಬೆಲೆಯಿಲ್ಲ, ಬೆಳೆಯಿಲ್ಲ.. ಹೀಗೆ ಇಲ್ಲಗಳ ಸಂತೆ. ಆಡಳಿತ ವ್ಯವಸ್ಥೆಗೆ ರೈತರ ಬಗ್ಗೆ ಗೊತ್ತಿಲ್ಲ. ಸಂವಹನವೂ ಇಲ್ಲ. ಎಲ್ಲವೂ ಸೂಪರ್ ಮಾರ್ಕೆಟಿನಲ್ಲಿ ಸಿಗುತ್ತದೆ, ಮತ್ಯಾಕೆ ಕೃಷಿ ಮಾಡಬೇಕು ಎನ್ನುವ ಮನಃಸ್ಥಿತಿಯನ್ನು ವ್ಯವಸ್ಥೆಗಳು ರೂಪಿಸುತ್ತಿವೆ.
                    'ಆಹಾರ ಸಂಸ್ಕರಣೆ' ಎನ್ನುವುದು ವ್ಯಾಪಾರ. ಇದನ್ನು ಡಾ.ರಘು ಅರ್ಥಪೂರ್ಣವಾಗಿ ಹೇಳುತ್ತಾರೆ - ಅಕ್ಕಿ ತೆಕ್ಕೊಂಡು ಮಿಲ್ಲಿಗೆ ಹೋಗ್ತೇವೆ.  ಮಿಲ್ಲಲ್ಲಿ ತೌಡು ಬೇರ್ಪಡುತ್ತದೆ. ತೌಡಿನಿಂದ ಎಣ್ಣೆ ಬೇರ್ಪಡಿಸಲು ಇನ್ನೊಂದು ಮಿಲ್ಲಿಗೆ. ಅಲ್ಲಿ ಅದರಿಂದ ವಿಟಮಿನ್ 'ಇ' ಬೇರ್ಪಡಿಸಿ, ಔಷಧೀಯ ಕಂಪೆನಿಗೆ ಮಾರುತ್ತೇವೆ. ಮತ್ತೊಂದೆಡೆ ಡಯಾಬಿಟಿನ್ ನಮಗೆ ವಕ್ಕರಿಸುತ್ತದೆ. ಅದೇ ಔಷಧ ಕಂಪೆನಿಯಿಂದ ಔಷಧ ಖರೀದಿಸುತ್ತೇವೆ. ಇದೊಂದು ಬ್ಯುಸಿನೆಸ್. 
                    ಬಂಟ್ವಾಳ ತಾಲೂಕಿನ ಕೇಪು ಹಲಸು ಸ್ನೇಹಿ ಕೂಟದ ಸಾರಥ್ಯದಲ್ಲಿ 'ಮನೆಮನೆಗೆ ಸಿರಧಾನ್ಯದಡುಗೆ' ಆಶಯದ ಹಬ್ಬವು ಕರಾವಳಿಗೆ ಬಹುಶಃ ಮೊದಲ ಹೆಜ್ಜೆಯೇನೋ. ಹೆಜ್ಜೆಗೆ ಹೆಜ್ಜೆ ಹಾಕಿದವರು ನೂರಕ್ಕೂ ಅಧಿಕ ಮಂದಿ. ಹೆಚ್ಚು ಪೌಷ್ಟಿಕಾಂಶದ, ಬರಕ್ಕೆ ತಡೆದಕೊಳ್ಳುವ ಸಿರಿಧಾನ್ಯಗಳ ಕೃಷಿ ಭವಿಷ್ಯ ಕರಾವಳಿಯ ಅಗತ್ಯವಾಗಬಹುದೇನೋ!
                   ’ಹಲಸು ಸ್ನೇಹಿ ಕೂಟವು ನಾಲ್ಕು ವರುಷದಿಂದ ಸಕ್ರಿಯ. ಶಿರಂಕಲ್ಲು ನಾರಾಯಣ ಭಟ್ಟರ ಮನೆಯಲ್ಲಿ ಸಾತ್ವಿಕ ಆಹಾರ, ಮಲ್ಯ ಶಂಕರನಾರಾಯಣ ಭಟ್ಟರಲ್ಲಿ ತರಕಾರಿ ಹಬ್ಬ, ಉಬರು ರಾಜಗೋಪಾಲ ಭಟ್ಟರಲ್ಲಿ ಮಾವು ಮತ್ತು ಹಲಸಿನ ಹಬ್ಬ, ಮಂಚಿಯ ವಸಂತ ಕಜೆ ಇವರ ಮನೆಯಂಗಳದಲ್ಲಿ ಗೆಡ್ಡೆ ತರಕಾರಿ ಮೇಳ, ಮುಳಿಯ ವೆಂಕಟಕೃಷ್ಣ ಶರ್ಮರ ಮನೆಯಲ್ಲಿ ಹಲಸಿನ ತಳಿ ಆಯ್ಕೆ.. ಮೊದಲಾದ ವಿಶಿಷ್ಟ ಕಲಾಪಗಳನ್ನು ಮೈಮೇಲೆ ಎಳೆದುಕೊಂಡಿದೆ. ಹೊಣೆ ಹೊತ್ತು ಯಶಸ್ಸಾಗಿದೆ. ಇವೆಲ್ಲಾ ಕೆಲವೇ ಹೆಗಲುಗಳ ಯೋಚನೆ, ಯೋಜನೆ.  ಹೆಗಲುಗಳ ಸಂಖ್ಯೆ ಹೆಚ್ಚಾಗಬೇಕು. ಮನೆಮನೆಯಲ್ಲಿ ಆಹಾರದ ಮಾತುಕತೆ ನಡೆಯಬೇಕು. ಆಗಲೇ ಆರೋಗ್ಯ-ಭಾಗ್ಯ.