ಪೆರ್ಲ-ಬಜಕೂಡ್ಲು ದೇವಳದ ಸನಿಹ ನೇರಳೆ ಹಣ್ಣಿನ ಮರ. ಮಕ್ಕಳನ್ನು ಸೆಳೆದ ಹಿರಿಯಜ್ಜ. ಆಗಸದೆತ್ತರಕ್ಕೆ ಏರಲಾರರರು ಎಂದು ಗೊತ್ತಿದ್ದೇ ಗೊಂಚಲು ಗೊಂಚಲು ಹಣ್ಣುಗಳನ್ನು ಬಿಡುತ್ತಿತ್ತು. ಬುಡದಲ್ಲಿ ಬಣ್ಣದ ಚಿತ್ತಾರದ ಬಿನ್ನಾಣ. ಊರಿನ ಕಿರಿಯ-ಹಿರಿಯರ ಬದುಕಿಗದು ಸಾಕ್ಷಿ. ಮಂತ್ರದ ನಾದದ ನಿನಾದಕ್ಕೆ ಕಿವಿಯಾಗಿ ಸದೃಢವಾಗಿ ಬೆಳೆದಿತ್ತು.
ಬ್ರಹ್ಮಕಲಶೋತ್ಸವದ ಸಂದರ್ಭ. ಅಭಿವೃದ್ಧಿಯ ನೀಲನಕಾಶೆ ಸಿದ್ಧವಾದಾಗ ಮರವನ್ನು ತೆಗೆಯುವ ನಿರ್ಧಾರ. ಕಡಿಯದಿದ್ದರೆ ಅಭಿವೃದ್ಧಿ ಕೆಲಸಗಳಿಗೆ ತೊಡಕು. ಅಂದು ನೇರಳೆಯ ತಂಪು ನೆರಳಿನಲ್ಲಿ ಬಿಸಿಯುಸಿರು. ಧರೆಗುರುಳಿದಾಗ ಊರಿನ ಮಂದಿಗೆ ರಕ್ತ ಸಂಬಂಧಿಯನ್ನು ಕಳೆದುಕೊಂಡ ಭಾವ-ಅನುಭಾವ.
ಊರಿನ ಭಾವಜೀವಿಗಳ ಮನದೊಳಗೆ ನೇರಳ ಮರ ಆಳವಾಗಿ ಬೇರುಬಿಟ್ಟಿತ್ತು. ಕರುಳಬೇರನ್ನೇ ತುಂಡರಿಸಿದ ಅಪರಾಧಿ ಭಾವ. ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ. ದೇವಳದ ಜಾಗದಲ್ಲಿ ವನವೊಂದನ್ನು ಎಬ್ಬಿಸುವ ಸಂಕಲ್ಪ. ನೂರಾರು ಮಂದಿ ಖುಷಿಯಿಂದ ಸ್ಪಂದಿಸಿದರು. ಪರಿಣಾಮ, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ.
"ಪೂಜಾ ಕೈಂಕರ್ಯಕ್ಕೆ ಬೇಕಾದ ಪತ್ರೆಗಳು, ಹೂಗಳು, ಸಮಿತ್ತುಗಳು ಸಿಗುವಂತಿರಬೇಕು. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹೊಸದಾಗಿ ಧ್ವಜಮರ(ಕೊಡಿಮರ)ಕ್ಕೆ ಮರವನ್ನು ಬೇರೆಡೆಯಿಂದ ತರಲಾಗಿತ್ತು. ಮುಂದಿನ ಬ್ರಹ್ಮಕಲಶದ ಸಂದರ್ಭದಲ್ಲಿ ನಮ್ಮ ಮರವೇ ಕೊಡಿಮರವಾಗಬೇಕು, ಎನ್ನುವ ದೂರದೃಷ್ಟಿ ಹೊಂದಿದ್ದಾರೆ" ಉಮೇಶ್ ಕೆ. ಪೆರ್ಲ. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಅಧ್ಯಾಪಕ. ದೇವಳದ ಹಸಿರು ಕೈಂಕರ್ಯದ ಜವಾಬ್ದಾರಿ ಹೆಗಲಿಗೇರಿಸಿಕೊಂಡವರು.
