Sunday, October 4, 2015

ಜಲಸಾಕ್ಷರತೆ ಹೆಚ್ಚಿಸಲು ಜಿಲ್ಲೆಗೊಂದು 'ರೈನ್ ಸೆಂಟರ್' ಬೇಕು





               "ನೀರಿನ ಪ್ರಸ್ತುತ ಸ್ಥಿತಿಗತಿಯ ಅರಿವು ಮೂಡಿಸಿ ಮುಂದಿನ ದಿನಗಳಲ್ಲಿ ಬರಲಿರುವ ಕಠಿಣ ಪರಿಸ್ಥಿತಿ ಎದುರಿಸಲು ರಾಜ್ಯ ಸಜ್ಜಾಗಬೇಕಿದೆ.  ಜಲಸಾಕ್ಷರತೆಯ ಮೂಲಕ ಸಂರಕ್ಷಣೆಯ ಮಾರ್ಗದರ್ಶನಕ್ಕೆ, ನೀರಿನ ಮಿತಬಳಕೆಗೆ  ಜಾಗೃತಿ ಮೂಡಿಸಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ 'ರೈನ್ ಸೆಂಟರ್'ಗಳನ್ನು ತುರ್ತಾಗಿ ಆರಂಭಿಸಬೇಕು" ಎಂದು ರಾಜ್ಯದ ಜಲತಜ್ಞರು, ಪತ್ರಕರ್ತರು ಸರಕಾರವನ್ನು ಆಗ್ರಹಿಸಿದ್ದಾರೆ. ಶಿರಸಿಯ ಕಳವೆಯ ಕಾನ್ಮನೆಯಲ್ಲಿ ನಡೆದ ’ಜಲವರ್ತಮಾನ ಹಾಗೂ ನಾಳಿನ ಭವಿಷ್” ಕುರಿತ ಸಮಾಲೋಚನೆಯಲ್ಲಿ ಜಲಸಂರಕ್ಷಕರು, ಪತ್ರಕರ್ತರು ಜಲಕ್ಷಾಮದ ಸ್ಥಿಗತಿಗಳನ್ನು ಕೂಲಂಕುಶವಾಗಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ.
            1983ರ ಬರಗಾಲದಿಂದ ಈವರೆಗೂ ರಾಜ್ಯದ ಒಂದಿಲ್ಲೊಂದು ಕಡೆ ಜಲಕ್ಷಾಮವಿದೆ. ಇಂದು ರಾಜ್ಯವ್ಯಾಪಿಯಾಗಿ ಭೀಕರ ಬರ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಬರಕ್ಕೆ ಅಂಜದ ಶ್ರೀಸಾಮಾನ್ಯರು ಪ್ರತಿ ಜಿಲ್ಲೆಯಲ್ಲಿದ್ದಾರೆ. ನೀರಿನ ವಿಚಾರಗಳನ್ನು ಮಣ್ಣಿನಲ್ಲಿ ಕಾರ್ಯನಿರ್ವಹಿಸಿ ನೀರ ನೆಮ್ಮದಿ ಕಂಡವರಲ್ಲಿ ಚರ್ಚಿಸಬೇಕು, ಪಾಠ ಕಲಿಯಬೇಕು. ರಾಜ್ಯದ ಬರದ ತುರ್ತು ಸಂದರ್ಭದಲ್ಲಿ ಆಪತ್ಕಾಲಕ್ಕೆ ಆಗಬೇಕಾದ ಬುದ್ಧಿವಂತಿಕೆಯನ್ನು ಬದುಕಿನಲ್ಲಿ ಅಳವಡಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ಮಾಧ್ಯಮ ಹಾಗೂ ಕೃಷಿಕರಿಗೆ ಜಲಸಂರಕ್ಷಣೆಯ ಮಣ್ಣಿನ ಮಾದರಿ ದರ್ಶನಕ್ಕೆ ನೆರವಾಗುವಂತೆ ಬರ ಗೆದ್ದವರ, ನೀರುಳಿಸಿ ನೆಮ್ಮದಿ ಕಂಡವರ ವಿವರಗಳಿರುವ  'ಜಲಯೋಧರ  ಡೈರಕ್ಟರಿ' ಪ್ರಕಟಿಸಲು ಸಮಾಲೋಚನಾ ಸಭೆ ನಿರ್ಧರಿಸಿದೆ.                
              ರಾಜ್ಯದ ವಿವಿಧ ಪ್ರದೇಶಗಳಿಂದ ಜಲಸಂರಕ್ಷಕರು, ಕೃಷಿ ಸಾಧಕರು, ಜಲಪತ್ರಕರ್ತರು ಭಾಗವಹಿಸಿ ಜಲಪರಂಪರೆ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದರು. 20 ಗೋಷ್ಠಿಗಳಲ್ಲಿ ಸತತ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಿತು. ಕಳವೆಯ ಗ್ರಾಮ ಅರಣ್ಯ ಸಮಿತಿ, ಕರ್ನಾಟಕ ಅರಣ್ಯ ಇಲಾಖೆ ನೇತ್ರತ್ವದಲ್ಲಿ ನಡೆದ ಕಣಿವೆಕೆರೆ, ಕಟ್ ಅಗಳ, ಅರಣ್ಯಾಭಿವೃದ್ಧಿ ಸೇರಿದಂತೆ ವಿವಿಧ ಜಲಸಂರಕ್ಷಣಾ ರಚನಾತ್ಮಕ ಮಾದರಿಗಳನ್ನು ಜಲತಜ್ಞರು ವೀಕ್ಷಿಸಿದರು.
