Friday, October 17, 2014

ಹಸಿರ ಹಾಸುಗೆ ಹಾಸುವ ಏಕವ್ಯಕ್ತಿ ಸೈನ್ಯ

            ಮಂಗಳೂರಿನ ನಂದಿಗುಡ್ಡೆಯ ಸ್ಮಶಾನದಲ್ಲಿ ಜೀತ್ ಮಿಲನ್ ರೋಚ್ (37) ಜತೆಗೆ ಅಡ್ಡಾಡುತ್ತಿದ್ದಾಗ, "ನಿಜವಾದ ಆನಂದ ಅನುಭವಿಸುವ ಜಾಗವಿದು. ಮನುಷ್ಯಾತಿಕ್ರಮಣವಿಲ್ಲ. ರಾಗ ದ್ವೇಷಗಳ ಸೋಂಕಿಲ್ಲ. ಇಲ್ನೋಡಿ. ಎಷ್ಟೊಂದು ಮರಗಳು. ಹಕ್ಕಿಗಳು ಖುಷಿಯಲ್ಲಿವೆ. ಈ ಆನಂದ ಎಲ್ಲಿ ಸಿಗಬಹುದು? ಇಂತಹ ದಟ್ಟ ಹಸುರು ನಗರದಲ್ಲಿ ತುಂಬುವ ದಿನಗಳು ಬಂದಾವೇ?" ಪ್ರಶ್ನೆಯೊಂದಿಗೆ ಮಾತು ಮೌನವಾಯಿತು.
            ಜೀತ್ ಅಪ್ಪಟ ಪ್ರಕೃತಿ ಪ್ರೇಮಿ. ಹಸುರಿನ ಸುತ್ತ ಮನಸ್ಸು ಕಟ್ಟಿಕೊಳ್ಳುವ ಬದುಕು. ಕೃಷಿ ಕುಟುಂಬದ ಹಿನ್ನೆಲೆ. ಕೈತುಂಬುವ ವೃತ್ತಿಯಿದ್ದರೂ ಸಮಾಜಮುಖಿ ಚಿಂತನೆ. ಮಂಗಳೂರಿನ ಮೋರ್ಗನ್ಗೇಟಿನಲ್ಲಿ ವಾಸ. ಹದಿನಾಲ್ಕು ವರುಷದ ಹಿಂದೆ ಮನೆಯ ಸನಿಹ ಗಿಡಗಳನ್ನು ಬೆಳೆಸಿದಾಗ ಸಿಕ್ಕ ಹಸಿರಿನ ಆನಂದದಿಂದ ಪ್ರಚೋದಿತರಾದರು. ಈ ಸುಖ ನನಗೆ ಮಾತ್ರವಲ್ಲ, ಎಲ್ಲರಿಗೂ ಸಿಗುವಂತಾಗಬೇಕು - ರಸ್ತೆಯ ಇಕ್ಕೆಡೆ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ.
           ನರ್ಸರಿ, ಅರಣ್ಯ ಇಲಾಖೆಗಳಿಂದ ಗಿಡಗಳ ಖರೀದಿ. ರಸ್ತೆಬದಿಗಳಲ್ಲಿ ಗಿಡ ನೆಡುವ ಕಾಯಕ. ಬೇಸಿಗೆಯಲ್ಲಿ ನೀರುಣಿಸಿ ಆರೈಕೆ. ಸುಮಾರು ಹನ್ನೊಂದು ವರುಷ ಕಿಸೆಯಿಂದ ವೆಚ್ಚ ಮಾಡಿ ಒಂದೂವರೆ ಸಾವಿರ ಗಿಡಗಳನ್ನು ರಸ್ತೆಗಳ ಎರಡೂ ಬದಿಗಳಲ್ಲಿ ನೆಟ್ಟು ನಿಜವಾದ ವನಮಹೋತ್ಸವಕ್ಕೆ ಮುನ್ನುಡಿಯಿಟ್ಟರು. ಹಲವರ ಗೇಲಿಯ ಮಾತುಗಳಿಗೆ ಕಿವಿಯಾದರು. 'ಲಾಭವಿಲ್ಲದೆ ಯಾಕೆ ಮಾಡ್ತಾರೆ?' ಎನ್ನುವ ಕಟಕಿಯನ್ನೂ ಕೇಳಿದ್ದರು.