ಒಂದೂವರೆ ಎಕ್ರೆ ಪ್ರದೇಶದಲ್ಲಿ ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಡಲಾಗಿದೆ. ಕದಂಬ, ನೇರಳೆ, ಶ್ರೀಗಂಧ, ಅಶ್ವತ್ಥ, ಬಿಲ್ವ... ಹೀಗೆ. ಇಲ್ಲಿರುವ ಒಂದೊಂದು ಗಿಡಗಳ ಹಿಂದೆ ಸು- ಮನಸ್ಸಿದೆ, ಉದ್ದೇಶವಿದೆ. ಗಿಡದಿಂದ ಗಿಡಕ್ಕೆ ಇಪ್ಪತ್ತು ಅಡಿಗಳ ಅಂತರ. ಯಾವ್ಯಾವ ಸಾಲಿನಲ್ಲಿ ಯಾವ ಜಾತಿಯ ಮರ ಇರಬೇಕೆಂದು ಮೊದಲೇ ಗೊತ್ತು ಮಾಡಿದ್ದಾರೆ. ಇದರ ಲಿಖಿತ ದಾಖಲಾತಿಯೂ ಇದೆ. ಗಿಡಗಳ ಪರಿಚಯಕ್ಕಾಗಿ ಲೇಬಲ್ ಅಂಟಿಸಿದ್ದಾರೆ.
'ನಮ್ಮದೂ ಒಂದು ಗಿಡವಿರಬೇಕು' ಎಂದಾದರೆ ಐನೂರು ರೂಪಾಯಿ ನಿರ್ವಹಣೆ ಶುಲ್ಕ ನೀಡಿ, ಯಾವ ಗಿಡ ಎಂದು ಸೂಚಿಸಿದರಾಯಿತು. ಈ ಮೊತ್ತದಲ್ಲಿ ಗಿಟ ನೆಟ್ಟು, ಆರೈಕೆ ಮಾಡಲಾಗುತ್ತದೆ. ದೇವಳದ ಇನ್ನಿತರ ಸೇವೆಗಳ ಮಧ್ಯೆ ಇದನ್ನು 'ಹಸಿರು ಸೇವೆ' ಎಂದು ಹೊಸದಾಗಿ ನಾಮಕರಣ ಮಾಡಿದರೆ ಹೇಗೆ? ಹಸಿರು ಎಲ್ಲರಿಗೂ ಉಸಿರು ತಾನೆ. "ಈಗಾಗಲೇ ನೂರಕ್ಕೂ ಮಿಕ್ಕಿ ಮಂದಿ ಸ್ಪಂದಿಸಿದ್ದಾರೆ. ಇನ್ನಷ್ಟು ಮಂದಿ ಉತ್ಸುಕತೆ ತೋರಿದ್ದಾರೆ. ಈ ಕುರಿತು ಪ್ರತ್ಯೇಕ ಸಮಿತಿ ರೂಪಿಕರಿಸಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಯೋಚನೆಯಿದೆ, ಎನ್ನುತ್ತಾರೆ ಉಮೇಶ್. ದೇವಳದ ಮೊಕ್ತೇಸರರಾದ ಕೃಷ್ಣ ಶ್ಯಾನುಭಾಗ್ ಹೆಗಲೆಣೆ.
2015 ಜುಲಾಯಿ ತಿಂಗಳಲ್ಲಿ ಗಿಡವನ್ನು ನೆಡಲಾಗಿದೆ. ಗಿಡಗಳ ಪಕ್ಕ ಚಿಕ್ಕ ಇಂಗುಗುಂಡಿ. ಒಂದೂವರೆ ಎಕ್ರೆಗೆ ಜೀವಂತ ಬೇಲಿ ನಿರ್ಮಾಣ ಮಾಡಿದ್ದಾರೆ. ಹೆಚ್ಚು ಆರ್ಥಿಕ ಹೊರೆ ಬೇಡುವ ಕೆಲಸ. ಗಿಡ ನೆಡುವ, ಗೊಬ್ಬರ ಹಾಕುವ ಚಿಕ್ಕಪುಟ್ಟ ಕೆಲಸಗಳಿಗೆ ವಿದ್ಯಾರ್ಥಿಗಳ ಸಹಕಾರ. ಉದ್ಯೋಗ ಖಾತರಿ ಯೋಜನೆಯ ಸದಸ್ಯರ ಶ್ರಮವನ್ನೂ ಬಳಸಿಕೊಳ್ಳಲಾಗಿದೆ. ಊರವರ ಶ್ರಮ ಗುರುತರ. ಮಕ್ಕಳ ಹುಟ್ಟುಹಬ್ಬ, ಹಿರಿಯ ನೆನಪು, ಶುಭಸಮಾರಂಭಗಳ ದಿವಸಗಳಂದು ಗಿಡಗಳನ್ನು ನೆಡುವ ಆಶಯವನ್ನು ಹಲವರು ಅನುಷ್ಠಾನ ಮಾಡಿದ್ದಾರೆ.
