Thursday, May 1, 2014

ಅನ್ನದ ಬಟ್ಟಲಲ್ಲಿ 'ಸತ್ಯದ ಬೆಳೆ'

                 ಎಪ್ರಿಲ್ 26. ರಾತ್ರಿ ಧಾರಾಕಾರ ಮಳೆ. ಕರೆಂಟ್ ಕೈಕೊಟ್ಟಿತ್ತು. ಜನರೇಟರ್ ಮುಷ್ಕರ ಹೂಡಿತ್ತು. ಚಾರ್ಜರಿನ ಬೆಳಕು ನಿಧಾನವಾಗಿ ನಿದ್ರೆಗೆ ಜಾರುತ್ತಿದ್ದಂತೆ ಪಾಕಶಾಲೆಯಲ್ಲಿ ಸೂಪಜ್ಞರ ಒತ್ತಡ ಏರುತ್ತಿತ್ತು! ಅನ್ನ, ಸಾರು, ಸಾಂಬಾರು, ಪಲ್ಯ, ಹೋಳಿಗೆ.. ಮಾಮೂಲಿ ಖಾದ್ಯಗಳಿರುತ್ತಿದ್ದರೆ ನಿರಾಳವಾಗಿರುತ್ತಿದ್ದರು. ಮರುದಿವಸ ದಕ್ಷಿಣ ಕನ್ನಡ ಜಿಲ್ಲೆಗೆ ಅಪರೂಪದ್ದಾದ ಸಿರಿಧಾನ್ಯಗಳ ಹಬ್ಬ. ಅಂದು ಸಿರಿಧಾನ್ಯಗಳದ್ದೇ ಖಾದ್ಯಗಳು. ತಯಾರಿಸಿದ ಅನುಭವವಿಲ್ಲ. ವ್ಯತ್ಯಾಸವಾದರೆ ಹೊಣೆಯನ್ನು ಅಡುಗೆಯವರೇ ಹೊತ್ತುಕೊಳ್ಳಬೇಕಲ್ಲಾ.. ಸೂಪಜ್ಞ ಚಂದ್ರಶೇಖರ ಭಟ್ ಆತಂಕ.
                 ಕಡಂಬಿಲ ಕೃಷ್ಣಪ್ರಸಾದ್, ಮುಳಿಯ ವೆಂಕಟಕೃಷ್ಣ ಶರ್ಮರು ಎರಡು ತಿಂಗಳ ಹಿಂದಿನಿಂದಲೇ ಹುಬ್ಬಳ್ಳಿಯಿಂದ ಸಿರಿಧಾನ್ಯ(millet, ಕಿರುಧಾನ್ಯ, ತೃಣಧಾನ್ಯ)ಗಳನ್ನು ತರಿಸಿ, ಜಿಲ್ಲೆಯ ಅಡುಗೆಗೆ ಮಿಳಿತವಾಗಬಹುದಾದ ಖಾದ್ಯಗಳನ್ನು ಅಡುಗೆಮನೆಯಲ್ಲಿ ಪ್ರಾಯೋಗಿಕವಾಗಿ ತಯಾರಿಸಿ, ಸವಿದು ಮೆನು ಸಿದ್ಧಪಡಿಸಿದ್ದರು. ಸೂಪಜ್ಞರ ಕ್ಷಣಕ್ಷಣದ ಸಂದೇಹಗಳನ್ನು ಅಡುಗೆಮನೆಯಲ್ಲಿದ್ದೇ ಪರಿಹರಿಸಬೇಕಾದ ಸವಾಲುಗಳು.
                ಅಂತೂ ಸಿದ್ಧವಾಯಿತು ನೋಡಿ : ರಾಗಿ ಹಾಲುಬಾಯಿ. ಊದಲು ಚಿತ್ರಾನ್ನ. ನವಣೆ ಅನ್ನ. ಸಾವೆ ಪಾಯಸ ಮತ್ತು ಮೊಸರನ್ನ. ಬರಗ ಕೇಸರಿಬಾತ್. ಜೋಳದ ರೊಟ್ಟಿ. ರಾಗಿ ಪಾನೀಯ. ಅಂದಿನ ಭೋಜನದಲ್ಲಿ ಅಕ್ಕಿಯ ಅನ್ನಕ್ಕೆ ರಜೆ. ಸಾರು, ಸಾಂಬಾರಿಗೆ ವಿಶ್ರಾಂತಿ. ಇದನ್ನೆಲ್ಲಾ ನಿತ್ಯ ಉಂಡ ನಾಲಗೆಗೆ ಸಿರಿಧಾನ್ಯಗಳ ಖಾದ್ಯಗಳು ಸವಿಯಾದುವು. ಜತೆಗೆ ಐಟಿ ಉದ್ಯೋಗಿ ಮಂಚಿಯ ವಸಂತ ಕಜೆಯವರ ರಾಗಿ ಐಸ್ಕ್ರೀಂ.