            ಐದು ವರುಷದ ಹಿಂದೆ ಕ್ಲಿಫೊರ್ಡ್ ಲೋಬೊ ಅರಣ್ಯ ಅಧಿಕಾರಿಯಾಗಿ ಬಂದಂದಿನಿಂದ ಜೀತ್ ಯೋಜನೆ, ಯೋಚನೆಗಳು ಹೊಸ ದಿಕ್ಕಿನತ್ತ ವಾಲಿದುವು. ಇಲಾಖೆಯೊಂದಿಗೆ ತನ್ನ ಕಾರ್ಯಸೂಚಿಯನ್ನು ಮಿಳಿತಗೊಳಿಸಿದರು.  ಜೂನ್ ತಿಂಗಳಲ್ಲಿ ನೀಲನಕ್ಷೆಯನ್ನು ಸಿದ್ಧಪಡಿಸಿ ಲೋಬೋ ಮುಂದಿರಿಸಿದರು. ಈ ಕಾಯಕಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಇಲಾಖೆ ನೀಡಿತು.
            ಒಮ್ಮೆ ಗಿಡ ನೆಟ್ಟರೆ ಜೀತ್ ಅದರ ಪೂರ್ತಿ ಹೊಣೆಯನ್ನು ಹೊತ್ತುಕೊಳ್ಳುತ್ತಾರೆ. ಒಂದು ವರುಷಗಳ ಕಾಲ ನೀರುಣಿಸಿ ಆರೈಕೆ ಮಾಡುತ್ತಾರೆ. ಗಿಡಗಳ ಬೆಳವಣಿಗೆಯನ್ನು ಗಮನಿಸುತ್ತಾರೆ. ರಕ್ಷಣೆಗೆ  ಇಲಾಖೆಯ ನೆರವಿದೆ. ಗಿಡಗಳನ್ನು ನೆಡುವ ಕೆಲಸಗಳಿಗೆ ಶ್ರಮಿಕರು, ವಾಹನ ಒದಗಣೆ, ಸಾರಿಗೆ ವೆಚ್ಚ,  ನೀರಿನ ವ್ಯವಸ್ಥೆ ಮಾಡುವ ಹಸುರು ಪ್ರಿಯರ ಹೆಗಲೆಣೆಯಿದೆ. ನನಗೆ ಹಣ ಬೇಡ. ಜನರ ಮನ ಬೇಕು, ಸಹಕಾರ ಬೇಕು. ಜನಸಹಭಾಗಿತ್ವದಲ್ಲಿ ಹಸುರೆಬ್ಬಿಸುವ ಕೆಲಸವಾಗಬೇಕು, ಎನ್ನುವ ಆಶೆಯನ್ನು ಹೊಂದಿದ್ದಾರೆ.
