Thursday, November 6, 2014

ಭರವಸೆಯ ಹಾದಿಗೆ ಕಣ್ಣೀರ ಬೆಳಕು

              ಬದುಕಿನಲ್ಲಿ ಕಾಂಚಾಣಗಳ ಕುಣಿತಕ್ಕೆ ಜೀವದ ಬೆಲೆ. ಅದು ಜೀವವನ್ನೂ ರೂಪಿಸಬಹುದೆಂಬ ಭ್ರಮೆ. ಹಣದ ಹಣಾಹಣಿಯಲ್ಲಿ ಬದುಕು ಏಗುತ್ತಿದ್ದರೂ ಅದಕ್ಕೆ ಶ್ರೀಮಂತಿಕೆಯ ಲೇಪ. ಸದಾ ಆನಂದವನ್ನು ತೊರಿಸುವ ಕಾಂಚಾಣ ನಮಗರಿವಿಲ್ಲದೆ ಬದುಕನ್ನು ವಾಲಿಸುತ್ತದೆ.
             ಕಾಂಚಾಣಕ್ಕೆ ಚಂಚಲ ಗುಣ. ಉಳ್ಳವರಲ್ಲೇ ಠಿಕಾಣಿ. ಬೆವರೆಂದರೆ ಅಷ್ಟಕ್ಕಷ್ಟೇ. ತನುಶ್ರಮಿಕರ ಜಗಲಿ ಏರಲೂ ಸಂಕೋಚ. ಪೈಸೆ ಪೈಸೆಗೂ ಒದ್ದಾಡುವವರನ್ನು ಕಂಡೂ ಕಾಣದಂತಿರುವ ನಿಷ್ಕರುಣಿ. ಮೂಡುಬಿದಿರೆಯ ಕಲಾವತಿ ಜಿ.ಎನ್.ಭಟ್ ಹೇಳುತ್ತಾರೆ, "ಹಣ ನಮ್ಮನ್ನು ಆಳಬಾರದು. ಜೀವನಕ್ಕೆ ನೆರವಾಗಬೇಕು. ಅದು ಮನೆಯೊಳಗೆ ಕಾಲು ಮುರಿದು ಬಿದ್ದುಬಿಟ್ಟರೆ ಸರ್ವಸ್ವವನ್ನೂ  ಆಪೋಶನ ಮಾಡಿಬಿಡುತ್ತದೆ."
             ಇವರ ಮಾತು ಒಗಟಾಗಿ ಕಂಡರೂ ಅದರೊಳಗೆ ಅವರ ಗತ ಬದುಕು ಮುದುಡಿದೆ. ಬೇಡ ಬೇಡವೆಂದರೂ ಮತ್ತದು ಕಾಡುತ್ತಲೇ ಇದೆ. ಕಾಡಿದಷ್ಟೂ ದುಗುಡ, ಆತಂಕ. ಆಗ ಭರವಸೆಯ ದಾರಿಗಳು ಮಸುಕಾಗಿ ಕಣ್ಣೀರಲ್ಲಿ ತೋಯುತ್ತದೆ. ಆ ಹಾದಿಗೆ ಕಣ್ಣೀರಿನಲ್ಲಲ್ಲದೆ ಬೇರೆ ಉಪಾಧಿಯಿಂದ ಬೆಳಕು ಒಡ್ಡಲು ಅಸಾಧ್ಯ.
              ಒಂದು ಕಾಲಘಟ್ಟದಲ್ಲಿ ಕಲಾವತಿ ಭಟ್ಟರದು ಐಷರಾಮಿ ಬದುಕು. ಪತಿ ನರಹರಿ. ಮೂಲತಃ ಕೃಷಿಕರು. ಪೂಜಾ, ಸ್ಕಂದಪ್ರಸಾದ್ ಇಬ್ಬರು ಮಕ್ಕಳು. ರಾಜಧಾನಿಯಲ್ಲಿ ಹತ್ತಾರು ಜನರಿಗೆ ಉದ್ಯೋಗ ನೀಡುವ ಸದೃಢ ಉದ್ಯಮ. ಕನಸಿನ  ಸೌಧಗಳು ಮೇಲೇಳುತ್ತಿದ್ದಂತೆ ಕೈಹಿಡಿದ ಕಾಂಚಾಣ ಮುನಿಸುಗೊಂಡು ಅರ್ಧದಲ್ಲೇ ಕೈಬಿಟ್ಟಿತು. ಬದುಕು ಕುಸಿಯಿತು. ಉಟ್ಟ ಉಡುಗೆಯಲ್ಲಿ ಮರಳಿ ಮಣ್ಣಿಗೆ. ನರಹರಿಯವರಿಗೆ ಅನಾರೋಗ್ಯ ಕಾಡಿತು. ಚಿಕಿತ್ಸೆ ಫಲಕಾರಿಯಾಗದೆ ಮೂರು ವರುಷದ ಹಿಂದೆ ಇಹಲೋಕ ತ್ಯಜಿಸಿದರು.