               ರಾಗಿಯ ಬಳಕೆ ಗೊತ್ತು. ರಾಗಿ ಮುದ್ದೆ, ದೋಸೆ, ಕಷಾಯ, ಅಂಬಲಿ..ಗಳ ಸವಿಯ ಪರಿಚಯವಿದೆ. ಒಂದು ಕಾಲಘಟ್ಟದಲ್ಲಿ ರಾಗಿಯನ್ನು ಕುಮೇರಿಗಳಲ್ಲಿ ಬೆಳೆಸುವ ಪರಿಪಾಠವಿತ್ತು. ಅರ್ಧ ಶತಮಾನಗಳ ಹಿಂದೆ ನವಣೆ, ಬರಗ, ಸಾಮೆ ಕರಾವಳಿಯಲ್ಲಿ ಬೆಳೆಯುತ್ತಿರುವ ಕಾಲವನ್ನು ಜ್ಞಾಪಿಸಿಕೊಳ್ಳುವ ಹಿರಿಯರು ಸಿಗುತ್ತಾರೆ. ಈಗ ಸಿರಿಧಾನ್ಯ ಬಿಡಿ, ಅನ್ನಕ್ಕೂ ಪರಾವಲಂಬನೆ. 
                 ಬದುಕಿನಿಂದ ದೂರವಾದ, ಬುದ್ಧಿಪೂರ್ವಕವಾಗಿ ದೂರಮಾಡಿದ, ಅರೋಗ್ಯಕ್ಕೆ ಸಾಥ್ ಆದ ಸಿರಿಧಾನ್ಯಗಳಲ್ಲಿ ಕೆಲವಾದರೂ ಊಟದ ಬಟ್ಟಲು ಸೇರಬೇಕು ಎನ್ನುವ ಆಶಯ. ಹಬ್ಬದಲ್ಲಿ ಮಾತಿನಷ್ಟೇ ಭೋಜನಕ್ಕೂ ಮಹತ್ವ.  ದೂರದೂರಿನಿಂದ ತರಿಸಿಕೊಂಡ ಸಿರಿಧಾನ್ಯಗಳು ಉದರ ಸೇರಿದಾಗ, 'ನಾವೂ ಬೆಳೆಯಬೇಕು, ತಿನ್ನಬೇಕು, ಸಿರಿಧಾನ್ಯಗಳು ಎಲ್ಲಿ ಸಿಗುತ್ತವೆ' ಎನ್ನುವ ಪ್ರಶ್ನೆ. 'ಸಿರಿಧಾನ್ಯಗಳು ಅನ್ನಕ್ಕೆ ಪರ್ಯಾಯವಾಗಬಹುದೆ?' ಎಂಬ ಕುತೂಹಲ.
                 ಇವುಗಳ ಮುಂದೆ ನಮ್ಮೂರಿನ ಭತ್ತದ ಸ್ಥಿತಿಯನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಭತ್ತದ ಬದುಕಿನಿಂದ ಸಂಸ್ಕೃತಿ ದೂರವಾಗಿದೆ. ಗದ್ದೆಗಳಲ್ಲೆಲ್ಲಾ ಬಹುಮಹಡಿ ಕಟ್ಟಡಗಳ ಅಡಿಪಾಯಗಳಾಗಿವೆ.  'ದುಡ್ಡು ಕೊಟ್ಟರೆ ಅಕ್ಕಿ ಅಂಗಡಿಯಲ್ಲಿದೆ' ಎನ್ನುವ ಮೈಂಡ್ ಸೆಟ್.  ಅಳಿದುಳಿದ ಗದ್ದೆಗಳಲ್ಲಿ ಬೇಸಾಯವಾಗುತ್ತಿರುವುದು ಸಮಾಧಾನ. ಅಮೈ ದೇವರಾಯರ ಮಾತು ನೆನಪಾಗುತ್ತದೆ, ಭತ್ತದ ಬೇಸಾಯವು ಕ್ಯಾಲಿಕ್ಯುಲೇಟರನ್ನು ಕೈಯಲ್ಲಿ ಹಿಡಿದು ಮಾಡುವಂತಹುದಲ್ಲ. ಅದು ಹೊಟ್ಟೆಯ ಪ್ರಶ್ನೆ.
