Friday, October 17, 2014

ಕೃಷಿಯ ಬೆರಗು ಮೂಡಿಸಿದ ಮುತ್ತಣ್ಣ


               ನವಂಬರ್ ಕನ್ನಡದ ತಿಂಗಳು. ರಾಜ್ಯೋತ್ಸವದ ಸಡಗರ. ಪ್ರಶಸ್ತಿಗಳಿಗಾಗಿ ಕಾದಾಟ, ಹೋರಾಟ, ಜಾತಿ ಲೆಕ್ಕಾಚಾರ, ರಾಜಕೀಯ ಮೇಲಾಟ. ಪ್ರಶಸ್ತಿ ಪಡೆದು ಬೀಗುವ ಮನಸ್ಸುಗಳು. ಪ್ರಶಸ್ತಿ ಸಲ್ಲಲೇಬೇಕಾದ ಅರ್ಹರ ಮಾತು ಮೌನವಾಗುವ ಹೊತ್ತು.
               ಅರ್ಹತೆಯೊಂದೇ ಮಾನದಂಡವಾಗಿರುವ ಪ್ರಶಸ್ತಿಯೊಂದನ್ನು ಸುಕೋ ಬ್ಯಾಂಕ್ ಸ್ಥಾಪಿಸಿದೆ. ಮೊದಲ ಪ್ರಶಸ್ತಿಗಳ ಘೋಷಣೆಯಾಗಿದೆ. ಪ್ರಶಸ್ತಿ ಆಯ್ಕೆ ತಂಡವು ಸದೃಢವಾಗಿದ್ದು ಎಲ್ಲೂ ಎಡವಟ್ಟಾಗುವ ಸಾಧ್ಯತೆಗಳಿಲ್ಲ. ಯಾಕೆಂದರೆ ರಾಜ್ಯದೆಲ್ಲೆಡೆ ಓಡಾಡಿ ಅರ್ಹರನ್ನು ಹುಡುಕಿ, ಅರ್ಜಿ ಗುಜರಾಯಿಸಿದವರಿದ್ದರೆ ಅವರ ತೋಟದಲ್ಲಿ ಓಡಾಡಿ ಇಂಚಿಂಚು ಪರೀಕ್ಷೆ ಮಾಡುತ್ತದೆ. ಮೊದಲ 'ಸುಕೃತ ಕೃಷಿ ಪ್ರಶಸ್ತಿ'ಗೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ನವಲಿಹಾಳಿನ ಮುತ್ತಣ್ಣ ಪೂಜಾರ್ ಆಯ್ಕೆಯಾಗಿದ್ದಾರೆ.
              ಮುತ್ತಣ್ಣರಿಗೆ ಕುರಿ ಸಾಕಣೆ ಕುಟುಂಬದ ವೃತ್ತಿ. ಅಕ್ಷರ ಕಲಿಯಬೇಕೆನ್ನುವ ಹಪಾಹಪಿ. ಮೊದಲಾಕ್ಷರ ಕಲಿಸುವವರಿಲ್ಲ. ಶಾಲೆಗೆ ತೆರಳುವ ವಿದ್ಯಾರ್ಥಿಗಳನ್ನು ನೋಡುತ್ತಾ ಕನಸು ಹೆಣೆದರು. ಅಪ್ಪನಲ್ಲಿ ರಂಪಾಟ. ಅಂಕಲಿಪಿ, ಪಾಟಿ ತಂದಿತ್ತರು. ಬರೆಯಲು ಗೊತ್ತಿಲ್ಲ. ದಾರಿಹೋಕರಲ್ಲಿ ವಿನಂತಿಸಿದರು. ಅವರು ಬರೆದುದನ್ನು ಕಲಿತರು. ಶಾಲೆಯ ಸಮಯಕ್ಕೆ ಹೊರಗೆ ನಿಂತು ಪಾಠಕ್ಕೆ ಕಿವಿಯಾದರು. ಕುರಿ ಕಾಯುವ ಕೆಲಸದ ಬಳಿಕ ಅಕ್ಷರದೊಂದಿಗೆ ಮಾತನಾಡಿದರು. ಅಕ್ಷರ ಪ್ರೇಮಕ್ಕೆ ಅಕ್ಷರವೇ ಒಲಿಯಿತು. ಅಕ್ಷರಗಳನ್ನು ಜೋಡಿಸಿ ತ್ರಾಸದಿಂದ ಓದಿದ ಮೊದಲ ಪದ - 'ಕಾಡು ಎಂದರೆ ನೀರು. ನೀರು ಎಂದರೆ ಅನ್ನ. ಅನ್ನ ಎಂದರೆ ಪ್ರಾಣ'. ಇದು ಅರಣ್ಯ ಇಲಾಖೆಯ ಫಲಕದ ಸಂದೇಶ.