ಈಗಿನ ವೇಗ ನೋಡಿದರೆ ವನವನ್ನು ಪುನಃ ಒಂದೆಕ್ರೆ ವಿಸ್ತಾರಗೊಳಿಸುವ ಮಾನಸ ನೀಲನಕ್ಷೆ ಸಿದ್ಧವಾಗಿದೆ. ಹಸಿರಿನ ಮಧ್ಯೆ ಗಾಢ ಹಸಿರನ್ನು ಎಬ್ಬಿಸುವ ದೇವಳದ ಕೈಂಕರ್ಯ ನಿಜಕ್ಕೂ ಮಾದರಿ. ಅಳಿವಿನಂಚಿಗೆ ಜಾರುತ್ತಿರುವ ತಳಿಗಳನ್ನು ನೆಟ್ಟು ಉಳಿಸಲು ಇಂತಹ ಆಂದೋಳನಗಳಿಂದ ಸಾಧ್ಯ. ಒಂದು ನೇರಳೆ ಮರ ಕಟ್ಟಿಕೊಟ್ಟ ಹಸಿರಿನ ಜ್ಞಾನವು ಬಜಕೂಡ್ಲನ್ನು ಆವರಿಸಿದೆ ಎಂದಾದರೆ ಉಳಿದೆಡೆ ಯಾಕೆ ಸಾಧ್ಯವಿಲ್ಲ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ತನ್ನ ಸೀಮೆಯಲ್ಲೂ ಹಸಿರೆಬ್ಬಿಸುವ ಕೆಲಸ ಮಾಡಿದೆ.
ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯು ಪೆರ್ಲ ಪೇಟೆಯಲ್ಲಿದೆ. ಕನ್ನಾಡಿನ ಸರಹದ್ದಿನಲ್ಲಿರುವ ಶಾಲೆಗೆ ಸುಮಾರು ಹನ್ನೆರಡೆಕ್ರೆ ಸ್ವಂತ ಭೂಮಿ. ಶಾಲೆಯ ಕಟ್ಟಡವು ಗುಡ್ಡದ ತಳ ಮತ್ತು ಮೇಲೆ ನಿರ್ಮಾಣವಾಗಿದೆ. ಪೂರ್ತಿ ಮುರಕಲ್ಲಿನ (ಲ್ಯಾಟರೈಟ್) ಹಾಸು. ಒಂದೂವರೆ ದಶಕದ ಹಿಂದಿನ ಆ ದಿನವನ್ನು ಉಮೇಶ್ ಜ್ಞಾಪಿಸಿಕೊಂಡರು. ಮನೆಯಿಂದ ಮಧ್ಯಾಹ್ನ ಶಾಲೆಗೆ ಬರುತ್ತಿದ್ದೆ. ವಿದ್ಯಾರ್ಥಿಗಳು ಡಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದರು. ಪಾದೆಯೂ (ಮುರಕ್ಕಲ್ಲು) ಬಿಸಿ, ಸೂರ್ಯನ ಬಿಸಿ. ಮಕ್ಕಳು ಬೆವರು ಸುರಿಸುತ್ತಾ ಕಷ್ಟ ಪಡುವುದನ್ನು ನೋಡಿ ಸಂಕಟ ಪಟ್ಟೆ. ಹಸಿರೆಬ್ಬಿಸುವ ಸಂಕಲ್ಪದ ಬೀಜ ಅಂದು ಬಿತ್ತಲ್ಪಟ್ಟಿತು. ವಿದ್ಯಾರ್ಥಿಗಳ ಬಿಸಿಲಿನ ಸ್ನಾನವು ಆಗಿನ ಮುಖ್ಯೋಪಾಧ್ಯಾಯ ಶಿವಕುಮಾರ್ ಅವರ ಮನತಟ್ಟಿತು.
