Sunday, October 4, 2015

ನೀರನ್ನು ಸೃಷ್ಟಿಸಲು ಸಾಧ್ಯವೇ?            ರಾಜಧಾನಿಗೆ ಪ್ರಯಾಣಿಸುತ್ತಿದ್ದಾಗ ಗೌರಿಬಿದನೂರಿನ ರೈತರೊಬ್ಬರ ಪರಿಚಯವಾಯಿತು. ನೀರಿನ ಸಂಕಟಗಳದ್ದೇ ಮಾತುಕತೆ. ರಾಜಕಾರಣದ ಆಟಗಳ ಆಟೋಪ. ಕರ್ನಾಟಕವನ್ನು ಉತ್ತರ, ದಕ್ಷಿಣ ಎಂದು ವಿಭಾಗಿಸುವ, ಭಾವನೆಗಳಿಗೆ ಘಾಸಿ ಮಾಡುವ, ಸಂಘರ್ಷಗಳನ್ನು ಒಂದು ವ್ಯವಸ್ಥೆಯೊಳಗೆ ಜೀವಂತವಾಗಿಡುವ ಕಾಣದ ಕೈಗಳ ಕರಾಮತ್ತುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅವರಲ್ಲಿ ನೀರಿಗಾಗಿ ಮನಸ್ಸುಗಳನ್ನು ಒಡೆಯುವ ರಾಜಕೀಯ ವ್ಯವಸ್ಥೆಗಳತ್ತ ಆಕ್ರೋಶವಿತ್ತು.
            "ಅತ್ತ ಕಳಸಾ-ಬಂಡೂರಿ, ಇತ್ತ ನೇತ್ರಾವತಿ, ಮೊತ್ತೊಂದೆಡೆ ಕಾವೇರಿ, ಇನ್ನೊಂದೆಡೆ ಮಹದಾಯಿ.. ಹೀಗೆ ಸಮಸ್ಯೆಗಳನ್ನು ವಿವಾದದ ಸುಳಿಯಲ್ಲಿ ಸಿಲುಕಿಸುವುದೇ ರಾಜಕೀಯ ಶಕ್ತಿಗಳ ಗುರಿ ಎನ್ನುವಂತಾಗಿದೆ. ಇವರಿಗೆಲ್ಲಾ ಪರಿಹಾರಕ್ಕೆ ದಾರಿಗಳು ಗೊತ್ತಿವೆ. ಓಟು ಬ್ಯಾಂಕುಗಳು ಈ ದಾರಿಗಳನ್ನು ವಿಮುಖಗೊಳಿಸುತ್ತಿವೆ. ಸಾರ್ವಜನಿಕ ಆಸ್ತಿಗಳು, ಜನರ ಸಂಕಷ್ಟಗಳು ಅವರಿಗೆ ಬೇಕಾಗಿಲ್ಲ. ಜನರನ್ನು ಕೆರಳಿಸುವ ಹೇಳಿಕೆಗಳಿಂದ ಆಗುವ ವಿಘ್ನಗಳಿಂದ ಖುಷಿ ಪಡುವ ಜನನಾಯಕರು ಇರುವಲ್ಲಿಯ ತನಕ ಸಮಸ್ಯೆಗಳು ಶಾಶ್ವತವಾಗಿರುತ್ತವೆ." ಎಂದರು.