            ಆತ್ಮವಿಶ್ವಾಸ ವೃದ್ಧಿಯಾಯಿತು. ಅಕ್ಷರ ಹೆಕ್ಕುವ ಕೆಲಸ ವೇಗ ಪಡೆಯಿತು. ಓದುವ ಕ್ರಿಯೆ ನಿರಂತರವಾಯಿತು. ತನ್ನ ಮಾವ ಸಿದ್ದಪ್ಪ ಹೆಗಡೆಯವರು ಹೊಲವನ್ನು ಹೊಂದಿದ್ದು, ಅವರ ಮಕ್ಕಳು ಅಕ್ಷರಸ್ಥರಾಗುತ್ತಿರುವುದು ಪ್ರೇರಣೆ ನೀಡಿತು. 'ಒಂದೆಡೆ ನಿಂತು ಕೃಷಿ ಮಾಡಿದರೆ ಖುಷಿ ಪಡುತ್ತಾ, ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯ' ಮುತ್ತಣ್ಣ ಪೂಜಾರರ ಯೋಚನೆ. ಕುರಿ ಸಾಕಿ ಸಂಪಾದಿಸಿದ ಹಣದಲ್ಲಿ ಹಾನಗಲ್ ಮಂತಗಿಯಲ್ಲಿ 1990ರಲ್ಲಿ ಚಿಕ್ಕ ಭೂಮಿ ಖರೀದಿಸಿದರು.
             ಮುತ್ತಣ್ಣ ಕುಟುಂಬಕ್ಕೆ ಚಿಕ್ಕೋಡಿಯಲ್ಲಿ ಸಣ್ಣ ಜಮೀನಿತ್ತು. ಕುರಿ ಸಾಕಣೆಯ ಪಾರಂಪರಿಕ ವೃತ್ತಿಯಿಂದಾಗಿ ಜಮೀನು ಹಡಿಲಿಗೆ ಬಿದ್ದಿತ್ತು. ಹಾನಗಲ್ ಜಮೀನಿನಲ್ಲಿ ಕೃಷಿ ಮಾಡಿ ಅನುಭವದ ಕೊರತೆಯಿಂದಾಗಿ ಸೋತರು. ಸೋಲನ್ನು ನೋಡಿ ಗೇಲಿ, ತಮಾಶೆ ಮಾಡಿದವರು ಅಧಿಕ.  ಕೃಷಿಕನಾಗಬೇಕೆಂಬ ಕನಸಿಗೆ ಅವಮಾನಗಳು ಪುಷ್ಟಿ ನೀಡಿದುವು. ಅಷ್ಟಿಷ್ಟು ಓದಲು ಗೊತ್ತು. ಕೃಷಿ ಕಲಿಕೆಗೆ ನಾಂದಿ. ಮತ್ತವರು ತಿರುಗಿ ನೋಡಿಲ್ಲ.