         ಸಮಾರೋಪ ಸಮಾರಂಭ - ಅಕ್ಟೋಬರ್ 4 ರವಿವಾರ ಸಾಯಂಕಾಲ ನಡೆಯಿತು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ಭಾಗವಹಿಸಿದ್ದರು. "ಪರಿವರ್ತನೆಯೆಂಬುದು ಎಲ್ಲರೂ ಸೇರಿ ಜಾಗೃತರಾಗಿ ಹೋರಾಟದಿಂದ ನಡೆಯುವ ಕೆಲಸವಷ್ಟೇ ಅಲ್ಲ. ಶೇಕಡಾ ಐದರಷ್ಟು ಜನ ಸೇರಿ ರಚನಾತ್ಮಕ ಕಾರ್ಯ ಶುರುಮಾಡಿದರೂ ದೊಡ್ಡ ಸಾಧನೆ ಸಾಧ್ಯವಿದೆ. ಬರದ ಸಂದರ್ಭದಲ್ಲಿ  ಜಲ ಜಾಗೃತಿಯ ವಿಚಾರದಲ್ಲಿ  ರಾಜ್ಯದ ಜಲಸಂರಕ್ಷಣೆಯ ಪರಿಣಿತರು ಒಂದಾಗಿ ಕಳವೆಯ ಕಾನ್ಮನೆಯಲ್ಲಿ ಸಮಾಲೋಚನೆ ನಡೆಸುತ್ತಿರುವದು ಅತ್ಯಂತ ಮಹತ್ವದ ಸಂಗತಿಯಾಗಿದೆ" ಎಂದರು.
           ನೀರಿನ ಸಮಸ್ಯೆಗೆ ಬೃಹತ್ ಯೋಜನೆಗಳು ಮಾತ್ರ ಪರಿಹಾರವಲ್ಲ. ಬಿದ್ದ ಹನಿಯನ್ನು ಬಿದ್ದಲ್ಲಿ ಇಂಗಿಸುವ, ಹಿಡಿದಿಡುವ ಕೆಲಸ ಮುಖ್ಯವಿದೆ. ಚೆನೈ ನಗರದ ಮಳೆಕೊಯ್ಲು ಮಾದರಿಯಿಂದ ಪ್ರೇರಣೆ ಪಡೆದು ಬೆಂಗಳೂರು ನಗರದಲ್ಲಿ ನೀರಿಂಗಿಸುವದನ್ನು ಕಡ್ಡಾಯಗೊಳಿಸುವ ಪ್ರಯತ್ನ  ನಡೆದಿತ್ತು. ಕಾನೂನು ಬಿಗಿಗೊಳಿಸಿ ಪರಿಣಾಮಕಾರಿಯಾಗಿ ಜಲಸಂರಕ್ಷಣಾ ಮಾದರಿ ಅಳವಡಿಸಲು ಸರಕಾರ, ಸಾರ್ವಜನಿಕರು ಪ್ರಯತ್ನಿಸಬೇಕು. ಆಗ ಜಲಕ್ಷಾಮ ಎದುರಿಸಬಹುದು ಎಂದು ಮಸ್ಕಿ ನುಡಿದರು.
       "ನೀರಿಂಗಿಸುವ ಸಕಾಲಿಕ ಮಾರ್ಗದರ್ಶನ ನೀಡುವ ಕಾರ್ಯಕರ್ತರೇ ಕರ್ನಾಟಕ ದೊಡ್ಡ ಆಸ್ತಿ. ಇದರಿಂದಲೇ ಹಲವು ಹಳ್ಳಿಗಳು ಜಲಕ್ಷಾಮ ಎದುರಿಸಲು ಸಾಧ್ಯವಾಗಿದೆ.  ಎರಡು ದಶಕಗಳಿಂದ ಕೆಲಸ ನಡೆಯುತ್ತಿದೆ. ಕಣ್ಣು, ಕಿವಿ, ಹೃದಯವಿದ್ದ ಎಲ್ಲರಿಗೂ ಇಂದು ಜಲಸಂರಕ್ಷಣೆಯ ಮಹತ್ವ ತಿಳಿದಿದೆ, ಮಾಧ್ಯಮಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ. ಇಷ್ಟಾಗಿಯೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದಿರುವದು ವಿಷಾದದ ಸಂಗತಿಯಾಗಿದೆ" ಎಂದು ಹಿರಿಯ ಪತ್ರಕರ್ತ ಶ್ರೀ'ಪಡ್ರೆ ಹೇಳಿದರು.