             "ಕೆರೆಗಳಿಂದಾಗಿ ಜೀವಜಲವು ಉಸಿರಾಡುತ್ತಿವೆ. ಕರ್ನಾಟಕದಲ್ಲಿ ಎಷ್ಟೊಂದು ಕೆರೆಗಳಿದ್ದುವು. ಇದಕ್ಕಾಗಿ ಭೂಮಿಯನ್ನು ಉಂಬಳಿ ಬಿಡುವ ಸನ್ಮಸ್ಸಿನವರಿದ್ದರು. ಧಾರ್ಮಿಕ, ಸಾಮಾಜಿಕ ಭಾವನೆಗಳು ಆ ಊರಿನ ನೀರಿನ ಆವಶ್ಯಕತೆಗಳನ್ನು ನೀಗಿಸುತ್ತಿದ್ದುವು. ಹಿಂದಿನ ಕಾಲದಿಂದಲೂ ನೀರಿಗೆ ಮೊದಲಾದ್ಯತೆ. ಆ ಬಳಿಕವೇ ಕೃಷಿ, ಅಭಿವೃದ್ಧಿಯತ್ತ ಯೋಚನೆ. ಇಂತಹ ಸಂಸ್ಕೃತಿಯಿರುವ ಕರ್ನಾಟಕವನ್ನು ರಾಜಕೀಯ ವಾತಾವರಣ ಹಾಳುಮಾಡಿತು. ಮೊದಲಾದ್ಯತೆಯಲ್ಲಿರಬೇಕಾದ ನೀರಿನ ಲಭ್ಯತೆಯು ಕೊನೆಯ ಆಯ್ಕೆಯಾಗಿ ಬದಲಾಯಿತು." ಅವರು ಮಾತನಾಡುತ್ತಿದ್ದಾಗ ಇಡೀ ಕನ್ನಾಡಿನ ನೀರಿನ ಕಣ್ಣೀರಿಗೆ ದನಿಯಾದಂತೆ ಕಂಡಿತು.
           ಸರಕಾರಕ್ಕೆ ಗ್ರಾಮ ಭಾರತದ ಹಿತ ಬೇಕಾಗಿಲ್ಲ. ಕೋಟಿಗಳ ಮುಂದೆ ಎಷ್ಟು ಸೊನ್ನೆಯನ್ನಿಡಬೇಕೆಂಬ ಲೆಕ್ಕಚಾರ. ಎಷ್ಟು ಸೊನ್ನೆಗಳನ್ನಿಡಬೇಕೆಂದು ನಿರ್ಧರಿಸುವ ಅಧಿಕಾರಿಗಳಿದ್ದಾರೆ. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗಳಾದಾಗ ಅಷ್ಟಿಷ್ಟು ನೀಡಿ ಕೈತೊಳೆದುಕೊಂಡರು. ಕೇಂದ್ರದಿಂದಲೂ ಅಧ್ಯಯನ ತಂಡ ಬಂತು. ಅವೆಲ್ಲಾ ಕಾಗದದಲ್ಲಿ ಉಳಿದು ಬಿಡುತ್ತವಷ್ಟೆ. ನಮ್ಮ ಬದುಕಿಗೆ ಬೇಕಾದ ವ್ಯವಸ್ಥೆಯನ್ನು ನಾವೇ ಪೂರೈಸಿಕೊಳ್ಳಬೇಕು. ನೀರಿನ ವಿಚಾರಕ್ಕೆ ಬಂದರೆ ಅಳಿದುಳಿದ ಕೆರೆಗಳಲ್ಲಿ ನೀರು ಬತ್ತಿವೆ. ಅಂತರ್ಜಲ ಆಳಕ್ಕಿಳಿದಿದೆ. ಕೊಳವೆಬಾವಿಗಳನ್ನು ಕೊರೆಯಲು ಪೈಪೋಟಿ. ನದಿಗಳಲ್ಲಿ ನೀರಿಲ್ಲ. ಇಷ್ಟೆಲ್ಲ ತೊಂದರೆಗಳಿಗೆ ಯಾರು ಕಾರಣ?