             ಬೀಳುತ್ತಾ ಏಳುತ್ತಾ ಬೆಳೆದ ಮುತ್ತಣ್ಣ ಈಗ ಮೂವತ್ತೊಂದು ಎಕರೆ ಜಮೀನಿನ ಒಡೆಯ. ಚಿಕ್ಕು, ಅಡಿಕೆ, ತೆಂಗು, ಕಬ್ಬು, ಬಾಳೆ, ಮಾವಿನ ಸಮೃದ್ಧತೆ ತೋಟದಲ್ಲಿದೆ. ಬದುವಿನಲ್ಲಿ ಮರಗಳ ಕೃಷಿ. ಜೋಳ, ಅಲಸಂಡೆ, ಉದ್ದು, ಶೇಂಗಾ, ಸೂರ್ಯಕಾಂತಿ, ಮೆಣಸು, ತರಕಾರಿ.. ಹೀಗೆ  ವೈವಿಧ್ಯದ ಬೆಳೆಗಳು. ಜತೆಗೆ ಮೀನು ಸಾಕಣೆ, ಎರೆಗೊಬ್ಬರ, ಜೇನು, ಹೈನುಗಾರಿಕೆ, ನಾಟಿ ಕೋಳಿಯಂತಹ ಉಪಕಸುಬು. ಮೂರು ಎಕರೆ ಭತ್ತದ ಬೇಸಾಯ. ಎರಡು ವರುಷದಿಂದ 'ಶ್ರೀ' ಪದ್ಧತಿಯನ್ನು ಅಳವಡಿಸಿ ಎಕರೆಗೆ ನಲವತ್ತ ನಾಲ್ಕು ಕ್ವಿಂಟಾಲ್ ಇಳುವರಿ ಪಡೆದರು.
             ಅಡಿಕೆ ಸಸಿಗಳ ನರ್ಸರಿ. ಮಾವು-ಚಿಕ್ಕು ಕಸಿ ಗಿಡಗಳಿಗೆ ಮೊದಲಾದ್ಯತೆ. ಕೃಷಿಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ ಮುತ್ತಣ್ಣ ತನ್ನ ಪಾರಂಪರಿಕ ವೃತ್ತಿಯನ್ನು ಮರೆಯಲಿಲ್ಲ. ಒಂದೂವರೆ ಸಾವಿರ ಕುರಿ ಸಂಸಾರವಿದೆ. ಇವರ ಸಹೋದರನಿಗೆ ಸಾಕಣೆ ಹೊಣೆ. ತೋಟದ ಬದುವಿನಲ್ಲಿ ಎರಡುವರೆ ಸಾವಿರಕ್ಕೂ ಮಿಕ್ಕಿ ತೇಗದ ಸಸಿಗಳು ಬೆಳೆಯುತ್ತಿವೆ. ಒಂದು ಸಾವಿರಕ್ಕೂ ಮಿಕ್ಕಿ ಮಾವಿನ ಮರಗಳು ಇಳುವರಿ ನೀಡುತ್ತಿವೆ.
              ಈಗ ಮುತ್ತಣ್ಣ ಅವರ ಹೊಲಕ್ಕೆ ಕೃಷಿಕರು ಭೇಟಿ ನೀಡುತ್ತಾರೆ. ಅನುಭವ ಹಂಚಿಕೊಳ್ಳುತ್ತಾರೆ. ವಿಚಾರ ಸಂಕಿರಣ ಏರ್ಪಡಿಸುತ್ತಾರೆ. ಕೃಷಿಯ ಆರಂಭದ ದಿವಸಗಳಲ್ಲಿ - ಕುರಿ ಕಾಯುವವನಿಗೆ ಕೃಷಿ ಒಲಿಯದು ಎಂದು - ಕೃಷಿಕರೇ ತಪ್ಪು ಮಾಹಿತಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ತನ್ನಂತೆ ಇತರರು ಮೋಸ ಹೋಗಬಾರದು ಎನ್ನುವ ಎಚ್ಚರ ಮುತ್ತಣ್ಣರಲ್ಲಿದೆ. ಹಾಗಾಗಿ ತನ್ನ ಅನುಭವನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುತ್ತಾರೆ. ಇವರ ಬೆವರಿಗೆ ಈಗ ಬೆಲೆ ಬಂದಿದೆ. 'ಸುಕೃತ ಕೃಷಿ ಪ್ರಶಸ್ತಿ' ಮುಡಿಯೇರಿದೆ. ರಾಜ್ಯವೇ ಹೆಮ್ಮೆ ಪಡುವ ರೀತಿಯಲ್ಲಿ ಕೃಷಿ ಮಾಡಿದ ಮುತ್ತಣ್ಣ ಅವರ ಕೃಷಿ ಜೀವನ ಒಂದು ಜೀವಂತ ಪಾಠ.
