Friday, October 17, 2014

ಅಪ್ಪೆಯ ನೋವಿಗೆ ದನಿಯಾದ ಮಾತುಕತೆ



             ಮಲೆನಾಡಿನ ಬದುಕಿನಲ್ಲಿ ಮಿಳಿತವಾದ ಅಪ್ಪೆಮಿಡಿಯ ಸುತ್ತ ಎಷ್ಟೊಂದು ಕತೆಗಳು! ಹಿತ್ತಿಲಿಂದ ಹಿತ್ತಿಲಿಗೆ ರುಚಿ ವೈವಿಧ್ಯವನ್ನು ಹೊಂದಿದ ಮಿಡಿಯು ಊಟದ ಬಟ್ಟಲನ್ನು ಸೇರಿದಾಗ ನೆನಪುಗಳು ಮಾತನಾಡುತ್ತವೆ. ಘಟನೆಗಳು ರೋಚಕತೆಯನ್ನು ಪಡೆಯುತ್ತವೆ. ಮನೆಗೆ ಆಗಮಿಸಿದ ಅತಿಥಿಗೆ ಮಿಡಿಗಳ ಸುದ್ದಿ ಹೇಳದೆ ಮಾತು ಮುಗಿಯದು.
               ಅಪ್ಪೆಯ ಇರುನೆಲೆಯಿಂದ ನೆಗೆದು ಬೇರೆ ಜಿಲ್ಲೆಗಳಲ್ಲಿ ಬೆಳೆದ ಮರಗಳು ನಿರಾಶೆ ಹುಟ್ಟಿಸಿವೆ. ಅಲ್ಲೋ ಇಲ್ಲೋ ಮಿಡಿ ಬಿಟ್ಟದ್ದು ಬಿಟ್ಟರೆ ಎಲ್ಲರಲ್ಲೂ ವಿಷಾದ. ಪುತ್ತೂರಿನ (ದ.ಕ.) ಗಿಡಗೆಳೆತನ ಸಂಘ 'ಸಮೃದ್ಧಿ'ಯು ಈಚೆಗೆ 'ಅಪ್ಪೆಮಿಡಿ ಮಾತುಕತೆ' ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕರಾವಳಿಯಲ್ಲಿ ಕಣ್ಣುಮುಚ್ಚಾಲೆಯಾಡುತ್ತಿರುವ ಅಪ್ಪೆಯ ಕತೆಯನ್ನು ಬೊಗಸೆತುಂಬ ತಂದಿದ್ದ ಅಪ್ಪೆಪ್ರಿಯರ ನೋವಿಗೆ ಸಾಂತ್ವನ ಕೊಡುವ ಯತ್ನ.
                ಶಿರಸಿಯ ಅರಣ್ಯ ಕಾಲೇಜಿನ ಅರಣ್ಯ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಡಾ.ವಾಸುದೇವ್ ಅಪ್ಪೆಯ ನೋವಿಗೆ ದನಿಯಾದರು. ಒಬ್ಬೊಬ್ಬರಲ್ಲಿ ಒಂದೊಂದು ಗಾಥೆ. 'ಇಪ್ಪತ್ತು ವರುಷದಿಂದ ಒಂದೇ ಒಂದು ಕಾಯಿ ಸಿಕ್ಕಿಲ್ಲ', ಎಂದು ಒಬ್ಬರ ನೋವಾದರೆ, ಮತ್ತೊಬ್ಬರದು, 'ವರುಷಕ್ಕೆ ಐದಾರು ಕಾಯಿ ಬಿಡುವ ಮರವನ್ನು ಉಳಿಸಬೇಕೇ?'.. ಇಂತಹ ಹಲವು ಪ್ರಶ್ನೆಗಳನ್ನು ವಾಸುದೇವ್ ಎದುರಿಸಬೇಕಾಯಿತು.