         ರೈತರ ಕುರಿತು ಹಗುರವಾಗಿ ಮಾತನಾಡುವ ನಮ್ಮ ನಡುವಿನ ಸಾಕ್ಷರರ ಚಿತ್ರ ಹಾದುಹೋದುವು. ಯಾವುದೇ ಪದವಿಯನ್ನು ಓದದ ಅವರು ಕೃಷಿ, ನೀರಿನ ಜ್ಞಾನದಲ್ಲಿ ಅಪ್ಡೇಟ್ ಆಗಿದ್ದರು. ರಾಜಧಾನಿಯಲ್ಲಿ ಬಸ್ಸಿಳಿದು (ಮೆಜೆಸ್ಟಿಕ್) ಒಂದರ್ಧ ಗಂಟೆ ಮಾತನಾಡುವಾಗ ಹೇಳಿದ ಒಂದೆರಡು ವಾಕ್ಯ ಮರೆಯಲಾರೆ - ರೈತನ ಬೆನ್ನು ತಟ್ಟುವವರು ಯಾರೂ ಇಲ್ಲ. ಅನ್ನದಾತ ಎಂದು ಅಟ್ಟಕ್ಕೇರಿಸುವ ಕೆಟ್ಟ ಚಾಳಿ.  ನಿಜಕ್ಕೂ ರೈತ ಸಮೂಹಕ್ಕೆ ಅವಮಾನ ಮಾಡಿದಂತೆ. ನೋಡಿ, ನಾವು ನಿಂತ ಜಾಗ ಇದೆಯಲ್ಲಾ, ಮೊದಲು ಇದೊಂದು ದೊಡ್ಡ ಕೆರೆಯಾಗಿತ್ತು. ಈಗ ಹೇಗಿದೆ? ಇದೊಂದು ಉದಾಹರಣೆ ಮಾತ್ರ. ರಾಜ್ಯದ ಎಲ್ಲಾ ಕೆರೆಗಳ ಸ್ಥಿತಿಯೂ ಇದೇ. ಕೆರೆಗಳ ಪುನರ್ಜ್ಜೀವನ ಮತ್ತು ನೀರಿಂಗಿಸುವ ಕೆಲಸ ನಡೆಯಬೇಕಾಗಿದೆ. ಜತೆಗೆ ಅರಣ್ಯೀಕರಣವೂ ಕೂಡಾ.
         ಕೆರೆಗಳು - ನೀರೊದಗಿಸುವ ಜಲನಿಧಿಗಳು. ಒಂದು ಕೆರೆ ತುಂಬಿದಾಗ ಸುತ್ತಲಿನ ಬಾವಿ, ಚಿಕ್ಕ ಕೆರೆಗಳು, ಅಂತರ್ಜಲ, ಒರತೆ ತುಂಬಿ ನೀರಿನ ಸಮೃದ್ಧತೆ. ಆ ನೀರಿನ ಸುತ್ತ ಸಾಂಸ್ಕೃತಿಕವಾದ ಭಾವನೆಗಳು. ದೈವಿಕ ದೃಷ್ಟಿಕೋನ. ಒಂದಷ್ಟು ಆಚಾರಗಳು, ವಿಚಾರಗಳು. ಇಂತಹ ಕಟ್ಟುಪಾಡುಗಳನ್ನು ಹಿರಿಯರು ನೀರುಳಿಸುವ ಲಕ್ಷ್ಯದಲ್ಲಿಟ್ಟೇ ರೂಪಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಅಂತಹ ವ್ಯವಸ್ಥೆಯನ್ನು ಪ್ರಶ್ನಿಸಿದೆವು. ವಿಮರ್ಶಿಸಿದೆವು. ಮೂಢನಂಬಿಕೆ ಎಂದೆವು. ಶೋಷಣೆ ಎನ್ನುವ ಹಣೆಪಟ್ಟಿ ಹಾಕಿದೆವು. ಪರಿಣಾಮ ಕಣ್ಣ ಮುಂದಿದೆ.
         ನಮ್ಮ ಹಿರಿಯರನ್ನು ಮಾತನಾಡಿಸೋಣ. ಅವರಿಗೆ ಭೂಮಿಯು ತಾಯಿ ಸದೃಶ. ನದಿಗಳೆಲ್ಲಾ ಅಕ್ಕ ತಂಗಿಯರು. ಅವರನ್ನು ಆರಾಧಿಸಿದರು. ತಂತಮ್ಮ ಮಿತಿಯ ಜ್ಞಾನದಿಂದ ನೀರಿನ ಹರಿವನ್ನು ತಡೆದು ಭೂಮಿಗೆ ಇಂಗಿಸುವ ಯತ್ನ ಮಾಡಿದರು. ಕೆರೆ, ಮದಕ, ಪಳ್ಳ, ಹಳ್ಳ, ಬಾವಿಗಳಲ್ಲಿರುವ ನೀರಿನ ಲಭ್ಯತೆಯಂತೆ ಕೃಷಿ ಮಾಡಿದರು. ಅರಣ್ಯವನ್ನು ಬೆಳೆಸಿದರು. ಮಳೆಗಾಲದಲ್ಲಿ ಒಸರಾಗಿ ಹರಿಯುವ ನೀರನ್ನು ಬಳಸಿಕೊಂಡರು. ಎಲ್ಲೆಲ್ಲಾ ಸಂಗ್ರಹಿಸಿಕೊಳ್ಳಲು ಸಾಧ್ಯವಿದೆಯೋ ಅಲ್ಲೆಲ್ಲಾ ನೀರನ್ನು ಸಂಗ್ರಹಿಸಿ ಬಳಸಿದರು, ಭೂ ಒಡಲಿಗೆ ಉಣಿಸಿದರು.
