ಲಾಕ್ಡೌನ್ ಸಡಿಲವಾಗಿತ್ತು. ಜೀನಸು (ದಿನಸಿ) ಅಂಗಡಿಗಳು ಅರ್ಧ ದಿವಸ ತೆರೆಯಲು ಆಡಳಿತ ಸೂಚಿಸಿತ್ತು. ಅದು ಸಮಯಬಾಧಿತ. ಅಂದರೆ ಬೆಳಿಗ್ಗೆ ಏಳರಿಂದ ಹನ್ನೊಂದು, ನಂತರ ಎಂಟರಿಂದ ಹನ್ನೆರಡು ಗಂಟೆ ತನಕ. ಅಂಗಡಿ ಮುಚ್ಚಿ ವಿಷಣ್ಣರಾಗಿ ಕುಳಿತವರು ಸಂತೋಷದಿಂದ ತೆರೆದರು. ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡಲು ಹಾಕಿದ ವೃತ್ತಗಳ ಚಿತ್ತಾರಗಳು. ಫರ್ಲಾಂಗುಗಟ್ಟಲೆ ಸರತಿಯ ಸಾಲು, ಜನಸಂದಣಿ. ಆದರೆ ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಹರಿಪ್ರಸಾದ್ ಕುಂಟಿಕಾನ ತಮ್ಮ ಪ್ರಸಾದ್ ಜನರಲ್ ಸ್ಟೋರ್ನ್ನು ತೆರೆಯಲಿಲ್ಲ. ಅವರನ್ನೇ ನಂಬಿದ ಐನೂರಕ್ಕೂ ಮಿಕ್ಕಿ ಗ್ರಾಹಕರಿದ್ದರು.
ಹಳ್ಳಿ ಪ್ರದೇಶವಾದ್ದರಿಂದ ಕೋವಿಡ್ ಮಾರ್ಗಸೂಚಿಗಳನ್ನು ಹೇಳಿದರೆ
ಫಕ್ಕನೆ ಪಾಲಿಸುತ್ತಾರೆನ್ನುವ ವಿಶ್ವಾಸವಿಲ್ಲ. ಐಟಂ
ಕೇಳಿದರೆ ಇಲ್ಲವೆನ್ನಲು ಮನಸ್ಸು ಬಾರದು. ತನ್ನೂರಿನ
ಜನಕ್ಕೆ ಅಕ್ಕಿ, ಬೇಳೆ ಇಲ್ಲದೆ
ಬದುಕಿಗೆ ತೊಂದರೆ ಆಗಕೂಡದು. ಜತೆಗೆ
ಕೋವಿಡ್ ಮುಂಜಾಗ್ರತೆಯನ್ನು ಮರೆಯುವಂತಿಲ್ಲ. ಹರಿಪ್ರಸಾದ್ ಒಂದು ಯೋಜನೆ ಹಾಕಿಕೊಂಡರು.
ಗ್ರಾಹಕರೊಂದಿಗೆ ಮುಖಾಮುಖಿಯಾಗದೆ ಅವರಿಗೆ ಜೀನಸು ಒದಗಿಸುವುದು!
ಜೀನಸು ಅಪೇಕ್ಷಿತರು ದೂರವಾಣಿಯಲ್ಲಿ ಅಥವಾ ವಾಟ್ಸಾಪಿನಲ್ಲಿ ಆದೇಶ
ಕೊಡಬೇಕು. ಅವರಿಗೊಂದು ಸಂಖ್ಯೆ ನೀಡುತ್ತಾರೆ. ಅವರವರ
ಬೇಡಿಕೆಯಂತೆ ಜೀನಸು, ತರಕಾರಿಗಳನ್ನು ಪ್ಯಾಕ್
ಮಾಡುವುದು ಮೊದಲ ಕೆಲಸ. ಅಂಗಡಿ
ಹೇಗೂ ಮುಚ್ಚಿರುವುದರಿಂದ ವಿಶಾಲ ವರಾಂಡವನ್ನು ಯೋಜನೆಗೆ
ಬಳಸಿಕೊಂಡರು. ಗೋಡೆಯಲ್ಲಿ ಒಂದರಿಂದ ಇಪ್ಪತ್ತೈದರ ವರೆಗೆ
ಸಂಖ್ಯೆಯನ್ನು ಅಂತರದಲ್ಲಿ ಬರೆದರು. ಗ್ರಾಹಕರಿಗೆ ನೀಡಿದ
ಸಂಖ್ಯೆಗನುಸಾರ ಜೀನಸು ಪ್ಯಾಕೆಟನ್ನು ಆಯಾಯ
ನಂಬರಿನ ಕೆಳಗೆ ಸಿಗುವಂತೆ ಇಟ್ಟುಬಿಟ್ಟರು.