1998. ಶಾಲೆಯಲ್ಲಿ 'ನೇಚರ್ ಕ್ಲಬ್' ಉದ್ಘಾಟನೆ. ಅಪ್ಪಟ ಪರಿಸರವಾದಿ ದಿ.ಶಂಪಾ ದೈತೋಟರಿಂದ ಶುಭ ಚಾಲನೆ. ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಹಸಿರೆಬ್ಬಿಸುವ ಸತ್ಸಂಕಲ್ಪ. ಕಾರ್ಯಕ್ರಮ ಮುಗಿಯುವಾಗ ಎಲ್ಲರ ಮನದಲ್ಲೂ ಹಸಿರೆದ್ದಿತ್ತು. ಶಂಪಾರ ಪರಿಸರದ ಪಾಠವು ಮಕ್ಕಳ ಮತಿಗೆ ನಿಲುಕಿತ್ತು, ಸಿಲುಕಿತ್ತು. ಹದಿನೇಳು ವರುಷವಾಯಿತು. ಈಗ ನೋಡಿ, ಬೋಳು ಮುರಕಲ್ಲಿನ ಮೇಲೆ ಎದ್ದ ಹಸಿರು ಸಂಪತ್ತು.
ಆಗ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ನೋಡಿದರೆ ನಂಬಲಾಗದಷ್ಟು ಪರಿವರ್ತನೆ. ಗಿಡ, ಪೊದೆ, ಮರಗಳ ರಾಶಿ. ಎರಡು ಕಡೆ ಸುಮಾರು ನಾಲ್ಕೆಕರೆಯಲ್ಲಿ ಗಾಢ ಕಾಡು ಬೆಳೆದಿದೆ. ಹಲಸು, ಹೆಬ್ಬಲಸು, ಚಂದಳಿಕೆ, ಅಶ್ವತ್ಥ, ನೇರಳೆ, ಮಂದಾರ, ಗೋಳಿ, ಮಹಾಗನಿ, ಮರುವ.. ಮೊದಲಾದ ಮರಗಳಿವೆ. ಅರಣ್ಯ ಇಲಾಖೆಯ ಹಸಿರು ಪ್ರೀತಿಯ ಅಧಿಕಾರಿಗಳನ್ನೂ ಕಾಡು ಸೆಳೆದಿದೆ. ಏನಿಲ್ಲವೆಂದರೂ ಇನ್ನೂರೈವತ್ತಕ್ಕೂ ಮಿಕ್ಕಿ ವಿವಿಧ ಜಾತಿಯ ಮರ, ಗಿಡಗಳಿವೆ. ಕಲ್ಲಿನ ಮಧ್ಯೆ ಅಲ್ಲಿಲ್ಲಿ ಇದ್ದ ಮಣ್ಣಿನಲ್ಲಿ ಮರಗಳು ಬೇರಿಳಿಸಿಕೊಂಡಿವೆ.
ಕಳೆದ ವಾರವಷ್ಟೇ ಕಾಡಿನ ಮಧ್ಯೆ ಓಡಾಡುತ್ತಿದ್ದಾಗ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಡಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. "ಈಗ ನೋಡಿ ಮಕ್ಕಳಿಗೆ ಪ್ರಕೃತಿಯ ಮಧ್ಯೆಯೇ ಪಾಠ, ಆಟ. ಸಹಜ ನೆರಳು, ಗಾಳಿ. ಮಕ್ಕಳು ಖುಷ್. ಇಷ್ಟೇ ಅಲ್ಲ. ಮರದ ನೆರಳಿನಲ್ಲಿ ಸಣ್ಣ ಕಾರ್ಯಕ್ರಮ ಮಾಡಬಹುದಾದ ವೇದಿಕೆ ನಿರ್ಮಿಸಬೇಕೆಂದಿದೆ," ಎಂದರು ಉಮೇಶ್. ಇವರು ನೇಚರ್ ಕ್ಲಬ್ಬಿಗೆ ದೊಡ್ಡ ಹೆಗಲನ್ನು ನೀಡಿದ್ದರು. ಈಗ ಆ ಜವಾಬ್ದಾರಿಯನ್ನು ಅಧ್ಯಾಪಕ ಪ್ರವೀಣ್ ನಿಭಾಯಿಸುತ್ತಾರೆ.