ರಾಸಾಯನಿಕ ಬೇಡದ, ಎಲ್ಲಾ ಕಾಲದಲ್ಲೂ ಹೊಂದುವ ಸಿರಿಧಾನ್ಯವು ನಿಜಕ್ಕೂ 'ಸತ್ಯದಬೆಳೆ.' ಜನರಿಗೆ ಯಾವ ರೀತಿ ಖಾದ್ಯ ಇಷ್ಟವೋ ಅದನ್ನು ಮಾಡಿದರೆ ಇಷ್ಟವಾಗಬಹುದು. ಪಾಕವಿಧಾನಗಳ ದಾಖಲಾತಿ ಬೇಕಾಗಿದೆ. ಇದರಲ್ಲಿರುವ ಪೌಷ್ಟಿಕಾಂಶಗಳನ್ನು ಪ್ರಸ್ತುತ ಪಡಿಸಿದಷ್ಟೇ ಸಾಲದು; ಎಲ್ಲಿ ಸಿಗುತ್ತದೆ, ಬೆಳೆಯುವ ವಿಧಾನಗಳೂ ಕೃಷಿಕರನ್ನು ತಲುಪಬೇಕು - ಹಿರಿಯ ಪತ್ರಕರ್ತ ಶ್ರೀಪಡ್ರೆಯವರ ಕಿವಿಮಾತು.
                   ಮಂಗಳೂರಿನ ಗೃಹಿಣಿ ನಳಿನಿ ಮಾಯಿಲಂಕೋಡಿ, ಮಂಚಿಯ ಶಿಲ್ಪಾ ವಸಂತ ಕಜೆ ಸಿರಿಧಾನ್ಯ ಪ್ರಾತ್ಯಕ್ಷಿಕೆಗಾಗಿ ತೆಗೆದುಕೊಂಡ ಶ್ರಮ ಗುರುತರ. 'ನಮ್ಮ ಜನರ ಬಾಯಿಗೆ ಸಿರಿಧಾನ್ಯಗಳು ಹೇಗೆ ರುಚಿಸಬಹುದು. ಯಾವುದು ಆಗದೇ ಇರುವಂತಾದ್ದು' ಎಂದು ಯೋಚಿಸಿ ಡೆಮೋ ನೀಡಿದ್ದಾರೆ. ತಂತಮ್ಮ ಅಡುಗೆ ಮನೆಯಲ್ಲಿ ತಯಾರಿಸಿ, ಆಸಕ್ತರಿಗೆ ಹಂಚಿ, ಹಿಮ್ಮಾಹಿತಿ ಪಡೆದು, ಕೊನೆಗೆ ಅದನ್ನು ಕಾಗದಕ್ಕಿಳಿಸಿದ್ದಾರೆ. ಪ್ರಾತ್ಯಕ್ಷಿಕೆಯೊಂದಿಗೆ ಮಾಡುವ ವಿಧಾನವೂ ಜತೆಯಲ್ಲೇ ಸಿಕ್ಕಾಗ ಪರಿಣಾಮ ಹೆಚ್ಚು.