               ನಮ್ಮ ಪ್ರದೇಶಕ್ಕೆ ಹೆಚ್ಚು ಒಗ್ಗುವ, ಹೆಚ್ಚು ಕಾಯಿ ಕೊಡುವ ತಳಿಗಳ ಹುಡುಕಾಟ ಆಗಬೇಕು. ಮಲೆನಾಡಿನ ಹತ್ತಾರು ತಳಿಗಳನ್ನು ಬೆಳೆದು ನೋಡಬೇಕು. ಯಾವುದು ಕರಾವಳಿಗೆ ಸೂಕ್ತ ಎನ್ನುವ ಸಂಶೋಧನೆ  ಆಗಬೇಕಾಗಿದೆ. ಇದಕ್ಕೆಲ್ಲಾ ಸ್ವಲ್ಪ ದೀರ್ಘಕಾಲ ಸಮಯ ಬೇಕಾಗುತ್ತದೆ. ಈಗಾಗಲೇ ಕರಾವಳಿಯಲ್ಲಿ ಕಾಯಿ ಕೊಡುತ್ತಿರುವ ಕೃಷಿಕರ ಅನುಭವ, ತಳಿಗಳ ಅಭಿವೃದ್ಧಿ ಮಾಡಿಕೊಳ್ಳಬೇಕಾದುದು ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಪರಸ್ಪರ ಮಾತುಕತೆಗಳು ನಿರಂತರ ನಡೆಯುತ್ತಿರಬೇಕು. ಮಾಹಿತಿಗಳು ವಿನಿಮಯವಾಗುತ್ತಿರಬೇಕು, ಎನ್ನುತ್ತಾ ತಮ್ಮ ಅನುಭವ ಮತ್ತು ತನ್ನ ಕಾಲೇಜು ಮೂಲಕ ಆದ ತಳಿ ಅಭಿವೃದ್ಧಿ ಕೆಲಸಗಳ ಮಾಹಿತಿ ನೀಡಿದರು.
               ಡಾ.ವಾಸುದೇವ್ ಅಪ್ಪೆಮಿಡಿ ತಳಿಗಳಿಗೆ ವೈಜ್ಞಾನಿಕ ಅಡಿಗಟ್ಟು ಹಾಕುವಲ್ಲಿ ಶ್ರಮಿಸಿದವರು. ಆಗಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಅಪ್ಪೆತಳಿ ದಾಖಲಾತಿ ಕೆಲಸಗಳು ಕೃಷಿಕ ಮಟ್ಟದಲ್ಲಿ ನಡೆದಿತ್ತು. ಶಿವಾನಂದ ಕಳವೆ ತಂಡದ ನೇತೃತ್ವದಲ್ಲಿ ಶಿರಸಿ, ಸಾಗರದಲ್ಲಿ ಅಪ್ಪೆ ಮಿಡಿ ಮೇಳಗಳು ಜರುಗಿದ್ದುವು. ಕಸಿ ಗಿಡಗಳತ್ತ ಒಲವು ಹೆಜ್ಜೆಯೂರಿತ್ತು.
ಕೇಂದ್ರ ಸರಕಾರದ 'ಯುನೈಟೆಡ್ ನೇಶನ್ ಎನ್ವಾಯರನ್ಮೆಂಟ್ ಪ್ರೋಗ್ರಾಂ'ನ ಅಡಿಯ 'ಟ್ರಾಫಿಕಲ್ ಫ್ರುಟ್ ಟ್ರೀಸ್' ಯೋಜನೆಯ ಅನುಷ್ಠಾನದ ಹೊಣೆಯನ್ನು ಅರಣ್ಯ ಕಾಲೇಜು ಹೊತ್ತುಕೊಂಡಿತ್ತು. ಇದರ ಮೂಲಕ ಅಪ್ಪೆ ತಳಿಗಳ ಹುಡುಕಾಟ, ದಾಖಲಾತಿ, ಕೃಷಿಕರೊಂದಿಗೆ ಮಾತುಕತೆ ಪ್ರಕ್ರಿಯೆಗಳು. ಉಷ್ಣವಲಯದ ಕಾಡುಹಣ್ಣುಗಳ ವೈವಿಧ್ಯತೆ, ದಾಖಲಾತಿ, ಸಂರಕ್ಷಣೆ ಮತ್ತು ಬಳಕೆಯು ತಳಮಟ್ಟದಿಂದಲೇ ಆಗಬೇನ್ನುವುದು ಆಶಯ.
                ಮಲೆನಾಡಿನಲ್ಲಿ ಐನೂರಕ್ಕೂ ಮಿಕ್ಕಿ ಅಪ್ಪೆ ತಳಿಗಳಿವೆ. ಕಳೆದೈದು ವರುಷದಲ್ಲಿ ಯೋಜನೆಯಡಿ ನೂರು ಮೂರು ತಳಿಗಳನ್ನು ಆಯ್ಕೆಯಾಗಿವೆ.  ಮಾಳಂಜಿ, ಹಳದೋಟ, ನಂದಗಾರ, ಮಾವಿನಕಟ್ಟ, ದನ್ನಳ್ಳಿ, ಅನಂತಭಟ್ಟ, ಪುರಪ್ಪೆಮನೆ, ಕರೊಲ್ಲ (ಕಡಗಾಯಿ), ಮುದ್ಗಾರ್ (ಕೊಸಗಾಯಿ), ಗಡಹಳ್ಳಿ (ಕುಚ್ಚುಗಾಯಿ) - ಇವಕ್ಕೆ ಟಾಪ್ ಟೆನ್ ಯೋಗ. ಹಣ್ಣು ಜಾತಿಯದ್ದರಲ್ಲಿ 'ವರಟೆ ಗಿಡುಗ, ಮಾಣಗೂರು, ಆಪೂಸ್' ಶ್ರೇಷ್ಠ. ಮಿಡಿಯ ಗಾತ್ರ, ಪರಿಮಳ, ತಾಳಿಕೆ, ವರಷದ ಬಳಿಕವೂ ತಿರುಳು ಬಿಳಿಯಾಗಿರುವುದು, ಹೊರಗಿನ ಬಣ್ಣ ಮಾಸದಿರುವುದು, ಅಧಿಕ ಸೊನೆ.. ಮೊದಲಾದ ಮಾನದಂಡಗಳ ಪರೀಕ್ಷೆಯಲ್ಲಿ ಗೆದ್ದು ಬಂದವುಗಳು.  
           ದಾಖಲಾತಿಯ ನಂತರದ ಹಂತ ಗಿಡಗಳ ಅಭಿವೃದ್ಧಿ. ಕೃಷಿಕರ ಸಹಭಾಗಿತ್ವ. ಕಸಿ ಕೂಟಗಳ ರಚನೆ. ಕಸಿ ತಜ್ಞರನ್ನು ಒಂದೇ ಸೂರಿನಡಿ ತರುವ ಯತ್ನ. ಅವರಿಗೆ ಬೆಂಬಲ. ಕಸಿ ಗಿಡಗಳ ಅಭಿವೃದ್ಧಿ. ಸಾಲ್ಕಣಿ, ಸಿದ್ಧಾಪುರ, ಕಲ್ಲಬ್ಬೆಗಳಲ್ಲಿರುವ ಕಸಿಕೂಟಗಳಿಂದ ಏನಿಲ್ಲವೆಂದರೂ ಇಪ್ಪತ್ತು ಸಾವಿರಕ್ಕೂ ಮಿಕ್ಕಿ ಕಸಿ ಗಿಡಗಳು ಅಭಿವೃದ್ಧಿಗೊಂಡಿವೆ. ಇವುಗಳಲ್ಲಿ ಶೇ. 50-60ರಷ್ಟನ್ನು ಯೋಜನೆಯು ಖರೀದಿಸಿ ಕೃಷಿಕರಿಗೆ ನೀಡಿದೆ.  ಉಳಿದವುಗಳನ್ನು ಕಸಿಕೂಟಗಳೇ ಮಾರಾಟ ಮಾಡುತ್ತಿವೆ.
              ಈಗಾಗಲೇ ನಾಲ್ಕು ಸಾವಿರ ಬೆಳೆಗಾರರಿಗೆ ನಾವು ಅಭಿವೃದ್ಧಿ ಪಡಿಸಿದ ಗಿಡಗಳನ್ನು ನೀಡಿದ್ದೇವೆ.  ಒಬ್ಬರಿಗೆ ನೂರಾರು ಗಿಡ ಕೊಡುತ್ತಿಲ್ಲ. ಮನೆಮಟ್ಟಕ್ಕೆ ಎಷ್ಟು ಬೇಕೋ ಅಷ್ಟನ್ನು ನೀಡುತ್ತೇವೆ. ಹೀಗೆ ಒಯ್ದವರ ಹೆಸರು, ಸಂಪರ್ಕ, ತಳಿಗಳ ದಾಖಲಾತಿ ಇಟ್ಟುಕೊಳ್ಳುತ್ತೇವೆ. ನಂತರ ಅವರನ್ನು ಸಂಪರ್ಕಿಸಿ ಗಿಡಗಳ ಬೆಳವಣಿಗೆಯನ್ನು ವಿಚಾರಿಸುತ್ತೇವೆ, ಎನ್ನುತ್ತಾರೆ ವಾಸುದೇವ್.
