Saturday, May 17, 2014

ಹರಟೆಯಲ್ಲಿ ಹುಟ್ಟಿಕೊಂಡ ವರ್ತಮಾನ ಭಾರತ






                ಸುಳ್ಯದ 'ಕೇಶವ ಕೃಪಾ'ದಲ್ಲೊಂದು ಹರಟೆ. ಬದುಕಿನ ಅಲಾರಂಗೆ ಪೂರಕ. ಇಲ್ಲಿ ಬುದ್ಧಿಗೆ ಕೆಲಸವಿತ್ತು.  ಯೋಚನೆಗಳನ್ನು ಕೆದಕುವ ಯತ್ನವಿತ್ತು. ಬೌದ್ಧಿಕ ಜ್ಞಾನಕ್ಕೆ ಮಸೆತ ನೀಡುವ ಗುರಿಯಿತ್ತು. ಮುಖ್ಯವಾಗಿ ಬದುಕಿನಲ್ಲಿ 'ಎಲ್ಲಿ ಎಡವಿದ್ದೇವೆ' ಎನ್ನುವ ಪಾಠವಿತ್ತು. ಉಳಿಸಿಕೊಂಡದ್ದಕ್ಕಿಂತ ಹೆಚ್ಚು ಕಳೆದುಕೊಂಡಿದ್ದರ ಜ್ಞಾಪನವಿತ್ತು. ಎಲ್ಲವನ್ನು ಗಾಳಿಸಿದಾಗ ಸಿಕ್ಕ ಉತ್ತರಕ್ಕೆ ಇಳಿಸಂಜೆಯ ಭಾವವಿತ್ತು. ಬದುಕಿನ ಕಾಲ ಮಿಂಚಿತ್ತು.
                'ಮೌಲ್ಯಗಳನ್ನು ರಕ್ಷಿಸುತ್ತಿರುವುದು ಹಿರಿಯರೋ? ಕಿರಿಯರೋ?' ಹರಟೆಯ ವಿಷಯ. ಕೇಶವ ಕೃಪಾಕ್ಕೆ ಕಾಲಿಟ್ಟಾಗ 'ನಿಮ್ಮದು ಯಾವ ಪಕ್ಷ, ಹಿರಿಯರದೋ, ಕಿರಿಯರದೋ' ವಿದ್ಯಾರ್ಥಿಗಳಿಂದ ಪ್ರಶ್ನೆ. ಅರೆ, ಸಂಸ್ಕಾರ ಶಿಕ್ಷಣವನ್ನು ಕಲಿಯುವ ಪುಟಾಣಿಗಳಿಗೆ ಪಕ್ಷದ ಉಸಾಬರಿ ಯಾಕಪ್ಪಾ? ಮತ್ತೆ ತಿಳಿಯಿತು, ಹರಟೆ ವೇದಿಕೆಯ ಎರಡು ಪಂಗಡಗಳನ್ನು ಪಕ್ಷ ಎಂದಿದ್ದಾರಷ್ಟೇ. ಚಿಕ್ಕ ಪುಟಾಣಿಗಳಲ್ಲೂ ಕುತೂಹಲ. ವಿಷಯದ ಆಳಕ್ಕೆ ಇಳಿಯಲು ತ್ರಾಸವಾದರೂ ಸ್ಪರ್ಶಿಸುವ ಕಾತರ. ಸುಮಾರು ಎರಡು ಗಂಟೆ ಪುಟಾಣಿಗಳು ಆಕಳಿಸಲಿಲ್ಲ. ಹಿರಿಯರು ಮೊಬೈಲುಗಳಲ್ಲಿ ಬೆರಳಾಡಿಸಲಿಲ್ಲ. ಹಸಿದ ಜ್ಞಾನದ ಮೂಸೆಯೊಂದಿಗೆ ಹರಟೆಯ ರಿಂಗಣದೊಂದಿಗೆ ದಿಂಞಣ.
              ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ, ಹರಟೆಯ ಮಧ್ಯೆ ಚಿಮ್ಮಿದ ಸೊಲ್ಲು. ಕೃಷಿಯೂ ಗೌರವದ ವೃತ್ತಿ, ಹೊಟ್ಟೆ ತುಂಬುವ ಕಾಯಕ ಎನ್ನುವ ಮನಃಸ್ಥಿತಿ ಹೆತ್ತವರಲ್ಲಿ ಎಲ್ಲಿಯವರೆಗೆ ಇರುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆ ಲಂಬಿಸುತ್ತಲೇ ಇರುತ್ತದೆ. ತನಗೆ ಬದುಕನ್ನು, ಐಶ್ವರ್ಯವನ್ನು ನೀಡಿದ ಭೂಮಿಯನ್ನು ಕಾಂಚಾಣದ ಅಹಮಿಕೆ ಕುಣಿಸಿದಾಗ 'ಮನೆಯ ಸಂಸ್ಕೃತಿ' ಮೌನವಾಗುತ್ತದೆ. ಕೃಷಿ ಪ್ರಯೋಜನವಿಲ್ಲವೆಂದ ಹಿರಿಯರ ನಿತ್ಯ ಗೊಣಗಾಟದ ಮಾಲೆ ಪಟಾಕಿಗಳಿಂದ ಬಾಲ್ಯವನ್ನು ಕಟ್ಟಿಕೊಂಡ ಮನಸ್ಸುಗಳು ನಗರ ಸೇರುತ್ತವೆ. ಒಮ್ಮೆ ಯುವಕನನ್ನು ನಗರ ಸೆಳೆದುಕೊಂಡಿತೋ ಮತ್ತೆಂದೂ ಆತ ಹಳ್ಳಿಯ ಬಸ್ಸನ್ನು ಏರಲಾರ. ಈ ವಾಸ್ತವದೊಳಗೆ ಸುತ್ತಿದ ಹರಟೆ ಕೃಷಿಕನಿಗೆ ಹೆಣ್ಣು ಕೊಡುವುದಿಲ್ಲ ಎನ್ನುವಲ್ಲಿಗೆ ತಲಪುವಾಗ 'ಹಿರಿಯರ-ಕಿರಿಯರ' ಸಮರ್ಥನೆಗಳ ಮಹಾಪೂರ ಹರಿದಿತ್ತು.
              ಆಧುನಿಕ ವ್ಯವಸ್ಥೆಗಳು ಯುವಕರ ಜ್ಞಾನಾಭಿವೃದ್ಧಿಗೆ ಪೂರಕ ಎನ್ನುವಂತೆ ಬಿಂಬಿಸಲಾಗುತ್ತದೆ. ಎಸ್.ಎಂ.ಎಸ್.ಗಳು ಬದುಕನ್ನು ಕಸಿದುಕೊಳ್ಳುತ್ತವೆ. ಆವೇಶಭರಿತ ಮಾತು-ಕೃತಿಗಳಿಂದ ಅಪಾಯ ಹೆಚ್ಚು. ಅಪಕ್ವತೆಯನ್ನೇ ಪಕ್ವತೆಯೆಂದು ಪ್ರಸ್ತುತಪಡಿಸುವ ಕಾಲಮಾನದಲ್ಲಿ ಮೌಲ್ಯಗಳು ನಾಚಿ ನೀರಾಗುತ್ತವೆ. ಆ ಹೊತ್ತಿಗೆ ಬೇಕು, ಹಿರಿಯರ ಅನುಭವಜನ್ಯ ಅನುಭವಗಳು. ಅಂಗೈಯೊಳಗಿನ ಪ್ರಪಂಚ ಕ್ಷಣಿಕ. ಬೊಗಸೆ ಜ್ಞಾನ ಪರಿಪೂರ್ಣವಲ್ಲ. ಅದರಾಚೆಗೂ ಭಿನ್ನವಾದ ಲೋಕವಿದೆ ಎನ್ನುವ ಸತ್ಯವನ್ನು ಕಿರಿಯರಿಗೆ ತೋರಿಸುವ ಕೈತಾಂಗುಗಳು ಬೇಕಾಗಿವೆ. ಆಗಲೇ ಕಿರಿಯರ ಮೌಲ್ಯದ ಹುಡುಕಾಟದ ಹಾದಿ ಸುಗಮ.