             ನಂದಿಗುಡ್ಡ ಸುತ್ತುಮುತ್ತ ರಸ್ತೆಗಳಿಗೆ ಕಾಂಕ್ರಿಟೀಕರಣದ ಸಂದರ್ಭ. ಹಲವಾರು ಗಿಡಗಳು ನೆಲಕ್ಕುರುಳಿದಾಗ ಮರುಗಿದರು. ಕಡಿಯುವವರಿಗೆ ನೆಟ್ಟವರಲ್ಲಿ ಒಂದು ಮಾತು ಕೇಳುವ ಸೌಜನ್ಯ ಇಲ್ಲ. ಒಳ್ಳೊಳ್ಳೆಯ ಗಿಡಗಳು ನಾಶವಾದುವು. ಬೇಸರ ಬಂತು. ಅನಾವಶ್ಯಕವಾಗಿ ಮನುಷ್ಯ ಪ್ರವೇಶ ಮಾಡದ ಸ್ಮಶಾನದ ಆವರಣವನ್ನು ಹಸುರು ಮಾಡಲು ನಿಶ್ಚಯಮಾಡಿದೆ. ನಂದಿಗುಡ್ಡದ ಐದು ಸ್ಮಶಾನವನ್ನು ಆರಿಸಿಕೊಂಡೆ. ಎಲ್ಲರ ಬೆಂಬಲ ಸಿಕ್ಕಿತು, ಎನ್ನುವ ಜೀತ್ ಒಂದು ಕಹಿ ಘಟನೆಯನ್ನು ಹೇಳಿದರು, ಒಂದೆರಡು ಸಲ ಸ್ಮಶಾನದೊಳಗೆ ಬೆಂಕಿಯಿಂದಾಗಿ ಕೆಲವು ಗಿಡಗಳು ನಾಶವಾಗಿತ್ತು. ಹಕ್ಕುಗಳ ಬಗ್ಗೆ ಹೋರಾಡುತ್ತೇವೆ, ಪ್ರತಿಭಟನೆ ಮಾಡುತ್ತೇವೆ. ಆದರೆ ನಮ್ಮ ಜವಾಬ್ದಾರಿಗಳು ನಮಗೆ ತಿಳಿಯದಿರುವುದು ದುರಂತ. ಸ್ಮಶಾನಗಳಲ್ಲಿ ಏನಿಲ್ಲವೆಂದರೂ ಎರಡು ಸಾವಿರಕ್ಕೂ ಮಿಕ್ಕಿ ಗಿಡಗಳಿವೆ.
               ಮಾವು, ಹಲಸು, ಬಸವನಪಾದ, ಚೆರ್ರಿ, ಶ್ರೀಗಂಧ, ರೆಂಜ, ಹೊನ್ನೆ, ಮಹಾಗನಿ, ಟೀಕ್, ಬಾದಾಮಿ, ಕೋಕಂ.. ಮೊದಲಾದ ಗಿಡಗಳನ್ನು ಆಯಾಯ ಜಾಗಕ್ಕೆ ಸೂಕ್ತವಾಗುವಂತೆ ನಾಟಿ. ಸಿಟಿ ಗ್ರೀನರಿಗೆ ಆಯ್ಕೆ ಮಾಡುವ ಗಿಡಗಳಲ್ಲಿ ಕೆಲವೊಂದು ಮಾನದಂಡಗಳಿವೆ. ಉದಾ: ಧಾರ್ಮಿಕ ಕೇಂದ್ರಗಳಿರುವಲ್ಲಿ ಹೂ ಬಿಡುವ ಗಿಡಗಳಿದ್ದರೆ ಒಳ್ಳೆಯದು. ಶಾಲಾ ಸನಿಹ ಹಣ್ಣುಗಳ ಗಿಡಗಳಿದ್ದರೆ ಒಳಿತು, ಎನ್ನುತ್ತಾರೆ ಲೋಬೋ. ವಿಶೇಷ ಆರ್ಥಿಕ ವಲಯದ ಸರಹದ್ದಿನಲ್ಲಿ ಸಾರ್ವಜನಿಕ ರಸ್ತೆಯಿಕ್ಕೆಡೆ ಗಿಡಗಳು ದೊಡ್ಡದಾದಾಗ ರಸ್ತೆಗೆ ತೊಂದರೆಯಾಗಬಹುದು ಎನ್ನುವ ಆಕ್ಷೇಪ ಬಂದಿತ್ತು. ಅದಕ್ಕಾಗಿ ಹೆಚ್ಚು ಎತ್ತರ ಬೆಳೆಯದ ಪುನರ್ಪುುಳಿ ಯಾ ಕೋಕಂ ಗಿಡಗಳನ್ನು ನೆಡಲಾಗಿದೆ.