ಇಷ್ಟಾಗಬೇಕಾದರೆ ಅಧ್ಯಾಪಕರ ತನುಶ್ರಮ ಗಮನೀಯ. ಹಲವರ ಗೇಲಿ ಮಾತುಗಳನ್ನು ಕೇಳುತ್ತಾ, ನೆಟ್ಟ ಗಿಡವು ಅನ್ಯರ ಪಾಲಾದಾಗ ಮರುಗುತ್ತಾ, ಪಶುಗಳು ನಾಶ ಮಾಡಿದಾಗ ಪುನಃ ನೆಡುತ್ತಾ, ಹಸಿರಿನ ಅರಿವಿಲ್ಲದ ಮಂದಿ ಗಿಡಗಳನ್ನು ಕಿತ್ತು ಬಿಸಾಕಿದಾಗ ಕಣ್ಣೀರು ಹಾಕುತ್ತಾ.. ಹೀಗೆ ಸಾಗಿ ಬಂದ ದಿನಗಳು ಕಷ್ಟದಾಯಕ. ಶತಯತ್ನ ರಕ್ಷಣೆ ಮತ್ತು ಆರೈಕೆಯ ಫಲವಾಗಿ ರೂಪುಗೊಂಡ ಪೆರ್ಲ ಶಾಲೆಯ ಕಾಡಿನ ಕತೆ ನಾಡಿಗೆ ಮಾದರಿ. ನಿಜಾರ್ಥದ ಹಸಿರು ಸೇವೆ. ಈಗಿನ ಮುಖ್ಯಗುರು ಸುಬ್ರಹ್ಮಣ್ಯ ಶಾಸ್ತ್ರಿ, ಅಧ್ಯಾಪಕ ವೇಣುಗೋಪಾಲ, ಅಧ್ಯಾಪಕರ ವೃಂದ, ಪಾಲಕರು.. ಹೀಗೆ ಹಲವರ ಶ್ರಮವು ಕಾಡಿಗೆ ರಕ್ಷೆ.
1998ರ ಸುಮಾರಿಗೆ ಮೇ ತಿಂಗಳಲ್ಲಿ ಶಾಲೆಯ ಬಾವಿ ಒಣಗುತ್ತಿತ್ತು. ಈಗ ಈ ಬಾವಿ ಸೇರಿದಂತೆ ಸುತ್ತಲಿನ ಊರಿನ ಬಾವಿಯಲ್ಲೂ ನೀರಿನ ಸಮೃದ್ಧತೆ. ಮುರಕ್ಕಲ್ಲಿನಲ್ಲಿ ಎದ್ದ ಹಸಿರುಗೋಡೆಯು ಮಳೆನೀರನ್ನು ಭೂ ಒಡಲಿಗೆ ಇಂಗಿಸುತ್ತಿದೆ. ಗುಡ್ಡದ ಮೇಲಿನ ಶಾಲೆಯ ಚಾವಣಿ ನೀರನ್ನು ನೈಸರ್ಗಿಕ ಹೊಂಡಗಳಿಗೆ ತಿರುಗಿಸಿದ್ದಾರೆ. ಬೆಳೆಯುತ್ತಿರುವ ಮರಗಳು ಮುರಕ್ಕಲ್ಲಿನ ಸೆರೆಗಳಲ್ಲಿ ಬೇರು ಇಳಿಸುತ್ತಿದೆ. ಇದೂ ನೀರಿಂಗಲು ಸಹಾಯಿ.
ಇಂತಹ ಹಸಿರು ಸೇವೆಗೆ ಸಾರ್ವಜನಿಕರ ಸಹಕಾರ ಬೇಕು. ಕೇವಲ ಅಧ್ಯಾಪಕರು, ವಿದ್ಯಾರ್ಥಿಗಳು ಆರ್ಥಿಕ ಭಾರವನ್ನು ಹೊರುವುದು ತ್ರಾಸ. ಬೆಳೆದ ಕಾಡಿನ ರಕ್ಷಣೆಯಾಗಬೇಕು. ಭದ್ರವಾದ ಆರ್ಥಿಕ ಅಡಿಗಟ್ಟು ಬೇಕು. ಹಸಿರು ಪ್ರೀತಿಯ ಸನ್ಮನಸ್ಸಿನವರತ್ತ ಕಾಡು ಕಾದು ನೋಡುತ್ತಿದೆ.
(ಉದಯವಾಣಿ-ನೆಲದನಾಡಿ ಅಂಕಣ-5-11-2015)
0 comments:
Post a Comment