Tuesday, October 27, 2015

ಹಸುರು ಮನದ ಹಸಿಯಾದ ಹಸಿರುಕಾಡು

               "ಹಸಿರೆಬ್ಬಿಸುವ ಅಭ್ಯಾಸ ಬದುಕಿನ ಭಾಗವಾಗಬೇಕು. ಕಾಡಿಲ್ಲದೆ ಬದುಕಿಲ್ಲ. ಕಾಡು ಕಾಡುತ್ತಾ ಇರಬೇಕು. ಜಲದ ಮುಖ್ಯ ಸಂಪನ್ಮೂಲವೇ ಮರಗಳು," ಪುತ್ತೂರಿಗೆ 'ಬಾಲವನ ಪ್ರಶಸ್ತಿ' ಸ್ವೀಕಾರಕ್ಕಾಗಿ ಆಗಮಿಸಿದ ಹಿರಿಯ ಪರಿಸರ-ವಿಜ್ಞಾನ ಪತ್ರಕರ್ತ ನಾಗೇಶ ಹೆಗಡೆ ಮಾತಿಗೆ ಸಿಕ್ಕರು. ಹಠಕಟ್ಟಿ ಹಸಿರನ್ನು ನಾಶಮಾಡುತ್ತಿರುವ ರಾಜಧಾನಿಯ ಒಂದು ಜೀವಂತ ಹಸಿರಿನ ಕತೆಗೆ ಕಿವಿಯಾದೆ.   
             ಬೆಂಗಳೂರಿನ ಟಿ.ಜಿ.ಹಳ್ಳಿ ಕೆರೆ ಮತ್ತು ಹೇಸರಘಟ್ಟ ಕೆರೆಗಳು ಬೆಂಗಳೂರಿಗೆ ನೀರೊದಗಿಸುವ ಜಲನಿಧಿಗಳಾಗಿದ್ದುವು. ಕೊಳವೆಬಾವಿಗಳ ಕೊರೆತ ಹೆಚ್ಚಾಯಿತು. ಕೆರೆಗಳು ಬಾಯಾರಿದುವು. ನೀರಿನ ಮಟ್ಟ ಕುಸಿದು ಹನಿ ನೀರಿಗೆ ಬಾಯ್ಬಿಟ್ಟವು. ಹೂಳು ತುಂಬಿತು. ಕೆರೆ ಎನ್ನುವ ಸಮೃದ್ಧ ಸಂಪನ್ನತೆಯ ತೇವ ಪೂರ್ತಿ ಆರಿತು. ಈಗ ಬೆಂಗಳೂರು ಶುದ್ಧ ನೀರಿಗಾಗಿ ಒದ್ದಾಡುತ್ತಿದೆ! ಎಲ್ಲೆಲ್ಲಿಂದಲೋ ನೀರು ಬರುತ್ತೆ ಬಿಡಿ.
            ಬೆಂಗಳೂರಿನ ಲಾಲ್ಭಾಗ್, ಕಬ್ಬನ್ ಪಾರ್ಕ್ - ಈ ಎರಡು ಹೆಸರು ಹೇಳುವಾಗಲೇ ಮಾತು ನಿಂತುಬಿಡುತ್ತದೆ. ಓಡಾಡಬಹುದಾದ, ಪರಿಸರವನ್ನು ಕಣ್ತುಂಬಿಕೊಳ್ಳಬಹುದಾದ ಬೇರೆ ಸ್ಥಳಗಳಿಲ್ಲ. ಹೆಸರಿಸುವಂತಹ ಜಾಗವಿಲ್ಲ. ಮಾರ್ಗದ ಇಕ್ಕೆಲಗಳು ಕಾಂಕ್ರಿಟ್ಮಯ. ವಿವಿಧ ಕನಸುಗಳನ್ನು ಹೊತ್ತು ಬೆಂಗಳೂರಿಗೆ ನುಗ್ಗುತ್ತಿರುವ ಹಸಿ ಮನಸ್ಸುಗಳ ಹಸಿರಿನ ಹುಡುಕಾಟ. ಏದುಸಿರಿನ ಉಸಿರಾಟ. ಅಗಣಿತ ಮ್ಹಾಲ್ಗಳು, ಫ್ಲೈಓವರ್ಗಳು. ಕಟ್ಟಡ ಕಾಮಗಾರಿಗಳು. ಮಣ್ಣೆಂಬುದು ಮರೀಚಿಕೆ.