              ಜೀತ್ ಕಣ್ಗಾವಲಲ್ಲಿ ಈ ವರೆಗೆ ನಲವತ್ತು ಸಾವಿರಕ್ಕೂ ಮಿಕ್ಕಿ ಗಿಡಗಳು ನಗರದಲ್ಲಿ ತಲೆಎತ್ತಿವೆ. ತಾನು ಕಾರು ಚಾಲನೆಯಲ್ಲಿದ್ದಾಗಲೂ ದೃಷ್ಟಿ ಮಾತ್ರ ಗಿಡಗಳತ್ತ. ಒಂದು ಗಿಡ ವಾಲಿದರೂ ನೆಟ್ಟಗೆ ಮಾಡಿಯೇ ಪ್ರಯಾಣ ಮುಂದುವರಿಯುತ್ತದೆ. ರಸ್ತೆಯುದ್ದಕ್ಕೂ ಗಿಡಗಳನ್ನೇನೋ ಬೆಳೆಸಿದ್ದೀರಿ. ದನಗಳು ತಿಂದು ಹಾಳು ಮಾಡುವುದಿಲ್ಲವೇ? ಮಾರ್ಮಿಕವಾಗಿ ಹೇಳುತ್ತಾರೆ, ನನಗೆ ದನಗಳ ಭಯವಿಲ್ಲ. ಜನಗಳ ಅಂಜಿಕೆಯಿದೆ. ನಗರದಲ್ಲಿ ದನಗಳು ಎಲ್ಲಿವೆ ಸಾರ್. ದಾರಿ ಪಕ್ಕ ಇದ್ದ ಗಿಡಗಳನ್ನು ಸಾಕುವುದು ಬೇಡ, ಅದನ್ನು ಮುರಿದು, ಚಿಗುರನ್ನು ಚಿವುಟಿ ಹಾಳು ಮಾಡುತ್ತಾರೆ?
             ನಗರದ ಬಹುಭಾಗ ಕಾಂಕ್ರಿಟ್ ಮನೆಗಳು. ಅಂಗಳವೂ ಕಾಂಕ್ರಿಟ್ಮಯ. ಒಂದು ಎಲೆ ಅಂಗಳದೊಳಗೆ ಬಿದ್ದರೂ ಗೊಣಗಾಟ. ಒಮ್ಮೆ ಹೀಗಾಯಿತು - ಗಿಡ ನೆಡುತ್ತಿದ್ದಾಗ, ನಮ್ಮ ಮನೆಯ ಮುಂದೆ ಗಿಡ ನೆಡಬೇಡಿ, ಅದು ದೊಡ್ಡದಾದ ಮೇಲೆ ಎಲೆ ನಮ್ಮ ಅಂಗಳಕ್ಕೆ ಬೀಳುತ್ತದೆ. ಅದನ್ನು ತೆಗೆಯುವುದೇ ಮತ್ತೆ ಕೆಲಸವಾದೀತು ಎಂದ ಶ್ರೀಮಂತ ಮನಸ್ಸುಗಳ ಹಸಿರುಪ್ರೀತಿಯನ್ನು ಜೀತ್ ಬಿಡಿಸುತ್ತಾರೆ.
             ಅಭಿವೃದ್ಧಿಗೆ ಮೊದಲ ಬಲಿ ಗಿಡ-ಮರಗಳು. ಅಭಿವೃದ್ಧಿಯು ಹಸಿರನ್ನು ಸಹಿಸುವುದಿಲ್ಲ. ಕೊಡಲಿ ಹಿಡಿದ ಕೈಗಳಿಗೆ ನಾಳೆಗಳು ಬೇಕಾಗಿಲ್ಲ. 'ಆಮ್ಲಜನಕ ಲ್ಯಾಬ್ನಲ್ಲಿದೆ. ಹಣ ನೀಡಿದರೆ ಕುಡಿನೀರು ಬಾಟಲಿಯಲ್ಲಿ ಸಿಗುತ್ತದೆ' ಎಂಬ ದೊಡ್ಡಣ್ಣನ ಯಜಮಾನಿಕೆ. ಹಾಗೆಂತ ಮನೆ ಮುಂದೆ ಇಂತಹ ಗಿಡ ನೆಡಿ ಎಂದು ಬಿನ್ನವಿಸುವ ಅಮ್ಮಂದಿರಿದ್ದಾರೆ. ಜಾಗ ತೋರಿಸಿ, ಗಿಡ ನೆಟ್ಟು,  ಸ್ವತಃ ನೀರೆರೆದು ಆರೈಕೆ ಮಾಡುವ ಕುಟುಂಬಗಳ ಸಸ್ಯ ಪ್ರೀತಿ ಅನನ್ಯ. ಜೀತ್ ಅವರೊಂದಿಗೆ ಮಡದಿ ಸೆಲ್ಮಾ ಮರಿಯಾ ಕೂಡಾ ಗಾಢವಾಗಿ ಹಸಿರನ್ನಂಟಿಸಿಕೊಂಡಿದ್ದಾರೆ.