                 ಒಂದೆಡೆ ನೆಲಕಚ್ಚಿದ ಉದ್ಯಮದಿಂದ ಆರ್ಥಿಕ ಸೋಲು. ಮತ್ತೊಂದೆಡೆ ಪತಿಯ ಮರಣದ ದುಃಖ. ಇನ್ನೊಂದೆಡೆ ಬೆಳೆಯುತ್ತಿರುವ ಮಕ್ಕಳ ಜವಾಬ್ದಾರಿ. ಇವು ಮೂರನ್ನು ಹೊರಲೇಬೇಕಾದ ಅನಿವಾರ್ಯತೆ.  ಸುತ್ತೆಲ್ಲಾ ನೆಂಟರಿದ್ದಾರೆ. ಬಂಧುಗಳಿದ್ದಾರೆ. ಆಪ್ತರಿದ್ದಾರೆ. ಮರುಗುವ ಜನರಿದ್ದಾರೆ. ಯಾರಿಗೂ ಹೊರೆಯಾಗಬಾರದೆನ್ನುವ ಯೋಚನೆಯ ಬದ್ಧತೆ.
ಗಂಡನ ಕೊನೆ ದಿನಗಳಲ್ಲಿ ಹೊಟ್ಟೆಪಾಡಿಗಾಗಿ ಉಪ್ಪಿನಕಾಯಿ ವ್ಯಾಪಾರಕ್ಕೆ ಶ್ರೀಕಾರ ಬರೆದ ದಿನಗಳನ್ನು ಜ್ಞಾಪಿಸುತ್ತಾರೆ,       ಹಣದಲ್ಲಿ ಬದುಕಿದ ನಮಗೆ ಉಪ್ಪಿನಕಾಯಿ ಮಾರಾಟ ಮಾಡಲು ಮನಸ್ಸು ಹಿಂಜರಿಯಿತು. ಹೊಂದಿಕೊಳ್ಳಲು ತಿಂಗಳುಗಳೇ ಬೇಕಾಗಿತ್ತು. ನಾವಿಬ್ಬರು ಜತೆಯಾಗಿ ಮನೆಮನೆಗೆ ಹೋಗಿ ಬಾಗಿಲು ತಟ್ಟಿದೆವು. ಅಂದಂದಿನ ವ್ಯಾಪಾರ ಅಂದಂದಿನ ಊಟಕ್ಕೆ ಸಾಕಾಗುತ್ತಿತ್ತು. ಮೂಡುಬಿದಿರೆಯಲ್ಲಿ ಉದ್ಯಮಿಯಾಗಿರುವ ಸಹೋದರ, ಮಾವ ಇವರೆಲ್ಲರೂ ಆಪತ್ತಿನಲ್ಲಿ ಸಹಕಾರ ಮಾಡಿದ್ದಾರೆ. ಮಾಡುತ್ತಿದ್ದಾರೆ.