            ರಾಜಧಾನಿಯಲ್ಲಿ ಗಿಡಗಳನ್ನು ನೆಡಬೇಕೆನ್ನುವ ಆಸಕ್ತರಿದ್ದಾರೆ. ಹಸಿರೆಬ್ಬಿಸುವ ತುಡಿತವಿದೆ. ಮನೆಯ ಸುತ್ತ ಗಿಡಗಳನ್ನು ನೆಟ್ಟು ಪೋಷಿಸುವ ಮನಸ್ಸಿದೆ. ನೆಡಲು ಜಾಗವೇ ಇಲ್ಲ. ಎಲ್ಲಿ ನೆಡಬೇಕು? ಈ ಯೋಚನೆ ಬಂದಾಗ ಟಿ.ಜಿ.ಹಳ್ಳಿ ಕೆರೆ ಸುತ್ತಲಿನ ಐನೂರ ಮೂವತ್ತೆಕ್ರೆ ಕಾಡನ್ನು ಮಾನವ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ವನವನ್ನಾಗಿ ಪರಿವರ್ತಿಸುವ ನಿರ್ಧಾರ. ಸಂಬಂಧಪಟ್ಟ ವರಿಷ್ಠರಿಗೆ, ಸರಕಾರಕ್ಕೆ ಮನವಿ. "ನಮ್ಮಲ್ಲಿ ದುಡ್ಡು ಕೇಳ್ಬೇಡಿ. ಹಣ ಮಾಡುವ ಉದ್ದೇಶ ಇದಲ್ಲ. ಹಸಿರು ಎಬ್ಬಿಸ್ತೀವಿ. ಮರಗಳ ಕಡಿತವಾಗದಂತೆ ನೋಡಿ ಕೊಳ್ತೀವಿ," ಮುಂತಾದ ಕಾರ್ಯಹೂರಣ ಮುಂದಿಟ್ಟರು. ಉದ್ದೇಶಶುದ್ಧಿಯನ್ನರಿತ ಅಧಿಕಾರಿಗಳಿಂದ ಹಸಿರು ನಿಶಾನೆ.
             ಈಗ ಆ ಕಾಡು ಬರೇ ಕಾಡಲ್ಲ. ಅದು 'ಸ್ಫೂರ್ತಿವನ'. ಎಂಟು ವರುಷದಿಂದ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ನಿರ್ವಹಣೆಗೆ ಹಸಿರು ಮನಸ್ಸಿನ ತಂಡವಿದೆ. ದನ, ಕುರಿ ಮೇಯಿಸುವುದು, ಕಾಡು ಕಡಿಯುವ-ಸವರುವ ಕತ್ತಿಗಳ ಹರಿತ ಕಡಿಮೆಯಾಗಿದೆ. ಗಿಡ ನೆಡುವ ಆಸಕ್ತರಿಗೆ ಮುಕ್ತ ಪ್ರವೇಶ. ಒಬ್ಬರು ಗಿಡ ನೆಡಲು ಮುಂದೆ ಬಂದರೆ ನೆಟ್ಟು, ಅರೈಕೆ ಮಾಡಿ ಬೆಳೆಸಿ, ಅದು ತಾನಾಗಿ ನೆಲಕ್ಕೊರಗುವ ವರೆಗೆ ತಂಡದ್ದೇ ಜವಾಬ್ದಾರಿ.