ಗ್ರಾಹಕರು ಬೆಳಗ್ಗಿನಿಂದ ಮಧ್ಯಾಹ್ನದ ಒಳಗೆ ತಮ್ಮ ಅನುಕೂಲದ
ಸಮಯದಲ್ಲಿ ಬಂದು ಒಯ್ಯಬಹುದು.
ಆದೇಶ ಕೊಟ್ಟಾಕ್ಷಣ ಹರಿಪ್ರಸಾದರು ಬಿಲ್ ಮಾಡಿ, ಮೊತ್ತವನ್ನು
ಫೋನಿನಲ್ಲೇ ತಿಳಿಸುತ್ತಾರೆ ಯಾ ಮೆಸ್ಸೇಜ್ ಮಾಡುತ್ತಾರೆ.
ಬಹುತೇಕರು ಮನೆಯಿಂದಲೇ ಅವರ ಬ್ಯಾಂಕ್ ಖಾತೆಗೆ
ನೆಪ್ಟ್ ಯಾ ಡೆಬಿಟ್ ಕಾರ್ಡ್ ಬಳಸಿ
ಪಾವತಿ ಮಾಡಿದ್ದಾರೆ. ಹಳ್ಳಿ ವ್ಯಾಪಾರಕ್ಕೆ ಸದ್ದಿಲ್ಲದೆ
ಆದ ಡಿಜಿಟಲ್ ಸ್ಪರ್ಶ! ಇನ್ನುಳಿದವರಿಗೆ
ಇವರಲ್ಲಿ ಅಡಿಕೆ, ಕಾಳುಮೆಣಸು ವ್ಯವಹಾರ
ಇರುವುದರಿಂದ ಆಯಾ ಗ್ರಾಹಕರ ಲೆಕ್ಕಕ್ಕೆ
ದಾಖಲಿಸಿದರೆ ಆಯಿತು. “ಈ ವ್ಯವಸ್ಥೆಯನ್ನು
ಶೇ.80ರಷ್ಟು ಮಂದಿ ಸಂತೋಷದಿಂದ
ಪಾಲಿಸಿದರು. ಆದರೆ ತಮಗೆ ಬೇಕಾದ
ವಸ್ತುವನ್ನು ಕೈಯಲ್ಲಿ ಪರೀಕ್ಷಿಸಬೇಕು, ಗುಣಮಟ್ಟ
ಹೇಗಿದೆಯೋ ಏನೋ ಎನ್ನುವ ಗುಮಾನಿ
ಮನಸ್ಥಿತಿಯವರು ಗೊಣಗಾಡಿದರು ಅಷ್ಟೇ” ಎನ್ನುತ್ತಾರೆ.
ಒಮ್ಮೆ ಹೀಗಾಯಿತು, ಹಿಂದಿನ ಬಾಗಿಲಿನಿಂದ ವ್ಯಾಪಾರ
ಮಾಡುತ್ತಾರೆ - ಆರಕ್ಷಕರಿಗೆ ಯಾರೋ ದೂರು ನೀಡಿದರು.
ಅವರು ತನಿಖೆಗಾಗಿ ಬಂದರು. ಮೇಲ್ನೋಟಕ್ಕೆ ಹೌದೆಂದು
ನಂಬಿದರು. ವಿಷಯವನ್ನು ಮನದಟ್ಟು ಮಾಡಿದಾಗ ಅವರಿಗೂ
ಖುಷಿ ಆಯಿತು. “ದೂರಿನಂತೆ ತನಿಖೆಗಾಗಿ
ಬಂದಿದ್ದೇವೆ. ನೀವು ಕೊರೊನಾ ಮುಂಜಾಗ್ರತೆಯನ್ನು
ಪರಿಣಾಮಕಾರಿಯಾಗಿ ಪಾಲಿಸುತ್ತಿದ್ದೀರಿ. ಒಳ್ಳೆಯ ಕೆಲಸ. ಮುಂದುವರಿಸಿ.