         ಕೃಷಿಕ ಡಾ.ಡಿ.ಸಿ.ಚೌಟರು 'ಮದಕ' ಎನ್ನುವ ಪುಸ್ತಕದಲ್ಲಿ ಮಾರ್ಮಿಕವಾಗಿ ಹೇಳುತ್ತಾರೆ, "ನಮ್ಮ ಜಲಮೂಲಗಳು ಬತ್ತುತ್ತಿವೆ. ಕಾಡು ಕಡಿದು ಮೂಲನಿವಾಸಿಗಳನ್ನು ಓಡಿಸಿ ಸಹಸ್ರಾರು ಕೋಟಿ ರೂಪಾಯಿಯ ಸಂಪತ್ತನ್ನು ವ್ಯಯಿಸಿ ಅಣೆಕಟ್ಟೆಗಳನ್ನು ಕಟ್ಟಿ ನೀರು ಹಂಚುವ ಕಾರ್ಯಕ್ಕೆ ತೊಡಗಿದ್ದೇವೆ. ಭೂಮಿಯ ಗರ್ಭದಿಂದ ಸಾವಿರ ಅಡಿಯ ಕೊಳವೆಬಾವಿಗಳನ್ನು ಹಾಕಿ ನೀರು ಹೀರಹತ್ತಿದೆವು. ಈಗ ಸಮುದ್ರದ ನೀರಿನ ಉಪ್ಪನ್ನು ಶುದ್ಧಗೊಳಿಸಿಸುವ ಸಾಹಸಕ್ಕೆ ಹೊರಟಿದ್ದೇವೆ. ಈ ಎಲ್ಲಾ ಸಾಹಸಗಳು ಪಟ್ಟಣದ ಅವಶ್ಯಕತೆಗಳನ್ನು ಪೂರೈಸಲು. ಕೃಷಿಗಾಗಿ ಅಲ್ಲ. ಇವು ಸೃಷ್ಟಿಯ ನಿಯಮಗಳನ್ನು ಬದಲಿಸಿ ನಿಸರ್ಗದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸುವ ಮನುಷ್ಯನ ಹುನ್ನಾರ."
         "ಮಳೆನೀರು ಕೆರೆ, ಬಾವಿ, ನದಿಗಳೆಲ್ಲ ಸೇರಿ ಹರಿದು ಸಮುದ್ರ ಸೇರುತ್ತದೆ. ಸಮುದ್ರದ ನೀರು ಆವಿಯಾಗಿ ಆಕಾಶ ಸೇರುತ್ತದೆ. ಆವಿ ಮೋಡವಾಗಿ, ಮೋಡ ಮಳೆಯಾಗಿ ಭೂಮಿ ಸೇರುತ್ತದೆ. ಬಾಯಾರಿದ ಭೂಮಿ ತೃಪ್ತಿಯಿಂದ ನೀರು ಕುಡಿದು ಒಸರಾಗಿ ಹೊರ ಬಿಡುತ್ತದೆ. ಆ ಒಸರು ಮತ್ತೆ ಸಮುದ್ರ ಸೇರುವ ತವಕದಲ್ಲಿರುತ್ತದೆ. ಈ ಸಹಜ ಕ್ರಿಯೆಯನ್ನೇ ಬದಲಿಸ ಹೊರಟ ಮನುಷ್ಯನ ಅಹಂಕಾರಕ್ಕೆ ನೀರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಇಪ್ಪತ್ತನೇ ಶತಮಾನವು ಅಣೆಕಟ್ಟೆಗಳನ್ನು, ಕಾಲುವೆಗಳನ್ನು, ಕೊಳವೆಬಾವಿಗಳನ್ನು ತಂದು ಪ್ರಕೃತಿ ಸಹಜ ಸಂಪತ್ತಿನೊಂದಿಗೆ ಆಟವಾಡಿತು. ನಮ್ಮ ಸಹಜ ಪ್ರಕೃತಿಯ ನೀರಿನ ಮೇಲೆ ಹಲವು ಅತ್ಯಾಚಾರಗಳನ್ನು ಇಂಜಿನಿಯರುಗಳು ಮಾಡಿದರು. ಅರಣ್ಯಗಳನ್ನು ನಾಶ ಮಾಡಿದರು. ನದಿಗಳು ಬತ್ತಿದುವು. ನೀರಿನ ಬದಲಿಗೆ ವಿದ್ಯುಚ್ಛಕ್ತಿ ಕೊಟ್ಟರು. ಸದಾ ಹರಿಯುತ್ತಿದ್ದ ನದಿಗಳು ಬೇಸಿಗೆಯಲ್ಲಿ ಬತ್ತಿ ಮಳೆಗಾಲದಲ್ಲಿ ಮಾತ್ರ ಹರಿಯುವಂತೆ ಮಾಡಿದರು.."
         ಪ್ರಕೃತ ಕನ್ನಾಡು ಅನುಭವಿಸುವ ಸಂಕಟಗಳ ಹಿಂದೆ ಅಭಿವೃದ್ಧಿ ಮತ್ತು ಅನಿವಾರ್ಯ ಎಂಬೆರಡು ಶಬ್ದಗಳು ಹೊಸೆದುವು. ಹಾಗಾಗಿ ಕೆರೆಗಳ ನಾಡಲ್ಲಿ ಕೆರೆಗಳನ್ನು ಹುಡುಕುವ ದುಃಸ್ಥಿತಿ. ಹೂಳು ತುಂಬಿ ಕೆರೆಗಳೇ ನಾಪತ್ತೆಯಾಗಿವೆ. ಎಷ್ಟೋ ಕೆರೆಗಳು ಅಭಿವೃದ್ಧಿಯಾಗಿರುವುದು ಕಡತದಲ್ಲಿ ಮಾತ್ರ. ಕೋಟಿ ಕೋಟಿಗಳ ಲೆಕ್ಕಣಿಕೆಯಲ್ಲಿರುವ ನಮ್ಮ ಆಡಳಿತ ವ್ಯವಸ್ಥೆಯು ದೂರಗಾಮಿ ಯೋಜನೆಗಳನ್ನು ಹಾಕಿಕೊಳ್ಳದಿರುವುದರಿಂದ ಸಂಕಟಗಳ ಸರಮಾಲೆಗಳು ಅನುಭವಕ್ಕೆ ಬರುತ್ತವೆ. ರಿಸಾರ್ಟ್, ಓಟು ಬ್ಯಾಂಕ್, ಕೆಸರೆರೆಚಾಟ, ಹಗುರ ಮಾತುಗಳೇ ರಾಜಕಾರಣದ ಅರ್ಹತೆಯಾಗಿರುವ ಪ್ರಕೃತ ದಿನಮಾನದಲ್ಲಿ ಗಟ್ಟಿಯಾಗಿ ನೀರಿನ ದನಿ ಎಬ್ಬಿಸುವ ಕಂಠವು ತ್ರಾಣ ಕಳೆದುಕೊಂಡಿದೆ.