             ಬೆಂಗಳೂರಿನ ಮೂನ್ನೂರಿಪ್ಪತ್ತು ಶಾಲೆಗಳ ಹೆತ್ತವರು ಈ ಆಂದೋಳನಕ್ಕೆ ಸ್ಪಂದಿಸಿದ್ದಾರೆ. ಹುಟ್ಟುಹಬ್ಬ, ಮಕ್ಕಳಿಗೆ ರ್ರ್ಯಾಂಕ್  ಬಂದಾಗ, ಹಿರಿಯ ನೆನಪಿನಲ್ಲಿ, ವಿವಾಹ ವಾರ್ಶಿಕೋಕೋತ್ಸವ, ಸಮಾರಂಭ.. ಹೀಗೆ ಒಂದೊಂದು ನೆನಪಿನಲ್ಲಿ ಗಿಡಗಳನ್ನು ನೆಡಲು ಉತ್ಸುಕರಾಗಿದ್ದಾರೆ. ಹಸಿರೆಬ್ಬಿಸುವ ಮನಸ್ಸಿದೆ, ಜಾಗವಿಲ್ಲ ಎನ್ನುವ ಚಡಪಡಿಕೆಯ ಮಂದಿಗೆ ಖುಷಿಯಾಗಿದೆ.
              ಗಿಡಗಳನ್ನು ನೆಡುವಲ್ಲಿ 'ಸ್ಫೂರ್ತಿವನ'ವು ದಾನಿಗಳ ಶ್ರಮಹಗುರ ಮಾಡುವ ಉಪಾಯವೊಂದನ್ನು ಮುಂದಿಟ್ಟಿದೆ. ಒಂದು ಗಿಡಕ್ಕೆ ಒಂದೂವರೆ ಸಾವಿರದಂತೆ ಪಾವತಿ ಮಾಡಿದರೆ ಅವರ ಹೆಸರಿನಲ್ಲಿ ಗಿಡ ನೆಟ್ಟು ಆರೈಕೆ ಮಾಡುವ ಜವಾಬ್ದಾರಿ. ಬೆಂಗಳೂರು ಸುತ್ತುಮುತ್ತ ಇಲ್ಲಿನ ಪರಿಸರಕ್ಕೆ ಹೊಂದುವ ಮೂವತ್ತರಿಂದ ನಲವತ್ತು ಜಾತಿಯ ಕಾಡು ಗಿಡಗಳಿವೆ. ಇದರಲ್ಲಿ ಯಾವ ಗಿಡವನ್ನು ಅಪೇಕ್ಷಿಸುತ್ತಾರೋ ಅದನ್ನು ನೆಟ್ಟು ಪಾಲಿಸಲಾಗುತ್ತದೆ. ಈ ವ್ಯವಸ್ಥೆ ಸಾಕಷ್ಟು ಪಾಲಕರಿಗೆ ಸ್ವೀಕೃತಿಯಾಗಿದೆ.
              ಸಮಯ ಹೊಂದಿಸಿಕೊಂಡು ವಿವಾಹ ಮಂಟಪಗಳಿಗೆ ಹೋಗಿ ಮುಖ್ಯಸ್ಥರೊಡನೆ ಮಾತುಕತೆ ಮಾಡ್ತೀವಿ. ಉದ್ದೇಶ ಸ್ಪಷ್ಟಪಡಿಸುತ್ತೇವೆ. ಮದುವೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡುವಾಗ ಸಾವಿರದೈನೂರು ರೂಪಾಯಿ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ. ಬಡಾವಣೆಗಳಲ್ಲಿರುವ ವಿದ್ಯಾರ್ಥಿಗಳ ಪಾಲಕರೇ ಹಸಿರೆಬ್ಬಿಸುವ ಈ ಕಾಯಕದ ಪ್ರಚಾರಕರು. ಒಬ್ಬರ ನಿರ್ಧಾಾರ ಇನ್ನೊಬ್ಬರಿಗೆ ಸ್ಫೂರ್ತಿ.  ಹಾಗಾಗಿ ಮುನ್ನೂರಿಪ್ಪತ್ತು ಶೈಕ್ಷಣಿಕ ಸಂಸ್ಥೆಗಳಿಗೆ ವಿಚಾರ ತಲುಪಿದೆ.  ಸ್ಪಂದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಾವಾಗಿ ಬರುತ್ತಾ ಇದ್ದಾರೆ. ತಂಡದಲ್ಲಿ ಬೆರಳೆಣಿಕೆಯ ಸದಸ್ಯರಿದ್ದು ವಿವಿಧ ಜವಾಬ್ದಾರಿಗಳಲ್ಲಿರುವವರು. ವೇಗವಾಗಿ ಕೆಲಸ ಆಗುತ್ತಿಲ್ಲ ಎನ್ನುವ ವಿಷಾದವೂ ಇದೆ.