ಎಲ್ಲಾ ಕಡೆಯೂ ವ್ಯಾಪಾರಸ್ಥರು ಹೀಗೆ
ವ್ಯವಸ್ಥೆ ಮಾಡಿಕೊಂಡರೆ ಲಾಕ್ಡೌನ್ ಬೇಕಾಗದು!” ಎಂದು ಶ್ಲಾಘಿಸಿ ಬೆನ್ನು
ತಟ್ಟಿದರಂತೆ.
ನಿಮ್ಮ ನೂತನ ಕಲ್ಪನೆಗೆ ಗ್ರಾಹಕರು
ಹೇಗೆ ಹೊಂದಿಕೊಂಡರು? ಅನಿವಾರ್ಯ. ಜೀನಸು ಎಲ್ಲರಿಗೂ ಸಿಗುತ್ತದೆ.
ಆತಂಕಕ್ಕೆ ಒಳಗಾಗುವುದು ಬೇಡ ಎಂದರೂ ಒಂದು
ಕಿಲೋ ಒಯ್ಯುವವರು ಹತ್ತು ಕಿಲೋ ಒಯ್ದರು.
ಅಂದರೆ ತಮಗೆ ಬೇಕಾದ ಪ್ರಮಾಣಕ್ಕಿಂತ
ಐದು, ಹತ್ತು ಪಟ್ಟು ಸಾಮಗ್ರಿ
ಒಯ್ದರು. ಆ ಸಮಯದಲ್ಲಿ ಜೀನಸು
ಪೂರೈಕೆ ಸಕಾಲಕ್ಕೆ ಆಗುತ್ತಿತ್ತು. ನಿಧಾನಕ್ಕೆ ಗ್ರಾಹಕರಿಗೆ ವಿಶ್ವಾಸ ಬಂತು. ನನ್ನನ್ನು
ನಂಬಿದರು. ಮೂರು ತಿಂಗಳು ಹೀಗೆ
ವ್ಯಾಪಾರ ಸಾಗಿತು.
“ಕೋವಿಡ್ ಸಮಯದಲ್ಲಿ ಹೊಸ ವ್ಯವಸ್ಥೆ ಮಾಡಿಕೊಂಡಾಗ
ಬೇರೆ ಬೇರೆ ಐಟಂಗಳು ಬಂದ
ರಟ್ಟಿನ ಪೆಟ್ಟಿಗೆಯಲ್ಲಿ ಜೀನಸು ತುಂಬಿ ನೀಡಿದ್ದರು.
ಏನು ಹೊಸತು ಮಾಡಿದರೂ ಅಂಗಡಿಯಿಂದ
ಜೀನಸು, ತರಕಾರಿಯನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಒಯ್ಯುವುದು ರೂಢಿಯಾಗಿದೆ.” ಎನ್ನುತ್ತಾರೆ.
ಮಾರ್ಚ್ ಕೊನೆಗೆ ಲಾಕ್ಡೌನ್ ಆದಾಗ, ಅದಕ್ಕಿಂತ ಪೂರ್ವಭಾವಿಯಾಗಿ ಮಾಧ್ಯಮಗಳು ಕೊರೊನಾದ ವಾಸ್ತವ ಚಿತ್ರಣವನ್ನು ಮತ್ತು ಪಾಲಿಸಬೇಕಾದ ಕ್ರಮಗಳನ್ನು ಪ್ರಾಥಮಿಕವಾಗಿ ಸುದ್ದಿಯಾಗಿ ನೀಡುತ್ತಿದ್ದುವಷ್ಟೇ. ಇದರ ಗಂಭೀರತೆಯನ್ನು ಮೊದಲೇ ಅರಿತ ಹರಿಪ್ರಸಾದ್ ತಮ್ಮ ಗ್ರಾಹಕರಿಗೆ ಮಾಸ್ಕ್ ಧರಿಸಲು, ಕೈಗೆ ಸ್ಯಾನಿಟೈಸರ್ ಹಾಕಲು, ಅಂತರ ಕಾಪಾಡಲು ಸಲಹೆ ನೀಡುತ್ತಿದ್ದರು. ಜನರು ನಕ್ಕು ಗೇಲಿ ಮಾಡಿದರಂತೆ. ಕೊನೆಗೆ ಇವನ್ನೆಲ್ಲಾ ಪಾಲಿಸಲು ಸರಕಾರದ ಆದೇಶವಾಯಿತು - ಆ ದಿನಗಳನ್ನು ನೆನಪು ಮಾಡಿಕೊಂಡರು.