              ಮುತ್ತಣ್ಣ ಅವರ ಸಾಧನೆಯನ್ನು ಶಿವಾನಂದ ಕಳವೆ ಹೀಗೆ ಕಟ್ಟಿಕೊಡುತ್ತಾರೆ, ಮುತ್ತಣ್ಣ ಕುರಿ ಕಾಯುತ್ತಾ ಇರಬಹುದಿತ್ತು. ಪರಾಳ (ಬುತ್ತಿಯ ಚೀಲ)ದಲ್ಲಿ ಒಂದು ಪಾಟಿ ಸೇರಿದ ಬಳಿಕ ಪವಾಡದಂತೆ ಬದಲಾವಣೆ ಘಟಿಸಿದೆ.. ಅಲೆಮಾರಿ ಹುಡುಗ ಅಕ್ಷರ ಕಲಿತು ಮಣ್ಣಿಗೆ ಮರಳಿ ಕೃಷಿ ಕಟ್ಟಿದ ರೀತಿ ಅಚ್ಚರಿ. 'ಬದುಕು ಬದಲಿಸಬಹುದು' ಎನ್ನುವುದಕ್ಕೆ ಇವರ ಕೃಷಿಗಾಥೆ ಸಾಕ್ಷಿಯಾಗಿದೆ.
               ಸುಕೃತ ಕೃಷಿ ತಂತ್ರಜ್ಞಾನ ಪ್ರಶಸ್ತಿಯನ್ನು ಸಾಗರ ಹೆಗಡೆ ಫಾರ್ಮಿನ ಲಕ್ಷ್ಮೀನಾರಾಯಣ ಹೆಗಡೆ ಪಡೆದಿದ್ದಾರೆ. ಅರ್ಜಿ, ಬಯೋಡಾಟ, ಫೋಟೋ ಯಾವುದನ್ನೂ ಸಲ್ಲಿಸದೆ ಅವರ ಸಾಧನೆಯೇ ಪ್ರಶಸ್ತಿಯನ್ನು ಹುಡುಕಿ ಬಂದಿದೆ. ಕೃಷಿಗೆ ಪೂರಕವಾಗುವಂತಹ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಹೆಗಡೆಯವರು ಮುಂದು.
                 ಸುಕೋ ಬ್ಯಾಂಕ್ ಪ್ರಾಯೋಜಿತ ಕೃಷಿ ಪ್ರಶಸ್ತಿ ಮತ್ತು ತಂತ್ರಜ್ಞಾನ ಪ್ರಶಸ್ತಿಗಳ ಮೊತ್ತ ತಲಾ ಒಂದು ಲಕ್ಷ ರೂಪಾಯಿಗಳು. ನಾಡಿನ ಅನುಭವಿಗಳಿರುವ ಆಯ್ಕೆ ಸಮಿತಿ. ಕೃಷಿ ಪತ್ರಕರ್ತ ಶಿವಾನಂದ ಕಳವೆ ಸಂಚಾಲಕರು. ಈ ವರುಷ ಯುವ ಕೃಷಿಕರಿಗೆ ಪ್ರಶಸ್ತಿ. ಆಹಾರ, ತೋಟಗಾರಿಕೆ ಅಥವಾ ವಾಣಿಜ್ಯ ಬೆಳೆಗಳಲ್ಲಿ ಸಾಧನೆ ಮಾಡಿರಬೇಕು. ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲುಸೀಮೆಯ ಯಾವುದೇ ಕೃಷಿ ಪರಸರದಲ್ಲಿ ಸಾಧನೆಗೈದವರಿಗೆ ಅವಕಾಶ.
(ಚಿತ್ರ, ಮಾಹಿತಿ - ಶಿವಾನಂದ ಕಳವೆ, ಶಿರಸಿ) 

0 comments:

Post a Comment