                ಯಾರ್ಯಾರ ಗಿಡೆ ಎಲ್ಲೆಲ್ಲಿ ಎನ್ನುವ ದಾಖಲೆಯಿದೆ. ಗಿಡಗಳಲ್ಲಿ ಲೇಬಲ್ ಅಂಟಿಸಿಲ್ಲ. ಗಿಡದ ದಾತಾರರ ವಿಳಾಸದಿಂದ ಹಿಡಿದು ಗಿಡದ ಪೂರ್ತಿ ಜಾತಕ, ನೆಟ್ಟ ಜಾಗವನ್ನು ಜಿಪಿಎಸ್ ಮೂಲಕ ನೋಡುವ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೂರನೇ ವರುಷದ ನೆನಪಿಗೆ ನೂರು ಗಿಡಗಳನ್ನ ಪ್ರಾಯೋಜಿಸಿದ್ದಾರೆ. ಸಾಪ್ಟ್ವೇರ್ ಕಂಪೆನಿಗಳ ಬೆಂಬಲವಿದೆ. ವಿವಿಧ ಕಂಪೆನಿಗಳಲ್ಲಿರುವ ಉದ್ಯೋಗಸ್ಥರು ನೆನಪಿಗಾಗಿ ಸ್ಫೂರ್ತಿವನದತ್ತ ಮುಖ ಮಾಡುತ್ತಿದ್ದಾರೆ.
               ಪ್ರಾಮಾಣಿಕ ಸಹಾಯಕರ ಅಲಭ್ಯತೆ - ಈ ಕಾಯಕದಲ್ಲಿ ಎದುರಾಗುವ ತೊಡಕು. ಸ್ಥಳೀಯರು ಸಿಕ್ತಾ ಇಲ್ಲ. ಸಿಕ್ಕರೂ ಮುಂಗಡ ತೆಕ್ಕೊಂಡು ನಾಪತ್ತೆ! ಸಮಸ್ಯೆಗಳ ಮಧ್ಯೆ ಗಿಡಗಳ ಆರೈಕೆ ನಡೆಯುತ್ತಿದೆ. ಗರಿಷ್ಠ ಭದ್ರತೆ ನೀಡುತ್ತಿದ್ದೇವೆ. ಬೆಂಕಿಯ ಭಯದಿಂದ ಕಾಡನ್ನು ರಕ್ಷಿಸುವುದು ತಲೆನೋವು. ಪ್ರತೀ ಊರಲ್ಲೂ ಇಂತಹ ವನಗಳನ್ನು ರೂಪಿಸುವಂತಹ ಅಗತ್ಯವಿದೆ. ಕಾಡಿರುವ ಮಲೆನಾಡು, ಕರಾವಳಿಗಳಲ್ಲೂ ಗಿಡ ನೆಡುವ ಪರಿಪಾಠ ಶುರುವಾಗಬೇಕು.
