ಪುತ್ತೂರಿನ (ದ.ಕ.) ವಿವೇಕಾನಂದ ಕಾಲೇಜಿನಲ್ಲಿ ಅಪರೂಪದ ಹಾಗೂ ಈ ಕಾಲಮಾನದ ಬದುಕಿಗೆ ಅನಿವಾರ್ಯವಾದ ವಿಚಾರ ಸಂಕಿರಣ. ವಿದ್ಯಾರ್ಥಿಗಳಿಗೆ ಕೃಷಿಯ ಅರಿವು ಮೂಡಿಸುವ ಆಶಯ. ವಿವೇಕಾನಂದ ಸೆಂಟರ್ ಫಾರ್ ರಿಸರ್ಚ್ ಸ್ಟಡೀಸ್ ಆಯೋಜನೆ. ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ವಿಘ್ನೇಶ್ವರ ವರ್ಮುುಡಿ ಇವರ ಮೆದುಳ ಮರಿ.
ಎಲ್ಲರೂ ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ. ಇವರೆಲ್ಲಾ ತಿನ್ನುವುದೇನನ್ನು? ಆರೋಗ್ಯ ಬೇಕಾದರೆ, ಸುಖದಿಂದ ಬದುಕಬೇಕಾದರೆ ಕೃಷಿಗೆ ಮರಳಲೇಬೇಕು ವಿಷಯುಕ್ತ ಆಹಾರದಿಂದ ವಿಮುಖರಾಗಲು ಕೃಷಿಯೊಂದೇ ದಾರಿ, ಅಧಿಕಾರವಾಣಿಯಿಂದ ಮಾತನಾಡಿದವರು ನಾಡೋಜ ಡಾ.ನಾರಾಯಣ ರೆಡ್ಡಿ. ಆಧುನಿಕ ತಂತ್ರಜ್ಞಾನದ ಬೀಸುಹೆಜ್ಜೆಯ ಒಳಗೆ ಮುದುಡಿ ಒದ್ದಾಡುವ ನಮಗೆ ರೆಡ್ಡಿಯವರ ಮಾತು ಕ್ಲೀಷೆ ಎಂದು ಕಂಡರೂ ಆಶ್ಚಯವಿಲ್ಲ. ಯಾಕೆಂದರೆ ರೆಡ್ಡಿಯವರದು ಮುದುಡುವ ಬದುಕಲ್ಲ. ಕೃಷಿ ನೆಲದಲ್ಲಿ ಅರಳಿದ ಬದುಕು, ಇತರರನ್ನು ಅರಳಿಸುವ ಜೀವನ. ಮಣ್ಣನ್ನು ಮೆಟ್ಟಿ, ಅದರೊಂದಿಗೆ ಬದುಕನ್ನು ಕಟ್ಟಕೊಂಡವರಿಗೆ ಮಾತ್ರ ಹೀಗೆ ಹೇಳಲು ಸಾಧ್ಯ.
ತನ್ನ ಮಗ ಇಂಜಿನಿಯರ್, ಡಾಕ್ಟರ್ ಆಗಬೇಕೆನ್ನುವ ಕಾಣದ ಲೋಕದ ಕನಸನ್ನು ಕಟ್ಟಿಕೊಂಡೇ ಮಕ್ಕಳನ್ನು ಪಿ.ಯು.ಸಿ.ಗೆ ಸೇರಿಸಿಬಿಡುತ್ತೇವೆ. ಐಟಿ ಸಹವಾಸದಿಂದ ಮರಳಿ ಕೃಷಿಯನ್ನು ಅಪ್ಪಿಕೊಂಡ ಗುತ್ತಿಗಾರು ದೇವಸ್ಯ ಲಕ್ಷ್ಮಣರ ಮಾತು ಹೆಚ್ಚು ಪ್ರಸ್ತುತ - ಬಹುತೇಕ ಹೆತ್ತವರಿಗೆ ಐಟಿ ಏನೆಂಬುದೇ ಗೊತ್ತಿರುವುದಿಲ್ಲ. ಅಲ್ಲಿಯ ಬವಣೆಯ ಕಿಂಚಿತ್ ಅರಿವೂ ಇರುವುದಿಲ್ಲ. ಲಕ್ಷದ ಲಕ್ಷ್ಯದಲ್ಲಿ ಮಕ್ಕಳನ್ನು ಬೆಳೆಸುತ್ತಾ, ತಮ್ಮ ಆಸೆಯನ್ನು ಅವರ ಮೇಲೆ ಹೇರಿ ನಗರಕ್ಕೆ ಅಟ್ಟಿ ಬಿಡುತ್ತೇವೆ. ನಗರ ಸೇರಿದ ಯುವ ಮನಸ್ಸುಗಳ ಒದ್ದಾಟ ನಮಗೆ ಬಿಡಿ, ನಮ್ಮನ್ನು ವಿರೋಧಿಸುವವರಿಗೂ ಬೇಡ...