ಹರಿಪ್ರಸಾದ್ ಕುಂಟಿಕಾನ ಇವರು ಮಂಗಳೂರಿನಲ್ಲಿ ಚಾರ್ಟರ್ಡ್
ಅಕೌಂಟೆಂಟ್
ಕಲಿಕೆಯಲ್ಲಿದ್ದರು. ತಂದೆಯವರಿಂದ ಬಂದ ವ್ಯಾಪಾರ ವೃತ್ತಿಯ
ಬಳುವಳಿಯನ್ನು ಮುಂದುವರಿಸಲು, ಮಂಗಳೂರಿಗೆ ವಿದಾಯ ಹೇಳಿದರು. ಓರ್ವ ಸಾಮಾಜಿಕ ಜವಾಬ್ದಾರಿಯ
ವ್ಯಾಪಾರಿಯಾಗಿ ಜನಾನುರಾಗಿಯಾದರು. ಗ್ರಾಹಕರು ದೇವರು ಎನ್ನುವ ಸೂಕ್ತಿಯನ್ನು ಸಂಕಟ
ಸಮಯದಲ್ಲಿ ಅಕ್ಷರಾರ್ಥವಾಗಿ ಪಾಲಿಸಿದರು. ಗ್ರಾಹಕರು ಖುಷ್.
ಮರಳಿಸುವ ಚೀಲ!
ಅಂಗಡಿಗೆ ಬೇಳೆ, ಕಾಳುಗಳು
ತುಂಬಿ ಬರುವ ಚೀಲ/ಗೋಣಿಗಳಿವೆ.
ನೋಡುವಾಗ ರಸಗೊಬ್ಬರ ಚೀಲವನ್ನು ಹೋಲುತ್ತವೆ. ತುಂಬಾ ಗಟ್ಟಿ ಹಾಗೂ
ಬಾಳ್ವಿಕೆ ಜಾಸ್ತಿ. ಅಂತಹುಗಳನ್ನು ದರ್ಜಿಯಲ್ಲಿ
ಹೇಳಿ ಜೀನಸು ಒಯ್ಯುವ ಚಿಕ್ಕ
ಚೀಲಗಳನ್ನಾಗಿ ಪರಿವರ್ತಿಸಿದ್ದಾರೆ. ಒಂದು ಚೀಲ ತಯಾರಿಗೆ
ಹತ್ತು ರೂಪಾಯಿ ವೆಚ್ಚ. ಇದೇ
ದರದಲ್ಲಿ ಕೈಬೀಸಿ ಬರುವ ಗ್ರಾಹಕರಿಗೆ
ಜೀನಸು ತುಂಬಿ, ಚೀಲದ ದರವನ್ನೂ
ಸೇರಿಸಿ ಬಿಲ್ ಮಾಡುತ್ತಾರೆ.
ಅದು ಗ್ರಾಹಕರಿಗೆ ಹೊರೆಯಾಗಿ ಕಾಡಬಾರದು, ಪ್ಲಾಸ್ಟಿಕ್ ತೊಟ್ಟೆಯಲ್ಲೂ ಜೀನಸು ಒಯ್ಯಬಾರದು! ಇದಕ್ಕಾಗಿ ಯಾರು ಹತ್ತು ರೂಪಾಯಿ ನೀಡಿ ಚೀಲ ಒಯ್ದಿದ್ದಾರೋ, ಅವರು ಮರುದಿವಸ ಯಾ ಆ ವಾರದಲ್ಲಿ ಚೀಲವನ್ನು ಹಿಂತಿರುಗಿಸಿದರೆ ಹತ್ತು ರೂಪಾಯಿ ವಾಪಾಸ್! ನಷ್ಟವಿಲ್ಲದ ವಿಶ್ವಾಸದ ವ್ಯವಹಾರ.
1 comments:
ಸಮಯ ಮತ್ತು ಪರಿಸ್ಥಿತಿಯನ್ನು ಅರಿತು ಧನಾತ್ಮಕ ಚಿಂತನೆಯೊಂದಿಗೆ ಮುಂದುವರಿದಾಗ ಯಶಸ್ಸು ನಮ್ಮ ಹಿಂದೆ ಹಿಂಬಾಲಿಸುತ್ತದೆ
Post a Comment