              ವಿದ್ಯುತ್ ಸರಬರಾಜು ತಂತಿಗಳಿಗೆ ಮರಗಳ ಗೆಲ್ಲುಗಳು ಶಾಶ್ವತವಾಗಿ ತಾಗಬಾರದೆಂದು ಮರಗಳ ಬುಡವನ್ನೇ ಕಡಿದ ದಿನಗಳ ಕಹಿಯನ್ನು ಹಂಚಿಕೊಳ್ಳುತ್ತಾರೆ. ಇಲಾಖೆಯು ಇಂತಹ ಕೆಲಸಗಳಿಗೆ ಹೊರಗುತ್ತಿಗೆ ಕೊಡುತ್ತಿರುವುದರಿಂದ ಅವರಿಗೆ ಯಾವ ಗಿಡವಾದರೇನು? ನಾವು ಸಾಮಾನ್ಯವಾಗಿ ವಿದ್ಯುತ್ ತಂತಿಗಳು ಹೋದೆಡೆ ಹೆಚ್ಚು ಎತ್ತರಕ್ಕೆ ಬೆಳೆಯದ ಮರಗಳನ್ನು ಬೆಳೆಸುತ್ತೇವೆ. ಅದೆಂದೂ ತಂತಿಯನ್ನು ತಾಕಲಾರದು. ಹೀಗಿದ್ದರೂ ಗೆಲ್ಲು ಕಡಿಯುವ ಬದಲು ಮರದ ಬುಡವನ್ನೇ ಕಡಿದುಬಿಡುತ್ತಾರೆ.
             ಹತ್ತನೇ ತರಗತಿಯ ಒಳಗಿನ ವಿದ್ಯಾರ್ಥಿಗಳಿಗೆ ಪರಿಸರದ ಪಾಠ ಅಗತ್ಯವಾಗಿ ಬೇಕು ಎನ್ನುವ ಸತ್ಯವನ್ನು ಜೀತ್ ಕಂಡುಕೊಂಡಿದ್ದಾರೆ. ಪಿಯುಸಿಯ ಬಳಿಕ ಪುಸ್ತಕದೊಳಗೆ ಒದ್ದಾಡುವ ಬದುಕು. ಮತ್ತವರಿಗೆ ಪಠ್ಯೇತರ ಚಟುವಟಿಕೆಗಳತ್ತ ಚಿತ್ತ ಹೊರಳದು. ಮಂಗಳೂರು ನಗರದ ಕೆಲವು ಶಾಲೆಗಳು, ಚರ್ಚ್ ಗಳು ಜೀತ್ ಯೋಚನೆಗೆ ಸ್ಪಂದಿಸಿವೆ. ಮಕ್ಕಳಿಂದಲೇ ಗಿಡ ನೆಡುವ ಪ್ರಕ್ರಿಯೆ ಯಶಸ್ಸಾಗಿದೆ. ಶಿಕ್ಷಣ ಇಲಾಖೆಯು ಹಸಿರಿನ ಪಾಠಕ್ಕೆ ಶಾಲೆಗಳನ್ನು ಸಿದ್ಧಪಡಿಸುವುದು ಕಷ್ಟದ ಕೆಲಸವಲ್ಲ. ಮನಸ್ಸು ಬೇಕಷ್ಟೇ.