                ಅಡುಗೆ ಪ್ರಾತ್ಯಕ್ಷಿಕೆಗಳಿಗೆ ಮಹಿಳೆಯರ ಒಲವು ಹೆಚ್ಚು. ಸಿರಿಧಾನ್ಯ ಕಾರ್ಯಕ್ರಮದಲ್ಲಿ ಗಂಡಸರ ಸಂಖ್ಯೆಯೂ ಅಧಿಕವಿತ್ತು. ಕಾರಣವಿಷ್ಟೇ, ಹೊಸತಾದ ಬೆಳೆಯೊಂದರ ಕುರಿತ ಕಾಳಜಿ. ತಿಳಿದುಕೊಳ್ಳಬೇಕೆಂಬ ಹಪಾಹಪಿ. ಪ್ರಾತ್ಯಕ್ಷಿಕೆಯಲ್ಲಿ ತಯಾರಾದ ಖಾದ್ಯಗಳನ್ನು ಸವಿಯುವ ಕುತೂಹಲ. ಅಕ್ಕಿಯಿಂದ ಮಾಡಬಹುದಾದ ಎಲ್ಲಾ ಪದಾರ್ಥಗಳನ್ನು ಸಿರಿಧಾನ್ಯಗಳಿಂದ ಮಾಡಬಹುದು.
                 ಇಷ್ಟೊಂದು ಪೌಷ್ಟಿಕಾಂಶವಿರುವ ಸಿರಿಧಾನ್ಯಗಳು ಯಾಕೆ ಅಜ್ಞಾತವಾದುವು? ಸಿರಿಧಾನ್ಯಗಳ ಉಳಿವಿಗೆ ಶ್ರಮಿಸುತ್ತಿರುವ ಅನಿತಾ ಪೈಲೂರು ಹೇಳುತ್ತಾರೆ, ಪಡಿತರ ಬಂದ ನಂತರ ಅಕ್ಕಿ, ಗೋಧಿಗೆ ಬೇಡಿಕೆ. ಇದರ ಊಟ ಮಾಡಿದರೆ ಸ್ಟೇಟಸ್ ಹೆಚ್ಚು ಎನ್ನುವ ಭಾವನೆ. ಅಂಗಡಿಯಿಂದ ಕೊಂಡು ಉಣ್ಣುವ ಹಂಬಲ ಹೆಚ್ಚಾಯಿತು. ಜತೆಗೆ ಸಿರಿಧಾನ್ಯ ಉಣ್ಣುವವರು ಬಡವರು ಎನ್ನುವ ಮನಃಸ್ಥಿತಿ. ಇಳುವರಿ ಕೇಂದ್ರಿತ ಬೆಳೆಯನ್ನು ಮಾಡಲು ಆರಂಭಿಸಿದ ಬಳಿಕ ಸಿರಿಧಾನ್ಯಗಳಿಗೆ ಇಳಿಲೆಕ್ಕ. ನೂರಾರು ತಳಿಗಳು ಇರಬೇಕಾದ್ದಲ್ಲಿ ಈಗ ಕೇವಲ 20-25 ತಳಿಗಳು ಉಳಿದುಕೊಂಡಿವೆಯಷ್ಟೇ.
                 ಸಿರಿಧಾನ್ಯಗಳಿಗೆ ಹದಿನೈದು ಸಾವಿರ ವರುಷಗಳಿಗೂ ಮಿಕ್ಕಿದ ಇತಿಹಾಸವಿದೆ. 1940ರ ಹೊತ್ತಿಗೆ ಬೆಂಗಳೂರು ಸುತ್ತಮುತ್ತ ಹಾರಕ ಯಥೇಷ್ಟವಾಗಿ ಬೆಳೆಯುತ್ತಿದ್ದರು. ಯಾವ್ಯಾವ ಋತುವಿನಲ್ಲಿ ಏನೆಲ್ಲಾ ತಿನ್ನಬೇಕು ಎನ್ನುವುದು ಹಿರಿಯರಿಗೆ ಗೊತ್ತಿತ್ತು. ಅದು ಅನುಭವದಿಂದ ಬಂದಿರುವ ಜ್ಞಾನ. ಅಡುಗೆ ಮಾಡುವುದು ವಿಜ್ಞಾನವಲ್ಲ. ಅದೊಂದು ಅದ್ಭುತ. ಅಲ್ಲಿ ಪ್ಯಾಕೇಜ್ ಗುಲ್ಲು ಇಲ್ಲ, ಮಾರುಕಟ್ಟೆ ಲಾಬಿ ಇಲ್ಲ, ಬ್ರಾಂಡ್ಗಳ ಪೈಪೋಟಿ ಇಲ್ಲ!