              ಮೂಡುಬಿದಿರೆಯ ಹೃದಯಸ್ಥಾನದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ದಂಪತಿಗಳು ಸಂಜೆ ಹೊತ್ತು ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದರು. ಯಾರಲ್ಲೂ ತಮ್ಮ ಕತೆಯನ್ನು ಹೇಳಿಲ್ಲ. ಗ್ರಾಹಕರೊಂದಿಗೆ ಕನಿಷ್ಠ ಮಾತುಕತೆ. ದಿವಸಕ್ಕೆ ಐದಾರು ಕಿಲೋ ಉಪ್ಪಿನಕಾಯಿ ಮಾರಾಟ. ಈಗಲೂ ಕೂಡಾ. ನೋಡಿಯೂ ನೋಡದಂತಿರುವ ಪರಿಚಿತರು, ಗೇಲಿ ಮಾಡುವ, ಚುಚ್ಚು ಮಾತಿನಲ್ಲಿ ಸಂತೋಷ ಪಡುವ, ರಾಚುವ ಅನುಕಂಪಗಳಿಂದ ಕಲಾವತಿ ಅವರ ಬದುಕು ಸುಧಾರಿಸಲಿಲ್ಲ!
              ಪತಿಯವರ ಅಗಲಿಕೆಯ ನಂತರವೂ ಕಟ್ಟೆಯಲ್ಲಿ ವ್ಯಾಪಾರವನ್ನು ಮುಂದುವರಿಸಿದ್ದಾರೆ. ನಾಳೆಯ ಚಿಂತೆಯಿಲ್ಲ. ಇಂದಿಗೆ ಏನು? ಅದನ್ನು ಉಪ್ಪಿನಕಾಯಿ ಪೂರೈಸುತ್ತದೆ. ಬಡತನ ಕಾರಣವಾಗಿ ಮಕ್ಕಳೊಂದಿಗೆ ಹಗುರವಾಗಿ ಮಾತನಾಡುವವರಿದ್ದಾರೆ. ನಿನ್ನ ಮಕ್ಕಳನ್ನು ಕೆಲಸಕ್ಕೆ ಕಳಿಸು ಎಂದು ಸಲಹೆ ಕೊಡುವ ಮಂದಿ ಎಷ್ಟು ಬೇಕು? ಬದುಕಿನ ಸ್ಥಿತಿಯನ್ನು ಹೇಳುತ್ತಿದ್ದಂತೆ ಗಂಟಲು ಆರುತ್ತದೆ.
              ಶುಚಿ-ರುಚಿಯೇ ಯಶಸ್ವೀ ವ್ಯಾಪಾರದ ಗುಟ್ಟು. ಸ್ವತಃ ಓಡಾಡಿ ಒಳಸುರಿಗಳನ್ನು ಸಂಗ್ರಹಿಸುತ್ತಾರೆ. ಉಪ್ಪಿನಲ್ಲಿ ಹಾಕಿದ ಮಾವು, ನೆಲ್ಲಿ, ಕರಂಡೆ, ಅಂಬಟೆ, ಅಪ್ಪೆಮಿಡಿಗಳ ಸಂಗ್ರಹ ಕೋಣೆಯೊಳಗೆ ಭದ್ರ. ಬೇಕಾದಾಗ ಬೇಕಾದಷ್ಟೇ ತಯಾರಿ. ಹೋಂವರ್ಕ್, ಪರೀಕ್ಷೆ ಏನೇ ಇರಲಿ ಪೂಜಾ, ಸ್ಕಂದಪ್ರಸಾದರಿಗೆ ಪ್ಯಾಕಿಂಗ್ ಕೆಲಸ. ಶಾಲೆಗೆ ಹೋಗುವಾಗ ಮನೆಗಳಿಗೆ ಡೋರ್ ಡೆಲಿವರಿ. ಉಜಿರೆಯಲ್ಲಿ ಜರುಗಿದ ತುಳು ಸಮ್ಮೇಳನದಲ್ಲಿ ಮೊದಲ ಬಾರಿಗೆ ಉಪ್ಪಿನಕಾಯಿ ಮಳಿಗೆ ತೆರೆದರು. ಬಳಿಕ ಕೃಷಿ ಮೇಳ, ನುಡಿಸಿರಿಗಳಲ್ಲಿ ವ್ಯಾಪಾರ.