              ನಾಗೇಶ ಹೆಗಡೆಯವರು ಮಾತು ನಿಲ್ಲಿಸಿದರು. 'ಹೇಗಿದೆ ಕಾಡಿನ ಕತೆ' ಪ್ರಶ್ನಿಸಿದರು. "ಬೆಂಗಳೂರಿಗರು ವೀಕೆಂಡ್ ಬಂದ್ರೆ ಸಾಕು, ನಗರದಿಂದ ಹೊರಗೆ ಹೋಗೋಕೆ ಕಾದಿರ್ತಾರೆ. ಬಹಳಷ್ಟು ಮಂದಿ ಹೊರವಲಯದಲ್ಲಿ ಜಾಗ ಖರೀದಿಸಿ ವೀಕೆಂಡ್ ಅಗ್ರಿಕಲ್ಚರ್ ಶುರು ಮಾಡಿದ್ದಾರೆ. ಕಾಂಕ್ರಿಟ್ ಕಾಡೊಳಗೆ ಹಸಿರಿಗಾಗಿ ತುಡಿಯುವ ಮನಸ್ಸುಗಳಿವೆ. ಉದ್ಯೋಗದ ಒತ್ತಡವು ಹಸಿರ ಪ್ರೀತಿಗೆ ಬ್ರೇಕ್ ಹಾಕುತ್ತಿದೆ. ನಗರ ಮೋಹದಿಂದ ಬಂದವರು ನಾಲ್ಕೈದು ವರುಷದಲ್ಲೇ ಹಳ್ಳಿಯನ್ನು ನೆನಪು ಮಾಡಿಕೊಳ್ಳುವ ಸ್ಥಿತಿಯಿದೆ," ಬೆಂಗಳೂರಿನ ಪ್ರಕೃತ ಸ್ಥಿತಿಯನ್ನು ನಾಗೇಶ್ ಕಟ್ಟಿಕೊಡುತ್ತಾ ಫಕ್ಕನೆ ಕೋಲಾರವನ್ನು ನೆನಪಿಸಿಕೊಂಡರು, "ನೋಡಿ, ಕೋಲಾರದಲ್ಲಿ ಕ್ಯಾರೆಟ್ ಬೆಳೆಯುತ್ತಾರೆ. ಕ್ಯಾರೆಟನ್ನು ತೊಳೆದು ಸ್ವಚ್ಛಗೊಳಿಸಲು ಎಷ್ಟೊಂದು ನೀರು ಪೋಲು ಆಗುತ್ತದೆ ಗೊತ್ತಾ. ಟ್ಯಾಂಕರ್, ಡೀಸಿಲ್ ಪಂಪ್ಗಳು ಕೆರೆಯಿಂದ ಅವಿರತ ಪಂಪ್ ಮಾಡುತ್ತಲೇ ಇವೆ. ಅಲ್ಲಿನ ನೀರಿನ ಸಮಸ್ಯೆಗೆ ಇದೂ ಒಂದು ಅಜ್ಞಾತ ಕಾರಣ. "
                  ಕನ್ನಾಡಿನಲ್ಲಿ ತೊಂಭತ್ತೆಂಟು ತಾಲೂಕುಗಳಲ್ಲಿ ಸರಕಾರವು ಬರ ಘೋಷಿಸಿದೆ. ಬರ ಪ್ರದೇಶವನ್ನು ಸಮಿತಿಯೊಂದು ಗೊತ್ತುಮಾಡುತ್ತದೆ. ಮುನ್ನೂರ ಇಪ್ಪತ್ತು ಕೋಟಿ ಅನುದಾನಕ್ಕೂ ಸಹಿ ಬಿದ್ದಿದೆ. ಇದು ಹೇಗೆ ಖರ್ಚಾಗುತ್ತೆ ಎನ್ನುವ ಅಂಕಿಅಂಶ ಎಲ್ಲೂ ಸಿಗೋದಿಲ್ಲ. ಒಂದೆಡೆ ಹಣ ಖರ್ಚಾಗುತ್ತೆ. ಇನ್ನೊಂದೆಡೆ ಬರದ ಊರಿನ ಬೆಳಗು-ಸಂಜೆಗಳ ಜತೆ ಕೋಟಿಗಳು ನಗುತ್ತಾ ಕರಗುತ್ತವೆ. ಬೇಸಿಗೆಯ ನೀರಿನ ಬರಕ್ಕೆ ಪರಿಹಾರ ನಂನಮ್ಮಲ್ಲೇ ಇದೆ.  