                    ಬೆಂಗಳೂರಿನ ಡಾ.ಕೆ.ಸಿ.ರಘು - ಜಾಗತಿಕವಾಗಿ ಆಹಾರ, ಆರೋಗ್ಯದ ಕಣ್ಣಿಗೆ ಕಾಣದ ವ್ಯವಸ್ಥಿತ ಜಾಲಗಳತ್ತ ಬೆಳಕು ಹಾಕಿದರು : ಡಯಾಬಿಟೀಸ್ ಅಕ್ಕಿ, ಶುಗರ್ ಇಲ್ಲದ ಸಕ್ಕರೆ.. ಹೀಗೆ ಕಾಯಿಲೆಯ ಕನ್ನಡಕ ಹಾಕಿ ಆಹಾರವನ್ನು ನೋಡುತ್ತಿದ್ದೇವೆ. ಆಹಾರದಲ್ಲಿ ವೈವಿಧ್ಯತೆಯನ್ನು ಎಷ್ಟು ಉಳಿಸಿಕೊಳ್ಳುತ್ತೇವೋ ಆಗಲೇ ಆರೋಗ್ಯ. ನಾವು ಮಾದರಿ ಎಂದು ಸ್ವೀಕರಿಸಿದ ಅಮೇರಿಕಾದಲ್ಲಿ ಒಬ್ಬ ವರ್ಷಕ್ಕೆ ನಾಲ್ಕು ಸಾವಿರ ಡಾಲರ್ ಆಹಾರಕ್ಕೆ ಖರ್ಚು ಮಾಡಿದರೆ, ಎಂಟು ಸಾವಿರ ಡಾಲರ್ ಔಷಧಿಗೆ ಖರ್ಚಾಗುತ್ತದೆ. ಆದರೂ ಶೇ.60ರಷ್ಟು ಬೊಜ್ಜು ಇನ್ನೂ ಉಳಕೊಂಡಿದೆ!
                        ಆಹಾರಗಳು ಮನುಷ್ಯ ಸಮುದಾಯವನ್ನು ಸಾಕಿಕೊಂಡು ಬಂದಿದೆ. ಅದನ್ನು ಕಳೆಯೋದಕ್ಕೆ ನಮಗೆ ಹಕ್ಕಿದೆಯೇ? ಯಾವುದೇ ಒಂದು ಬೆಳೆಯ ಔಷಧೀಯ ಗುಣ ಗೊತ್ತಿಲ್ಲದೇ ಇದ್ದರೆ ಅದು ಕಳೆಯಾಗುತ್ತದೆ. ಮರೆಯಾಗುತ್ತದೆ. ಭಾರತದಲ್ಲಿ ಶೇ.71 ಮಂದಿ ರೈತರು ಕೃಷಿಯನ್ನು ಬಿಡಲು ಸಿದ್ಧರಾಗಿದ್ದಾರೆ. ಬೆಲೆಯಿಲ್ಲ, ಬೆಳೆಯಿಲ್ಲ.. ಹೀಗೆ ಇಲ್ಲಗಳ ಸಂತೆ. ಆಡಳಿತ ವ್ಯವಸ್ಥೆಗೆ ರೈತರ ಬಗ್ಗೆ ಗೊತ್ತಿಲ್ಲ. ಸಂವಹನವೂ ಇಲ್ಲ. ಎಲ್ಲವೂ ಸೂಪರ್ ಮಾರ್ಕೆಟಿನಲ್ಲಿ ಸಿಗುತ್ತದೆ, ಮತ್ಯಾಕೆ ಕೃಷಿ ಮಾಡಬೇಕು ಎನ್ನುವ ಮನಃಸ್ಥಿತಿಯನ್ನು ವ್ಯವಸ್ಥೆಗಳು ರೂಪಿಸುತ್ತಿವೆ.