              ತಳಿಗಳ ಅಭಿವೃದ್ಧಿ ಆಗುತ್ತಿದ್ದಂತೆ ಉಪ್ಪಿನಕಾಯಿ ಉದ್ಯಮಕ್ಕೆ ಒತ್ತು. ಸಾಲ್ಕಣಿಯ ಲಕ್ಷ್ಮೀನರಸಿಂಹ ಸ್ವಸಹಾಯ ಸಂಘದ ಮೂಲಕ ಉಪ್ಪಿನಕಾಯಿ ತಯಾರಿಗೆ ಅಡಿಗಟ್ಟು. ಗುಣಮಟ್ಟದ ಉತ್ಪನ್ನ ತಯಾರಿಸಲು ತರಬೇತಿ. ಅಧ್ಯಯನ ಪ್ರವಾಸ. ಇದರಿಂದಾಗಿ ಸಂಘದ ಸದಸ್ಯೆಯರಿಗೆ ಸ್ಫೂರ್ತಿ ಬಂದಿದೆ. ಕಳೆದ ವರುಷ ಎರಡೂವರೆ ಕ್ವಿಂಟಾಲ್ ಉಪ್ಪಿನಕಾಯಿ ಸಿದ್ಧಪಡಿಸಿದರೆ, ಈ ವರುಷ ಇದರ ಎರಡು ಪಟ್ಟು! ಮಾರುಕಟ್ಟೆ ಚೆನ್ನಾಗಿದೆ. ಶಿರಸಿಯ ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಉತ್ಪನ್ನದ ಮಾರಾಟಕ್ಕೆ ಹೆಗಲು ನೀಡಿದೆ.
             ಅಪ್ಪೆ ತಳಿಗಳ ಜತೆಗೆ ಮುರುಗಲು, ಉಪ್ಪಾಗೆ, ಹಲಸಿನ ದಾಖಲಾತಿಗಳೂ ಜತೆಜತೆಗೆ ನಡೆದಿವೆ. ಗಿಡಗಳ ಅಭಿವೃದ್ದಿಯೂ ಆಗುತ್ತಿವೆ. ಹಲಸಿನ ಉತ್ತಮ ತಳಿಗಳ ಹಲಸಿಗೆ ಜನರೊಲವು ಹೆಚ್ಚುತ್ತಿದೆ. ಕೃಷಿಮೇಳ, ಸಮಾರಂಭಗಳಲ್ಲಿ ಮಳಿಗೆ ತೆರೆದು ಗಿಡಗಳನ್ನು ಜನರ ಬಳಿಗೆ ಕಾಲೇಜು ಒಯ್ಯುತ್ತಿದೆ. ಮೊದಲು ಕಾಲೇಜಿನ ಕ್ಯಾಂಪಸಿನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮಾತ್ರ ಕಾಣಸಿಗುತ್ತಾರೆ. ಈಗ ಕಸಿ ಗಿಡಗಳಿಗಾಗಿ ಕೃಷಿಕರೂ ಬರತೊಡಗಿದ್ದಾರೆ. ಖುಷಿ ತಂದಿದೆ. ಈ ವರುಷದ ದಶಂಬರಕ್ಕೆ ಯೋಜನೆಯ ಅವಧಿ ಮುಗಿಯುತ್ತಿದ್ದರೂ, ಈ ಕೆಲಸವನ್ನು ಕೃಷಿಕರು, ಕಸಿಕೂಟಗಳು ಮುಂದುವರಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ, ಎನ್ನುತ್ತಾರೆ ವಾಸುದೇವ್.
             ವಿಜ್ಞಾನಿಯೊಬ್ಬ ಕೃಷಿಯ ಪರವಾಗಿದ್ದರೆ ಕೃಷಿಕಪರವಾದ ಕೆಲಸಗಳನ್ನು ಹೇಗೆ  ಮಾಡಬಹುದು ಎನ್ನುವ ಮಾತಿಗೆ ವಾಸುದೇವ್ ನಮ್ಮ ಮುಂದೆ ಇದ್ದಾರೆ. ಕೇವಲ ಕುರ್ಚಿಗಂಟಿಕೊಳ್ಳದೆ ಹಳ್ಳಿಗಳಲ್ಲಿ ಓಡಾಡಿ, ಕೃಷಿಕರ ಒಲವನ್ನು ಸಂಪಾದಿಸಿದ ಇಂತಹ ಹಸುರು ಮನಸ್ಸುಗಳು ಹೆಚ್ಚು ರೂಪುಗೊಳ್ಳಲಿ. ಇವರೊಂದಿಗೆ ಕಾಲೇಜಿನ ವರಿಷ್ಠರು, ಸಿಬ್ಬಂದಿಗಳು, ವಿದ್ಯಾರ್ಥಿಗಳ ಅವಿರತ ಶ್ರಮವನ್ನು ಮರೆಯುವಂತಿಲ್ಲ.
              ಪುತ್ತೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಾಸುದೇವ್ ಅವರ ತಳಿ ಅಭಿವೃದ್ಧಿಯ ಗಾಥೆಗೆ ಕಿವಿಯಾದ ಕೃಷಿಕರು, 'ಯೋಜನೆಯನ್ನು ಇನ್ನೈದು ವರುಷ ಮುಂದುವರಿಸಲು ಯತ್ನಿಸಿ, ಎಂದು ಆಗ್ರಹಿಸಿದ್ದರು. (ವಾಸುದೇವ್ : 9448933680)


0 comments:

Post a Comment