                  ಪ್ರತಿಯೊಬ್ಬ ಕಿರಿಯನ ಹಿಂದೆ ಹಿರಿಯನೊಬ್ಬನ ತ್ಯಾಗವಿದೆ. ಅದಕ್ಕೆ 'ಬದುಕಿನ ಅನಿವಾರ್ಯ' ಪಟ್ಟವನ್ನು ಕಟ್ಟಲಾಗದು. ಅದು ಹಿರಿತನದ ವ್ಯಾಪ್ತಿ. ಮಾಡಲೇಬೇಕಾದ ಕರ್ಮ. ಹುಕ್ಕಬುಕ್ಕರ ಹಿಂದೆ ವಿದ್ಯಾರಣ್ಯ, ನರೇಂದ್ರರ ಹಿಂದೆ ರಾಮಕೃಷ್ಣ ಪರಮಹಂಸ, ಚಾಣಕ್ಯರ ಹಿಂದೆ ಚಂದ್ರಗುಪ್ತ.. ಇಲ್ಲಿರುವ ಮನಸ್ಸುಗಳಿಗೆ ಹೇಗೆ 'ಹಿರಿಯ-ಕಿರಿಯ' ಪಟ್ಟವನ್ನು ಕಟ್ಟಬಹುದು? ಒಬ್ಬನಿಂದಾಗಿ ಇನ್ನೊಬ್ಬನಲ್ಲ. ಅವನಿಲ್ಲದೆ ನಾನಿಲ್ಲ ಎಂಬ ಭಾವವಲ್ಲ.  ಎರಡೂ ಮಿಳಿತವಾದ ವ್ಯಕ್ತಿತ್ವ. ಹರಟೆಯಲ್ಲಿ ಬಹು ಸ್ವಾರಸ್ಯವಾಗಿ ಮೂಡಿ ಬಂದ ಪ್ರಸ್ತುತಿಗಳಿವು.
                 'ಕಿರಿಯರಿಗೆ ಹಿರಿಯರು ಮಾರ್ಗದರ್ಶನ ಮಾಡುತ್ತಾ ಇಲ್ಲ'? ಸತ್ಯವಲ್ವಾ? ಶಾಲೆಗೆ ಫೀಸು ಕಟ್ಟಿ, ಸಮವಸ್ತ್ರ ಖರೀದಿಸಿ, ಅಟೋರಿಕ್ಷಾಗೆ ವ್ಯವಸ್ಥೆ ಮಾಡಿದಲ್ಲಿಗೆ ಹಿರಿಯರ ಕರ್ತವ್ಯ ಮುಗಿಯಿತು ಎನ್ನುವ ಕಾಲಮಾನದಲ್ಲಿದ್ದೇವೆ. ಬೇಕಾದರೆ ಟ್ಯೂಶನ್ ಹೊರೆ. ಎಷ್ಟು ಹಿರಿಯರು ಮಕ್ಕಳಿಗೆ ಜೀವನಪಾಠ ಕಲಿಸಿದ್ದಾರೆ. ಗಿಡ, ಮರ, ಬಳ್ಳಿ, ಕಾಡುಹಣ್ಣುಗಳು, ತರಕಾರಿ, ಪರಿಸರ.. ತೋರಿಸಿದ್ದಾರೆ? ಊಟದ ಬಟ್ಟಲಿನಲ್ಲಿ ಎಷ್ಟು ರುಚಿಗಳನ್ನು ಉಣಿಸಿದ್ದಾರೆ? ಪೌರಾಣಿಕವಾದ ಸತ್ಯಗಳನ್ನು ದರ್ಶನ ಮಾಡುವ ಸ್ಥಿತಿ ಮನೆಯಲ್ಲಿದೆಯೇ? ಓದುವ ಪಾಲಕರು ಎಷ್ಟಿದ್ದಾರೆ? ನಾವು ಓದದೆ ಮಕ್ಕಳನ್ನು ಓದೆಂದು ಒತ್ತಾಯಿಸುವ ನಮಗೆ ನೈತಿಕ ಹಕ್ಕಿದೆಯೇ? ಮಗುವಿಗೆ ಕೆಟ್ಟ ಬಾಲ್ಯವನ್ನು ಕೊಟ್ಟವರು ಯಾರು? ಈ ಪ್ರಶ್ನೆಗಳನ್ನು ಮುಂದಿಟ್ಟಾಗ ಹಿರಿಯರ ಮಾತು ಮೌನವಾಗುತ್ತದೆ.