         "ಕರ್ನಾಟಕದಲ್ಲಿ ಈಗ ಪ್ರಪ್ರಥಮವಾಗಿ ನೆಲಮೂಲದಲ್ಲಿ ಕಾರ್ಯನಿರ್ವಹಿಸಿದವರು ಒಂದೆಡೆ ಸೇರಿದ್ದೇವೆ. ಶ್ರೀಸಾಮನ್ಯರು ಅಳವಡಿಸಬಹುದಾದ ಸುಲಭ ಸಾಧ್ಯ ವಿಧಾನಗಳನ್ನು  ಮಾಡಿತೋರಿಸಿದವರ ಅನುಭವ ಹಂಚಿಕೆ ನಡೆದಿದೆ. ನೀರಿನ ಸಮಸ್ಯೆ ರಾಜ್ಯ ರಾಜ್ಯಗಳನ್ನು  ಒಡೆಯುತ್ತಿದೆ, ನೀರಿಂಗಿಸುವ ರಚನಾತ್ಮಕ ಕೆಲಸ ಹೃದಯಗಳನ್ನು ಒಟ್ಟಿಗೆ ಸೇರಿಸುತ್ತಿದೆಯೆಂಬುದಕ್ಕೆ  ಬರದ ಸೀಮೆಯ ಜನಗಳೂ ಇಲ್ಲಿ ಸೇರಿರುವದು ಸಾಕ್ಷಿಯಾಗಿದೆ" ಎಂದರು.
            ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಡಾ.ಪ್ರಕಾಶ್ ಭಟ್ ವಹಿಸಿದ್ದರು. "ಇಂದು ಒಬ್ಬ ಸಾಮಾನ್ಯ ಕಾರಿನ ಚಾಲಕನೂ ಮಹದಾಯಿ ನದಿ 'ಪಾಲ್ತೂ(ವ್ಯರ್ಥ)' ಆಗಿ ಸಮುದ್ರ ಸೇರುತ್ತಿದೆಯೆಂದು ಮಾತಾಡುತ್ತಿದ್ದಾನೆ. ಜಲಮೂಲ, ಅರಣ್ಯ ಸಂಬಂಧ, ಜೀವರಾಶಿಗಳ ತಿಳುವಳಿಕೆಯಿಲ್ಲದೇ ಮಾತಾಡುವ 'ಟಿಎಮ್ಸಿ ಮನಸ್ಥಿತಿ'ಯ ಹೋರಾಟದ ಪರಿಣಾಮವಿದು. ನೀರಿನ ಬಳಕೆ ಜ್ಞಾನ ವಿಸ್ತರಿಸುತ್ತಿರುವ ವರ್ತಮಾನದಲ್ಲಿ ನಮ್ಮ ಜ್ಞಾನ ನದಿ ಸಮುದ್ರ ಸೇರುವುದೇ ವ್ಯರ್ಥ ಎನ್ನುವದಕ್ಕೆ ಮಿತಿಗೊಂಡಿದ್ದು ಆತಂಕದ ಸಂಗತಿ" ಎಂದರು. ಇದನ್ನು ಬದಲಿಸಲು ಮಳೆನೀರಿನತ್ತ ಎಲ್ಲರ ಗಮನ ಸೆಳೆಯೋಣ ಎಂದರು.
         ಕೋಲಾರದ ದೊಡ್ಡ ಕಲ್ಲಹಳ್ಳಿಯ ಏಳು ವರ್ಷದ ಬಾಲಕಿ ಟ್ಯಾಂಕರ್ ನೀರಿಗೆ ನಿಂತಿದ್ದು ಕಂಡಾಗ ಕಾನ್ಮನೆಯ ಜಲವರ್ತಮಾನ ಕಾರ್ಯಕ್ರಮಕ್ಕೆ ಮುಖ್ಯ ಪ್ರೇರಣೆಯಾಯಿತು. ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಕಳೆದ 14 ವರ್ಷಗಳಿಂದ ಸತತವಾಗಿ ನಡೆಸುತ್ತಿರುವ ಕಾರ್ಯಕ್ರಮಗಳಿಂದ ನಮ್ಮ ಸಂಪರ್ಕಜಾಲ ರಾಜ್ಯದಲ್ಲಿ  ಬೆಳೆದಿದೆ. ನಾವು ಆಹ್ವಾನಿಸಿದ ಜಲತಜ್ಞರು, ಪತ್ರಕರ್ತರ ಭಾಗವಹಿಸುವಿಕೆಯಿಂದ ಮಾತುಕತೆ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಖೇನ ಜಲಜಾಗೃತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸೋಣವೆಂದು ಕಾರ್ಯಕ್ರಮ ಸಂಘಟಕ ಶಿವಾನಂದ ಕಳವೆ ಹೇಳಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೊಸಪಾಳ್ಯ ಸ್ವಾಗತಿಸಿದರು, ಪೂರ್ಣಪ್ರಜ್ಞ ಬೇಳೂರು ವಂದಿಸಿದರು.

0 comments:

Post a Comment