ಮಕ್ಕಳ ಮನಸ್ಸನ್ನು ಅರಿಯದೆ, ಓದದೆ ನಮ್ಮ ಅತೃಪ್ತಿಯನ್ನು ಹೇರಿ ತೃಪ್ತಿ ಪಡುವ ನಾವು ಮಕ್ಕಳನ್ನು ಕೂಪಕ್ಕೆ ತಳ್ಳುತ್ತಿದ್ದೇವೆ ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲವಲ್ಲಾ. ಒಬ್ಬ ಅಧ್ಯಾಪಕ, ಉಪನ್ಯಾಸ, ಸಂಶೋಧಕನಾಗಬೇಕೆಂದು ನಾವು ಬಯಸುತ್ತಿಲ್ಲ. ನನ್ನ ಮಗ ಕೃಷಿಕನಾಗಬೇಕೇಂದು ಯಾವ ಅಪ್ಪನೂ ಹೇಳುತ್ತಿಲ್ಲ! ಯಾಕೆಂದರೆ ಸಮಸ್ಯೆಗಳ ಮಧ್ಯೆ ಬದುಕನ್ನು ಕಟ್ಟಿಕೊಳ್ಳಲು ತ್ರಾಸ ಪಡುತ್ತಿರುವ ಅಪ್ಪನ ಪಾಡು ಮಗನಿಗೆ ಬರಬಾರದೆನ್ನುವ ದೂರದೃಷ್ಟಿ. ಸರಿ, ಬೇರೆ ಕ್ಷೇತ್ರದಲ್ಲಿ ಸಮಸ್ಯೆ ಇಲ್ಲವೆಂದು ಹೇಳಿದವರಾರು? ಎಲ್ಲಾ ಕ್ಷೇತ್ರದಲ್ಲೂ ಸಮಸ್ಯೆಗಳು ಬೆಟ್ಟದಷ್ಟಿವೆ.
ಬದುಕಿನ ಒಟ್ಟು ಉದ್ದೇಶ ಹೊಟ್ಟೆಪಾಡು. ಮೂರು ಹೊತ್ತು ಉಣ್ಣಬೇಕು, ಕುಟುಂಬವನ್ನು ಸಾಕಬೇಕು, ಸಮಾಜದಲ್ಲಿ ಗೌರವದಿಂದ ಬದುಕಬೇಕು. ನಗರದಲ್ಲಿ ವಾಸ ಮಾಡುವ ಮಂದಿಗೆ ಉದ್ಯೋಗ ಅನಿವಾರ್ಯ. ಆದರೆ ಹಳ್ಳಿಯಲ್ಲಿ ಬೆಳೆದು, ಕೃಷಿಯಲ್ಲಿ ಬದುಕನ್ನು ರೂಪಿಸಿಕೊಂಡ ಅನೇಕ ಮನಸ್ಸುಗಳಿಗೆ ರಾಜಧಾನಿಯ ಕಾಂಚಾಣದ ಸದ್ದು ಸೆಳೆದುಬಿಡುತ್ತದೆ.