         ಆರಂಭದಲ್ಲಿ ಮಾತಿಗೆ ಸಿಕ್ಕ ರೈತರ ಮಾತನ್ನು ಉಲ್ಲೇಖಿಸುತ್ತೇನೆ, ನಂನಮ್ಮ ನೀರಿನ ಸಮಸ್ಯೆಗೆ ನಮ್ಮಲ್ಲೇ ಪರಿಹಾರವಿದೆ. ನಮ್ಮೂರಲ್ಲಿ ಬಹಳ ಮಿತವಾಗಿ ಮಳೆ ಬರುತ್ತದೆ. ಮಳೆ ಬಂದಾಗ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸರಕಾರ ಸ್ಪಂದಿಸಬೇಕು. ಚಿಕ್ಕಪುಟ್ಟ ಕೆರೆಗಳ ದುರಸ್ತಿಗಳನ್ನು ಆಯಾಯ ವ್ಯಾಪ್ತಿಯ ರೈತರೇ ಪಕ್ಷ, ಜಾತಿಗಳನ್ನು ಮರೆತು ಮಾಡಬೇಕು. ಬಿಗುಮಾನ ತೊರೆದು ಅಧಿಕಾರಿಗಳು ರೈತರನ್ನು ಒಲಿಸಿಕೊಂಡರೆ ಈ ಕೆಲಸ ದೊಡ್ಡದೇನಲ್ಲ. ನೀರಿನ ಮೂಲಗಳ ಸಂರಕ್ಷಣೆಯಾಗಬೇಕು.
         ನೀರಿನ ಹೋರಾಟದ ಕಾವು ಕನ್ನಾಡು ಹಬ್ಬುತ್ತಿದೆ. ಮಳೆಯೂ ಕೈಕೊಡುತ್ತಿದೆ. ಮತಿಯೂ ತಪ್ಪುತ್ತಿದೆ. ಗೌರವಾನ್ವಿತ ಹುದ್ದೆಯಲ್ಲಿರುವವರು ಗೌರವ ಬದಿಗಿರಿಸಿ ಹಗುರವಾಗಿ ಸುದ್ದಿಗಳನ್ನು ಹರಿಯಬಿಡುತ್ತಾರೆ. ರಾಜಕೀಯ ರಕ್ಷಣೆಗಾಗಿ ಸಾಮಾಜಿಕ ಜವಾಬ್ದಾರಿ ಮತ್ತು ವ್ಯವಸ್ಥೆಯನ್ನು ಬಲಿಕೊಡಲು ಹೇಸದ, ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಜನಪರವಾಗಿ ನಿಲ್ಲದಿದ್ದರೆ - ನಮ್ಮ ಇಂಧನ ಸಚಿವರು ಹೇಳಿದಂತೆ 'ದೇವರೇ ಗತಿ'!
        'ಜಲ ಭಾಗ್ಯ' - ಮಾನ್ಯ ಮುಖ್ಯಮಂತ್ರಿಗಳೇ, ಹೊಸ ಭಾಗ್ಯ ಯೋಜನೆಯನ್ನು ಘೋಷಿಸುವಿರಾ? ಇದು ಕನ್ನಾಡಿನ ಜನರ ಆದ್ಯತೆಯ ಕೂಗು. ಹಲವು ಭಾಗ್ಯಗಳನ್ನು ರೂಪಿಸಿದ ತಮಗಿದು ಕಷ್ಟವಾಗಲಾರದು. ಈ ಯೋಜನೆ ನಿಜಾರ್ಥದಲ್ಲಿ ಜನಹಿತವಾಗಿರಲಿ. ಜೀವ ಹಿತವಾಗಿರಲಿ.   
 

1 comments:

Suresh said...

ಜಲಭಾಗ್ಯ ಯೋಜನೆ ಅಂದರೆ ಟ್ಯಾಂಕರ್ನಲ್ಲಿ ಮನೆ ಮನೆಗೆ ರೇಷನ್ ತರ ನೀರು ಕೊಡೋದು ಅಂದುಕೊಂಡಾರು ಸರಕಾರದವರು. ಅವರಿಗೆಲ್ಲಿ ಕೆರೆ ಸಂರಕ್ಷಣೆ ಅರ್ಥವಾಗುತ್ತೆ? ಒಂದು ವೇಳೆ ಅದು ಅರ್ಥವಾಗುತ್ತಿದ್ದರೆ ಬೆಂಗಳೂರಿನ ಕೆರೆಗಳಿಗೆ ಈ ಸ್ಥಿತಿ ಬರುತ್ತಿತ್ತೇ?

Post a Comment