             ನೂರು, ಇನ್ನೂರು, ಒಂದು ಕಿಲೋಗ್ರಾಮ್ಗಳ ಪ್ಯಾಕೆಟ್. ಮನೆಗೆ ಬಂದು ಒಯ್ಯುವ, ಮೊದಲೇ ಕಾದಿರಿಸುವ ಗ್ರಾಹಕರಿದ್ದಾರೆ. ಉಪ್ಪಿನಕಾಯಿ ಜತೆಯಲ್ಲಿ ಸಾಂಬಾರು ಪುಡಿ, ರಸಂಪುಡಿ, ಚಟ್ನಿ, ಪುಳಿಯೋಗರೆ ಮೊದಲಾದ ಉಪಉತ್ಪನ್ನಗಳು. ಮಾರಾಟಕ್ಕೆ ಇಲಾಖೆಗಳ ಪರವಾನಿಗೆ ಪಡೆದುಕೊಂಡಿದ್ದಾರೆ.
                 ಕಳೆದ ವರುಷದ ವಿಶ್ವ ನುಡಿಸಿರಿಯಲ್ಲಿ ವ್ಯಾಪಾರ ಚೆನ್ನಾಗಿ ಆಯಿತು. ಅಲ್ಲಿನ ಪ್ರಾಧ್ಯಾಪಕರ ಕುಟುಂಬಗಳು ಉಪ್ಪಿನಕಾಯಿಯನ್ನು ಬಹಳ ಮೆಚ್ಚಿಕೊಂಡಿದೆ. ಲಾಭಾಂಶದಿಂದ ದ್ವಿಚಕ್ರ ವಾಹನ ಖರೀದಿಸಿದೆ. ನನಗೆ ಉಪ್ಪಿನಕಾಯಿ ಲಕ್ಷ್ಮಿಗೆ ಸಮಾನ, ಖುಷಿಯಿಂದ ಹೇಳುತ್ತಾರೆ, ಬಡತನ  ಮಕ್ಕಳ ಬದುಕಿಗೆ ಅಂಟಬಾರದು. ಅವರು ನನ್ನಂತೆ ಆಗಬಾರದು. ಸಮಕಾಲೀನ ವಿದ್ಯಮಾನಕ್ಕೆ ಅಪ್ಡೇಟ್ ಆಗುತ್ತಿದ್ದರೆ ಮಾತ್ರ ಸಮಾಜದಲ್ಲಿ ಸ್ಥಾನ-ಮಾನ. ಸ್ಕಾಲರ್ಶಿಪ್, ದಾನಿಗಳ ನೆರವಿನಿಂದ ಮಕ್ಕಳ ವಿದ್ಯಾಭ್ಯಾಸ.
                 ಮಗ ಸ್ಕಂದ ಪ್ರಥಮ ಪದವಿ ಓದುತ್ತಿದ್ದಾನೆ. ಮಗಳು ಪೂಜಾ ಸಿ.ಎ.ಕಲಿಕೆ. ಕಳೆದ ವರುಷ ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ.ಪದವಿಯಲ್ಲಿ ಎಂಟನೇ ರ್ಯಾಂಕ್ ಪಡೆದ ಪ್ರತಿಭಾವಂತೆ. ಅವಳ ಸಾಧನೆಯನ್ನು ಗುರುತಿಸಿ ದಾನಿಗಳಿಂದ ಆರ್ಥಿಕ ಪುರಸ್ಕಾರ. ಅವಳು ಓದಿದ ಶಾಲೆಯು ಕಲಾವತಿಯವರನ್ನು 'ಹೆಮ್ಮೆಯ ತಾಯಿ' ಎಂದು ಗೌರವಿಸಿತ್ತು. ರ್ಯಾಂಕಿನ ಸುದ್ದಿ ತಿಳಿದ ಪೂಜಾ ಅಮ್ಮನನ್ನು ಅಪ್ಪಿ ಹೇಳಿದ್ದೇನು ಗೊತ್ತೇ,. ’ಬೇರೆ ಅಮ್ಮಂದಿರು ಆಗ್ತಿದ್ರೆ ಯಾವುದೋ ಉದ್ಯೋಗಕ್ಕೆ ಕಳಿಸ್ತಿದ್ದರು. ನೀನು ಗ್ರೇಟ್ ಅಮ್ಮಾ” ಎನ್ನುವಾಗ ಕಣ್ಣು ಆದ್ರ್ರವಾಗುತ್ತದೆ.