ಕೃಷಿಯನ್ನು ಕೃಷಿಕರೇ ಪ್ರೀತಿಸದಿದ್ದರೆ ಮಕ್ಕಳು ಸಹಜವಾಗಿ ಬೇರೆ ಅವಕಾಶಕ್ಕಾಗಿ ಮುಖ ತಿರುಗಿಸುತ್ತಾರೆ. ನಮ್ಮ ತೋಟದ ಉತ್ಪನ್ನಗಳನ್ನು ಊರಲ್ಲೇ ಮಾರುಕಟ್ಟೆ ಸೃಷ್ಟಿಸಲು ಯತ್ನಿಸಿದರೆ ಅದುವೇ ದೊಡ್ಡ ಆದಾಯ, ವಿಚಾರಸಂಕಿರಣದಲ್ಲಿ ಕೃಷಿಕ ಡಾ.ಡಿ.ಸಿ.ಚೌಟರ ಮಾತು ಮನನೀಯ. ಅವರ ತೋಟದ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಮಾರುಕಟ್ಟೆ ಮಾಡಿದವರು. ಇತರರಿಗೂ ಪ್ರೇರೇಪಣೆ ನೀಡಿದವರು.
ಎಳೆಯ ವಯಸ್ಸಿನಲ್ಲಿ ಕೃಷಿಯ ಖುಷಿಯನ್ನು ಹಂಚಿಕೊಳ್ಳುವ ಮನಃಸ್ಥಿತಿ ಮನೆಯಲ್ಲಿಲ್ಲ. ಹೆತ್ತವರ ಮನದಲ್ಲಿಲ್ಲ. ನೂರಕ್ಕೆ ನೂರು ಅಂಕ ಪಡೆಯಬೇಕೆನ್ನುವ ಧಾವಂತದ ಪ್ರಖರದ ಹಿಂದೆ ಮಕ್ಕಳನ್ನು ಅಂಗಳಕ್ಕೆ ಇಳಿಯಲೂ ಬಿಡದ ಬಿಗುಸ್ಥಿತಿ! ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿಯ ಅರಿವನ್ನು ಬಿತ್ತುವ, ಬಿತ್ತಿದ ಅರಿವನ್ನು ಮೊಳಕೆ ಬರುವಂತೆ ಮಾಡುವ ಯತ್ನವನ್ನು ಮಾಡುತ್ತಿದೆ. ಕೃಷಿ ಲೋಕವನ್ನು ತೋರಿಸುವ ಹೊಣೆ ಹೊತ್ತಿದೆ.
'ಕೃಷಿ ಉಳಿಸಿ-ಕೃಷಿಯಲ್ಲಿ ತೊಡಗಿಸಿ' ಎನ್ನುವ ಧ್ಯೇಯ ವಾಕ್ಯದಡಿಯಲ್ಲಿ ವರುಷಪೂರ್ತಿ ಕಾರ್ಯಹೂರಣವನ್ನು ರೂಪಿಸಿದ ಡಾ.ವಿಘ್ನೇಶ್ವರ ವರ್ಮುಡಿ ಹೇಳುತ್ತಾರೆ, ಭವಿಷ್ಯದಲ್ಲಿ ನಮ್ಮ ಕೃಷಿ ಕ್ಷೇತ್ರ ಹಚ್ಚಹಸಿರಾಗಿ ಉಳಿಯಬೇಕಿದ್ದರೆ ಎರಡು ರೀತಿಯ ಕ್ರಾಂತಿಗಳಾಗಬೇಕು. ಮೊದಲನೆಯದು 'ಕೃಷಿಯಲ್ಲಿ ಯುವ ಕ್ರಾಂತಿ', ಮತ್ತೊಂದು 'ಎರಡನೇ ಹಂತದ ಹಸಿರು ಕ್ರಾಂತಿ'. ಕೃಷಿ ಕ್ಷೇತ್ರದಲ್ಲಿ ಯುವಕ್ರಾಂತಿಯಾಗಬೇಕಿದ್ದರೆ ಅವರನ್ನು ಆಕರ್ಶಿಸುವ ಮತ್ತು ಇಲ್ಲಿರುವ ಸಮಸ್ಯೆಗೆ ನಿವಾರಣೆಗೆ ಆದ್ಯತೆ ನೀಡಬೇಕು. ಯುವ ಜನಾಂಗವನ್ನು ಕೃಷಿ ಕ್ಷೇತ್ರದತ್ತ ಸೆಳೆಯುವ ಪ್ರಯತ್ನಗಳಾಗಬೇಕು'.
ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳು ಆಯ್ದ ವಿದ್ಯಾರ್ಥಿಗಳನ್ನು ವಿಚಾರಸಂಕಿರಣಕ್ಕೆ ಕಳುಹಿಸಿದ್ದುವು. ಕಲಾಪದಲ್ಲಿ ಭಾಗವಹಿಸಿದ ಮಂಗಳೂರು ವಿವಿಯ ವಿದ್ಯಾರ್ಥಿನಿ ರೇಖಾ ಅಭಿಪ್ರಾಯ ನೋಡಿ, ನಾವೆಲ್ಲಾ ಭೋಗದ ಜೀವನವನ್ನು ಒಪ್ಪಿಕೊಂಡಿದ್ದೇವೆ. ಕೈಯಲ್ಲಿರುವ ಮೊಬೈಲ್ ಸರ್ವಸ್ವವಾಗಿದೆ. ಕೃಷಿ ಮಾಡುವ ಅಪ್ಪ ಕೃಷಿಯಲ್ಲಿ ಪ್ರೀತಿ ಇಟ್ಟುಕೊಂಡಿಲ್ಲ. ಮಕ್ಕಳಲ್ಲಿ ಹೇಗೆ ಬರಲು ಸಾಧ್ಯ. ಒತ್ತಾಯಪೂರ್ವಕವಾಗಿ ಕೃಷಿಯಲ್ಲಿ ಪ್ರೀತಿಯನ್ನು ರೂಢಿಸಿಕೊಳ್ಳಬೇಕು.
ಪುತ್ತೂರಿನ ಕೋಡಿಬೈಲ್ ಏಜೆನ್ಸೀಸ್ ಇದರ ಯಜಮಾನರಾದ ಸತ್ಯನಾರಾಯಣ ತಮ್ಮ ತಂಡದೊಂದಿಗೆ ವಿದ್ಯಾರ್ಥಿಗಳಿಗೆ ವಿವಿಧ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ನೀಡಿದ್ದರು. ಸ್ವತಃ ವಿದ್ಯಾರ್ಥಿಗಳ ಕೈಯಿಂದಲೇ ಚಾಲೂ ಮಾಡಿಸುತ್ತಿದ್ದರು. ಮರ ಕೊಯ್ಯಲುವ ಗರಗಸ, ಯಾಂತ್ರೀಕೃತ ಗಾಡಿ, ಪವರ್ ಸ್ಪ್ರೇಯರ್, ಕಳೆ ಕೊಚ್ಚು ಯಂತ್ರಗಳು ವಿದ್ಯಾರ್ಥಿಗಳನ್ನು ಸೆಳೆದಿತ್ತು.
ವಿವೇಕಾನಂದ ಕಾಲೇಜಿನ ಕೃಷಿ ಕಾಳಜಿಗೆ ಅಭಿನಂದನೆ. ಪಠ್ಯದಲ್ಲಿ ಕೃಷಿಯ ಸೊಲ್ಲಿಲ್ಲದೇ ಇದ್ದರೂ ಪಠ್ಯೇತರ ಚಟುವಟಿಕೆಯಾಗಿ ಕೃಷಿಗೆ ವಿಶಯಕ್ಕೆ ಒತ್ತು ನೀಡುತ್ತಿರುವುದು ಆದರ್ಶ. ಕಾಲೇಜು ಈಗ ಚಿನ್ನದ ಸಂಭ್ರಮದಲ್ಲಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಚಿನ್ನದ ಹೊಳಪನ್ನು ಬೀರುವ ಕಾಲೇಜಿನ ಉಪಕ್ರಮ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ. ಚಿನ್ನದ ನೆನಪಿಗಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಂದೆ ಹಲವು ಯೋಜನೆ, ಯೋಚನೆಗಳಿವೆ.
(ಕನ್ನಡ ಪ್ರಭ/ಅನ್ನದಬಟ್ಟಲು ಕಾಲಂ)
0 comments:
Post a Comment