             ಬಜಪೆ ವಿಮಾನ ನಿಲ್ದಾಣದ ಸುತ್ತ ನಾಲ್ಕು ನೂರು ವಿವಿಧ ಸಸಿಗಳ ನಾಟಿ, ಸುರತ್ಕಲ್ಲಿಂದ ಬಿ.ಸಿ.ರೋಡು ತನಕದ ರಸ್ತೆಯ ಇಕ್ಕೆಲ, ಅಗಲೀಕರಣಕ್ಕೆ ಒಳಗಾದ ತಲಪಾಡಿ ರಸ್ತೆಗಳ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಟ್ಟ/ನೆಡುವ ಕೆಲಸಗಳ ಮುನ್ನೋಟವನ್ನು ಲೋಬೋ ಮುಂದಿಡುತ್ತಾರೆ. ಎಲ್ಲದಕ್ಕೂ ಇಲಾಖೆಯನ್ನೇ ನೆಚ್ಚಿಕೊಳ್ಳಬಾರದು. ಸಾರ್ವಜನಿಕರಿಗೂ ಬದ್ಧತೆಯಿದೆಯಲ್ವಾ. ಅವರು ಸಹಕರಿಸಿದರೆ ಪರಿಸರವನ್ನು ಉಳಿಸುವುದು ಕಷ್ಟವೇನಲ್ಲ. ಆದರೆ  ಹಾಗಾಗುತ್ತಿಲ್ಲ - ಲೋಬೋ ನೋವು.
              "ಮಹಾನಗರ ಪಾಲಿಕೆಯಲ್ಲಿ 'ಗ್ರೀನ್ ಸೆಸ್' ಅಂತ ತೆರಿಗೆಯನ್ನು ವಸೂಲಿ ಮಾಡುತ್ತಾರೆ. ಈ ಮೊತ್ತ ಎಲ್ಲಿ ವಿನಿಯೋಗವಾಗುತ್ತದೆ. ನಗರ ಎಷ್ಟು ಹಸಿರಾಗಿದೆ. ವರ್ಷಕ್ಕೊಮ್ಮೆ ನಗರದ ಹಸುರೀಕರಣಕ್ಕಾಗಿ ಸರಕಾರದ ವತಿಯಿಂದ ಭರ್ಜರಿ ವೆಚ್ಚದಲ್ಲಿ ಮೀಟಿಂಗ್ ಆಗುತ್ತದೆ. ಭೋಜನದೊಂದಿಗೆ ಹಸುರೀಕರಣದ ಕಲಾಪವೂ ಮುಗಿಯುತ್ತದೆ!" ಜೀತ್ ಆಡಳಿತದ ಒಂದು ಮುಖದತ್ತ ಬೆರಳು ತೋರುತ್ತಾರೆ.
             ಮಗುವನ್ನು ಬೆಳೆಸಲು ಎಷ್ಟು ಶ್ರಮವಿದೆಯೋ ಅಷ್ಟೇ ಶ್ರಮ ಮರವೊಂದನ್ನು ಬೆಳೆಸಲು ಬೇಕು. ಜೀತ್ ಅವರಂತೆ ನಗರದಲ್ಲಿ ಡ್ಯಾನಿಯಲ್, ಕಾರ್ತಿಕ್ ಸುವರ್ಣ, ಮೈನಾ ಶೇಟ್, ಸುಭಾಸ್ ಆಳ್ವ, ಮಧು,  ಹಸನಬ್ಬ... ಮೊದಲಾದ ಏಕವ್ಯಕ್ತಿ ಹಸುರು ಸೈನ್ಯವು ನಗರದ ಹಸುರೀಕರಣದಲ್ಲಿ ತೊಡಗಿಸಿಕೊಂಡಿದೆ. ಈ ಸೈನ್ಯಗಳನ್ನು ಗಟ್ಟಿಗೊಳಿಸುವ ಮನಸ್ಸುಗಳು ಬೇಕಾಗಿವೆ.
          ಆರ್ಥಿಕ ಶ್ರೀಮಂತಿಕೆ ಕಾಲಬುಡದಲ್ಲಿ ಬಿದ್ದಿದೆ ಎಂದು ನಾವೆಲ್ಲ ಭ್ರಮಿಸಿದ್ದೇವೆ. ಆದರೆ ಉಸಿರಿಗೆ ಶಕ್ತಿ ನೀಡುವ ಶ್ರೀಮಂತಿಕೆ ಹಸುರಿನಲ್ಲಿದೆ ಎನ್ನುವ ಜಾಣ ಮರೆವಿಗೆ ಚಿಕಿತ್ಸೆ ಬೇಕಾಗಿದೆ.