                  ಸೋಲಾರ್ ವಿದ್ಯುತ್ತಿನ ಮೂಲಕ ಸಮುದ್ರದ ನೀರು ಬಳಕೆ ಮಾಡಲು ಸಾಧ್ಯವಾ? ಸಾಧ್ಯ ಎನ್ನುವುದಕ್ಕೆ ಸಿಂಗಾಪುರದ ಉದಾಹರಣೆ ಮುಂದಿದೆ. ಸಿಂಗಾಪುರದಲ್ಲಿ ನೀರು ಎನ್ನುವುದು ಅಮೃತ. ಪೋಲು ಬಿಡಿ, ಹನಿ ನೀರಿಗೂ ಕೋಟಿ ರೂಪಾಯಿ ಮೌಲ್ಯ. ಸಿಂಗಾಪುರಕ್ಕೆ ಚಿಕ್ಕ ಪ್ರಮಾಣದಲ್ಲಿ ನೀರು ಮಲೇಶ್ಯಾ ಒದಗಿಸುತ್ತದೆ. ಮಳೆ ನೀರಿನ ಕೊಯ್ಲು ವ್ಯಾಪಕವಾಗಿದೆ. ಬಳಸು ನೀರನ್ನು ಶುದ್ಧಗೊಳಿಸಿ ಮರುಬಳಕೆ ಮಾಡುವ ತಂತ್ರಜ್ಞಾನವಿದೆ. ನಗರದ ತ್ಯಾಜ್ಯ ನೀರೆಲ್ಲವನ್ನೂ ಸಂಗ್ರಹಿಸಿ, ಶುದ್ಧೀಕರಿಸಿ, ಪುನಃ ಬಳಕೆ ಮಾಡುವ ವಿಧಾನ. ಸಮುದ್ರದ ನೀರನ್ನು ಶುದ್ಧ ಮಾಡಿ ಕುಡಿಯಲು ಉಪಯೋಗಿಸುವ ವ್ಯವಸ್ಥಿತ ಯೋಜನೆಯಿಂದಾಗಿ ಸಿಂಗಾಪುರ ನೀರಿನ ಬಳಕೆಯಲ್ಲಿ ಪ್ರಪಂಚದಲ್ಲೇ ಐಕಾನ್ ಆಗಿದೆ. ನಮ್ಮಲ್ಲಿ ಅಷ್ಟಾಗದಿದ್ದರೂ ಒಂದಷ್ಟು ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲವಾ? ರಾಜಕೀಯ ಶಕ್ತಿ ಮಾತ್ರ ಸಾಲದು. ಇಚ್ಚಾಶಕ್ತಿಯೂ ಬೇಕು. ಮನಸ್ಸಿನಿಂದ ಹುಟ್ಟಿದ ಕಾಳಜಿಯೂ ಬೇಕು.
                ಪುತ್ತೂರಿನಲ್ಲಿ 'ಬಾಲವನ ಪ್ರಶಸ್ತಿ' ಸ್ವೀಕರಿಸಿದ ಬಳಿಕ ನಾಗೇಶ ಹೆಗಡೆಯವರು ಶಾಲಾ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದಿರು. ವಿಜ್ಞಾನ, ಪರಿಸರ, ಸಮಸಾಮಯಿಕ ವಿಚಾರಗಳ ಪ್ರಶ್ನೆಗಳಿಗೆ ಮಗುವಾಗಿ ಉತ್ತರಿಸಿದರು. ವಿಜ್ಞಾನವನ್ನು ಸರಳ ಕನ್ನಡದಲ್ಲಿ ಅರ್ಥವಾಗುವ ಹಾಗೆ ಮಾತನಾಡುವ, ಬರೆಯುವ ನಾಗೇಶ್ ಮಕ್ಕಳನ್ನು ಆವರಿಸಿಕೊಂಡರು.

 (ಉದಯವಾಣಿ/ನೆಲದನಾಡಿ ಅಂಕಣ/24-10-2015)


0 comments:

Post a Comment