                 ಪೂಜಾಳಲ್ಲಿ ಒಂದು ಸಂಕಲ್ಪವಿದೆ. ಸಿ.ಎ.ಕಲಿಕೆ ಮುಗಿದು, ಅದನ್ನೇ ವೃತ್ತಿಯಾಗಿಸಿ, ಆರ್ಥಿಕವಾಗಿ ಸದೃಢವಾಗಿ ಸ್ವಂತದ್ದಾದ ಮನೆ ಹೊಂದಿದ ಬಳಿಕವೇ ಮದುವೆಯ ಯೋಚನೆ! ಅಬ್ಬಾ.. ಎಳೆಯ ಮನಸ್ಸಿನ ನಿರ್ಧಾರದ ಮುಂದೆ ಮಾತು ಮೂಕವಾಗುತ್ತದೆ. ಅಮ್ಮ-ತಮ್ಮನ ಭವಿಷ್ಯದ ಬದುಕಿಗಾಗಿ ಮದುವೆಯನ್ನೇ ಮುಂದೂಡುವ ಎಳೆಮನಸ್ಸಿನ ಪೂಜಾಳ ಯೋಚನೆಯಲ್ಲಿ ತ್ಯಾಗದ ಎಳೆಯಿಲ್ವಾ. ಮಗನ ಕಲಿಕೆಯಲ್ಲಿ ಭಾವಿ ಬದುಕಿನ ನಿರೀಕ್ಷೆಯಿಟ್ಟ ಅಮ್ಮನ ಮನದೊಳಗೆ 'ನನ್ನ ಮಗ ಲೆಕ್ಚರ್' ಆಗಬೇಕೆನ್ನುವ ಆಶೆಯ ಮೊಳಕೆ ಹುಟ್ಟಿದೆ.
                'ಸ್ವಾಭಿಮಾನ ಇದ್ದವರು ಸಾಲ ಮಾಡರು', ಕಲಾವತಿಯವರು ಆಗಾಗ್ಗೆ ಹೇಳುವ ಮಾತಿನೊಂದಿಗೆ ಗತ ಬದುಕಿನ ನೋವಿನೆಳೆ ಮಿಂಚಿ ಮರೆಯಾಗುತ್ತದೆ. ಬಿಡುವಿದ್ದಾಗ ಸಹೋದರ ಸದಾಶಿವರ ಜವುಳಿ ಅಂಗಡಿಯಲ್ಲಿ ಸಹಾಯಕರಾಗಿ ಕಾಣಿಸಿಕೊಳ್ಳುವ ಮಕ್ಕಳಿಗೆ ಮಾವನ ಅಂಗಡಿ ಮನೆಗೆ ಸಮಾನ. ದುಡಿಯದಿದ್ದರೂ ಅಳಿಯ-ಸೊಸೆಗೆ ಮಾವ ನೀಡುವ ನೆರವಿಗೆ ತಂತಮ್ಮ ಬೆವರಿನ ಸ್ಪರ್ಶವಿರಬೇಕೆನ್ನುದು ತಾಯಿಯ ಆಸೆ. ತನ್ನಕ್ಕನ ಈ ಮನೋನಿರ್ಧಾರವನ್ನು ತಮ್ಮ ಎಂದು ಪ್ರಶ್ನಿಸಿಲ್ಲ. ಪ್ರಶ್ನಿಸುವುದಿಲ್ಲ ಗೌರವಿಸಿದ್ದಾರೆ.