(published in udayavani/nelada nadi coloum)


1 comments:

ಸುಪ್ತದೀಪ್ತಿ suptadeepti said...

ನಮಸ್ತೆ.
ಜೀತ್ ಅವರಿಗೆ ಮೊದಲ ವಂದನೆ. ಅವರನ್ನು ಪರಿಚಯಿಸಿದ ನಿಮಗೆ ಮತ್ತೊಂದು.
ನಮ್ಮ ಮನೆಯ ಮುಂದೆ, ಪಾಗಾರದ ಹೊರಗೆ ರಸ್ತೆಯಂಚಿಗೆ ಹಲಸು, ಕಹಿಬೇವು, ಮತ್ತೆರಡು ಹೂಮರಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ.
ಒಮ್ಮೆ ಸನ್ಮಾನ್ಯ ಪೌರಕಾರ್ಮಿಕರು ರಸ್ತೆಯಂಚಿನ ಹುಲ್ಲು ಹೆರೆದು ಅಲ್ಲೇ ಹಲಸಿನ ಗಿಡದ ಬುಡದಲ್ಲಿ ಬದಿಯಲ್ಲಿ ರಾಶಿ ಹಾಕಿದರು. ಸುಡುವ ಸನ್ನಾಹ ನೋಡಿ ಇಲ್ಲಿ ಸುಡಬೇಡಿರೆಂದೆ. ಹುಲ್ಲು ಹೆರೆಯುತ್ತಾ ಮುಂದೆ ಹೋದರು. ಐದು ನಿಮಿಷಗಳಲ್ಲಿ ಸುಟ್ಟವಾಸನೆಗೆ ಹೊರಬಂದು ನೋಡಿದಾಗ ಹಲಸಿನ ಗಿಡದ ಬುಡದಲ್ಲೇ ಬೆಂಕಿಯ ನಾಲಿಗೆ. ಬಕೆಟಲ್ಲಿ ನೀರು ಬಾಯಲ್ಲಿ ಬೈಯ್ಗಳ ಧಾರಾಳವಾಗಿ ಸುರಿಸಿದೆ, ಕೋಪ ತಡೆಯಲಾಗಿರಲಿಲ್ಲ. ಆ ಹಲಸಿನ ಗಿಡ ಸಾಯುವ ಮೊದಲೇ ಸುಡಿಸಿಕೊಂಡಿತು. ಮತ್ತೆ ಇನ್ನೊಂದು ಹಲಸಿನ ಗಿಡವನ್ನೇ ಅಲ್ಲಿ ನೆಟ್ಟಿದ್ದೇವೆ. ಅದರ ಅಕ್ಕಪಕ್ಕದಲ್ಲಿ ಕಣಗಿಲೆ, ಕರವೀರ ಹೂಗಳ ಗಿಡಗಳು ಕೂಡಾ ಇವೆ ಈಗ. ನೋಡಬೇಕು.
ಕಹಿಬೇವಿನ ಗಿಡ ಒಮ್ಮೆ ನೆಟ್ಟದ್ದನ್ನು ತಿಂಗಳೊಂದೂವರೆಯಲ್ಲಿ ಯಾರೋ ಕಿತ್ತೊಯ್ದರು. ಮತ್ತೊಂದು ನೆಟ್ಟು ಪೋಷಿಸಿದೆವು. ಈಗ ಅದರ ಗೆಲ್ಲುಗಳಿಗೆಲ್ಲ ಯಾರ್ಯಾರದೋ ಕೈಗಳಂಟುತ್ತವೆ, ಪಾಪ.
ಏನು ಮಾಡೋಣ ಇಂಥ ನಾಗರಿಕರಿಗೆ? ಜೀತ್’ರ ನೋವು ಅರ್ಥವಾಗುತ್ತದೆ.

Post a Comment