              ತಾಳ್ಮೆ ಇದ್ದರೆ ಮೌಲ್ಯ ಉಳಿಯುತ್ತದೆ. ಆವೇಶದಿಂದ ನಾಶ. ಬದುಕಿನಲ್ಲಿ ಅರ್ಚನೆ ಬೇಡ, ಅರ್ಪಣೆ ಬೇಕು. ಮೌಲ್ಯ ಎನ್ನುವುದು ಧರ್ಮದಿಂದ ಧರ್ಮಕ್ಕೆ ಬದಲಾಗುತ್ತದೆ. ಒಬ್ಬನ ಕಷ್ಟ ತನಗೆ ಗೊತ್ತಾಗಬೇಕಾದರೆ ತನಗೆ ಸ್ವತಃ ಕಷ್ಟ ಬಂದಾಗಲಷ್ಟೇ ಸಾಧ್ಯ. ಹಿರಿಯರ ಜ್ಞಾನ ದೀವಿಗೆಯು ಕಿರಿಯರಿಗೆ ಮಾರ್ಗದರ್ಶಿಯಾದಾಗ ಮೌಲ್ಯ ಉಳಿಯುತ್ತದೆ, ಬೆಳೆಯುತ್ತದೆ. ಆಗ ಮೌಲ್ಯಾಧಾರಿತ ಜೀವನಕ್ಕೆ ನಾಂದಿ. ಹಿರಿಯರಲ್ಲಿ ಜೀವನಾನುಭವ ಇದೆ. ಕಿರಿಯರಲ್ಲಿ ಕ್ರಿಯಾಶೀಲತೆಯಿದೆ. ಇವೆರಡೂ ಮಿಳಿತವಾದಾಗ ಮೌಲ್ಯದ ಉನ್ನತಿ.
               ಹರಟೆಯ ಕೊನೆಗೆ ಅರಿವಾಯಿತು, 'ಹಿರಿಯರ ನುಡಿ-ಕಿರಿಯರ ನಡೆ' ಒಂದಾಗಬೇಕಾದುದು ಭವಿಷ್ಯ ಭಾರತದ ಅಗತ್ಯ. ಹರಟೆಯಲ್ಲಿ ಎರಡೂ ಪಂಗಡಗಳ ತಿಕ್ಕಾಟ, ವಿಮರ್ಶೆ, ಕೊಂಕು, ವ್ಯಂಗ್ಯ, ಚುಚ್ಚುಮಾತುಗಳು ಸೋದಾಹರಣಗಳ ಮೂಲಕ ಮಿಂಚಿ ಮರೆಯಾಯಿತು. ಮಧ್ಯೆ ವಾತಾವರಣ ಬಿಸಿಯೇರಿದ ಅನುಭವ. ಪೌರಾಣಿಕ, ಚಾರಿತ್ರಿಕ, ಸಮಕಾಲೀನ ರಾಜಕೀಯ ವಿಶ್ಲೇಷಣೆ.