                  ವಿವಾಹ ಪೂರ್ವದಲ್ಲಿ ಕಲಾವತಿ ಶಾಲೆಯೊಂದರಲ್ಲಿ ಅರೆಕಾಲಿಕ ಅಧ್ಯಾಪಿಕೆಯಾಗಿದ್ದರು. ಇನ್ನೇನು ಹುದ್ದೆ ಖಾಯಂಗೊಳ್ಳುವಾಗ ವಿವಾಹ ನಿಶ್ಚಯವಾಯಿತು. ದುಡಿಯುವ ಹೆಂಡತಿ ಬೇಡ-ಪತಿಯ ಅಪೇಕ್ಷೆ. 'ಅಧ್ಯಾಪಿಕೆಯಾಗಿಯೇ ಮುಂದುವರಿಯುತ್ತಿದ್ದರೆ ಇಂತಹ ಸಂಕಷ್ಟ ಬರುತ್ತಿರಲಿಲ್ಲ' ಎನ್ನುವಾಗ ದುಃಖದ ಕಟ್ಟೆ ಒಡೆಯುತ್ತದೆ. ಸಾವರಿಸಿಕೊಂಡು ನನಗೆ ಮಕ್ಕಳೇ ಸರ್ವಸ್ವ. ಅವರಿಗೆ ಕಷ್ಟದ ಪರಿಜ್ಞಾನವಿದೆ. ಪೈಸೆ ಪೈಸೆಯ ಬೆಲೆ ಗೊತ್ತಿದೆ. ಇತರರ ಮುಂದೆ ಅವರೆಂದೂ ಕೈಚಾಚರು. ವಿದ್ಯೆ ಅವರನ್ನು ರಕ್ಷಿಸುತ್ತದೆ, ಎನ್ನುತ್ತಾ ಒಂದು ಕ್ಷಣ ರೆಪ್ಪೆ ಮುಚ್ಚಿದರು.
                  ಬರಿಗೈಯಲ್ಲಿ ಮೂಡುಬಿದಿರೆಗೆ ಬಂದ ಕಲಾವತಿ ಪಡಿತರ ಚೀಟಿಗಾಗಿ ಅಲೆದ ಕತೆಯನ್ನು ಅವರಿಂದಲೇ ಕೇಳಬೇಕು. ಸರಕಾರಿ ಕಚೇರಿಗಳ ಒಂದೊಂದು ಮೇಜುಗಳಲ್ಲಿ ಕುಣಿಯುವ ಕಾಂಚಾಣದ ಕುಣಿತದ ತಾಳಕ್ಕೆ ಇವರಿಗೆ ಹೆಜ್ಜೆ ಹಾಕಲು ಕಷ್ಟವಾಯಿತು. ಆದರೆ ಇಲಾಖೆಯಲ್ಲಿದ್ದ ಸಹೃದಯಿ ಮನಸ್ಸುಗಳು ಕಲಾವತಿಯವರ ನೆರವಿಗೆ ಬಂತೆನ್ನಿ.
                    ನಿಜಕ್ಕೂ ಕಲಾವತಿ ಮಹಾತಾಯಿ. ಬದುಕನ್ನು ಬಂದ ಹಾಗೆ ಸ್ವೀಕರಿಸಿದವರು. ಉಪ್ಪಿನಕಾಯಿ ವೃತ್ತಿಯೇ ಅವರಿಗೆ ದೇವರು. ಕಣ್ಣೀರಿನ ಅಭಿಷೇಕ. ನಾಲ್ಕು ಕಾಸು ಕೈಗೆ ಸೇರಿದಾಗ ಸುವಾಸಿತ ಹೂಗಳ ಅರ್ಚನೆ. ಮಕ್ಕಳುಣ್ಣುವಾಗ ಕಣ್ತುಂಬಾ ನೋಡಿ ಆನಂದಿಸುವ ತಾಯಂದಿರು ಎಷ್ಟಿದ್ದಾರೆ? ನಾವಿಲ್ಲಿ ಒಂದು ಗಮನಿಸಬೇಕು. ಮಕ್ಕಳ ಮುಂದೆ ಕಣ್ಣೀರಿನ ಕತೆಯನ್ನು ಎಂದೂ ಹೇಳರು. ತನ್ನ ಕಣ್ಣೀರು ಮಕ್ಕಳಿಗೆ ಗೋಚರವಾಗಬಾರದೆನ್ನುವ ಎಚ್ಚರಿಕೆ ಅವರಲ್ಲಿ ಸದಾ ಜಾಗೃತ. ಸ್ವಾಭಿಮಾನಿ-ಸ್ವಾವಲಂಬಿ ಬದುಕನ್ನು ಅಪ್ಪಿಕೊಂಡ ಕಲಾವತಿಯವರ ಬಡತನ ಈಗ ನಾಚಿ ನೀರಾಗುತ್ತಿದೆ!
   

2 comments:

Unknown said...

Avarannu contact maduva bage hege?

Unknown said...

Good Wishes.

Post a Comment