                    'ಆಹಾರ ಸಂಸ್ಕರಣೆ' ಎನ್ನುವುದು ವ್ಯಾಪಾರ. ಇದನ್ನು ಡಾ.ರಘು ಅರ್ಥಪೂರ್ಣವಾಗಿ ಹೇಳುತ್ತಾರೆ - ಅಕ್ಕಿ ತೆಕ್ಕೊಂಡು ಮಿಲ್ಲಿಗೆ ಹೋಗ್ತೇವೆ.  ಮಿಲ್ಲಲ್ಲಿ ತೌಡು ಬೇರ್ಪಡುತ್ತದೆ. ತೌಡಿನಿಂದ ಎಣ್ಣೆ ಬೇರ್ಪಡಿಸಲು ಇನ್ನೊಂದು ಮಿಲ್ಲಿಗೆ. ಅಲ್ಲಿ ಅದರಿಂದ ವಿಟಮಿನ್ 'ಇ' ಬೇರ್ಪಡಿಸಿ, ಔಷಧೀಯ ಕಂಪೆನಿಗೆ ಮಾರುತ್ತೇವೆ. ಮತ್ತೊಂದೆಡೆ ಡಯಾಬಿಟಿನ್ ನಮಗೆ ವಕ್ಕರಿಸುತ್ತದೆ. ಅದೇ ಔಷಧ ಕಂಪೆನಿಯಿಂದ ಔಷಧ ಖರೀದಿಸುತ್ತೇವೆ. ಇದೊಂದು ಬ್ಯುಸಿನೆಸ್. 
                    ಬಂಟ್ವಾಳ ತಾಲೂಕಿನ ಕೇಪು ಹಲಸು ಸ್ನೇಹಿ ಕೂಟದ ಸಾರಥ್ಯದಲ್ಲಿ 'ಮನೆಮನೆಗೆ ಸಿರಧಾನ್ಯದಡುಗೆ' ಆಶಯದ ಹಬ್ಬವು ಕರಾವಳಿಗೆ ಬಹುಶಃ ಮೊದಲ ಹೆಜ್ಜೆಯೇನೋ. ಹೆಜ್ಜೆಗೆ ಹೆಜ್ಜೆ ಹಾಕಿದವರು ನೂರಕ್ಕೂ ಅಧಿಕ ಮಂದಿ. ಹೆಚ್ಚು ಪೌಷ್ಟಿಕಾಂಶದ, ಬರಕ್ಕೆ ತಡೆದಕೊಳ್ಳುವ ಸಿರಿಧಾನ್ಯಗಳ ಕೃಷಿ ಭವಿಷ್ಯ ಕರಾವಳಿಯ ಅಗತ್ಯವಾಗಬಹುದೇನೋ!
                   ’ಹಲಸು ಸ್ನೇಹಿ ಕೂಟವು ನಾಲ್ಕು ವರುಷದಿಂದ ಸಕ್ರಿಯ. ಶಿರಂಕಲ್ಲು ನಾರಾಯಣ ಭಟ್ಟರ ಮನೆಯಲ್ಲಿ ಸಾತ್ವಿಕ ಆಹಾರ, ಮಲ್ಯ ಶಂಕರನಾರಾಯಣ ಭಟ್ಟರಲ್ಲಿ ತರಕಾರಿ ಹಬ್ಬ, ಉಬರು ರಾಜಗೋಪಾಲ ಭಟ್ಟರಲ್ಲಿ ಮಾವು ಮತ್ತು ಹಲಸಿನ ಹಬ್ಬ, ಮಂಚಿಯ ವಸಂತ ಕಜೆ ಇವರ ಮನೆಯಂಗಳದಲ್ಲಿ ಗೆಡ್ಡೆ ತರಕಾರಿ ಮೇಳ, ಮುಳಿಯ ವೆಂಕಟಕೃಷ್ಣ ಶರ್ಮರ ಮನೆಯಲ್ಲಿ ಹಲಸಿನ ತಳಿ ಆಯ್ಕೆ.. ಮೊದಲಾದ ವಿಶಿಷ್ಟ ಕಲಾಪಗಳನ್ನು ಮೈಮೇಲೆ ಎಳೆದುಕೊಂಡಿದೆ. ಹೊಣೆ ಹೊತ್ತು ಯಶಸ್ಸಾಗಿದೆ. ಇವೆಲ್ಲಾ ಕೆಲವೇ ಹೆಗಲುಗಳ ಯೋಚನೆ, ಯೋಜನೆ.  ಹೆಗಲುಗಳ ಸಂಖ್ಯೆ ಹೆಚ್ಚಾಗಬೇಕು. ಮನೆಮನೆಯಲ್ಲಿ ಆಹಾರದ ಮಾತುಕತೆ ನಡೆಯಬೇಕು. ಆಗಲೇ ಆರೋಗ್ಯ-ಭಾಗ್ಯ.
 

0 comments:

Post a Comment