                  ವಾಹಿನಿಗಳಲ್ಲಿ ಹಿರೆಮಗಳೂರು ಕಣ್ಣನ್ ನಡೆಸಿಕೊಡುವ ಮಾದರಿ ಎಲ್ಲರಿಗೂ ಪರಿಚಿತ. ಕೇಶವ ಕೃಪಾದ ಹರಟೆಯೂ ಇದರದ್ದೇ ಅಚ್ಚು. ಹರಟೆ ಮುಗಿದ ಬಳಿಕವೂ ಮೌಲ್ಯಗಳ ಹುಡುಕಾಟದಲ್ಲಿ ಎಲ್ಲರ ಚಿತ್ತ ಸಕ್ರಿಯವಾಗಿರುವುದು ಕಾರ್ಯಕ್ರಮದ ಯಶದ ಸಂಕೇತ. ಒಂದು ಕಲಾಪ ಇಷ್ಟು ಗುಂಗು ಹಿಡಿಸಿದ್ದರೆ ಸಾರ್ಥಕ.
                 ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ 'ಹಿರಿಯ ವಿದ್ಯಾರ್ಥಿಗಳ ಪರಿಷತ್' ಸ್ಥಾಪನೆಯ ದಿನದಂದು ಹರಟೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಸ್ಖಲಿತ ಮಾತುಗಾರ ತುಮಕೂರಿನ ನಿಕೇತ್ ರಾಜ್, ಆಳ ಯೋಚನೆಯ ಪೂರ್ಣಾತ್ಮರಾಮ ಈಶ್ವರಮಂಗಲ, ಚಿಂತಕ ಸಂಪದಸಾಲು ಸಂಪಾದಕ ವೆಂಕಟೇಶ ಸಂಪ, ಚಿಮ್ಮು ಉತ್ಸಾಹದ ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆ, ವಿಚಾರಗಳನ್ನು ತೂಗಿ ಮಾತನಾಡುವ ಅಧ್ಯಾಪಕ ಪಿ. ಪ್ರಕಾಶ್ ಮೂಡಿತ್ತಾಯ, ಭಾವಕ್ಕೆ ಭಾಷೆ ಕೊಡುವ ಲೇಖಕಿ ಸೌಮ್ಯಾ ಭಾಗ್ವತ್ ಕುಮಟಾ ಹರಟೆ ಮಾಡುತ್ತಿದ್ದರೆ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರು ವಿಷಯ ಮತ್ತು ಸಮಯದ ಮಿತಿಯಲ್ಲಿ ಮೂಗುದಾರ ಹಾಕುತ್ತಿದ್ದರು. ಒಟ್ಟಂದದ ಕಾರ್ಯಕ್ರಮ.
              ಸಮಕಾಲೀನ ವಿಚಾರವೊಂದರ ಮಥನಕ್ಕೆ ಹರಟೆಯಂತಹ ಮಾಧ್ಯಮ ಉತ್ತಮ. ಅದೂ ಪ್ರೇಕ್ಷಕರಲ್ಲಿ ಮತ್ತು ತರಲೆ ಮಾಡುವವರಲ್ಲಿ ಸಮಾನ ಮನಸ್ಕತೆ ಇದ್ದಾಗ ಮಾತ್ರ.
               ಕೇಶವ ಕೃಪಾವು ವೇದ-ಯೋಗ-ಕಲೆಗಳ ತಾಣ. ಪುರೋಹಿತ ನಾಗರಾಜ ಭಟ್ಟರ ಮೆದುಳಮರಿ. ಸಂಸ್ಕೃತಿಯನ್ನು ಪ್ರೀತಿಸುವ ಅಧ್ಯಾಪಕರು, ವಿದ್ಯಾರ್ಥಿಗಳು, ಪಾಲಕರು ಇಲ್ಲಿನ ಆಸ್ತಿ. ಜೀವನ ಪಾಠವನ್ನು ಕಲಿಸುವ ಅಪರೂಪದ ಗುರುಕುಲ.

0 comments:

Post a Comment